ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸಮಸ್ಯೆ ಒಂದಲ್ಲ ಎರಡಲ್ಲ! ಕಳೆದ ವರ್ಷದಿಂದಲೂ ನೂರೆಂಟು ಕಗ್ಗಂಟಲ್ಲೇ ಸಂಘವಿದೆ. ಚುನಾವಣೆ ಇರದಿದ್ದರೂ ಇಲ್ಲಿ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದಾರೆ. ಪದಾಧಿಕಾರಿಗಳ ಒಪ್ಪಿಗೆ ಇರದಿದ್ದರೂ ಅನೇಕ ಕಾರ್ಯಚಟುವಟಿಕೆಗಳು ನಡೆಯುತ್ತಲೇ ಇವೆ. ಆರೋಪ ಪ್ರತ್ಯಾರೋಪ ನಿತ್ತವಾಗಿದೆ. ಈಗ ನಾನೇ ಅಧ್ಯಕ್ಷ ಅಂತ ಹೇಳುತ್ತಿರುವ ಟೇಶಿ ವೆಂಕಟೇಶ್ ವಿರುದ್ಧ ಸಂಘದ ಕೆಲ ಪದಾಧಿಕಾರಿಗಳು, ನಿರ್ಮಾಪಕರು ಆಕ್ರೋಶಗೊಂಡಿದ್ದಾರೆ. ಟೇಶಿ ವೆಂಕಟೇಶ ಇತ್ತೀಚೆಗೆ ಹೇಳಿದ ಮಾತುಗಳೆಲ್ಲವೂ ಸುಳ್ಳು ಎಂದು ದಾಖಲೆ ಸಮೇತ ಮಾಧ್ಯಮ ಮುಂದೆ ಸಾಬೀತುಪಡಿಸಿದ್ದಾರೆ.
ಹೌದು, ಟೇಶಿ ವೆಂಕಟೇಶ್ ಅವರು ಕನ್ನಡ ನಿರ್ದೇಶಕರ ಸಂಘವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೆಲ ನಿರ್ದೇಶಕರು ಮತ್ತು ನಿರ್ಮಾಪಕರು ಆರೋಪ ಮಾಡಿದ್ದಾರೆ.
ರೇಣುಕಾಂಬ ಥಿಯೇಟರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನಾಗೇಂದ್ರ ಅರಸ್, ಮಳವಳ್ಳಿ ಸಾಯಿಕೃಷ್ಣ, ನಿರ್ಮಾಪಕರಾದ ಕುಮಾರ್, ಜೆ.ಜೆ. ಶ್ರೀನಿವಾಸ್, ನಾಗೇಶ್ ಕುಮಾರ್ ಯು.ಎಸ್ ಮುಂತಾದವರು ಟೇಶಿ ವೆಂಕಟೇಶ ವಿರುದ್ಧ ಕಿಡಿಕಾರಿದರು.
ಸಂಘದ ಪದಾಧಿಕಾರಿ ಹಾಗು ನಿರ್ದೇಶಕ ನಾಗೇಂದ್ರ ಅರಸ್ ಮಾತನಾಡಿ, ‘ಸರಕಾರ ಆಹಾರ ಕೂಪನ್, ಸಹಾಯಧನದ ಬಗ್ಗೆ ಟೇಶಿ ವೆಂಕಟೇಶ್ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅದೆಲ್ಲವೂ ಸುಳ್ಳು. ನಿರ್ದೇಶಕರಿಗೆ ಸರಕಾರದ ಆಹಾರ ಕೂಪನ್ ನೀಡಲಾಗಿದೆ. ಸಂಘದಲ್ಲಿ ಇರದವರನ್ನೂ ಗುರುತಿಸಿ ಮಾನವೀಯ ದೃಷ್ಟಿಯಿಂದ ಸಹಾಉ ಕಲ್ಪಿಸಲಾಗಿದೆ. ಅಲ್ಲದೇ ನಿರ್ದೇಶಕಿ ರೂಪಾ ಅಯ್ಯರ್ ಅವರು ವೈಯಕ್ತಿಕ ಖರ್ಚು ಮಾಡಿಕೊಂಡು ಕಾರ್ಡ್ ಕೊಡಿಸಿದ್ದಾರೆ.
