ಚಿತ್ರೋದ್ಯಮದ ಪರಿಸ್ಥಿತಿ ಈಗ ಅಷ್ಟು ಸುಲಭವಿಲ್ಲ. ಮುಂದೇನೋ ಆಗುತ್ತೆ, ಎಲ್ಲವೂ ಸರಿ ಹೋಗುತ್ತೆ, ಮತ್ತೆ ಹಳೇ ದಿನಗಳು ಬಂದೇ ಬರುತ್ತವೆ ಅಂತೆಲ್ಲ ನಂಬ್ಕೊಂಡು ರಿಲೀಸ್‌ಗೆ ರೆಡಿ ಇರುವ ಹೊಸಬರ ಸಿನಿಮಾಗಳ ಪರಿಸ್ಥಿತಿ ಮುಂದೆಯೂ ಶೋಚನೀಯ. ಅದಂತೂ ಗ್ಯಾರಂಟಿ. ಹಾಗಂತ ಭವಿಷ್ಯ ಹೇಳಬೇಕಿಲ್ಲ. ಜ್ಯೋತಿಷಿಗಳ ಬಳಿಗೂ ಹೋಗಬೇಕಿಲ್ಲ. ಮುಂದಿರುವ ಸಂಕಷ್ಟಗಳೇ ಇದಕ್ಕೆ ಸಾಕ್ಷಿ.
2020 ಎಂಬ ಕರಾಳ ವರ್ಷದ ಅಧ್ಯಾಯ ಮುಗಿದು, 2021 ಆದ್ರೂ ಸರಿಹೋಗುತ್ತೆ ಅನ್ನೋ ನಿರೀಕ್ಷೆಯಲ್ಲಿತ್ತು ಚಿತ್ರರಂಗ. ಈಗ ಅದು ಕೂಡ ಹುಸಿಯಾಗುತ್ತಿದೆ. ಈಗಲೇ ಮೂರು ತಿಂಗಳು ಕಳೆದೇ ಹೋಗಿದೆ. ಈಗಲೂ ಕೊರೊನಾ ಅಬ್ಬರ ನಿಂತಿಲ್ಲ. ದಿನೇ ದಿನೆ ಈ ಮಹಾಮಾರಿಯ ಅಟ್ಟಹಾಸ ಹೆಚ್ಚುತ್ತಿದೆ . ಮತ್ತೆ ಲಾಕ್ ಡೌನ್ ಆಗಬಹುದೆನ್ನುವ ಆತಂಕದ ನಡುವೆ ಚಿತ್ರಮಂದಿರಗಳಲ್ಲಿನ ಹಂಡ್ರೆಡ್ ಪರ್ಸೆಂಟ್ ಆಕ್ಯುಪೆನ್ಸಿ ಈಗ ಶೇ.50 ಕ್ಕೆ ಬಂದಿದೆ. “ಯುವರತ್ನ” ಚಿತ್ರತಂಡದ ಹೋರಾಟದೊಂದಿಗೆ ಸಿಕ್ಕಿದ್ದ ನಿಟ್ಟುಸಿರು ಕೂಡ ಮುಗಿದು ಹೋಗಿದೆ. ಬೇರೆ ದಾರಿ ಇಲ್ಲ. “ಯುವರತ್ನ” ಅಮಜಾನ್ ಪ್ರೈಮ್ ಗೂ ಬಂದಾಗಿದೆ. \
ಅದರಾಚೆ ಮುಂದೆ ಬರಬೇಕಾಗಿದ್ದ ಹೊಸಬರ ಸಿನಿಮಾಗಳ ಪಾಡೇನು? ದಾರಿಯಂತೂ ಇಲ್ಲ. ಎಲ್ಲವೂ ಹರ ಹರ ಮಹಾದೇವ!
ಈ ಜಗತ್ತೇ ಈಗ ಒಂಥರ ಜಡ್ಡುಗಟ್ಟಿದೆ. ಇನ್ನಾರೋ ನಮ್ಮ ಪರವಾಗಿ ಮಾತನಾಡಲಿ ಅಂತ ಕಾಯುತ್ತಿರುತ್ತದೆ. ಚಿತ್ರರಂಗದವರು ಕೂಡ ಅದರಿಂದ ಹೊರತಾಗುಳಿದಿಲ್ಲ. ಇಲ್ಲಿ ಬಲಾಢ್ಯರು ಮಾತನಾಡುತ್ತಾರೆ. ಪ್ರಭಾವಿಗಳು ಹೇಗೋ ಲಾಭಿ ಮಾಡುತ್ತಾರೆ. ತಾವು ಬದುಕುವ ದಾರಿಗಳನ್ನು ತಾವು ಕಂಡುಕೊಳ್ಳುತ್ತಾರೆ. ಆದರೆ ಹೊಸಬರು, ಅಸಹಾಯಕರು ತಾವಾಯಿತು ತಮ್ಮ ಪಾಡಾಯಿತು ಅಂತ ಕುಳಿತು ಈಗ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆನ್ನುವುದು ಸುಳ್ಳಲ್ಲ.
