ನಟ ನಿಖಿಲ್ ಕುಮಾರ ಸ್ವಾಮಿ ಫೀಲ್ಡಿಗಿಳಿದಿದ್ದಾರೆ. ಸದ್ಯಕ್ಕೆ ಅವರು ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದು, ಅದರ ನಡುವೆಯೇ ಈಗ ರಾಮನಗರ ಜಿಲ್ಲೆಯಲ್ಲಿನ ಜನರ ನೆರವಿಗೆ ನಿಂತಿದ್ದಾರೆ. ವಿಶೇಷವಾಗಿ ಕೊರೊನಾ ಸಂಕಷ್ಟದಲ್ಲಿ ಪ್ರಾಣ ಪಣಕ್ಕಿಟ್ಟು ಜನರ ಆರೋಗ್ಯ ಸೇವೆಗೆ ದುಡಿಯುತ್ತಿರುವ ರಾಮನಗರ ಜಿಲ್ಲೆಯ ಆರೋಗ್ಯ ಸೇವಕರಿಗೆ ಆರ್ಥಿಕ ನೆರವು ನೀಡಿದ್ದಾರೆ. ಗುರುವಾರ ರಾಮನಗರ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಪ್ ನರ್ಸ್ ಗಳಿಗೆ ಆರ್ಥಿಕ ನೆರವು ನೀಡಿದರು.
ಹಾಗೆಯೇ ನೆಬ್ಯುಲೈಝರ್ ಮಿಷಿನ್ ಕೂಡ ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿದೆ. ಕಳೆದ ವರ್ಷ ಹಾಗೂ ಈ ಬಾರಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್ ತಮ್ಮ ಪ್ರಾಣ ಪಣಕ್ಕಿಟ್ಟು ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿದ್ದಾರೆ. ಇವತ್ತು ಎಲ್ಲಾ ಕೋವಿಡ್ ವಾರಿಯರ್ಸ್ ನಿಜವಾದ ಹಿರೋಗಳು. ಅವರಿಗೆ ನನ್ನ ಕೈಲಾದ ಸಹಾಯ ಮಾಡಬೇಕು ಅಂತ ಯೋಚಿಸುತ್ತಿದ್ದೆ. ಅದಕ್ಕೀಗ ಕಾಲ ಕೂಡಿ ಬಂದಿದೆ ಎಂದರು.
ಕೋವಿಡ್ ಎಲ್ಲರನ್ನು ಬಾಧಿಸುತ್ತಿದೆ. ಈಗಾಗಲೇ ರಾಮನಗರ ಜಿಲ್ಲೆಯ 16 ಆಶಾ ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರತೀ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡ್ತೀವಿ ಅಂತಾ ಹೇಳಿತ್ತು. ಆದರೆ ಇಲ್ಲಿವರೆಗೂ ಒಂದೇ ಒಂದು ಕುಟುಂಬಕ್ಕೆ ಹಣ ಸಿಕ್ಕಿದೆ ಎಂಬುದು ಗೊತ್ತಾಗಿಲ್ಲ. ಹಾಗೆಯೇ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುತ್ತೇವೆ ಅಂದಿತ್ತು. ಅದರಲ್ಲೂ ಕೂಡ ಸರ್ಕಾರ ವಿಫಲವಾಗಿದೆ. ಆದರೆ ತಮ್ಮ ಪ್ರಾಣ ಪಣಕ್ಕಿಟ್ಟು, ನಮ್ಮ ಪ್ರಾಣ ಉಳಿಸುವ ಕೆಲಸವನ್ನ ಕೊರೋನಾ ವಾರಿಯರ್ಸ್ ಮಾಡುತ್ತಿದ್ದಾರೆ.ಅವರನ್ನ, ಅವರ ಕುಟುಂಬವನ್ನ ಉಳಿಸುವ ಕೆಲಸವನ್ನ ನಾವು ಮಾಡಬೇಕಿದೆ.
ಅದಕ್ಕಾಗಿಯೇ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಮೆಡಿಕಲ್ ಕಿಟ್ ವಿತರಣೆ ಮಾಡುತ್ತೇವೆ ಅಂತ ನಿಖಿಲ್ ಕುಮಾರ ಸ್ವಾಮಿ ಹೇಳಿದರು.