ಹೆಸರಾಂತ ನಟ ಸಂಚಾರಿ ವಿಜಯ್ ಬದುಕಿನ ಸುತ್ತ ಇಷ್ಟೆಲ್ಲಾ ಕಥೆಗಳಿವೆಯಾ ? ಚಿತ್ರರಂಗ ಸೇರಿದಂತೆ ಅವರ ಆತ್ಮೀಯರು, ಬಂಧುಗಳು ಹಾಗೂ ಸ್ನೇಹಿತರಿಗೆ ಹೀಗೊಂದು ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಕಾರಣ ಅವರ ನಿಧನದ ನಂತರ ಕೆಲವು ವ್ಯಕ್ತಿಗಳು, ಕೆಲವು ಟಿವಿಗಳು, ಹಾಗೂ ಅನೇಕ ಯುಟ್ಯೂಬ್ ಚಾನೆಲ್ ಗಳಲ್ಲಿ ವಿಜಯ್ ಅವರ ಬದುಕಿನ ಕುರಿತು ಬಂದು ಹೋದ, ಜತೆಗೆ ಈಗಲೂ ಬರುತ್ತಿರುವ ಪುಂಖಾನು ಪುಂಖ ಸುದ್ದಿಗಳು. ವಿಚಿತ್ರ ಅಂದ್ರೆ, ತಮಗೇ ಗೊತ್ತಿಲ್ಲದ ಈ ವಿಚಾರಗಳು ಇವರಿಗೆಲ್ಲ ಗೊತ್ತಾಗಿದ್ದಾರೂ ಹೇಗೆ ಅನ್ನೋ ಗೊಂದಲವೂ ಅವರಲ್ಲಿದೆ. ಅಷ್ಟೇ ಅಲ್ಲ, ನಟ ವಿಜಯ್ ಅವರ ಕುರಿತು ಬಗೆ ಬಗೆಯ ಸುದ್ದಿ ಹರಿಬಿಡುತ್ತಿರುವ ಯೂಟ್ಯೂಬ್ ಚಾನೆಲ್ ನವರು, ಕೆಲವು ಟಿವಿಯವರು, ಮುಂತಾದ ಜನರು, ವಿಜಯ್ ಅವರ ನಿಧನದ ನಂತರವೇನಾದರೂ ಸಂಶೋಧನೆ ನಡೆಸಿಬಿಟ್ಟರಾ ಎನ್ನುವ ಕುತೂಹಲವೂ ಇದೆ. ಯಾಕಂದ್ರೆ ಈಗ ವಿಜಯ್ ಅವರ ಬದುಕಿನ ದಿನಕ್ಕೊಂದು ಸುದ್ದಿ, ದಿನಕ್ಕೊಂದು ಕಥೆ !
ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಮಾನವತವಾದಿ ಸಂಚಾರಿ ವಿಜಯ್ ಈಗಿಲ್ಲ. ನಟನಾಗಿ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಮೆರಗು ತಂದುಕೊಡಬೇಕಿದ್ದ ನಟ ಅವರು. ದುರಾದೃಷ್ಟ ಅಂದ್ರೆ, ದೊಡ್ಡ ವರ್ಚಸ್ಸು ಪಡೆಯಬೇಕಿದ್ದ ದಿನಗಳಲ್ಲಿಯೇ ಆಕಾಲಿಕವಾಗಿ ನಿಧನರಾಗಿ, ತಿರುಗಿ ಬಾರದ ಲೋಕಕ್ಕೆ ಸಂಚಾರ ಹೋಗಿ ಆಗಿದೆ. ಅವರಿಲ್ಲದೆ, ಹೆಚ್ಚು ಕಡಿಮೆ ಹತ್ತನ್ನೆರೆಡು ದಿನ ಕಳೆದೇ ಹೋದವು. ಅವರಿಲ್ಲ ಎನ್ನುವುದನ್ನು ನಿಜಕ್ಕೂ ನಂಬುವುದಕ್ಕೆ ಆಗುತ್ತಿಲ್ಲ. ಕುಟುಂಬದವರು, ಬಂಧುಗಳು ಹಾಗೂ ಆತ್ಮೀಯರಿಗೆ ಅವರಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರೆಲ್ಲ ಆ ನೋವಿನಿಂದ ಈಗಲೂ ಹೊರಬಂದಿಲ್ಲ. ಹಾಗೆಯೇ ಚಿತ್ರರಂಗಕ್ಕೂ ಅವರಿಲ್ಲ ಅನ್ನೋದು ಅಪಾರ ನಷ್ಟವೇ ಆಗಿದೆ. ಆದರೆ, ಅವರಿಲ್ಲ ಅನ್ನೋದು ಟಿವಿ ಚಾನೆಲ್ ಗಳಿಗೆ, ಸಣ್ಣ ಪುಟ್ಟ ಯುಟ್ಯೂಬ್ ಚಾನೆಲ್ ಗಳಿಗೆ ದೊಡ್ಡ ಆಹಾರವೇ ಆಗಿ ಹೋಗಿರುವುದು ದುರಾದೃಷ್ಟ.
