( ಆಕ್ಟ್ 1978 ಆಡಿಯನ್ಸ್ ರಿವಿವ್ಯೂ)
–ಶಿವಕುಮಾರ ಮಾವಲಿ, ಲೇಖಕರು ಹಾಗೂ ಪ್ರಾಧ್ಯಾಪಕರು
ಸಿನಿಮಾ ನೋಡುವಾಗ ನಮ್ಮನ್ನು ನಾವು ಯಾವುದೋ ಒಂದು ಪಾತ್ರದೊಂದಿಗೆ ಹೋಲಿಸಿಕೊಂಡೇ ನೋಡುತ್ತೇವೆ. ಒತ್ತೆಯಾಳಾಗಿ ಇಟ್ಟುಕೊಂಡು ಸರ್ಕಾರವನ್ನು ಬೆದರಿಸುವಂಥ ಸಿನಿಮಾಗಳಲ್ಲಿ ನಾವು ಸರ್ಕಾರದ ಜೊತೆ ಗುರುತಿಸಿಕೊಂಡು ಒತ್ತೆಯಾಳಾದವರಿಗೆ ಮರುಗುತ್ತೇವೆ. ಹಾಗೆ ಒತ್ತೆಯಾಳಾಗಿ ಇಟ್ಟುಕೊಂಡುವನು ವಿಲನ್ ಆಗಿರುತ್ತಾನೆ. ಆದರೆ Act 1978 ಸಿನಿಮಾ ನೋಡುವಾಗ ಹಾಗೆ ಒತ್ತೆಯಾಳಾಗಿ ಇಟ್ಟುಕೊಂಡ ಪಾತ್ರದೊಂದಿಗೇ ನಾವು ಗುರುತಿಸಿಕೊಂಡು ಆ ಪಾತ್ರದ ಎದುರು ಸರ್ಕಾರ ಸೋಲುವುದನ್ನೂ ಸ್ವಾಗತಿಸಲು ಕಾಯುತ್ತೇವೆ. ಏಕೆಂದರೆ ಅದು ವ್ಯವಸ್ಥೆಯಿಂದ ರೋಸಿಹೋದ ಪಾತ್ರ. ಎಷ್ಟೇ ಖಾಸಗೀಕರಣ, ಜಾಗತೀಕರಣಗಳು ಬಂದರೂ ಸರ್ಕಾರ ಜನರ ಮೇಲಿನ ತನ್ನ ನಿಯಂತ್ರಣವನ್ನು ಇಟ್ಟುಕೊಂಡೇ ಇರುತ್ತದೆ. ತಮ್ಮ ಕೆಲಸಗಳಿಗಾಗಿ , ದಾಖಲಿಗಳಿಗಾಗಿ , ಪರವಾನಿಗಿಗಳಿಗಾಗಿ , ಆದಾಯ ಪ್ರಮಾಣ ಪತ್ರ ಇನ್ನೂ ಮುಂತಾದ ಸೇವೆಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆಯುವ ಪ್ರತಿಯೊಬ್ಬರೂ ಈ ಚಿತ್ರದ ಗೀತಾಳೊಂದಿಗೆ ಗುರುತಿಸಿಕೊಳ್ಳುತ್ತಾರೆ.
