ಸದ್ಯ ಚಂದನವನದಲ್ಲಿ ಯುವ ಪ್ರತಿಭೆಗಳ ಅದೃಷ್ಟ ಪರೀಕ್ಷೆಗೆ ‘ಸತ್ಯ ಹೆಗಡೆ ಸ್ಟುಡಿಯೋಸ್’ ವರದಾನವಾಗುತ್ತಿದೆ. ಹೌದು, ಛಾಯಾಗ್ರಾಹಕನಾಗಿ ಹೆಸರು ಮಾಡಿರುವ ಸತ್ಯ ಹೆಗಡೆ ‘ಸತ್ಯ ಹೆಗಡೆ ಸ್ಟುಡಿಯೋ’ ಹುಟ್ಟು ಹಾಕಿ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಈ ಸಂಸ್ಥೆಯ ಮೂಲಕ ಶಾರ್ಟ್ ಫಿಲ್ಮಗಳನ್ನು ನಿರ್ಮಾಣ ಮಾಡುವ ಜೊತೆಗೆ ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಯುವಕರು ತಮ್ಮ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಈ ಯೂಟ್ಯೂಬ್ ಚಾನಲ್ ಮೂಲಕ 11 ಕಿರು ಚಿತ್ರಗಳು ಬಿಡುಗಡೆ ಆಗಿವೆ.
ಇದೀಗ ಮೂರು ಫಿಲ್ಮ್ ಗಳು ಈ ಚಾನಲ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಆ ಪೈಕಿ ಕಳೆದ ಶನಿವಾರ ‘ಗ್ರಾಚಾರ’ ಎಂಬ ಕಿರುಚಿತ್ರ ರಿಲೀಸ್ ಆಗಿದ್ದು ಮುಂದಿನ ದಿನಗಳಲ್ಲಿ ‘ಕಥೆಗಾರನ ಕತೆ’ ಹಾಗೂ ‘ಅಹಂ ಪರಂ’ ಶಾರ್ಟ್ ಫಿಲಂ ಗಳು ಈ ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿವೆ. ಹಾಗಾಗಿ ಇತ್ತೀಚಿಗಷ್ಟೇ ಸತ್ಯ ಹೆಗಡೆ ಹಾಗೂ ಅವರ ತಂಡ ಆ ಮೂರು ಕಿರು ಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಒಂಬತ್ತು ನಿಮಿಷಗಳ ‘ಕತೆಗಾರನ ಕಥೆ’ ಕಿರು ಚಿತ್ರವನ್ನು ಯುವ ಬರಹಗಾರ ಹಾಗೂ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ.
ಹಾಸನ ಮೂಲದವರಾದ ಕೌಶಿಕ ‘ಹೃದಯದ ಮಾತು’ ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದು ಕೆಲವೊಂದು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಕೂಡ ಮಾಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡಿರುವ ಕೌಶಿಕಗೆ ಇದು ಮೊದಲ ಪ್ರಯತ್ನ. ಈಗಷ್ಟೇ ಬಿಡುಗಡೆ ಆಗಿರುವ ‘ಗ್ರಾಚಾರ’ ಕಿರು ಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದು, ಇವರು ಮೂಲತಃ ಸಾಗರನವರು. ಇವರು ಕೂಡ ಸಾಫ್ಟ್ ವೇರ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಇನ್ನು ವಿಭಿನ್ನ ಪ್ರಯತ್ನದಂತೆ ‘ಅಹಂ ಪರಂ’ ಕಿರುಚಿತ್ರ ಸಿದ್ಧವಾಗಿದ್ದು ಇದನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ.
ಈ ಕಿರುಚಿತ್ರಗಳ ವೀಕ್ಷಣೆಗೆ ಅಥಿತಿಗಳಾಗಿ ನಿರ್ದೇಶಕರಾದ ಗಿರಿರಾಜ್, ಚೇತನ ಕುಮಾರ್, ನಟ ‘ಗುಲ್ಟು’ ನವೀನ ಮುಂತಾದವರು ಬಂದಿದ್ದರು. ಆ ಪೈಕಿ ನಿರ್ದೇಶಕ ಗಿರಿರಾಜ್ ಮಾತನಾಡಿ, ‘ಇಂದಿನ ಯುವಕರಿಗೆ ಶಾರ್ಟ್ ಫಿಲಂಗಳು ಒಂದು ಒಳ್ಳೆ ಅವಕಾಶ ಆಗುತ್ತಿವೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮಗಳ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈಗಿನ ಯುವಕರಿಗೆ ಒಳ್ಳೆಯ ಅವಕಾಶವನ್ನು ಸತ್ಯ ಹೆಗಡೆ ಮಾಡಿಕೊಡುತ್ತಿದ್ದಾರೆ. ಮೂರು ಚಿತ್ರಗಳು ಚೆನ್ನಾಗಿ ಬಂದಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಯುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.
ನವೀನ್ ಮಾತನಾಡಿ, ‘ನಾನು ಕೂಡ ಶಾರ್ಟ್ ಫಿಲಂಗಳಲ್ಲಿ ಅಭಿನಯಿಸುತ್ತಾ ಬಂದವನು. ನಾವು ಶಾರ್ಟ್ ಫಿಲಂ ತಯಾರಿಸುವಾಗ ಸತ್ಯ ಹೆಗಡೆಯಂತವರು ನಮಗೆ ಯಾರು ಸಾಥ್ ನೀಡಿರಲಿಲ್ಲ.
ಈಗಿನವರೆಗೆ ಒಳ್ಳೆಯ ಅವಕಾಶ ಸಿಗುತ್ತದೆ ಕಿರುಚಿತ್ರಗಳನ್ನು ಬಿಡುಗಡೆ ಮಾಡಲು. ಇಂತಹ ಅವಕಾಶವನ್ನು ಇನ್ನಷ್ಟು ಯುವ ಜನರಿಗೆ ಸಿಕ್ಕು ಒಳ್ಳೆಯ ಚಿತ್ರಗಳನ್ನು ತರಬೇಕು. ಈ ಶಾರ್ಟ್ ಫಿಲಂ ವೇದಿಕೆ ಯುವ ಪ್ರತಿಭೆಗಳಿಗೆ ತುಂಬಾ ಅನುಕೂಲವಾಗುತ್ತದೆ’ ಎಂದರು.