ಗೆಳೆಯ ಸಂಚಾರಿ ವಿಜಯ್ ಇನ್ನಿಲ್ಲ. ಅವರು ಬದುಕುಳಿಯಲಿ ಎನ್ನುವ ಲಕ್ಷಾಂತರ ಜನರ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ. ಅವರು ಮಾಡುತ್ತಾ ಬಂದ ಪುಣ್ಯದ ಕೆಲಸಗಳು ಕೈ ಹಿಡಿಯಲಿಲ್ಲ. ವಿಧಿಯಾಟದ ಮುಂದೆ ಎಲವೂ ಕೈಚೆಲ್ಲಿ ಹೋದವು. ದುರಾದೃಷ್ಟವಶಾತ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನೆಂದಿಗೂ ಬಾರದ ಲೋಕಕ್ಕೆ ಪಯಣ ಬೆಳೆಸಿಯೇ ಬಿಟ್ಟರು. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೇ ಅವರ ಸಾವು ತುಂಬಲಾರದ ನಷ್ಟ. ಅದರಲ್ಲೂ ನಿಮ್ಮ ನೆಚ್ಚಿನ ʼಸಿನಿಲಹರಿʼ ಸಂಸ್ಥೆಗೆ ಅಪಾರವಾದ ನಷ್ಟ.
ಯಾಕಂದ್ರೆ ʼಸಿನಿಲಹರಿʼಯ ನಿಜ ಮಾರ್ಗದರ್ಶಿ ಅಗಿದ್ದರು ವಿಜಯ್. ಈಗ ನಿಜಕ್ಕೂ ಒಬ್ಬ ಹಿತೈಷಿಯನ್ನು ʼಸಿನಿಲಹರಿʼ ಕಳೆದುಕೊಂಡಿದೆ. ನಾವಿಬ್ಬರು ಸೇರಿ ಕಳೆದ ವರ್ಷದ ಕೊನೆಯ ದಿನಗಳಲ್ಲಿ ʼಸಿನಿ ಲಹರಿʼ ಅಂತ ನೂತನ ವೆಬ್ ಸೈಟ್ ಶುರು ಮಾಡುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾಗ, ಶುರು ಮಾಡಿ, ನಾವಿದ್ದೇವೆ ಅಂತ ಬೆನ್ನಿಗೆ ನಿಂತವರಲ್ಲಿ ನಮ್ಮ ಸಂಚಾರಿ ವಿಜಯ್ ಮೊದಲಿಗರು.
ಗೆಳೆಯರೆಂದರೆ ಯಾವುದೂ, ಎಂತೂ ಅಂತ ಹಿಂದು ಮುಂದು ನೋಡದೆ ಸಹಾಯಕ್ಕೆ ನಿಲ್ಲುವ ವ್ಯಕ್ತಿತ್ವ ಅವರದು. ʼಸಿನಿ ಲಹರಿʼ ಆರಂಭದ ಹೊತ್ತಿಗೆ ಅವರು ಹಾಗೆ ಹೇಳಿ ಬೆನ್ನಿಗೆ ನಿಂತಿದ್ದು ಮಾತ್ರವಲ್ಲ, ಕೋವಿಡ್ ಭೀತಿಯ ನಡುವೆಯೇ ನಾವು ವೆಬ್ ಉದ್ಘಾಟನೆ ಮಾಡುತ್ತೇವೆ ಅಂದಾಗ ಮೀನಾಮೇಷ ಎಣಿಸದೆ ಕಾರ್ಯಕ್ರಮಕ್ಕೆ ಬಂದರು. ಹಾಗೆಯೇ ಅದರ
ಜರ್ನಿಯ ಉದ್ದಕ್ಕೂ ಜತೆಗಿದ್ದು ಸಲಹೆ ನೀಡುತ್ತಾ ಬಂದರು. ವೆಬ್ ಸೈಟ್ ಶುರುವಾಗಿ ನೂರು ದಿವಸ ಪೂರೈಸಿದ ಹೊತ್ತಿಗೆ ನಾವು ಕಚೇರಿಯಲ್ಲಿ ಹಮ್ಮಿಕೊಂಡ ಸರಳ ಕಾರ್ಯಕ್ರಮಕ್ಕೂ ಅತಿಥಿಯಾಗಿ ಬಂದು ಕೇಕ್ ಕತ್ತರಿಸಿ ಖುಷಿ ಪಟ್ಟಿದ್ದರು.
ಸಿನಿಲಹರಿ ಕಚೇರಿಯ ಸಂಭ್ರಮದಲ್ಲಿ…
ಮಾಧ್ಯಮದಲ್ಲಿ ಈಗಷ್ಟೇ ಬೆಳೆಯುತ್ತಿರುವ ನಮ್ಮಂತಹ ಹುಡುಗರಿಗೆ ಒಬ್ಬ ನಟ ಬೆಂಬಲಕ್ಕೆ ನಿಲ್ಲುವುದು ಅಂದ್ರೆ ತಮಾಷೆ ಅಲ್ಲ. ಆ ವಾಸ್ತವ ಏನು ಅನ್ನೋದು ಮಾಧ್ಯಮದಲ್ಲಿದ್ದವರಿಗೆ ಗೊತ್ತಿದೆ. ಆದರೆ, ಸಂಚಾರಿ ವಿಜಯ್ ಮಾತ್ರ ಹಾಗಲ್ಲ. ಸ್ಟಾರ್ ಎಂಬ ತಮ್ಮೊಳಗಿನ ಅಹಂ ಮೀರಿ ಎಲ್ಲರನ್ನು ಸಮ ಭಾವದಿಂದಲೇ ಅಪ್ಪಿಕೊಂಡಿದ್ದರು, ಒಪ್ಪಿಕೊಂಡಿದ್ದರು. ಆ ಮಟ್ಟಿಗೆ ವಿಜಯ್ ಅವರದ್ದು ಅಪರೂಪದ ವ್ಯಕ್ತಿತ್ವ. ನಟ ಸಂಚಾರಿ ವಿಜಯ್ ತೀರಾ ಭಿನ್ನ ಅಂತೆನಿಸಿಕೊಂಡಿದ್ದೇ ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ.
