Categories
ಸಿನಿ ಸುದ್ದಿ

ಇದು ರಾಕಿಂಗ್ ದಂಪತಿಯ ನೆಚ್ಚಿನ ಈವೆಂಟ್ ಅಂಡ್ ವೆಡ್ಡಿಂಗ್ ಫೋಟೋಗ್ರಫಿ ಸಂಸ್ಥೆ: ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ಎಂಬ ಸೆಲೆಬ್ರೆಟಿಗಳ ಚಂದದ ಫೋಟೋಶೂಟ್ ಕಂಪನಿ…

ಈಗಂತೂ ಯಾವುದೇ ಸಮಾರಂಭವಾದ್ರೂ ಸರಿ ಸಂತೋಷದ ಘಳಿಗೆಗಳನ್ನ ಫೋಟೋಶೂಟ್, ವೀಡಿಯೋ ಮಾಡೋ ಮೂಲಕ ಸೆರೆ ಹಿಡಿದು ನೆನಪುಗಳನ್ನ ಜೀವಂತವಾಗಿ ಸಂಭ್ರಮಿಸುವ ಟ್ರೆಂಡ್ ಜೋರಾಗಿದೆ. ಪ್ರಿ ವೆಡ್ಡಿಂಗ್, ಎಂಗೇಜ್ ಮೆಂಟ್, ಮದುವೆ, ಸೀಮಂತ, ಗೃಹ ಪ್ರವೇಶ ಅನೇಕ ಕಾರ್ಯಕ್ರಮಗಳ ಮೆರುಗನ್ನ ಹೆಚ್ಚಿಸಲೆಂದೇ ಈಗ ತರಹೇವಾರಿ ಟೆಕ್ನಾಲಜಿಯೊಂದಿಗೆ ಫೋಟೋಶೂಟ್ ಈವೆಂಟ್ ಮ್ಯಾನೇಜ್‌ ಮೆಂಟ್ ಸಂಸ್ಥೆಗಳು ತಲೆ ಎತ್ತಿವೆ. ಅಂತಹ ಸಂಸ್ಥೆಗಳಲ್ಲಿ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ಸಂಸ್ಥೆ ಚಂದನವನದ ಅಂಗಳದಲ್ಲಿ ಮುಂಚೂಣಿಯಲ್ಲಿದೆ.

ಹೌದು, 2015 ರಲ್ಲಿ ಆರಂಭಗೊಂಡ ಈ ಸಂಸ್ಥೆ ಸೆಲೆಬ್ರೆಟಿಗಳ ಅಚ್ಚು ಮೆಚ್ಚಿನ ಈವೆಂಟ್ ಅಂಡ್ ವೆಡ್ಡಿಂಗ್ ಪೋಟೋಶೂಟ್ ಸಂಸ್ಥೆ. ಸ್ಯಾಂಡಲ್ ವುಡ್ ರಾಕಿಂಗ್ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಪರ್ಸನಲ್ ಹಾಗೂ ಸಿನಿ ಸಂಬಂಧಿತ ಎಲ್ಲಾ ಚಂದದ ಸ್ಟಿಲ್ಸ್ ಹಿಂದೆ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ತಂಡದ ಶ್ರಮವಿದೆ. ರಾಕಿಂಗ್ ದಂಪತಿಗಳಿಗೆ ಇವರ ಸಂಸ್ಥೆ ಎಂದರೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ಫೋಕಸ್ ಫೋಟೋಗ್ರಫಿ ಸರ್ವಿಸ್ ತಂಡದ ಹಾಜರಿ ಇರಲೇಬೇಕು. ಅಷ್ಟರ ಮಟ್ಟಿಗೆ ಯಶ್ ಕುಟುಂಬಕ್ಕೆ ಆತ್ಮೀಯ ಈ ಸಂಸ್ಥೆ.

ಕೆಲಸದಲ್ಲಿ ನೋ ಕಾಂಪ್ರಮೈಸ್, ಟೈಂ ಟು ಟೈಂ ಸರ್ವಿಸ್ ಅನ್ನೋ ಈ ಸಂಸ್ಥೆ ಏಳು ವರ್ಷದಲ್ಲಿ ಈ ಸೂತ್ರದಿಂದಲೇ ಬಹಳ ಎತ್ತರಕ್ಕೆ ಬೆಳೆದಿದೆ. ಎಲ್ಲಾ ರೀತಿಯ ಈವೆಂಟ್ ಹಾಗೂ ವೆಡ್ಡಿಂಗ್ ಫೋಟೋಶೂಟ್ ಗಳನ್ನು ಬಹಳ ಅಚ್ಚುಕಟ್ಟಾಗಿ ಇಲ್ಲಿ ಮಾಡಿಕೊಡಲಾಗುತ್ತೆ. ಪೋಟೋಗ್ರಫಿ, ಎಡಿಟಿಂಗ್ ಎಲ್ಲದಕ್ಕೂ ಸೂಕ್ತ ಮ್ಯಾನ್ ಪವರ್ ಕೂಡ ಇದ್ದು ಇಡೀ ತಂಡ ಪರಿಶ್ರಮ ವಹಿಸಿ ನಿರಂತರವಾಗಿ ದುಡಿಯುತ್ತಿದ್ದಾರೆ. ಇವರ ಕೆಲಸದ ವೈಖರಿ ಹಾಗೂ ಕ್ವಾಲಿಟಿ ನೋಡಿಯೇ ಇಲ್ಲಿವರೆಗೂ ಹೈ ಪ್ರೊಫೈಲ್ ಪ್ರಾಜೆಕ್ಟ್ ಗಳು ಸಂಸ್ಥೆ ಪಾಲಾಗಿದೆ.

ಪಬ್ಲಿಕ್ ಟಿವಿ ರಂಗನಾಥ್ ಮಗಳ ಮದುವೆ, ನಟ ರಮೇಶ್ ಅರವಿಂದ್ ಪರ್ಸನಲ್ ಪೋಟೋ ಶೂಟ್ ಮಗಳ ರಿಸೆಫ್ಷನ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಮನೆ ಹಾಗೂ ಸಿನಿ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳು, ನಿಖಿಲ್ ಕುಮಾರ್ ಸ್ವಾಮಿ ಎಂಗೇಜ್ ಮೆಂಟ್, ಸಚಿವ ಶ್ರೀರಾಮುಲು ಮಗಳ ಎಂಗೇಜ್ ಮೆಂಟ್,
ಹೊಂಬಾಳೆ ಫಿಲ್ಮಂಸ್ ಎಲ್ಲಾ ಈವೆಂಟ್ ಗಳು ಈ ಎಲ್ಲಾ ಹೈ ಪ್ರೊಫೈಲ್ ಈವೆಂಟ್ ಗಳ ಹಿಂದೆ ದುಡಿದಿರುವ ಸಂಸ್ಥೆ ‘ಫೋಕಸ್ ಫೋಟೋಗ್ರಫಿ’. ಇವರೆಲ್ಲರೂ ತಂಡದ ಶ್ರಮವನ್ನ ಮೆಚ್ಚಿ ಅಪ್ಪಿಕೊಂಡಿರೋದು ಈ ಸಂಸ್ಥೆಯ ಬಲವನ್ನ ದುಪ್ಪಟ್ಟಾಗಿಸಿದೆ.
ಹಾಗಂತ ಚಂದನವನದ ತಾರೆಯರ ಈವೆಂಟ್ ಹಾಗೂ ಫೋಟೋಶೂಟ್ ಮಾತ್ರವಲ್ಲದೇ ಹೊರಗಿನ ಎಲ್ಲಾ ಈವೆಂಟ್ ಗಳನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಕೊಡುವಲ್ಲಿ ಯಶಸ್ವಿಯಾಗಿದೆ ಫೋಕಸ್ ಫೋಟೋಗ್ರಫಿ ಸಂಸ್ಥೆ.

ಸ್ಯಾಂಡಲ್ ವುಡ್ ಮಾತ್ರವಲ್ಲದೇ ಜನ ಸಾಮಾನ್ಯರ ಬಹುಬೇಡಿಕೆಯ ಸಂಸ್ಥೆಯಾಗಿರುವ ‘ಫೋಕಸ್ ಫೋಟೋಗ್ರಫಿ ಸಂಸ್ಥೆ’ ನಾಗಾರಾಜ್ ಸೋಮಯಾಜಿಯವರ ಕನಸಿನ ಕೂಸು. ‘ಸಂಚಾರಿ’ ರಂಗಭೂಮಿಯಿಂದ ಬಂದ ಇವರು
ಚಿತ್ರರಂಗದ ಚಿರಪರಿಚಿತ ಮುಖ. ಪೋಟೋಗ್ರಫಿಯಲ್ಲಿ ಅಪಾರ ಪ್ಯಾಶನ್ ಇದ್ದಿದ್ದರಿಂದ ಅದು ‘ಫೋಕಸ್ ಪೋಟೋಗ್ರಫಿ ಸರ್ವಿಸ್’ ಸಂಸ್ಥೆ ತೆರೆಯುವವರೆಗೆ ತಂದು ನಿಲ್ಲಿಸಿತ್ತು. ಇದೀಗ ಈ ಸಂಸ್ಥೆ ಏಳು ವರ್ಷ ಯಶಸ್ವಿಯಾಗಿ ಪೂರೈಸಿ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಉತ್ತಮ ಸರ್ವಿಸ್ ಕೊಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ. ಅದನ್ನು ಅಚ್ಚುಕಟ್ಟಾಗಿ ನಮ್ಮ ತಂಡ ಪಾಲಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಕೆಲಸ ನೋಡಿಯೇ ಕ್ಲೈಂಟ್ ಜಾಸ್ತಿ ಆಗ್ತಿದ್ದಾರೆ ಇದಕ್ಕಿಂತ ಖುಷಿಯ ಸಂಗತಿ ಇನ್ನೇನಿದೆ ಎನ್ನುತ್ತಾರೆ ನಾಗಾರಾಜ್ ಸೋಮಯಾಜಿ.
ರಂಗಭೂಮಿಯಿಂದ ಬಂದ ನಾಗಾರಾಜ್ ಸೋಮಯಾಜಿ ಅವರಿಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿಯಿದ್ದು
‘ದಿ ಬೆಸ್ಟ್ ಆಕ್ಟರ್’ ಎಂಬ 45 ನಿಮಿಷದ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನೂ ಸಾಬೀತು ಪಡಿಸಿದ್ದಾರೆ.

ನಿಮ್ಮ ನೆಚ್ಚಿನ ಸೆಲೆಬ್ರೆಟಿ ಫೋಟೋಗಳನ್ನ ನೋಡಿ ವಾವ್ ಎಷ್ಟು ಸಖತ್ ಆಗಿ ಪೋಟೋ ತೆಗೆದಿದ್ದಾರೆ ಅಂತಿರೋರು ಡೈರೆಕ್ಟ್ ಆಗಿ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ತಂಡವನ್ನ ಭೇಟಿ ಮಾಡಿ, ನಿಮ್ಮ‌ ಜೀವನದ ಚಂದದ ಕ್ಷಣಗಳನ್ನು ಸೆರೆಹಿಡಿದುಕೊಳ್ಳಬಹುದು.

Categories
ಸಿನಿ ಸುದ್ದಿ

ವಾಸಂತಿ ನಲಿಯೋ ಸಮಯ! ಅ.14ಕ್ಕೆ ವಾಸಂತಿ ಭರ್ಜರಿ ದರ್ಶನ…

ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿರುವ ವಾಸಂತಿ ನಲಿದಾಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕೇಳ್ರಪ್ಪೋ ಕೇಳಿ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಈ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಒಂದೊಳ್ಳೆ ತಂಡ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ಒಂದು ವರ್ಷದ ಜರ್ನಿ ಇದು. ಯೂತ್ ಫುಲ್ ಎಂಟರ್ ಟ್ರೈನ್ಮೆಂಟ್ ಚಿತ್ರವಿದು. ಕಂಟೆಂಟ್ ತುಂಬಾ ಚೆನ್ನಾಗಿದೆ ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡರು.

ನಿರ್ಮಾಪಕ ಕೆ.ಎನ್.ಶ್ರೀಧರ್ ಮಾತನಾಡಿ, ಸಿನಿಮಾದ ಕೌಂಟ್ ಡೌನ್ ಶುರುವಾಗಿದೆ. ಇನ್ನೂ 30 ದಿನಕ್ಕೆ ಸಿನಿಮಾ ಬೆಳ್ಳಿತೆರೆ ಮೇಲೆ ಇರುತ್ತದೆ. ರಾಜ್ಯಾದ್ಯಂತ ಸಿನಿಮಾವನ್ನು ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ಚಂದ್ರಣ್ಣ, ಭೋಗಣ್ಣ ಜಯಣ್ಣ ನಮ್ಮ ಸಿನಿಮಾ ತಂಡದ ವತಿಯಿಂದ ಧನ್ಯವಾದ. ಮನೆ ಮಂದಿ ಕುಳಿತು ನೋಡುವ ಚಿತ್ರವಿದು. ಅಕ್ಟೋಬರ್ 14ರಂದು ಸಿನಿಮಾ ತೆರೆಗೆ ಬರ್ತಿದೆ ಪ್ರತಿಯೊಬ್ಬರು ಬೆಂಬಲ ಕೊಡಿ ಎಂದರು.

ಕಾಲೇಜ್ ಸ್ಟೋರಿ ಜೊತೆಗೆ ಒಂದೊಳ್ಳೆ ಪ್ರೇಮಕಥನ ಒಳಗೊಂಡಿರುವ ವಾಸಂತಿ ನಲಿದಾಗ ಸಿನಿಮಾಗೆ ರವೀಂದ್ರ ವೆಂಶಿ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ, ಭಾವನಾ ಶ್ರೀನಿವಾಸ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.

ಚಿತ್ರಕ್ಕೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣವಿದೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕರ ಮುನ್ನುಡಿ ಬರೆದಿರುವ ಚಿತ್ರತಂಡ ಮುಂದಿನ ಅಕ್ಟೋಬರ್ 14ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.

Categories
ಸಿನಿ ಸುದ್ದಿ

ಅಕ್ಟೋಬರ್ 14ಕ್ಕೆ ಶುಭಮಂಗಳ ಆಗಮನ: ಟ್ರೇಲರ್ ಅನಾವರಣ…

ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗೋದು ಹೊಸತಲ್ಲ. ಈಗ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಶುಭಮಂಗಳ’ ಚಿತ್ರದ ಟೈಟಲ್ ಇಟ್ಟುಕೊಂಡು ಬಂದಿರುವ ಹೊಸ ಚಿತ್ರ ಶುಭಮಂಗಳ ರಿಲೀಸ್ ಗೆ ಸಜ್ಜಾಗಿದೆ. ಸಖತ್ ಮಜವಾಗಿರುವ ಟೀಸರ್ ಝಲಕ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ, ಈಗ ಟ್ರೇಲರ್ ಅನಾವರಣ ಮಾಡಿದೆ. ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿದ್ದು, ಇಡೀ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಸಂತೋಷ್ ಗೋಪಾಲ್ ಮಾತನಾಡಿ, ಮದುವೆ ಮನೆಯಲ್ಲಿ ನಡೆಯುವ ಕಥೆ ಇದು. ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್, ಡ್ರಾಮಾ, ತುಂಬಾ ಕಥೆಗಳು ನಡೆಯುತ್ತಲೆ ಇರುತ್ತದೆ. ಆ ಕಥೆಗಳಲ್ಲಿ ಐದು ಆಯ್ಕೆ ಮಾಡಿ ಸಿನಿಮಾ ಮಾಡಿದ್ದೇನೆ. ಈ ಚಿತ್ರದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಇಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ. ದಯವಿಟ್ಟು ಬೆಂಬಲ ಕೊಡಿ ಎಂದರು.

ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್ ಗೋಪಾಲ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದು, ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ. ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಲಾಜಿ ಮುಂತಾದವರು ನಟಿಸಿದ್ದಾರೆ.

ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ಬಿ ರಾಜ್ ಕ್ಯಾಮೆರಾ, ಸಂತೋಷ್ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವ್ಯಕ್ತ ಫಿಲ್ಮಂಸ್ ನಡಿ ಸಂತೋಷ್ ಸ್ನೇಹಿತರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮದುವೆಗೆ ಮನೆಗೆ ತೆರಳಿ ವಿಭಿನ್ನವಾಗಿ ಪ್ರಮೋಷನ್ ನಡೆಸ್ತಿರುವ ಚಿತ್ರತಂಡ ಬರುವ ಅಕ್ಟೋಬರ್ 14ಕ್ಕೆ ಚಿತ್ರವನ್ನು ತೆರೆಗೆ ತರಲಿದೆ.

Categories
ಸಿನಿ ಸುದ್ದಿ

ಇದು ಕನ್ನಡದ ಆಶಿಕಿ! ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ…

ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದ ಆಶಿಕಿ ಸಿನಿಮಾ ತಂಡ ಆಡಿಯೋ ಬಿಡುಗಡೆ ಮಾಡಿದೆ. ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಜರುಗಿತು. ನಟ ಅಜಯ್ ರಾವ್, ನಿರ್ದೇಶಕ ಬಹದ್ದೂರ್ ಚೇತನ್, ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಇಡೀ ಆಶಿಕಿ ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಅಜಯ್ ರಾವ್, ಪ್ರಯತ್ನ ಅನ್ನುವುದು ಒಂದು ಯಶಸ್ಸು. ಪ್ರಯತ್ನ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ಯಾವುದಕ್ಕೂ ಸಾರ್ಥಕತೆ ಇರುವುದಿಲ್ಲ. ಮಹಿಳಾ ನಿರ್ದೇಶಕಿಯ ಪ್ರಯತ್ನ..ಸಂದೀಪ್ ತೆರೆಮೇಲೆ ಹೇಗೆ ಕಾಣಿಸುತ್ತಾರೆ. ನಾಯಕನಾಗಿ ಪಾತ್ರ ಹೇಗೆ ಪಾತ್ರ ನಿರ್ವಹಿಸುತ್ತಾರೆ ಅನ್ನೋದನ್ನು ನೋಡೋದಿಕ್ಕೆ ನಾನು ಕಾತುರನಾಗಿದ್ದೆ. ಸಂದೀಪ್ ಅವರ ದೊಡ್ಡ ಜರ್ನಿ ಇಲ್ಲಿಂದ ಸಾಗಲಿ. ನಿರ್ಮಾಪಕರಿಗೆ ದುಡ್ಡು ಬರಲಿ. ನನ್ನ ಸಿನಿಮಾ ಜರ್ನಿಯಲ್ಲಿ ದುಡ್ಡು ಮಾಡಿದ್ದನ್ನು ನೋಡಿದ್ದೇನೆ. ಕಳೆದುಕೊಂಡಿದ್ದನ್ನು ನೋಡಿದ್ದೇನೆ. ನಿರ್ಮಾಪಕರಿಗೆ ಒಳ್ಳೆ ದುಡ್ಡು ಬಂದರೆ ಇಡೀ ಸಿನಿಮಾ ಗೆದ್ದಂತೆ ಎಂದು ತಿಳಿಸಿದರು.

