ಜಿಗಣಿ-ಆನೇಕಲ್ ರಸ್ತೆಯಲ್ಲಿ ಎಂ.ಜೆ ಅವ್ಯಾನಾ ಎಂಬ ಅದ್ಭುತ ರೆಸಾರ್ಟ್ ಇದೆ. ಈ ಸುಂದರ ರೆಸಾರ್ಟ್ ನಲ್ಲಿ ಅನಿಲ್ ಕುಮಾರ್ ಅವರ ಸಾರಥ್ಯದ ಎಂ ಜೆ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭವಾಗಿದೆ. ನಟ ಶರಣ್, “ಕಾಂತಾರ” ಖ್ಯಾತಿಯ ನಟಿ ಸಪ್ತಮಿ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎನ್.ಸುಬ್ರಹ್ಮಣ್ಯ, ನಿರ್ದೇಶಕ ಹರಿ ಸಂತು, ಮುಖೇಶ್ ಕುಮಾರ್, ಸತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಇದ್ದರು.
ನಾನು ಮೂಲತಃ ಕೇರಳದವನು. ಮಲೆಯಾಳಂ ನಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈಗ ಎಂ.ಜೆ.ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇನೆ. ಈ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುತ್ತೇನೆ. ಬೆಂಗಳೂರಿನ ಆನೇಕಲ್ ಸಮೀಪ “ಅವ್ಯಾನಾ” ಎಂಬ ಈ ಸುಸ್ಸಜಿತ ರೆಸಾರ್ಟ್ ನಿರ್ಮಾಣವಾಗಿದೆ. ಎಲ್ಲಾ ಅನುಕೂಲವಿರುವ ರೆಸಾರ್ಟ್ ಇದು. ನಮ್ಮ “ಅವ್ಯಾನಾ” ರೆಸಾರ್ಟ್ ನಲ್ಲಿ “ಆಡಂಬರ”, “ಅತುಲ್ಯಂ” ಎಂಬ ಸಭಾಂಗಣವಿದೆ. “ಸ್ವಾದಂ” ಹೆಸರಿನ ರೆಸ್ಟೋರೆಂಟ್ ಇದೆ.
ಏಷ್ಯಾದಲ್ಲೇ ಅತೀ ಉದ್ದವಾದ ವಾಟರ್ ಫಾಲ್ಸ್ ನಿರ್ಮಿಸಲಾಗಿದೆ. ಇಂಡಿಯಾದಲ್ಲೇ ದೊಡ್ಡದಾದ ಫುಟ್ಬಾಲ್ ಹಾಗೂ ಕ್ರಿಕೆಟ್ ಟರ್ಫ್ ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ನಮ್ಮ “ಅವ್ಯಾನಾ” ರೆಸಾರ್ಟ್ ನಲ್ಲಿ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ವಿಶೇಷವಾಗಿ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅನುಕೂಲವಿದ್ದು, ಚಿತ್ರರಂಗದವರು ಬಳಸಿಕೊಳ್ಳಬಹುದು ಎಂದು ಎಂ.ಜೆ .ಪ್ರೊಡಕ್ಷನ್ ಹಾಗೂ “ಅವ್ಯಾನಾ” ರೆಸಾರ್ಟ್ ಬಗ್ಗೆ ಮಾಹಿತಿ ನೀಡಿದರು.
ನನ್ನನ್ನು ಆಹ್ವಾನಿಸಲು ಎರಡು ಗಂಟೆ ಪ್ರಯಾಣ ಮಾಡಿಕೊಂಡು ಬರುವುದು ಬೇಡ ಎಂದೆ. ಆದರೂ ಅನಿಲ್ ಕುಮಾರ್ ಅವರು ಖುದ್ದಾಗಿ ಬಂದು ಸಮಾರಂಭಕ್ಕೆ ಆಹ್ವಾನಿಸಿದರು. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು. “ಅವ್ಯಾನಾ” ರೆಸಾರ್ಟ್ ತುಂಬಾ ಚೆನ್ನಾಗಿದೆ. “ಎಂ.ಜೆ ಪ್ರೊಡಕ್ಣನ್” ಮೂಲಕ ಕನ್ನಡ ಚಿತ್ರ ನಿರ್ಮಾಣಕ್ಕೆ ಕೂಡ ಮುಂದಾಗಿದ್ದಾರೆ ಒಳ್ಳೆಯದಾಗಲಿ ಎಂದು ನಟ ಶರಣ್ ಹಾರೈಸಿದರು.
“ಅವ್ಯಾನಾ” ರೆಸಾರ್ಟ್ ನೋಡಿ ಖುಷಿಯಾಯಿತು. ಅದರಲ್ಲೂ ನಾನು ಈಜುಗಾರ್ತಿ ಆಗಿರುವುದರಿಂದ, ಇಲ್ಲಿ ನಿರ್ಮಾಣವಾಗಿರುವ ಅತೀ ಉದ್ದದ ವಾಟರ್ ಫಾಲ್ಸ್ ಬಹಳ ಹಿಡಿಸಿತು. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದರು “ಕಾಂತಾರ” ಖ್ಯಾತಿಯ ಸಪ್ತಮಿ ಗೌಡ.
ಅನಿಲ್ ಕುಮಾರ್ ಅವರ ಎಲ್ಲಾ ಉತ್ತಮ ಕೆಲಸಗಳಿಗೂ ನಮ್ಮ ಬೆಂಬಲವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ತಿಳಿಸಿದರು.
ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ, ನಿರ್ದೇಶಕ ಹರಿ ಸಂತೋಷ್, ಸತೀಶ್ ಕುಮಾರ್, ಮುಖೇಶ್ ಕುಮಾರ್ ಮುಂತಾದ ಗಣ್ಯರು “ಅವ್ಯಾನಾ” ಹಾಗೂ “ಎಂ.ಜೆ.ಪ್ರೊಡಕ್ಷನ್ ” ಗೆ ಶುಭ ಕೋರಿದರು.