ಎದೆಯ ಪುಟದಲ್ಲೊಂದು ನಿಷ್ಕಲ್ಮಷ ಪ್ರೀತಿ: ಖಾಸಗಿ ಪ್ರೇಮದ ಭಾವುಕ ಪಯಣ…

ಚಿತ್ರ ವಿಮರ್ಶೆ- ರೇಟಿಂಗ್- 4/5


ಚಿತ್ರ :
ಖಾಸಗಿ ಪುಟಗಳು
ನಿರ್ದೇಶನ : ಸಂತೋಷ್ ಶ್ರೀಕಂಠಪ್ಪ
ನಿರ್ಮಾಣ : ಮಂಜು, ವೀಣಾ , ಮಂಜುನಾಥ್
ಸಂಗೀತ : ವಾಸುಕಿ ವೈಭವ್
ಛಾಯಾಗ್ರಾಹಕ : ವಿಶ್ವಜಿತ್ ರಾವ್
ತಾರಾಗಣ : ವಿಶ್ವ , ಲಿಯೋನಿಲ್ಲಾ ಶ್ವೇತಾ ಡಿಸೋಜಾ, ಚೇತನ್ ದುರ್ಗ ನಂದಕುಮಾರ್, ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್, ಮೋಹನ್ ಜುನೇಜ ಇತರರು.

ಸಿನಿಮಾ ಅಂದರೆ, ಕಿವಿಗೆ ಇಂಪೆನಿಸಬೇಕು, ಕಣ್ಣಿಗೂ ತಂಪೆನಿಸಬೇಕು ಇವೆರೆಡರ ಹೊರತಾಗಿ ಹೃದಯಕ್ಕೆ ನಾಟುವಂತಿರಬೇಕು. ಜೊತೆಗೆ ಮತ್ತೆ ಮತ್ತೆ ಕಾಡುವ ಹಾಗು ನೋಡುವಂತಿರಬೇಕು. ಈ ಮೇಲಿನ ಎಲ್ಲಾ ಅರ್ಹತೆಗಳಿರುವ ಅನೇಕ ಸಿನಿಮಾಗಳು ಬಂದಿವೆ. ಅಂತಹ ಗುಣಗಳಿರುವ ಸಿನಿಮಾ ಸಾಲಿಗೆ ‘ಖಾಸಗಿ ಪುಟಗಳು’ ಸಿನಿಮಾವೂ ಸೇರಿದೆ.

ಅವರಿಬ್ಬರದು ಮೊದಲ ನೋಟಕ್ಕೆ ಬಿದ್ದ ಪ್ರೀತಿ. ಆ ಪ್ರೀತಿ ಮೇಲೆ ಯಾರ ಕಣ್ಣೂ ಬೀಳಲ್ಲ. ಗೆಳೆಯರ ಸಾಥ್ ಒಂದಷ್ಟು ಮನ್ ಕೀ ಬಾತ್ ಫಲಿಸುವ ಪ್ರೀತಿಯ ತಾಕತ್ತು.
ಕರಾವಳಿಯ ಹಿನ್ನೆಲೆಯಲ್ಲಿ ಅರಳುವ ಸುಂದರ ಪ್ರೇಮ ಕಾವ್ಯ ಇಡೀ ಸಿನಿಮಾದ ಹೈಲೆಟ್. ಅವಳು ಮತ್ತು ಅವನ ನಡುವೆ ನಿಷ್ಕಲ್ಮಷ ಪ್ರೀತಿ. ಅದಮ್ಯ ನಂಬಿಕೆ, ನಿಟ್ಟಿರಲಾರದ ಗಟ್ಟಿ ಗೆಳೆತನ, ಲವಲವಿಕೆ ತುಂಬಿರುವ ಕಾಲೇಜ್ ಲೈಫು, ಅಲ್ಲಲ್ಲಿ ನೋವು, ನಲಿವು… ಇದು ಸಿನಿಮಾದೊಳಗಿನ ಹೂರಣ.

ಮುಗ್ಧ ಮನಸುಗಳ ಮೇಲಿನ ಪ್ರೀತಿ ಸುತ್ತವೇ ತಿರುಗುವ ಭೂಮಿ, ಸೂರ್ಯನ ಪ್ರೇಮಕ್ಕೆ ಜೈ ಅನ್ನದಿರಲಾರದು. ಅಷ್ಟರಮಟ್ಟಿಗೆ ನಿರ್ದೇಶಕರು ಇಲ್ಲೊಂದು‌ಪ್ರೇಮ ದೃಶ್ಯ ಕಾವ್ಯ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ನೋಡುವ ಪ್ರತಿಯೊಬ್ಬರಲ್ಲೂ ತಮ್ಮ ಕಾಲೇಜು ದಿನಗಳ ಪ್ರೀತಿ ಪ್ರೇಮದ ಛಾಯೆ ಹಾಗೊಮ್ಮೆ ಹಾದು ಹೋಗದೆ ಇರದು. ಇಲ್ಲಿ “ಖಾಸಗಿ ಪ್ರೀತಿಯ ವಿಷಯಗಳದ್ದೇ ದರ್ಬಾರು. ಅಂತಹ ಅದೆಷ್ಟೋ ಸೂಕ್ಷ್ಮ ಸಂವೇದನೆಯ ವಿಷಯಗಳು ಖಾಸಗಿ ಪುಟಗಳಲ್ಲಿ ದಾಖಲಾಗಿ, ಕಣ್ ಒದ್ದೆಯಾಗಿಸುವಂತೆ ಮಾಡುತ್ತವೆ.

ಪ್ರತಿಯೊಬ್ಬರ ಲೈಫಲ್ಲೂ ಒಂದೊಂದು ಖಾಸಗಿ ವಿಷಯ ಕಾಮನ್. ಚಿತ್ರದ ಹೀರೋ ಸೂರ್ಯನ ಫ್ಲ್ಯಾಶ್ ಬ್ಯಾಕ್ ಕಥೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ.
ಕಾಲೇಜು ಓದುವ ಸೂರ್ಯನಿಗೆ ಅದೇ ಕಾಲೇಜಿಗೆ ಓದಲು ಬರುವ ಭೂಮಿ ಇಷ್ಟವಾಗುತ್ತಾಳೆ. ಆ ಇಷ್ಟ ಪ್ರೀತಿಗೆ ತಿರುಗಿ ಇನ್ನೇನು ಗಟ್ಟಿಮೇಳಕ್ಕೆ ಸಜ್ಜಾಗುತ್ತಾರೆ. ನೋಡುಗರಿಗೆ ಅದೆಂಥಾ ಪ್ರೀತಿ ಮಾಯೆ ಅಂತೆನಿಸಿ, ಮಂದಹಾಸ ಬೀರುತ್ತಲೇ ಇಡೀ‌ ಸಿನಿಮಾ ಕಥೆಯೊಳಗೆ ತಲ್ಲೀನರಾಗುವಷ್ಟರ ಮಟ್ಟಿಗೆ ಸೂರ್ಯ, ಭೂಮಿ ಆವರಿಸಿಕೊಳ್ಳುತ್ತಾರೆ. ಅವರೊಂದಿಗೆ ಸೂರ್ಯನ ಗೆಳೆಯರ ತುಂಟಾಟ, ಕಚಗುಳಿ ಮಾತು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ಕಾಲೇಜು ಅಂದಮೇಲೆ ತರಲೆ, ರಗಳೆ ಸಹಜ. ಅದು ಇಲ್ಲೂ ಇದೆ. ಫಸ್ಟ್ ಬೆಂಚ್ ಸ್ಟೂಡೆಂಟ್ ಹಾಗು ಲಾಸ್ಟ್ ಬೆಂಚ್ ಸ್ಟೂಡೆಂಟ್ ಬಗ್ಗೆ ಗುಣಗಾನವೂ ಇದೆ.

ಇಲ್ಲಿ ಪ್ರೀತಿ ಗೀತಿ ಇತ್ಯಾದಿಯ ಜೊತೆಗೊಂದು ಭಾವನಾತ್ಮಕ ಬೆಸುಗೆ ಇದೆ. ಅದು ಏನು ಅನ್ನೋದಕ್ಕೆ ಸಿನಿಮಾ ನೋಡಲೇಬೇಕು. ಅಲ್ಲಲ್ಲಿ ನಗು ಜೊತೆ ಭಾವುಕತೆಯೂ ತುಂಬಿದೆ. ಕೆಲ ಸನ್ನಿವೇಶಗಳು ಎದೆಭಾರವಾಗಿಸುತ್ತ ಹೋಗುತ್ತೆ. ಅಲ್ಲಲ್ಲಿ ಕೆಲವು ಟ್ವಿಸ್ಟು ಟೆಸ್ಟುಗಳ ನಡುವೆ ಸಿನಿಮಾ ಕಾಡುತ್ತಲೇ ಹೋಗುತ್ತೆ. ಮೊದಲರ್ಧ ಒಂದು ರೀತಿ ಕಾಡಿದರೆ, ದ್ವಿತಿಯಾರ್ಧ ಕಾಡುವ ರೀತಿಯೇ ಬೇರೆ. ಈ ಕಾಡುವಿಕೆಯ ಅನುಭವ ನಿಮಗೂ ಆಗಬೇಕಾದರೆ ಮಿಸ್ ಮಾಡದೆ ಹೊಸಬರ ಖಾಸಗಿ ಪ್ರೀತಿಗೆ ಜೈ ಅಂದು ಬನ್ನಿ.

ಇನ್ನು, ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ಅವರಿಗೆ ಪ್ರೀತಿಯ ಬಡಿತ ಹೇಗಿರುತ್ತೆ ಅನ್ನುವುದರ ಅರಿವಿದೆ. ಅದನ್ನು ಚೆಂದವಾಗಿ ಕಟ್ಟಿ ಕೊಟ್ಟಿದ್ದಾರೆ. ಪ್ರೀತಿ ವಿಷಯದ ಜೊತೆ ಕಥೆಯ ಖಾಸಗಿ ಪುಟದಲ್ಲಿ ಅಪ್ಪ ಮಗಳ ಪ್ರೀತಿ, ಅಪ್ಪ ಮಗನ ಬಾಂಧವ್ಯ, ಗೆಳೆಯರ ಸಹಕಾರ, ಉಪನ್ಯಾಸಕರ ಪ್ರೋತ್ಸಾಹ ಒಂದಷ್ಟು ದುಗುಡ- ದುಮ್ಮಾನಗಳನ್ನು ಬ್ಯಾಲೆನ್ಸ್ ಮಾಡಿ ಚೆಂದದ ಪ್ರೀತಿಯ ‘ಪುಟ’ ವಿನ್ಯಾಸ ಮಾಡಿದ್ದಾರೆ.

ಸಿನಿಮಾದ ಮತ್ತೊಂದು ಹೈಲೆಟ್ ಅಂದರೆ, ಅದು ವಿಶ್ವಜಿತ್ ರಾವ್ ಅವರ ಕ್ಯಾಮೆರಾ ಕೈಚಳಕ. ಇಡೀ ಪ್ರೀತಿಯ ಪುಟವನ್ನು ಕರಾವಳಿಯ ನೇಸರದಲ್ಲಿ ಅದ್ಭುತ ಎನಿಸುವಂತೆ ಹಿಡಿದಿಟ್ಟಿದ್ದಾರೆ. ಪ್ರತಿ ಫ್ರೇಮ್ ಕೂಡ ಕಣ್ಣಿಗೆ ಇಷ್ಟವಾಗುವಂತೆ ತಮ್ಮ ಕ್ಯಾಮೆರಾ ಕೆಲಸ ತೋರಿಸಿದ್ದಾರೆ.

ಈ ಸಿನಿಮಾ ಇಷ್ಟವಾಗೋಕೆ ಮತ್ತೊಂದು ಕಾರಣ, ಹಿನ್ನೆಲೆ ಸಂಗೀತ ಮತ್ತು ಹಾಡು. ವಾಸುಕಿ ವೈಭವ್ ಅವರ ಸಂಗೀತದ ವೈಭವ ಇಲ್ಲೂ ಅರಳಿದೆ. ಕಥೆಗೆ ಪೂರಕವಾಗಿ ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗಿತ ಹರಿದಾಡಿದೆ.

ಇನ್ನು, ಇಡೀ ಸಿನಿಮಾವನ್ನು ನಾಯಕ ವಿಶ್ವ ಹೆಗಲ ಮೇಲೆ ಹೊತ್ತಿದ್ದಾರೆ. ನಟನೆ, ಫೈಟು ಎರಡರಲ್ಲೂ ಇಷ್ಟವಾಗುತ್ತಾರೆ. ಮುಗ್ಧ ಪ್ರೇಮಿಯಾಗಿ ಕೊನೆಯವರೆಗೂ ಕಾಡುತ್ತಾರೆ.

ನಾಯಕಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಕೂಡ ಗಮನ ಸೆಳೆಯುತ್ತಾರೆ. ಸಿನಿಮಾ ವೇಗಕ್ಕೆ ಗೆಳೆಯರಾಗಿ ಕಾಣಿಸಿಕೊಂಡಿರುವ ಚೇತನ್ ದುರ್ಗ, ಶ್ರೀಧರ್ ಗಂಗಾವತಿ, ನಂದ ಗೋಪಾಲ್ ಇಷ್ಟವಾಗುತ್ತಾರೆ.

ಒಟ್ಟಾರೆ ‘ಖಾಸಗಿ ಪುಟಗಳ’ನ್ನು ನೋಡಿ ಹೊರಬಂದವರಿಗೆ ಎದೆಯ ಪುಟದಲ್ಲಿ ಅಡಗಿ ಕೂತ ಒಂದೊಂದೆ ವಿಷಯಗಳು ಮತ್ತೆ ಮತ್ತೆ ನೆನಪಾಗದೇ ಇರದು…

Related Posts

error: Content is protected !!