ಚಿತ್ರ ವಿಮರ್ಶೆ: ಅಮೃತ ಅಪಾರ್ಟ್ಮೆಂಟ್ಸ್
ನಿರ್ದೇಶನ , ನಿರ್ಮಾಣ: ಗುರುರಾಜ ಕುಲಕರ್ಣಿ
ತಾರಾಗಣ: ತಾರಕ್, ಊರ್ವಶಿ,ಸೀತಾಕೋಟಿ,ಬಾಲಾಜಿ ಮನೋಹರ್,ಮಾನಸ ಜೋಷಿ ಇತರರು.
ವಿಜಯ್ ಭರಮಸಾಗರ
ಅವಳು ಕೊಲ್ಕತ್ತಾ ಹುಡುಗಿ. ಅವನು ಮೈಸೂರು ಹುಡುಗ. ಇಬ್ಬರಲ್ಲೂ ಅಪಾರವಾದ ಆಸೆ-ಆಕಾಂಕ್ಷೆ. ತಮ್ಮ ಕನಸು ನನಸು ಮಾಡಿಕೊಳ್ಳಲು ಹೊರಟ ಮುದ್ದಾದ ಜೋಡಿಗೆ ನೂರಾರು ವಿಘ್ನ! ಆ ಎಲ್ಲಾ ವಿಘ್ನಗಳನ್ನು ದಾಟಿ ಹೊರಬರುತ್ತಾರೋ, ಇಲ್ಲವೋ ಅನ್ನೋದು ಒನ್ ಲೈನ್ ಸ್ಟೋರಿ.
ಮೊದಲೇ ಸ್ಪಷ್ಟಪಡಿಸುತ್ತೇವೆ. ಎಲ್ಲರಂತೆ ನಾವೂ ಚೆಂದದ ಬದುಕು ಕಟ್ಟಿಕೊಳ್ಳಬೇಕೆಂದು ಹಪಹಪಿಸುವ ಯುವ ಮನಸ್ಸುಗಳ ತಲ್ಲಣ, ತಳಮಳ, ಆತಂಕ, ಬದುಕಿನ ಧಾವಂತಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ಗುರುರಾಜ ಕುಲಕರ್ಣಿ ಯಶಸ್ವಿಯಾಗಿದ್ದಾರೆ.
ಇದು ನಿರ್ದೇಶಕರ ಚೊಚ್ಚಲ ಪ್ರಯತ್ನ. ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿರುವ ಅವರ ನಿರೂಪಣೆ ಶೈಲಿ ಚೆನ್ನಾಗಿದೆ. ಒಂದು ಕಥೆಯನ್ನು ಹೇಗೆ ಹೇಳಬೇಕು, ಹೇಗೆಲ್ಲಾ ತೋರಿಸಬೇಕು ಎಂಬುದನ್ನು ಅರಿತಿದ್ದಾರೆ. ಹಾಗಾಗಿ ಅಮೃತ ಅಪಾರ್ಟ್ಸ್ಮೆಂಟ್ಸ್ ರುಚಿಸುತ್ತದೆ.
ಸಿನಿಮಾದಲ್ಲಿ ನಿರ್ದೇಶಕರು ಬದುಕಿನ ಏರಿಳಿತಗಳು,
ಭಾವನೆಗಳು ಮತ್ತು ಭಾವನಾತ್ಮಕ ಸಂಬಂಧಗಳು,
ಆಸೆ ಮತ್ತು ದುರಾಸೆ, ಏಳು ಬೀಳು, ನೋವು-ನಲಿವುಗಳನ್ನು ಹೇಳುವ ಮೂಲಕ ‘ಅಮೃತ’ದ ನಿಜ ಚಿತ್ರಣವನ್ನು ಉಣಬಡಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಅಪಾರ್ಟ್ಮೆಂಟ್ಸ್ ಲ್ಲಿ, ದ್ವಿತಿಯಾರ್ಧ ಗಂಭೀರತೆಗೆ ಸಾಕ್ಷಿಯಾಗುತ್ತೆ. ಒಂದು ಸರಳ ಕಥೆಗೆ, ಇನ್ನಷ್ಟು ಬಿಗಿಯಾದ ಚಿತ್ರಕಥೆಯ ಅಗತ್ಯವಿತ್ತು. ಎಲ್ಲೋ ಒಂದು ಕಡೆ, ‘ಅಮೃತ’ದ ಕೆಲ ಅನಗತ್ಯ ದೃಶ್ಯಗಳ ಬಗ್ಗೆ ಮಾತಾಡಬೇಕೆನಿಸುತ್ತಿದ್ದಂತೆ, ಹಾಡುಗಳು ಕಾಣಿಸಿಕೊಂಡು ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ಸಿನಿಮಾ ಸಲೀಸಾಗಿ ಸಾಗಲು ಸಂಕಲನದ ಪಾತ್ರವಿಲ್ಲಿ ಪ್ರಮುಖವಾಗಿದೆ.
