ಅಸಹಾಯಕಿ ಗೀತಾಳ ಡಿಮ್ಯಾಂಡ್‌ಗೆ ಫಿದಾ

ಇದು ಮಂಸೋರೆಯ ಮನಸಾರೆ ಒಪ್ಪುವ, ಅಪ್ಪುವ ಸಿನಿಮಾ

ಯಜ್ಞ ಶೆಟ್ಟಿ

ಚಿತ್ರ ವಿಮರ್ಶೆ

ಚಿತ್ರ : ಆಕ್ಟ್ 1978
ನಿರ್ಮಾಣ : ಆರ್. ದೇವರಾಜ್
ನಿರ್ದೇಶನ : ಮಂಸೋರೆ
ತಾರಾಗಣ : ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ.ಸರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್,
ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ ಇತರರು.

“ಅದ್ಧೂರಿ ಮದುವೆ ಮಾಡೋರು, ಲಕ್ಷಾಂತರ ರುಪಾಯಿ ಬ್ಯಾಂಕ್‌ ಸಾಲ ಕಟ್ಟೋರು, ಕೋಟಿ ಬೆಲೆ ಬಾಳುವ ಮನೆ ಕಟ್ಟೋರು ನಿಮಗೇ ಕಷ್ಟ ಬಂದಾಗ ಮನೆ, ‌ಮಕ್ಕಳು ನೆನಪಾಗುತ್ತಾರೆ. ಆದರೆ, ಸಹಾಯ ಕೇಳಿ ನಿಮ್ಮ ಬಳಿ ಬರುವ ಜನರ ಕಷ್ಟ ಅರ್ಥವಾಗಲ್ಲ. ನಿಮಗೆ ಲಂಚ ಕೋಡೋಕೆ ನಾವು ಸಾಲ ಮಾಡಬೇಕು. ಚಿನ್ನದ ಓಲೆ, ಸರ ಅಡವಿಟ್ಟು ನಿಮ್ಮ ಕಮಿಟ್‌ಮೆಂಟ್‌ಗಳಿಗೆ ನಮ್‌ ಹಣ ಬೇಕು. ದುಡಿದ್‌ ತಿನ್ನೋರ ಜೊತೆ ಬಡಿದ್‌ ತಿಂತಿದ್ದೀರಲ್ಲ…”
– ಹೀಗೆ ನೋವು ತುಂಬಿದ ಮಾತುಗಳಲ್ಲಿ ಆ ಅಸಹಾಯಕ ತುಂಬು ಗರ್ಭಿಣಿ ಹೇಳುತ್ತಾ ಹೋದರೆ, ಅವಳ ಮುಂದೆ ತಪ್ಪು ಮಾಡಿ ಕೂತವರ ಮುಖ ಜೋತುಬಿದ್ದಿರುತ್ತೆ. ಅಂದಹಾಗೆ, ಇದು ಕೊರೊನಾ ಹಾವಳಿ ನಡುವೆಯೂ ಚಿತ್ರಮಂದಿರಕ್ಕೆ ಧೈರ್ಯವಾಗಿಯೇ ಲಗ್ಗೆ ಇಟ್ಟ “ಆಕ್ಟ್‌ 1978” ಚಿತ್ರದೊಳಗಿನ ಸೂಕ್ಷ್ಮತೆಯ ವಿಷಯ. ಈ ವಾರ ತೆರೆಗೆ ಅಪ್ಪಳಿಸಿರುವ “ಆಕ್ಟ್‌ 1978” ನೋಡುಗರಲ್ಲಿ ಒಂದಷ್ಟು ಕಿಚ್ಚೆಬ್ಬಿಸುವುದಷ್ಟೇ ಅಲ್ಲ, ಅತೀ ಅಸಹಾಯಕ ಜನರ ಗೋಳು, ನೋವು, ಕಷ್ಟ-ನಷ್ಟಗಳಿಗೆ ಮಿಡಿಯುವ ತುಡಿತ ಹೆಚ್ಚಾಗದೇ ಇರದು.

