ಕನ್ನಡ ಚಿತ್ರರಂಗದಲ್ಲಿ ಬಣ್ಣದ ಕನಸು ಹೊತ್ತು ಬಂದ ನಟಿ ಮಣಿಗಳ ಪೈಕಿ ಸ್ವಪ್ನ ಶೆಟ್ಟಿಗಾರ್ ಕೂಡ ಒಬ್ಬರು. ಎಲ್ಲ ಯುವ ನಟಿಯರಂತೆ ಸ್ವಪ್ನ ಶೆಟ್ಟಿಗಾರ್ ಕೂಡ ಬೆಟ್ಟದಷ್ಟು ಕನಸು, ಪುಟ್ಟಿಗಟ್ಟಲೆ ಆಸೆ-ಆಕಾಂಕ್ಷೆ ಹೊತ್ತು ಬಂದವರು. ಸ್ಯಾಂಡಲ್ ವುಡ್ ನಲ್ಲಿ ತಾನು ಗಟ್ಟಿ ನೆಲೆ ಕಾಣಬೇಕು ಅಂತ ಕನಸು ಕಂಡವರು. ತಮ್ಮ ಕನಸು ನನಸು ಮಾಡಿಕೊಳ್ಳಲು ತಯಾರಿ ಕೂಡ ನಡೆಸಿದವರು.
ಇಷ್ಟಕ್ಕೂ ಈ ಯುವ ನಟಿ ಸ್ವಪ್ನ ಶೆಟ್ಟಿಗಾರ್ ಬಗ್ಗೆ ಇಷ್ಟೊಂದು ಪೀಠಿಕೆ ಹಾಕೋಕೆ ಕಾರಣ, ಅವರು ಅಭಿನಯಿಸಿರುವ ಎರಡು ಸಿನಿಮಾಗಳು ಸದ್ಯ ಬಿಡುಗಡೆಯ ಹೊಸ್ತಿಲಲ್ಲಿ ಇರುವುದು. ತಮ್ಮ ನಿರೀಕ್ಷೆಯ ಸಿನಿಮಾಗಳೆರೆಡು ರಿಲೀಸ್ ಆಗುತ್ತಿರುವ ಖುಷಿ ಒಂದು ಕಡೆಯಾದರೆ, ಇದೀಗ ತಮ್ಮ ಹಟ್ಟು ಹಬ್ಬದ ಸಂಭ್ರದಲ್ಲಿ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡುವ ಸಂತಸ ಮತ್ತೊಂದು ಕಡೆ.. ಸ್ವಪ್ನ ಶೆಟ್ಟಿಗಾರ್ ಇಂದು (ಆಗಸ್ಟ್ 13) ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೇ ಹೆಸರಿಡದ ಸಿನಿಮಾವೊಂದರಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅತ್ತ ಪರಭಾಷೆಯಿಂದಲೂ ಸ್ವಪ್ನ ಶೆಟ್ಟಿಗಾರ್ ಅವರಿಗೆ ಅವಕಾಶ ಬಂದಿದೆ. ತಮಿಳು ಸಿನಿಮಾವೊಂದರ ಮಾತುಕತೆ ನಡೆಯುತ್ತಿದ್ದು, ಅದು ಅಂತಿಮವಾಗುವ ಸಾಧ್ಯತೆ ಇದೆ ಎಂಬುದು ಅವರ ಮಾತು.
ಹಾಗೆ ನೋಡಿದರೆ, ಸ್ವಪ್ನ ಶೆಟ್ಟಿಗಾರ್ ಕನ್ನಡಕ್ಕೆ ಹೊಸ ಮುಖವೇನಲ್ಲ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಗಮನ ಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದರೂ, ಸ್ವಪ್ನ ಶೆಟ್ಟಿಗಾರ್ ಅವರು ಆಯ್ಕೆಯಲ್ಲಿ ಎಚ್ಚರ ತಪ್ಪಿಲ್ಲ. ಇದುವರೆಗೂ ಮಾಡಿದ ಸಿನಿಮಾಗಳ ಪಾತ್ರಗಳ ಮೇಲೆ ಸ್ವಪ್ನ ಅವರಿಗೆ ಖುಷಿ ಇದೆ. ಅವರೀಗ ನಾಯಕಿಯಾಗಿ ನಟಿಸಿರುವ ಆರೇಳು ಸಿನಿಮಾಗಳ ಪೈಕಿ ಎರಡು ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿವೆ ಎಂಬುದು ಅವರ ಖುಷಿಗೆ ಕಾರಣ.
