ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ಸಿನಿಮಾ ಕಾರ್ಮಿಕರನ್ನು ಮತ್ತೆ ಆತಂಕಕ್ಕೆ ತಳ್ಳಿದೆ. ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿ ತಿಳಿಯಾಗುವುದು ಯಾವಾಗವೋ, ಅನಿಶ್ವಿತತೆಯ ಆತಂಕ ಸಿನಿಮಾ ಕಾರ್ಮಿಕ ವಲಯವನ್ನು ಕಾಡುತ್ತಿದೆ. ಈ ನಡುವೆಯೇ ನಟ ಉಪೇಂದ್ರ , ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.
ಕಾರ್ಮಿಕರ ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಲು ಮುಂದಾಗಿದ್ದಾರೆ. ಅಭಿಮಾನಿಗಳ ಆಶೀರ್ವಾದಿಂದಲೇ ಇದನ್ನು ನಡೆಸುವುದಾಗಿ ಅವರು ಹೇಳಿಕೊಂಡಿದ್ದಾರೆ.
“ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಕೋವಿಡ್ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಆ ಕಾರಣ ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ತಸ್ಥರನ್ನು ಸಂಪರ್ಕಿಸಬಹುದುʼ ಅಂತ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರರಂಗದ ಪರವಾಗಿ ಈಗಾಗಲೇ ನಟ ಕಿಚ್ಚ ಸುದೀಪ್ ಸೇರಿದಂತೆ ವಸಿಷ್ಟ ಸಿಂಹ, ಭುವನ್ ಪೊನ್ನಣ್ಣ, ರಾಗಿಣಿ, ಸಂಜನಾ ಸೇರಿದಂತೆ ಹಲವರು ಅಸಹಾಯಕರ ನೆರವಿಗೆ ಧಾವಿಸಿದ್ದಾರೆ. ಆದರೆ, ಈಗ ನಟ ಉಪೇಂದ್ರ ಚಿತ್ರರಂಗದ ಅಷ್ಟು ಕಾರ್ಮಿಕರ ನೆರವಿಗೆ ಧಾವಿಸಿದ್ದು ವಿಶೇಷ.