ನಿರ್ದೇಶಕಿ ಜೆ.ಚಂದ್ರಕಲಾ, ಮಹಿಳಾ ನಿರ್ದೇಶಕಿರು ಬಳಹ ಅಪರೂಪ ಅಂತಾ ಎಲ್ಲರೂ ಹೇಳುತ್ತಿದ್ದರು. ಯಾಕೆ ವಿರಳ ಅಂದರೆ. ಮಹಿಳಾ ನಿರ್ದೇಶಕಿಯರನ್ನು ನಂಬಿಕೊಂಡು ಯಾವ ನಿರ್ಮಾಪಕರು ದುಡ್ಡ ಹಾಕುತ್ತಾರೆ. ನಾನು ಇಂಡಸ್ಟ್ರೀಗೆ ಬಂದು ಹದಿನಾರರಿಂದ ಹದಿನೇಳು ವರ್ಷವಾಯ್ತು. ಏನೂ ದಬಾಕೋಕೆ ಆಗಿಲ್ಲ. ನಾನು ಏನಾದರೂ ಪ್ರೋವ್ ಮಾಡಬೇಕು. ನಾವುಗಳು ಅದೇ ಪ್ರಯತ್ನದಲ್ಲಿ ಇದ್ದೇವೆ. ಆಶಿಕಿ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ಲಿಯೋ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಸಿನಿಮಾಗೆ ಸಪೋರ್ಟ್ ಮಾಡಿ ಎಂದರು.

ನಿರ್ಮಾಪಕ ಜಿ ಚಂದ್ರಶೇಖರ್ ಮಾತನಾಡಿ, ಸಿನಿಮಾಗೆ ಪ್ರೋತ್ಸಾಹ ಕೊಟ್ಟ ಎಲ್ಲಾ ಟೆಕ್ನಿಷಿಯನ್ಸ್. ನನ್ನ ಸ್ನೇಹಿತರಿಗೆ ಎಲ್ಲರಿಗೂ ಧನ್ಯವಾದ. ನನ್ನ ಚಿತ್ರದ ಬಗ್ಗೆ ನಾನು ಮಾತಾಡಿದರೆ ಚೆನ್ನಾಗಿರುವುದಿಲ್ಲ. ಜನರು ನೋಡಿ ಮಾತನಾಡಬೇಕು ಎಂದು ತಿಳಿಸಿದರು.

ಜೆ ಚಂದ್ರಕಲಾ(JCK) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಾಕಷ್ಟು ವರ್ಷ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸಂದೀಪ್ ಕುಮಾರ್, ಪ್ರದೀಪ್ ರಾಜ್ ನಾಯಕರಾಗಿ ಅಭಿನಯಿಸಿದ್ದು, ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಬಣ್ಣ ಹಚ್ಚಿದ್ದಾರೆ. ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಹಿರಿಯ ತಾರಾಬಳಗ ಚಿತ್ರದಲ್ಲಿದೆ.

ಮ್ಯೂಸಿಕಲ್ ಲವ್ ಸ್ಟೋರಿ ಜೊತೆಗೆ ತ್ರಿಕೋನ ಪ್ರೇಮಕಥೆ ಹೊತ್ತ ‘ಆಶಿಕಿ’ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಪ್ರತಿ ಹಾಡುಗಳು ಡಿಫ್ರೆಂಟ್ ಆಗಿ ಮೂಡಿಬಂದಿವೆ. ಶ್ರೀ ಲಕ್ಷ್ಮೀ ನರಸಿಂಹ ಮೂವೀಸ್ ಬ್ಯಾನರ್ ನಡಿ ಜಿ ಚಂದ್ರಶೇಖರ್ ಬಂಡವಾಳ ಹೂಡಿದ್ದು, ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಾಹಣ, ಲಿಯೋ ಸಂಗೀತ ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಪಾಸಾಗಿರುವ ಆಶಿಕಿ ಸಿನಿಮಾ ದಸರಾಗೆ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ನಮ್​ ಕನಸ ಕನ್ನಡ: ‘ಆಕಾಶವಾಣಿ ಮೈಸೂರು ಕೇಂದ್ರ’ದಿಂದ ಹಾಡು ಬಂತು…

ಸತೀಶ್​ ಬತ್ತುಲ ನಿರ್ದೇಶನದ ‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಿಂದ ಇನ್ನೊಂದು ಹೊಸ ಹಾಡು ಹೊರಬಂದಿದೆ. ‘ನಮ್​ ಕನಸ ಕನ್ನಡ …’ ಎಂದು ಸಾಗುವ ಈ ಹಾಡಿಗೆ ಎಲ್.ಎನ್.ಸೂರ್ಯ ಸಾಹಿತ್ಯ ರಚಿಸಿದ್ದು, ಜನಾರ್ದನ್​ ಮತ್ತು ಸಿ.ಎಚ್.ಶ್ರೀಕೃತಿ ಧ್ವನಿಯಾಗಿದ್ದಾರೆ. ಕಾರ್ತಿಕ್ ಕೊಡಕಂಡ್ಲ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಇದೀಗ ಯೂಟ್ಯೂಬ್​ನ ಮಿಥುನ ಮ್ಯೂಸಿಕ್​ ಚಾನಲ್​ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿದೆ.


‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರವನ್ನು ‘ಜಬರ್ದಸ್ತ್’ ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿದ್ದಾರೆ. ಶಿವಕುಮಾರ್, ಅಕ್ಷತಾ ಶ್ರೀಧರ್ ಮತ್ತು ಅರ್ಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಮಿಥುನಾ ಎಂಟರ್‌ಟೈನ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೈನ್ಸ್ ಸ್ಟುಡಿಯೋಸ್​ನಡಿ ಎಂ.ಎಂ. ಅರ್ಜುನ್ ಮತ್ತು ಕಮಲ್ ಮೇಡಗೋಣಿ ನಿರ್ಮಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್​ ಥ್ರಿಲ್ಲರ್​ ಚಿತ್ರವಾಗಿದ್ದು, ಏಕಕಾಲದಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲನಲ್ಲಿ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ.


ಈ ಪ್ಯಾನ್​ ಇಂಡಿಯಾ ಚಿತ್ರದ ಬಗ್ಗೆ ಕುರಿತು ಮಾತನಾಡುವ ನಿರ್ಮಾಪಕರಾದ ಎಂ.ಎಂ.ಅರ್ಜುನ್ ಮತ್ತು ಕಮಲ್ ಮೇಡಗೋಣಿ, ‘ನಿರ್ದೇಶಕ ಸತೀಶ್ ಅವರ ನಿರೂಪಣೆ ನಮಗೆ ಇಷ್ಟವಾಯಿತು. ಚಿತ್ರವನ್ನು ಬಹಳ ಚೆನ್ನಾಗಿ ರೂಪಿಸಿದ್ದಾರೆ ಅವರು. ನಿರ್ಮಾಪಕನಾಗಿ ನಾನು ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ಇದೆ. ಇದೊಂದು ಯೂನಿವರ್ಸಲ್ ಕಥೆಯಾದ್ದರಿಂದ ಪ್ಯಾನ್​-ಇಂಡಿಯಾ ಚಿತ್ರವನ್ನಾಗಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಚಿತ್ರದ ಎರಡನೇ ಹಾಡಾಗಿದ್ದು, ಇದಕ್ಕೂ ಮುನ್ನ ‘ನಿನ್ನ ನೋಡಿದ …’ ಎಂಬ ಹಾಡು ಬಿಡುಗಡೆಯಾಗಿದೆ. ಶೀಘ್ರದಲ್ಲೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ’ ಎನ್ನುತ್ತಾರೆ.


ಇದೊಂದು ವಿಭಿನ್ನ ಲವ್ ಎಂಟರ್‌ಟೈನರ್ ಎನ್ನುವ ನಿರ್ದೇಶಕ ಸತೀಶ್ ಬತ್ತುಲ, ‘ಇದೊಂದು ವಿಭಿನ್ನ ಕಥೆ ಇರುವ ಚಿತ್ರ. ನಿರ್ಮಾಪಕರ ಬೆಂಬಲವು ನಮ್ಮನ್ನು ಇಲ್ಲಿಯವರೆಗೆ ಕರೆದೊಯ್ದಿದೆ. ಈ ಪ್ಯಾನ್ ಇಂಡಿಯಾ ಚಿತ್ರವನ್ನು ಎಲ್ಲೂ ರಾಜಿ ಮಾಡಿಕೊಳ್ಳದೆ ನಿರ್ಮಿಸಲಾಗಿದೆ. ನಮ್ಮ ಸಿನಿಮಾದಲ್ಲಿ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದು, ಸಂಗೀತ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಅದ್ಭುವಾಗಿ ಮೂಡಿಬಂದಿದೆ’ ಎನ್ನುತ್ತಾರೆ.


‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಲ್ಲಿ ಶಿವಕುಮಾರ್, ಹುಮೇ ಚಂದ್, ಅಕ್ಷತಾ ಶ್ರೀಧರ್, ಅರ್ಚನಾ, ಮಾಧವಿ ಲತಾ ಮುಂತಾದವರು ನಟಿಸಿದ್ದು, ಆರೀಫ್​​ ಲಲಾನಿ ಅವರ ಛಾಯಾಗ್ರಹಣ ಮತ್ತು ಕಾರ್ತಿಕ್ ಕೊಡಕಂಡ್ಲ ಅವರ ಸಂಗೀತ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಈ ವಾರ ಅಪ್ಪಳಿಸಲಿದೆ ಮಾನ್ಸೂನ್ ರಾಗ: ನೋಡೋರಿಗೆ ಖುಷಿ ಯೋಗ…

ನಟ ಡಾಲಿ ಧನಂಜಯ್, ರಚಿತಾರಾಮ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಮಾನ್ಸೂನ್ ರಾಗ ಸೆ.16 ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ತನ್ನ ಮೇಕಿಂಗ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲ‌ ಹುಟ್ಟಿಸಿರುವ ಚಿತ್ರ ಇದಾಗಿದ್ದು, ಬಡವ ರಾಸ್ಕಲ್, ರತ್ನನ್ ಪ್ರಪಂಚ ಚಿತ್ರಗಳ ನಂತರ ಧನಂಜಯ್ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವಿದು.


ಮಾನ್ಸೂನ್ ರಾಗ ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಇರುವ ಚಿತ್ರವಾಗಿದ್ದು,
ತನ್ನ ವಿಭಿನ್ನ ಟೀಸರ್ ಹಾಗೂ ಹಾಡಿನ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದೆ. ಧನಂಜಯ್ ಅವರ ಜೊತೆಗೆ ಬೆಡಗಿ ರಚಿತಾರಾಮ್ ನಾಯಕಿಯಾಗಿ
ಅಭಿನಯಿಸಿದ್ದಾರೆ. ಪುಷ್ಪಕವಿಮಾನ ಖ್ಯಾತಿಯ ರವೀಂದ್ರನಾಥ್ ಅವರ ನಿರ್ದೇಶನದಲ್ಲಿ
ಮೂಡಿಬಂದಿರುವ ಈ ಚಿತ್ರಕ್ಕೆ ವಿಖ್ಯಾತ್ ಎ.ಆರ್. ಅವರು ಬಂಡವಾಳ ಹಾಕಿ ನಿರ್ಮಿಸಿದ್ದಾರೆ.

ಇಡೀ ಚಿತ್ರದ ಕಥೆ ಮುಂಗಾರು ಮಳೆಯೊಳಗೇ ನಡೆಯುತ್ತದೆ ಎನ್ನಲಾಗಿದ್ದು, ಟೀಸರ್‌ನಲ್ಲಿ ಮಳೆಯ ಜೊತೆಗೆ ನೆರಳು ಬೆಳಕಿನ ಹಿನ್ನೆಲೆಯ ಚಿತ್ರೀಕರಣವೂ ಸೊಗಸಾಗಿ ಮೂಡಿಬಂದದೆ. ಎಸ್.ಕೆ. ರಾವ್
ಅವರ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದ್ದು, ಚಿತ್ರದ ಸುಂದರ ಹಾಡುಗಳಿಗೆ ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

Categories
ಸಿನಿ ಸುದ್ದಿ

ಯಶ್ ಶೆಟ್ಟಿ ಈಗ ಹೀರೋ! ರಾಘಣ್ಣನ ಸ್ಪೆಷಲ್ ಆಪರೇಷನ್: ಕಲಿವೀರ ನಿರ್ದೇಶಕರ ಸಿನಿಮಾಗೆ ಚಾಲನೆ…

ಕನ್ನಡ ದೇಶದೋಳ್, ಕಲಿವೀರ ಸಿನಿಮಾಗಳ ಸಾರಥಿ ಅವಿರಾಮ್ ಹೊಸ ಸಿನಿಮಾ ಸೆಟ್ಟೇರಿದೆ. ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಪರೇಷನ್ ಯು ಚಿತ್ರದಲ್ಲಿ ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕರಾಗಿ ಅಭಿನಯಿಸುತ್ತಿದ್ದು, ಸೋನಲ್ ಮೊಂಥೆರೋ-ಲಾಸ್ಯ ನಾಗರಾಜ್ ನಾಯಕಿಯರಾಗಿ ಬಣ್ಣ ಹಚ್ಚಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದ್ದು, ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ ಪತಿಗೆ ಸಿನಿಮಾಗೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಅವಿರಾಮ್ ಮಾತನಾಡಿ, ಅಪರೇಷನ್ ಯು ಟೈಟಲ್ ತುಂಬಾ ವಿಶೇಷವಾಗಿದೆ. ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಮಂಜುನಾಥ್ ಅವರಂತಹ ಫ್ಯಾಷನೇಟೇಡ್ ನಿರ್ಮಾಪಕರು ಈ ಚಿತ್ರ ನಿರ್ಮಾಣ ಮಾಡುತ್ತಿರುವುದು ಹೆಗ್ಗಳಿಕೆ. ಕಲಿವೀರ ಬಳಿಕ ಇದು ಒಳ್ಳೆ ಪ್ರಾಜೆಕ್ಟ್. ಇದು ಬೇರೆ ತರ ರೀತಿ ಸಿನಿಮಾ. ಚಿತ್ರದಲ್ಲಿ ರಾಘಣ್ಣ ಪಾತ್ರ ವಿಶೇಷವಾಗಿರುತ್ತದೆ. ಕಂಪ್ಲೀಟ್ ಆಗಿ ಇಲ್ಲಿ ರಿವೀಲ್ ಮಾಡಲು ಆಗುವುದಿಲ್ಲ. ಫಸ್ಟ್ ಲುಕ್ ಪ್ರೆಸೆಂಟ್ ಮಾಡಿದಾಗ ರಿವೀಲ್ ಮಾಡುತ್ತೇವೆ. ಸಮಾಜಕ್ಕೆ ಬೇಕಾದ ಮೋಟಿವೇಷನ್ ರೀಚ್ ಮಾಡುವ ಪಾತ್ರ ಇದಾಗಿದ್ದು, ರಾಘಣ್ಣ ನಮ್ಮ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿರುವುದು ನಮಗೆ ಖುಷಿ ಇದೆ ಎಂದರು.

ನಿರ್ಮಾಪಕರಾದ ಮಂಜುನಾಥ್, ನಾನು ನನ್ನ ಮಗಳಿಗೋಸ್ಕರ್ ಮಾಡುತ್ತಿರುವ ಸಿನಿಮಾವಿದು. ಶ್ರೀಲಂಕಾ ಹೋದಾಗ ಕೇಳಿದ ಸ್ಟೋರಿ ನಾನು. ಈ ಸ್ಟೋರಿ ಮಾಡಬೇಕು ಅಂತಾ ನನ್ನ ತಲೆಯಲ್ಲಿ ಬಂದಿದ್ದು. ಆ ಬಳಿಕ ನಿರ್ದೇಶಕರ ಜೊತೆ ಚರ್ಚೆ ನಡೆಸಿದ್ದೇವೆ. ನಿರ್ದೇಶಕರು ಈ ಸಿನಿಮಾಗೆ ತುಂಬಾ ಚೆನ್ನಾಗಿ ಜೀವ ತುಂಬಿದ್ದಾರೆ. ಸಿನಿಮಾದ ಕಥೆಗೆ ಬೇಕಾದ ಎಲ್ಲಾ ನಟರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸಿನಿಮಾನೇ ಹೀರೋ ಆಗಿದೆ ಎಂದು ತಿಳಿಸಿದರು.

ವಿದ್ಮಯಿ ಪ್ರೊಡಕ್ಷನ್ ನಡಿ ಉದ್ಯಮಿ ಮಂಜುನಾಥ್ ಎಂಬುವವರು ಚಿತ್ರ ನಿರ್ಮಾಣ ಮಾಡುತ್ತಿದ್ದು, ಆರ್ಮುಖ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕ ಅವಿನಾಶ್, ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವು ನಟಿಸುತ್ತಿದ್ದು, ರಾಘವೇಂದ್ರ ವಿ ಸಂಗೀತ, ಹಾಲೇಶ್ ಎಸ್ ಸಂಕಲನ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಆಪರೇಷನ್ ಯು ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಅಕ್ಟೋಬರ್ ಮೊದಲ ವಾರದಿಂದ ಶುರುವಾಗಲಿದೆ.