ಬಿ.ಸುರೇಶ, ನಟ

ಹೌದು, ಸೂಕ್ಷ್ಮ ಸಂವೇದನೆಯ ನಿರ್ದೇಶಕ ಮಂಸೋರೆ ಅವರ ಮೇಲಿಟ್ಟ ನಂಬಿಕೆ ಸುಳ್ಳಾಗಿಲ್ಲ. ಭರವಸೆಯೂ ಹುಸಿಯಾಗಿಲ್ಲ. ನಿರೀಕ್ಷೆ ಉಳಿಸಿಕೊಂಡಿದ್ದಾರೆ ಅನ್ನುವುದಕ್ಕೆ “ಆಕ್ಟ್‌ 1978” ಕೊಡುವ ಭಾವುಕತೆಯ ಹೂರಣವೇ ಸಾಕ್ಷಿ. ಅವರು ಈ ಬಾರಿ ಜನರ ಮುಂದಿಟ್ಟಿರುವ ವಿಷಯ ಹೊಸದಲ್ಲದಿದ್ದರೂ, ಹೇಳುವ ಮತ್ತು ಅದನ್ನು ಅಷ್ಟೇ ಜಾಣತನದಿಂದ ಕಟ್ಟಿಕೊಡಲು ಮಾಡಿರುವ ಪ್ರಾಮಾಣಿಕ ಪ್ರಯತ್ನ ಮೆಚ್ಚಲೇಬೇಕು. ವಾಸ್ತವ ಅಂಶಗಳು ಜನರಿಗೆ ಗೊತ್ತಿದ್ದರೂ, ಅದನ್ನು ಹೇಗೆಲ್ಲಾ ತೋರಿಸಿ, ಜನರನ್ನು ಹತ್ತಿರ ಬರಮಾಡಿಕೊಳ್ಳಬೇಕು ಎಂಬ ಕಲೆ ಮಂಸೋರೆ ಅವರಿಗೆ ಗೊತ್ತಿದೆ. ಆ ಕಾರಣದಿಂದಲೇ ಅವರ ಈ “ಆಕ್ಟ್‌ 1978” ವಿಶೇಷತೆ ಎನಿಸುತ್ತೆ.

 

ನಿರ್ದೆಶಕ ಮಂಸೋರೆ ಕಟ್ಟಿಕೊಟ್ಟಿರುವ ಕಥೆಯಲ್ಲಿ ಗಟ್ಟಿತನವಷ್ಟೇ ಅಲ್ಲ, ಅಲ್ಲೊಂದು‌ ಸೂಕ್ಮತೆಯೂ ಇದೆ. ಅವರು ಪೋಣಿಸಿರುವ ಪಾತ್ರಗಳಿರಲಿ, ಮಾತುಗಳಿರಲಿ, ಸನ್ನಿವೇಶಗಳಿರಲಿ ಎಲ್ಲವೂ ಸಂದರ್ಭಕ್ಕನುಗುಣವಾಗಿಯೇ ಜನರನ್ನು ಹತ್ತಿರವಾಗಿಸಿಕೊಳ್ಳುತ್ತಲೇ, ನೋಡುವ ಕುತೂಹಲ ಹೆಚ್ಚಿಸುತ್ತ ಹೋಗುತ್ತದೆ. ಸರ್ಕಾರಿ ಕಚೇರಿಯಲ್ಲಿ ನಡೆಯುವ ಒಂದೇ ಒಂದು ಪರಿಹಾರದ ಹಣದ ವಿಷಯ ಇಟ್ಟುಕೊಂಡು ಹೆಣೆದಿರುವ ಕಥೆಯಲ್ಲಿ ಭಾವನಾತ್ಮಕ ಸಂಬಂಧಗಳ ಸುಳಿ ಇದೆ. ಅಲ್ಲೊಂದಷ್ಟು ನೋವಿನ ಛಾಯೆ ಇದ್ದರೂ, ಹೋರಾಟದ ಕಿಚ್ಚು ಎದ್ದು ಕಾಣುತ್ತದೆ. ಸಮಾಜದೊಳಗಿರುವ ಕೆಟ್ಟ ವ್ಯವಸ್ಥೆಯ ಅನಾವರಣಗೊಳ್ಳುತ್ತದೆ. ಆ ವ್ಯವಸ್ಥೆ ಸುತ್ತ ತಿರುಬೋಕಿಗಳಂತೆ ತಿರುಗುವ ಪಾತ್ರಗಳ ಕಪಟ, ಲಂಚಗುಳಿತನ, ಅಲಸ್ಯೆ ಮನೋಭಾವ, ನಿರ್ಲಕ್ಷ್ಯತನ, ಬೇಕಾಬಿಟ್ಟಿ ಮಾತಿನ ವರ್ತನೆ, ದುರಾಸೆ, ದುರಾಲೋಚನೆ ಹೀಗೆ ನಾನಾ ರೀತಿಯ ಕೆಟ್ಟ ಯೋಚನೆಯ ಮನಸ್ಸುಗಳ ಸುತ್ತಾಟ ಗಿರಕಿಹೊಡೆಯುತ್ತದೆ.

