ಎಲ್ಲಾ ಕ್ಷೇತ್ರಕ್ಕೂ ಹೀಗೇನಾ ಅಥವಾ ಸಿನಿಮಾ ರಂಗಕ್ಕೆ ಮಾತ್ರ ಹೀಗೇನಾ…?
– ಹೀಗಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುವಂತಾಗಿದೆ. ಹೌದು, ಇದಕ್ಕೆ ಕಾರಣ, ಕೊರೊನಾ ಭಯ. ಕೊರೊನಾ ಹಾವಳಿಯಿಂದ ಚಿತ್ರರಂಗಕ್ಕೇ ದೊಡ್ಡ ಹೊಡೆತ ಬಿದ್ದಿರುವುದಂತೂ ನಿಜ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಂಡಿದೆ. ಇನ್ನೇನು ಚಿತ್ರಮಂದಿರಗಳಲ್ಲಿ ಮತ್ತೆ ಅಬ್ಬರಿಸಬೇಕು ಎಂಬ ಉತ್ಸಾಹದಲ್ಲಿರುವಾಗಲೇ, ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿದ್ದೂ ಗೊತ್ತೇ ಇತ್ತು. ಲಾಕ್ಡೌನ್ ಬಳಿಕ ಸರ್ಕಾರ ಅನುಮತಿ ಕೊಟ್ಟಿದ್ದೇನೋ ನಿಜ. ಆದರೆ, ಚಿತ್ರಮಂದಿರಗಳು ಬಾಗಿಲು ತೆರೆದರೂ, ಅದೇಕೋ ಏನೋ, ಸ್ಟಾರ್ ಸಿನಿಮಾಗಳು ಬಿಡುಗಡೆ ಮಾಡುವ ಆಸಕ್ತಿ ತೋರಲೇ ಇಲ್ಲ. ಬಿಡುಗಡೆಯಾದ ಸಿನಿಮಾಗಳೇ ಮರು ಬಿಡುಗಡೆಯಾಗುತ್ತಿವೆಯಾದರೂ, ಜನರು ಚಿತ್ರಮಂದಿರ ಒಳ ಬರುತ್ತಿಲ್ಲ. ಇದಕ್ಕೆ ಕಾರಣ ಮತ್ತದೇ ಕೊರೊನಾ ಭಯ!
ಹೌದು, ಕೊರೊನಾ ಭಯ ಒಂದು ಕಡೆಯಾದರೆ, ಸರ್ಕಾರ ಈಗ ಶೇ.೫೦ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳು ಕೂಡ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಸಿನಿಮಾಗಳು ಕೂಡ ತೆರೆಗೆ ಅಪ್ಪಳಿಸಲು ಮನಸ್ಸು ಮಾಡುತ್ತಿಲ್ಲ. ಸರ್ಕಾರ ಒಂದು ವೇಳೆ ಶೇ.100 ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಸ್ಟಾರ್ ನಟರ ಒಂದೊಂದೇ ಸಿನಿಮಾಗಳು ತೆರೆಮೇಲೆ ಮೂಡುತ್ತವೆ. ಆಗ ಜನ ಕೂಡ ಉತ್ಸಾಹದಲ್ಲೇ ಚಿತ್ರಮಂದಿರದತ್ತ ಮುಖ ಮಾಡುತ್ತಾರೆ ಎಂಬ ದೊಡ್ಡ ಆಸೆ ಚಿತ್ರರಂಗಕ್ಕಿದೆ. ಆದಾಗ್ಯೂ ಸರ್ಕಾರ ಈಗ ಶೇ.೧೦೦ರಷ್ಟು ಭರ್ತಿಗೆ ಅವಕಾಶ ಕೊಟ್ಟಿಲ್ಲ. ಕೊಡುತ್ತದೆ ಎಂಬ ಆಶಾಭಾವದಲ್ಲೇ ಸಿನಿಮಾ ಮಂದಿ ಇದ್ದಾರೆ. ಹಾಗೇನಾದರೂ, ಶೇ.೧೦೦ ರಷ್ಟು ಅನುಮತಿ ಸಿಕ್ಕರೆ, ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. ಅದಕ್ಕಾಗಿಯೇ ಈಗ ಎದುರು ನೋಡುತ್ತಿದ್ದಾರೆ.
ಬಿಡುಗಡೆ ಮಾತು ದೂರ…
ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಶೇ.50ರಷ್ಟು ಕೊಟ್ಟರೂ, ಚಿತ್ರಮಂದಿರದತ್ತ ಯಾವೊಬ್ಬ ಸ್ಟಾರ್ ಸಿನಿಮಾನೂ ತಿರುಗಿ ನೋಡಿಲ್ಲ. ಹಾಗೊಂದು ವೇಳೆ ಶೇ.100ರಷ್ಟು ಅನುಮತಿ ಕೊಟ್ಟರೂ. ಬಿಡುಗಡೆಗೆ ಸಾಧ್ಯವಾ? ಈ ಪ್ರಶ್ನೆ ಈಗ ಎದ್ದಿದೆ. ಕಾರಣ, ಸರ್ಕಾರ ಈಗ ಹೊಸದೊಂದು ನಿಯಮ ಜಾರಿ ಮಾಡಿದೆ. ಗಡಿ ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕದಲ್ಲೂ ಎಚ್ಚರಿಕೆ ಕ್ರಮ ಜರುಗಿಸಿದೆ. ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ಡೌನ್ ಮತ್ತು ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಇದರಿಂದಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ರಾತ್ರಿ ಪ್ರದರ್ಶನಗಳು ರದ್ದಾಗಿವೆ. ಇದರೊಂದಿಗೆ ವೀಕೆಂಡ್ ಪ್ರದರ್ಶನಗಳೂ ರದ್ದಾಗಿವೆ. ಹೀಗಾಗಿ ಚಿತ್ರರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದಂತೂ ದಿಟ.
ಹೇಗೋ ಶೇ.50ರಷ್ಟು ಭರ್ತಿಗೆ ಆದೇಶ ಕೊಟ್ಟಿತ್ತು. ಇರುವ ಆಸನಗಳು ತುಂಬುವುದೇ ಕಷ್ಟ ಇದ್ದ ಸಂದರ್ಭದಲ್ಲಿ ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದರಿಂದ ಇದ್ದ ಸಣ್ಣ ಆಸೆಗೂ ಕಲ್ಲು ಬಿದ್ದಂತಾಗಿದೆ. ನಿರ್ಮಾಪಕರು ಹೇಗೋ ಬಂದಷ್ಟು ಬರಲಿ ಅಂತ ತಮ್ಮ ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿದ್ದರು. ಪೂರ್ಣ ಪ್ರದರ್ಶನಕ್ಕೆ ಅವಕಾಶ ಸಿಗುತ್ತೆ ಅನ್ನುವಾಗಲೇ ಈಗ ಸಮಸ್ಯೆ ಎದುರಾಗಿದೆ. ಮತ್ತೆ ಕೊರೊನಾ ತೀವ್ರತೆಯಾಗಿ, ಲಾಕ್ಡೌನ್ ಆಗಿಬಿಟ್ಟರೆ, ಸಿನಿಮಾರಂಗದ ಕಥೆ ಏನು? ಎಂಬ ಆತಂಕ ಕೂಡ ಸಿನಿಮಾ ಮಂದಿಯಲ್ಲಿ ಶುರುವಾಗಿದೆ. ಇಡೀ ಚಿತ್ರರಂಗ ಈಗ ಶೇ.100ರಷ್ಟು ಅವಕಾಶವನ್ನೇ ಎದುರು ನೋಡುತ್ತಿದೆ. ಇಂತಹ ಸಂದರ್ಭದಲ್ಲೇ ಕೊರೊನಾ ಮತ್ತೆ ಆವರಿಸಿಕೊಳ್ಳುವ ಸೂಚನೆ ನೀಡುತ್ತಿದೆ. ಹೀಗೇ ಮುಂದುವರೆದರೆ, ಚಿತ್ರರಂಗದ ಮೇಲೆ ಕರಿನೆರಳು ಗ್ಯಾರಂಟಿ.
ಸರ್ಕಾರ ಶೇ.100ರಷ್ಟು ಅನುಮತಿ ಕೊಟ್ಟ ಬಳಿಕ ಸ್ಟಾರ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದವು. ಆದರೆ, ಈಗ ಎಲ್ಲಾ ಸಿನಿಮಾಗಳೂ ಗೊಂದಲದಲ್ಲಿವೆ. ದುನಿಯಾ ವಿಜಯ್ ಅಭಿನಯದ ಸಲಗ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಹೇಳಿತ್ತು. ಅಂದೇ ನಿನ್ನ ಸನಿಹಕೆ ಸಿನಿಮಾ ಕೂಡ ಬರುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿ, ಗಡಿ ಭಾಗದಲ್ಲಿ ವೀಕೆಂಡ್ ಲಾಕ್ಡೌನ್ ಮಾಡಿರುವುದರಿಂದ ಅದಕ್ಕೂ ಕಲ್ಲು ಬಿದ್ದಂತಾಗಿದೆ. ಅಲ್ಲಿಗೆ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಕೂಡ ಹಿಂದಕ್ಕೆ ಹೋಗಿದೆ. ಅದೇನೆ ಇರಲಿ, ಚಿತ್ರರಂಗಕ್ಕೆ ಮಾತ್ರ ಕಳೆದ ಎರಡು ವರ್ಷಗಳಿಂದ ದೊಡ್ಡ ನಷ್ಟವೇ ಆಗಿದೆ. ಈ ವರ್ಷ ಕೂಡ ಅದೇ ಆತಂಕದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತದೇ ಗತವೈಭವ ನೋಡಲು ಸಿನಿಮಾ ಮಂದಿ ಉತ್ಸುಕರಾಗಿದ್ದಾರೆ. ಅಂತಹ ದಿನಗಳು ಬರಲಿ ಎಂಬುದೇ ಸಿನಿಲಹರಿ ಆಶಯ.