ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ‘ಜೋರು’ ಎಂಬ ಹೊಸಬರ ಚಿತ್ರವೂ ಸೇರಿದೆ. ಹೌದು, ಚಿತ್ರದ ಶೀರ್ಷಿಕೆ ಹೇಳುವಂತೆ, ಹೊಸಬರು ಕೊಂಚ ‘ಜೋರು’ ಸೌಂಡು ಮಾಡೋಕೆ ಸಜ್ಜಾಗುತ್ತಿದ್ದಾರೆ.
ಚಿತ್ರಕ್ಕೆ ನಾಗಭೂಷಣ್ ಎಸ್.ಆರ್. ನಿರ್ದೇಶಕರು. ಚಿತ್ರಕ್ಕೆ ಹಾಡುಗಳ ಸಂಯೋಜನೆಗೆ ಚಾಲನೆ ಕೊಡುವ ಮೂಲಕ ಚಿತ್ರದ ಕೆಲಸಗಳನ್ನು ಶುರುವಿಟ್ಟುಕೊಂಡಿದ್ದಾರೆ.
ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಿದ್ದಾರೆ.
‘ಜೋರು’ ಇದೊಂದು ಗ್ಯಾಂಗ್ ಸ್ಟರ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾವನ್ನು ಶ್ರೀ ಮಹೇಶ್ವತಿ ಕಂಬೈನ್ಸ್ ಮೂಲಕ ಸರಸ್ವತಿ ಆರ್. ನಾಗೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಮ್ ಪ್ರಸಾದ್ ಕಾರ್ಯ ನಿರ್ವಹಿಸಲಿದ್ದಾರೆ.
ಇನ್ನು ಈ ಸಿನಿಮಾಗೆ ಧನುಷ್ ಕುಮಾರ್ ಹೀರೋ ಆಗಿ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಗಾಂಧಿನಗರದಲ್ಲಿ ಜೋರು ಸೌಂಡು ಮಾಡೋಕೆ ರೆಡಿಯಾಗಿದ್ದಾರೆ. ಇನ್ನು ಧನುಷ್ ಕುಮಾರ್ ಅವರಿಗೆ ನಾಯಕಿಯನ್ನು ಹುಡುಕಲಾಗುತ್ತಿದೆ. ಇಷ್ಟರಲ್ಲೇ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸಿನಿಮಾ ಚಿತ್ರೀಕರಣ ಬೆಂಗಳೂರು, ಉತ್ತರ ಕರ್ನಾಟಕ, ಕೋಲಾರ ಸುತ್ತ ಮುತ್ತ ನಡೆಯಲಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಅಂದಹಾಗೆ, ಜೇಮ್ಸ್ ಖ್ಯಾತಿಯ
ಚೇತನ್ ಕುಮಾರ್ ಅವರ ಸಾಹಿತ್ಯ ಚಿತ್ರಕ್ಕಿದೆ. ಜೊತೆಗೆ 4 ಭರ್ಜರಿ ಫೈಟ್ ಗಳಿವೆ.
ಚಿತ್ರಕ್ಕೆ ರಾಮ ರಾಮ ರೇ ಖ್ಯಾತಿಯ ಲವೀತ್ ಛಾಯಾಗ್ರಹಣವಿದೆ. ಎಮ್.ವಿಜಯ್ ಕುಮಾರ್ ಸಂಕಲನ ಮಾಡಿದರೆ, ಕೆಜಿಎಫ್ ಖ್ಯಾತಿಯ ಮೋಹನ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಅರ್ಜುನ್ ರಾಜ್ ಅವರ ಸ್ಟಂಟ್ಸ್ ಚಿತ್ರಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ನಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ.