ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ತೊಂದರೆಯಾಗಿದೆ. ಅಂತೆಯೆ ಸಿನಿಮಾ ಮಂದಿಗೂ ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಸ್ಟಾರ್ ನಟರು, ಸರ್ಕಾರ, ಸಂಘ-ಸಂಸ್ಥೆಗಳು ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದು ಗೊತ್ತೇ ಇದೆ. ಈಗ ತೆಲುಗು ನಟ ಸಾಯಿಕುಮಾರ್ ಸಹೋದರರು ಕೂಡ ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ ನೆರವಾಗಿದ್ದಾರೆ.
ಹೌದು, ಕೊರೊನಾ ಹೊಡೆತಕ್ಕೆ ಸಿನಿಮಾ ಕಾರ್ಮಿಕರ ಕಷ್ಟ ಹೇಳತೀರದ್ದು. ಈ ಸಮಯದಲ್ಲಿ ಅವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದಲೇ ನಟರಾದ ಸಾಯಿಕುಮಾರ್, ರವಿಶಂಕರ್ ಹಾಗು ನಿರ್ದೇಶಕ ಅಯ್ಯಪ್ಪ ಪಿ.ಶರ್ಮ ಸಹೋ ಐದು ಲಕ್ಷ ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ. ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎನ್ನುವುದು ಸಾಯಿಕುಮಾರ್ ಸಹೋದರರ ಮಾತು.