ಮಾಧ್ಯಮದಲ್ಲಿ ಅವರು ಯಾರನ್ನೂ ಸಣ್ಣವರು-ದೊಡ್ಡವರು ಅಂತ ಬೇರ್ಪಡಿಸಿ ಕಂಡವರೇ ಅಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಯಾರೇ ಮಾತನಾಡಿಸಲಿ, ಅಥವಾ ಯಾವುದೇ ಕ್ಷಣ ಫೋನ್ ಕಾಲ್ ಮಾಡಿದರೂ ರೆಸ್ಪಾನ್ಸ್ ಮಾಡುವ ಮಾನವೀಯ ಗುಣದ ವ್ಯಕ್ತಿ ವಿಜಯ್. ಹಾಗೆಲ್ಲ ಮಾಧ್ಯಮದವರ ಜತೆಗೆ ತಾವು ಪರಿಚಯ ಇದ್ದೇನೆ ಅಂತ ಯಾವತ್ತಿಗೂ ತಮ್ಮ ಬಗ್ಗೆ ಒಂದು ಆರ್ಟಿಕಲ್ ಬರೀಬಹುದಾ ಅಂತಲೂ ಕೇಳಿರಲಿಲ್ಲ. ನಮಗಷ್ಟೇ ಅಲ್ಲ, ಮಾಧ್ಯಮದ ಯಾವುದೇ ಪರ್ತಕರ್ತರ ಬಳಿಯೂ ಹಾಗೆ ಕೇಳಿಕೊಂಡಿದ್ದು ದಾಖಲೆಯೂ ಇಲ್ಲ. ಅಂತಹ ಸಣ್ಣತನ ಅವರಗಿರಲಿಲ್ಲ. ಅದೆಲ್ಲವನ್ನು ಮೀರಿ ಎಲ್ಲಾ ಮಾಧ್ಯಮದವರ ಜತೆಗೆ ಅತ್ಯಂತ ನಿಷ್ಕಲ್ಮಶ ಸ್ನೇಹ ಸಂಪಾದಿಸಿಕೊಂಡಿದ್ದರು.
ಸಮಯ ಸಿಕ್ಕಾಗ ”ಸಿನಿ ಲಹರಿ’ಯ ಪ್ರತಿ ಬರಹಗಳನ್ನು ಗಮನಿಸುತ್ತಿದ್ದ ಅವರು, ಅದು ಹಾಗಲ್ಲ ಹೀಗೆ ಅಂತ ಸಲಹೆ ನೀಡುತ್ತಿದ್ದರು. ಆ ಮೂಲಕವೇ ‘ಸಿನಿ ಲಹರಿ’ಯ ಫ್ಯಾಮಿಲಿ ಮೆಂಬರ್ ಕೂಡ ಆಗಿದ್ದರು. ಆ ಮೂಲಕ ‘ಸಿನಿಲಹರಿ’ಗೂ ಒಂದು ಮೆರಗು ಸಿಕ್ಕಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಟ ಒಂದು ಸಂಸ್ಥೆಯ ಫ್ಯಾಮಿಲಿ ಮೆಂಬರ್ ಆಗಿದ್ದರೂ ಅನ್ನೋದು ಅದು ನಮ್ಮ ಪಾಲಿಗೆ ಸಿಕ್ಕ ಬಹುದೊಡ್ಡ ಕ್ರೆಡಿಟ್ ಆಗಿತ್ತು.
ವಿಜಯ್ ಪ್ರೀತಿಯ ಬರಹ…
ಈಗ ಅವರಿಲ್ಲ ಅನ್ನೋದನ್ನು ಹೇಗೆ ಅರಗಿಸಿಕೊಳ್ಳಬೇಕೋ ಗೊತ್ತಿಲ್ಲ. ಆದರೂ ಅವರಿಲ್ಲ. ಆದರೆ ಅವರು ಆಶಯಗಳಿವೆ. ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಎಷ್ಟೇ ಸ್ಟಾರ್ ಕಿರೀಟ ಬಂದರೂ ಸರಳವಾಗಿರುವುದು, ನೊಂದವರ ಧ್ವನಿಯಾಗುವುದು, ಸದಾ ನಗು ನಗುತ್ತಾ ಬಾಳವುದು. ಇದು ವಿಜಯ್ ಬದುಕು. ಅದನ್ನೇ ನಾವು ಕೂಡ ಪಾಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕಿದೆ.
ಸಿನಿಲಹರಿ ಸಿಬ್ಬಂದಿ ಜೊತೆ ಸಂಚಾರಿ
ಆ ನಿಟ್ಟಿನಲ್ಲಿ ‘ಸಿನಿ ಲಹರಿ’ ಅವರ ಹೆಸರಲ್ಲಿ ನೊಂದವರ, ಅಸಹಾಯಕರ ಪರವಾಗಿ ಎಂದೆಂದಿಗೂ ಇರುತ್ತೆ ಎನ್ನುವ ಭರವಸೆಯೊಂದಿಗೆ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ.
ವಿಜಯ್ ಭರಮಸಾಗರ- ದೇಶಾದ್ರಿ ಹೊಸ್ಮನೆ