ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅವಮಾನ ಆಗುತ್ತಲೇ ಇದೆ. ಈಗ ಗೂಗಲ್ ನಂತಹ ದೈತ್ಯ ತಂತ್ರಜ್ಞಾನ ಸಂಸ್ಥೆಯಿಂದಲೇ ಕನ್ನಡಕ್ಕೆ ಅವಮಾನ ಆಗಿದೆ. ಗೂಗಲ್ನ ಸರ್ಚ್ ಆಪ್ಷನ್ ನಲ್ಲಿ ಇಂಡಿಯಾದ ಆಗ್ಲಿಯೇಸ್ಟ್ ಭಾಷೆ ಯಾವುದು ಅಂತ ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಇಲ್ಲಿ ದೊಡ್ಡ ಅವಮಾನ ಆಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅನಾವಶ್ಯಕವಾಗಿ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಗೂಗಲ್ ಯತ್ನದ ವಿರುದ್ಧ ಈಗಾಗಲೇ ಹಲವರು ಧ್ವನಿ ಎತ್ತಿದ್ದಾರೆ. ಗೂಗಲ್ನಂತಹ ದೊಡ್ಡ ಸಂಸ್ಥೆ ಕನ್ನಡ ಭಾಷೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ನಟ ಸುದೀಪ್ ಅವರೇ ಈ ಗೂಗಲ್ ಕೃತ್ಯವನ್ನು ಖಂಡಿಸಿದ್ದಾರೆ.
ಕನ್ನಡದಂತಹ ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಇದು ದೊಡ್ಡ ಅವಮಾನ ಮಾಡಿದವರಿಗೆ ಅದರ ಮಹತ್ವ ಗೊತ್ತಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.
ನಟಿ ರಾಗಿಣಿ ಕೂಡ ಗೂಗಲ್ ಕೃತ್ಯಕ್ಕೆ ಆಕ್ಷೇಪ ಎತ್ತಿದ್ದಾರೆ. ಇವರ ಉದ್ದೇಶ ಏನಿರಬಹುದೋ ಗೊತ್ತಿಲ್ಲ, ಅದರೆ, ಕನ್ನಡಕ್ಕೆ ಇದು ಅವಮಾನ ಮಾಡಿದೆ. ಕನ್ನಡ ಅಂದ್ರೆ ತುಂಬಾನೆ ಸುಂದರವಾದ ಭಾಷೆ. ಇದರ ಮಹತ್ವ ತಿಳಿಯಬೇಕಾದರೆ, ಅವರು ಕನ್ನಡ ಕಲಿಯಬೇಕು ಅಂತ ಕಿಡಿಗೇಡಿಗಳ ಕಿವಿ ಹಿಂಡಿದ್ದಾರೆ.
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ,
“ನಾವು ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಗೂಗಲ್ನಲ್ಲಿ ಕನ್ನಡವನ್ನು ಅವಮಾನಿಸಿದ್ದನ್ನು ಖಂಡಿಸಿ ಲೀಗಲ್ ನೋಟಿಸ್ ಕಳುಹಿಸಿದ್ದೇವೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಇನ್ನೊಬ್ಬರನ್ನು ಅಪಮಾನ ಮಾಡುವುದನ್ನು ಸಹಿಸಲಾಗದು. ಇದೊಂದು ಬಗೆಯ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟವಾಗಿದೆ” ಎಂದಿದ್ದಾರೆ.
ಹಾಗೆಯೇ ಸೋಷಲ್ ಮೀಡಿಯಾದಲ್ಲಿ ಕನ್ನಡದ ಹೋರಾಟಗಾರರು, ಕನ್ನಡ ಪ್ರೇಮಿಗಳು ಗೂಗಲ್ ವಿರುದ್ಧ ಕಿಡಿ ಕಾರಿದ್ದಾರೆ.