ನಮ್ ಟಾಕೀಸ್ ನೇತೃತ್ವದಲ್ಲಿ, ಭರತ್ ಅವರು ಆಯೋಜಿಸಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ ಸೀಸನ್ -9 ಈ ಬಾರಿ ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರ ಆಶೀರ್ವಾದದೊಂದಿಗೆ ನಡೆಯಲಿದೆ. ಪ್ರತಿವರ್ಷ ದಿಗ್ಗಜರ ಕಲಾವಿದರ ಹೆಸರಿನಲ್ಲಿ ಕ್ರಿಕೆಟ್ ಪಂದ್ಯವನ್ನು ಭರತ್ ಎಸ್ ಎನ್ ಅವರು ನಮ್ ಟಾಕೀಸ್ ಮೂಲಕ ನಡೆಸುತ್ತಿದ್ದಾರೆ. ಈ ಬಾರಿ ಎಫ್ ಸಿಎಲ್ -9 ಸೀಸನ್ ನಡೆಯಲಿದೆ.
ಅಂದಹಾಗೆ, ಈ ಪಂದ್ಯ A2 ಮ್ಯೂಸಿಕ್ ಯುಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರವಾಗಲಿದೆ . 12 ಸ್ಟಾರ್ ಫ್ಯಾನ್ಸ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರತಿಬಾರಿಯು ಸಲಹೆ,ಸಹಕಾರ ಈ ಬಾರಿಯೂ ಇರಲಿ ಎನ್ನುವುದು ನಮ್ ಟಾಕೀಸ್ ಅವರ ಆಶಯ. ಚಂದನವನದ ಸ್ಟಾರ್ ಗಳ ಅಭಿಮಾನಿಗಳು ತಮ್ಮ ತಂಡವನ್ನು ಕಟ್ಟಿಕೊಂಡು ಫ್ಯಾನ್ಸ್ ಕ್ರಿಕೆಟ್ ಲೀಗ್ ಟ್ರೋಫಿಗಾಗಿ ಹಣಾಹಣೆ ನಡೆಸಲಿದೆ.
ಜೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರು ಎಫ್ ಸಿ ಎಲ್ -9 ಇದರ ದಿನಾಂಕವನ್ನು ರಿವೀಲ್ ಮಾಡಿದ್ದು, ಡಿಸೆಂಬರ್ 3 ಹಾಗೂ 4 ರಂದು ನಡೆಯಲಿದೆ.
ಹರಿ-ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ಯಶೋದಾ’ ನ.11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಮಂತಾ ಅವರ ಕೆಲಸ ನೋಡಿ ಹಾಲಿವುಡ್ನ ಸಾಹಸ ನಿರ್ದೇಶಕ ಯಾನಿಕ್ ಬೆನ್ ಬೆರಗಾಗಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಅದ್ಧೂರಿ ಬಜೆಟ್ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಒಂದು ಕಡೆ ಪ್ರೇಕ್ಷಕರು ಚಿತ್ರದಲ್ಲಿನ ಆಕ್ಷನ್ ದೃಶ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಚಿತ್ರದಲ್ಲಿ ಹೈ-ವೋಲ್ಟೇಜ್ ಫೈಟ್ಸ್ ಮತ್ತು ಸ್ಟಂಟ್‌ಗಳು ಚೆನ್ನಾಗಿ ಮೂಡಿ ಬರುವುದಕ್ಕೆ ಕಾರಣರಾಗಿರುವ ಸಮಂತಾ ಶ್ರದ್ಧೆಗೆ ಯಾನಿಕ್ ಬೆನ್ ಖುಷಿಯಾಗಿದ್ದಾರೆ. ಸಮಂತಾ ಮತ್ತು ಬೆನ್ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಮಂತಾ ಅವರೊಂದಿಗೆ ‘ಫ್ಯಾಮಿಲಿ ಮ್ಯಾನ್ 2’ ವೆಬ್‌ಸೀರೀಸ್‌ಗಾಗಿ ಕೆಲಸ ಮಾಡಿದರು ಮತ್ತು ಈಗ ಅವರು ‘ಯಶೋದಾ’ದಲ್ಲಿ ಅತ್ಯುತ್ತಮ ಆಕ್ಷನ್‌ಗಾಗಿ ಜೊತೆಯಾಗಿದ್ದಾರೆ. ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿರುವುದಕ್ಕೆ ಸಮಂತಾ ಅವರ ಸಮರ್ಪಣಾ ಮನೋಭಾವ ಮತ್ತು ಇಚ್ಛಾಶಕ್ತಿಯೇ ಕಾರಣ ಎಂದು ಮೆಚ್ಚಿ ಮಾತನಾಡಿದ್ದಾರೆ.
ಐಕಿಡೊ, ಕಿಕ್ ಬಾಕ್ಸಿಂಗ್, ಜಿಮ್ನಾಸ್ಟಿಕಗಸ್ ಮುಂತಾದ ಕಲೆಗಳಲ್ಲಿ ಪರಿಣಿತರಾಗಿರುವ ಬೆನ್, ಹಾಲಿವುಡ್ ‘ಟ್ರಾನ್ಸ್ಪೋರ್ಟರ್’, ‘ಇನ್ಸೆಪ್ಷನ್’, ಬಾಲಿವುಡ್ನ ‘ಟೈಗರ್ ಜಿಂದಾ ಹೈ’, ‘ರಯೀಸ್’, ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’, ‘ನೇನೋಕ್ಕೊಡೇನ್’ ಮುಂತಾದ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ‘ಯಶೋದಾ’ ಚಿತ್ರದಲ್ಲಿ ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಏಕಕಾಲಕ್ಕೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಈ ಸಿನಿಮಾ ಹೆಸರು ನೀವು ಕೇಳಿರ್ತೀರಾ. ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸಖತ್ ಕ್ರಿಯೇಟಿವ್ ಆಗಿರೋ ಸಿನಿಮಾ ಪ್ರಮೋಷನಲ್ ವೀಡಿಯೋಗಳು ನಿಮ್ಮನ್ನು ಸೆಳೆದಿರುತ್ತೆ. ಅದಕ್ಕೂ ಮಿಗಿಲಾಗಿ ಎಲ್ಲರ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದ ವೀಡಿಯೋನಂತೂ ಕಣ್ತುಂಬಿಕೊಂಡಿರ್ತಿರಾ.ಹೀಗೆ ಸ್ಟಾರ್ ನಟರ ಮೂಲಕ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರೋ ಈ ಚಿತ್ರತಂಡ ಇದೀಗ ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಅವರನ್ನು ಚಿತ್ರದ ಪ್ರಚಾರ ಕಾರ್ಯಕ್ಕೆ ಕರೆತಂದಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ ಅವರಿಂದ ಸಿನಿಮಾ ಪ್ರಮೋಷನಲ್ ಕಟೆಂಟ್ ಮಾಡಿಸಿ ಗಮನ ಸೆಳೆದಿತ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಟೀಂ. ಸ್ಟಾರ್ ನಟರ ಮೂಲಕ ಸಿನಿಮಾ ಪ್ರಚಾರ ಒಂದು ಕಡೆಯಾದ್ರೆ ಇಂಟ್ರಸ್ಟಿಂಗ್ ಪ್ರಮೋಷನಲ್ ಕಂಟೆಂಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸಖತ್ ಇಂಪ್ರೆಸ್ ಮಾಡಿತ್ತು. ಹೀಗೆ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಚಿತ್ರತಂಡ. ಈ ಬಾರಿ ಮೋಹಕ ತಾರೆ ರಮ್ಯಾ ಅವರನ್ನು ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಕರೆತಂದಿದೆ. ರಮ್ಯಾ ಕೂಡ ಚಿತ್ರತಂಡಕ್ಕೆ ಸಾಥ್ ನೀಡಲು ಒಪ್ಪಿದ್ದು, ಬಹಳ ಖುಷಿಯಿಂದಲೇ ಚಿತ್ರದ ಪ್ರಮೋಷನಲ್ ಕಂಟೆಂಟ್ ವೀಡಿಯೋ ನಲ್ಲಿ ಭಾಗಿಯಾಗಿದ್ದಾರೆ.
ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ ಪಿ ಅವರ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದು. ಈ ಚಿತ್ರದ ಕಥೆ ಮೊದಲು ಕೇಳಿದವರು ಮತ್ತದೇ ನಮ್ಮೆಲ್ಲರ ಪ್ರೀತಿಯ ರಾಜರತ್ನ ಪುನೀತ್ ರಾಜ್ ಕುಮಾರ್. ಚಿತ್ರತಂಡ ಈ ಸಿನಿಮಾ ಚಿತ್ರೀಕರಣಕ್ಕೂ ಮೊದಲು ಅಪ್ಪು ಅವರ ಬಳಿ ಹೋಗಿ ಸಿನಿಮಾ ಬಗ್ಗೆ ಮಾತುಕತೆ ನಡೆಸಿದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆದ ಅಪ್ಪು ಸಿನಿಮಾ ಮಾಡಿ ಎಂದು ಇಡೀ ತಂಡಕ್ಕೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದರು. ಅವರ ಆರ್ಶೀವಾದದೊಂದಿಗೆ ಸಿನಿಮಾ ಚಿತ್ರೀಕರಣ ಆರಂಭಿಸಿದ್ವಿ ಎಂದು ನಿರ್ಮಾಪಕ ವರುಣ್ ಕುಮಾರ್ ಹಾಗೂ ಪ್ರಜ್ವಲ್ ಬಿಪಿ ತಿಳಿಸಿದ್ದಾರೆ.
ಯೂತ್ ಸಬ್ಜೆಕ್ಟ್ ಒಳಗೊಂಡ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿರಲಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ನಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.
ದೂದ್ ಪೇಡ ದಿಗಂತ್ ಅಭಿನಯದ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸಮರ್ಥ್ ಬಿ ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ಇದು. ಇತ್ತೀಚೆಗೆ ಸಿನಿಮಾ ತಂಡವನ್ನು ನಟಿ ನಿಧಿ ಸುಬ್ಬಯ್ಯ ಸೇರಿಕೊಂಡಿದ್ದರು. ಇದೀಗ ಮತ್ತೊಂದು ಲೇಟೆಸ್ಟ್ ಸುದ್ದಿ ಹೊರಬಿದ್ದಿದೆ. ಮತ್ತೊಬ್ಬ ಸ್ಟಾರ್ ನಟಿ ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ರಂಗಿತರಂಗ ನಟಿ ರಾಧಿಕಾ ನಾರಾಯಣ್ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಾಧಿಕಾ ನಾರಾಯಣ್ ನಿರ್ವಹಿಸಲಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಾಗಿದೆ.
ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಬ್ಲಾಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಸಿನಿಮಾದಲ್ಲಿದೆ. ಸಮರ್ಥ್ ಬಿ ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ಧನು ಹರ್ಷ ನಟಿಸುತ್ತಿದ್ದಾರೆ.
ಹೈಫನ್ ಪಿಕ್ಚರ್ಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಶೇ. 80ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಸಿನಿಮಾಗಿದೆ.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಕನ್ನಡಿಗರು ದುಬೈ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ದುಬೈನಲ್ಲಿ ‘ವಿಶ್ವ ಕನ್ನಡ ಹಬ್ಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 19ರಂದು ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಈ ಬಾರಿಯ ‘ವಿಶ್ವ ಕನ್ನಡ ಹಬ್ಬ’ದ ಲೋಗೋ ಬಿಡುಗಡೆಯಾಗಿದ್ದು , ಕಾರ್ಯಕ್ರಮದ ಸಿದ್ದತೆಯೂ ಭರದಿಂದ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಟಿ. ಶಿವಕುಮಾರ ನಾಗರ ನವಿಲೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ರು. ಪತ್ರಿಕಾಗೋಷ್ಠಿಯಲ್ಲಿ ನಟಿ ಪ್ರೇಮ, ನಟ ವಸಿಷ್ಠ ಸಿಂಹ ಹಾಗೂ ಇತರರು ಪಾಲ್ಗೊಂಡಿದ್ದರು.
ನವೆಂಬರ್ 19ರಂದು ದುಬೈನಲ್ಲಿ ನಡೆಯುವ ‘ವಿಶ್ವ ಕನ್ನಡ ಹಬ್ಬ’ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜರಾದ ಯಧುವೀರ ಚಾಮರಾಜ ಒಡೆಯರ್, ನಟ ಶಿವರಾಜ್ ಕುಮಾರ್, ಮಹರ್ಷಿ ಡಾ.ಆನಂದ್ ಗುರೂಜಿ, ನಟಿಯರಾದ ಭವ್ಯ, ಸುಧಾರಾಣಿ, ಶೃತಿ, ಪ್ರೇಮಾ, ಮೇಘ ಶೆಟ್ಟಿ ವಿಜಯ ರಾಘವೇಂದ್ರ ಹಾಗೂ ಮುಖ್ಯ ಅತಿಥಿಯಾಗಿ ನಟ ವಸಿಷ್ಠ ಸಿಂಹ ಪಾಲ್ಗೊಳ್ಳುತ್ತಿದ್ದಾರೆ.
ನಟ ವಸಿಷ್ಠ ಸಿಂಹ ಮಾತನಾಡಿ, ನಾವೆಲ್ಲರೂ ಕನ್ನಡ ಬೆಳೆಯಬೇಕು, ಕನ್ನಡ ಬಳಸಬೇಕು ಎಂದು ಹೇಳುತ್ತೇವೆ. ಆದರೆ, ಅದಕ್ಕಾಗಿ ಹಲವಾರು ಜೀವಗಳು ನಿರಂತರವಾಗಿ ದುಡಿಯುತ್ತಿವೆ ಹಾಗೂ ದುಡಿದಿದ್ದಾರೆ. ಅವರನ್ನೆಲ್ಲ ಗುರುತಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೌರವ ನೀಡುತ್ತಿದೆ. ಈ ಕನ್ನಡ ಹಬ್ಬಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಂತರಾಷ್ಟ್ರೀಯ ರಾಯಭಾರಿಯಾಗಿ ನನ್ನನ್ನು ಭಾಗವಹಿಸಬೇಕು ಎಂದು ಹೇಳಿದಾಗ ತುಂಬಾ ಹಿರಿಮೆ ಅನಿಸಿತು. ಈ ರೀತಿಯ ಕಾರ್ಯಕ್ರಮದಿಂದ ವಿಚಾರಗಳ ವಿನಿಮಯ ಆಗುತ್ತೆ. ಈ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತೆ ಎಂದು ನಂಬಿದ್ದೇನೆ. ಎಲ್ಲರೂ ನವೆಂಬರ್ ಒನ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗೋಣ ಎಂದರು ವಸಿಷ್ಠ ಸಿಂಹ.
ದುಬೈನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರೋದು ತುಂಬಾ ಖುಷಿಯ ವಿಚಾರ. ಹಲವು ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕಾಗಿ ಶಿವಕುಮಾರ್ ಅವರಿಗೆ ಧನ್ಯವಾದ ಎಂದು ನಟಿ ಪ್ರೇಮ ತಿಳಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಇರುವ ಬೇರೆ ಬೇರೆ ಕಲೆಯ ಆಯ್ದ ಕಲಾವಿದರನ್ನು ದುಬೈಗೆ ಕರೆದುಕೊಂಡು ಹೋಗಿ ನಮ್ಮ ಕಲೆಯನ್ನು ಅಲ್ಲಿ ಪರಿಚಯಿಸುವ ಹಾಗೂ ಅವರನ್ನು ಗೌರವಿಸುವ ಉದ್ದೇಶವನ್ನು ಇದು ಒಳಗೊಂಡಿದೆ.
ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮ ಮೂಲ ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರ ಬೆಸುಗೆಯಾಗಿದೆ. ಹಿರಿಯ ಪತ್ರಕರ್ತರಿಗೆ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ ನಾಗರ ನವಿಲೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡ್ರು.
ನವೀರಾದ ಪ್ರೇಮಕಥೆಯುಳ್ಳ ‘ಖಾಸಗಿ ಪುಟಗಳು’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಂತೋಷ್ ಶ್ರೀಕಂಠಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಟ್ರೇಲರ್ ಹಾಗೂ ಚೆಂದದ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಇದೀಗ ಪ್ರೇಕ್ಷಕರ ಮುಂದೆ ಬರಲು ಸಿನಿಮಾ ರೆಡಿಯಾಗಿದ್ದು, ನವೆಂಬರ್ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.
‘ಖಾಸಗಿ ಪುಟಗಳು’ ಚಿತ್ರ ಸಂಪೂರ್ಣ ಹೊಸಬರ ಪ್ರಯತ್ನ. ಕಾಲೇಜು ಹುಡುಗನ್ನೊಬ್ಬನ ನವೀರಾದ ಪ್ರೇಮಕಥೆ ಹೊತ್ತ ಸಿನಿಮಾವಿದು. ಕಿರುಚಿತ್ರದಲ್ಲಿ ನಟಿಸಿ ಅನುಭವ ಇರುವ ವಿಶ್ವ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಶ್ವೇತಾ ಡಿಸೋಜ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ನಾಯಕಿ ಶ್ವೇತ ಡಿಸೋಜ ಮಾತನಾಡಿ ಹಿಂದಿಯಲ್ಲಿ ‘ವೈ’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾ. ಭೂಮಿ ಪಾತ್ರದಲ್ಲಿ ನಟಿಸಿದ್ದೇನೆ. ಇನೋಸೆಂಟ್ ಹಾಗೂ ಮೆಚೋರ್ಡ್ ಎರಡು ಶೇಡ್ ನಲ್ಲಿ ಕಾಣಸಿಗಲಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.
ಕಿರುಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯಿತ್ತು. ನಾಯಕ ನಟನಾಗಿ ಇದು ನನ್ನ ಮೊದಲ ಸಿನಿಮಾ. ಒಂದು ತಂಡವಾಗಿ ಎಲ್ಲರೂ ಈ ಸಿನಿಮಾವನ್ನು ಮಾಡಿದ್ದೇವೆ. ನವೆಂಬರ್ 18ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಹರಸಬೇಕು ಎಂದು ನಾಯಕ ವಿಶ್ವ ಹೇಳಿದರು.
ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿ ಸಂತೋಷ್ ಶ್ರೀಕಂಠಪ್ಪ ಅವರಿಗೆ ಇರುವ ಸಿನಿಮಾ ಪ್ರೀತಿ ನೋಡಿ ಈ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ, ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ. ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ ಎಲ್ಲರೂ ಸಿನಿಮಾ ನೋಡಿ ಹೊಸಬರನ್ನು ಬೆಳೆಸಿ ಎಂದರು.
ಚೇತನ್ ದುರ್ಗಾ, ನಂದಕುಮಾರ್,ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಎಸ್ ವಿ ಎಂ ಮೋಶನ್ ಪಿಕ್ಚರ್ ಬ್ಯಾನರ್ ನಡಿ ಮಂಜು ವಿ ರಾಜ್, ವೀಣಾ ವಿ ರಾಜ್, ಮಂಜುನಾಥ್ ಡಿ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ,ರಾಕೇಶ್ ಆಚಾರ್ಯ ಬಿ.ಜಿ.ಎಂ ಮಾಡಿದ್ದು, ಆಶಿಕ್ ಕುಸುಗೋಳಿ ಸಂಕಲನ ಚಿತ್ರಕ್ಕಿದೆ.
ಕನ್ನಡ ಚಿತ್ರರಂಗಕ್ಕೆ “ತುಳಸಿದಳ” ದಂತಹ ಅದ್ಭುತ ಚಿತ್ರವನ್ನು ಕೊಟ್ಟ ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ “ಆವರ್ತ”.
ಇತ್ತೀಚಿಗೆ ಈ ಚಿತ್ರದ ಹಾಡುಗಳನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟ್ರೇಲರ್ ಅನಾವರಣಗೊಳಿಸಿದರು.
ನನ್ನ ಮೊದಲ ಚಿತ್ರ “ತುಳಸಿದಳ”. ಆ ಚಿತ್ರದಲ್ಲಿ ವೇಮಗಲ್ ಜಗನ್ನಾಥ್ ರಾವ್ ಅವರು ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ನನ್ನ ಗುರುಗಳು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವುದಕ್ಕೆ ಬಹಳ ಖುಷಿಯಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ತಾರಾ ಅನುರಾಧ ಶುಭ ಕೋರಿದರು. ಭಾ.ಮ.ಹರೀಶ್ ಅವರು ಚಿತ್ರಕ್ಕೆ ಶುಭ ಹಾರೈಸಿದರು.
ಯುವಕನೊಬ್ಬನಿಗೆ ಕಥೆ ಬರೆಯುವ ಹವ್ಯಾಸ. ಕಾಲ್ಪನಿಕ ಕಥೆ ಬರೆಯುವ ಬಯಕೆಯಿಲ್ಲದ ಆತನಿಗೆ ನೈಜಘಟನೆ ಕುರಿತು ಕಥೆ ಬರೆಯುವ ಆಸಕ್ತಿ. ಆ ಸಮಯದಲ್ಲಿ ಆತನಿಗೊಂದು ಮೆಸೇಜ್ ಬರುತ್ತದೆ. ಆತ ಆ ಸ್ಥಳಕ್ಕೆ ಹೋದಾಗ ಏನೆಲ್ಲಾ ಆಗುತ್ತದೆ? ಎಂಬುದು ನಮ್ಮ ಚಿತ್ರದ ಕಥೆ ಎನ್ನುವ ನಿರ್ದೇಶಕ ವೇಮಗಲ್ ಜಗನ್ನಾಥರಾವ್, ನವೆಂಬರ್ 18 ರಂದು ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದರು.
ಕಥೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕ ಜಯ್ ಚಂದ್ರ ಹೇಳಿದರು. ಸಿ.ಓ.ಡಿ ಅಧಿಕಾರಿ ಪಾತ್ರಧಾರಿ ಧನ್ವಿತ್ ಹಾಗೂ ನಾಯಕಿ ನಯನ “ಆವರ್ತ” ಚಿತ್ರದ ಬಗ್ಗೆ ಮಾತನಾಡಿದರು.
ಮೂರು ಸಾಹಸ ಸನ್ನಿವೇಶಗಳು ಚೆನ್ನಾಗಿದೆ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ತಿಳಿಸಿದರು. ಸಂಗೀತ ನಿರ್ದೇಶಕ ಅತಿಶಯ್ ಜೈನ್ ಹಾಗೂ ಛಾಯಾಗ್ರಾಹಕ ಮಲ್ಲಿಕಾರ್ಜುನ್ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು.
ಅಬ್ಬಾ… ಇಷ್ಟೊಂದ್ ಡಿಜಿಟಲ್ ಮೀಡಿಯಾನಾ? ಇಂಥದ್ದೊಂದು ಪ್ರಶ್ನೆ ಎದುರಾದರೆ ಅಚ್ಚರಿ ಬೇಡ. ನಿಜ, ಇದು ‘ಕ್ರಾಂತಿ’ ಚಿತ್ರದ ಡಿಜಿಟಲ್ ಪ್ರೆಸ್ ಮೀಟ್ ಸಮಯ. ಕಿಕ್ಕಿರಿದಿದ್ದ ಡಿಜಿಟಲ್ ಪ್ರೆಸ್ ಮೀಟ್ ಇದು. ಸ್ಯಾಟಲೈಟ್ ಚಾನೆಲ್ ಹಾವಳಿ ಅಂದುಕೊಂಡವರಿಗೆ ಡಿಜಿಟಲ್ ಮೀಡಿಯಾದ್ದು ಎಂಥಾ ಹಾವಳಿ ಸ್ವಾಮಿ ಅನ್ನೋದನ್ನು ಇಲ್ಲಿ ಸೇರಿರೋ… ಡಿಜಿಟಲ್ ಮೀಡಿಯಾ ಸಾಕ್ಷಿ….