ಇದು ಕಥೆ…
ಸೂಕ್ಷ್ಮ ಸಂವೇದನೆಯ ಅಂಶಗಳ ಜೊತೆ ಸಾಗುವ ಸಿನಿಮಾದಲ್ಲಿ, ಅನೇಕ ಟ್ವಿಸ್ಟ್ ಗಳಿವೆ. ಪ್ರೀತಿಸಿ ಮದುವೆಯಾಗುವ ಜೋಡಿಯೊಂದು, ಕನಸಿನ ಅಮೃತ್ ಅಪಾರ್ಟಮೆಂಟ್ಸ್’ನಲ್ಲಿ ಬದುಕು ರೂಪಿಸಿಕೊಳ್ಳಲು ರೆಡಿಯಾಗುತ್ತಾರೆ. ಪ್ರೀತಿಸಿ ಜೊತೆಯಾದ ಆ ಜೋಡಿ ಮಧ್ಯೆ ಸಣ್ಣದ್ದೊಂದು ಬಿರುಕು ಮೂಡುತ್ತೆ. ಆ ಅಪಾರ್ಟ್ಮೆಂಟ್ ಒಳಗೆ ನೂರೆಂಟು ಕಥೆಗಳು ಬಿಚ್ಚಿಕೊಳ್ಳುತ್ತವೆ. ಆ ಘಟನೆಗಳನ್ನು ಹೇಳುವುದಕ್ಕಿಂತ ನೀವೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.
ಅಮೃತ್ ಅಪಾರ್ಟಮೆಂಟ್ಸ್ ನೋಡುಗರನ್ನು ಹಾಗೊಮ್ಮೆ ಮುದಗೊಳಿಸುತ್ತೆ. ಒಮ್ಮೊಮ್ಮೆ ಗಂಭೀರತೆಗೂ ದೂಡುತ್ತೆ.
ಮುಖ್ಯವಾಗಿ ಈ ಚಿತ್ರದಲ್ಲಿ ಗಮನಿಸಬೇಕಾದ ಅಂಶವೆಂದರೆ, ಬೆಂಗಳೂರೆಂ ಕಾಂಕ್ರೀಟ್ ನಾಡಲ್ಲಿ ಎತ್ತ ನೋಡಿದರತ್ತ ಮುಗಿಲೆತ್ತರಕ್ಕೆ ತಲೆ ಎತ್ತಿ ನಿಂತ ಬೃಹತ್ ಅಪಾರ್ಟಮೆಂಟ್ಸ್ ಗಳು, ಅಲ್ಲೆಲ್ಲೋ ನಮ್ಮದೂ ಒಂದಿರಲಿ ಅಂತ ಸೂರು ಕಾಣಬೇಕು ಅನ್ನೋ ಮನಸ್ಸುಗಳು, ಅತಿಯಾದ ಆಸೆ, ಆಕಾಂಕ್ಷೆ, ಇವುಗಳ ಜೊತೆ ನೂರಾರು ಸವಾಲುಗಳು, ಅದಕ್ಕೆೆ ಎದುರಾಗುವ ಸವಾಲುಗಳು, ಆಸೆಗಾಗಿಯೇ ಮೌಲ್ಯ ಕಳೆದುಕೊಳ್ಳುವ ಸಂಬಂಧಗಳು ನಾಟುತ್ತವೆ. ಒಟ್ಟಾರೆ ವಸ್ತುಸ್ಥಿತಿಯನ್ನು ಅಚ್ಚುಕಟ್ಟಾಗಿ ಹೇಳು ಪ್ರಯತ್ನ ಇಲ್ಲಾಗಿದೆ.
ನಗರವಾಸಿಗಳ ಒತ್ತಡ, ಅವರೊಳಗಿರುವ ನೋವು, ತಲ್ಲಣಗಳನ್ನು ನಿರ್ದೇಶಕರು ತೋರಿಸುವ ಮೂಲಕ ಈಗಿನ ವಾಸ್ತವ ಚಿತ್ರಣ ಕಟ್ಟಿಕೊಟ್ಟಿದ್ದಾರೆ.
ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ. ನಿರ್ದೇಶಕರು, ನವಿರಾದ ಪ್ರೀತಿಯ ಹೂರಣದ ಜೊತೆ, ಭಾವುಕ ಅಂಶಗಳನ್ನಿಟ್ಟಿದ್ದಾರೆ. ಅಲ್ಲೊಂದು ಕ್ರೈಮ್ ಮತ್ತು ಥ್ರಿಲ್ ಎನಿಸೋ ಘಟನೆಗಳನ್ನೂ ಇಟ್ಟಿದ್ದಾರೆ. ಈ ಬಗ್ಗೆ ನೋಡುವ ಕುತೂಹಲವಿದ್ದರೆ, ಬಿಡುವು ಮಾಡಿಕೊಂಡು ಸಿನಿಮಾ ನೋಡಿ.
ಇನ್ನು ತೆರೆ ಮೇಲೆ ರಾರಾಜಿಸಿರುವ ತಾರಕ್ ಅಭಿನಯದಲ್ಲಿ ಹಿಂದೆ ಉಳಿದಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಊರ್ವಶಿ ನಿರ್ದೇಶಕರು ಹೇಳಿದ್ದನ್ನು ಚಾಚು ತಪ್ಪದೆ ಮಾಡಿದ್ದಾರೆ. ಬಾಲಾಜಿ ಮನೋರ್ರ್, ಮಾನಸಿ ಜೋಷಿ, ಸಂಪತ್ ಕುಮಾರ, ಮಹಂತೇಶ್, ಸೀತಾಕೋಟಿ ಇತರರು ಗಮನಸೆಳೆಯುತ್ತಾರೆ.
ಎಸ್.ಡಿ.ಅರವಿಂದ ಅವರ ಸಂಗೀತ ಕಥೆಗೆ ಪೂರಕ.
‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಹಾಡು ಗುನುಗುವಂತಿದೆ. ಅಜಿತ್ ಆರ್ಯನ್ ಕ್ಯಾಮರಾ ಕೈಚಳಕ ಸಿನಿಮಾ ಅಂದವನ್ನು ಹೆಚ್ಚಿಸಿದೆ.