ತನ್ನ ತಂದೆಯ ಸಾವಿಗೆ ಬರಬೇಕಾದ ಪರಿಹಾರಕ್ಕಾಗಿ ತಿಂಗಳುಗಟ್ಟಲೆ ಕಛೇರಿಗೆ ಅಲೆದ ಗೀತಾ,ವ್ಯವಸ್ಥೆಯ ಮೇಲೆ ಸೇಡು ತೀರಿಸಿಕೊಳ್ಳಲು ಇನ್ನೊಬ್ಬ ಶೋಷಿತನೊಂದಿಗೆ ಸೇರಿ ಬಾಂಬ್ ಕಟ್ಟಿಕೊಂಡು ಕಛೇರಿಗೆ ಬರಿತ್ತಾಳೆ. ಅಲ್ಲಿ ಆಕೆ ಹೇಳುವ I need respect ಎನ್ನುವ ಮಾತು. ಸಾಮಾನ್ಯನೊಬ್ಬನನ್ನು ಸರ್ಕಾರಿ ಅಧಿಕಾರಿಗಳು ಹೇಗೆ ನಡೆಸಿಕೊಳ್ಳುತ್ತಾರೆಂಬುದಕ್ಕೆ ಉದಾಹರಣೆಯಾಗಿದೆ. ಟೇಬಲ್ಲಿಂದ ಟೇಬಲ್ಲಿಗೆ ಫೈಲು ಹಾರಿಕೊಂಡು ಹೋಗಲಾರದು ಅದಕ್ಕೆ ‘ಸೂಕ್ತ’ ಪೋಷಕಾಂಶ ಬೇಕು ಎನ್ನುವ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಜೀವನದ ಕಮಿಟ್ ಮೆಂಟ್ ಗಳನ್ನು ಗೀತಾ ಮುಂದೆ ಹೇಳಿಕೊಂಡು ತಾವೂ ಅಸಾಹಯಕರೆಂಬಂತೆ ಬಿಂಬಿಸಲು ಮುಂದಾಗುತ್ತಾರೆ. ಆದರೆ ಅದಕ್ಕೆ ಗೀತಾ ಹೇಳುವ ಮಾತು; ನಿಮ್ಮ ಸಂಬಳಕ್ಕಿಂತ ಹೆಚ್ಚು ಕಮಿಟ್ ಮೆಂಟ್ ಮಾಡಿಕೊಳ್ಳಲು ಮತ್ತು ನಾವು ಪ್ರತೀ ಕೆಲಸಕ್ಕೂ ಲಂಚ ಕೊಡ್ತೀವಿ ಅಂತ ಏನಾದರೂ ಸ್ಟಾಂಪ್ ಪೇಪರ್ ಮೇಲೆ ಬರೆದು ಕೊಟ್ಟಿದ್ವಾ ?
ಅವಳ ಬೇಡಿಕೆಯೆಂದರೆ ಆ ಎಲ್ಲಾ ನೌಕರರನ್ನು ಆ ದಿನವೇ ಸರ್ಕಾರ ಕೆಲಸದಿಂದ ವಜಾ ಮಾಡಬೇಕೆಂಬುದು. ಇದಕ್ಕೆ ಒಪ್ಪಬೇಕೇ ಬೇಡವೇ ಎಂಬುದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಅವಳ ಮಾತಿಗೆ ಒಪ್ಪುವ ರೀತಿಯಲ್ಲಿಯೇ ಪ್ರತಿಕ್ರಿಯಿಸುವ ಸರ್ಕಾರ ಪ್ರತಿತಂತ್ರವನ್ನೂ ಉಪಯೋಗಿಸಿ ಕೊನೆಗೂ ಅವಳನ್ನು Zero Causality ಯೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗುತ್ತದೆ. ಗರ್ಭಿಣಿಯಾಗಿದ್ದ ಗೀತಾ ಹೆಣ್ಣು ಮಗುವಿಗೆ ಜನ್ಮವಿತ್ತು ಕೊನೆಯುಸಿರೆಳೆಯುತ್ತಾಳೆ. ತನ್ನ ಮಗುವಿನ ಭವಿಷ್ಯಕ್ಕಾದರೂ ಈ ವ್ಯವಸ್ಥೆ ಸರಿಯಾಗಬೇಕು ಎಂಬುದು ಗೀತಾಳ ಕನಸಾಗಿಯೇ ಉಳಿಯುತ್ತದೆ. ಮೌನದಲ್ಲಿಯೇ ಮಾತಾಡುವ ಮುದುಕ ಮತ್ತು ಗೀತಾ ತಮ್ಮ ಅಭಿನಯದಿಂದ ನಮ್ಮನ್ನು ಆವರಿಸುತ್ತಾರೆ.
ಇಂಥ ಕಥೆಯನ್ನು ಸಿನಿಮಾ ಮಾಡುವಾಗ ಸಾಕಷ್ಟು ರೂಪಕಗಳನ್ನು ಬಳಸಬೇಕಾಗುತ್ತದೆ. ಅದನ್ನೂ ನಿರ್ದೇಶಕರು ಸಮರ್ಥವಾಗಿ ಮಾಡಿದ್ದಾರೆ. ಅದೇ ಕಛೇರಿಯ ಮುಂದೆ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆಗೆ ಕೂತಿರುವ ವ್ಯಕ್ತಿ ಈ ಪ್ರಖರಣದ ನಂತರ ಎದ್ದು ಹೋಗುವುದು ವಿಶೇಷವಾಗಿದೆ. ಭಾವನಾತ್ಮಕವಾಗಿ ಇಡೀ ಚಿತ್ರ ಕಟ್ಟಿರುವುದರಿಂದ ಎಲ್ಲೂ ಪ್ರೇಕ್ಷಕನಿಗೆ ಒತ್ತೆಯಾಳುಗಳ ಜೀವದ ಬಗ್ಗೆ ಆತಂಕ ಮೂಡುವುದೇ ಇಲ್ಲ. ಹೆದರಿಸಲು ಬಂದ ಗೀತಾ ಕಟ್ಟಿಕೊಂಡಿರುವುದು ಕೂಡ ಹುಸಿ ಬಾಂಬ್ ! ತನ್ಮೂಲಕ ವ್ಯವಸ್ಥೆಯ ನೀಚರ ಮನ ಪರಿವರ್ತನೆ ಮಾಡುವುದಷ್ಟೆ ಅವಳ ಉದ್ದೇಶವಾಗಿತ್ತೆಂಬುದು ಸ್ಪಷ್ಟ. ಇಂಥ ಘಟನೆಯೊಂದು ನಡೆದಾಗ ನ್ಯೂಸ್ ಚಾನೆಲ್ ನವರು ಹೇಗೆ ವರ್ತಿಸುತ್ತಾರೆ. ಅನ್ಯಾಯದ ವಿರುದ್ಧ ಸಿಡಿದವರನ್ನು ಎಷ್ಟು ಸಲೀಸಾಗಿ ಟೆರರಿಸ್ಟ್ , ನಕ್ಸಲೈಟ್ , ದೇಶದ್ರೋಹಿ ಎಂದೆಲ್ಲ ಲೇಬಲ್ ಮಾಡಿ ಬಿಡುತ್ತಾರೆ ಎಂಬುದನ್ನು ಚಿತ್ರದಲ್ಲಿ ಮಾರ್ಮಿಕವಾಗಿ ತೋರಿಸಲಾಗಿದೆ.
1978 ರ ಆ್ಯಕ್ಟ್ ಪ್ರಕಾರ ಸರ್ಕಾರಿ ನೌಕರರನ್ನು ವಜಾ ಗೊಳಿಸುವುದು ಎಷ್ಟು ಕಷ್ಟವಿದೆ ಎಂಬುದರೊಂದಿಗೆ ಇದೇ ಅವರ ಆಟಾಟೋಪಕ್ಕೆ ಕಾರಣವೂ ಇರಬಹುದೆಂಬುದು ಮನವರಿಕೆಯಾಗುತ್ತದೆ. ಸರ್ಕಾರ ಒಪ್ಪಿದ ಮೇಲೂ ಅದನ್ನು ಹೈಕೋರ್ಟ್ ನಲ್ಲಿ ಮತ್ತೆ ತಡೆ ಹಿಡಿಯಬಹುದೆಂದಾಗ ನಾವು ರೂಪಿಸಿಕೊಂಡ ಕಾನೂನುಗಳು ಭ್ರಷ್ಟರನ್ನು ಹೇಗೆ ರಕ್ಷಿಸಬಲ್ಲವು ಎಂದು ಅರ್ಥ ಮಾಡಿಕೊಳ್ಳಬಹುದು.
ಅದೊಂದನ್ನು ಬಿಟ್ಟರೆ ಇಡೀ ಸಿನಿಮಾ ನಮ್ಮನ್ನು ಹೊರಬಂದಮೇಲೂ ಕಾಡುತ್ತದೆ. ಮಂಸೋರೆ ಅವರ ನಿರ್ದೇಶನ ಮತ್ರು ದಯಾನಂದ್ ಹಾಗೂ ವೀರು ಮಲ್ಲಣ್ಣ ಅವರ ಬರವಣಿಗೆ ಚಿತ್ರವನ್ನು ಸಶಕ್ತಗೊಳಿಸಿದೆ. ಚಿತ್ರದ ಭಾಗವಾಗಿರುವ ಬಿ ಸುರೇಶ್ , ಸಂಚಾರಿ ವಿಜಯ್ , ಸತೀಶ್ ಚಂದ್ರ ಮುಂತಾದ ಗೆಳೆಯರೆಲ್ಲರಿಗೂ ಅಭಿನಂದನೆಗಳು … ಕೊರೋನಾ ನಂತರ ಥಿಯೇಟರ್ ನಲ್ಲಿ ನೋಡಿದ ಈ ಸಿನಿಮಾ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ …ಆದರೆ ಆ ಗೀತಾ ಗೆಲ್ಲಬೇಕು … ಅವಳನ್ನು ನಾವೆಲ್ಲ ಗೆಲ್ಲಿಸೋಣ …