ಇದಿಷ್ಟೂ ಈ ಸಮಾಜದೊಳಗಿರುವ ವ್ಯವಸ್ಥೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.
ಒಂದು ಅಚ್ಚುಕಟ್ಟಾದ ಕಥೆಗೆ, ರೋಚಕ ಎನಿಸುವ ಚಿತ್ರಕಥೆಯೇ ಇಲ್ಲಿ ಜೀವಾಳ. ಇನ್ನುಳಿದಂತೆ ಚಿತ್ರದ ಪ್ರತಿ ಮೂಲೆ ಮೂಲೆಗೂ ಹೆಗಲು ಕೊಟ್ಟಿರೋದು ಕಾಣಸಿಗುವ ಪಾತ್ರಗಳು. ಇಲ್ಲಿ ಯಾರು ಹೆಚ್ಚಲ್ಲ, ಯಾರೂ ಕಮ್ಮಿ ಅಲ್ಲ. ಅಷ್ಟರಮಟ್ಟಿಗೆ ಅಷ್ಟೂ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನವನ್ನೂ ಇಲ್ಲಿ ಮಾಡಿರುವುದು “ಆಕ್ಟ್‌ʼನ ವಿಶೇಷತೆ ಎನ್ನಬಹುದು.

ಸಂಚಾರಿ ವಿಜಯ್‌, ನಟ

ಗೀತಾಳ ಅಸಹಾಯಕ ಬದುಕು…
ಇಡೀ ಚಿತ್ರದ ಕೇಂದ್ರಬಿಂದು ಗೀತಾ ( ಯಜ್ಞ ಶೆಟ್ಟಿ) ತನ್ನ ಕುಟುಂಬ ಕಳೆದುಕೊಂಡ ಆಕೆ, ತನ್ನ ಒಡಲಲ್ಲಿರುವ ಕಂದಮ್ಮನಿಗಾಗಿ ಬದುಕು ಸವೆಸಬೇಕು ಎಂಬ ಒಂದೇ ಒಂದು ಹಠದಿಂದಾಗಿ, ಬದುಕನ್ನು ಪ್ರೀತಿಸುತ್ತಲೇ ವ್ಯವಸ್ಥೆಯೊಳಗೆ ನೋವುಂಡುಕೊಂಡೇ ಬದುಕು ದೂಡುತ್ತಾಳೆ. ಒಬ್ಬ ಸಾಧಾರಣ ರೈತನ ಮಗಳು ಗೀತಾ. ಬೆಳೆದ ಬೆಳೆಗೆ ಬೆಲೆ ಸಿಗದೆ, ಕಷ್ಟ ಅನುಭವಿಸುವ ಗೀತಾಳ ತಂದೆ, ತಾನು ತೆಂಗಿನ ಮರದಿಂದ ಬಿದ್ದು ಸತ್ತರೆ, ಸರ್ಕಾರದಿಂದ ಒಂದಷ್ಟು ಪರಿಹಾರವಾದರೂ ಸಿಗುತ್ತೆ. ಅದು ನನ್ನ ಕುಟುಂಬಕ್ಕಾದರೂ ಆಸರೆಯಾಗುತ್ತೆ ಅಂತ, ತೆಂಗಿನ ಮರದಿಂದ ಕೆಳಗೆ ಬಿದ್ದು ತನ್ನ ಜೀವವನ್ನೇ ಬಲಿಕೊಡುತ್ತಾನೆ. ಅತ್ತ ಗೀತಾಳ ಗಂಡ ಬೈಕ್‌ನಲ್ಲಿ ಬರುವಾಗ, ರಸ್ತೆಯ ಮೇಲಿದ್ದ ದೊಡ್ಡ ಹಂಪ್‌ ಕಾಣದೆ ಮುಗ್ಗರಿಸಿ ಬಿದ್ದು ಪ್ರಾಣ ಕಳಕೊಳ್ಳುವ ಸ್ಥಿತಿಗೆ ಬರುತ್ತಾನೆ. ದಿಕ್ಕೇ ತೋಚದ ಗೀತಾ, ರೈತ ಅಭಿವೃದ್ಧಿ ಇಲಾಖೆಗೆ ತನ್ನ ತಂದೆ ಸಾವಿನ ಪರಿಹಾರ ಕೇಳಿ ಅರ್ಜಿ ಹಾಕುತ್ತಾಳೆ. ಆ ಇಲಾಖೆಯೊಳಗಿರುವ ಅಷ್ಟೂ ಅಧಿಕಾರಿಗಳು, ನೌಕರರು ಭ್ರಷ್ಟರೇ. ಹೀಗಾದರೆ, ಇನ್ನೆಲ್ಲಿಯ ಪರಿಹಾರ? ಬಿಡಿಗಾಸಿಗಾಗಿ ಅಲೆದಲೆದು ವರ್ಷಗಳನ್ನೇ ಸವೆಸುವ ಗೀತಾ ಅತ್ತ ಗರ್ಭಿಣಿ. ನ್ಯಾಯಕ್ಕೆ ಬೆಲೆ ಸಿಗಲ್ಲ ಎಂಬುದನ್ನುಅರಿತ ಗೀತಾ, ತನ್ನ ದೇಹಕ್ಕೆ ಬಾಂಬ್‌ ಕಟ್ಟಿಕೊಂಡು, ತಂದೆಯಂತೆ ಇರುವ ವ್ಯಕ್ತಿಯ ಜೊತೆ ಆ ಇಲಾಖೆಯೊಳಗೆ ಕಾಲಿಡುತ್ತಾಳೆ. ಆಮೇಲೆ ಅಲ್ಲಿ ನಡೆಯೋದೆ ರೋಚಕ ಸನ್ನಿವೇಶ. ಅದನ್ನು ಕೇಳುವುದಕ್ಕಿಂತ ನೋಡುವುದರಲ್ಲೇ ಮಜಾ ಇದೆ.

ಮಂಸೋರೆ, ನಿರ್ದೇಶಕ

ಭಾವನೆಗಳನ್ನು ಕೆದಕುವಂತಹ ವಿಷಯ ಇಟ್ಟುಕೊಂಡು ನೋಡುಗರಲ್ಲಿ ಅಷ್ಟೇ ಕುತೂಹಲ ಕೆರಳಿಸುತ್ತ ಹೋಗುವ ಮಂಸೋರೆ, ಸಮಾಜದ ವಸ್ತುಸ್ಥತಿಯನ್ನು ಬಯಲಿಗೆಳೆಯುವ ಸಾಹಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿ ಅವ್ಯವಹಾರ, ಭ್ರಷ್ಟತೆಯಲ್ಲಿ ಮುಳುಗಿರುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕೆಂದೇ ಗೀತಾ, ಇಲಾಖೆಯ ಅಷ್ಟೂ ಅಧಿಕಾರಿ, ನೌಕರರನ್ನು ಲಾಕ್‌ ಮಾಡಿಕೊಂಡು, ತನ್ನ ಫೇಸ್‌ಬುಕ್‌ ಖಾತೆ ಮೂಲಕ ಲೈವ್‌ ಮಾಡುತ್ತಾಳೆ. ಕ್ಷಣಾರ್ಧದಲ್ಲೇ ಸುದ್ದಿ ರಾಜ್ಯ, ರಾಷ್ಟ್ರಮಟ್ಟದವರೆಗೂ ಹೋಗುತ್ತೆ. ಇಡೀ ರಾಜಕೀಯ ವ್ಯವಸ್ಥೆಯಲ್ಲೆ ನಡುಕ ಶುರುವಾಗುತ್ತೆ. ಒಂದಷ್ಟು ಓದಿಕೊಂಡಿರುವ ಗೀತಾ, ಆ ಕಚೇರಿಯೊಳಗಿದ್ದುಕೊಂಡೇ ಕೆಲವು ಡಿಮ್ಯಾಂಡ್‌ ಇಡುತ್ತಾಳೆ. ತನ್ನ ಡಿಮ್ಯಾಂಡ್‌ ಈಡೇರದಿದ್ದರೆ, ಬ್ಲಾಸ್ಟ್‌ ಮಾಡುವ ಬೆದರಿಕೆಯನ್ನೂ ಹಾಕುತ್ತಾಳೆ. ಸರ್ಕಾರಿ ಕಚೇರಿಯೊಳಗೆ ನಡೆಯುವ ಆ ಅದ್ಭುತ ಡ್ರಾಮ ಅತ್ಯಂತ ಅರ್ಥಪೂರ್ಣ ಎನಿಸದೇ ಇರದು.

ಅವಿನಾಶ್‌, ನಟ

ಒಳಗೆ ಲಾಕ್‌ ಆಗಿರುವ ಸರ್ಕಾರಿ ನೌಕರರನ್ನು ಕ್ಷೇಮವಾಗಿ ಹೊರತರುವ ತಯಾರಿ ಸರ್ಕಾರ ಮಾಡುತ್ತಿದ್ದರೆ, ಅತ್ತ, ಸರ್ಕಾರಿ ಬಿಲ್ಡಿಂಗ್‌ ಹೈಜಾಕ್‌ ಆಗಿರುವುದರಿಂದ ನಮ್ಮ ಫೈಲ್‌ಗಳ ಕಥೆ ಏನ್ರೀ ಎಂಬ ಲೆಕ್ಕಾಚಾರ ಹೊರಗಿರುವ ಭ್ರಷ್ಟರದ್ದು. ಆ ಕಚೇರಿಯೊಳಗೆ ಕಸಗೂಡಿಸೋನಿಂದ ಹಿಡಿದು, ಕ್ಲರ್ಕ್‌, ಮ್ಯಾನೇಜರ್‌ , ಡಯಾಬಿಟೀಸ್‌ ಪೇಶೆಂಟ್‌, ಗಿಡಮೂಲಿಕೆ ಮಾರಲು ಬಂದವ ಹೀಗೆ ಇತರೆ ನೌಕರರೂ ಲಾಕ್.‌ ಹೊರಗಡೆ ಗೀತಾಳ ಬಗ್ಗೆ ಅಪಪ್ರಚಾರ. ಆಕೆ ಟೆರರಿಸ್ಟ್‌, ನಕ್ಸಲ್‌ ಗುಂಪಿನವಳು, ಒಂದು ಸಂಘಟನೆಯಲ್ಲಿದ್ದಾಳೆ ಅಂತೆ-ಕಂತೆಗಳ ಸುದ್ದಿಯ ಹರಿದಾಟ. ಹೊರಗೆ ಪೊಲೀಸ್‌ ಅಧಿಕಾರಿಗಳಿಂದ ಆಕೆಯನ್ನು ಮಟ್ಟ ಹಾಕುವ ಯೋಚನೆ. ಆಕೆ ತನ್ನ ಉದ್ದೇಶ ಈಡೇರುವವರೆಗೂ ಯಾರನ್ನೂ ಹೊರ ಕಳಿಸಲ್ಲ ಎಂದು ಪಟ್ಟು ಹಿಡಿಯುತ್ತಾಳೆ. ಸರ್ಕಾರಕ್ಕೆ ಒಂದು ಡಿಮ್ಯಾಂಡ್‌ ಇಡುತ್ತಾಳೆ. ಅಷ್ಟಕ್ಕೂ ಅವಳ ಉದ್ದೇಶ ಏನು, ಆಕೆಯ ಡಿಮ್ಯಾಂಡ್‌ ಈಡೇರುತ್ತಾ, ಅಧಿಕಾರಿಗಳ ಕೊಡುವ ಗ್ಯಾರಂಟಿ ಮೇಲೆ ನಂಬಿಕೆ ಇಡುತ್ತಾಳಾ? ಇದೆಲ್ಲದ್ದಕ್ಕೂ ಉತ್ತರ ಬೇಕಿದ್ದರೆ, “ಆಕ್ಟ್‌ 1978” ನೋಡಲೇಬೇಕು.


