ಸಕ್ಕರೆ ಕಾಯಿಲೆ ಕುರಿತು ಕೆಲವರಲ್ಲಿರುವ ಕಲ್ಪನೆ, ಭಯ ಇದನ್ನೆಲ್ಲ ಇಟ್ಟುಕೊಂಡು ಕಾಮಿಡಿ ಜೊತೆಗೆ ಮೆಸೇಜ್ ಹೇಳುವ ಪ್ರಯತ್ನವೇ ಶುಗರ್ಲೆಸ್. ನಿರ್ಮಾಪಕರಾಗಿದ್ದ ಶಶಿಧರ್ ಕೆ.ಎಂ. ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೇ ಈ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಪ್ರಶಂಸೆಯ ಜೊತೆಗೆ ಯಾವುದೇ ಕಡಿತ ಮತ್ತು ಮ್ಯೂಟ್ ಇಲ್ಲದೆ ಯು ಪ್ರಮಾಣ ಪತ್ರ ನೀಡಿದೆ.
ಚಿತ್ರದಲ್ಲಿ ಸಮಾಜಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ಒಂದು ಉತ್ತಮ ಸಂದೇಶವನ್ನು ಹೇಳಲಾಗಿದೆ.
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ಶಶಿಧರ್ ಕೆ.ಎಂ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾಥ್ ನೀಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಗುರು ಕಶ್ಯಪ್ ಚಿತ್ರದ ಸಂಭಾಷಣೆ ರಚಿಸಿದ್ದಾರೆ. ಚಿತ್ರದ ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸವನ್ನು ರೂಪೇಂದ್ರ ಆಚಾರ್ ಮಾಡಿದ್ದಾರೆ.
ಪೃಥ್ವಿ ಅಂಬರ್, ಪ್ರಿಯಾಂಕ ತಿಮ್ಮೇಶ್ ಪ್ರಮುಖ ಪಾತ್ರದಲ್ಲಿದ್ದು, ಉಳಿದಂತೆ ಹಿರಿಯ ನಿರ್ದೇಶಕ ಎಸ್.ನಾರಾಯಣ್, ರಘು ರಾಮನಕೊಪ್ಪ, ಧರ್ಮಣ್ಣ ಕಡೂರ್, ನವೀನ್ ಡಿ.ಪಡೀಲ್, ಗಿರೀಶ್ ಜತ್ತಿ, ಹೊನ್ನವಳ್ಳಿ ಕೃಷ್ಣ, ಮಾಲತಿ ಅಭಿನಯಿಸಿದ್ದಾರೆ. ಪ್ರಪಂಚದಾದ್ಯಂತ ಸಾಕಷ್ಟು ಮಧುಮೇಹಿಗಳಿದ್ದಾರೆ. ಸಕ್ಕರೆ ಕಾಯಿಲೆ ಮೇಲೆ ಯಾವುದೇ ಸಿನಿಮಾ ನಿರ್ಮಾಣವಾಗಿಲ್ಲ. ಶೀಘ್ರದಲ್ಲೇ ಚಿತ್ರದ ಟ್ರೇಲರ್ ಮತ್ತು ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸುವುದಾಗಿ ನಿರ್ಮಾಪಕ ಕೆ.ಎಂ.ಶಶಿಧರ್ ಹೇಳಿದ್ದಾರೆ.