ಸಿನಿಮಾ ಪತ್ರಕರ್ತನಾಗಿದ್ಸು ನಟನಾಗಿಯೂ ಗುರುತಿಸಿಕೊಂಡಿರುವ ಯತಿರಾಜ್ ನಿರ್ದೇಶಕರೂ ಹೌದು ಅವರೀಗ ನಿರ್ದೇಶಿಸಿ , ನಾಯಕನಾಗೂ ನಟಿಸುತ್ತಿರು “ಮಾಯಾಮೃಗ” ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಆರಂಭವಾಯಿತು. ಸ್ಥಳೀಯ ಮುಖಂಡರಾದ ರಾಜಣ್ಣ, ಜಯಣ್ಣ ಮುಂತಾದವರು ಚಿತ್ರೀಕರಣ ಆರಂಭದ ವೇಳೆ ಉಪಸ್ಥಿತರಿದ್ದು, ಶುಭ ಕೋರಿದರು. ಶ್ರೀರಂಗಪಟ್ಟಣದ ಸುತ್ತಮುತ್ತ ಇಪ್ಪತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
ಎಸ್ ಜಿ ಆರ್ ಫಿಲಂಸ್ ಲಾಂಛನದಲ್ಲಿ ಜಯಲಕ್ಷ್ಮಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ, ವಿದ್ಯಾ ನಾಗೇಶ್ ಛಾಯಾಗ್ರಹಣ ಹಾಗೂ ಶಶಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.
ಯತಿರಾಜ್ ಅವರಿಗೆ ನಾಯಕಿಯಾಗಿ ಸೋನು ಸಾಗರ ಅಭಿನಯಿಸುತ್ತಿದ್ದಾರೆ. “ರಂಗಿತರಂಗ” ಅರವಿಂದರಾವ್, ಕುರಿ ರಂಗ, ವಿ ಸಿ ಎನ್ ಮಂಜು, ಶ್ರೀರಂಗಪಟ್ಟಣ ಮಂಜು, ಸಿಂಚನ, ಮಿಥಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿಜಯ್ ಕಿರಗಂದೂರು ಅವರ ನಿರ್ಮಾಣದಲ್ಲಿ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿರುವ “ಕೆ ಜಿ ಎಫ್” ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಅವರು ಕಿರಗಂದೂರಿಗೆ ಭೇಟಿ ನೀಡಿದ್ದಾರೆ. ಕಿರಗಂದೂರು ನಿರ್ಮಾಪಕ ವಿಜಯ್ ಅವರ ಊರು.
ಅಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ಮೂವರು, ವಿಜಯ್ ಕಿರಗಂದೂರು ಅವರ ಮನೆಯಲ್ಲೇ ಮಧ್ಯರಾತ್ರಿಯವರೆಗೂ ಕಾಲ ಕಳೆದಿದ್ದಾರೆ. ಅಲ್ಲಿನ ಪರಿಸರವನ್ನು ಕಂಡು ಯಶ್ ಹಾಗೂ ಪ್ರಶಾಂತ್ ನೀಲ್ ಸಂತೋಷಪಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಅದರಂತೆಯೇ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಆ ಸಾಲಿಗೆ ಈಗ ಎನ್. ವಿನಾಯಕ ಕೂಡ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ವಿನಾಯಕ ಅವರಿಗೆ ಸಿನಿಮಾ ಹೊಸದೇನಲ್ಲ. ಮೂಲತಃ ಎಂಜಿನಿಯರಿಂಗ್ ಮುಗಿಸಿರುವ ವಿನಾಯಕ್ ಕೋಟೆ ನಾಡಿನ ಹುಡುಗ. ಸಿನಿಮಾ ನಿರ್ದೇಶಕರಾಗಬೇಕು ಅಂತ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ವಿನಾಯಕ ಅವರು, ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಹಲವು ಆಲ್ಬಂ ಸಾಂಗ್ ಮತ್ತು ಕಿರುಚಿತ್ರಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಇವರ ಲಾಸ್ಟ್ ಸೀನ್ ಎಂಬ ಆಲ್ಬಂ ಸಾಂಗ್ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಸಾಂಗ್ ಎಂಬ ಮೆಚ್ಚುಗೆ ಪಡೆದಿದೆ. ಇದರೊಂದಿಗೆ ಮಿ.ಬೀಜ ಕಿರುಚಿತ್ರ ಕೂಡ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇವಿಷ್ಟು ಅನುಭವದ ಮೇಲೆ ವಿನಾಯಕ ಅವರು ಇದೀಗ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ.
ಹೌದು, ಈಗಾಗಲೇ ‘ಫ್ಯಾಮಿಲಿ ಪ್ಯಾಕ್’, ‘ಸಂಕಷ್ಟಕರ ಗಣಪತಿ’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಹೀರೋ ಲಿಖಿತ್ ಶೆಟ್ಟಿ ಅವರಿಗೊಂದು ಸಿನಿಮಾ ಮಾಡುತ್ತಿದ್ದಾರೆ ವಿನಾಯಕ. ತನ್ನ ನಿರ್ದೇಶನದಲ್ಲಿ ಮೂಡಿಬರಲಿರುವ ರೊಮ್ಯಾಂಟಿಕ್- ಕಾಮಿಡಿ ಥೀಮ್ ಹೊಂದಿರುವ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನಡೆದಿದೆ. ಸ್ವತಃ ಲಿಖಿತಿ ಶೆಟ್ಟಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ‘ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸ್ನೇಹಿತನ ಜೊತೆ ಸಹ ನಿರ್ಮಾಪಕರಾಗಿದ್ದ ಲಿಖಿತ್ ಶೆಟ್ಟಿ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗುತ್ತಿದ್ದಾರೆ.
‘ಸಂಕಷ್ಟ ಕರ ಗಣಪತಿ’ ಮತ್ತು ಪಿ ಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿ , ಓ ಟಿ ಟಿಯಲ್ಲಿ ಬಿಡುಗಡೆಯಾಗಿ ಜನ ಮನ್ನಣೆ ಗಳಿಸಿದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ಲಿಖಿತ್ ಶೆಟ್ಟಿ, ಇದೀಗ ಕೆ. ಎಮ್. ಚೈತನ್ಯ ನಿರ್ದೇಶನದ ‘ಅಬ್ಬಬ್ಬಾ’ ಸಿನೆಮಾದಲ್ಲಿ ನಟಿಸುತ್ತಿದ್ದು, ಅದು ಮೇ ಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಕಿರಿಕ್ ಕೀರ್ತಿ ನಿರ್ದೇಶನದ ‘ಲವ್ ಮದುವೆ ಇತ್ಯಾದಿ’ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಎನ್ ವಿನಾಯಕ ಹೇಳಿದ ಕತೆ ಮೆಚ್ಚಿದ ಲಿಖಿತ್ ಶೆಟ್ಟಿ, ನಟನೆ ಜೊತೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಜುಲೈ ನಲ್ಲಿ ಶೂಟಿಂಗ್ ಆರಂಭಿಸುವ ಯೋಚನೆಯಲ್ಲೂ ಅವರಿದ್ದಾರೆ. ಇನ್ನು, ಹೊಸ ನಿರ್ದೇಶಕ ಎನ್ ವಿನಾಯಕ ಹಲವಾರು ಕನ್ನಡ ಸಿನೆಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕಿಷ್ಟು ಮಾಹಿತಿ. ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಕುರಿತು ಇನ್ನಷ್ಟೇ ಮಾಹಿತಿ ನೀಡುವುದಾಗಿ ಹೇಳುತ್ತಾರೆ ನಿರ್ದೇಶಕ ವಿನಾಯಕ.
ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ “ಲಹರಿ” ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಗತಿಸಿವೆ. “ಲಹರಿ ಮ್ಯೂಸಿಕ್” ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಅವಾರ್ಡ್ ಬಂದಿದೆ. ರಿಕ್ಕಿ ಕೇಜ್ ಅವರ ಸಂಗೀತ ಸಂಯೋಜನೆಗೆ ಈ ಪ್ರಶಸ್ತಿ ಸಂದಿದೆ.
ಕೇವಲ ಐನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ ಮನೋಹರ ನಾಯ್ಡು ಅವರು ಈ ಸಂಸ್ಥೆಯನ್ನು ಆರಂಭಿಸಿದರು. ಈಗ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬರಲು ನಿಮ್ಮೆಲ್ಲರ ಹಾರೈಕೆ ಕಾರಣ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ “ಡಿವೈನ್ ಟೈಡ್ಸ್ ” ಆಲ್ಬಂ ಗೆ ಸಂಗೀತ ನೀಡಿದ್ದಕ್ಕಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಈ ಗೌರವಕ್ಕೆ ಪಾತ್ರರಾದ ರಿಕ್ಕಿಕೇಜ್ ಅವರನ್ನು ಅಭಿನಂದಿಸುತ್ತೇನೆ. ಈ ಪ್ರಶಸ್ತಿ ಸಮಾರಂಭಕ್ಕೆ ನಾನು ವೀಸಾ ಸಿಗದ ಕಾರಣದಿಂದ ಹೋಗಿರಲಿಲ್ಲ. ನನ್ನ ಅಣ್ಣನ ಮಗ ಚಂದ್ರು , ರಿಕ್ಕಿಕೇಜ್ ಅವರ ಜೊತೆಗೆ ಹೋಗಿದ್ದರು. ನಾವೆಲ್ಲರೂ ಮನೆಯಿಂದಲೇ ನೋಡಿ ಸಂತಸಪಟ್ಟೆವು. ಸದ್ಯದಲ್ಲೇ ರಿಕ್ಕಿಕೇಜ್ ಅವರ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರವೊಂದನ್ನು ನಮ್ಮ ಸಂಸ್ಥೆ ಮೂಲಕ ನಿರ್ಮಿಸುವ ತಯಾರಿ ನಡೆಯುತ್ತಿದೆ ಎಂದು ಲಹರಿ ವೇಲು ತಿಳಿಸಿದರು.
ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಪ್ಯಾಂಡಮಿಕ್ ಸಮಯದಲ್ಲಿ ಈ ಆಲ್ಬಂ ನಿರ್ಮಾಣವಾಯಿತು. ಅನೇಕ ಕಲಾವಿದರನ್ನು ಜೂಮ್ ಕಾಲ್ ಹಾಗೂ ಮೆಸೇಜ್ ಗಳ ಮೂಲಕ ಸಂಪರ್ಕ ಮಾಡಿದ್ದೆ. ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ಅರವತ್ತಕ್ಕೂ ಅಧಿಕರು ಭಾರತದವರು. ಮಿಕ್ಕವರು ಹೊರ ದೇಶದವರು. ಇಲ್ಲಿನ ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರ ಮುಂತಾದ ಕಲಾವಿದರು ಈ ಆಲ್ಬಂ ನಲ್ಲಿದ್ದಾರೆ. ನಾನು ಕನ್ನಡದಲ್ಲಿ “ಆಕ್ಸಿಡೆಂಟ್”, ” ವೆಂಕಟ ಇನ್ ಸಂಕಟ” ಹಾಗೂ “ಕ್ರೇಜಿ ಕುಟುಂಬ” ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಆ ಮೂರು ಸಿನಿಮಾಗಳ ನಾಯಕ ರಮೇಶ್ ಅರವಿಂದ್. ರಮೇಶ್ ನನ್ನ ಆತ್ಮೀಯ ಸ್ನೇಹಿತರು. ನನಗೆ ಸಿನಿಮಾಗಿಂತ ವಿಭಿನ್ನ ಆಲ್ಬಂಗಳನ್ನು ಮಾಡುವುದರಲ್ಲೇ ಆಸಕ್ತಿ ಹೆಚ್ಚು ಎಂದ ರಿಕ್ಕಿಕೇಜ್, ಪ್ರಶಸ್ತಿ ಪಡೆಯಲು ಲಹರಿ ಸಂಸ್ಥೆಯ ಚಂದ್ರು ಅವರೊಂದಿಗೆ ಹೋದ ಸಂದರ್ಭವನ್ನು ನೆನಪಿಸಿಕೊಂಡರು. ಹಾಗೂ ಮುಂದೆ ಸಹ ಲಹರಿ ಸಂಸ್ಥೆಯವರೊಂದಿಗೆ ಇರುವುದಾಗಿ ಹೇಳಿದರು.
ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ರಿಕ್ಕಿಕೇಜ್, ನಮ್ಮ ಸಂಸ್ಥೆಯ ಕಾರ್ಯಗಳಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆ. ಅವರು ನಮ್ಮೊಂದಿಗೆ ಯಾವುದೇ ಅಗ್ರಿಮೆಂಟ್ ಸಹ ಮಾಡಿಕೊಂಡಿಲ್ಲ. ಇದೇ ಅವರ ಪ್ರೀತಿಗೆ ಸಾಕ್ಷಿ ಎಂದರು ಲಹರಿ ಸಂಸ್ಥೆಯ ಚಂದ್ರು. ರಿಕ್ಕಿಕೇಜ್ ಅವರೊಂದಿಗೆ ಹದಿನೈದು ವರ್ಷಗಳಿಂದ ಜೊತೆಗಿರುವ ವಾಡಿಯಲ್ ಈ ವೇಳೆ ಇದ್ದರು.
ಆರ್ಯ ಎನ್.ಮಹೇಶ್ ನಿರ್ದೇಶನದ “ಬಂಬೂ ಸವಾರಿ” ಸಿನಿಮಾ ಮುಹೂರ್ತಕ್ಕೆ ನಿರ್ದೇಶಕ ಸಿಂಪಲ್ ಸುನಿ, ನಟ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಕೆ.ಎಂ.ಚೈತನ್ಯ ಯುವ ಆಗಮಿಸಿ ಪ್ರತಿಭೆಗಳ ಕನಸುಗಳಿಗೆ ಸಾಥ್ ನೀಡಿದರು.
ಸಿಂಪಲ್ ಸುನಿ ಮಾತನಾಡಿ, ಚಿತ್ರದ ಶೀರ್ಷಿಕೆಯಲ್ಲೇ ಪಾಸಿಟಿವ್ ಇದೆ. ಸವಾರಿ ಅನ್ನುವ ಸಿನಿಮಾ ಮೈಲುಗಲ್ಲು ಸಾಧಿಸಿತ್ತು. ಮಹೇಶ್ ಪ್ರಚಲಿತ ವಿದ್ಯಮಾನಗಳ ಮೇಲೆ ಸಿನಿಮಾ ಕಥೆ ಹೇಳ್ತಾರೆ. ವರ್ಧನ್ ಒಳ್ಳೆಯ ಕಲಾವಿದ. ಹೊಸ ತಂಡದಲ್ಲಿ ಇರುವವರಿಗೆ ಎಲ್ಲರಿಗೂ ಶುಭ ಹಾರೈಕೆಗಳು. ಸವಾರಿ ನೂರು ದಿನ ಓಡಲಿ ಎಂದು ಹಾರೈಸಿದರು.
ಶ್ರೀನಗರ ಕಿಟ್ಟಿ, ಮಹೇಶ್ ಮುಂದಿನ ಪ್ರಯತ್ನ. ನಾನು ಜಂಬೂ ಸವಾರಿ ಅಂತಾ ಅಂದುಕೊಂಡಿದ್ದೆ. ಟೈಟಲ್ ಹೇಳಿದ ಮೇಲೆ ಬಂಬೂ ಸವಾರಿ ಅಂತಾ ಗೊತ್ತಾಯ್ತು. ತಂತ್ರಜ್ಞರು, ಕಲಾವಿದರು ಎಲ್ಲರಿಗೂ ಒಳ್ಳೆದಾಲಿ ಎಂದರು.
ವಿನೋದ್ ಪ್ರಭಾಕರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ ಸಿನಿಮಾ ಪ್ರಾರಂಭ ಮಾಡಿದ್ದಾರೆ. ನಾನು ಕೂಡ ಕಿಟ್ಟಪ್ಪನ ತರಹ ಜಂಬೂ ಸವಾರಿ ಅಂದುಕೊಂಡಿದ್ದೆ. ನವಗ್ರಹ ಮಾಡುವಾಗ ಜಂಬೂ ಸವಾರಿ ಫೇಮಸ್ ಆಗಿತ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಬೆಸ್ಟ್ ವಿಷಸ್ ತಿಳಿಸಿದರು.
ನಿರ್ದೇಶಕ ಕೆ.ಎಂ.ಚೈತನ್ಯ, ಒಳ್ಳೆ ದಿನ ಸಿನಿಮಾ ಆರಂಭಿಸಿದ್ದೀರ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು. ಬಂಬೂ ಸವಾರಿ ಸಿನಿಮಾದಲ್ಲಿ ತಾಂಡವ ರಾಮ, ವರ್ಧನ್, ದೀಪಕ್ ನಟಿಸುತ್ತಿದ್ದಾರೆ. ಆದ್ಯ ಪ್ರಿಯಾ, ಅಭಿ ಸಾರಿಕಾ ನಾಯಕಿಯಾರಾಗಿ ಬಣ್ಣ ಹಚ್ಚಿದ್ದು, ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಬಾಲರಾಜ್ ವಾಡಿ, ಷರೀಫ್ ಕಲಾ ಬಳಗದಲ್ಲಿದೆ.
ಹೇಮಂತ್ ಕುಮಾರ್ ಸಂಗೀತ, ಮಂಜು ಛಾಯಾಗ್ರಾಹಣ, ಗಿರೀಶ್ ಕುಮಾರ್ ಕೆ ಸಂಕಲನ, ನಾಗೇಂದ್ರ ಪ್ರಸಾದ್ ಸಿಂಪಲ್ ಸುನಿ, ವಿಜಯ್ ಟಿ ಪಿ ಸಾಹಿತ್ಯ,ವಿದೆ. ಚಿತ್ರಕ್ಕೆ ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಡೇವಿಡ್ ಆರ್ ಬಂಡವಾಳ ಹೂಡಿದ್ದಾರೆ. ಬಂಬೂ ಸವಾರಿ ಕಲ್ಟ್ ಜಾನರ್ ಸಿನಿಮಾವಾಗಿದ್ದು, ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಯಲಿದೆ.
ಕನ್ನಡದಲ್ಲಿ “ಪಿಯುಸಿ’, ‘ರಾಜಧಾನಿ’, ‘ಕುಂಭ ರಾಶಿ’, ʼಜಾತ್ರೆʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ಚೇತನ್ ಚಂದ್ರಗೆ ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್ ಡೇ ಪ್ರಯುಕ್ತ 15ನೇ ಅನೌನ್ಸ್ ಆಗಿದೆ. ಜೊತೆಗೆ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ನಿರ್ಮಾಪಕರಾದ ಭಾಮಾ ಹರೀಶ್-ಪ್ರಕಾಶ್ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚೇತನ್ ಚಂದ್ರ 15ನೇ ಸಿನಿಮಾದ ಫಸ್ಟ್ ಲುಕ್ ನ್ನು ನಿರ್ಮಾಪಕರಾದ ಭಾಮಾ ಹರೀಶ್, ರಂಗಿತರಂಗ ಸಿನಿಮಾ ಖ್ಯಾತಿಯ ಪ್ರಕಾಶ್ ಅಭಿಮಾನಿಗಳ ಸಮ್ಮುಖದಲ್ಲಿಯೇ ಬಿಡುಗಡೆಗೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಚೇತನ್ ಚಂದ್ರ ಕುಟುಂಬಸ್ಥರು ನಮಗೆ ಹಳೆಯ ಪರಿಚಯ. ಅವರ ಎಲ್ಲಾ ಸಿನಿಮಾ ನೋಡುತ್ತಾ ಬಂದಿದ್ದೀನಿ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಮತ್ತು ಯುವ ನಿರ್ದೇಶಕ ಅಗ್ನಿ ಅವರಿಗೆ ಒಳ್ಳೆಯದಾಗಲಿ ಎಂದು ನಿರ್ಮಾಪಕ ಭಾಮಾ ಹರೀಶ್ ಹೇಳಿದರು.
ಪೋಸ್ಟರ್ ತುಂಬಾ ಚೆನ್ನಾಗಿ ಬಂದಿದೆ. ಚೇತನ್ ಹೊಸ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಅದಷ್ಟು ಬೇಗ ಚೇತನ್ ಇನ್ನೊಂದು ಸಿನಿಮಾ ಮಾಡಲಿ ಎಂದು ನಿರ್ಮಾಪಕ ಪ್ರಕಾಶ್ ಹೇಳಿದರು.
ಆಂಕರ್, ಮಾಡೆಲ್ ಹಾಗೂ ಸೀರಿಯಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿರುವ ಯುವ ನಿರ್ದೇಶಕ ಅಗ್ನಿ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಲವ್ ಕಂ ಆಕ್ಷನ್ ಥ್ರಿಲ್ಲರ್ ಜಾನರ್ ನಲ್ಲಿ ಮೂಡಿ ಬರಲಿರುವ ಈ ಹೊಸ ಸಿನಿಮಾಗೆ ತ್ರಿಬಲ್ ಸಿ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಿದೆ. ಸದ್ಯದಲ್ಲಿಯೇ ಸಿನಿಮಾದ ಮುಹೂರ್ತ ನೆರವೇರಿಸಲು ಚಿತ್ರತಂಡ ಪ್ಲ್ಯಾನ್ ಹಾಕಿದ್ದು, ಆ ದಿನವೇ ಟೈಟಲ್ ಹಾಗೂ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಂತ್ರಜ್ಞರ ಮಾಹಿತಿ ನೀಡಲಿದೆ.
ಹಾಸ್ಯನಟರಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ, “ಗಿರ್ಕಿ” ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ವಾಸುಕಿ ಭುವನ್ ವಿಶ್ವ ಅವರೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ವೀರೇಶ್ ಪಿ.ಎಂ. ನಿರ್ದೇಶನದ ಈ ಚಿತ್ರದ ಟೀಸರ್ ಖ್ಯಾತ ನಟ ಶರಣ್ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಈ ಚಿತ್ರದ ಟೀಸರ್ ಈಗ ಎಲ್ಲೆಡೆ ಜನಪ್ರಿಯವಾಗಿದೆ.
ಈ ವೇಳೆ ಮಾತನಾಡಿದ ಶರಣ್, ವಿಶ್ವ ನನ್ನ ಬಹುಕಾಲದ ಗೆಳೆಯ. ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯ ನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಇದು ಸುಲಭವಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ನಾನು ನೂರು ಚಿತ್ರಗಳಲ್ಲಿ ನಟಿಸಿದ ಮೇಲೆ ನಿರ್ಮಾಪಕನಾದೆ. ವಿಶ್ವ ಕೂಡ ಅಷ್ಟೇ ಚಿತ್ರಗಳ ನಂತರ ನಿರ್ಮಾಪಕನಾಗಿದ್ದಾನೆ. ನಿರ್ದೇಶಕ ವೀರೇಶ್ ಕೂಡ ನನಗೆ ಪರಿಚಿತರು. ಚಿತ್ರತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು.
ನಮ್ಮ ಸ್ನೇಹಕ್ಕೆ ಬೆಲೆಕೊಟ್ಟು ಬಂದಿರುವ ಶರಣ್ ಅವರಿಗೆ ಧನ್ಯವಾದ. ನಾನು ಈ ಬೆಳವಣಿಗೆಗೆ ನನ್ನ ತಂದೆಯ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ನಿರ್ಮಾಣದ ಜೊತೆಗೆ ನಾನು ಪ್ರಮುಖ ಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಮೇನಲ್ಲಿ ಬಿಡುಗಡೆಯಾಗಲಿದೆ ಎಂದರು ವಿಶ್ವ.
“ಗಿರ್ಕಿ” ಎಂದರೆ ಸುತ್ತಾಟ ಹಾಗೂ ಪರ್ಯಟನೆ. ಒಂದೇ ತರಹದ ಕಥೆಯಲ್ಲ. ಲವ್, ಕಾಮಿಡಿ, ಕೌಟುಂಬಿಕ ಎಲ್ಲಾ ತರಹದ ಮಿಶ್ರಣ ಈ “ಗಿರ್ಕಿ”. ಹೆಚ್ಚಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳಿದೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ಚಿತ್ರ ಚೆನ್ನಾಗಿದೆ. ನೋಡಿ ಹರಸಿ ಎಂ ಬುದು ನಿರ್ದೇಶಕ ವೀರೇಶ್ ಮಾತು.
ಹಿಂದೆ ಇದೇ ಸಭಾಂಗಣದಲ್ಲಿ ನಾನು ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವೊಂದರ ಸಮಾರಂಭ ನಡೆದಿತ್ತು. ಆ ತಂಡದವರು ನನ್ನ ವೇದಿಕೆಗೆ ಕರೆಯದೆ ಅವಮಾನ ಮಾಡಿದ್ದರು. ಅದನ್ನು ಗಮನಿಸಿದ್ದ ವಿಶ್ವ ಅವರು, ನಿನ್ನನ್ನು ಹೀರೋ ಮಾಡುತ್ತೇನೆ ಎಂದಿದ್ದರು. ಅಂದಂತೆ ಈಗ ಹೀರೋ ಮಾಡಿದ್ದಾರೆ ಅವರಿಗೆ ಹಾಗೂ ಇಡೀ ತಂಡಕ್ಕೆ ನಾನು ಆಭಾರಿ ಎಂದು ನಾಯಕ ವಿಲೋಕ್ ತಿಳಿಸಿದರು.
ನಾಯಕಿಯರಾದ ದಿವ್ಯಾ ಉರುಡುಗ ಹಾಗೂ ರಾಶಿ ಮಹದೇವ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಸಂಗೀತ ಹಾಗು ಹಾಡುಗಳ ಕುರಿತು ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿದರು.
ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಪ್ರಮೋದ್ ನಾಯಕನಾಗಿ ನಟಿಸುತ್ತಿರುವ ಬಾಂಡ್ ರವಿ ಸಿನಿಮಾಗೆ ಪೊಗರು ಪೋರ ಧ್ರುವ ಹಾಗೂ ಯಂಗ್ ಟೈಗರ್ ವಿನೋದ್ ಪ್ರಭಾಕರ್ ಸಾಥ್ ಕೊಟ್ಟಿದ್ದಾರೆ. ಗುರುವಾರ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಧ್ರುವ-ವಿನೋದ್ ಪ್ರಮೋದ್ ಬೆನ್ನುತಟ್ಟಿ ಇಡೀ ಸಿನಿಮಾ ಟೀಂಗೆ ಶುಭಾಶಯ ಕೋರಿದರು.
ವಿನೋದ್ ಕ್ಲ್ಯಾಪ್..ಧ್ರುವ ಕ್ಯಾಮೆರಾಗೆ ಚಾಲನೆ
ಬಾಂಡ್ ರವಿ ಸಿನಿಮಾಗೆ ವಿನೋದ್ ಪ್ರಭಾಕರ್ ಕ್ಲ್ಯಾಪ್ ಮಾಡಿದ್ರೆ, ಧ್ರುವ ಸರ್ಜಾ ಕ್ಯಾಮೆರಾಗೆ ಚಾಲನೆ ನೀಡಿದರು. ಬಳಿಕ ಮಾತಿಗಿಳಿದ ವಿನೋದ್, ಧ್ರುವ ನನ್ನ ತಮ್ಮ. ನನ್ನ ಕಡೆಯಿಂದ ಕ್ಲ್ಯಾಪ್ ಮಾಡಿಸಿದ್ದಕ್ಕೆ ಧನ್ಯವಾದ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.
ಬಳಿಕ ಧ್ರುವ ಸರ್ಜಾ, ವಿನೋದ್ ಪ್ರಭಾಕರ್ ನಮ್ಮಣ್ಣ ಎನ್ನುತ್ತಾ, ಸಿನಿಮಾದ ಟೈಟಲ್ ಕೇಳಿದರೆ ಫೀಲ್ಡ್ ಸಿನಿಮಾ ಅನಿಸುತ್ತದೆ. ಇದು ಪ್ರಾಮಿಸಿಂಗ್ ಸಿನಿಮಾ. ಪ್ರತಿಯೊಬ್ಬರಿಗೂ ಪ್ರೋತ್ಸಾಹ ಮಾಡಬೇಕು ಅಂತಾ ನೆಗೆಟಿವ್ ಕಮೆಂಟ್ ಮಾಡುವವರಿಗೆ ವಾರ್ನಿಂಗ್ ಕೊಟ್ರು.
ಪ್ರಮೋದ್, ನಾನು ಅಪ್ಪು ಸರ್ ಅಭಿಮಾನಿಯಾಗಿ ಬಾಂಡ್ ರವಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅಣ್ಣಾ ಬಾಂಡ್ ಸಿನಿಮಾದಲ್ಲಿ ಅಪ್ಪು ಸರ್ ಮಿಂಚಿದ್ದ ಬಾಂಡ್ ರವಿ ಪಾತ್ರದ ರೀತಿ ಇರುತ್ತದೆ. ಹೀಗಾಗಿ ಅಪ್ಪು ಸರ್ ಮ್ಯಾನರಿಸಂ, ಆಕ್ಟಿಂಗ್ ಖದರ್ ನ್ನು ನೋಡಿ ಕಲಿಯುತ್ತಿದ್ದೇನೆ. ಒಳ್ಳೆ ಪ್ರೊಡಕ್ಷನ್ ಹೌಸ್, ಒಳ್ಳೆ ಫ್ಯಾಷನ್ ಪ್ರೊಡ್ಯೂಸರ್ ಎಂದರು.
ಮಾಯಕನ್ನಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ನಾಯಕಿಯಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕಳೆದ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಯುಗಾದಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಅಂದಹಾಗೆ, ಬಾಂಡ್ ರವಿ ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದು, ಈ ಹಿಂದೆ ನರಸಿಂಹಮೂರ್ತಿ ಮಾದ ಮನಸಿ ಸಿನಿಮಾ ನಿರ್ಮಾಣ ಮಾಡಿದ್ದರು.
ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್&ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಶುಕ್ರವಾರದಿಂದಲೇ ಶೂಟಿಂಗ್ ನಡೆಯುತ್ತಿದ್ದು, ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ ಸುತ್ತಮುತ್ತ ಐವತ್ತು ದಿನಗಳ ಕಾಲ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿದೆ.
ಕಿರುಚಿತ್ರಗಳು ಸಾಕಷ್ಟು ಪ್ರಭಾವಿಸುತ್ತವೆ. ಅದರಲ್ಲೂ ಹೊಸಬರು ಸಿನಿಮಾ ಮಾಡಲು ಹೊರಡುವ ಮುನ್ನ, ಮೊದಲ ಮೆಟ್ಟಿಲಂತೆ ಈ ಕಿರುಚಿತ್ರಗಳು. ಹಲವು ಕಿರುಚಿತ್ರಗಳ ಸಾಲಿಗೆ ಈಗ ಹೆಲ್ಫ್ ಎಂಬ ಹೊಸ ಕಿರುಚಿತ್ರ ಮೂಡಿಬಂದಿದ್ದು, ಏಪ್ರಿಲ್ 27ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಇದು ಸಾಮಾನ್ಯನ ಜೀವನದಲ್ಲಾಗುವ ಏರಿಳಿತಗಳನ್ನಿಟ್ಟುಕೊಂಡು ಮಾಡಿರುವ ಕಿರುಚಿತ್ರ ಜೆರಿನ್ ಚಂದನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಅಂದಹಾಗೆ, ಏಪ್ರಿಲ್ 27ರಂದು ಇದೇ ಮೊದಲ ಬಾರಿಗೆ ಕನ್ನಡ ಕಿರುಚಿತ್ರವೊಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಕಿರುಚಿತ್ರದ ತಂಡಕ್ಕೆ ಶುಭ ಹಾರೈಸಲು ನಿರ್ದೇಶಕ ಸಿಂಪಲ್ ಸುನಿ ಆಗಮಿಸಿದ್ದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಜೆರಿನ್ ಚಂದನ್, ಕ್ಲಾಸ್ ರೂಮ್ ಕಥೆಗಳು ಅರ್ಥಗರ್ಭಿತವಾಗಿದ್ದವು. ಕಥೆ ಸಂದೇಶಗಳನ್ನು ತಲುಪಿಸಲು ಇದು ಸೂಕ್ತ ವೇದಿಕೆ ಎನಿಸಿತು. ಹೀಗಾಗಿ, ಈ ಮಾಧ್ಯಮ ಬಳಸಿಕೊಂಡು ಜೀವನದ ಏರಿಳಿತಗಳನ್ನು ತೋರಿಸಲು ಈ ಕಿರುಚಿತ್ರದ ಮೂಲಕ ಪ್ರಯತ್ನಿಸಿದ್ದೇನೆ ಎಂದ ನಿರ್ದೇಶಕ ಜೆರಿನ್ ಚಂದನ್, ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಸಿನಿಮಾವೊಂದನ್ನು ನಿರ್ದೇಶಿಸುವುದಾಗಿ ಹೇಳಿದರು.
ಉತ್ತಮ ಸಂದೇಶವಿರುವ ಚಿತ್ರವನ್ನು ಮಾಡಿದ್ದೇವೆ. “ಹೆಲ್ಪ್” ಯಾವುದೇ ಕಾರಣಕ್ಕೂ ಕಿರುಚಿತ್ರ ಅನಿಸುವುದಿಲ್ಲ. ಸಿನಿಮಾ ರೀತಿಯಲ್ಲೇ ಮಾಡಿದ್ದೇವೆ. ಮೂವತ್ತು ನಿಮಿಷ ಕಳೆಯುವುದೇ ಗೊತ್ತಾಗದ ಹಾಗೆ ನಿರ್ದೇಶಕರು ಈ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಏಪ್ರಿಲ್ 27 ರಂದು ಓಟಿಟಿಯಲ್ಲಿ ಈ ಕಿರುಚಿತ್ರ ಬಿಡುಗಡೆಯಾಗುತ್ತಿದೆ. 20 ರ ನಂತರ ಈ ಕಿರುಚಿತ್ರದ ಪ್ರದರ್ಶನ ಏರ್ಪಡಿಸುತ್ತೇವೆ. ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ. ನಾನು ಸಹ ಇದರಲ್ಲಿ ಒಂದು ಪಾತ್ರ ಮಾಡಿದ್ದೇನೆ ಎಂದರು ನಿರ್ಮಾಪಕ ಆದಿತ್ಯ.
ನಿರ್ದೇಶಕ ಜೆರಿನ್ ಅವರ ಜೊತೆ ಶಾಲೆಯಲ್ಲಿ ಕಳೆದ ಸವಿನೆನಪುಗಳನ್ನು ನೆನಪಿಸಿಕೊಂಡರು ನಿರ್ದೇಶಕ ಸಿಂಪಲ್ ಸುನಿ. ನನ್ನ ಮೊದಲ ಚಿತ್ರ “ಸಿಂಪಲಾಗೊಂದು ಲವ್ ಸ್ಟೋರಿ ” ಚಿತ್ರದಲ್ಲಿ ಜೆರಿನ್ ಎಂಬ ಪಾತ್ರ ಬರುತ್ತದೆ. ಆ ಹೆಸರಿಡಲು ನನ್ನ ಈ ಗೆಳೆಯನೆ ಸ್ಪೂರ್ತಿ. ಈಗ “ಹೆಲ್ಪ್” ಎಂಬ ಕಿರುಚಿತ್ರ ಮಾಡಿದ್ದಾನೆ. “ಹೆಲ್ಪ್” ಎಂದರೆ ಈ ಕ್ಷಣಕ್ಕೆ ನೆನಪಾಗುವುದು ಪುನೀತ್ ಸರ್. ಅವರು ಮಾಡಿರುವ ಸಹಾಯ ಎಲ್ಲರಿಗೂ ಸ್ಪೂರ್ತಿ. ಜೆರಿನ್ ಅವರಿಂದ ಇನ್ನೂ ಉತ್ತಮ ಚಿತ್ರಗಳು ಮೂಡಿಬರಲಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಸಿಂಪಲ್ ಸುನಿ ಹಾರೈಸಿದರು.
ಕಿರುಚಿತ್ರದಲ್ಲಿ ನಟಿಸಿರುವ ವಿನಯ್ ನಾಗೇಶ್ ರಾವ್ ಹಾಗೂ ಛಾಯಾಗ್ರಾಹಕ ರಾಜಕುಮಾರ್ “ಹೆಲ್ಪ್” ಬಗ್ಗೆ ಮಾತನಾಡಿದರು.
ಅಭಿಜಿತ್, ಬಿ.ಸುರೇಶ್, ವೀಣಾ ಸುಂದರ್ , ಡಿ.ಎನ್. ಆದಿತ್ಯ, ನಿಶಾ ಸೇರಿದಂತೆ ಅನೇಕರು “ಹೆಲ್ಪ್” ನಲ್ಲಿ ನಟಿಸಿದ್ದಾರೆ.ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.
ಸಂಗೀತ ಕ್ಷೇತ್ರದ ಮೇರು ಪ್ರತಿಭೆ ಇಳಯರಾಜ ಅವರು ಸಂಗೀತ ನೀಡಿರುವ ಹಾಗೂ ಕೆ.ಗಣೇಶನ್ ನಿರ್ದೇಶಿಸಿರುವ “ಪ್ರೀತ್ಸು” ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಭಾ.ಮ.ಹರೀಶ್, ಟೇ.ಶಿ.ವೆಂಕಟೇಶ್ ಹಾಗೂ ರವಿ ವಿಠಲ್ ಇತರರು ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.
ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗಲ್ಲಿದ್ದೀನಿ. ನವಭಾರತ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಈಗ ವಿಭಿನ್ನ ಕಥೆಯುಳ್ಳ “ಪ್ರೀತ್ಸು” ಚಿತ್ರವನ್ನು ನಿರ್ದೇಶನ ಮಾಡಿದ್ದೀನಿ. ನನಗೆ ನಿರ್ಮಾಣದಲ್ಲಿ ಮಲೇಷಿಯಾದ ಗಾನ ವಿನೋದನ್ ಸಾಥ್ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ನೀಡಿರುವುದು ನಿಜಕ್ಕೂ ಸಂತಸ ತಂದಿದೆ. ನನಗೆ ಇಳಯರಾಜ ಅವರು ಬಹುದಿನಗಳ ಪರಿಚಯ. ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ವೈದ್ಯರ ಸಲಹೆ ಮೇರೆಗೆ ಕೊನೆಯಲ್ಲಿ ಅವರು ಬರುವುದು ರದ್ದಾಯಿತು. ವಿಡಿಯೋ ಮೂಲಕ ಅವರು ಸಂದೇಶ ಕಳುಹಿಸಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಹರಸಿ ಎಂದರು ನಿರ್ದೇಶಕ ಕೆ.ಗಣೇಶನ್.
ಮಲೇಷಿಯಾ ಗೆ ಬಂದಾಗ ಗಣೇಶನ್ ಈ ಕಥೆ ಹೇಳಿದ್ದರು. ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆವು. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಗಾನ ವಿನೋದನ್.
ನಾಯಕ ಸುಭಾಷ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಅತಿಥಿಗಳಿಗೆ ಧನ್ಯವಾದ ಅರ್ಪಿಸಿದರು. ಮುಖ್ಯ ಅತಿಥಿಗಳು ಚತ್ರಕ್ಕೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸುಭಾಷ್ ಅವರಿಗೆ ನಾಯಕಿಯಾಗಿ ನೇಹ ಅಭಿನಯಿಸಿದ್ದಾರೆ. ಗಣೇಶನ್, ಮನೋಬಲ, ಸ್ವಾಮಿನಾಥ, ಮನೋಹರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಎ.ಸಿ.ಮಹೇಂದ್ರನ್ ಛಾಯಾಗ್ರಹಣ, ಸಂಜೀವ ಸಂಕಲನ ಹಾಗೂ ಜಾನ್ ಪೀಟರ್ ಅವರ ಕಲಾ ನಿರ್ದೇಶನ “ಪ್ರೀತ್ಸು” ಚಿತ್ರಕ್ಕಿದೆ.