Categories
ಸಿನಿ ಸುದ್ದಿ

ಅಕ್ಟೋಬರ್ 3ಕ್ಕೆ ಭೈರಾದೇವಿ ಅವತಾರ: ನಿರೀಕ್ಷೆ ಹುಟ್ಟಿಸಿದ ರಾಧಿಕಾ ಕುಮಾರ ಸ್ವಾಮಿ ಚಿತ್ರ

ರಾಧಿಕಾ ಕುಮಾರ ಸ್ವಾಮಿ ಅಭಿನಯದ ಭೈರಾದೇವಿ ಕುತೂಹಲ ಮೂಡಿಸಿರುವ ಸಿನಿಮಾ. ಈಗಾಗಲೇ ಟ್ರೇಲರ್ ಸಖತ್ ಸೌಂಡ್ ಮಾಡಿದೆ. ಚಿತ್ರ ಅಕ್ಟೋಬರ್ 3ಕ್ಕೆ ರಿಲೀಸ್ ಆಗಲಿದೆ.

ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ “ಭೈರಾದೇವಿ” ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು ಎಲ್ಲೆಡೆ ಸದ್ದು ಮಾಡಿದೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ನಿರ್ದೇಶಕ ಶ್ರೀಜೈ, ನೃತ್ಯ ನಿರ್ದೇಶಕ ಮೋಹನ್, ಸಹ ನಿರ್ಮಾಪಕರಾದ ರವಿರಾಜ್, ಯಾದವ್ ಮುಂತಾದವರು ಟ್ರೇಲರ್ ಹೊರಬಂದ ಘಳಿಗೆಗೆ ಸಾಕ್ಷಿಯಾದರು.

ಸಿನಿಮಾ ಕುರಿತು ರಾಧಿಕಾ ಕುಮಾರಸ್ವಾಮಿ ಹೇಳಿದ್ದಿಷ್ಟು. ನಿರ್ದೇಶಕ ಶ್ರೀಜೈ ನಮ್ಮ ಮನೆಗೆ ಬಂದು ಕಥೆ ಹೇಳಿದರು‌. ಕಥೆ ಇಷ್ಟಾವಾಗಿ, ಈ ಚಿತ್ರ ನಿರ್ಮಾಣಕ್ಕೆ ಹಾಗೂ ನಟಿಸಲು ಒಪ್ಪಿಕೊಂಡೆ. ಈ ಚಿತ್ರ ಆರಂಭವಾದಗಿನಿಂದ ಬಿಡುಗಡೆಯವರೆಗೂ ಸಾಕಷ್ಟು ಅಡೆತಡೆಗಳಾಗಿದೆ‌. ಹಾಗಾಗಿ ನಾನು ಚಿತ್ರದ ಬಿಡುಗಡೆ ಯೋಚನೆ ಮಾಡಿರಲಿಲ್ಲ‌. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ಗಂಡ ಹೆಂಡತಿ ಹೇಳಿದ ಮಾತೊಂದರ ಸ್ಪೂರ್ತಿಯಿಂದ ಚಿತ್ರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡೋಣ ಎಂದು ನನ್ನ ಅಣ್ಣನಿಗೆ ಹೇಳಿದೆ.

ಈ ಸಂದರ್ಭದಲ್ಲಿ ಒಂದು ಮಾತು ಹೇಳುತ್ತೇನೆ. “ಭೈರಾದೇವಿ” ಚಿತ್ರ ಪ್ರೇಕ್ಷಕರಿಗೆ ಇಷ್ಟ ಆದರೆ ಇನ್ನೊಂದು ಸಿನಿಮಾ ಮಾಡುತ್ತೀನಿ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದ ದೂರ ಆಗಿಬಿಡುತ್ತೀನಿ. ಇದು ದೊಡ್ಡ ಯಶಸ್ಸಾಗುತ್ತದೆ ಎಂಬ ನಂಬಿಕೆ ನನಗಿದೆ. ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದು. ಈ ಚಿತ್ರದ ಸಂಪೂರ್ಣ ಕ್ರೆಡಿಟ್‍ ನಿರ್ದೇಶಕರಿಗೆ ಸಲ್ಲಬೇಕು’ ಎಂದರು.

ನಾನು ಈ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿ. ಅರವಿಂದ್ ನನ್ನ ಪಾತ್ರದ ಹೆಸರು. ಯಾವುದೇ ತರಹದ ರೌಡಿಗಳನ್ನು ಸದ್ದೆ ಬಡೆಯುವ ಖಡಕ್ ಪೊಲೀಸ್ ಆಫೀಸರ್ ನಾನು. ಆದರೆ, ಈ ಚಿತ್ರದಲ್ಲಿ ನನ್ನಗಿರುವ ವೈರಿ ಈ ರಾಜ್ಯದವರಲ್ಲ, ಈ ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಇನ್ನು ಈ ಚಿತ್ರದ ಟ್ರೇಲರ್ ನೋಡಿದಾಗ, ನನಗೆ “ಆಪ್ತಮಿತ್ರ” ಚಿತ್ರ ನೆನಪಾಯಿತು. ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಹಾಗೂ ನಾಯಕಿಯಾಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿ ಪಾತ್ರದಲ್ಲಂತೂ ಅವರ ಅಭಿನಯ ಮನೋಜ್ಞ. ಅವರು ಆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಅವರೊಂದಿಗೆ ಮಾತನಾಡಲಿಕ್ಕೆ ಭಯವಾಗುತ್ತಿತ್ತು ಎಂದರು ನಟ ರಮೇಶ್ ಅರವಿಂದ್.

ಈ ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ಕಾರಣ ನಮ್ಮ‌ ನಿರ್ಮಾಪಕರು‌ ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು, ಕಲಾವಿದರಿಗೆ ನಾನು ಬಹಳ ತೊಂದರೆ ಕೊಟ್ಟಿದ್ದೇನೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ‌ ಅದ್ಭುತವಾಗಿದೆ ಎಂದು ನಿರ್ದೇಶಕ ಶ್ರೀಜೈ ತಿಳಿಸಿದರು.

“ಹೃದಯ ಹೃದಯ” ಚಿತ್ರ ತೆರೆಕಂಡು ಇಪ್ಪತ್ತೈದು ವರ್ಷಗಳಾಗಿದೆ. ನಾನು ಈಗ ನನ್ನ‌ ಸಿನಿ ಜರ್ನಿಯ ರಜತ ಮಹೋತ್ಸವ ಆಚರಿಸುತ್ತಿದ್ದೇನೆ. ರಮೇಶ್ ಅವರ ಜೊತೆ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲೂ ಅವರ ಜೊತೆ ನಟಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀಜೈ ಅವರ ಕಥೆಯೂ ಬಹಳ ಚೆನ್ನಾಗಿದೆ ಎಂದರು ಅನು ಪ್ರಭಾಕರ್.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಗುಡ್ ಫೀಲ್ ಕೊಡುವ ಲಂಗೋಟಿ ಕಥೆ!

ವಿಜಯ್ ಭರಮಸಾಗರ
ರೇಟಿಂಗ್ : 3/5

ನಿರ್ದೇಶಕಿ: ಸಂಜೋತ ಭಂಡಾರಿ
ನಿರ್ಮಾಣ: ತನು ಟಾಕೀಸ್
ತಾರಾಗಣ: ಆಕಾಶ್ ರ‍್ಯಾಂಬೋ, ಸ್ನೇಹ ಖುಷಿ, ಸಂಹಿತ ವಿನ್ಯಾ, ಹುಲಿ ಕಾರ್ತಿಕ್, ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್, ಧೀರೇಂದ್ರ ಇತರರು.

ನಿನ್ನ ಹಂಗು ನನಗೆ ಬೇಡವಾದಮೇಲೆ ಈ ಲಂಗೋಟಿಯೂ ಬೇಡ…”
-ಹೀಗೆ ತಾತನ ಎದುರು ನಿಂತ ಮೊಮ್ಮಗ, ಆಕ್ರೋಶಭರಿತವಾಗಿ ತಾನು ಧರಿಸಿದ್ದ ಲಂಗೋಟಿಯನ್ನು ಕಿತ್ತೆಸೆದು ಮನೆಯಿಂದ ಹೊರ ನಡೆಯುತ್ತಾನೆ. ಒಂದು ಲಂಗೋಟಿ ಮುದ್ದಾದ ಫ್ಯಾಮಿಲಿಯಲ್ಲಿ ಏನೆಲ್ಲಾ ಅವಘಡಕ್ಕೆ ಕಾರಣವಾಗುತ್ತೆ ಅನ್ನೋದು ಸಿನಿಮಾದ ಇಂಟ್ರೆಸ್ಟಿಂಗ್ ಸ್ಟೋರಿ.

ಇದೊಂದು ಮನರಂಜನಾತ್ಮಕ ಚಿತ್ರ. ಮೊದಲರ್ಧ ಜಾಲಿಯಾಗಿ ಸಾಗುವ ಕಥೆಯಲ್ಲಿ ಒಂದಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್ ಗಳಿವೆ. ನೋಡುಗನಿಗೆ ಟೆಸ್ಟೂ ಇದೆ. ಆದರೂ ಸಿನಿಮಾ ಅತ್ತಿತ್ತ ಅಲ್ಲಾಡದಂತೆ ಒಂದೇ ಸಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಕಥೆ ಸಿಂಪಲ್ ಏನಲ್ಲ. ಸರಳ ಕಥೆಗೆ ನಿರೂಪಣೆಯ ಶೈಲಿ ವಿಶೇಷವಾಗಿದೆ. ಇಲ್ಲಿ ಲಂಗೋಟಿಯೇ ಹೀರೋ! ಅಂಡರ್‌ವೇರ್ ಇಲ್ಲಿ ವಿಲನ್. ಇಷ್ಟು ಹೇಳಿದ ಮೇಲೆ ಸಿನಿಮಾ ಮೇಲಿನ ಕುತೂಹಲ ಹೆಚ್ಚದೇ ಇರದು.

ಹೊಡಿ, ಬಡಿ, ಕಡಿ ಸಿನಿಮಾಗಳ ನಡುವೆ ಇದೊಂದು ಪಕ್ಕಾ ದೇಸಿ ಸೊಗಡಿನ, ಮನರಂಜನಾತ್ಮಕ ಚಿತ್ರ. ಇಲ್ಲಿ ಹಾಸ್ಯ ಪ್ರಧಾನವಾಗಿದ್ದರೂ, ಕಥೆಯಲ್ಲಿ ಎಮೋಷನ್ ಅಂಶಗಳು ಮೈದುಂಬಿಕೊಂಡಿವೆ. ಆ ಕಾರಣಕ್ಕೆ ಸಿನಿಮಾದಲ್ಲಿ ಇರುವ ಸಣ್ಣ ಪುಟ್ಟ ತಪ್ಪುಗಳೆಲ್ಲವೂ ಮಾಯವಾಗುತ್ತವೆ. ಮೊದಲರ್ಧ ಕಥೆ ಸ್ವಲ್ಪ ಲ್ಯಾಗ್ ಎನಿಸಿದರೂ, ದ್ವಿತಿಯಾರ್ಧದಲ್ಲಿ ಬರುವ ಒಂದಷ್ಟು ಸನ್ನಿವೇಶಗಳು ನೋಡುಗರನ್ನು ಕುತೂಹಲಕ್ಕೆ ದೂಡುತ್ತದೆ. ಸಿನಿಮಾದಲ್ಲಿ ಲಂಗೋಟಿ ಪ್ರಧಾನ ಪಾತ್ರವಹಿಸಿದೆ. ಲಂಗೋಟಿಯನ್ನು ಧರಿಸಿ ಪ್ರಬುದ್ಧವಾಗಿ ನಟಿಸಿರುವ ನಾಯಕ ಕೂಡ ನೋಡುಗರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಅಲ್ಲಲ್ಲಿ ಕೆಲ ಸನ್ನಿವೇಶಗಳು ವಿನಾಕಾರಣ ಬಂದು ಹೋಗುತ್ತವೆಯಾದರೂ, ಸಿನಿಮಾದಲ್ಲಿ ಕಾಣಸಿಗುವ ಹಾಡೊಂದು ಕೆಲವು ಮಿಸ್ಟೇಕ್‌ಗಳನ್ನು ಪಕ್ಕಕ್ಕೆ ಸರಿಸುತ್ತದೆ. ಸರಾಗವಾಗಿ ಕಚಗುಳಿ ಇಡುವ ಸಂಭಾಷಣೆಯಲ್ಲೂ ಒಂದಷ್ಟು ಮಾತುಗಳು ನಗುತರಿಸಿದರೆ, ಒಂದಷ್ಟು ಮಾತುಗಳು ಅತಿ ಎನಿಸುತ್ತವೆ. ಆದರೂ, ಕಥೆಯ ಓಟಕ್ಕೆ ಮಾತುಗಳೂ ಕೂಡ ಹೆಗಲಾಗಿವೆ. ಸಿನಿಮಾ ಅವಧಿ ತುಸು ಕಡಿಮೆ ಮಾಡಬಹುದಿತ್ತು. ಹಾಸ್ಯಮಯ ಎನಿಸುವ ಕೆಲ ದೃಶ್ಯಗಳಿಗೂ ಕತ್ತರಿ ಹಾಕಬಹುದಿತ್ತು. ಆದರೆ, ಲಂಗೋಟಿ ವಿಷಯ ಬಿಟ್ಟು ಕಥೆ ಬೇರೆಲೂ ಅಡ್ಡಾಡಿಲ್ಲವಾದ್ದರಿಂದ ಸಿನಿಮಾ ಸಲೀಸಾಗಿ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಲಂಗೋಟಿಯೇ ಕೇಂದ್ರಬಿಂದು ಆಗಿರುವುದರಿಂದ ಎಲ್ಲರ ಚಿತ್ತ ಲಂಗೋಟಿಯ ಸರಿತಪ್ಪುಗಳ ಕಡೆಗೆ ಇರಿಸುತ್ತೆ.

ಕಥೆ ಬಗ್ಗೆ ಹೇಳುವುದಾದರೆ, ಸಂಪ್ರದಾಯಸ್ಥ ಕುಟುಂಬದಲ್ಲಿ ಲಂಗೋಟಿಗೆ ಬಹಳ ಗೌರವ. ಅನಾದಿಕಾಲದಿಂದಲೂ ಲಂಗೋಟಿ ಧರಿಸುತ್ತ ಬಂದಿರುವ ಆ ಕುಟುಂಬದ ಯುವಕನಿಗೂ ಕೂಡ ಲಂಗೋಟಿ ಧರಿಸಬೇಕೆಂಬ ನಿಯಮ. ಆದರೆ, ಅವನಿಗೋ ಬ್ರಾಂಡೆಡ್ ಅಂಡರ್‌ವೇರ್ ಹಾಕುವ ಆಸೆ. ಚಿಕ್ಕಂದಿನಿಂದಲೂ ಲಂಗೋಟಿ ಹಾಕುವ ಅವನನ್ನು ಹೀಯಾಳಿಸುವ ಗೆಳೆಯರಿಂದ ರೋಸಿ ಹೋದ ಆ ನಾಯಕ ಅದರಿಂದ ಮುಕ್ತಿ ಪಡೆದುಕೊಳ್ಳಬೇಕೆಂದು ಹೋರಾಡುತ್ತಾನೆ. ಆದರೆ, ಆಚಾರ, ಸಂಪ್ರದಾಯ ಅಂತ ಅವನ ತಾತ ಲಂಗೋಟಿ ಧರಿಸುವಂತೆ ಪಟ್ಟು ಹಿಡಿಯುತ್ತಾನೆ. ಒಂದು ಹಂತದಲ್ಲಿ ಲಂಗೋಟಿ ನಾಯಕನ ಲೈಫಲ್ಲಿ ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತೆ. ಅದರಿಂದ ಕಿಡ್ನಾಪ್, ಅತ್ಯಾಚಾರ, ಕೊಲೆಗೂ ಅವನ ಹೆಸರು ಕೇಳಿಬರುತ್ತೆ. ಅಷ್ಟೆಲ್ಲಾ ಏರಿಳಿತಗಳಿಗೆ ಕಾರಣವಾಗುವ ಲಂಗೋಟಿ ಕ್ಲೆöÊಮ್ಯಾಕ್ಸ್ ಹಂತದಲ್ಲಿ ವಿಚಿತ್ರ ಘಟನೆಗೆ ಕಾರಣವಾಗುತ್ತೆ. ಅದೇನು ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ನಾಯಕರಾಗಿ ಕಾಣಿಸಿಕೊಂಡಿರುವ ಆಕಾಶ್ ರ‍್ಯಾಂಬೋ ಅವರಿಗೆ ಮೊದಲ ಸಿನಿಮಾವಾದರೂ, ಅನುಭವಿ ನಟರಂತೆ ಕಾಣುತ್ತಾರೆ. ನಗಿಸೋಕು ಸೈ, ಭಾವುಕರಾಗುವಲ್ಲೂ ಸೈ ಅನ್ನೋದನ್ನು ಪಾತ್ರದ ಮೂಲಕ ತೋರಿಸಿದ್ದಾರೆ. ತಾತನ ಪಾತ್ರಧಾರಿ ಮತ್ತೊಂದು ಹೈಲೆಟ್ ಎನ್ನಬಹುದು. ಇಲ್ಲಿ ಹುಲಿ ಕಾರ್ತಿಕ್ ಮತ್ತೊಂದು ವಿಶೇಷ ಎನ್ನಬಹದು. ಅವರ ಪಾತ್ರ ತುಂಬಾನೇ ಗಮನಸೆಳೆಯುತ್ತದೆ. ಉಳಿದಂತೆ ಸ್ನೇಹ ಖುಷಿ, ಸಂಹಿತ, ಪಲ್ಟಿ ಗೋವಿಂದ್, ಸಾಯಿ ಪವನ್, ಧೀರೇಂದ್ರ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವಿದೆ. ಛಾಯಾಗ್ರಹಣ ಲಂಗೋಟಿಯನ್ನು ಅಂದಗಾಣಿಸಿದೆ.

Categories
ಸಿನಿ ಸುದ್ದಿ

ಕಾಲಾಪತ್ಥರ್ ಚಿತ್ರ ವಿಮರ್ಶೆ: ಕಪ್ಪು ಕಲ್ಲಿನ ಸುತ್ತ ನೋಡುವ ಒಲವಿನತ್ತ…

ವಿಜಯ್ ಭರಮಸಾಗರ

ರೇಟಿಂಗ್: 3/5

ಚಿತ್ರ: ಕಾಲಾಪತ್ಥರ್
ನಿರ್ದೇಶನ: ವಿಕ್ಕಿ ವರುಣ್
ನಿರ್ಮಾಣ: ಭುವನ್ ಸುರೇಶ್ ನಾಗರಾಜ್ ಬಿಲ್ಲಿನಕೋಟೆ
ತಾರಾಗಣ: ವಿಕ್ಕಿ ವರುಣ್, ಧನ್ಯಾ ರಾಮ್‍ಕುಮಾರ್, ಟಿ.ಎಸ್‍. ನಾಗಾಭರಣ, ರಾಜೇಶ್ ನಟರಂಗ, ಅಚ್ಯುತ್‍ ಕುಮಾರ್ ಇತರರು.

ಅದು ಮೂಡಲಾಪುರ. ಅವನದು ಮಿಲಿಟರಿಯಲ್ಲಿ ಕೆಲಸ. ಊರಿಗೆ ಬಂದರೆ ಎಲ್ಲರೂ ಪ್ರೀತಿಯಿಂದ ಕಾಣೋದು ಸಹಜ. ಆದರೆ, ಅವನ ಗೆಳೆಯರು ಅಷ್ಟೇ ಅಲ್ಲ ಅವನ ಅಮ್ಮ ಕೂಡ ಸೈನ್ಯದಿಂದ ಬಂದು ಅಷ್ಟೇ ಬೇಗ ಹೊರಡಲಿ ಎಂಬ ಯೋಚನೆ ಅವರದು…

ಇಷ್ಟಕ್ಕೂ ಯಾಕೆ ಅವನು ಬೇಗ ವಾಪಾಸ್ ಹೋಗಬೇಕು ಅನ್ನುವುದಾದರೆ , ಅವನೊಳಗಿನ‌ ವಿಚಿತ್ರ ವರ್ತನೆ. ಮಾಡಿಕೊಂಡ ಬದಲಾವಣೆ.

ಊರ ತುಂಬಾ ನಮ್ಮೂರ ಹುಡುಗ ಸೈನಿಕ. ಎದುರಾಳಿಗಳನ್ನು ಉಡಾಯಿಸೋ ಧೀರ ಅಂಂದುಕೊಂಡರೆ, ಅವನದು ಮಾತ್ರ ಸೇನೆಯಲ್ಲಿ ಅಡುಗೆ ಮಾಡುವ ಕೆಲಸ!
ಆ ಕೆಲಸದಿಂದ ಹೊರ ನಡೆಯಬೇಕು ಅಂತ ಅಂದುಕೊಳ್ಳುವ ಅವನ ಬದುಕಲ್ಲೊಂದು ಘಟನೆ ನಡೆಯುತ್ತೆ. ಅಲ್ಲಿಂದ ಕಥೆಯ ದಿಕ್ಕು ಬೇರೆಡೆ ಸಾಗುತ್ತೆ. ಅವನ ಲೈಫು ಹೊಸ ದಿಗಂತದೆಡೆಗೆ ಹೋಗುತ್ತೆ. ಎಷ್ಟರಮಟ್ಟಿಗೆ ಅಂದರೆ ಊರ ಜನ ಅವನ ಪ್ರತಿಮೆ ಕೆತ್ತಿ ನಿಲ್ಲಿಸುವಷ್ಟು! ಅಷ್ಟಕ್ಕೂ ಅವನು ಮಾಡುವ ಕೆಲಸವೇನು? ಕುತೂಹಲ ಇದ್ದರೆ ಸಿನಿಮಾ ಮಿಸ್ ಮಾಡದೆ ನೋಡಿ.


‘ಕಾಲಾಪತ್ಥರ್‍’ ಚಿತ್ರದ ಹೈಲೈಟ್ ಎಂದರೆ ಅದು ಕಥೆ. ಡಿ. ಸತ್ಯಪ್ರಕಾಶ್‍ ಕಥೆಯಲ್ಲಿ ಗಟ್ಟಿತನವಿದೆ. ನಿರೂಪಣೆಯಲ್ಲಿ ವಿಶೇಷವಿದೆ. ಕೊನೆಯವರೆಗೆ ನೋಡುಗರನ್ನು ಹಿಡಿದು ಕೂರಿಸುವ ತಾಕತ್ತು ಈ ಸಿನಿಮಾಗಿದೆ. ಕಮರ್ಷಿಯಲ್ ಅಂಶಗಳಿದ್ದರೂ, ಸೈಕಲಾಜಿಕಲ್ ಥ್ರಿಲ್ಲರ್ ಎಲಿಮೆಂಟ್ ನೋಡುಗರಿಗೆ ಖುಷಿ ನೀಡುತ್ತೆ.

ನೋಡ ನೋಡುತ್ತಲೇ ಮೊದಲರ್ಧ ಮುಗಿಯುತ್ತೆ. ಸೆಕೆಂಡ್ ಹಾಫ್ ಕೂಡ ಅರ್ಥಪೂರ್ಣ ಕಥೆಯ ಆಶಯದೊಂದಿಗೆ ಮುಕ್ತಾಯಗೊಳ್ಳುತ್ತೆ.

ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ತ ಅಲ್ಲವಾದರೂ ಸೈನಿಕನ ಕಥೆಯೊಳಗಿನ ಹೊಸತನ ನೋಡುಗರನ್ನು ಮೆಚ್ಚಿಸುತ್ತೆ.

ನಿರ್ದೇಶಕರ ಮೊದಲ ಪ್ರಯತ್ನ ಇದಾದರೂ ಹಾಗನಿಸಲ್ಲ. ಎಲ್ಲೂ ಬೋರ್ ಎನಿಸದೆ ಏನು ಹೇಳಬೇಕು, ಎಷ್ಟು ಹೇಳಬೇಕು ಅದನ್ನು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಒಂದು‌ಸಣ್ಣ ಮೆಸೇಜ್ ಇದೆ. ಅಣ್ಣಾವ್ರ ಆಶಯ ಕಾಣುತ್ತೆ. ಆ ಕಾರಣಕ್ಕಾದರೂ ಜನ ನೋಡಬೇಕು. ಯಾಕೆ ಅಣ್ಣಾವ್ರು ಇಲ್ಲಿ ನೆನಪಾಗುತ್ತಾರೆ ‌ಎಂಬುದನ್ನು ಸಿನಿಮಾದಲ್ಲೇ ನೋಡಬೇಕು.

ಯಾರು ಹೇಗೆ?

ಸಿನಿಮಾದಲ್ಲಿ ಹೀರೋ ಆಗಿರುವ
ವಿಕ್ಕಿ ಇಷ್ಟವಾಗುತ್ತಾರೆ. ಇನ್ನ ಅವರ ನಿರ್ದೇಶನ ಕೂಡ ಸೈ ಎನಿಸಿಕೊಂಡಿದ್ದಾರೆ.
ನಾಯಕಿಯಾಗಿ ಧನ್ಯಾ ರಾಮ್‍ಕುಮಾರ್ ಕೂಡ ಪಾತ್ರಕ್ಕೆ ಸರಿ ಹೊಂದಿದ್ದಾರೆ. ಪಾತ್ರ ಸಂಪೂರ್ಣ ನಿರ್ವಹಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ನಾಗಾಭರಣ, ಸಂಪತ್‍ ಮೈತ್ರೇಯಾ ಎಲ್ಲರೂ ತಮ್ಮ ಪಾತ್ರಗಳಿಗೆ ಮೋಸ ಮಾಡಿಲ್ಲ.

ಸಂಗೀತ ನಿರ್ದೇಶಕ ಅನೂಪ್‍ ಸೀಳಿನ್‍ ಅವರ ಕೆಲಸ‌ ಎದ್ದು ಕಾಣುತ್ತೆ. ಅವರ ಸಾಂಗ್ ಇಷ್ಟವಾಗುತ್ತೆ.
ಕ್ಯಾಮೆರಾಮನ್ ಸಂದೀಪ್‍ ಕುಮಾರ್ ಕೈ ಚಳಕ ಪುಳಕವಾಗಿಸುತ್ತೆ. ಇನ್ನು ಸ್ಟಂಟ್ ಮಾಸ್ಟರ್ ವಿಕ್ರಮ್‍ ಮೋರ್, ಮಾಸ್ ಮಾದ ಅವರ ಸಾಹಸ ಮಾತಾಡುತ್ತೆ. ಈಗಿನ ಯೂತ್ಸ್ ಗೆ ಈ ಸಿನಿಮಾ ಮನರಂಜನೆ ಜೊತೆಗೆ ಸಣ್ಣ ಸಂದೇಶವನ್ನೂ ಕೊಡುತ್ತೆ.

Categories
ಸಿನಿ ಸುದ್ದಿ

ಯಲಾಕುನ್ನಿ ಟೀಸರ್ ಎಲ್ಲೆಡೆ ಮೆಚ್ಚುಗೆ: ಇದು ಕೋಮಲ್ ನಟನೆ ವಿಶೇಷ ಇಮೇಜ್ ನ ಚಿತ್ರ

ಸ್ಯಾಂಡಲ್ ವುಡ್ ನ ಲಾಫಿಂಗ್ ಸ್ಟಾರ್ ಕೋಮಲ್ ಅವರು ವಜ್ರಮುನಿ ಗೆಟಪ್ ನಲ್ಲಿ ಹೇಗಿರುತ್ತಾರೆ ಎನ್ನುವ ಕುತೂಹಲ ಈಗಾಗಲೇ ತುಸು ಹೆಚ್ಚಾಗಿದೆ. ಇದಕ್ಕೆ ಕಾರಣ ಯಲಾಕುನ್ನಿ ಸಿನಿಮಾ. ಗಣೇಶನ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಥೇಟು ವಜ್ರಮುನಿ ಅವರೇ ಮತ್ತೆ ಬಂದಂತೆ ಫಸ್ಟ್ ಲುಕ್ ನಲ್ಲಿ ಕೋಮಲ್ ಅವರು ರಾರಾಜಿಸಿದ್ದಾರೆ.

ಕೋಮಲ್ ಅವರ ಈ ಗೆಟಪ್ ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಮಾತುಗಳು ವ್ಯಕ್ತವಾಗಿವೆ. ಹಾಸ್ಯ ನಟನೊಬ್ಬ ಹೀಗೆ ಮಾಸ್, ಕ್ಲಾಸ್ ಜಾನರ್ ಗಳ ಚಿತ್ರಗಳ ಹೀರೋ ಆಗುವ ಜತೆಗೆ ಯಲಾಕುನ್ನಿ ಅಂತಹ ವಿಭಿನ್ನವಾದ ಚಿತ್ರ-ಪಾತ್ರದಲ್ಲೂ ನಟಿಸುವುಕ್ಕೆ ಸಾಧ್ಯ ಎಂಬುದನ್ನು ತೋರಿಸಿದ್ದಾರೆ.


ಅಂದಹಾಗೆ, ಹೀಗೆ ಕೋಮಲ್ ಅವರ ಮೇಲೆ ನಿರೀಕ್ಷಿ ಹುಟ್ಟಿಸಿರುವ ಈ ಯಲಾಕುನ್ನಿ ಚಿತ್ರದ ಟೀಸರ್ ಸೆ.15 ರ ಸಂಜೆ 5 ಗಂಟೆಗೆ ಕೋಮಲ್ ಕುಮಾರ್ ಸ್ಟುಡಿಯೋಸ್ ಹೆಸರಿನ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಿದೆ. ವಿಶೇಷ ಎಂದರೆ ಅದೇ ದಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಬಹು ಜನಪ್ರಿಯ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಗ್ರ್ಯಾಂಡ್ ಫಿಲಾಲೆಯಲ್ಲಿ ಈ ಟೀಸರ್ ಅದ್ದೂರಿಯಾಗಿ ಅನಾವರಣಗೊಳಿಸಲಾಗಿದೆ.


ಸೌಂದರ್ಯ ಲಹರಿ ಕಂಬೈನ್ಸ್ ಮೂಲಕ ಅನುಸೂಯಾ ಕೋಮಲ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ನರಸಿಂಹ ಸಿನಿಮಾಸ್ ನ ಸಹನಾ ಮೂರ್ತಿ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದೆ. ‘ಯಲಾಕುನ್ನಿ’ ಚಿತ್ರಕ್ಕೆ ಎನ್‍.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಧರ್ಮವಿಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.


ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ ಆರ್ ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್ ಕರ್, ಮಾನಸಿ ಸುಧೀರ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ.ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ಬಣ್ಣ ಹಚ್ಚಿದ್ದಾರೆ. ವಿಶೇಷ ಎಂದರೆ ಮಜ್ರಮುನಿ ಅವರ ಮೊಮ್ಮಗ ಆಕರ್ಷ ವಜ್ರಮುನಿ ಕೂಡ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಫೈರ್ ಫ್ಲೈ ಹೀರೋ ಇಂಟ್ರಡಕ್ಷನ್ ಟೀಸರ್ ರಿಲೀಸ್: ಇದು ನಿವೇದಿತಾ ಶಿವರಾಜ ಕುಮಾರ್ ಚಿತ್ರ

ನಾಯಕನಾಗಿ, ನಿರ್ದೇಶಕನಾಗಿ ವಂಶಿ ಶೈನಿಂಗ್..ವಿಕ್ಕಿಯಾಗಿ ‘ಫೈರ್ ಫ್ಲೈ’ನಲ್ಲಿ ಏನ್ ಮಾಡ್ತಾರೆ ವಂಶಿ? ಫೈರ್ ಫ್ಲೈ’ ಸಿನಿಮಾದ ಮೊದಲ ಝಲಕ್ ರಿಲೀಸ್…ನಾಯಕ ವಂಶಿ ಇಂಟ್ರೂಡ್ಷನ್ ಟೀಸರ್ ಅನಾವರಣ

‘ಫೈರ್‌ ಫ್ಲೈ’ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ವಿಕ್ಕಿಯಾಗಿ ನಾಯಕ ವಂಶಿಯನ್ನು ಫೈರ್ ಫ್ಲೈ ಬಳಗ ಸಿನಿಮಾಪ್ರೇಮಿಗಳಿಗೆ ಪರಿಚಯಿಸಿದೆ.

ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಿಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್ ನಡೆಯುತ್ತದೆ. ವಿಕ್ಕಿ ವಿಚಿತ್ರ ವರ್ತನೆಯನ್ನು ಸಖತ್ ಫನ್ನಿಂಯಾಗಿ ಕಟ್ಟಿಕೊಡಲಾಗಿದೆ. 2 ನಿಮಿಷ 49 ಸೆಕೆಂಡ್ ಇರುವ ಫೈರ್ ಫ್ಲೈ ಟೀಸರ್ ಕುತೂಹಲದಿಂದ ಕೂಡಿದ್ದು, ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ ಅಸಲಿಗೆ ಯಾಕೆ ವಿಚಿತ್ರವಾಗಿ ವರ್ತನೆ ಮಾಡ್ತಾನೆ ಅನ್ನೋದರ ಗುಟ್ಟುಬಿಟ್ಟು ಕೊಟ್ಟಿಲ್ಲ.

ವಂಶಿ ನಾಯಕನಾಗಿ ನಿರ್ದೇಶಕನಾಗಿ ಮಿಂಚಿದ್ದು, ತಾಂತ್ರಿಕವಾಗಿ ಟೀಸರ್ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಫ್ರೇಮ್, ಕಲರಿಂಗ್, ಕಂಟೆಂಟ್, ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೆ ಒಳ್ಳೆ ಔಟ್ ಫುಟ್ ನೀಡಲಾಗಿದೆ. ಚರಣ್ ರಾಜ್ ಸಂಗೀತ, ಅಭಿಲಾಷ್ ಕಳತ್ತಿ ಕ್ಯಾಮೆರಾವರ್ಕ್ ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರುಮುಗಂ ಸಂಕಲನ ಫೈರ್ ಫ್ಲೈ ಟೀಸರ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.


ಫೈರ್ ಫ್ಲೈ ನಾಯಕನಾಗಿ ಅಭಿನಯಿಸಿರುವ ವಂಶಿಗೆ ಜೋಡಿಯಾಗಿ ರಚನಾ ಇಂದರ್, ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಮೂಗು ಸುರೇಶ್, ಚಿತ್ಕಲಾ ಬಿರಾದಾರ್, ಸಿಹಿ ಕಹಿ ಚಂದ್ರು ತಾರಾಬಳಗದಲ್ಲಿದ್ದಾರೆ.ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ.

ಫೈರ್ ಫ್ಲೈ ಮೂಲಕವೇ ನಿರ್ದೇಶಕ ವಂಶಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ಇವರ ಮೊದಲ ಪ್ರಯತ್ನದ ಬಗ್ಗೆ ಟಾಕ್ ಇದ್ದೇ ಇದೆ. ಚಿತ್ರದ ಮೊದಲ ಝಲಕ್ ನಲ್ಲಿ ಫನ್-ಎಮೋಷನ್, ಎಂಟರ್ ಟೈನ್ಮೆಂಟ್ ಎಲ್ಲವೂ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಕರ್ಕಿಯ ಹಾಡು ಬಂತು: ಸದ್ದಾಗುತ್ತಿದೆ ಜನ್ಯ ಮೆಲೋಡಿ

ತಮಿಳಿನಲ್ಲಿ 90ರ ದಶಕದಲ್ಲಿ ‘ಸೂರ್ಯನ್’, ‘ಐ ಲವ್ ಇಂಡಿಯಾ’, ‘ಇಂದು’, ‘ಕಲ್ಲೂರಿ ವಾಸಲ್‍’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದವರು ಖ್ಯಾತ ನಿರ್ದೇಶಕ ಪವಿತ್ರನ್. ಈಗ ಪವಿತ್ರನ್ ಕನ್ನಡದಲ್ಲಿ ಸದ್ದಿಲ್ಲದೆ ‘ಕರ್ಕಿ’ ಎಂಬ ಹೊಸ ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ‘ಕರ್ಕಿ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಆಡಿಯೋವನ್ನು ಬಿಡುಗಡೆ ಮಾಡಿದೆ.

ಸಂಗೀತ ನಿರ್ದೇಶ ಮತ್ತು ಸಾಹಿತಿ ಕೆ. ಕಲ್ಯಾಣ್, ಚಿತ್ರ ಸಾಹಿತಿ ಕವಿರಾಜ್, ನಟಿ ಸಾತ್ವಿಕಾ, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ಬಾ. ಮ. ಹರೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮತ್ತು ಚಿತ್ರತಂಡದ ಸದಸ್ಯರು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ‘ಕರ್ಕಿ’ಯ ಹಾಡುಗಳನ್ನು ಬಿಡುಗಡೆ ಮಾಡಿದರು.

ಆಡಿಯೋ ಬಿಡುಗಡೆ ವೇಳೆ ಮಾತನಾಡಿದ ‘ಕರ್ಕಿ’ ಚಿತ್ರತಂಡ, ತಮ್ಮ ಸಿನಿಮಾದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.

ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಿಸಿರುವ ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ, ‘ಕರ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡುವ ಅವರು, ‘ಸಿನೆಮಾದ ಕಥೆ ಇಷ್ಟವಾಗಿ ಈ ಸಿನೆಮಾವನ್ನು ನಿರ್ಮಿಸಲು ಮುಂದಾದೆ. ಮೊದಲು ಈ ಸಿನೆಮಾವನ್ನು ಕನ್ನಡದ ದೊಡ್ಡ ನಿರ್ದೇಶಕರೊಬ್ಬರು ಮಾಡಬೇಕಿತ್ತು.

ಕಾರಣಾಂತರಗಳಿಂದ ಅವರು ನಿರ್ದೇಶನ ಮಾಡಲಾಗಲಿಲ್ಲ. ಅವರ ಬದಲಾಗಿ ತಮಿಳು ನಿರ್ದೇಶಕ ಪವಿತ್ರನ್ ಈ ಸಿನಿಮಾವನ್ನು ನಿರ್ದೇಶಿಸಿದರು. ಅವರ ಅನುಭದಲ್ಲಿ ‘ಕರ್ಕಿ’ ಸಿನೆಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಸಿನೆಮಾದ ಎಲ್ಲಾ ಕೆಲಸಗಳು ಮುಗಿದಿದ್ದು, ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎಂದಿದ್ದಾರೆ.

ಈ ಹಿಂದೆ ‘ವಾಟ್ಸಾಪ್ ಲವ್’, ‘ರಾಜರಾಣಿ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಜಯಪ್ರಕಾಶ್ (ಜೆ.ಪಿ) ರೆಡ್ಡಿ ‘ಕರ್ಕಿ’ ಚಿತ್ರದ ನಾಯಕ. ಕಾನೂನು ಪದವಿಧರನಾಗಬೇಕು ಎಂಬ ಕನಸಿರುವ ಹಳ್ಳಿ ಹುಡುಗನ ಪಾತ್ರದಲ್ಲಿ ಜೆಪಿ ಅಭಿನಯಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ನಾಯಕ ನಟ ಜೆ.ಪಿ, ‘ಈ ಚಿತ್ರದಲ್ಲಿ ನನ್ನದು ಮುತ್ತುರಾಜ್ ಎಂಬ ಹಳ್ಳಿ ಹುಡುಗನ ಪಾತ್ರ. ಜಾತಿ ಮತ್ತು ಜನಾಂಗೀಯ ವಿಷಯವನ್ನು ಮನ ಮುಟ್ಟುವಂತೆ ಇಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಪ್ರೇಮ ಮತ್ತು ಮಾನವೀಯತೆಯ ಅಂಶಗಳ ಸುತ್ತ ಈ ಚಿತ್ರ ಸಾಗುತ್ತದೆ. ಆದಷ್ಟು ನೈಜವಾಗಿ ಸಿನೆಮಾದ ಕಥೆ, ಪಾತ್ರಗಳು ಮೂಡಿಬಂದಿದೆ’ ಎಂದಿದ್ದಾರೆ.

’ಕರ್ಕಿ’ ಮೆಲೋಡಿ ಗೀತೆಗೆ ಅರ್ಜುನ್ ಜನ್ಯ ಟ್ಯೂನ್
‘ಕರ್ಕಿ’ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಬೇರೆ ಬೇರೆ ಶೈಲಿಯ ಆರು ಹಾಡುಗಳಿದ್ದು, ಈ ಎಲ್ಲಾ ಹಾಡುಗಳಿಗೆ ಸಾಹಿತ್ಯ ರಚಿಸಿದವರು ಚಿತ್ರ ಸಾಹಿತಿ ಕವಿರಾಜ್‍. ಚಿತ್ರದ ಕುರಿತು ಮಾತನಾಡುವ ಕವಿರಾಜ್, ‘ತಮಿಳಿನ ಹಿರಿಯ ಮತ್ತು ಅನುಭವಿ ನಿರ್ದೇಶಕ ಪವಿತ್ರನ್, ಈ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ಆರು ಹಾಡುಗಳಿದ್ದು, ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆಯಲು ಅವಕಾಶ ಸಿಕ್ಕಿದೆ. ಪ್ರತಿ ಹಾಡಿನ ಒಂದೊಂದು ಪದವನ್ನೂ ಅವರೂ ಅರ್ಥೈಸಿಕೊಂಡು, ಸ್ಪಂದಿಸುತ್ತಿದ್ದರು. ನಮ್ಮ ನಡುವಿನ ಕಥೆಯೊಂದು ಹೊಸ ರೀತಿಯಲ್ಲಿ ಮೂಡಿಬಂದಿದ್ದು, ‘ಕರ್ಕಿ’ ನೋಡುಗರಿಗೆ ಹೊಸ ಅನುಭವ ಕೊಡಲಿದೆ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಿಗರಿಗೆ ಹೊಸಥರದ ಚಿತ್ರ ಕೊಡುವ ನಿರೀಕ್ಷೆಯಲ್ಲಿ ಪವಿತ್ರನ್
ಇನ್ನು ಖ್ಯಾತ ನಿರ್ದೇಶಕ ಪವಿತ್ರನ್ ‘ಕರ್ಕಿ’ ಸಿನಿಮಾ ಕನ್ನಡಿಗರಿಗೆ ಹೊಸಥರದ ಅನುಭವ ನೀಡುವ ಸಿನಿಮಾ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ. ‘ಇದು ಕನ್ನಡ ಚಿತ್ರ ಪ್ರೇಕ್ಷಕರಿಗೆ ಖಂಡಿತವಾಗಿಯೂ ಮನಮುಟ್ಟುವ ಸಿನಿಮಾವಾಗಲಿದೆ. ನಮ್ಮ ನಡುವೆಯೇ ನಡೆಯುವ ನೈಜ ಕಥೆಯನ್ನು ಈ ಸಿನಿಮಾದಲ್ಲಿ ತೆರೆಮೇಲೆ ತಂದಿದ್ದೇವೆ. ಇಲ್ಲಿ ಯಾವುದನ್ನೂ ವೈಭವೀಕರಿಸದೆ, ನೈಜವಾಗಿ ಎಲ್ಲವನ್ನೂ ಪ್ರೇಕ್ಷಕರ ಮುಂದಿಡುವ ಕೆಲಸ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ’ ಎನ್ನುತ್ತಾರೆ ನಿರ್ದೇಶಕ ಪವಿತ್ರನ್.

ಇದೇ ತಿಂಗಳಾಂತ್ಯಕ್ಕೆ ‘ಕರ್ಕಿ’ ದರ್ಶನ ಫಿಕ್ಸ್’
ಚಿತ್ರತಂಡದ ಮೂಲಗಳ ಪ್ರಕಾರ ಇದೇ ಸೆಪ್ಟೆಂಬರ್ ಅಂತ್ಯದೊಳಗೆ ‘ಕರ್ಕಿ’ ಸಿನಿಮಾ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. ‘ಕರ್ಕಿ’ ಸಿನಿಮಾ ಹಿಂದಿಯಲ್ಲಿ ‘ಧಡಕ್ 2’ ಎಂಬ ಹೆಸರಿನಲ್ಲಿ ತೆರೆಗೆ ಬರುತ್ತಿದ್ದು, ಈ ಸಿನಿಮಾವನ್ನು ಕರಣ್ ಜೋಹಾರ್ ನಿರ್ಮಿಸಿ, ಬಾಲಿವುಡ್ ನಲ್ಲಿ ತೆರೆಗೆ ತರುತ್ತಿದ್ದಾರೆ. ಆ ಸಿನಿಮಾ ನವೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದ್ದು, ಅಷ್ಟರೊಳಗೆ ‘ಕರ್ಕಿ’ ಕನ್ನಡದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾನೆ.

’ಕರ್ಕಿ’ ಜೊತೆ ಚಂದನವನಕ್ಕೆ ಮೀನಾಕ್ಷಿ ಎಂಟ್ರಿ
ಇನ್ನು ‘ಕರ್ಕಿ’ ಸಿನೆಮಾದಲ್ಲಿ ನಾಯಕಿಯಾಗಿ ಮಲೆಯಾಳಿ ಬೆಡಗಿ ಮೀನಾಕ್ಷಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಮೀನಾಕ್ಷಿ ಅವರಿಗೆ ಇದು ಮೊದಲ ಕನ್ನಡ ಸಿನೆಮಾ. ಈ ಸಿನೆಮಾದಲ್ಲಿ ಮೀನಾಕ್ಷಿ ಅವರದ್ದು ಶ್ರೀಮಂತ ಕುಟುಂಬದ, ಮೇಲ್ವರ್ಗದ ಹುಡುಗಿಯ ಪಾತ್ರವಂತೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಮೀನಾಕ್ಷಿ, ‘ನನ್ನ ಮೊದಲ ಕನ್ನಡ ಸಿನೆಮಾದಲ್ಲೇ ಒಳ್ಳೆಯ ಪಾತ್ರ ಸಿಕ್ಕಿದೆ. ನೈಜತೆಗೆ ಹತ್ತಿರವಿರುವಂತ ಪಾತ್ರ ಇದಾಗಿದೆ. ಅಪ್ಪಟ ಕನ್ನಡದ ಹುಡುಗಿಯ ಪಾತ್ರ ಮಾಡಿಕುವುದಕ್ಕೆ ಖುಷಿಯಿದೆ. ಪ್ರತಿಯೊಬ್ಬ ನೋಡುಗರಿಗೂ ನನ್ನ ಪಾತ್ರ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನುರಿತ ಕಲಾವಿದರ ಜೊತೆ ‘ಕರ್ಕಿ’ ಆಗಮನ
‘ಕರ್ಕಿ’ ಚಿತ್ರದಲ್ಲಿ ಜಯಪ್ರಕಾಶ್‍ ಅವರಿಗೆ ಮಲೆಯಾಳಿ ಬೆಡಗಿ ಮೀನಾಕ್ಷಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧು ಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಹೃಷಿಕೇಶ ಛಾಯಾಗ್ರಹಣ, ಕ್ರೇಜಿಮೈಂಡ್ಸ್ ಶ್ರೀ ಸಂಕಲನ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಬೃಹತ್ ಕಲಾವಿದರ ತಾರಾಗಣ, ನುರಿತ ತಂತ್ರಜ್ಞರ ದಂಡೇ ‘ಕರ್ಕಿ’ ಸಿನಿಮಾದಲ್ಲಿದೆ. ಸದ್ಯ ತನ್ನ ಟೀಸರ್ ಮತ್ತ ಟ್ರೇಲರ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ ‘ಕರ್ಕಿ’ ಅಬ್ಬರ ತೆರೆಮೇಲೆ ಹೇಗಿರಲಿದೆ ಎಂಬುದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ಜಮೀರ್ ಪುತ್ರನ ಕಲ್ಟ್ ಚಿತ್ರಕ್ಕೆ ಚಾಲನೆ: ಝೈದ್ ಖಾನ್ ಜೊತೆ ರಚಿತಾ, ಮಲೈಕಾ

“ಬನಾರಸ್” ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಈ ವರ್ಷದ ಭರ್ಜರಿ ಹಿಟ್ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಗೌರಿಹಬ್ಬದ ಶುಭದಿನದಂದು ನೆರವೇರಿದೆ.

ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್ ಕುಮಾರ್ ಅವರ ಪತ್ನಿ ಆರಂಭ ಫಲಕ ತೋರಿದರು. ಝೈದ್ ಖಾನ್ ಅವರ ಅಜ್ಜಿ(ಸಚಿವ ಜಮೀರ್ ಅಹಮದ್ ಖಾನ್ ಅವರ ತಾಯಿ) ಕ್ಯಾಮೆರಾ ಚಾಲನೆ ಮಾಡಿದರು. ಝೈದ್ ಖಾನ್, ರಚಿತಾ ರಾಮ್, ಮಲೈಕಾ‌,‌ ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತದಲ್ಲಿ ಇದ್ದರು.

ಮೊದಲು ಬಿಡುಗಡೆಯಾದ ಪೋಸ್ಟರ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಝೈದ್ ಖಾನ್ ಅವರೊಂದಿಗೆ ಡಿಂಪಲ್ ಕ್ವೀನ್ ರಚಿತಾರಾಮ್ ಹಾಗೂ “ಉಪಾಧ್ಯಕ್ಷ” ಖ್ಯಾತಿಯ ಮಲೈಕ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ ಕುಮಾರ್, ALL OK ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ “ಕಲ್ಟ್ ” ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ , ರವಿವರ್ಮ ಸಾಹಸ ನಿರ್ದೇಶನ ಹಾಗೂ ಭೂಷಣ್ – ಸಂತು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಧನ್ವೀರ್ ಬರ್ತ್ ಡೇಗೆ ಬಂತು ಹಯಗ್ರೀವ ಪೋಸ್ಟರ್

ನಾಯಕ ಧನ್ವೀರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಧರ್ಭದಲ್ಲಿ ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಘುಕುಮಾರ್ ಓ.ಆರ್ ನಿರ್ದೇಶನದಲ್ಲಿ ಧನ್ವೀರ್ ನಾಯಕರಾಗಿ ನಟಿಸುತ್ತಿರುವ “ಹಯಗ್ರೀವ” ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ನಾಯಕ ಧನ್ವೀರ್ ಅವರಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಧನ್ವೀರ್ ಅವರ “ಹಯಗ್ರೀವ” ಚಿತ್ರದ ಪಾತ್ರ ಏನಿರಬಹುದೆಂಬ ಕುತೂಹಲ ಅಭಿಮಾನಿಗಳಿಗಿತ್ತು. ಇಂದು ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಧನ್ವೀರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಧನ್ವೀರ್ ಅವರ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ “ಹಯಗ್ರೀವ” ಚಿತ್ರಕ್ಕೆ ಮಾತಿನ ಜೋಡಣೆ ನಡೆಯುತ್ತಿದೆ.

ಧನ್ವೀರ್ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಮೇಶ್ ಭಟ್, ಶರತ್ ಲೋಹಿತಾಶ್ವ, ಶೋಭ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ.‌ ಗಿರೀಶ್ ಆರ್ ಗೌಡ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ, ಡಿಫರೆಂಟ್ ಡ್ಯಾನಿ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಭೂಷಣ್ ಅವರ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಗಾಂಗೇಯ ಹಾಡು ಬಂತು: ಜಾತಿ ಧರ್ಮದ ಸಮನ್ವಯ ಕಥೆ

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ‘ಗಾಂಗೇಯ’ ಸಿನೆಮಾ ತಯಾರಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಸಿನೆಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ನರಸಿಂಹಲು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ದೊಡ್ಡಪ್ಪ ಚೆಲುವಮೂರ್ತಿ ಮುಂತಾದ ಗಣ್ಯರು ಕನ್ನಡ ಅವತರಣಿಕೆಯ ಹಾಡುಗಳನ್ನು ಬಿಡುಗಡೆ ಮಾಡಿ ಶುಭಕೋರಿದರು.

ತೆಲುಗು ಸಿನೆಮಾ ರಂಗದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಗಗನ್ ‘ಗಾಂಗೇಯ’ ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಣಧೀರ್, ತೇಜಾಂಕ್, ಸುಮನ್ ಪ್ರಮುಖ ತಾರಾಗಣದಲ್ಲಿದ್ದಾರೆ. ವಿಜಯಶೇಖರ್ ರೆಡ್ಡಿ, ರಾಮಚಂದ್ರ ಶ್ರೀನಿವಾಸಕುಮಾರ್ ನಿರ್ಮಾಣ ಮಾಡಿದ್ದಾರೆ.

ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿ ಜಾತಿ,ಧರ್ಮಗಳ ಸಂಘರ್ಷ ಹೆಚ್ಚುತ್ತಿದೆ. ಸರ್ವ ಜಾತಿ,ಧರ್ಮಗಳ ಸಮನ್ವಯತೆ ಸಾರುವ ಉದ್ದೇಶದಿಂದ ‘ಗಾಂಗೇಯ’ ಸಿನೆಮಾ ಮಾಡಲಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಎಂ.ರಾಮಚಂದ್ರ ಶ್ರೀನಿವಾಸಕುಮಾರ್, ಗ್ರಾಮೀಣ ಪ್ರದೇಶದ ಯುವಕರು ಕೆಲಸ ಮಾಡಲು ನಗರಕ್ಕೆ ಬಂದಾಗ ಸಂಭವಿಸುವ ಘಟನೆಗಳೇ ಸಿನೆಮಾದ ಕಥಾವಸ್ತು. ಗಾಂಗೇಯ ಎಂದರೆ ಸುಬ್ರಹ್ಮಣ್ಯ ದೇವರ ಹೆಸರು, ಭೀಷ್ಮನ ಹೆಸರು ಸಹ ಅದೇ. ಅದ್ದೂರಿಯಾಗಿ ಸಿನೆಮಾ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ, ಆಂದ್ರ, ಕೇರಳದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆಯಿದೆ ಎಂದರು.

ಯುವಕಲಾವಿದರು ಹಾಗೂ ತಂತ್ರಜ್ಞರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಹುಟ್ಟುಹಾಕಲಾಗಿದೆ.ನಮ್ಮ ವಿಜಯ ಗೌತಮಿ ಆರ್ಟ್ ಮೂವೀಸ್ ಸಂಸ್ಥೆವತಿಯಿಂದ ವರ್ಷಕ್ಕೆ 10ಸಿನೆಮಾ ಮಾಡುವುದಾಗಿ ಘೋಷಣೆ ಮಾಡಿದರು ನಿರ್ದೇಶಕ, ನಿರ್ಮಾಪಕ, ರಾಮಚಂದ್ರ ಶ್ರೀನಿವಾಸ ಕುಮಾರ್.

ಈ ಹಿಂದೆ ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದೆ ಗಾಂಗೇಯ ನನ್ನ ಮೊದಲ ಕನ್ನಡ ಸಿನೆಮಾ. ಸಮಾಜಕ್ಕೆ ಸಂದೇಶ ನೀಡುವನಿಟ್ಟಿನಲ್ಲಿ ನಿರ್ದೇಶಕರು ಸಿನೆಮಾ ಕಥೆ ಬರೆದಿದ್ದಾರೆ .ಅವರು ನೀಡಿರುವ ಪಾತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾತ್ರಕ್ಕೆ ತಯಾರಿ ಮಾಡಿಕೊಂಡು ನಟಿಸುತ್ತಿದ್ದೇನೆ ಎಂದರು ನಟ ಗಗನ್.

ಖ್ಯಾತ ನಟ ಸುಮನ್ ಸೇರಿದಂತೆ ಇನ್ನಿತರ ತಾರಾಗಣವಿದೆ. ರ‌್ಯಾಪ್ ರಾಕ್ ಶಕೀಲ್ ಸಂಗೀತ,ಅದುಸುಮಿಲಿ ವಿಜಯ್ ಕುಮಾರ್ ಛಾಯಾಗ್ರಹಣ,ಕೋಟಗಿ ವೆಂಕಟೇಶ ರಾವ್ ಸಂಕಲನ ಸಿನೆಮಾಕ್ಕಿದೆ.

Categories
ಸಿನಿ ಸುದ್ದಿ

ತೇಜಸ್ವಿ ಅವರ ಜುಗಾರಿ ಕ್ರಾಸ್ ಈಗ ತೆರೆಮೇಲೆ: ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಗುರುದತ್ ಗಾಣಿಗ ನಿರ್ದೇಶನ

‘ಜುಗಾರಿ ಕ್ರಾಸ್’ ಈ ಪ್ರಸಿದ್ಧ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ ‘ಜುಗಾರಿ ಕ್ರಾಸ್’ ಕೂಡ ಒಂದು. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ ‘ಜುಗಾರಿ ಕ್ರಾಸ್’. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ಪೂಚಂತೇ.


ಓದುಗರ ನೆಚ್ಚಿನ ಶ್ರೇಷ್ಠ ಕಾದಂಬರಿ ಜುಗಾರಿ ಕ್ರಾಸ್ ಇದೀಗ ಸಿನಿಮಾವಾಗುತ್ತಿದೆ. ಬೆಳ್ಳಿ ಪರದೆ ಮೇಲೆ ತೇಜಸ್ವಿಯವರ ಜುಗಾರಿ ಕ್ರಾಸ್ ರಾರಾಜಿಸಲು ಸಿದ್ದವಾಗುತ್ತಿದೆ. ಅಂದಹಾಗೆ ಈ ಕಾದಂಬರಿಯನ್ನು ತೆರೆಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ ‘ಕರಾವಳಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ. ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅನೌನ್ಸ್ ಮಾಡಿ ಬಿಗ್ ಸರ್ಪೈಸ್ ನೀಡಿದ್ದಾರೆ ನಿರ್ದೇಶಕರು. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ.


ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಕನಸು ಕಂಡವರು ಅನೇಕರು. ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ನಿರ್ದೇಶಕರು, ಕಲಾವಿದರು ಪ್ರಯತ್ನ ಪಟ್ಟಿದ್ದರು.ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ಜುಗಾರಿ ಕ್ರಾಸ್ ಕಾಂದಬರಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಸಮಯ ಬಂದಿದೆ.


ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ, ಜುಗಾರಿ ಕ್ರಾಸ್ ನಲ್ಲಿ ಬರುವ ಪಾತ್ರಗಳಿಗೆ ಯಾರೆಲ್ಲ ಜೀವ ತುಂಬಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸುಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತರುವುದೆ ಅತೀ ದೊಡ್ಡ ಜವಾಬ್ದಾರಿ. ಹಾಗಾಗಿ ಈ ಶ್ರೇಷ್ಠ ಕಾದಂಬರಿಯ ಸಿನಿಮಾದಲ್ಲಿ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಾರಾ ಅಥವಾ ಸ್ಟಾರ್ ನಟರು ಬಣ್ಣ ಹಚ್ಚುತ್ತಾರಾ ಕಾದುನೋಡಬೇಕು.

ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಇರಲಿದೆ. ಇನ್ನು ತಾಂತ್ರಿಕ ವರ್ಗ, ಉಳಿದ ಎಲ್ಲಾ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಜುಗಾರಿ ಕ್ರಾಸ್ ಸಿನಿಮಾಗುತ್ತಿದೆ ಎನ್ನುವ ಸುದ್ದಿ ಕೇಳಿಯೇ ತೇಜಸ್ವಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇನ್ನು ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕುತೂಹಲ, ನಿರೀಕ್ಷೆ, ಕಾತರ ಎಲ್ಲರಲ್ಲೂ ಕಾಯುತ್ತಿದ್ದಾರೆ.

error: Content is protected !!