ಸ್ವಪ್ಪ ಶೆಟ್ಟಿಗಾರ್ ನಾಯಕಿಯಾಗಿ ಅಭಿನಯಿಸಿರುವ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಈಗ ಬಿಡುಗಡೆಯಾಗಲು ಸಜ್ಜಾಗಿದೆ. ಈಗ ಆಡಿಯೋ ರಿಲೀಸ್ ಗೆ ಚಿತ್ರತಂಡ ಮುಂದಾಗಿದ್ದು, ಚಿತ್ರದುರ್ಗದ ಚಳ್ಳಕೆರೆಯಲ್ಲಿ ಇವೆಂಟ್ ನಡೆಸಲು ತಯಾರಿ ನಡೆಸಿದೆ.
ಈಗಾಗಲೇ . ಚಿತ್ರದ ಟೀಸರ್ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಸಿನಿಮಾ ಬಗ್ಗೆ ಸ್ವಪ್ನ ಶೆಟ್ಟಿಗಾರ್ ಅವರಿಗೆ ಅತೀವ ವಿಶ್ವಾಸ. ಕಾರಣ ಸಿನಿಮಾ ಕಥೆ ಹಾಗು ಗಟ್ಟಿ ಪಾತ್ರ. ಈ ಕುರಿತು ಸಪ್ನ ಹೇಳುವುದಿಷ್ಟು.
‘ನಾನು ಮೂಲತಃ ಮಂಗಳೂರಿನ ಹುಡುಗಿ. ತಂದೆ ಮಂಗಳೂರಿನವರು. ತಾಯಿ ಉತ್ತರ ಕರ್ನಾಟಕದವರು. ಹುಬ್ಬಳ್ಳಿ ಸಮೀಪದ ನವಲಗುಂದದಲ್ಲೇ ಹೆಚ್ಚು ಆಡಿ, ಓದಿ ಬೆಳೆದವಳು.
ನನಗೆ ಸಿನಿಮಾಗೆ ಬರಬೇಕು ಎಂಬ ಯಾವ ಯೋಚನೆಯೂ ಇರಲಿಲ್ಲ. ಆದರೆ, ಸಿನಿಮಾ ವಿಚಾರದಲ್ಲೇ ಒಬ್ಬರು ಮನ ನೋಯಿಸಿದ್ದರು. ಆ ಕಾರಣಕ್ಕೆ ನಾನೇಕೆ ಇಲ್ಲಿ ಬಂದು ನಿಲ್ಲಬಾರದು ಅಂತ ಚಾಲೆಂಜ್ ಮಾಡಿ ಒಬ್ಬ ನಟಿಗೆ ಬೇಕಾದ ನಟನಾ ತರಬೇತಿ ಸೇರಿದಂತೆ ಸಿನಿಮಾಗೆ ಇರಬೇಕಾದ ಒಂದಷ್ಟು ಅರ್ಹತೆ ಪಡೆದು ಸಿನಿಮಾ ರಂಗ ಪ್ರವೇಶಿಸಿದೆ. ಆರಂಭದಲ್ಲಿ ನಾನು ಮಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗಲೇ ತುಳು ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ತು.