ಒಂದು ಅಂದಾಜಿನ ಪ್ರಕಾರ ಈ ವರ್ಷಕ್ಕೆ ರಿಲೀಸ್‌ಗೆ ಅಂತ ಸರಿ ಸುಮಾರು 400ಕ್ಕೂ ಹೆಚ್ಚು ಚಿತ್ರಗಳು ಕಾದಿವೆ. ಈ ಪೈಕಿ 300ಕ್ಕೂ ಹೆಚ್ಚು ಚಿತ್ರಗಳು ಸೆನ್ಸಾರ್ ಮುಗಿಸಿವೆ. ಇದರಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಸ್ಟಾರ್ ಚಿತ್ರಗಳು, ಒಂದಷ್ಟು ಗುರುತಿಸಿಕೊಂಡ ನಟರ ಸಿನಿಮಾಗಳೇ. ಇಲ್ಲವೇ ಚಿತ್ರರಂಗ ಗೊತ್ತಿದ್ದವರ ಸಿನಿಮಾಗಳೇ ಅಂತಿಟ್ಟುಕೊಳ್ಳಿ, ಉಳಿದವರೆಲ್ಲ ಹೊಸಬರು. ಅವರಿಗೆ ಇಲ್ಲೇನು ಮಾಡಬೇಕು, ಹೇಗೆ ಬಿಡುಗಡೆ ಮಾಡಬೇಕು, ಹಾಕಿದ ಬಂಡವಾಳ ವಾಪಾಸ್ ಪಡೆದುಕೊಳ್ಳುವುದಕ್ಕೆ ಯಾರನ್ನು ಹಿಡಿಯಬೇಕು ಅಂತೆಲ್ಲ ಗೊತ್ತೇ ಇಲ್ಲ. ಅವರಿಗೆ ಈಗ ಕೊರೋನಾ ಅನ್ನೋದು ದೊಡ್ಡ ಅಘಾತವಂತೂ ಹೌದು.
ಒಂದು ಸಿನಿಮಾ ರಿಲೀಸ್‌ಗೆ ರೆಡಿಯಾದರೆ ಅದು ಏನಿಲ್ಲ ಅಂದರೂ ಐದಾರು ತಿಂಗಳಲ್ಲಿ ಚಿತ್ರ ಮಂದಿರಕ್ಕೆ ಬಂದು ಬಿಡಬೇಕು. ಯಾಕಂದ್ರೆ ರೆಡಿ ಮಾಡಿಟ್ಟುಕೊಂಡು, ಬೇಕಾದಾಗ ಮಾರಿಕೊಳ್ಳುವುದಕ್ಕೆ ಅದೇನು ಮಣ್ಣಿನ ಮಡಿಕೆ ಅಲ್ಲ. ಒಂದು ಸಿನಿಮಾದ ಕಥಾವಸ್ತು ಕಾಲ, ಸಂದರ್ಭ, ಸನ್ನಿವೇಶಗಳನ್ನು ಅವಲಂಬಿಸಿರುತ್ತೆ ಅನ್ನೋದು ಎಷ್ಟು ಸತ್ಯವೋ ಹಾಗೆಯೇ, ಮುಂದೆ ಬರುವ ಸಿನಿಮಾಗಳ ಅಂಕೆ ಸಂಖ್ಯೆಗಳ ಮೇಲೂ ಅದರ ಭವಿಷ್ಯ ನಿಂತಿರುತ್ತದೆ. ಅದೇ ಕಾರಣಕ್ಕೆ ತುರ್ತಾಗಿ ಬರಬೇಕಾದ ಸಂದರ್ಭಕ್ಕೂ ಸಿನಿಮಾಗಳ ಮೇಲೆ ಕೊರೋನಾ ಎಂಬ ಮಹಾಮಾರಿ ಅಡ್ಡಾಗಿ ನಿಂತಿದೆ.
ಸದ್ಯಕ್ಕೆ ಸಭೆ, ಸಮಾರಂಭ ಬೇಡ. ಚಿತ್ರಮಂದಿರಗಳಲ್ಲಿ ಹಂಡ್ರೆಡ್ ಪರ್ಸೆಂಟ್ ಸೀಟು ಭರ್ತಿ ಬೇಡ ಅಂತೆನ್ನುವ ಸರ್ಕಾರಗಳಿಗೆ, ಲಕ್ಷಾಂತರ ಜನ ಸೇರಿಸಿ ಚುನಾವಣಾ ಪ್ರಚಾರ ಭಾಷಣ ಮಾಡುವ ಅಗತ್ಯ ಮಾತ್ರ ಬೇಕಿದೆ. ಇದನ್ನು ಜೋರಾಗಿ ಅಥವಾ ಗಟ್ಟಿಯಾಗಿ ಕೇಳುವ ಧೈರ್ಯವೇ ಯಾವ ರಂಗಕ್ಕೂ ಇಲ್ಲ. ಚಿತ್ರರಂಗಕ್ಕೆ ಮಾತ್ರವಲ್ಲ ಜನರಿಗೂ ಅದು ಬೇಡವಾಗಿದೆ. ಜನ ಇವತ್ತು ಕೇವಲ ವೀಕ್ಷಕರಾಗಿದ್ದಾರೆ. ಯಾರೋ ಮಾಡುವ ಪ್ರತಿಭಟನೆ, ಇಲ್ಲವೇ ಯಾರೋ ಮಾಡುವ ಸಿಡಿ ನೋಡಿಕೊಂಡು ವಿಕೃತ ಖುಷಿ ಪಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಅದರಾಚೆ ವ್ಯವಸ್ಥೆ ಬಿಗಿ ಸರಳುಗಳು ತಮ್ಮನ್ನೇ ಹೇಗೆ ಬಂಧನಕ್ಕೆ ತಳ್ಳುತ್ತವೆ ಅನ್ನೋದನ್ನೇ ಮರೆತು ಬಿಟ್ಟಿದ್ದಾರೆ. ಇದರಿಂದ ಹೊರ ಬರುವುದಕ್ಕೆ ಕೊರೊನಾ ಹೋಗಬೇಕಾ? ಉದ್ಯಮ ಒಂದಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾ? ಉತ್ತರ ಕಂಡುಕೊಳ್ಳಬೇಕಿದೆ.