ಸಿನಿಮಾ ನಂತರ ಈಗ ಸೀರಿಯಲ್ ಜತೆಗೆ ರಿಯಾಲಿಟಿ ಶೋಗಳಿಗೂ ಚಿತ್ರೀಕರಣ ಇಲ್ಲ. ಲಾಕ್ಡೌನ್ ಮಾರ್ಗಸೂಚಿಯ ಅನ್ವಯ ನಾಳೆಯಿಂದಲೇ ಕನ್ನಡದ ಎಲ್ಲಾ ಕಿರುತೆರೆಯ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳ್ಳುತ್ತಿದೆ. ಹಾಗಂತ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅನೌನ್ಸ್ಮಾಡಿದೆ.
ಅಷ್ಟೇ ಅಲ್ಲ, ಅಸೋಷಿಯೇಷನ್ ಕರೆಗೂ ಬೆಲೆ ಕೊಡದೆ ಯಾವುದಾದರೂ ಸೀರಿಯಲ್ ಅಥವಾ ರಿಯಾಲಿಟಿ ಶೋ ಗೆ ಚಿತ್ರೀಕರಣ ನಡೆದಿದ್ದಾದಲ್ಲಿ ಅದಕ್ಕೆ ಅದೇ ತಂಡದವರೇ ಹೊಣೆಗಾರರು. ಕೋವಿಡ್ಮಾರ್ಗಸೂಚಿ ಅನ್ವಯ ಮುಂದೆ ಪೊಲೀಸರು ಕೈಗೊಳ್ಳುವ ಕ್ರಮಗಳಿಗೆ ತಾವು ಜವಾಬ್ದಾರಿ ಅಲ್ಲ ಅಂತಲೂ ಅಸೋಷಿಯೇಷನ್ ಅಧ್ಯಕ್ಷ ಶಿವಕುಮಾರ್ ಎಚ್ಚರಿಸಿದ್ದಾರೆ. ಅಲ್ಲಿಗೆ ನಾಳೆಯಿಂದ ಎಲ್ಲಾ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಟಾಪ್ ಆಗುವುದಂತೂ ಖಚಿತ. ಹಾಗಾದರೆ, ಕನ್ನಡದ ಎಲ್ಲಾ ಸೀರಿಯಲ್ಹಾಗೂ ರಿಯಾಲಿಟಿ ಶೋಗಳ ಕಥೆ ಏನು?
ಸದ್ಯಕ್ಕೆ ಇದು ಕನ್ನಡದ ಎಲ್ಲಾ ಕಿರುತೆರೆ ವೀಕ್ಷಕರ ಮುಂದಿರುವ ಪ್ರಶ್ನೆ. ಅದಕ್ಕೆ ಇರುವುದೊಂದೆ ಉತ್ತರ ರಿಪೀಟ್ ಪ್ರಸಾರ. ಅಂದರೆ, ಈಗಾಗಲೇ ಪ್ರಸಾರವಾದ ಎಪಿಸೋಡ್ಗಳ ಪುನಾರಾವರ್ತನೆ. ಸದ್ಯಕ್ಕೆ ಕನ್ನಡದ ಅಷ್ಟು ಮಜರಂಜನಾ ವಾಹಿನಿಗಳಲ್ಲೂ ಮುಂದೆ ರಿಪೀಟ್ ಕಥೆಯಂತೂ ಗ್ಯಾರಂಟಿ. ಕನ್ನಡದಲ್ಲೀಗ ಉದಯ, ಸ್ಟಾರ್ ಸುವರ್ಣ, ಜೀ ಕನ್ನಡ, ಕಲರ್ಸ್ ಕನ್ನಡ, ಕಸ್ತೂರಿ, ದಂಗಲ್ ಕನ್ನಡ ವಾಹಿನಿಗಳಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ವಿಶೇಷವಾಗಿ ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಚಾನೆಲ್ನ ಕೆಲವು ಧಾರಾವಾಹಿಗಳು ಬಹು ಜನಪ್ರಿಯತೆ ಪಡೆದಿರುವುದು ನಿಮಗೂ ಗೊತ್ತು.
ಅದರಲ್ಲೂ ಜೀ ಕನ್ನಡದ ಮಹಾ ನಾಯಕ, ಜೊತೆ ಜೊತೆಯಲಿ, ಸತ್ಯ, ಗಟ್ಟಿಮೇಳ ಧಾರಾವಾಹಿಗಳು ಮನೆ ಮಾತಾಗಿವೆ. ಅದೇ ಕಾರಣಕ್ಕೆ ಸೀರಿಯಲ್ ಜಗತ್ತಿನಲ್ಲಿ ಝೀ ಕನ್ನಡ ನಂಬರ್ ಒನ್ ಟಿಆರ್ಪಿ ಪಡೆದಿರುವುದು ಕೂಡ ಹಳೇ ಸುದ್ದಿಯೇ. ಇವಿಷ್ಟು ಧಾರಾವಾಹಿಗಳ ಪೈಕಿ ಮಹಾ ನಾಯಕ ಧಾರವಾಹಿಯೂ ಹಿಂದಿಯಿಂದ ಡಬ್ ಆಗಿ ಕನ್ನಡಕ್ಕೆ ಬರುತ್ತಿದೆ. ಚಿತ್ರೀಕರಣ ನಿಲ್ಲುವುದರಿಂದ ಅದಕ್ಕೇನು ತೊಂದರೆ ಆಗದು. ಉಳಿದ ಸೀರಿಯಲ್ಗಳೆಲ್ಲ ಇಲ್ಲಿಯೇ ಚಿತ್ರೀಕರಣಗೊಳ್ಳುತ್ತಿವೆ. ಸದ್ಯಕ್ಕೆ ಅವೆಲ್ಲವೂ ಒಂದಷ್ಟು ದಿನಗಳ ಮಟ್ಟಿಗೆ ಫ್ರೆಶ್ ಎಪಿಸೋಡ್ಸ್ಗಳ ಮೂಲಕ ವೀಕ್ಷಕರ ಮುಂದೆ ಬರಬಹುದು. ಮುಂದೆ ರಿಪೀಟ್ ಎಪಿಸೋಡ್ಸ್ಗಳನ್ನೇ ಜನರ ನೋಡಬೇಕಾಗುವುದು ಅನಿವಾರ್ಯ.
ಮತ್ತೊಂದೆಡೆ, ಕಲರ್ಸ್ ಕನ್ನಡದ ಸಾಕಷ್ಟು ಧಾರಾವಾಹಿಗಳಿಗೂ ಬಾರೀ ಬೇಡಿಕೆ ಇದೆ. ಸದ್ಯ ಕನ್ನಡತಿ ಮನೆ ಮಾತಾಗಿದೆ. ಹಾಗೆಯೇ ʼನಮ್ಮನೆ ಯುವರಾಣಿ,ʼ ನನ್ನರಸಿ ರಾಧೆʼ, ʼಮಂಗಳ ಗೌರಿʼ ಧಾರಾವಾಹಿಗಳ ಪ್ರಸಾರಕ್ಕಾಗಿಯೇ ದಿನ ನಿತ್ಯ ಸಂಜೆ ವೀಕ್ಷಕರು ಕಾದು ಕುಳಿತಿರುತ್ತಾರೆನ್ನುವುದು ನಿಮಗೂ ಗೊತ್ತು. ಈಗ ಇವೆಲ್ಲ ಧಾರವಾಹಿಗಳಿಗೂ ಟೆಲಿವಿಷನ್ ಅಸೋಸಿಯೇಷನ್ ನಿರ್ಧಾರ ಪೆಟ್ಟು ನೀಡುವುದು ಖಚಿತವಾಗಿದೆ. ಇವುಗಳಿಗೂ ರಿಪೀಟ್ ಎಪಿಸೋಡ್ಸ್ ಹಾಕುವುದು ಅನಿವಾರ್ಯ. ಇನ್ನು ಕಲರ್ಸ್ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ಬಿಗ ಬಾಸ್ ಇದೇ ಕಾರಣಕ್ಕೆ ನಿಂತು ಹೋಗಿದೆ.
ಸ್ಟಾರ್ ಸುವರ್ಣ ದಲ್ಲೂ ಹಲವು ಜನಪ್ರಿಯ ಧಾರಾವಾಹಿಗಳಿವೆ. ಸದ್ಯಕ್ಕೆ ಅಲ್ಲೂ ಕೆಲವು ಡಬ್ ಆದ ಧಾರಾವಾಹಿಗಳೇ ಬರುತ್ತಿವೆ. ಅವುಗಳಿಗೇನು ಚಿತ್ರೀಕರಣದ ಸ್ಥಗಿತದ ನಿರ್ಧಾರದಿಂದ ಯಾವುದೇ ತೊಂದರೆ ಅಗದು.
ಆದರೆ ಚಿತ್ರೀಕರಣಗೊಳ್ಳುವ ಧಾರಾವಾಹಿಗಳದ್ದು ಇನ್ನೇನು ರಿಪೀಟ್ ಎಪಿಸೋಡ್ ಪ್ರಸಾರ ಮಾಡುವುದಷ್ಟೇ ಅನಿವಾರ್ಯ. ಉಳಿದಂತೆ ರಿಯಾಲಿಟಿ ಶೋಗಳನ್ನು ಇದೇ ಹಣೆಬರಹ.