ಆದರೆ, ಆ ಸಿನಿಮಾ ನಿಂತು ಹೋಯ್ತು. ಅಲ್ಲೊಂದಷ್ಟು ಅವಮಾನಗಳೂ ಆದವು. ಕೊನೆಗೆ ನಾನು ನಟಿ ಆಗಲೇಬೇಕು ಅಂತ ಡಿಸೈಡ್ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಅವಕಾಶ ಹುಡುಕಿ ಬಂತು. ಮೊದಲು ‘ನಾನು ನನ್ನ ಹುಡುಗಿ’ ಎಂಬ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ತು ಆದರೆ, ಆ ಸಿನಿಮಾನೂ ನಿಂತು ಹೋಯ್ತು. ಅದೇ ಸಿನಿಮಾ ನಿರ್ದೇಶಕರು ಮತ್ತೊಂದು ಸಿನಿಮಾ ಮಾಡಿದ್ರು. ಅಲ್ಲಿ ನಟಿಸೋ ಅವಕಾಶ ಸಿಕ್ತು. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯ್ತು ಎಂಬುದು ಸ್ವಪ್ನ ಶೆಟ್ಟಿಗಾರ್ ಮಾತು.
ಈ ಸಿನಿಮಾರಂಗಕ್ಕೆ ಬಂದಿದ್ದು ಖುಷಿ ಇದೆ. ಕಲರ್ ಫುಲ್ ಜಗತ್ತು ಇದು. ಕಲರ್ ಫುಲ್ ಆಗಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಅದಮ್ಯ ಆಸೆ ಇದೆ. ಆರು ವರ್ಷಗಳ ಈ ಜರ್ನಿಯಲ್ಲಿ ಸಿನಿಮಾ ಸಾಕಷ್ಟು ಕಲಿಸಿಕೊಟ್ಟಿದೆ. ಒಳ್ಳೆಯ ಮತ್ತು ಕೆಟ್ಟ ಅನುಭವವೂ ಆಗಿದೆ. ಇಲ್ಲೀಗ ಗಟ್ಟಿನೆಲೆ ಕಾಣಬೇಕು ಅಂತ ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಒಳ್ಳೊಳ್ಳೆಯ ಕಥೆ ಮತ್ತು ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ.
ಆರಂಭದಲ್ಲಿ ಸಿಕ್ಕ ಪಾತ್ರಗಳನ್ನು ಮಾಡುತ್ತಿದ್ದೆ. ಹೀರೋಯಿನ್ ಆಗುವ ತುಡಿತ ಇತ್ತು. ಆದರೆ, ಕೆಲ ನಿರ್ದೇಶಕರ ದೃಷ್ಟಿಯಲ್ಲಿ ನಾನು ಹೀರೋಯಿನ್ ಮೆಟೀರಿಯಲ್ ಆಗಿರಲಿಲ್ಲ. ಆಮೇಲೆ ಹೀರೋಯಿನ್ ಆಗಲೇಬೇಕು ಅಂತ ವರ್ಕೌಟ್ ಶುರು ಮಾಡಿದೆ. ಸಿನಿಮಾ ನಾಯಕಿ ಆಗುವ ಎಲ್ಲ ಅರ್ಹತೆ ಪಡದುಕೊಂಡೆ. ಅಲ್ಲಿಂದ ಮೂರ್ನಾಲ್ಕು ಸಿನಿಮಾಗಳಿಗೆ ನಾಯಕಿ ಅದೆ. ಒಮ್ಮೊಮ್ಮೆ ನನಗೆ ಈ ಇಂಡಸ್ಟ್ರಿ ಬೇಸರ ತರಿಸಿದ್ದು ನಿಜ. ಅವಕಾಶ ಮಿಸ್ ಆದಾಗೆಲ್ಲ ಬೇಜಾರು ಆಗುತ್ತಿತ್ತು. ಆದರೂ, ತಾಳ್ಮೆಯಿಂದಲೇ ಅವಕಾಶ ಪಡೆದೆ. 19 ಸಿನಿಮಾಗಳಲ್ಲಿ ಗಮನಿಸುವ ಪಾತ್ರಗಳನ್ನು ಮಾಡುತ್ತ ಅನುಭವ ಪಡೆದೆ.
