ನಟ, ನಿರ್ಮಾಪಕ ಕಮ್ ನಿರ್ದೇಶಕ ಪಲ್ಲಕ್ಕಿ ಅವರು ಹಿರಿಯ ನಟ ಶ್ರೀನಿವಾಸ್ ಅವರ ಹುಟ್ಟುಹಬ್ಬದ ಅಂಗವಾಗಿ ಬರೆದ ಒಂದು ಆಪ್ತ ಬರಹವಿದು
‘ಸಿದ್ದಲಿಂಗಯ್ಯನವರ ಕಣ್ಣು ಇವರ ಮೇಲೆ ಬಿತ್ತು, ಒಂದೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸತೊಡಗಿದ ಇವರು, ಅಷ್ಟೇ ಶ್ರದ್ದೆಯಿಂದ ಪಾಲಿಸತೊಡಗಿದರು. ಅಲ್ಲಿಯವರೆವಿಗೂ ನಾಯಕ ನಟರಾಗಿ ವಿಜೃಂಭಿಸುತ್ತಿದ್ದ ಕೆಲವರಿಗೆ ಈ ನಟನ ನಡೆ ನುಡಿಯಿಂದ ಸ್ವಲ್ಪ ಮಟ್ಟಿಗೆ ಆತಂಕವಾಗಿದ್ದು ನಿಜ, ಭಾವ ಭಾಷೆಯ ಶುದ್ಧತೆ , ನೋಡಬೇಕು ಎನ್ನಿಸುವ ಮುಖ ಕನ್ನಡ ಪ್ರೇಕ್ಷಕರಿಗೆ ಹಿಡಿಸಿತ್ತು. ಏರು ಮುಖವಾಗಿ ಮೇಲೆ ಏರುತ್ತಲೇ ಬಂದ ಈ ನಾಯಕ ನಟ , ಹಿರಿಯ ನಾಯಕಿ ನಟಿಯರ ಜೊತೆ ಡ್ಯುಯೆಟ್ ಹಾಡಿನಲ್ಲಿ ತಣ್ಣಗೆ ಸಣ್ಣಗೆ ಕುಣಿಯಲಾರಂಭಿಸಿದರು.
ಬಹು ಸವಾಲಿನ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸತೊಡಗಿದರು. ಪತ್ರಿಕೆಗಳಲ್ಲಿ ಸುದ್ದಿಗಳು ಬರಲಾರಂಭಿಸಿದವು, ಹೊಸ ನಿರ್ದೇಶಕರ ಹೊಸ ಆಲೋಚನೆಗಳಿಗೆ ಈ ಕಲಾವಿದರು ಬೇಕೆನ್ನಿಸಿದರು. ತಮ್ಮದೇ ನಿರ್ಮಾಣದಲ್ಲಿ ತೊಡಗಿಸಿಕೊ0ಡು ಅನ್ನದಾತ ರಾದರು. ಭೋಜರಾಜನ ಆಸ್ಥಾನದಲ್ಲಿ ಭೋಜನಾಗಿ ಪಾತ್ರಕ್ಕೆ ಜೀವ ತುಂಬಿ ಯಶಸ್ಸಿನ ತುದಿ ಮುಟ್ಟಿದರು. ಹಲವಾರು ಚಲನಚಿತ್ರಗಳು ನಿರ್ಮಾಣವಾಗಿ ಸೋಲು- ಗೆಲುವು ಎರಡರ ರುಚಿ ತೋರಿಸಿಕೊಟ್ಟವು. ಆದರೂ ಎದೆಗುಂದದೆ ಸುಪುತ್ರನನ್ನು ಬೆಳ್ಳಿತೆರೆಗೆ ಬೊಂಬಾಟ್ ಆಗಿ ಪರಿಚಯಿಸಿದರು. ಅಪ್ಪನಂತೆ ಎಲ್ಲಾ ವಿಭಾಗಗಳಲ್ಲೂ ಹೆಸರು ಮಾಡಿಕೊಂಡ ಈ ನಾಯಕ ಕನ್ನಡದ ಕೆಲವು ನಿರ್ಮಾಪಕ/ನಿರ್ದೇಶಕರಿಗೆ ‘ಧಿಮಾಕು’ ಪ್ರದರ್ಶನ ಮಾಡ್ತಾರೆ ಅಂತ ಗಾಂಧಿನಗರದಲ್ಲಿ ಗುಲ್ಲು ಎಬ್ಬಿಸಿದರು.
