ವಿಕ್ರಾಂತ್ ರೋಣ ಟೈಟಲ್ ಪಕ್ಕಾ ಆಗುವ ಸಾಧ್ಯತೆ ಇದೆ
ಕನ್ನಡದಲ್ಲೀಗ ಸಿನಿಮಾ ಸುದ್ದಿಗಳ ಸುರಿಮಳೆ. ಹೌದು, ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ, ಅತ್ತ ಸಿನಿಮಾರಂಗದ ಚಟುವಟಿಕೆಗಳೂ ಜೋರಾಗಿವೆ. ಈಗ ಹೊಸ ಸುದ್ದಿಯೆಂದರೆ, ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ತಂಡದಿಂದ ಒಂದು ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜೋರು ಸುದ್ದಿ ಮಾಡಿತ್ತು. ಚಿತ್ರದ ಟೀಸರ್, ಟ್ರೇಲರ್ ಬಗ್ಗೆಯೂ ಸಿನಿಮಾ ಮಂದಿಗೆ ಕುತೂಹಲವಿದೆ. ಸದ್ಯಕ್ಕೆ “ಫ್ಯಾಂಟಮ್” ಚಿತ್ರತಂಡದಿಂದ ಜನವರಿ 21ರಂದು ಹೊಸ ಪ್ರಕಟಣೆಯೊಂದು ಹೊರಬೀಳಲಿದೆ ಎಂಬ ಸುದ್ದಿ ಬಂದಿದೆ. ಈ ಕುರಿತಂತೆ, ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಟ್ವೀಟ್ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಜನವರಿ ೨೧ ಸಂಜೆ4.03ಕ್ಕೆ “ಫ್ಯಾಂಟಮ್” ಚಿತ್ರದ ಮುಖ್ಯವಾದ ಪ್ರಕಟಣೆ ಇದೆ ಎಂದು ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಷಯ ಹಂಚಿಕೊಂಡಿದ್ದಾರೆ.
ಅಂದಹಾಗೆ, ಆ ಮುಖ್ಯವಾದ ವಿಷಯ ಏನಿರಬಹುದು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸಿನಿಮಾದ ಬಿಡುಗಡೆಯ ದಿನವನ್ನು ಘೋಷಣೆ ಮಾಡಬಹುದಾ? ಈ ಪ್ರಶ್ನೆ ಕೂಡ ಹರಿದಾಡುತ್ತಿದೆಯಾದರೂ, ಏನಿರಬಹುದು ಎಂಬ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ, ಮೊದಲ ಪೋಸ್ಟರ್ ನೋಡಿದವರಿಗೆ ಸಾಕಷ್ಟು ಭರವಸೆ ಮೂಡಿಸಿತ್ತು. ಇನ್ನು, ಪ್ಯಾನ್ ಇಂಡಿಯಾ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೆ ಮಾಹಿತಿ ಇದ್ದರೂ, ಜನವರಿ 21ರಂದು ಹೊರಬರಲಿದೆ.
ಚಿತ್ರದ ಶೀರ್ಷಿಕೆ ಬದಲಾಗಬಹುದಾ?
ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಸುದ್ದಿಯೂ ಇದೆ. ಈಗಾಗಲೇ “ಫ್ಯಾಂಟಮ್” ಶೀರ್ಷಿಕೆ ಬೇರೆ ಬ್ಯಾನರ್‌ನಲ್ಲಿದೆ ಎನ್ನಲಾಗಿದ್ದು, ಹಾಗಾಗಿ ಚಿತ್ರಕ್ಕೆ ಬೇರೆ ಟೈಟಲ್ ಇಡುವ ಬಗ್ಗೆಯೂ ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಅಂದಹಾಗೆ, ಈ “ಫ್ಯಾಂಟಮ್” ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಹಾಗೊಂದು ವೇಳೆ ಶೀರ್ಷಿಕೆ ಬದಲಾದರೆ, “ವಿಕ್ರಾಂತ್ ರೋಣ” ಎಂಬ ಶೀರ್ಷಿಕೆ ಪಕ್ಕಾ ಆದರೂ ಆಗಬಹುದು.
ಈ ಹಿಂದೆಯೇ “ಸಿನಿಲಹರಿ” “ಫ್ಯಾಂಟಮ್” ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಫ್ಯಾಂಟಮ್” ಬದಲಾಗಿ “ವಿಕ್ರಾಂತ್ ರೋಣ” ಟೈಟಲ್ ಫಿಕ್ಸ್ ಆಗಬಹುದು ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಜಾಕ್‌ಮಂಜು ನಿರ್ಮಾಪಕರು.