ಈಗ ಆರು ಸಿನಿಮಾಗಳಲ್ಲಿ ನಾಯಕಿಯಾಗಿದ್ದೇನೆ. ‘ಡವ್ ಮಾಸ್ಟರ್’ ಸಿನಿಮಾ ಪಾತ್ರ ಚೆನ್ನಾಗಿದೆ. ಅಲ್ಲಿ ಕಥೆಯೇ ಹೈಲೆಟ್. ಇದು ಕೂಡ ರಿಲೀಸ್ ಗೆ ರೆಡಿಯಾಗುತ್ತಿದೆ. ಇನ್ನು, ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಬಗ್ಗೆ ಹೇಳಲೇಬೇಕು. ಇದು ನನಗೆ ಮಾತ್ರವಲ್ಲ, ಇಡೀ ತಂಡಕ್ಕೆ ಒಳ್ಳೆಯ ಹೆಸರು ತಂದುಕೊಡುತ್ತೆ ಎಂಬ ಭವ್ಯ ಭರವಸೆ ಇದೆ.
‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಇಷ್ಟ ಆಗೋಕೆ ಕಾರಣ ಕಥೆ ಮತ್ತು ಪಾತ್ರ. ಅಲ್ಲಿ ಎಮೋಷನ್ಸ್ ಇದೆ, ಭಾವನೆಗಳಿವೆ, ಭಾವುಕತೆ ಇದೆ, ಸಂಬಂಧಗಳ ಮೌಲ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯ ಗುಣ ಇದೆ. ನಾನಿಲ್ಲಿ ವಿಕಲಚೇತನ ಮಗಳ ತಾಯಿಯಾಗಿ ನಟಿಸಿದ್ದೇನೆ. ಅದೊಂದು ತೂಕದ ಪಾತ್ರ. ಇಡೀ ಸಿನಿಮಾದಲ್ಲಿ ಬದುಕಿನ ಅರ್ಥವಿದೆ. ಭಾವನೆಗಳ ಗುಚ್ಛವಿದೆ. ಅ ಕಾರಣಕ್ಕೆ ಈ ಸಿನಿಮಾಒಪ್ಪಿಕೊಂಡೆ. ಸದ್ಯ ಸಿನಿಮಾದ ಟೀಸರ್ ಮತ್ತು ಲಿರಿಕಲ್ ಸಾಂಗ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಷ್ಟರಲ್ಲೇ ಆಡಿಯೋ ರಿಲೀಸ್ ಆಗಲಿದೆ. ಚಿತ್ರದುರ್ಗದಲ್ಲಿ ಆಡಿಯೋ ಕಾರ್ಯಕ್ರಮ ಕೂಡ ನಡೆಯಲಿದೆ.
‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾದ ಸ್ಪೆಷಲ್ ಅಂದರೆ ರಾಕಿ. ಇಡೀ ಚಿತ್ರದ ಕೇಂದ್ರ ಬಿಂದು ರಾಕಿ. ರಾಕಿ ಅಂದರೆ ಶ್ವಾನದ ಹೆಸರು. ನನ್ನ ಮಗಳು ಮತ್ತು ರಾಕಿ ನಡುವಿನ ಸಂಬಂಧ ಮತ್ತು ಅವರಿಬ್ಬರ ಬದುಕಿನ ಉತ್ಸಾಹವೇ ಜೀವಾಳ. ಶೂಟಿಂಗ್ ವೇಳೆ ನಾವುಗಳು ಟೇಕ್ ತೆಗೆದುಕೊಂಡರೆ, ರಾಕಿ ಮಾತ್ರ ಒಂದೇ ಟೇಕ್ ಓಕೆ ಮಾಡುತ್ತಿದ್ದ. ಸೋ ಆ ಕ್ಷಣಗಳೇ ಮರೆಯದ ಅನುಭವ. ಸಿನಿಮಾ ಶೂಟಿಂಗ್ ಅನಿಸಲಿಲ್ಲ ಫ್ಯಾಮಿಲಿ ಟ್ರಿಪ್ ಥರಾ ಇತ್ತು. ಅದಕ್ಕೆ ಕಾರಣ ಟೀಮ್ ಮತ್ತು ಪ್ರೊಡಕ್ಷನ್ ಹೌಸ್. ನಿರ್ಮಾಪಕ ಶರಣಪ್ಪ ಹಾಗು ನಿರ್ದೇಶಕ ವಿಶ್ವಾಸ್ ಕೊಟ್ಟ ಸಹಕಾರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
