ಮರಿ ಟೈಗರ್ ವಿನೋದ್ ಪ್ರಭಾಕರ್ ವಿಭಿನ್ನ ಪಾತ್ರಗಳ ಮೂಲಕ, ಹೊಸತನದ ಕಥೆಗಳ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸುತ್ತಾ ಬರ್ತಿದ್ದಾರೆ. ಇದೀಗ ವಿನೋದ್ ಅಂತಹದ್ದೇ ಮತ್ತೊಂದು ಹೊಸತನದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಈ ಹಿಂದೆ ಚಿರಂಜೀವಿ ಸರ್ಜಾ ನಟನೆಯ ಖಾಕಿ ಚಿತ್ರ ಮೂಲಕ ನಿರ್ದೇಶದ ಅಖಾಡಕ್ಕಿಳಿದಿದ್ದ ನವೀನ್ ಬಿ ರೆಡ್ಡಿ ಈಗ ವಿನೋದ್ ಪ್ರಭಾಕರ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾಗೆ ಮಾದೇವ ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ಇವತ್ತು ಬೆಂಗಳೂರಿನ ಬಂಡೀಮಹಾಕಾಳಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ.
80 ದಶಕದ ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ ಮಾದೇವ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿದ್ದಾರೆ. ಮುಂದಿನ ತಿಂಗಳು ಜುಲೈ ಕೊನೆಯ ವಾರದಲ್ಲಿ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ ಎಂದು ನಿರ್ದೇಶಕ ನವೀನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಒಂದಷ್ಟು ತಾರಾಬಳಗ ಫೈನಲ್ ಆಗಿದೆ.
ಸದ್ಯದಲ್ಲಿಯೇ ನಾಯಕಿ ಹಾಗೂ ವಿಲನ್ ಪಾತ್ರಗಳ ಆಯ್ಕೆ ನಡೆಯಲಿದೆ. ನಿರ್ಮಾಪಕಿ ಗಾಯತ್ರಿ ಆರ್ ಹಳಲೆ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರದ್ದ್ಯೋತ್ತನ್ ಸಂಗೀತ ನೀಡಲಿದ್ದು, ಬಾಲಕೃಷ್ಣ ತೋಟ ಛಾಯಾಗ್ರಹಣವಿದ್ದು, ಸಹ ನಿರ್ಮಾಣದ ಜವಾಬ್ದಾರಿಯನ್ನು ಲವ್ ಗುರು ಸುಮಂತ್ ಹೊತ್ತುಕೊಂಡಿದ್ದಾರೆ.