Categories
ಸಿನಿ ಸುದ್ದಿ

ಆ ಮನೆಯಲ್ಲೊಂದು ವಿಚಿತ್ರ ಪ್ರೇಮದಾಟ! ಭೀತಿ ಪ್ರೀತಿ ಇತ್ಯಾದಿ

ವಿಜಯ್ ಭರಮಸಾಗರ
ರೇಟಿಂಗ್: 5/2.5

ಚಿತ್ರ: ದಿ ವೆಕೆಂಟ್ ಹೌಸ್
ನಿರ್ದೇಶನ: ಎಸ್ತರ್ ನರೋನ್ಹಾ
ನಿರ್ಮಾಣ: ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್
ತಾರಾಗಣ: ಎಸ್ತರ್ ನರೋನ್ಹಾ, ಶ್ರೇಯಸ್ ಚಿಂಗ, ಸಂದೀಪ್ ಮಲಾನಿ ಇತರರು.

ಕಾನನದೊಳಗಿನ ನಡು ರಸ್ತೆ. ಆವರಿಸಿದ ಕಗ್ಗತ್ತಲು. ಮೃತ ದೇಹ ಹೊತ್ತು ಬರುತ್ತಿರುವ ವಿಕಾರವಾದ ರೂಪ. ಇಷ್ಟು ಹೇಳಿದ ಮೇಲೆ ಇದೊಂದು ದೆವ್ವದ ಕಥೆ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ.

ಹೌದು, ದಿ ವೆಕೆಂಟ್ ಹೌಸ್ ಪಕ್ಕಾ ಹಾರರ್ ಫೀಲ್ ತುಂಬಿದ ಚಿತ್ರ. ಹಾಗಂತ ಇಡೀ ಸಿನಿಮಾವನ್ನು ದೆವ್ವವೇ ಆವರಿಸಿಕೊಂಡಿದೆ ಅಂದುಕೊಳ್ಳುವಂತಿಲ್ಲ. ಮೊದಲ ಬಾರಿಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಎಸ್ತರ್ ನರೋನ್ಹಾ ಒಂದಷ್ಟು ಭಯ ಬೀಳಿಸುವ ಪ್ರಯತ್ನ ಮಾಡಿದ್ದಾರೆ. ಮೊದಲರ್ಧ ಪ್ರೀತಿ ಗೀತಿ ಇತ್ಯಾದಿ ತುಂಬಿದ್ದರೆ, ದ್ವಿತಿಯಾರ್ಧ ಅಲ್ಲಲ್ಲಿ ಭೀತಿ ಹುಟ್ಟಿಸೋಕೆ ಶುರು ಮಾಡುತ್ತಾರೆ. ಒಟ್ಟಾರೆ ಹೆಚ್ಚೇನು ಪ್ರಭಾವ ಬೀರದಿದ್ದರೂ, ದೆವ್ವ ಕೊಡುವ ಕಾಟ ಮಾತ್ರ ಗಮನಸೆಳೆಯದೇ ಇರದು.

ಸಿನಿಮಾದ ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಸಂಭಾಷಣೆ ಬಗ್ಗೆ ಕೊಂಚ ಗಮನಿಸಬೇಕಿತ್ತು. ಸಿನಿಮಾ ಎಲ್ಲೋ ಒಂದು ಕಡೆ ಸ್ಲೋ ಎನಿಸುತ್ತಿದ್ದಂತೆಯೇ ಅಲ್ಲೊಂದು ಹಾಡು ತೂರಿ ಬಂದು ಸಿನಿಮಾವನ್ನು ಮತ್ತದೇ ಟ್ರ್ಯಾಕ್ ಕಡೆಗೆ ಕರೆದೊಯ್ಯುತ್ತೆ. ಉಳಿದಂತೆ ಹಿನ್ನೆಲೆ ಸಂಗೀತದಲ್ಲಿ ಗಿಟಾರ್ ನದ್ದೇ ಸದ್ದು. ಇಂತಹ ಸಿನಿಮಾಗಳಿಗೆ ಎಫೆಕ್ಟ್ ಮುಖ್ಯ. ಅದಿಲ್ಲಿ ಮಾಯ. ಆದರೂ ಕೆಲವು ಕಡೆ ದೆವ್ವದ ಪ್ರೇಮದಾಟ ನೋಡುಗರಿಗೆ ನಗುಬತರಿಸುತ್ತೆ ಅನ್ನೋದೇ ಸಮಾಧಾನ.

ಚಿತ್ರದಲ್ಲಿ ಓಹೋ ಎನ್ನುವ ಎಲಿಮೆಂಟ್ಸ್ ಇರದಿದ್ದರೂ, ಕಥೆ ಸ್ವಲ್ಪ ಇಂಟ್ರೆಸ್ಟಿಂಗ್ ಎನಿಸುತ್ತೆ. ನಿರ್ದೇಶಕರ ಜಾಣತನ ಬಗ್ಗೆ ಹೇಳಬೇಕೆಂದರೆ, ಇಲ್ಲಿ ನಾಲ್ಕು ಪಾತ್ರಗಳು ಮಾತ್ರ ರಾರಾಜಿಸುತ್ತವೆ. ಎರಡು‌ಮನೆ ನಾಲ್ಕು ಪಾತ್ರ ಒಂದು ರಸ್ತೆ, ಒಂದು ತೋಟ ಇವಿಷ್ಟೇ ಲೊಕೇಷನ್. ಒಂದು ದೆವ್ವದ ಕಥೆ ಹೇಳೋಕೆ ಇಷ್ಟು ಸಾಕು ಬಿಡಿ.

ಇಷ್ಟಕ್ಕೂ ಕಥೆ ಏನು?
ಅಪ್ಪ ಅಮ್ಮನ ಕಳಕೊಂಡ ಅನಾಥ ಹುಡುಗ ಒಬ್ಬ ಶಿಕ್ಷಕ. ಅವನಿಗೋ ಪ್ರೀತಿಸುವ ಬಯಕೆ. ಅದೇ ಸಮಯದಲ್ಲಿ ಖಾಲಿ ಇರುವ ಎದುರು ಮನೆಗೆ ಗಂಡ ಹೆಂಡತಿಯ ಆಗಮನವಾಗುತ್ತೆ. ಇತ್ತ ಆ ಹುಡುಗನ ಮನದಲ್ಲಿ ಸಣ್ಣ ಆಸೆ ಚಿಗುರೊಡೆಯುತ್ತೆ. ಎದುರು ಮನೆ ಹುಡುಗಿ ಅಂದುಕೊಂಡು ಪ್ರೀತಿಸತೊಡಗುತ್ತಾನೆ. ಆದರೆ, ಆಕೆಗೆ ಮದ್ವೆ ಆಗಿರೋ ವಿಷಯ ಗೊತ್ತಾದ ಮೇಲೆ ಆಸೆಗಳು ನುಚ್ಚು ನೂರು.

ಅತ್ತ ತನ್ನೊಳಗಿನ ಆಸೆಯನ್ನು ಆಕೆಯ ಮುಂದೆ ಹೊರಹಾಕುವಾಗ ಒಂದು ಘಟನೆ ನಡೆಯುತ್ತೆ. ಆಮೇಲೆ ಆಕೆಯ ಪತಿ ರಸ್ತೆ ಅಪಘಾತದಲ್ಲಿ ಸಾಯುತ್ತಾನೆ. ಮುಂದೆ ಆಗೋದೆಲ್ಲಾ ಭಯಾನಕ ಘಟನೆಗಳು. ಹಾಗಂತ ಬೆಚ್ಚಿ ಬೀಳಿಸುವ ಘಟನೆಗಳೇನು ಅಲ್ಲಿ. ಸಣ್ಣದ್ದೊಂದು ತಿರುವುಬಸಿನಿಮಾದ ಹೈಲೆಟ್. ಅದೇನು ಎಂಬ ಕುತೂಹಲ ಇದ್ದರೆ ವೆಕೆಂಟ್ ಹೌಸ್ ನೋಡಬಹುದು.

ಯಾರು‌ ಹೇಗೆ

ಎಸ್ತರ್ ನರೋನ್ಹಾ ಪಾತ್ರವನ್ನು ಆವರಿಸಿದ್ದಾರೆ. ಇಢಿ ಸಿನಿಮಾದ ಹೈಲೆಟ್ ಅವರು. ಶ್ರೇಯಸ್ ಚಿಂಗ ನಟನೆ ಬಗ್ಗೆ ಹೆಚ್ಚೇನು ಹೇಳಂಗಿಲ್ಲ. ಪ್ರೇಮಿಯಾಗಿ, ನಗುತ್ತ ನಗಿಸುತ್ತ ಅಳುತ್ತಲೇ ಕಾಡುತ್ತಾರೆ. ಸಂದೀಪ್ ಮಲಾನಿ ನಿರ್ದೇಶಕರು ಕೊಟ್ಟ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
ನರೇಂದ್ರ ಗೌಡ ಛಾಯಾಗ್ರಹಣದಲ್ಲಿ ಮಲೆನಾಡ ಸೊಬಗಿದೆ. ವಿಜಯ್ ರಾಜ್ ಸಂಕಲನ ಇನ್ನಷ್ಟು ಚುರುಕಾಗಬೇಕಿತ್ತು.

Categories
ಸಿನಿ ಸುದ್ದಿ

ಅವಮಾನ+ಅಪಹಾಸ್ಯ+ ವಿಶ್ವಾಸ+ ಶ್ರದ್ಧೆ = ರಾಜಯೋಗ! ಸಂಬಂಧಗಳ ನೈಜ ಚಿತ್ರಣ

ವಿಜಯ್ ಭರಮಸಾಗರ

ರೇಟಿಂಗ್: 5/3

ಚಿತ್ರ: ರಾಜಯೋಗ
ನಿರ್ದೇಶನ: ಲಿಂಗರಾಜ ಉಚ್ಚಂಗಿದುರ್ಗ
ನಿರ್ಮಾಣ: ಶ್ರೀ ರಾಮರತ್ನ ಪ್ರೊಡಕ್ಷನ್ಸ್
ತಾರಾಗಣ: ಧರ್ಮಣ್ಣ ಕಡೂರು, ನಿರೀಕ್ಷಾ ರಾವ್, ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವತ್ತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ ಇತರರು.

‘ಈ ಘಳಿಗೆಯಲ್ಲಿ ನಿನಗೆ ಮಗು ಹುಟ್ಟಿದರೆ ರಾಜಯೋಗ ಶುರುವಾಗುತ್ತೆ… ಹೋಗಲಿ ಬಿಡು ಈಗ ಒಳ್ಳೆ ಘಳಿಗೆ ಮಧ್ಯಮ ಯೋಗವಿದೆ… ಮೂಲ ನಕ್ಷತ್ರ ಶುರುವಾಯ್ತು. ಮಗು ಹುಟ್ಟುತ್ತಲೇ ಗಂಡಾಂತರ ಶುರುವಾಗುತ್ತೆ…
ಆ ಗ್ರಾಮದ ಐನೋರು ಈ ಡೈಲಾಗ್ ಹೇಳಿದ ಬಳಿಕ ಮಗುವೊಂದರ ಜನನವಾಗುತ್ತೆ. ಅಲ್ಲಿಗೆ ಮೂಲನಕ್ಷತ್ರದಲ್ಲಿ ಹುಟ್ಟಿದ ಹುಡುಗನ ಕಥೆ -ವ್ಯಥೆ ಇತ್ಯಾದಿ ಕಷ್ಟ ಕಾರ್ಪಣ್ಯಗಳ ತೊಳಲಾಟವೇ ಚಿತ್ರದ ಒನ್ ಲೈನ್.

ನಿರ್ದೇಶಕರು ಒಂದೊಳ್ಳೆಯ ಎಳೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲ ಗಮನ ಸೆಳೆಯುವ ಅಂಶವೆಂದರೆ ಗ್ರಾಮೀಣ ಭಾಷೆ ಮತ್ತು ಅಲ್ಲಿನ ಪರಿಸರ. ಎಲ್ಲವನ್ನೂ ಅಷ್ಟೇ ರಸವತ್ತಾಗಿ ತೋರಿಸುವುದರ ಜೊತೆಗೊಂದು ಮಾನವೀಯತೆ, ಸಂಬಂಧಗಳ ಮೌಲ್ಯ ವನ್ನು ಸಾರಿದ್ದಾರೆ. ಹಳ್ಳಿ ಸುತ್ತ ನಡೆಯುವ ಕಥೆಯಾದ್ದರಿಂದ ನೈಜತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಬಳಸಿರುವ ಭಾಷೆಯೂ ಕೂಡ ಆಪ್ತವೆನಿಸಿ, ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧ ಹಾಸ್ಯವಾಗಿ ಸಾಗುವ ಸಿನಿಮಾದಲ್ಲಿ ಆಳವಾದ ವಿಷಯವಿದೆ. ದ್ವಿತಿಯಾರ್ಧದಲ್ಲೂ ಇನ್ನಷ್ಟು ಹಿಡಿತ ಇದ್ದಿದ್ದರೆ ಸಿನಿಮಾ ಮತ್ತಷ್ಟು ಚುರುಕಾಗಿರುತ್ತಿತ್ತು. ಪದೇ ಪದೇ ಹೇಳಿದ ತೋರಿಸಿದ ದೃಶ್ಯ ವಿಷಯಗಳೇ ಇಣುಕುತ್ತವೆ. ಹಾಗಾಗಿ ನೋಡುಗರಿಗೆ ಕೊಂಚ ಕಿರಿಕಿರಿ ಎನಿಸಬಹುದು. ನಿರ್ದೇಶಕರು ಸ್ವಲ್ಪ ಅವಧಿ ಕಡಿಮೆಗೊಳಿಸಬಹುದಿತ್ತು. ದ್ವಿತಿಯಾರ್ಧ ಕೆಲ ಕಡೆ ವಿನಾಕಾರಣ ಎಳೆದಂತಾಗಿದೆ. ಎಲ್ಲೋ ಒಂದು ಕಡೆ ನೋಡುಗ ಸೀಟಿಗೆ ಒರಗುತ್ತಾನೆ ಅನ್ನುವಷ್ಟರಲ್ಲಿ, ಅಲ್ಲೊಂದು ಹಾಡು ಬಂದು ಮತ್ತೆ ಟ್ರ್ಯಾಕ್ ಗೆ ಕರೆದೊಯ್ಯುತ್ತೆ. ಉಳಿದಂತೆ ಎಲ್ಲೂ ಹೊಡಿ ಬಡಿ ಕಡಿ ದೃಶ್ಯಗಳಿಲ್ಲ. ಹಳ್ಳಿಯೊಂದರ ಕೂಡು ಕುಟುಂಬದೊಳಗಿನ ಸಾರವನ್ನು ಅಚ್ಚುಕಟ್ಟಾಗಿ ಉಣಬಡಿಸುವಲ್ಲಿ ನಿರ್ದೇಶಕರ ಹರಸಾಹಸ ಮಾಡಿದ್ದಾರೆ.

ಕಥೆ ಇಷ್ಟು..

ಅವನು ಪ್ರಾಣೇಶ. ಮೂಲ ನಕ್ಷತ್ರದಲ್ಲಿ ಹುಟ್ಟಿದವ. ಅಪ್ಪ ಮಾತ್ರವಲ್ಲ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಅಣ್ಣ ತಂಗಿ ಎಲ್ಲರೂ ಅವನನ್ನು ಹೀಯಾಳಿಸುವರೆ. ಊರ ಜನರೂ ಇದಕ್ಕೆ ಹೊರತಲ್ಲ. ಹೀಗಿರುವಾಗ, ಬಿ ಎ ಓದಿರುವ ಪ್ರಾಣೇಶಿಗೆ ಕೆಎಎಸ್ ಎಕ್ಸಾಂ ಬರೆದು ತಹಸೀಲ್ದಾರ್ ಆಗಬೇಕೆಂಬ ಛಲ. ಎಲ್ಲರೂ ಅವನನ್ನು ಕೇವಲವಾಗಿ ನೋಡುವರೇ. ಘಟನೆಯೊಂದರಲ್ಲಿ ಪ್ರಾಣೇಶನ ಸಾಧನೆಯ ಮಹತ್ವ ಎಲ್ಲರಿಗೂ ಗೊತ್ತಾಗುತ್ತೆ. ಅಲ್ಲೊಂದು ಟ್ವಿಸ್ಟು, ಟೆಸ್ಟು ಎದುರಾಗುತ್ತೆ. ಅದೇ ಸಿನಿಮಾದ ಬಿಗ್ ಟ್ವಿಸ್ಟ್. ಆ ಟ್ವಿಸ್ಟ್ ನ ಕುತೂಹಲ ಇದ್ದರೆ, ಒಂದೊಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ.

ಯಾರು ಹೇಗೆ?

ಮೊದಲ ಸಲ ಪ್ರಮುಖ ಪಾತ್ರ ನಿರ್ವಹಿಸಿ, ಇಡೀ ಸಿನಿಮಾವನ್ನು ಆವರಿಸಿರುವ ಧರ್ಮಣ್ಣ ನಿಜಕ್ಕೂ ತಾನೊಬ್ಬ ಕಲಾವಿದ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಅವರಿಗೆ ತಕ್ಕ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಿಲ್ಲಿ ನಗಿಸೋಕು ಸೈ , ಅಳಿಸೋಕು ಸೈ. ಒಟ್ಟಾರೆ ಒಂದು ಭಾವನಾತ್ಮಕ ಸಿನಿಮಾಗೆ ಹೇಗೆ ನೈಜತೆ ಕಟ್ಟಿಕೊಡಲು ಸಾಧ್ಯವೋ ಅದನ್ನು‌ ಮಾಡಿದ್ದಾರೆ.

ನಾಯಕಿ ನಿರೀಕ್ಷಾ ರಾವ್ ಪಾತ್ರಕ್ಕೆ ಮೋಸ ಮಾಡಿಲ್ಲ. ನಾಗೇಂದ್ರ ಶಾ ಅವರಿಲ್ಲಿ ಹೆಚ್ಚು ಕಾಡುತ್ತಾರೆ. ನಗಿಸುತ್ತಾರೆ, ಅಳಿಸುತ್ತಾರೆ., ಕೃಷ್ಣ ಮೂರ್ತಿ ಕವತ್ತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ , ಮಠ ಇತರರು ಗಮನ ಸೆಳೆಯುತ್ತಾರೆ.
ಅಕ್ಷಯ್ ರಿಶಭ್ ಸಂಗೀತದ ಎರಡು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕಿನ್ನು ಸ್ವಾದ ಬೇಕಿತ್ತು. ವಿಷ್ಣುಪ್ರಸಾದ್ ಕ್ಯಾಮೆರಾ ಕೈ ಚಳಕದಲ್ಲಿ ಹಳ್ಳಿಯ ಸೊಗಸಿದೆ.

Categories
ಸಿನಿ ಸುದ್ದಿ

ಕೈವ ಟೀಸರ್ ಬಂತು: ಇದು ಧನ್ವೀರ್ ಅಭಿನಯದ ಸಿನಿಮಾ

ರವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ” ಕೈವ” ಚಿತ್ರದ ಆಕ್ಷನ್ ಟೀಸರ್ ದೀಪಾವಳಿ ಹಬ್ಬದಂದು ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಶ್ ಹಾಗೂ ದಿನಕರ್ ತೂಗುದೀಪ ಈ ಚಿತ್ರದ ಆಕ್ಷನ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ “ಮದಗಜ” ಮಹೇಶ್ ಕುಮಾರ್ ಕೂಡಬೀ ವೇಳೆ ಇದ್ದರು.

“ಕೈವ” ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ ಈ ಘಟನೆ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಇದೇ ಇಸವಿಯಲ್ಲಿ ನಡೆದ ಗಂಗಾರಾಮ್ ಕಟ್ಡಡದ ದುರಂತಕ್ಕು ಹಾಗೂ ಈ ಚಿತ್ರದ ಕಥೆಗೂ ಸಂಬಂಧವಿದೆ.

ಚಿತ್ರದ ನಾಯಕನಾಗಿ ಧನ್ವೀರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ನಟಿಸಿದ್ದಾರೆ. ದಿನಕರ್ ತೂಗುದೀಪ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರಿನಲ್ಲಿ ನಲವತ್ತೆಂಟು ದಿನಗಳ ಚಿತ್ರೀಕರಣ ನಡೆದಿದೆ. ಕೆಲವು ಭಾಗಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದರು.

“ಕೈವ” ನನ್ನ ನಾಲ್ಕನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಧನ್ವೀರ್, ಈ ಕಥೆ ಎಲ್ಲ ಕಡೆ ಸುತ್ತಿ ದ್ರೌಪದಿ ತಾಯಿ ಆಶೀರ್ವಾದದಿಂದ ನನ್ನ ಬಳಿ ಬಂತು. ಜಯತೀರ್ಥ ಅವರು ತುಂಬಾ ಅದ್ಛುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು.

ದಿನಕರ್ ತೂಗುದೀಪ್ ರವರು ಮಾತನಾಡಿ, ನನಗೆ ಸಂಭಾಷಣೆಕಾರ ರಘು ನಿಡವಳ್ಳಿ, ನಿರ್ದೇಶಕ ಜಯತೀರ್ಥ ಅವರು ಭೇಟಿಯಾಗಬೇಕಂತೆ ಅಂದರು. ಆಗ ಜಯತೀರ್ಥ ಅವರು ಈ ಪಾತ್ರದ ಬಗ್ಗೆ ಹೇಳಿದರು. ನನ್ನ ಪಾತ್ರ ನೋಡಿದವರು ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ಹಾಗೆ ಕಾಣುತ್ತೀರಿ ಎನ್ನುತ್ತಿದ್ದಾರೆ. ಅದು ನಮ್ಮ ತಂದೆಯವರ ಆಶೀರ್ವಾದ. ನಮ್ಮ ಅಮ್ಮ ಕೂಡ ನನ್ನ ಪಾತ್ರ ನೋಡಿ ಸಂತೋಷಪಟ್ಟರು ಎಂದರು.

ನಾಯಕಿ ಮೇಘ ಶೆಟ್ಟಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ರಾಘು ಶಿವಮೊಗ್ಗ, ಸಂಭಾಷಣೆಕಾರ ರಘು ನಿಡವಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಅವರು “ಕೈವ” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ರಾಧಿಕಾ ಕುಮಾರಸ್ವಾಮಿ ಹುಟ್ದಬ್ಬಕ್ಕೆ ಬಂತು ಭೈರಾದೇವಿ ಟೀಸರ್ ಜೊತೆ ಅಜಾಗ್ರತ ಚಿತ್ರದ ಪೋಸ್ಟರ್

ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರು ನಾಯಕಿಯಾಗಿ ನಟಿಸಿರುವ “ಭೈರಾದೇವಿ” ಚಿತ್ರದ ಟೀಸರ್ ಹಾಗೂ “ಅಜಾಗ್ರತ” ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

ನನ್ನ ಹುಟ್ಟುಹಬ್ಬಕ್ಕೆ ನೀವೆಲ್ಲಾ ಬಂದಿರುವುದು ಖುಷಿಯಾಗಿದೆ. ಈ ಬಾರಿ ನನ್ನ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ಏಕೆಂದರೆ ನನ್ನ ಅಭಿನಯದ “ಭೈರಾದೇವಿ” ಚಿತ್ರದ ಟೀಸರ್ ಬಿಡುಗಡೆ ಹಾಗೂ “ಅಜಾಗ್ರತ” ಪೋಸ್ಟರ್ ಬಿಡುಗಡೆ ಆಗಿದೆ. ಈ ಎರಡು ಚಿತ್ರಗಳು ಶಮಿಕಾ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿದೆ. “ಭೈರಾದೇವಿ” ನನ್ನ ಇಪ್ಪತ್ತು ವರ್ಷಗಳ ಸಿನಿಜರ್ನಿಯಲ್ಲೇ ವಿಭಿನ್ನವಾದ ಚಿತ್ರ. ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ‌. ನನಗೆ ಸ್ಮಶಾನ ಎಂದರೆ ಭಯ. ಈ ಚಿತ್ರದ ಚಿತ್ರೀಕರಣ ಹೆಚ್ಚಿನ ಭಾಗ ಸ್ಮಶಾನದಲ್ಲೇ ನಡೆದಿದೆ. ಈ ಚಿತ್ರಕ್ಕೆ ಪಟ್ಟಿರುವಷ್ಟು ಶ್ರಮ ನಾನು ಯಾವ ಚಿತ್ರಕ್ಕೂ ಪಟ್ಟಿಲ್ಲ. ಇಂದು ಟೀಸರ್ ನೋಡಿದಾಗ ತುಂಬಾ ಖುಷಿಯಾಯಿತು. ನಿರ್ದೇಶಕ ಶ್ರೀಜೈ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. “ಭೈರಾದೇವಿ” ತೆರೆಗೆ ಬರಲು ಸಿದ್ದವಾಗಿದ್ದು, ಸದ್ಯದಲ್ಲೇ ದಿನಾಂಕ ಘೋಷಣೆ ಮಾಡುತ್ತೇವೆ. ಇನ್ನು “ಅಜಾಗ್ರತ” ಚಿತ್ರ ಕೂಡ ಶಶಿಧರ್ ಅವರ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿ ಬರುತ್ತಿದೆ. ಸಿನಿಮಾಗಳ ನಿರ್ವಹಣೆ ಜೊತೆಗೆ ನನ್ನ ಹುಟ್ಟುಹಬ್ಬವನ್ನು ಇಷ್ಟು ಅದ್ದೂರಿಯಾಗಿ ಆಯೋಜಿಸಿರುವ ನನ್ನ ಅಣ್ಣ ರವಿರಾಜ್ ಅವರಿಗೆ ಹಾಗೂ ಎರಡು ಚಿತ್ರತಂಡಕ್ಕೆ ಧನ್ಯವಾದ ಎಂದರು ರಾಧಿಕಾ.

ಇಂದು “ಭೈರಾದೇವಿ” ಚಿತ್ರದ ಟೀಸರ್ ಹಾಗೂ “ಅಜಾಗ್ರತ” ಚಿತ್ರದ ಪೋಸ್ಟರ್ ಬಿಡುಗಡೆ ಜೊತೆಗೆ ನನ್ನ ತಂಗಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆಯಾಗುತ್ತಿರುವುದು ಸಂತಸವಾಗಿದೆ. ಈ ಎರಡು ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ಹಾಗೂ ನಿರ್ಮಾಪಕ ರವಿರಾಜ್.

“ಭೈರಾದೇವಿ” ಚಿತ್ರ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಮೂಡಿಬಂದಿದೆ. ಮೂರು ಭಾಷೆಗಳಲ್ಲೂ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಾಗಿದೆ. ಸಾಮಾನ್ಯವಾಗಿ ಹೆಣ್ಣು ಅಘೋರಿಗಳು ಕಾಣಿಸುವುದು ಕಷ್ಟ. ನಾನು ಆ ಬಗ್ಗೆ ಹೆಚ್ಚು ತಿಳಿದುಕೊಂಡು ಈ ಚಿತ್ರ ಮಾಡಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಹೆಣ್ಣು ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು “ಭೈರಾದೇವಿ” ಚಿತ್ರದ ನಿರ್ದೇಶಕ ಶ್ರೀಜೈ ತಿಳಿಸಿದರು.

“ಅಜಾಗ್ರತ”, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಪ್ರತ್ಯೇಕವಾಗಿ ಮೂಡಿಬರುತ್ತಿರುವ ಚಿತ್ರ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಪುಣೆಯಲ್ಲಿ ಎಂ.ಎಸ್.ಸಿ ಇನ್ ಫಿಲಂ ಮೇಕಿಂಗ್ ಮಾಡಿದ್ದೇನೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ನನ್ನ ಮೊದಲ ನಿರ್ದೇಶನದ “ಘಾರ್ಗ” ಚಿತ್ರದ ಚಿತ್ರೀಕರಣ ವೇಳೆ ರವಿರಾಜ್ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಪರಿಚಯವಾಯಿತು. ಆನಂತರ ನನಗೆ ಸಪ್ತಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ನೀಡಿದರು. ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಚಿತ್ರ ನಟಿಯಾಗಿಯೇ ರಾಧಿಕಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು “ಅಜಾಗ್ರತ” ಚಿತ್ರದ ನಿರ್ದೇಶಕ ಶಶಿಧರ್ ಹೇಳಿದರು.

Categories
ಸಿನಿ ಸುದ್ದಿ

ಡಂಕಿ ದೀಪಾವಳಿ ಧಮಾಕ! ಬಂತು ಹೊಸ ಪೋಸ್ಟರ್

ಬಾಲಿವುಡ್ ಕಿಂಗ್ ಖಾನ್ ನಟನೆಯ ಡಂಕಿ ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ದೀಪಾವಳಿ ಹಬ್ಬದ ಸ್ಪೆಷಲ್ ಡಂಕಿ ಸಿನಿಮಾದ ಎರಡು ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಪ್ರೀತಿ, ನಗು ಹಾಗೂ ಸ್ನೇಹ ತುಂಬಿರುವ ಎರಡು ಹೊಸ ಪೋಸ್ಟರ್ ನಲ್ಲಿ ಶಾರುಖ್ ಸ್ನೇಹ ಬಳಗವನ್ನು ಪರಿಚಯ ಮಾಡಿಕೊಡಲಾಗಿದೆ. ಕಿಂಗ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಹಾಗೂ ಅನಿಲ್ ಗ್ರೋವರ್ ಒಟ್ಟಿಗೆ ನಿಂತು ನಗು ಬೀರಿದ್ದಾರೆ. ಎರಡು ಪೋಸ್ಟರ್ಸ್ ಆಕರ್ಷಕವಾಗಿವೆ.

ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ.

Categories
ಸಿನಿ ಸುದ್ದಿ

ಬಹು ನಿರೀಕ್ಷಿತ ಸಲಾರ್ ಡಿಸೆಂಬರ್ 22ರಂದು ರಿಲೀಸ್: ಹೊಂಬಾಳೆ ಫಿಲಂಸ್ ಬಿಡುಗಡೆಗೆ ಸಜ್ಜು

“ಕೆ.ಜಿ.ಎಫ್”, ” ಕಾಂತಾರ ” ದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಬಹು ನಿರೀಕ್ಷಿತ ಚಿತ್ರ “ಸಲಾರ್”.

ವಿಜಯ ಕಿರಗಂದೂರ್ ಅವರ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಖ್ಯಾತ ನಟ ಪ್ರಭಾಸ್ ನಾಯಕರಾಗಿ ನಟಿಸಿರುವ ” ಸಲಾರ್” ಚಿತ್ರ ಡಿಸೆಂಬರ್ 22 ರಂದು ಭಾರತದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾ ವಿತರಣೆಯನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಮಾಡುತ್ತಿದೆ.

“ಕರುನಾಡಿನಾದ್ಯಂತ ವಿತರಣೆಯ ಹೊಣೆ ನಮ್ಮದು. ಅತ್ಯಮೋಘ ಅನುಭನ ನೀಡುವ ಭರವಸೆಯೊಂದಿಗೆ ನಿಮ್ಮ ಮುಂದೆ” ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಹಲವು ವಿಶೇಷಗಳನ್ನೊಳಗೊಂಡಿರುವ “ಸಲಾರ್” ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಹೊಂಬಾಳೆ ಫಿಲಂಸ್ ಈವರೆಗೂ ನಿರ್ಮಿಸಿರುವ ಎಲ್ಲಾ ಚಿತ್ರಗಳು ಹೊಂಬಾಳೆ ಫಿಲಂಸ್ ಸಂಸ್ಥೆ ಕರ್ನಾಟಕದಲ್ಲಿ ವಿತರಣೆ ಮಾಡಿದೆ . ಬಹು ನಿರೀಕ್ಷಿತ “ಸಲಾರ್” ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆ distribution ಮಾಡಲಿದೆ.

