ವಾಣಿಜ್ಯ ಮಂಡಳಿ ಹೀಗೇಕೆ ಮಾಡಿತು…? ಇದು ಒಬ್ಬ ಶ್ರೇಷ್ಟ ನಟನಿಗೆ‌ ಮಾಡಿದ‌ ಅವಮಾನ ! – ನಿರ್ದೇಶಕ ಲಿಂಗದೇವರು ಬೇಸರ


ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಆಗುವಂತೆ ರಾಷ್ದ ಪ್ರಶಸ್ತಿ ತಂದುಕೊಟ್ಟ ನಟನೆಗೆ ‌ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಷ್ಟು ಗೌರವ ನೀಡುವುದು ಬೇಡವೇ? ಹೌದು, ಕೋವಿಡ್ 19 ವೇಳೆ ನಿಧನರಾದ ಕನ್ನಡ ಚಿತ್ರೋದ್ಯಮದ ಹಲವಾರು ಮಂದಿಗೆ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮೃತ ನಟ ಸಂಚಾರಿ ವಿಜಯ್ ಗೆ ಅಂತಹದೊಂದು ಗೌರವೇ ಸಿಗದೆ ಹೋಯಿತು. ಅದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹಿರಿಯ ನಿರ್ದೇಶಕ ಬಿ.ಎಸ್. ಲಿಂಗದೇವರು ಈ ಬಗ್ಗೆ ಹೇಳಿಕೆ ನೀಡಿದ್ದು, ವಾಣಿಜ್ಯ ಮಂಡಳಿ‌ನಿರ್ಲಕ್ಷ್ಯ ಖಂಡನಾರ್ಹ ಎಂದಿದ್ದಾರೆ. ಅಷ್ಟೇ ಅಲ್ಲ, ಇದು ವಿಜಯ್ ಕುಟುಂಬಕ್ಮೆ ತೋರಿದ ಅಗೌರವ ಎಂದು ಕಿಡಿಕಾರಿದ್ದಾರೆ‌.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಕನ್ನಡ ಚಿತ್ರರಂಗದ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಕೆ.ಸಿ.ಎನ್. ಚಂದ್ರಶೇಖರ್ ಅವರು ನಿಧನರಾದರು.ಅವರೊಂದಿಗೆ ಇತ್ತೀಚೆಗೆ
ಕೆಲವರು ಕೋವಿಡ್ ಬಲಿಯಾದರು. ಇನ್ನು ಕೆಲವರು ಕೋವಿಡೇತರ ಅನಾರೋಗ್ಯಕ್ಕೆ ಅಗಲಿದರು. ಅವರಿಗೆಲ್ಲ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶ್ರದ್ಧಾಂಜಲಿ ಸಲ್ಲಿಸುವ ಸಭೆಯೊಂದನ್ನು ಇಂದು ಕರೆದಿತ್ತು.


ಪುಷ್ಪನಮನ ಸಲ್ಲಿಸುವ ಸಲುವಾಗಿ ವೇದಿಕೆಯಲ್ಲಿ ಕೆ.ಸಿ.ಎನ್.ಚಂದ್ರಶೇಖರ್, ರಾಮು ಮತ್ತು ಅಣ್ಣಯ್ಯ ಚಂದ್ರಶೇಖರ್ ಅವರ ಭಾವಚಿತ್ರಗಳನ್ನು ಇಡಲಾಗಿತ್ತು. ಅಗಲಿದ ಉಳಿದ ನಿರ್ಮಾಪಕರು, ನಿದೇಶಕರು, ತಂತ್ರಜ್ಞರು, ಕಲಾವಿದರು, ಕಾರ್ಮಿಕರು ಮುಂತಾದವರ ಭಾವಚಿತ್ರಗಳನ್ನು ಒಂದರ ಹಿಂದೊಂದು ಬರುವಂತೆ ಟಿವಿಯಲ್ಲಿ ಅಳವಡಿಸಲಾಗಿತ್ತು.

