‘ಕಬ್ಜ’ದಲ್ಲಿ ಸುದೀಪ್‌ – ಉಪೇಂದ್ರ ಮುಖಾಮುಖಿ; ಕುತೂಹಲ ಕೆರಳಿಸಿದ ಸ್ಪೆಷಲ್‌ ಪೋಸ್ಟರ್‌ – ಐದು ಭಾಷೆಗಳಲ್ಲಿ ಪೋಸ್ಟರ್‌ ರಿಲೀಸ್‌

ಚಿತ್ರದಲ್ಲಿನ ಉಪೇಂದ್ರ ಲುಕ್‌ ನೋಡಿದರೆ ಇದು ಕ್ರೈಮ್‌ ಥ್ರಿಲ್ಲರ್‌ ಪೊಲಿಟಿಕಲ್‌ ಡ್ರಾಮಾ ಎನಿಸುವಂತಿದೆ. ಅದೇ ಕಾರಣಕ್ಕೆ ಈ ಚಿತ್ರಕ್ಕೆ ಭಾರೀ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದೆ. ಚಿತ್ರದ ಬಗ್ಗೆ ತಿಳಿದುಕೊಂಡಿರುವ ಸಾಕಷ್ಟು ದೊಡ್ಡ ಸಂಸ್ಥೆಗಳು ಕಬ್ಜ ಚಿತ್ರದ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ.

ಕೊರೊನಾ ಅಲೆಯ ಅಬ್ಬರ ಕಮ್ಮಿ ಆಗಿದೆ. ಇದರ ಬೆನ್ನಲೇ ಕನ್ನಡ ಚಿತ್ರರಂಗದಲ್ಲೀಗ ಆರ್.‌ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ʼ ಕಬ್ಜ ʼ ಅಬ್ಬರ ಕೂಡ ಜೋರಾಗಿಯೇ ಶುರುವಾಗಿದೆ. ಹೌದು, ಸಿನಿಮಾ ಚಟುವಟಿಕೆಗಳು ಶುರುವಾಗುವ ಸೂಚನೆಗಳ ಬೆನ್ನಲ್ಲೇ, ಉಪೇಂದ್ರ ಅಭಿನಯದ ʼ ಕಬ್ಜʼ ಚಿತ್ರದ ಸ್ಪೆಷಲ್‌ ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ ಆರ್. ಚಂದ್ರು. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಇದು ಬಿಡುಗಡೆ ಆಗಿದೆ.

ನಟ ಸುದೀಪ್‌ ಹಾಗೂ ಉಪೇಂದ್ರ ಜೋಡಿಯ ಈ ಪೋಸ್ಟರ್‌ ಹಾಲಿವುಡ್‌ ಶೈಲಿಯಲ್ಲಿ ಹೊರ ಬಂದಿದೆ. ಅಷ್ಟೇ ಅಲ್ಲ, ʼಕಬ್ಜ ʼ ಬಹು ಬಜೆಟ್‌ ನ ಪ್ಯಾನ್‌ ಇಂಡಿಯಾ ಸಿನಿಮಾ. ಅದಕ್ಕೆ ತಕ್ಕಂತೆಯೇ ಪೋಸ್ಟರ್‌ ಅನ್ನು ಗ್ರಾಂಡ್‌ ಆಗಿಯೇ ಲಾಂಚ್‌ ಮಾಡಿದೆ ಚಿತ್ರ ತಂಡ. ಸದ್ಯಕ್ಕೆ ಈ ಚಿತ್ರದ ರಿಲೀಸ್‌ ಬಗ್ಗೆ ಯಾವುದೇ ಮಾಹಿತಿ ಹೊರ ಬಂದಿಲ್ಲ. ಆದರೆ, ಸಿನಿಮಾವನ್ನು ಅದ್ದೂರಿಯಾಗಿಯೇ ಅಂದರೆ, ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅತ್ಯಧಿಕ ಸಂಖ್ಯೆ ಚಿತ್ರ ಮಂದಿರಗಳಲ್ಲಿ ತೆರೆ ತರುವ ಇರಾದೆ ನಿರ್ದೇಶಕ ಕಮ್ ನಿರ್ಮಾಪಕ ಚಂದ್ರು ಅವರಿಗಿದೆ. ‌


