ತರುಣ್ ಸುಧೀರ್ ಈ ಹಿಂದೆ ‘ಗುರುಶಿಷ್ಯರು’ ಸಿನಿಮಾ ಬಗ್ಗೆ ಹೇಳಿದ್ದರು. ಚಿತ್ರದ ಕುರಿತು ಒಂದಷ್ಟು ಮಾಹಿತಿ ನೀಡಿದ್ದ ಅವರು, ನಾಯಕಿ ಆಯ್ಕೆ ಬಗ್ಗೆ ಹೇಳಿರಲಿಲ್ಲ. ಈಗ ‘ಗುರುಶಿಷ್ಯರು’ ಚಿತ್ರಕ್ಕೆ ಹೀರೋಯಿನ್ ಸಿಕ್ಕಾಗಿದೆ.
‘ಅಮ್ಮ ಐ ಲವ್ ಯು’,’ ಪಡ್ಡೆ ಹುಲಿ’, ‘ಜಂಟಲ್ಮನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಿಶ್ವಿಕಾ ನಾಯ್ಡು ಈ ಗುರುಶಿಷ್ಯರು ಚಿತ್ರದ ನಾಯಕಿ.
ಅಂದಹಾಗೆ, ನಿಶ್ವಿಕಾ ಅವರನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಸುಲಭವಾಗಿರಲಿಲ್ಲ ಎಂಬುದು ಸಿನಿಮಾ ತಂಡದ ಹೇಳಿಕೆ. ನಾಯಕಿಯ ಆಯ್ಕೆ ಹೇಗಾಯಿತು ಅನ್ನೋ ವಿಷಯವನ್ನು ಒಂದು ಕಿರುನಾಟಕದ ಮೂಲಕ ಚಿತ್ರತಂಡ ಹೇಳಿದೆ.
30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ‘ಗುರುಶಿಷ್ಯರು’ ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ಅವರನ್ನು ಆಯ್ಕೆ ಮಾಡಲಾಗಿದೆ.
ಶರಣ್ ಚಿತ್ರದ ನಾಯಕರಾಗಿದ್ದು, ಅವರಿಲ್ಲಿ ಒಬ್ಬ ದೈಹಿಕ ಶಿಕ್ಷಕನಾಗಿ ನಟಿಸುತ್ತಿದ್ದಾರೆ. ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗುರುಶಿಷ್ಯರು’ ಚಿತ್ರದ ಕಥೆ 1995 ರಲ್ಲಿ ಕಾಲಘಟ್ಟದ್ದು.
ಈಗಾಗಲೇ ಶೇ.60 ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಉಳಿದ ಭಾಗದ ಚಿತ್ರೀಕರಣ ಸದ್ಯದ ಕೊರೊನಾ ಲಾಕ್ಡೌನ್ ಮುಗಿದ ನಂತರ ಮಾಡಲು ಯೋಜಿಸಲಾಗಿದೆ. ಜಡೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ.