ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ‘ಐರಾವನ್’ ಚಿತ್ರತಂಡ ಇದೀಗ ಸೇವೆಗೆ ಇಳಿದಿದೆ. ಚಿತ್ರದ ನಿರ್ಮಾಪಕ ಡಾ. ನಿರಂತರ್ ಗಣೇಶ್ ಮತ್ತು ಚಿತ್ರ ನಾಯಕ ಜಯರಾಮ್ ಕಾರ್ತಿಕ್ (ಜೆಕೆ) ಮತ್ತು ನಟ ವಿವೇಕ್ ಆಕ್ಸಿಜನ್ ವಾಹನವನ್ನು ಇತ್ತೀಚೆಗೆ ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ. ಅದರ ಜತೆಗೆ 10 ಸಾವಿರ ಕೋವಿಡ್ ಮೆಡಿಕಲ್ ಕಿಟ್ ಹಾಗು ಔಷಧಗಳನ್ನೂ ವಿತರಣೆ ಮಾಡಿದ್ದಾರೆ. ಈ ಕಾರ್ಯಕ್ಕೆ ಆರೆಸ್ಸೆಸ್ನ ಪ್ರಾದೇಶಿಕ ಜನರಲ್ ಸೆಕ್ರೆಟರಿ ಎನ್ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯದ ಆರೋಗ್ಯ ಭಾರತಿಯ ಜಂಟಿ ಕಾರ್ಯದರ್ಶಿ ಗಂಗಾಧರನ್ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ನಿರ್ಮಾಪಕ ನಿರಂತರ್, “ಇಂಥ ವಿಷಮ ಕಾಲಘಟ್ಟದಲ್ಲಿ ಸಮಾಜಕ್ಕೆ ನಾವು ಮಾಡಬೇಕಾದ ಜವಾಬ್ದಾರಿ ಇದು. ಎಲ್ಲೆಡೆ ಆ್ಯಂಬುಲೆನ್ಸ್ ಕೊರತೆ ಕಾಡುತ್ತಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಬ್ಯಾಟರಾಯನಪುರ ವ್ಯಾಪ್ತಿಗೆ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿದ್ದೇವೆ. ಇದರ ಜತೆಗೆ ಕೋವಿಡ್ ಮೆಡಿಕಲ್ ಕಿಟ್ ಅನ್ನೂ ವಿತರಣೆ ಮಾಡಿದ್ದೇವೆ. ಸೋಂಕಿನ ಲಕ್ಷಣ ಕಾಣುತ್ತಿದ್ದಂತೆ ಕಿಟ್ನಲ್ಲಿ ನೀಡಿದ ಔಷಧಗಳನ್ನು ತೆಗೆದುಕೊಳ್ಳಬಹುದು. ಯಾವ್ಯಾವುದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ನೀಡಿದ್ದೇವೆ ಎಂದಿದ್ದಾರೆ.