ಕೆ.ಜಿ.ಎಫ್. ಚಿತ್ರ ಈ ಹಿಂದೆ ಭಾರತೀಯ ಚಿತ್ರ ರಂಗದಲ್ಲಿ ಹೇಗೆ ದೊಡ್ಡ ಹವಾ ಸೃಷ್ಟಿಸಿತೋ ಅದೇ ಮಾದರಿಯಲ್ಲಿ ʼಕಬ್ಜʼ ಕೂಡ ದೊಡ್ಡ ಹವಾ ಎಬ್ಬಿಸಬೇಕೆನ್ನುವ ಬಹುದೊಡ್ಡ ನಿರೀಕ್ಷೆಯಲ್ಲಿ ಆರ್.‌ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಹಾಗೂ ಹೈದ್ರಬಾದ್‌ ನಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.

ಇನ್ನು ಚಿತ್ರದ ತಾರಾಬಳಗ ಕೂಡ ದೊಡ್ಡದಾಗಿಯೇ ಇದೆ. ಮುಕುಂದ ಮುರಾರಿ ಚಿತ್ರದ ನಂತರ ನಟ ಉಪೇಂದ್ರ ಹಾಗೂ ಸುದೀಪ್‌ ಕಾಂಬಿನೇಷನ್‌ ಇಲ್ಲಿ ಒಂದಾಗಿದೆ. ಸದ್ಯಕ್ಕೆ ಸುದೀಪ್ ಅಪಿಯರೆನ್ಸ್‌ ಹೇಗೆ ಅನ್ನೋದು ನಿಗೂಢವಾಗಿದೆ. ಉಪೇಂದ್ರ ಚಿತ್ರದ ಹೀರೋ. ಸುದೀಪ್‌ ಅತಿಥಿ ಪಾತ್ರ ಮಾಡಿದ್ದಾರೆಂಬ ಸುದ್ದಿ ಇದೆ. ಉಳಿದಂತೆ, ಕಾಮರಾಜನ್ (ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದಲ್ಲಿದ್ದಾರೆ.

ಸಚಿವ ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ಅವರೇ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್ ಸಾಹಸ ನಿರ್ದೇಶನವಿದೆ.

ನಿರ್ದೇಶಕ ಹಾಗೂ ನಿರ್ಮಾಪಕ ಆರ್.‌ ಚಂದ್ರು ಹೇಳುವ ಪ್ರಕಾರ ಇದೊಂದು ಸಸ್ಪೆನ್ಸ್‌ , ಥ್ರಿಲ್ಲರ್‌ ಜತೆಗೆ ನೈಜ ಘಟನೆಯ ಕಥಾ ಹಂದರದ ಚಿತ್ರ. ಪ್ರೀತಿ, ಪ್ರೇಮ ಎನ್ನುವುದಕ್ಕಿಂತ ಯೂನಿವರ್ಷಲ್‌ ಎನಿಸುವ ಥ್ರಿಲ್ಲಿಂಗ್‌ ಕಥೆ ಇಲ್ಲಿದೆಯಂತೆ. ಚಿತ್ರದಲ್ಲಿನ ಉಪೇಂದ್ರ ಲುಕ್‌ ನೋಡಿದರೆ ಇದು ಕ್ರೈಮ್‌ ಥ್ರಿಲ್ಲರ್‌ ಪೊಲಿಟಿಕಲ್‌ ಡ್ರಾಮಾ ಎನಿಸುವಂತಿದೆ. ಅದೇ ಕಾರಣಕ್ಕೆ ಈ ಚಿತ್ರಕ್ಕೆ ಭಾರೀ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದೆ. ಚಿತ್ರದ ಬಗ್ಗೆ ತಿಳಿದುಕೊಂಡಿರುವ ಸಾಕಷ್ಟು ದೊಡ್ಡ ಸಂಸ್ಥೆಗಳು ಕಬ್ಜ ಚಿತ್ರದ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ.

Related Posts

error: Content is protected !!