Categories
ಸಿನಿ ಸುದ್ದಿ

ರಾಜ್ಯೋತ್ಸವಕ್ಕೆ ರಾಣನ ಆಗಮನ: ನಂದಕಿಶೋರ್ ನಿರ್ದೇಶನದಲ್ಲಿ ಶ್ರೇಯಸ್ ಹೀರೋ…

ಕೆ.ಮಂಜು ಅರ್ಪಿಸುವ,
ಗುಜ್ಜಲ್ ಟಾಕೀಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಿಸಿರುವ, ನಂದಕಿಶೋರ್ ನಿರ್ದೇಶನದಲ್ಲಿ
ಶ್ರೇಯಸ್ ಕೆ ಮಂಜು ನಾಯಕನಾಗಿ ‌ಅಭಿನಯಿಸಿರುವ “ರಾಣ” ಚಿತ್ರ ನವೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‌ರೀಷ್ಮಾ ನಾಣಯ್ಯ ಈ ಚಿತ್ರದ ನಾಯಕಿ. ರಜನಿ ಭಾರದ್ವಾಜ್, ಅಶೋಕ್, ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕುಮಾರ್, ನಯನ, ರಘು, ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿದೆ. ರವಿವರ್ಮ, ಚೇತನ್,ಡಿಸೋಜ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ಗಾಳಿಪಟ ಬೆಡಗಿ ವೈಭವಿ ಶಾಂಡಿಲ್ಯ ಎಂಥ ಪಾತ್ರ ಹುಡುಕುತ್ತಿದ್ದಾರೆ ಗೊತ್ತಾ?

‘ಗಾಳಿಪಟ 2’ ಚಿತ್ರದಲ್ಲಿ ಅನಂತ್ ನಾಗ್, ಗಣೇಶ್, ದಿಗಂತ್, ರಂಗಾಯಣ ರಘು ಮುಂತಾದ ಪ್ರತಿಭಾವಂತ ಕಲಾವಿದರ ನಡುವೆ ಗಮನ ಸೆಳಯುವ ಇನ್ನೊಬ್ಬರೆಂದರೆ, ಅದು ಶ್ವೇತಾ ಪಾತ್ರಧಾರಿ ವೈಭವಿ ಶಾಂಡಿಲ್ಯ. ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ವೈಭವಿ ಮೂಲತಃ ಮರಾಠಿಯವರು. ಈಗಾಗಲೇ ಕೆಲವು ಮರಾಠಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ವೈಭವಿ, ಕೆಲವು ವರ್ಷಗಳ ಹಿಂದೆ ‘ರಾಜ್-ವಿಷ್ಣು’ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಗಾಳಿಪಟ 2 ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಭಿನಯ ಮತ್ತು ಚೆಲುವಿನಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.


ಶ್ವೇತಾ ಪಾತ್ರ ತಮ್ಮ ವೃತ್ತಿಜೀವನದಲ್ಲಿ ಬಹಳ ವಿಭಿನ್ನವಾದ ಪಾತ್ರ ಎನ್ನುವ ವೈಭವಿ, ‘ನಾನು ನಿಜಜೀವನದಲ್ಲಿ ಬಹಳ ಮಾತನಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನನಗೆ ಅದಕ್ಕೆ ವಿರುದ್ಧವಾದ ಪಾತ್ರ. ಇಲ್ಲಿ ಮಾತು ಕಡಿಮೆ. ಅಷ್ಟೇ ಅಲ್ಲ, ಪ್ರಬುದ್ಧವಾಗಿರುವ ಜೊತೆಗೆ ಎಮೋಷನಲ್ ಆಗಿ ಇರುವಂತಹ ಪಾತ್ರ ನನ್ನದು. ಹಾಗಾಗಿ, ಶ್ವೇತಾ ಪಾತ್ರ ನನಗೆ ಬಹಳ ಕಷ್ಟವಾಯಿತು. ಆದರೆ, ಇಡೀ ಚಿತ್ರತಂಡದ ಸಹಾಯದೊಂದಿಗೆ ಆ ಪಾತ್ರ ನಿರ್ವಹಿಸಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಿಜಕ್ಕೂ ಸವಾಲಿನದ್ದಾಗಿತ್ತು. ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು ನಟಿಸಿದ್ದು ಫಲ ನೀಡಿದೆ.

ಜನರ ಪ್ರೀತಿ ನೋಡಿದಾಗ ಬಹಳ ಖುಷಿಯಾಗುತ್ತದೆ’ ಎನ್ನುತ್ತಾರೆ ವೈಭವಿ.
ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಅಭಿನಯವನ್ನು ಜನ ಗುರುತಿಸಿ ಮಾತನಾಡುವಾಗ ಹೃದಯ ತುಂಬಿ ಬರುತ್ತದೆ ಎನ್ನುವ ವೈಭವಿ, ‘ನಾನು ನನ್ನ ಕುಟುಂಬದವರೊಡನೆ ಮುಂಬೈನಲ್ಲಿ ಗಾಳಿಪಟ 2 ನೋಡುವುದಕ್ಕೆ ಹೋಗಿದ್ದೆ. ಚಿತ್ರ ನೋಡುವುದಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು ಮತ್ತು ಅವರೆಲ್ಲರೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿದರು. ಇತ್ತೀಚೆಗೆ ಉಡುಪಿ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲೂ, ನನ್ನನ್ನು ಗಾಳಿಪಟ 2 ಹುಡುಗಿ ಎಂದು ಗುರುತಿಸಿ ಸೆಲ್ಫಿ ತೆಗೆಸಿಕೊಂಡಿದ್ದನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ.


ಸದ್ಯ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ವೈಭವಿ, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ‘’ಮಾರ್ಟಿನ್’ ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ. ಅದು ಇನ್ನೊಂದು ಅದ್ಭುತವಾದ ಅನುಭವ. ಈ ಪಾತ್ರ ನನ್ನ ನಿಜಜೀವನಕ್ಕೆ ಬಹಳ ಹತ್ತಿರವಾದ ಪಾತ್ರ. ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಯಾರಿಗೂ ಹೆದರದ, ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಹೊತ್ತಿರುವ ಗಟ್ಟಿ ಹುಡುಗಿಯಾಗಿ ಕಾನಿಸಿಕೊಂಡಿದ್ದೇನೆ’ ಎನ್ನುತ್ತಾರೆ ವೈಭವಿ.