ನಿರ್ದೇಶಕ ನಾಗೇಂದ್ರ ಅರಸ್
ಸರಕಾರದ ಸಹಾಯ ಪಡೆದು ವ್ಯಾಕ್ಸಿನ್ ಕೊಡಿಸಿದ್ದಾರೆ. ಈಗಲೂ ಸಂಘದ ಉಪಾಧ್ಯಕ್ಷರಾಗಿ ಅವರು ಸಂಘದ ಸದಸ್ಯರಿಗೆ ಹಲವು ಯೋಜನೆಗಳು ತಲುಪುವಂತೆ ಮಾಡಿದ್ದಾರೆ. ಆದರೆ, ಟೇಶಿ ವೆಂಕಟೇಶ ವಿನಾಕಾರಣ ಆರೋಪಿಸುತ್ತಿದ್ದಾರೆ. ನೈತಿಕತೆಯ ಬಗ್ಗೆ ಮಾತಾಡುವ ಅವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಳವಳ್ಳಿ ಸಾಯಿಕೃಷ್ಣ
ಜನರಲ್ ಬಾಡಿ ಮೀಟಿಂಗ್ ಮಾಡದೇ ಸಂಘಕ್ಕೆ ಹೊಸ ಅಧ್ಯಕ್ಷರ ಘೋಷಣೆ ಮಾಡಲಾಯಿತು. ಈ ಹಿಂದೆ ಅಧ್ಯಕ್ಷರಾಗಿದ್ದ ನಾಗೇಂದ್ರ ಪ್ರಸಾದ್ ಮತ್ತು ಈಗಿನ ಅಧ್ಯಕ್ಷರು ಎಂದು ಹೇಳಿಕೊಳ್ಳುವ ಟೇಶಿ ವೆಂಕಟೇಶ್ ಅವರ ಅವಧಿಯ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದೇ ಇರುವ ಕಾರಣವೇ ಸಾಕಷ್ಟು ಗೊಂದಲಗಳಿಗೆ ಕಾರವಾಗಿದೆ ಎಂದು ಮಳವಳ್ಳಿ ಸಾಯಿಕೃಷ್ಣ ಈ ವೇಳೆ ಆರೋಪಿಸಿದರು.
ನಿರ್ಮಾಪಕ ಕುಮಾರ್
ಎರಡು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಸಂಘದಲ್ಲಿ ಕೇವಲ ಎಂಬತ್ತು ಜನರ ಮೀಟಿಂಗ್ ಮೂಲಕ ಹೊಸ ಪದಾಧಿಕಾರಿಗಳ ಘೋಷಣೆ ಹೇಗೆ ಸಾಧ್ಯ? ಇದನ್ನು ಒಪ್ಪಲಾರದ್ದು. ಚುನಾವಣೆ ಆಗದೇ ಹೇಗೆ ಅಧ್ಯಕ್ಷರ ಆಯ್ಕೆ ಆಯಿತು ಎಂದು ಸಾಯಿಕೃಷ್ಣ ಪ್ರಶ್ನೆ ಮಾಡಿದರು.
ಬೆಂಗಳೂರು ಚಿತ್ರೋತ್ಸವದಲ್ಲಿ ಸಂಘದ ಹೆಸರಿನಲ್ಲಿ ನಿರ್ದೇಶಕರ ಫಿಲ್ಮಿ ಬಜಾರ್ ಮಾಡಿ, ಅದರಿಂದ ಬಂದ ಹಣದ ಲೆಕ್ಕವನ್ನು ಇನ್ನೂ ಕೊಡದೇ ಇರುವುದಕ್ಕೆ ನಿರ್ಮಾಪಕ ಜೆ.ಜೆ. ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿದರು.
ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್
ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್ ಮಾತನಾಡಿ, ಪ್ರಸ್ತುತ ನಿರ್ಮಾಪಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಿರ್ದೇಶಕರ ಸಂಘದಲ್ಲಿ ಇಷ್ಟೊಂದು ಗೊಂದಲವಿದ್ದರೆ ಯಾವ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡಲು ಮುಂದೆ ಬರುತ್ತಾರೆ? ಕನ್ನಡದಲ್ಲಿ ವಾರ್ಷಿಕ ಇನ್ನೂರು ಸಿನಿಮಾಗಳು ತಯಾರಾಗುತ್ತಿವೆ. ಕನ್ನಡಕ್ಕೊಂದಿ ಓಟಿಟಿ ಬೇಕಿದೆ. ನಾವೆಲ್ಲ ಮುಂದೆ ನಿಲ್ತೀವಿ ಸಾಥ್ ಕೊಡಿ ಅಂದರೂ ದೊಡ್ಡವರು ಮೌನ ವಹಿಸಿದ್ದಾರೆ. ನಿಜವಾಗಿಯೂ ನಿರ್ದೇಶಕರ ಸಂಘದ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ತುಂಬಾ ತೊಂದರೆ ಆಗುತ್ತದೆ. ಈಗಾದರೂ ಈ ಸಮಸ್ಯೆ ಬಗೆಹರಿದು ಸಂಘಕ್ಕೊಬ್ಬ ಒಳ್ಳೆಯ ಸಾರಥಿ ಬರಲಿ. ಪುಟ್ಟಣ್ಣ ಕಣಗಾಲ್ ಅಂತಹ ನಿರ್ದೇಶಕರು ಕಟ್ಟಿದ ಸಂಘ ಹೀಗಾಗಾದಿರಲಿ ಎಂದರು ನಾಗೇಶ್ ಕುಮಾರ್.
ಸದ್ಯ ಆರೋಪ, ಪ್ರತ್ಯಾರೋಪಗಳಲ್ಲಿರುವ ಸಂಘಕ್ಕೆ ಮುಕ್ತಿ ಯಾವಾಗ ಎಂಬುದೇ ಎಲ್ಲರ ಮುಂದಿರುವ ಪ್ರಶ್ನೆ.