ಸುದೀಪ್ ನಟನೆಯ ಕೋಟಿಗೊಬ್ಬ3 ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಸಂಭ್ರಮವಿದೆ. ಚಿತ್ರತಂಡ ಕೂಡ ಖುಷಿ ಹಂಚಿಕೊಂಡಿದೆ.
ಅಂದು ಸಂಭ್ರಮ ಜೊತೆ ಕಲಾವಿದ, ತಂತ್ರಜ್ಞರ ಗೆಲುವಿನ ಮಾತುಗಳೇ ಹರಿದುಬಂದವು. ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ನಟ ಉಪೇಂದ್ರ ಕೂಡ ಈ ಕಾರ್ಯಕ್ರದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದು ಹೈಲೆಟ್. ಈ ವೇಳೆ ನಿರ್ಮಾಪಕ ಸೂರಪ್ಪಬಾಬು ಭಾವುಕರಾದರು. ಈ ವೇಳೆ ಮಾತಿಗಿಳಿದ ಅವರು, ನಾನು ಈವರೆಗೆ ನಿರ್ಮಿಸಿದ ಯಾವುದೇ ಚಿತ್ರದ ಡೇಟ್ ಅನೌನ್ಸ್ ಮಾಡಿದ ಮೇಲೆ ಮುಂದೆ ಹಾಕಿದ್ದಿಲ್ಲ, ಇದೇ ಮೊದಲ ಬಾರಿಗೆ ನನ್ನ ಸಿನಿಮಾ ತಡೆಯುವ ಪ್ರಯತ್ನ ನಡೆಯಿತು, ಈ ಸಂದರ್ಭದಲ್ಲಿ ಕಾಲ್ ಮಾಡಿದ ಸುದೀಪ್, ನಾನಿದ್ದೀನಿ, ಏನೇ ಇದ್ದರೂ ನಾನು ನೋಡಿಕೊಳ್ತೇನೆ, ಧೈರ್ಯವಾಗಿರಿ ಎಂದು ಧೈರ್ಯ ತುಂಬಿದರು. ಇಷ್ಟು ವರ್ಷ ನಾನು ಉಳಿಸಿಕೊಂಡು ಬಂದಿದ್ದ ಗೌರವಕ್ಕೆ ಧಕ್ಕೆಯಾಯಿತು. ನನ್ನ ಮಗಳೂ ಸಹ ಕಾಲ್ಮಾಡಿ ಧೈರ್ಯ ತುಂಬಿದ್ದರಿಂದ ನಾನಿಲ್ಲಿ ನಿಂತಿದ್ದೇನೆ, ಜಾಕ್ಮಂಜು, ಸೈಯದ್ ಸಲಾಂ, ಗಂಗಾಧರ್ ಇವರೆಲ್ಲ ನನಗೆ ಹೆಗಲಾಗಿ ನಿಂತಿದ್ದರಿಂದ ಸಿನಿಮಾ ಬಿಡುಗಡೆಯಾಯಿತು. ಸುದೀಪ್ ಜೊತೆ ನಾನೇನೇ ಜಗಳ ಆಡಿದ್ದರೂ ಅದು ಸಿನಿಮಾಗಾಗಿ ಮಾತ್ರ, ಅವರು ಮುಂದೆ ನನಗೆ ಕಾಲ್ಶೀಟ್ ಕೊಡುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ, ನನ್ನ ಜೀವ ಇರೋವರ್ಗೂ ಅವರಿಗೆ ಕೃತಜ್ಞನಾಗಿರುತ್ತೇನೆ. ಈ ಕಾರ್ಯಕ್ರಮವನ್ನು ಶ್ರೇಯಸ್ ಮೀಡಿಯಾ ಪರವಾಗಿ ಮಿತ್ರ ನವರಸನ್ ಆಯೋಜಿಸಿದ್ದಾರೆ, ಅವರಿಂದ ಕನ್ನಡ ಚಿತ್ರಗಳ ಪ್ರೊಮೋಷನ್ಗೆ ತುಂಬಾ ಹೆಲ್ಪ್ ಆಗುತ್ತಿದೆ, ಎಲ್ಲರೂ ಅವರನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಮಾತಿಗಿಳಿದ ಸುದೀಪ್, ಕೊನೇ ಗಳಿಗೆಯಲ್ಲಿ ಬಾಬು ಅವರಿಗೆ ಕರೆಮಾಡಿ ನಾನಿದ್ದೀನಿ ಅಂತ ಹೇಳಬೇಕಾದರೆ ಅದಕ್ಕೆ ಕಾರಣ ನಾನಲ್ಲ, ನಾನಿಷ್ಟು ವರ್ಷ ಸಂಪಾದಿಸಿದ್ದ ಸ್ನೇಹಿತರ ಬಳಗ, ಅವರಿಗೆ ನಾನಿಲ್ಲಿ ಥ್ಯಾಂಕ್ಸ್ ಹೇಳುತ್ತೇನೆ. ಸಿನಿಮಾ ಒಂದು ಪೇಂಟಿಂಗ್, ಅದು ಇಷ್ಟು ಚೆನ್ನಾಗಿ ಬರಬೇಕಾದರೆ ಶಿವಕಾರ್ತೀಕ್, ಗೆಳೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕಲಾವಿದರಾದ ರವಿಶಂಕರ್, ಮಡೊನ್ನ, ಆಶಿಕಾ ಅಲ್ಲದೆ ಇನ್ನೂ ಅನೇಕರು ಈ ಸಕ್ಸಸ್ನಲ್ಲಿ ಪಾಲುದಾರರು ಎಂದ ಅವರು, ಪೈರಸಿ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ರೂ ಕೆಲವರು ಅದನ್ನು ಮಾಡಿದರು. ಎಲ್ಲಕಡೆ ಕೆಟ್ಟ ಜನ ಇದ್ದೇ ಇರುತ್ತಾರೆ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ.
ನಮ್ಮತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್ಗಳನ್ನು ಡಿಲೀಟ್ ಮಾಡಿಸಿದೆ. ಈ ಹಂತದಲ್ಲಿ ಗಿರೀಶ್ ಅವರ ಶ್ರಮವನ್ನು ಮೆಚ್ಚಲೇಬೇಕು, ಜನರಿಗೂ ಅಷ್ಟೇ, ಈಗಾಗಲೇ ಎರಡು ವರ್ಷದಿಂದ ಮೊಬೈಲ್, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರೂ ಅದರಿಂದ ಹೊರಬಂದು ಚಿತ್ರಮಂದಿರದಲ್ಲಿ ಸಿನಿಮಾನೋಡಿ. ಮೊಬೈಲಿನಲ್ಲಿ ನೋಡುವುದಕ್ಕೂ, ಥಿಯೇಟರಿನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೇ ನೀವೇ ಕಂಡುಕೊಳ್ಳಿ. ಅಲ್ಲದೆ ಕಲೆಕ್ಷನ್ ಅನ್ನೋದು ನನಗೆ ಮಾನದಂಡ ಆಗಿಲ್ಲ. ನಿರ್ಮಾಪಕರು ಖುಷಿಯಾಗಿದ್ದಾರೆ, ವಿತರಕರು ಖುಷಿಯಾಗಿದ್ದಾರೆ. ನನಗೆ ಅಷ್ಟು ಸಾಕು. ನಿರ್ಮಾಪಕರು ಕಲೆಕ್ಷನ್ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಅನುಮೋದಿಸಬಹುದು ಎಂದು ಸುದೀಪ್ ಹೇಳಿದರು.
ಉಪೇಂದ್ರ ಮಾತನಾಡಿ, ಸುದೀಪ್ ಹೆಸರಿನಲ್ಲೆ ಕಿಚ್ಚು ಇದೆ, ಅವರು ತಮ್ಮ ಜೊತೆ ಕೆಲಸ ಮಾಡೋರಿಗೆಲ್ಲ ಕಿಚ್ಚು ಹಚ್ಚಿಬಿಡ್ತಾರೆ ಎಂದರು. ನಾಯಕಿ ಮಡೋನ್ನ, ಅಭಿರಾಮಿ. ಬೇಬಿ ಆದ್ಯ, ರವಿಶಂಕರ್ಗೌಡ ಸೇರಿದಂತೆ ಚಿತ್ರತಂಡದ ಸದಸ್ಯರು ಇದ್ದರು.