ಕೋವಿಡ್ನಿಂದಾಗಿ ಚಿತ್ರರಂಗದ ಸಾಕಷ್ಟು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅದೇ ರೀತಿ ಕೋವಿಡ್ ಸೋಂಕಿನಿಂದಲೂ ಬಸವಳಿದಿದ್ದಾರೆ. ಇದೀಗ ಹಾಗೇ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಕೆವಿಎನ್ ಫೌಂಡೇಷನ್ ಸ್ಪಂದಿಸುತ್ತಿದೆ. ಅಂದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ನೀಡುತ್ತಿದೆ. ಗುಣಮುಖರಾಗುತ್ತಿದ್ದಂತೆ ಅದನ್ನು ಮರಳಿ ಅವರ ತಂಡಕ್ಕೆ ನೀಡಿದರೆ ಕೆಲಸ ಮುಗಿದಂತೆ.
ಕಳೆದ ಒಂದು ತಿಂಗಳಿಂದ ಸಾರ್ವಜನಿಕರಿಗೆ ಕೆವಿಎನ್ ಫೌಂಡೇಷನ್ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಒದಗಿಸುತ್ತಿದೆ. ಸದ್ಯ 200 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳು ಇವರ ಬಳಿ ಇದ್ದು, ನ್ಯೂಯಾರ್ಕ್ನಿಂದ ಹೆಚ್ಚುವರಿ 400 ಕಾನ್ಸನ್ಟ್ರೇಟರ್ಗಳು ಆಗಮಿಸಿವೆ. ಅವೆಲ್ಲವುಗಳ ಸದ್ಬಳಕೆ ಆಗಲಿ ಎಂಬುದು ಕೆವಿಎನ್ ಫೌಂಡೇಷನ್ ಉದ್ದೇಶ. ಇದೀಗ ಕೇವಲ ಸಿನಿಮಾ, ಕಿರುತೆರೆ ಕೆಲಸಗಾರರು, ಕಲಾವಿದರು, ತಂತ್ರಜ್ಞರು, ಕ್ಯಾಬ್ ಚಾಲಕರು ಹೀಗೆ ಒಟ್ಟಾರೆ ಸಿನಿಮಾರಂಗಕ್ಕೆ ಉಚಿತವಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ನೀಡಲು ಮುಂದೆ ಬಂದಿದ್ದಾರೆ.
ಈಗಾಗಲೇ ನಟಿ ಶ್ವೇತಾ ಚೆಂಗಪ್ಪ ಕೆವಿಎನ್ ಫೌಂಡೇಷನ್ ವತಿಯಿಂದ ಆಕ್ಸಿಜನ್ ಕಾನ್ಸನ್ಟ್ರೇಟರ್ ಬಳಸಿಕೊಂಡಿದ್ದಾರೆ.
ಹಾಗಾದರೆ ಕಾನ್ಸನ್ಟ್ರೇಟರ್ ಪಡೆಯುವುದು ಹೇಗೆ? www.kvnfoundation.com ವೆಬ್ಸೈಟ್ಗೆ ಹೋಗಿ ಸೂಕ್ತ ಮಾಹಿತಿಯನ್ನು ಅದರಲ್ಲಿ ಸಲ್ಲಿಕೆ ಮಾಡಿದರೆ, ಯಾವುದೇ ವ್ಯಕ್ತಿಯ ಮಧ್ಯಸ್ಥಿಕೆ ಮತ್ತು ಸಂಪರ್ಕ ಇರದೇ ಆಕ್ಸಿಜನ್ ಕಾನ್ಸನ್ಟ್ರೇಟರ್ ಪಡೆಯಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಕಾನ್ಸನ್ಟ್ರೇಟರ್ ಪಡೆಯುವಾಗ ಓರಿಜಿನಲ್ ಆಧಾರ್ ಕಾರ್ಡ್ ಅನ್ನು ನೀಡಬೇಕು. ಸ್ಯಾಚುರೇಷನ್ ಲೆವಲ್ 90-92 ಇದ್ದವರಿಗೆ ನೀಡಲಾಗುತ್ತದೆ. ವೈದ್ಯರ ನೀಡಿರುವ ಚೀಟಿಯೂ ತುಂಬ ಮಹತ್ವದ್ದು. ಇವರಿಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಅವಶ್ಯಕತೆ ಇದೆ ಎಂದು ಬರೆದ ನಂತರವಷ್ಟೇ ಅದನ್ನು ವಿತರಣೆ ಮಾಡಲಾಗುತ್ತದೆ.
5 ಲೀಟರ್ನ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳು ಕೆವಿಎನ್ ಫೌಂಡೇಷನ್ ಬಳಿ ಇದ್ದು, ವಾರ, 15ದಿನಗಳ ಅಥವಾ ಸೋಂಕಿತರು ಗುಣಮುಖವಾಗುವ ತನಕ ಯಾವುದೇ ಹಣ ಪಾವತಿಸದೇ ಆಕ್ಸಿಜನ್ ಕಾನ್ಸನ್ಟ್ರೇಟರ್ ಬಳಕೆ ಮಾಡಬಹುದು. ಗುಣಮುಖರಾದ ಬಳಿಕ ಅದನ್ನು ಕೆವಿಎನ್ ಫೌಂಡೇಷನ್ಗೆ ಮರಳಿಸಬೇಕಾಗುತ್ತದೆ. ಅಲ್ಲಿ ಅದರ ರೀ ಸೈಕಲ್ ಮಾಡಿ ಮತ್ತೆ ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತಿದೆ.