ಕನ್ನಡತಿ” ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಚರಣ್ ನಿರ್ದೇಶನದ “ಮೇಘ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ “ಮೇಘ” ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಾನು ಮೂಲತಃ ಐಟಿ ಉದ್ಯೋಗಿ. ಕೋವಿಡ್ ನಂತರ ಐಟಿ ಕೆಲಸ ಬಿಟ್ಟು ವಿ.ನಾಗೇಂದ್ರಪ್ರಸಾದ್ ಅವರ ಬಳಿ ಸಿನಿಮಾ ಕೆಲಸ ಕಲಿಯಲು ಆರಂಭಿಸಿದೆ. ಇನ್ನು “ಮೇಘ” ನನ್ನ ಮೊದಲ ನಿರ್ದೇಶನದ ಚಿತ್ರ. “ಮೇಘ” ಗಳು ಆಕಾಶದಲ್ಲಿ ಯಾವಾಗಲೂ ಒಟ್ಟಾಗೆ ಚಲಿಸುತ್ತದೆ. ಆದರೆ ಮಳೆಯನ್ನು ಎಲ್ಲೋ ಸುರಿಸುತ್ತದೆ. ಇದನ್ನೇ ಇಟ್ಟುಕೊಂಡು ಪ್ರೇಮ ಕಥೆ ಸಿದ್ದ ಮಾಡಿಕೊಂಡೆ. ನಮ್ಮ ಸಿನಿಮಾದಲ್ಲಿ “ಮೇಘ” ಎಂದರೆ ಪ್ರೀತಿ ಅಂತ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ನಾಯಕ – ನಾಯಕಿಯಾಗಿ ನಟಿಸಿದ್ದಾರೆ.
ರಾಜೇಶ್ ನಟರಂಗ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಜೋಯಲ್ ಸಕ್ಕರಿ ಸಂಗೀತ ಸಂಯೋಜಿಸಿರುವ ಐದು ಸುಮಧುರ ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳನ್ನು ಗುರುಗಳಾದ ನಾಗೇಂದ್ರ ಪ್ರಸಾದ್ ಅವರು, ಬಾಕಿ ಮೂರು ಹಾಡುಗಳನ್ನು ನಾನು ಬರೆದಿದ್ದೇನೆ. ಯತೀಶ್ ಹೆಚ್ ಆರ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರ ಬಿಡುಗಡೆಯ ಹಂತದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ನನಗೆ ಸಿನಿಮಾ ರಂಗ ಹೊಸತು. ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಹಾಗೂ ತ್ರಿವಿಕ್ರಮ ಸಾಫಲ್ಯ ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿರುವುದಾಗಿ ನಿರ್ಮಾಪಕ ಯತೀಶ್ ಹೆಚ್ ಆರ್ ಹೇಳಿದರು.
ನಾನು ಈವರೆಗೂ ಮಾಡಿರದ ಪಾತ್ರದಲ್ಲಿ “ಮೇಘ” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಮ ಕಥಾನಕವಾಗಿದ್ದರೂ ಚಿತ್ರದ ಎಮೋಷನ್ ಎಲ್ಲರ ಗಮನ ಸೆಳೆಯುತ್ತದೆ. ಉದಾಹರಣೆಗೆ ನಾನು ಈ ಚಿತ್ರದ ಕಥೆ ಕೇಳಿ, ನನ್ನ ಅಪ್ಪನಿಗೆ ಬುಲೆಟ್ ಕೊಡಿಸಿದ್ದೇನೆ. ಈಗಿನ ಪೀಳಿಗೆಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ ಎಂದರು ನಾಯಕ ಕಿರಣ್ ರಾಜ್.
ಈ ಚಿತ್ರದ ವಿಶೇಷವೆಂದರೆ ನನ್ನ ಹಾಗೂ ನಾಯಕ ಇಬ್ಬರ ಹೆಸರು “ಮೇಘ” ಎಂದು. ಉತ್ತಮ ಕಥೆಯ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕಿ ಕಾಜಲ್ ಕುಂದರ್.
ಚಿತ್ರದ ಛಾಯಾಗ್ರಾಹಕ & ಸಂಕಲನಕಾರ ಗೌತಮ್ ನಾಯಕ್, ನಟಿ ಶ್ರೀವಿದ್ಯ ಹಾಗೂ ತ್ರಿವಿಕ್ರಮ ಸಾಫಲ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.