ಆದರೆ, ಈ ಇಬ್ಬರೂ ಕಲಾವಿದರು ಶಾಂತಿ, ಸಹನೆಯಿಂದ ವರ್ತಿಸಿ ದೊಡ್ಡವರಾದರು. ಚಾಮಯ್ಯ ಮೇಷ್ಟ್ರು ರಷ್ಟೇ ಸಮಾನಾದ ಪಾತ್ರಗಳನ್ನು ತೂಗಿಸಿದ ಈ ಕಲಾವಿದ ಕನ್ನಡನಾಡಿನ ಆಗಿನ ಕೋಲಾರ ಜಿಲ್ಲೆಯವರು. ಇವರು ಮನಸ್ಸು ಮಾಡಿದ್ದರೆ, ತೆಲುಗು ಸಿನಿಮಾ ರಂಗದಲ್ಲಿ ಮಿಂಚಬಹುದಿತ್ತು ಆದರೆ, ಈ ನೆಲದ ಅಭಿಮಾನ ಇಲ್ಲಿಯೇ ಉಳಿಸಿತು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಪಕ್ಕಾ ಕಮರ್ಷಿಯಲ್ ಎಲಿಮೆಂಟ್ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು.
ನಮ್ಮ ಚಿತ್ರರಂಗ ಇವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು ,ಬಳಸಿಕೊಳ್ಳುವ ಪ್ರತಿಭಾವಂತ ನಿರ್ದೇಶಕರುಗಳು ಗಟ್ಟಿ ಪಾತ್ರಗಳನ್ನು ಹುಟ್ಟು ಹಾಕಿ ಇವರ ಕೈಗೆ ಕೊಟ್ಟರೆ ಇನ್ನು ಗಟ್ಟಿ ಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ. ಸಹಜ ನಟನಿಗೆ ಇರಬೇಕಾದ ಎಲ್ಲಾ ಗುಣಗಳು ಇವರಲ್ಲಿವೆ. ಚಲನಚಿತ್ರ ಕ್ಷೇತ್ರಕ್ಕೆ ಬರುವ ಮುನ್ನ ಸರ್ಕಾರಿ ಹುದ್ದೆಯಲ್ಲಿ ಇದ್ದರು ಎಂದು ಕೇಳಿದ್ದೆ ಈ ರಂಗ ಸೇವೆಗಾಗಿ ತೊರೆದು ಬಂದ ಅದ್ಬುತ ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಹಲವಾರು ವಿಭಾಗಗಳಲ್ಲಿ ಕಾಣಿಸಿಕೊಂಡ ಈ ನಾಯಕ ನಟ, ಈಗಿನ ನಟರಿಗೆ ಮಾದರಿ ಆಗಿದ್ದಾರೆ. ಸರ್ಕಾರ ಸಮಾಜ ಇಂತಹ ನಟನಿಗೆ ಗೌರವ/ಪ್ರಶಸ್ತಿ ಅರ್ಪಿಸಿದ್ದೇ ಆದಲ್ಲಿ ಕೊಟ್ಟ ಪ್ರಶಸ್ತಿಗೆ ಗೌರವ ಲಭಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ…
ಬೆಳ್ಳಿತೆರೆಗೆ ಇವರು ಬಂದರೆ ತೂಕ, ಪಾತ್ರಗಳಿಗೆ ಪಾಕ, ಪ್ರೇಕ್ಷಕರು ಮೂಕ. ಅಷ್ಟೊಂದು ಮೌನವಹಿಸಿ ಇವರ ಪಾತ್ರಗಳನ್ನು ನೋಡುತ್ತಾ ಅನುಭವಿಸಿದ್ದಾರೆ, ರಂಗ ರೊಳಗಿನ ಎಲ್ಲಾ ರಂಗು ರಂಗಿನ ಜನರನ್ನು ಕಂಡವರು,ಇವರ ಹಾರಾಟ, ಚೀರಾಟ, ಕೂಗಾಟ ನೋಡಿದವರು ಈ ನಟ, ಅಹಂ ಇಲ್ಲದ ನಟ. ಆದರೆ ಯಾವುದೇ ಪಾತ್ರ ಕೊಟ್ಟರು ಮಾಡಬಲ್ಲೆನೆಂಬ ಅಹಂ ಇರುವವರು. ಕನ್ನಡಿಗರ ಮನೆಮಾತಾಗಿರುವ ನಮ್ಮೆಲ್ಲರ ಪ್ರೀತಿಯ ಕಲಾವಿದ ಜೆ.ಕೆ.ಶ್ರೀನಿವಾಸಮೂರ್ತಿ ಅವರು ಇನ್ನೂ ಹಲವು ಪಾತ್ರಗಳ ಮೂಲಕ ರಂಜಿಸಲಿ’ ಎಂದು ಬರಹ ರೂಪದಲ್ಲಿ ಪಲ್ಲಕ್ಕಿ ಹಾರೈಸಿದ್ದಾರೆ.