ಮಂಸೋರೆ ಇಲ್ಲಿ, ಭ್ರಷ್ಟ ಅಧಿಕಾರಿಗಳು, ಸಮಾಜದ ವ್ಯವಸ್ಥೆಯನ್ನಷೇ ಅಲ್ಲ, ಸುಳ್ಳು ಸುದ್ದಿ ಹರಡುವ ವಾಹಿನಿಗಳ ಪೇಚಾಟವನ್ನೂ ತೋರಿಸಿದ್ದಾರೆ. ಇದರೊಂದಿಗೆ ಗರ್ಭಿಣಿಯ ಸಂಕಟ, ಅಳು, ಅಸಹಾಯಕತೆಯನ್ನು ಸೂಕ್ಷ್ಮವಾಗಿಯೇ ಹೇಳುತ್ತಾ ಹೋಗಿದ್ದಾರೆ. ಇವೆಲ್ಲದರ ಜೊತೆ ಜೊತೆಗೆ “ಇದು ನನ್ನ ಹಕ್ಕು, ಇದು ನನ್ನ ಸ್ವತ್ತು” ಎಂಬುದನ್ನೂ ಸಾರುತ್ತಾ ಹೋಗಿದ್ದಾರೆ. ಹಾಗಾಗಿ ಇದೊಂದು ಮಂಸೋರೆಯ “ಮನಸಾರೆ” ಸಿನಿಮಾ ಎನ್ನಲಡ್ಡಿಯಿಲ್ಲ. ಇಂತಹ ಕಥೆಗಳಿಗೆ ಕಮರ್ಷಿಯಲ್‌ ಲೇಪದ ಬಗ್ಗೆ ಮಾತಾಡಬಾರದು. ಆದರೆ, ಇಲ್ಲಿ ಭರಪೂರ ಖರ್ಚು ಮಾಡಿರುವುದೂ ಗೊತ್ತಾಗುತ್ತೆ. ಚಿತ್ರಕ್ಕೆ ರಾಹುಲ್ ಶಿವಕುಮಾರ್ ಸಂಗೀತ ನೀಡಿದ್ದು, ಚಿತ್ರವನ್ನು ಇನ್ನೊಂದು ಹಂತಕ್ಕೆ ತಲುಪಲು ಶ್ರಮಿಸಿರುವುದು ಗೊತ್ತಾಗುತ್ತದೆ. ಚಿತ್ರದಲ್ಲಿರುವ ಒಂದೇ ಒಂದು ಹಾಡಿಗೆ ಜಯಂತ್‌ ಕಾಯ್ಕಿಣಿ ಅವರ ಬರಹದ ಸ್ಪರ್ಶವಿದೆ. ಅವರ ” ತೇಲಾಡೋ ಮುಗಿಲೆ‌ ನೀನೆಂದು ಬರುವೆ ಭೂಮಿಯ‌ ಮುದ್ದಿಸಲು..” ಎಂಬ ಆರಂಭದ ಗೀತೆ ಕಥೆಯ ಚಿತ್ರಣಕ್ಕೆ ಪೂರಕವಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಇಡೀ ಚಿತ್ರದ ವೇಗವನ್ನು ಹೆಚ್ಚಿಸಿದೆ. ನಾಗೇಂದ್ರ ಕೆ.ಉಜ್ಜನಿ ಅವರ ಕತ್ತರಿ ಪ್ರಯೋಗದಲ್ಲೂ ಹೊಸತನವಿದೆ.

