ಅದಿತಿ ರೈತೋಭವ! ಹಳ್ಳಿ ಸುಂದರಿಯ ಕೃಷಿ ಕೆಲಸ!! ಹೊಲ ಬಿತ್ತಿದರು, ಸಗಣಿ ಬಾಚಿದರು, ಹಾಲು ಕರೆದರು, ರೊಟ್ಟಿ ತಟ್ಟಿದರು…

ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನೂರು, ತನ್ನ ಜನರನ್ನ ಒಂದಲ್ಲ ಒಂದು ದಿನ ನೆನಪಿಸಿಕೊಳ್ಳೋದು ಸಹಜ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್‌ ನಟ, ನಟಿಯರು ಕೂಡ ತಮ್ಮ ಊರು, ಅಲ್ಲಿನ ಪರಿಸರ, ತಾವು ಬಾಲ್ಯದಲ್ಲಿ ಓಡಾಡಿಕೊಂಡ ಬೀದಿ, ಜೊತೆಯಾಗಿದ್ದ ಗೆಳೆಯರು, ಪ್ರೀತಿ ತೋರಿದ ಜನರ ಬಗ್ಗೆ ಹೇಳಿಕೊಂಡಿದ್ದಾರೆ. ಈಗಲೂ ಹಲವರು ಬಿಡುವು ಸಿಕ್ಕಾಗೆಲ್ಲ, ತನ್ನೂರಿಗೆ ತೆರಳಿ ಒಂದಷ್ಟು ಸಮಯ ಕಳೆದು ಬರುತ್ತಾರೆ. ಆ ಸಾಲಿಗೆ ಈಗ ನಟಿ ಅದಿತಿ ಪ್ರಭುದೇವ ಕೂಡ ತನ್ನ ಹಳ್ಳಿ ಕಡೆ ಒಂದು ಸುತ್ತು ಹೋಗಿ ಬಂದಿದ್ದಾರೆ. ಹಾಗಂತ, ಹಳ್ಳಿಗೆ ಸುಮ್ಮನೆ ವಿಸಿಟ್‌ ಹಾಕಿಬಂದಿಲ್ಲ. ಅವರು, ಹಳ್ಳಿಯಲ್ಲಿರೋ ತಮ್ಮ ಹೊಲಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಕೃಷಿ ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ಎಷ್ಟೇ ಆಗಲಿ, ಹಳ್ಳಿ ಹುಡುಗಿ ಅಲ್ಲವೇ?


ಅದಿತಿ ಪ್ರಭುದೇವ ಅವರು ಇತ್ತೀಚೆಗೆ ದಾವಣಗೆರೆ ಸಮೀಪದ ತಮ್ಮ ಹಳ್ಳಿಗೆ ಹೋಗಿ ಒಂದಷ್ಟು ಸಮಯ ಕಳೆದುಬಂದಿದ್ದಾರೆ. ಅವರ ಊರಲ್ಲಿರುವ ಹೊಲದಲ್ಲಿ ಓಡಾಡಿ, ಒಂದಷ್ಟು ಕೃಷಿ ಚಟುವಟಕೆಯಲ್ಲಿ ತೊಡಗಿ ಖುಷಿಗೊಂಡಿದ್ದಾರೆ. ಸದ್ಯ ಅದಿತಿ ಪ್ರಭುದೇವ ಅವರು ಅವರದೇ ಆದ ಯುಟ್ಯೂಬ್‌ ಚಾನೆಲ್‌ನಲ್ಲಿ ಭೂಮಿ ಉಳುಮೆ ಮಾಡಿ, ಮನೆಗೆಲಸ ಮಾಡುತ್ತಿರುವ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಅವರ ಕೃಷಿ ಪ್ರೀತಿ ಹಾಗು ಹಳ್ಳಿಯಲ್ಲಿ ಸಮಯ ಕಳೆದ ಬಗ್ಗೆ ಅವರ ಫ್ಯಾನ್ಸ್‌ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ, ಅದಿತಿ ಪ್ರಭುದೇವ ಅವರು ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಹೇಗೋ, ಆರಂಭದ ದಿನಗಳಲ್ಲಿ ವೇದಿಕೆ ಮೇಲೇರಿ ನಿರೂಪಣೆ ಮಾಡುತ್ತಿದ್ದ ಅದಿತಿ ಅವರಿಗೆ ಕಿರುತೆರೆ ಪ್ರವೇಶಿಸುವ ಅವಕಾಶ ಸಿಕ್ತು. ಅಲ್ಲಿಂದ ಬೆಳ್ಳಿತೆರೆಗೂ ಜಂಪ್‌ ಮಾಡಿದ ಅವರು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿ ನೆಲೆ ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ, ಈಗಲೂ ಕೈ ತುಂಬಾ ಸಿನಿಮಾಗಳಿರುವ ಅದಿತಿ ಸದ್ಯದ ಮಟ್ಟಿಗೆ ಬ್ಯುಝಿ.


ಅದಿತಿ ಪ್ರಭುದೇವ ಅವರು, ಬೇಡಿಕೆ ನಟಿಯಾಗಿದ್ದರೂ, ಅವರ ಸರಳತೆ ಎಲ್ಲರಿಗೂ ಇಷ್ಟವಾಗುತ್ತೆ. ಯಾರೇ ಮಾತಾಡಿಸಿದರೂ, ಆ ಕ್ಷಣಕ್ಕೆ ಸ್ಪಂದಿಸುವ ಗುಣ ಅವರದು. ಹಳ್ಳಿ ಬದುಕಿನ ಬಗ್ಗೆ ಅಪಾರವಾಗಿ ತಿಳಿದಿರುವ ಅವರು, ರೈತರ ಶ್ರಮದ ಬಗ್ಗೆಯೂ ಅರಿತಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಹಳ್ಳಿಗೆ ಹೋಗಿ ಬರುವ ಅದಿತಿ, ಈ ಬಾರಿ, ಅವರ ಹೊಲದಲ್ಲಿ ತಾವೇ ಕೆಲಸ ಮಾಡಿದ್ದಾರೆ. ಹೊಲ ಬಿತ್ತುವ ಸಂದರ್ಭದಲ್ಲಿ ಅದಿತಿ ಕೂಡ ಟ್ರಾಕ್ಟರ್ ಏರಿ ಬಿತ್ತನೆಗೆ ಮುಂದಾಗಿದ್ದಾರೆ. ಎತ್ತುಗಳನ್ನು ಓಡಿಸುವ ಮೂಲಕ ಹೊಲವನ್ನು ಉಳುಮೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.


ಇದರೊಂದಿಗೆ ಅದಿತಿ ಅವರು, ಹೊಲದ ಮನೆಯಲ್ಲಿ ಸಾಕಿರುವ ಹಸುಗಳ ಸಗಣಿ ಬಾಚಿದ್ದಾರೆ. ನಂತರ ಹಾಲು ಕರೆದು ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಹೊಲದ ಮನೆಯಲ್ಲೇ ಕಟ್ಟಿಗೆ ಒಲೆ ಮುಂದೆ ಕೂತು ರೊಟ್ಟಿ ತಟ್ಟಿದ್ದಾರೆ. ಅದೇನೆ ಇರಲಿ, ಕೃಷಿ ಕುಟುಂಬದ ಹುಡುಗಿಯಾಗಿ, ರೈತ ಮಾಡುವ ಕೆಲಸವನ್ನು ಪ್ರೀತಿಸಿ, ತಾನೂ ಒಂದಷ್ಟು ಸಮಯ ಹೊಲದಲ್ಲಿ ಕಳೆದು ಖುಷಿಯಾಗಿರುವ ಅದಿತಿ ಅವರ ಕೆಲಸಕ್ಕೆ ಎಲ್ಲಡೆಯಿಂದ ಮೆಚ್ಚುಗೆ ಸಿಗುತ್ತಿದೆ.

Related Posts

error: Content is protected !!