ಈಗಂತೂ ಓಟಿಟಿಗಳದ್ದೇ ಹವಾ. ಕನ್ನಡ ಸಿನಿಮಾಗಳಿಗೆ ಅದೊಂದು ರೀತಿ ನಿಟ್ಟುಸಿರಿನ ತಾಣ. ಹೌದು, ಕೆಲವು ಒಳ್ಳೆಯ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಇನ್ನೂ ಕೆಲವು ಸಿನಿಮಾಗಳು ನೇರವಾಗಿಯೇ ಓಟಿಟಿ ಫ್ಲಾಟ್ಫಾರಂನಲ್ಲಿ ಯಶಸ್ವಿಯಾಗಿವೆ. ಈಗ “ರಿವೈಂಡ್” ಕೂಡ ಸೇರಿದೆ.
ಹೌದು, ತೇಜ್ ನಿರ್ಮಿಸಿ, ನಿರ್ದೇಶನ ಮಾಡಿ ನಾಯಕರಾಗಿ ಅಭಿನಯಿಸಿದ್ದ, “ರಿವೈಂಡ್” ಚಿತ್ರ ಲಾಕ್ ಡೌನ್ ಗೂ ಕೆಲವೇ ದಿನಗಳ ಮುಂಚೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಲಾಕ್ ಡೌನ್ ಜಾರಿಯಾದ ಕಾರಣ ಚಿತ್ರಮಂದಿರಗಳನ್ನು ಮುಚ್ಚಲಾಯಿತು. ಇದರಿಂದ ಸಾಕಷ್ಟು ತೊಂದರೆಯಾಯಿತು.
ಇದಾದ ಕೆಲವು ದಿನಗಳಲ್ಲಿ ಬುಕ್ ಮೈ ಶೋ ಓಟಿಟಿ ಫ್ಲಾಟ್ ಫಾರಂ ತೆರೆದು ಅದರಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು ಗೊತ್ತೇ ಇದೆ.
ಅಲ್ಲಿ ಇಂತಿಷ್ಟು ಟಿಕೇಟ್ ದರ ನಿಗದಿ ಪಡಿಸಿದ್ದಾರೆ. ಅದರಂತೆಯೇ ಈಗ ಬುಕ್ ಮೈ ಶೋನಲ್ಲಿ “ರಿವೈಂಡ್” ಚಿತ್ರ ಬಿಡುಗಡೆಯಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುವರ್ಣ ವಾಹಿನಿಗೆ ಚಿತ್ರದ ಹಕ್ಕು ಮಾರಾಟವಾಯಿತು. ಈಗ ಚಿತ್ರ ಬಿಡುಗಡೆ ಮಾಡಲು ನೆಟ್ ಫ್ಲಿಕ್ಸ್ ನಿಂದ ಆಫರ್ ಬಂದಿದೆ ಎಂಬುದು ತೇಜ ಅವರ ಮಾತು.
ಸೌದಿ ಹಾಗೂ ಅರಬ್ ರಾಷ್ಟಗಳಲ್ಲೂ “ರಿವೈಂಡ್” ರಿಲೀಸ್ ಆಗಲಿದೆ. ಈ ರೀತಿಯ ಬಿಡುಗಡೆ ವಿಷಯ ತಿಳಿದ ಸಾಕಷ್ಟು ಕನ್ನಡ ನಿರ್ಮಾಪಕರು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ರಿವೈಂಡ್ ಚಿತ್ರದ ಯಶಸ್ಸನ್ನು ಹಂಚಿಕೊಳಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ “ಗಣಿ ಬಿ ಕಾಂ”, ” ಗಜಾನನ ಗ್ಯಾಂಗ್ ” ಚಿತ್ರಗಳ ನಿರ್ಮಾಪಕ ಕುಮಾರ್ ಸೇರಿದಂತೆ,
“ಶಾರ್ದೂಲ” ಚಿತ್ರ ನಿರ್ಮಾಪಕ ರೋಹಿತ್, ಸಂಕಲನಕಾರ – ನಿರ್ದೇಶಕ ನಾಗೇಂದ್ರ ಅರಸ್, ನಿರ್ದೇಶಕ ಪ್ರವೀಣ್ ನಾಯಕ್, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ,ರಿವೈಂಡ್ ಚಿತ್ರವನ್ನು ದುಬೈನಲ್ಲಿ ಬಿಡುಗಡೆ ಮಾಡುತ್ತಿರುವ ಡಾ.ರಾಜನ್ ಅವರು ಹಾಜರಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡರು. ತೇಜ್, ಚಂದನ, ಧರ್ಮ, ಸಂದೀಪ್ ಮಲಾನಿ “ರಿವೈಂಡ್” ಚಿತ್ರದ ಕುರಿತು ಹೇಳಿಕೊಂಡರು.