ಸಿನಿಮಾ ಮೇಲಿನ ಅಪಾರ ಕನಸೊತ್ತು ಹೊಸಬರ ಚಿತ್ರತಂಡವೊಂದು ಸ್ಯಾಂಡಲ್ ವುಡ್ ಅಂಗಳಕ್ಕೆ ಮೊದಲ ಹೆಜ್ಜೆ ಇಟ್ಟಿದೆ. ಇವರ ಮೊದಲ ಕನಸು, ಪರಿಶ್ರಮ, ಪ್ರಯತ್ನಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಆ ಚಿತ್ರವೇ ‘ಥಗ್ಸ್ ಆಫ್ ರಾಮಘಡ’. ಈ ಚಿತ್ರದ ಫಸ್ಟ್ ಲುಕ್ ಭಟ್ರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇಂಟ್ರಸ್ಟಿಂಗ್ ಎನಿಸೋ ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರಕ್ಕೆ ಕಾರ್ತಿಕ್ ಮಾರಲಭಾವಿ ಆಕ್ಷನ್ ಕಟ್ ಹೇಳಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿ, ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಸಿನಿಮಾ ಮೇಲಿನ ಅಪಾರ ಪ್ಯಾಶನ್ ಬಣ್ಣದ ಲೋಕಕ್ಕೆ ಕರೆ ತಂದು ನಿಲ್ಲಿಸಿದೆ. ಆದ್ರಿಂದಲೇ ಕೆಲಸಕ್ಕೆ ಗುಡ್ ಬೈ ಹೇಳಿ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೂಲಕ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ. ಮೂಲತಃ ಯಾದಗಿರಿಯವರಾದ ಕಾರ್ತಿಕ್ ಮಾರಲಭಾವಿ ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿ ಅದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ.
ಸುರಪುರ, ವಿಜಯಪುರ, ಶಹಪುರ, ತಾಳಿಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾ ತಂಡ ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರೋ ಚಿತ್ರತಂಡ ಇನ್ಮುಂದೆ ಸಿನಿಮಾದ ಒಂದೊಂದೇ ಸ್ಯಾಂಪಲ್ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆಯಲು ತಯಾರಿ ಮಾಡಿಕೊಂಡಿದೆ.
ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂವರು ಕೂಡ ರಂಗಭೂಮಿ ಕಲಾವಿದರಾಗಿದ್ದು, ಈ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದಾರೆ. ಸೂರ್ಯ ಕಿರಣ್, ಪ್ರಭು ಹೊಸದುರ್ಗ, ವಿಶಾಲ್ ಪಾಟೀಲ್, ರವಿ ಸಾಲಿಯನ್, ರಾಘವೇಂದ್ರ, ಭೀಷ್ಮ, ಲೋಕೇಶ್ ಗೌಡ, ಟೈಗರ್ ಗಂಗ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಥಗ್ಸ್ ಆಫ್ ರಾಮಘಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್.ವೈ.ಎಸ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