ದರ್ಶನ್ ಹಿಂದೆ ನನಗೆ ಸೋಶಿಯಲ್ ಮೀಡಿಯಾ ಸಾಕು ಅಂದಿದ್ದರು. ಸ್ಯಾಟಲೈಟ್ ಬದಿಗೊತ್ತಿ ಡಿಜಿಟಲ್ ಮೀಡಿಯಾಗೆ ಜೈ ಅಂದಿದ್ದರು. ಆ ಪರಿಣಾಮನೇ ಇಂದು ಡಿಜಿಟಲ್ ಮೀಡಿಯಾ ಪ್ರೆಸ್ ಮೀಟ್ ನೂಕು ನುಗ್ಗಲು…
ತೆರೆಗೆ ಬರಲು ಸಿದ್ದವಾಗಿರುವ ವಿಭಿನ್ನ ಕಥಾಹಂದರದ “ಶಂಭೋ ಶಿವ ಶಂಕರ” ಚಿತ್ರವನ್ನು ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಇದೀಗ ಹೊಸ ಸಿನಿಮಾಗೆ ಸಜ್ಜಾಗುತ್ತಿದ್ರ್ದ್ದಾರೆ. ತಮ್ಮ ಹಿಂದಿನ ಸಿನಿಮಾ ಬಿಡುಗಡೆ ಮೊದಲೇ ಅವರು, ರಾಗಿಣಿ ಅಭಿನಯದ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ .
ಸದ್ಯ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನೂತನ ಚಿತ್ರದ ಚಿತ್ರೀಕರಣ ನವೆಂಬರ್ ನಲ್ಲಿ ಶುರುವಾಗಲಿದೆ ಎಂಬುದು ನಿರ್ದೇಶಕರ ಮಾತು. ಇದು ಯಾವ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿದೆ.
ಯಾರೆಲ್ಲ ಕಲಾವಿದರು ಹಾಗೂ ತಂತ್ರಜ್ಞರು ಇರಲಿದ್ದಾರೆ ಡಂಬ ವಿಷಯ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಅವರು ಹೇಳಿದ್ದಾರೆ.
ಎರಡು ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಟಿ.ಎನ್ ಸೀತಾರಾಮ್ ನಿರ್ದೇಶನದ “ಮಾಯಾಮೃಗ” ಧಾರಾವಾಹಿ ವಿಶ್ವದಾದ್ಯಂತ ಹೆಸರು ಮಾಡಿತ್ತು. ಈಗ ಆ ಧಾರಾವಾಹಿಯ ಮುಂದುವರೆದ ಭಾಗ “ಮತ್ತೆ ಮಾಯಾಮೃಗ” ಎಂಬ ಹೆಸರಿನಿಂದ ಇದೇ ಅಕ್ಟೋಬರ್ 31 ರ ಸೋಮವಾರ ರಾತ್ರಿ 9 ಗಂಟೆಗೆ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ.
ನನ್ನನ್ನು ಸಂಪರ್ಕಿಸಿದ ಸಿರಿ ಕನ್ನಡ ವಾಹಿನಿಯ ಸಂಜಯ್ ಶಿಂಧೆ, ತಮ್ಮ ವಾಹಿನಿಗಾಗಿ ಧಾರಾವಾಹಿಯೊಂದನ್ನು ನಿರ್ದೇಶಿಸುವಂತೆ ಕೇಳಿದರು. ನಾನು “ಮಾಯಾಮೃಗ” ಧಾರಾವಾಹಿ ಮುಂದುವರೆಸೋಣ “ಮತ್ತೆ ಮಾಯಾಮೃಗ” ಹೆಸರಿನಿಂದ ಎಂದು ಹೇಳಿದೆ. ಅವರು ಸಂತೋಷದಿಂದ ಒಪ್ಪಿಕೊಂಡರು. ಆಗ ನಿರ್ದೇಶನ ವಿಭಾಗದಲ್ಲಿ ನಾನು, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ಇದ್ದೆವು. ಈಗಲೂ ನಾವು ಮೂವರು ಸೇರಿ “ಮತ್ತೆ ಮಾಯಾಮೃಗ” ನಿರ್ದೇಶಿಸುತ್ತಿದ್ದೇವೆ.