ಶ್ರುತಿ, ನಟಿ

ಇನ್ನು ಚಿತ್ರದ ಪ್ರತಿಯೊಂದು ಮಾತುಗಳಲ್ಲೂ ತೂಕವಿದೆ. ಆ‌ ತೂಕದ ಮಾತುಗಳಿಗೆ ನಿರ್ದೇಶಕ ಮಂಸೋರೆ, ವೀರೇಶ್ ಮಲ್ಲಣ್ಣ ಹಾಗೂ ದಯಾನಂದ್ ಟಿ. ಕೆ . ಅವರು ಕಾರಣವಾಗುತ್ತಾರೆ. ಯಜ್ಞ ಶೆಟ್ಟಿ ನಟನೆ ಮೂಲಕ ನೋಡುಗರನ್ನು ತನ್ನತ್ತ ಸೆಳೆದುಕೊಳ್ಳುತ್ತಾರೆ. ಬಿ.ಸುರೇಶ ಅವರಿಗೆ ಇಲ್ಲಿ ಒಂದೇ ಒಂದು ಡೈಲಾಗ್‌ ಇಲ್ಲ. ಆದರೂ, ಬರೀ ಮೌನದಲ್ಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಹೀಗೆ ಇಲ್ಲಿ ಬರುವ ಪ್ರತಿಯೊಂದು ಪಾತ್ರಧಾರಿಗಳು ಚಿತ್ರವನ್ನು ‌ಮತ್ತೊಂದು ಹಂತಕ್ಕೆ‌ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ದತ್ತಣ್ಣ, ನಟ

ಕೊನೇ ಮಾತರು- ಇದು ಮಂಸೋರೆ ಅವರ ಮನಸಾರೆ ಒಪ್ಪುವ ಅಪ್ಪುವ ಚಿತ್ರವಂತೂ ಹೌದು. ಕನ್ನಡ ಸಿನಿಮಾ ಇತರೆ ಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ ಯಾಕೆ ಒಂದು ಹೆಜ್ಜೆ ಮುಂದೆ ಅಂದರೆ, ಅದು ಮನಸ್ಸುಗಳಿಗೆ ನಾಟುವ, ಹತ್ತಿರ ಎನಿಸುವ ಭಾವುಕತೆ ಹೆಚ್ಚಿಸುವ ಇಂತಹ ಕಥೆಗಳಿಂದ.

– ವಿಜಯ್‌ ಭರಮಸಾಗರ

Related Posts

error: Content is protected !!