ಹಾಗಂತ, ವಿಜಯ್ ಇಲ್ಲದ ದಿನಗಳಲ್ಲಿ ಇವರೆಲ್ಲ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸುವಂತೆ ಸುದ್ದಿ ಬಿತ್ತರಿಸುತ್ತಿದ್ದಾರಾ? ಇಲ್ಲವೇ ಅವರ ಸಿನಿಮಾ, ಅವರ ನಟನೆಯ ಬಣ್ಣನೆಯ ಮಾತುಗಳನ್ನು ಹೇಳುತ್ತಿದ್ದಾರಾ? ಅಸಲಿಗೆ ಅಂತಹ ಯಾವುದೇ ಸುದ್ದಿಗಳು ಇವು ಅಲ್ಲ. ಬದಲಿಗೆ ಇವೆಲ್ಲವೂ ಉಹಾ ಪೋಹದ ಕಟ್ಟು ಕಥೆಗಳು. ಸಂಚಾರಿ ವಿಜಯ್ ಇದ್ದಾಗ ಇಂತಹ ಸುದ್ದಿಗಳು ಬಂದಿದ್ದರೆ ಮೂಲಾಜಿಲ್ಲದೆ ಕ್ಯಾಕರಿಸಿ ಉಗಿಯುತ್ತಿದ್ದರೆನ್ನವುದು ಗ್ಯಾರಂಟಿ. ಅಷ್ಟಾಗಿಯೂ ಮಾತು ಕೇಳದಿದ್ದರೆ ಕೋರ್ಟ್ ಮೆಟ್ಟಿಲು ತುಳಿದು ಇವರಿಗೆಲ್ಲ ಬುದ್ಧಿ ಕಲಿಸುತ್ತಿದ್ದರು. ಆದರೆ ವಿಜಯ್ ಅವರನ್ನು ತಮ್ಮ ವಾರಾಸುದಾರರು ಎನ್ನುವ ಯಾವುದೇ ವ್ಯಕ್ತಿಯೂ ಈ ಬಗ್ಗೆ ಚೆಕಾರ ಎತ್ತಿಲ್ಲ! ಅದನ್ನೇ ಬಂಡವಾಳ ಮಾಡಿಕೊಂಡಿರುವ ಐಡೆಂಟಿಟಿ ಇಲ್ಲದೆ ಕೆಲವು ಯುಟ್ಯೂಬ್ ಚಾನೆಲ್ ಗಳು ವಿಜಯ್ ಅವರ ವ್ಯಕ್ತಿತ್ವವನ್ನೇ ಹರಣ ಮಾಡುವ ಊಹಾಪೋಹದ ಸುದ್ದಿಗಳನ್ನು ಬಿತ್ತರಿಸುವುತ್ತಿರುವುದು ಮಾತ್ರ ದುರಂತವೇ ಸರಿ.
ಮೊದಲೇ ಹೇಳಿದಂತೆ ಐಡೆಂಟಿಟಿ ಇಲ್ಲದ ಈ ಯುಟ್ಯೂಬ್ ಚಾನೆಲ್ ಗಳ ಸುದ್ದಿ ಟೇಸ್ಟ್ ಹೇಗಿದೆ ಅಂದ್ರೆ, ಒಬ್ಬ ವ್ಯಕ್ತಿಯ ಬಗ್ಗೆ ವಾಸ್ತವವನ್ನು ಹೇಳುವುದು ಅವರ ಆದ್ಯತೆ ಅಲ್ಲ. ಬದಲಿಗೆ ಅವರ ಹೊಟ್ಟೆ ತುಂಬಬೇಕು ಅಷ್ಟೇ. ಅಂದ್ರೆ ಕೆಲವು ಟಿವಿಗಳಿಗೆ ಟಿಆರ್ ಪಿ ಹೆಚ್ಚಾಗಬೇಕು, ಇನ್ನು ಯೂಟ್ಯೂಬ್ ಚಾನೆಲ್ ನವರಿಗೆ ಲೈಕ್ಸು, ವೀವ್ಸು, ಕಾಮೆಂಟ್ಸು ಜಾಸ್ತಿ ಆಗಬೇಕು. ಅವರ ಸುದ್ದಿ ಬಿತ್ತರಿಸುವ ಟೇಸ್ಟ್ ಹೇಗಿದೆ ಅಂದ್ರೆ, ನಟ ಸಂಚಾರಿ ವಿಜಯ್ ಇಷ್ಟು ದಿನ ಮದುವೆ ಆಗದಿರಲು ಕಾರಣ ಏನು ಗೊತ್ತಾ ? ನಟ ಸಂಚಾರಿ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ? ನಟ ಸಂಚಾರಿ ವಿಜಯ್ ಅಪಘಾತದಲ್ಲಿ ಸಾಯುವುದಕ್ಕೂ ಮುನ್ನ ಯಾರಿಗೆ ಕಾಲ್ ಮಾಡಿದ್ರು ಗೊತ್ತಾ ? ಸಂಚಾರಿ ವಿಜಯ್ ಇತ್ತೀಚೆಗೆ ಒಂದು ವಿಷಯಕ್ಕಾಗಿ ತೀರಾ ಬೇಸತ್ತಿದ್ದರು ಯಾಕೆ ಗೊತ್ತಾ ? ನಟ ಸಂಚಾರಿ ವಿಜಯ್ ಮದುವೆ ಆಗಬೇಕಿದ್ದ ಹುಡುಗಿ ಇವರೇನಾ ? ಇದು ಈ ಯುಟ್ಯೂಬ್ ಚಾನೆಲ್ ನವರ ಲೈಕ್ಸು, ಕಾಮೆಂಟ್ಸು ಪಡೆಯವ ಚಟ. ಇನ್ನು ಇವೆಲ್ಲವನ್ನು ರಂಜಿಸುವ ಕೆಲವು ಜನರ ವಿಕೃತ ಮನಸ್ಥಿತಿಗೆ ಇನ್ನೇನು ಹೇಳಬೇಕೋ ಆರ್ಥವಾಗುತ್ತಿಲ್ಲ.
ಇಷ್ಟಕ್ಕೂ ಇವೇನು ಸತ್ಯವಾದ ಸುದ್ದಿಗಳಾ? ಹೋಗಲಿ, ಒಬ್ಬ ಸ್ಟಾರ್ ನಟನ ಬಗ್ಗೆ ಬರೆಯಬಹುದಾದ ಸುದ್ದಿಗಳಾ ? ಯಾವುದರಲ್ಲೂ ಸತ್ಯಾಂಶ ಅನ್ನೋದೇ ಇಲ್ಲ. ಎಲ್ಲವೂ ಕಟ್ಟುಕಥೆಗಳೆ. ಸಂಚಾರಿ ವಿಜಯ್ ಬಗ್ಗೆ ಗೊತ್ತಿದ್ದವರಿಗೆ ಅವರೇನು ಅನ್ನೋದು ಗೊತ್ತಿದೆ. ಮದುವೆ ವಿಚಾರದಲ್ಲಿ ಅವರೆಷ್ಟು ಸ್ಪಷ್ಟವಾಗಿದ್ದರು, ಆಸ್ತಿ- ಅಂತಸ್ತುಗಳೆಲ್ಲ ಎಷ್ಟು ಸಂಪಾದಿಸಿದ್ದರು, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಷ್ಟೆಲ್ಲಾ ಹೇಳಿಕೊಂಡಿದ್ದರು ಅನ್ನೋದೆಲ್ಲ ಎಲ್ಲರಿಗೂ ಗೊತ್ತು. ಆದರೂ ಅವರ ನಿಧನದ ನಂತರ ಒಂದ್ರೀತಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹಾಗೆ ಯುಟ್ಯೂಬ್ ಚಾನೆಲ್ ನವರು ತಮ್ಮ ಮನಸ್ಸಿಗೆ ಬದ್ದಂತೆಯೇ ಸುದ್ದಿ ಮಾಡಿ, ವೈರಲ್ ಮಾಡಿಕೊಳ್ಳುವ ಮೂಲಕ ತಮ್ಮ ಚಾನೆಲ್ ಗಳ ಚಂದದಾರರ ಸಂಖ್ಯೆ ಹೆಚ್ಚಿಸಿಕೊಂಡರು. ಅಂದ್ರೆ, ಇವರ ಚಂದದಾರಿಕೆಗೆ ಸ್ಟಾರ್ ನಟರು ಸಾಯಬೇಕು, ಜತೆಗೆ ಅವರ ಬಗೆಗಿನ ಅಂತೆ ಕಂತೆಗಳು ತಮಗೆ ಬೇಕು ಎನ್ನುವ ಮನಸ್ಥಿತಿ ಈ ಯೂಟ್ಯೂಬ್ ಚಾನೆಲ್ ಗಳದ್ದು. ಹಾಗೆಯೇ ಕೆಲವು ಟಿವಿ ಅವರದ್ದು ಕೂಡ.
