ಎನ್. ಕುಮಾರ್. ಕನ್ನಡ ಚಿತ್ರರಂಗದಲ್ಲಿ ಬಹು ದೊಡ್ಡ ಹೆಸರಿದು. ಯಶಸ್ವಿ ವಿತರಕರಾಗಿ, ನಿರ್ಮಾಪಕರಾಗಿ ಈಗಾಗಲೇ ಗಟ್ಟಿನೆಲೆ ಕಂಡಿರುವ ಎನ್.ಕುಮಾರ್, ಸ್ಟಾರ್ ನಟರ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ನಿರ್ಮಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದವರು. ಸಿಂಪಲ್ ವ್ಯಕ್ತಿಯಾಗಿ, ಪಕ್ಕಾ ಸಿನಿಮಾ ಉದ್ಯಮಿಯಾಗಿ, ಒಳ್ಳೆಯ ವಾಗ್ಮಿಯೂ ಆಗಿ ಸಿನಿಮಾ ಮಂದಿಗೆ ಹತ್ತಿರವಾದವರು.
ಸದಾ ಸಿನಿಮಾ ಚಟುವಟಿಕೆಯಲ್ಲೇ ನಿರತರಾಗಿರುವ ಎಂ.ಎನ್.ಕುಮಾರ್ ಅವರು ಸಿನಿಮಾ ಬಿಟ್ಟು ಬೇರೆ ಧ್ಯಾನ ಮಾಡಿದವರಲ್ಲ. ವಿತರಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಎನ್.ಕುಮಾರ್ ಈಗ ಮತ್ತೊಂದು ಸಿನಿಮಾ ನಿರ್ಮಾಣ ಮಾಡುವ ತಯಾರಿಯಲ್ಲಿದ್ದಾರೆ.
ಹೌದು, ಸ್ಟಾರ್ ನಟರು ಸೇರಿದಂತೆ ಅನೇಕ ಹೊಸಬರನ್ನೂ ಪ್ರೀತಿಯಿಂದ ಕಾಣುವ ಕುಮಾರ್, ಪಕ್ಕಾ ಸಿನಿಮಾ ವ್ಯಾಕರಣವನ್ನು ಬಲ್ಲವರು. ಆ ಕಾರಣಕ್ಕೆ ಸಿನಿಮಾ ಬಿಜಿನೆಸ್ ಮಾಡೋದು ಹೇಗೆ ಎಂಬುದನ್ನೂ ತೋರಿಸಿ ಗೆದ್ದವರು.
ಅಂದಹಾಗೆ, ಈ ಬಾರಿ ಎನ್. ಕುಮಾರ್ ವಿಶೇಷ ಕಥಾವಸ್ತು ಹಿಡಿದು ಒಂದೊಳ್ಳೆಯಬಸಿನಿಮಾಮಾಡುವ ಉತ್ಸಾಹದಲ್ಲಿದ್ದಾರೆ. ಅವರ ಉತ್ಸಾಹಕ್ಕೆ ಕಾರಣ, ಯಶಸ್ವಿ ಮತ್ತು ಸೂಕ್ಷ್ಮ ಸಂವೇದನೆ ನಿರ್ದೇಶಕ ಬಿ.ಎಂ.ಗಿರಿರಾಜ್.
ನಿಜ, ಬಿ.ಎಂ. ಗಿರಿರಾಜ್ ಅವರೀಗ ಎನ್. ಕುಮಾರ್ ಅವರ ಬ್ಯಾನರ್ ನಲ್ಲಿ ಹೊಸ ತರಹದ ಕಥೆ ಹೆಣೆದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಅಂದಾಗಲೇ ಸಿನಿಮಾ ಅರ್ಧ ಗೆದ್ದಂತೆ ಅನ್ನೋದು ಎಲ್ಲರಿಗೂ ಗೊತ್ತು. ಅಂದಹಾಗೆ, ಗಿರಿರಾಜ್ ಅವರು ಹೇಳಿದ ಕಥೆ ಮೆಚ್ಚಿಕೊಂಡು ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣ ಮಾಡಲು ರೆಡಿಯಾಗಿರುವ ಕುಮಾರ್, ಅದೊಂದು ಹೊಸ ಬಗೆಯ ಸಿನಿಮಾ ಅಗುವುದರಿಂದ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಚಿತ್ರ ಕೊಡಬೇಕೆಂಬ ತಯಾರಿಯಲ್ಲಿದ್ದಾರೆ.
ಸದ್ಯ ಗಿರಿರಾಜ್ ಅವರ ಹೊಸ ಕಥೆಗೆ ಎಂ.ಎನ್.ಕುಮಾರ್ ನಿರ್ಮಾಪಕರು. ಇನ್ನು ಗಿರಿರಾಜ್ ಕೂಡ ಹಲವು ಸೂಕ್ಷ್ಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ ಈಗಾಗಲೇ ಗೆದ್ದಿದ್ದಾರೆ. ಈಗ ಕುಮಾರ್ ಬ್ಯಾನರ್ ನಲ್ಲಿ ಹೊಸ ರೀತಿಯ ಕಥೆ ಮಾಡಿ ಮತ್ತೊಂದು ಗೆಲುವಿಗೆ ಅಣಿಯಾಗುತ್ತಿರುವುದೇ ಈ ಹೊತ್ತಿನ ಸುದ್ದಿ.
ಅದೇನೆ ಇರಲಿ, ಕನ್ನಡ ಸಿನಿಮಾರಂಗ ಈಗಾಗಲೇ ಭಾರತೀಯ ಚಿತ್ರರಂಗದಲ್ಲೇ ಮೊದಲ ಮೆಟ್ಟಿಲ ಮೇಲೆ ನಿಂತು ಬೀಗುತ್ತಿದೆ. ಈ ನಡುವೆ ಒಳ್ಳೆಯ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗ ಗಿರಿರಾಜ್ ಹಾಗು ಕುಮಾರ್ ಕಾಂಬಿನೇಷನ್ ಸಿನಿಮಾ ಕೂಡ ರೆಡಿಯಾಗಲಿದೆ. ಚಿತ್ರದ ಹೀರೋ, ಹೀರೋಯಿನ್ ಸೇರಿದಂತೆ ಯಾರೆಲ್ಲ ಇರುತ್ತಾರೆ ಅನ್ನೋದಕ್ಕೆ ಇಷ್ಟರಲ್ಲೇ ಮಾಹಿತಿ ಸಿಗಲಿದೆ. ಅಂತೂ ಹೊಸದೊಂದು ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾ ಸೌಂಡು ಮಾಡೋಕೆ ರೆಡಿಯಾಗುತ್ತಿದೆ ಅನ್ನೋದೆ ಖುಷಿಯ ವಿಷಯ.