ಸಖತ್… ಚಿನ್ನದ ಹುಡ್ಗ ಗಣೇಶ್ ಹಾಗೂ ಸಿಂಪಲ್ ಸುನಿ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ ಸಖತ್.
ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ಸಂಸ್ಥೆ ಸಖತ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಈಗಾಗಲೇ ಪ್ರಮೋಷನ್ ಕಹಳೆ ಬಾರಿಸಿರುವ ಸಖತ್ ಸಿನಿಮಾ ಇದೇ ತಿಂಗಳ 26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ.
ಕೆಲ ದಿನಗಳ ಹಿಂದಷ್ಟೇ ರ್ಯಾಂಪ್ ಸಾಂಗ್ ವೊಂದನ್ನು ರಿಲೀಸ್ ಮಾಡಿ ನಿರೀಕ್ಷೆ ಹುಟ್ಟಿಸಿದ್ದ ಸಖತ್ ಸಿನಿಮಾ ಅಂಗಳದಿಂದ ಇದೇ 22ಕ್ಕೆ ಮತ್ತೊಂದು ಹಾಡು ರಿಲೀಸ್ ಆಗಲಿದೆ. ಅರ್ಜುನ್ ಲೂಯಿಸ್ ಸಾಹಿತ್ಯ ಬರೆದು, ಸಿದ್ದಿ ಶ್ರೀರಾಮ್ ಕಂಠದಲ್ಲಿ “ಶುರುವಾಗಿದೆ” ಅನ್ನೋ ಬೊಂಬಾಟ್ ಸಾಂಗ್ ರಿವೀಲ್ ಆಗ್ತಿದೆ.
ಚಮಕ್ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಚಮಕ್ ಕೊಟ್ಟಿದ್ದ ಗಣಿ-ಸುನಿ ಈ ಬಾರಿ ಸಖತ್ ಸಿನಿಮಾ ಮೂಲಕ ಕಾಮಿಡಿ ಹೂರಣ ಬಡಿಸಲು ಸಕಲ ರೀತಿಯಿಂದ ತಯಾರಿಯಾಗಿದ್ದು, ಗಣಿ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ, ನಿಶ್ವಿಕಾ ನಾಯ್ಡು ಹಾಗೂ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ.
ಟಿ.ವಿ. ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಕೆವಿಎನ್ ಪ್ರೊಡಕ್ಷನ್ನಡಿ ತಯಾರಾಗಿರುವ ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ.
ಈಗಾಗ್ಲೇ ಸೆನ್ಸಾರ್ ನಿಂದ U/A ಸರ್ಟಿಫಿಕೆಟ್ ಪಡೆದು, ಪಾಸ್ ಆಗಿರುವ ಸಖತ್ ಸಿನಿಮಾ ಇದೇ 26 ಕ್ಕೆ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.