ಗತಿಸಿದ ಎಲ್ಲರ ಭಾವಚಿತ್ರಗಳನ್ನು ವೇದಿಕೆಯ ಮೇಲೆ ಜೋಡಿಸಿ ಇಡುವುದು ಅಸಾಧ್ಯ ಕೂಡ ‌.ಅದರೂ ಒಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಇನ್ನಿಲ್ಲ ಅನ್ನೋದಕ್ಕೆ ಗೌರವ ಸಲ್ಲಿಸುವುದಕ್ಕಾದರೂ ಅಲ್ಲಿ ವಿಜಯ್ ಅವರ ಭಾವಚಿತ್ರವಾದರೂ ಇರಬೇಕಿತ್ತು. ಆದರೆ ವಾಣಿಜ್ಯ ಮಂಡಳಿ ಅದ್ಯಾಕೋ ಮರೆತು ಬಿಟ್ಟಿತು.ಇದು ಗೊತ್ತಿಲ್ಲದೆಯೇ ಆದ ಅಚಾತುರ್ಯವೇ ಆಗಿದ್ದರೂ, ಒಬ್ನ ಶ್ರೇಷ್ಟ ನಟನಿಗೆ ಮಾಡಿದ ಅವಮಾನ ಅನ್ನೋದು ವಿಜಯ್ ಅಭಿಮಾನಿಗಳ ದೂರು.

ರಾಷ್ಟ್ರಪ್ರಶಸ್ತಿ ಪಡೆದು ನಾಡಿಗೆ ಹೆಮ್ಮೆ ತಂದ ಸಂಚಾರಿ ವಿಜಯ್ ಅವರು ಅನೇಕ ಸಮಾಜಮುಖಿ ಕೆಲಸ ಮಾಡಿ ಕನ್ನಡಿಗರ ಮನ, ಮನೆ ಮಾತಾಗಿದ್ದಾರೆ. ವಿಜಯ್ ಮಿದುಳು ನಿಷ್ಕ್ರಿಯವಾದ ನಂತರ, ಆರು ಮಂದಿಗೆ ಹೊಸ ಬದುಕು ನೀಡುವ ಉದ್ದೇಶದಿಂದ, ಅವರ ಅಂಗಾಂಗ ದಾನ ಮಾಡುವ ಉದಾತ್ತ ನಿರ್ಧಾರ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ವಿಜಯ್ ಕುಟುಂಬದವರು. ಈ ಎಲ್ಲಾ ಹಿನ್ನೆಲೆಯಲ್ಲಿಯೇ ವಿಜಯ್ ಅಂತಿಮ ಸಂಸ್ಕಾರದ ವೇಳೆ ಸರ್ಕಾರದ ಗೌರವ ಸಂದಿತ್ತು. ಅದು ನಾಡಿಗೆ ಗೌರವ ತಂದು ಕೊಟ್ಟವರಿಗೆ ವಿದಾಯದ ವೇಳೆ ಸಂದ ಗೌರವ. ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಎಂದು ತನ್ನನ್ನು ಕರೆದುಕೊಳ್ಳುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇದು ಕೂಡ ಗೊತ್ತಾಗದೆ ಹೋಯಿತಾ ಎನ್ನುವುದು ನಿರ್ದೇಶಕ ಲಿಂಗದೇವರು ಅವರ ನೋವಿನ ಪ್ರಶ್ನೆ.

ಪ್ರಶಸ್ತಿ ವಿಜೇತ, ಸಮಾಜ ಮುಖಿ ಕಲಾವಿದನಿಗೆ ಶ್ರದ್ಧಾಂಜಲಿ ವೇಳೆ ಸೂಕ್ತ ಗೌರವ ನೀಡದೇ ಇರುವುದು ನಿಜಕ್ಕೂ ಖಂಡನಾರ್ಹ ಮತ್ತು ವಿಜಯ್ ಕುಟುಂಬಕ್ಕೆ ತೋರಿದ ಅಗೌರವ ಎಂದಿರುವ ನಿರ್ದೇಶಕ‌ ಲಿಂಗದೇವರು, ಒಂದು ವೇಳೆ, ವಾಣಿಜ್ಯ ಮಂಡಳಿಯು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಮಾತ್ರ ಸದಸ್ಯರಾಗಿರುವ ಸಂಸ್ಥೆ ಎಂದು ಹೇಳುವುದಿದ್ದರೆ, ಉಳಿದವರ ಭಾವಚಿತ್ರಗಳನ್ನು ಅಲ್ಲಿ ಹಾಕಬೇಕಾದ ಅಗತ್ಯ ಇರಲಿಲ್ಲ ಎಂದು‌ಕಿಡಿಕಾರಿದ್ದಾರೆ.

Related Posts

error: Content is protected !!