ಕಥಾ ವಿಸ್ತರಣೆಯಲ್ಲಿ ನನ್ನ ಮಗಳು ಅಶ್ವಿನಿ ಹಾಗೂ ಪ್ರಹ್ಲಾದ್ ನಮ್ಮೊಂದಿಗಿದ್ದಾರೆ. 23 ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ನಾನು ಸೇರಿದಂತೆ ಹಲವರಿಗೆ ವಯಸ್ಸಾಗಿದೆ. “ಮಾಯಾಮೃಗ” ದಲ್ಲಿ ಅಭಿನಯಿಸಿದ್ದ ವೈಶಾಲಿ ಕಾಸರವಳ್ಳಿ ಹಾಗೂ ಅನೇಕ ಕಲಾವಿದರು ನಮ್ಮೊಂದಿಗಿಲ್ಲ. ಹಳೆಯ ಕಲಾವಿದರು ಹಾಗೂ ಈಗಿನ ಹೊಸ ಕಲಾವಿದರ ಸಮಾಗಮದಲ್ಲಿ “ಮತ್ತೆ ಮಾಯಾಮೃಗ” ಮೂಡಿಬರಲಿದೆ. “ಬದುಕು ಬದಲಾಗಬಹುದು ಆದರೆ ಭಾವಗಳಲ್ಲ” ಎಂಬ ವಾಕ್ಯದೊಂದಿಗೆ ಎಂದು ಟಿ.ಎನ್ ಸೀತಾರಾಮ್ ವಿವರಣೆ ನೀಡಿದರು.
ಆಗ “ಮಾಯಾಮೃಗ” ಮಾಡುತ್ತಿದ್ದಾಗ ನಮಗೆ ಅಂತ ಪೈಪೋಟಿ ಇರಲಿಲ್ಲ. ಧಾರಾವಾಹಿ ಸಂಖ್ಯೆ ತುಂಬಾ ಕಡಿಮೆ ಇರುತ್ತಿತ್ತು. ಈಗ ಎಲ್ಲಾ ವಾಹಿನಿಗಳಿಂದ ಸುಮಾರು ಅರವತ್ತಕ್ಕೂ ಅಧಿಕ ಧಾರಾವಾಹಿಗಳು ದಿನ ಪ್ರಸಾರವಾಗುತ್ತಿದೆ. ಇವುಗಳ ಮಧ್ಯೆ ನಾವು ಪ್ರೇಕ್ಷಕರನ್ನು ನಮ್ಮ ಧಾರಾವಾಹಿಯತ್ತ ಸೆಳೆಯುವ ದೊಡ್ಡ ಸವಾಲು ನಮ್ಮ ಮುಂದಿದೆ. ಜನ “ಮತ್ತೆ ಮಾಯಾಮೃಗ” ವನ್ನು ಮೆಚ್ಚಿಕೊಳ್ಳುವ ವಿಶ್ವಾಸವೂ ಇದೆ ಎಂದರು ಪಿ.ಶೇಷಾದ್ರಿ.
ನಾಗೇಂದ್ರ ಶಾ ಕೂಡ ಧಾರಾವಾಹಿ ಕುರಿತು ಒಂದಷ್ಟು ವಿಷಯ ಹಂಚಿಕೊಂಡರು.
ನಾವು ದುಡ್ಡಿಗಾಗಿ ಈ ಧಾರಾವಾಹಿ ಮಾಡುತ್ತಿಲ್ಲ. ಟಿ.ಎನ್ ಸೀತಾರಾಮ್ ಅವರಂತಹ ಉತ್ತಮ ನಿರ್ದೇಶಕರು ನಮ್ಮ ವಾಹಿನಿಗಾಗಿ ಧಾರಾವಾಹಿ ನಿರ್ದೇಶಿಸುತ್ತಿರುವುದೇ ನಮಗೆ ಹೆಮ್ಮೆ ಎನ್ನುತ್ತಾರೆ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ.
ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹಾಗೂ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಅನೇಕ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿದ್ದರು.