ಅಮೆರಿಕದಿಂದ ಒಬ್ಬ ಯುವತಿ ನಟ ಸಂಚಾರಿ ವಿಜಯ್ ಕುರಿತು ಸಾಕಷ್ಟು ಮಾತನಾಡಿತ್ತು. ಕೊನೆಗೆ ಕೆಲವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಆ ಯುವತಿ ಸತ್ಯಾಂಶ ತೆರೆದಿಟ್ಟಳು.
ʼ ನಾನು ಭಾವನಾತ್ಮಕವಾಗಿ ಹೇಳಿಕೊಂಡ ಸಂಗತಿಗಳನ್ನು ಮಾಧ್ಯಮದವರು ಸರಕನ್ನಾಗಿ ಮಾಡಿಕೊಂಡರು. ನಾನು ಹಾಗೆ ಹೇಳಿದ್ದರ ಉದ್ದೇಶ ವಿಜಯ್ ಅವರ ವರ್ಚಸ್ಸಿಗೆ ಧಕ್ಕೆ ತರಬೇಕು ಅನ್ನೋದು ಆಗಿರಲಿಲ್ಲ. ಅಷ್ಟು ದೊಡ್ಡ ವ್ಯಕ್ತಿ ನನ್ನನ್ನು ಆತ್ಮೀಯವಾಗಿ ನೋಡುತ್ತಿದ್ದರು ಅಂತ ಹೇಳಿಕೊಳ್ಳುವುದಾಗಿತ್ತು. ಆದರೆ ಟಿವಿಗಳಲ್ಲಿ, ಯುಟ್ಯೂಬ್ ಚಾನೆಲ್ ಗಳಲ್ಲಿ ನನ್ನ ಹೇಳಿಕೆ ಆಗಿದ್ದೇ ಬೇರೆ. ಅದು ನನ್ನ ಮನಸ್ಸಿಗೂ ಘಾಸಿ ತಂತು ಎಂದು ಆ ಯುವತಿ ಕಣ್ಣೀರಿಡುವಾಗ, ಟಿಆರ್ ಪಿ ಬೆನ್ನು ಬಿದ್ದ ಟಿವಿಗಳು, ವೈರಲ್ ಮಾಡಿಕೊಳ್ಳಲೆತ್ನಿಸುವ ಯುಟ್ಯೂಬ್ ಚಾನೆಲ್ ಗಳು ಹಿಡನ್ ಅಜೆಂಡಾ ಬಯಲಾಗದೆ ಉಳಿಯೋದಿಲ್ಲ.
ನಟ ವಿಜಯ್ ಅವರ ಬಗ್ಗೆ ಸುದ್ದಿ ಬಿತ್ತರಿಸುವ ನೆಪದಲ್ಲಿ ಅವರ ವ್ಯಕ್ತಿತ್ವವನ್ನೆ ಹರಣ ಮಾಡಿದ ಇಂತಹ ಯುಟ್ಯೂಬ್ ಚಾನೆಲ್ ಗಳು, ವ್ಯಕ್ತಿಗಳು ಹಾಗೂ ಕೆಲವು ಟಿವಿಗಳ ವಿರುದ್ಧ ಮಾತನಾಡುವವರಾದರೂ ಯಾರು? ನಟ ವಿಜಯ್ ತಮ್ಮವನು ಅನ್ನುವವರಾದರೂ ಬಾಯಿ ಬಿಡುತ್ತಾರಾ? ಯಾರು ಧ್ವನಿ ಎತ್ತುತ್ತಾರೋ ಗೊತ್ತಿಲ್ಲ, ಆದರೆ ಸ್ಟಾರ್ ಗಳ ಬಗೆಗಿನ ಅಂತೆ-ಕಂತೆ ಸುದ್ದಿಗಳನ್ನೇ ಬಂಡವಾಳ ಮಾಡಿಕೊಂಡು ಕುತೂಹಲ ಹುಟ್ಟಿಸುವ ಟೈಟಲ್ ಮೂಲಕ ಗಮನ ಸೆಳೆಯಲೆತ್ನಿಸುವ ಇಂತಹ ಸುದ್ದಿಗಳಿಗೆ ಮನ್ನಣೆ ನೀಡಬೇಡಿ ಎನ್ನುವುದು ಓದುಗರಲ್ಲಿ ನಾವು ಮಾಡುವ ಮನವಿ. ಯಾಕಂದ್ರೆ, ಯಾವುದೇ ಸ್ಟಾರ್ ಗಳ ಬಗ್ಗೆಯೂ ಇವರು ಹೀಗೆಲ್ಲ ಮಾಡುವವರೇ. ಇವರ ವಿರುದ್ದ ಕಾನೂನು ಸಮರ ಆರಂಭವಾಗಬೇಕು. ಅದನ್ನು ಯಾರು ಮಾಡುತ್ತಾರೋ, ಕಾದು ನೋಡಬೇಕಿದೆ.