ನನಗೆ ಬಾಲಿವುಡ್ ನಟಿ ರೇಖಾ ಅವರು ರೋಲ್ ಮಾಡೆಲ್. ಇನ್ನು ನನಗೆ ಚಾಲೆಂಜ್ ಎನಿಸುವ ಪಾತ್ರ ಮಾಡುವಾಸೆ. ಅದರಲ್ಲೂ ವಿಲನ್ ಇದ್ದರಂತೂ ಓಕೆ. ಈಗಾಗಲೇ ಕ್ಲಾಂತ ಎಂಬ ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ನಾಯಕಿಯಷ್ಟೇ ಪ್ರಬಲ ಪಾತ್ರವದು. ಕನ್ನಡ ಮಾತ್ರವಲ್ಲ, ಪರಭಾಷೆ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಕಂಟೆಂಟ್ ಇದ್ದರೆ ಅಲ್ಲೂ ಹೋಗೋಕೆ ರೆಡಿ. ಇನ್ನು, ನಟನೆ ಜೊತೆ ನಾನು ಹಾಡ್ತೀನಿ ಕೂಡ. ಅದರಲ್ಲೂ ಜನಪದ ಮಾತ್ರ. ಜೊತೆಗೆ ನಿರ್ದೇಶನದ ಮೇಲೂ ಒಲವಿದೆ. ಒಂದೆರೆಡು ಕಥೆ ಕೂಡ ಬರೆದಿಟ್ಟುಕೊಂಡಿದ್ದೇನೆ. ಆ ಟೈಮ್ ಗಾಗಿ ಕಾಯುತ್ತಿದ್ದೇನೆ.
ಈಗ ರಿಲೀಸ್ ಗೆ ಏಳು ಸಿನಿಮಾಗಳಿವೆ. ಅದಕ್ಕೂ ಮುನ್ನ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಒಂದಷ್ಟು ಕಥೆ ಕೇಳುತ್ತಿದ್ದೇನೆ . ತಮಿಳು ಸಿನಿಮಾದ ಕಥೆಯೊಂದು ಇಷ್ಟವಾಗಿದೆ. ಇನ್ನು ‘ಶಂಭೋ ಶಿವಶಂಕರ’ ಸಿನಿಮಾ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರ ‘ಬಿಂಗೋ’ ಸಿನಿಮಾದಲ್ಲೂ ನಟಿಸುತ್ತಿದ್ದೇನೆ.
ಅದು ಹಾರರ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕನ್ನಡ ಇಂಡಸ್ಟ್ರಿ ಈಗ ಯಾವುದರಲ್ಲೂ ಕಮ್ಮಿ ಇಲ್ಲ. ಒಳ್ಳೆಯ ಕಥಾಹಂದರ ಇರುವ ಸಿನಿಮಾಗಳು ಬರುತ್ತಿವೆ. ನಾನು ಗಟ್ಟಿ ಪಾತ್ರ, ಕಥೆ ಇರುವ ಸಿನಿಮಾ ಎದುರು ನೋಡುತ್ತಿದ್ದೇನೆ. ಯಾವುದೇ ಸಿನಿಮಾ ಬ್ಯಾಕ್ವಗ್ರೌಂಡ್ ಇರದ ನನಗೆ ನನ್ನ ಮೇಲೆ ವಿಶ್ವಾಸವಿದೆ. ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡಿಗರು ಖಂಡಿತ ಬಿಟ್ಟು ಕೊಡಲ್ಲ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ಸ್ವಪ್ನ.