ಒಬ್ಬ ನಟಿಯಾಗಿ ವಿಭಿನ್ನ ಪ್ರಯೋಗಗಳನ್ನು ಮಾಡುವುದಕ್ಕೆ ಇಷ್ಟ ಎನ್ನುವ ವೈಭವಿ, ‘ಯಾವುದೋ ಒಂದು ತರಹದ ಪಾತ್ರಕ್ಕೆ ನನಗೆ ಸೀಮಿತವಾಗುವುದಕ್ಕೆ ಇಷ್ಟವಿಲ್ಲ. ನನಗೆ ಡ್ರಗ್ ಅಡಿಕ್ಟ್ ಆಗಿ ನಟಿಸುವಾಸೆ. ಹಾರರ್ ಚಿತ್ರದಲ್ಲಿ ನಟಿಸುವಾಸೆ. ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವಾಸೆ. ಸೂಕ್ಷ್ಮಸಂವೇದನೆಯ ಚಿತ್ರಗಳ ಜೊತೆಗೆ ರಾಜಮೌಳಿ ಅವರ ಶೈಲಿಯ ಲಾರ್ಜರ್ ದ್ಯಾನ್ ಲೈಫ್ ಚಿತ್ರಗಳಲ್ಲೂ ನಟಿಸುವುದಕ್ಕೆ ಆಸೆ ಇದೆ. ಎಲ್ಲ ತರಹದ ಪಾತ್ರಗಳನ್ನು, ಎಲ್ಲ ಶೈಲಿಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ’ ಎನ್ನುವ ವೈಭವಿ, ಸದ್ಯಕ್ಕೆ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲವಂತೆ.


‘ಸದ್ಯ ಹಲವು ಆಫರ್ ಇದೆ. ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ, ಯಾವುದನ್ನೂ ಓಕೆ ಮಾಡಿಲ್ಲ. ಎಂತಹ ಪಾತ್ರಗಳನ್ನು ಬೇಕಾದರೂ ಮಾಡಬಲ್ಲೆ ಎಂದು ತೋರಿಸಬೇಕು. ನಾನೊಬ್ಬ ವರ್ಸಟೈಲ್ ನಟಿ ಎಂದು ನಿರೂಪಿಸಬೇಕು. ಹಾಗಾಗಿ, ಅಂತಹ ಪಾತ್ರಗಳ ಆಯ್ಕೆ ಮತ್ತು ಹುಡುಕಾಟದಲ್ಲಿದ್ದೇನೆ. ಸದ್ಯದಲ್ಲೇ ಒಂದೊಳ್ಳೆಯ ಸುದ್ದಿ ಕೊಡುತ್ತೇನೆ’ ಎನ್ನುತ್ತಾರೆ ವೈಭವಿ.

Categories
ಸಿನಿ ಸುದ್ದಿ

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಕಬ್ಜ ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್…

ಕನ್ನಡದ ಹೆಮ್ಮೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”ದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 17 ರ ಸಂಜೆ 5 ಗಂಟೆಗೆ ಆನಂದ್ ಆಡಿಯೋ ಮೂಲಕ ಬಹು ನಿರೀಕ್ಷಿತ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಆರಂಭದಿಂದಲೂ ಭಾರತದಾದ್ಯಂತ ಮನೆ ಮಾತಾಗಿದೆ.
ಈ ಚಿತ್ರದ ಟೀಸರ್ ಯಾವಾಗ ಬರಬಹುದೆಂದು ಕರ್ನಾಟಕ ಮಾತ್ರವಲ್ಲದೆ, ದೇಶದೆಲ್ಲೆಡೆಯಿರುವ ಅಭಿಮಾನಿ ಸಮೂಹ ಕಾತುರದಿಂದ ಕಾಯುತ್ತಿತ್ತು. ಈಗ ಆ ಸಮಯ ನಿಗದಿಯಾಗಿದೆ. ಚಿತ್ರದ ನಾಯಕ ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ “ಕಬ್ಜ” ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.

ಕನ್ನಡಿಗರ ಹೆಮ್ಮೆಯ “ಕೆ.ಜಿ.ಎಫ್ 2” ಚಿತ್ರ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದೆ‌. ಕನ್ನಡಿಗರ ಮತ್ತೊಂದು ಹೆಮ್ಮೆಯ “ಕಬ್ಜ” ಚಿತ್ರ ಕೂಡ ಗೆಲ್ಲಲೇಬೇಕು. ಚಿತ್ರತಂಡದ ಅಪಾರ ಶ್ರಮದಿಂದ ನಿರ್ಮಾಣವಾಗಿರುವ “ಕಬ್ಜ” ಚಿತ್ರ ಗೆದ್ದರೆ ಕನ್ನಡ ಚಿತ್ರ ಗೆದ್ದಂತೆ.

ಈ ಚಿತ್ರ ಗೆದ್ದರೆ ಮತ್ತೊಮ್ಮೆ ಬಾಲಿವುಡ್ ನಲ್ಲಿ ನಾವೇ ನಂಬರ್ ಒನ್ ಆಗಲಿದ್ದೇವೆ ಎನ್ನುತ್ತಿರುವ ಕನ್ನಡ ಕಲಾಭಿಮಾನಿಗಳು, “ಕಬ್ಜ” ಪ್ಯಾನ್ ಇಂಡಿಯಾ ಚಿತ್ರ ಪ್ರಪಂಚದಾದ್ಯಂತ ಪ್ರಚಂಡ ಯಶಸ್ಸು ಸಾಧಿಸಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತಿದ್ದಾರೆ.

ಆರ್ ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. .

ಸೆಪ್ಟೆಂಬರ್ ಹದಿನೇಳರಂದು ಟೀಸರ್ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಚಿತ್ರದ
ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಆರ್ ಚಂದ್ರು ಹೇಳಿದ್ದಾರೆ.

error: Content is protected !!