Categories
ಸಿನಿ ಸುದ್ದಿ

ಸಕ್ಕತ್ ಸ್ಟುಡಿಯೋದ ಸಖತ್ ಸಿನಿಮಾ ಮುಗೀತು

ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ಸಕ್ಕತ್ ಸ್ಟುಡಿಯೋ ಟ್ರೆಂಡ್ಸೆಟ್ಟರ್ ಆಗಿರುವುದು ಸುಳ್ಳಲ್ಲಾ. ಸುನೀಲ್ ರಾವ್, ಅನುಪಮಾ ಗೌಡ, ಸಿಂಧು ಲೋಕನಾಥ್ ಮುಂತಾದವರು ನಟಿಸಿರುವ “ಲೂಸ್ ಕನೆಕ್ಷನ್” ನಮ್ಮ ಕನ್ನಡದ ಮೊದಲ ವೆಬ್ ಸರಣಿಯ ನಿರ್ಮಿಸಿದ್ದು ಇದೇ ಸಂಸ್ಥೆ. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ನೇತೃತ್ವದಲ್ಲಿ ಶುರುವಾದ ಸಕ್ಕತ್ ಸ್ಟುಡಿಯೋ ವೈವಿಧ್ಯಮಯ ವೆಬ್

ಸರಣಿಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇತ್ತು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ಸಹಯೋಗದೊಂದಿಗೆ ಸಕ್ಕತ್ ಸ್ಟುಡಿಯೋ, ನಾಗಭೂಷಣ ಮತ್ತು ಸಂಜನಾ ಆನಂದ್ ಅಭಿನಯದ “ಹನಿಮೂನ್”, ಪೂರ್ಣ ಮೈಸೂರು ಮತ್ತು ಸಿರಿ ರವಿಕುಮಾರ್ ಅಭಿನಯದ “ಬೈ ಮಿಸ್ಟೇಕ್” ಮತ್ತು ಅರವಿಂದ್ ಅಯ್ಯರ್ ಮತ್ತು ದಿಶಾ ಮದನ್ ಅಭಿನಯದ “ಹೇಟ್ ಯು ರೋಮಿಯೋ” ಹೀಗೆ ಉನ್ನತ ಮಟ್ಟದ ಸರಣಿಗಳು ನಿರ್ಮಾಣವಾಗಿ ವೂಟ್ ( Voot), ಆಹಾ (Aha ), ಮುಂತಾದ ಒಟಿಟಿ ಪ್ಲಾಟ್‌ಫಾರಂ ಗಳಲ್ಲಿ ನೋಡುಗರ ಗಮನ ಸೆಳೆದಿವೆ.

ಡಿಜಿಟಲ್ ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಯಶಸ್ವಿಯಾಗಿಸಿ, ಸಕ್ಕತ್ ಸ್ಟುಡಿಯೋ ಈಗ ಸಿನಿಮಾ ಜಗತ್ತಿಗೆ ಕಾಲಿಡುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ತನ್ನ ಮೊಟ್ಟಮೊದಲ ಚಿತ್ರದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಿತ್ರದ ಮಹೂರ್ತಕ್ಕೆ ಆಗಮಿಸಿ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು.

ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ “ದಿ ಬೆಸ್ಟ್ ಆಕ್ಟರ್” ಮೈಕ್ರೊ ಮೂವಿ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ ‘ಪುಕ್ಸಟ್ಟೆ ಲೈಫ್ “ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಇದೀಗ ಸಕ್ಕತ್ ಸ್ಟುಡಿಯೋದ ಮೊದಲ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಮುಂಬರುವ ವಾರದಲ್ಲಿ ವಿಶಿಷ್ಟ ಶೀರ್ಷಿಕೆ, ಪರಿಕಲ್ಪನೆ ಮತ್ತು ತಾರಾಗಣವನ್ನು ಅನಾವರಣಗೊಳಿಸಲು ಯೋಜಿಸಿದೆ. ಇದು ಒಂದು ಅದ್ಭುತವಾದ ಸಿನಿಮೀಯ ಅನುಭವದ ಭರವಸೆಯನ್ನು ಈ ತಂಡ ನೀಡುತ್ತದೆ. ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ನಿರ್ಮಾಣವಾಗಬೇಕು ಹಾಗು ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿರುವ ಪ್ರೇಕ್ಷಕ ವರ್ಗ, ಝೀ5ನ ಒಟಿಟಿ ಕ್ಷೇತ್ರದಲ್ಲಿ ಪ್ರದೀಪ್ ಅವರ ಹಿಂದಿನ ನಾಯಕತ್ವ ಮತ್ತು ಛಾಯಾಗ್ರಹಣ ಮತ್ತು ಕಥೆ ಹೇಳುವಿಕೆಯಲ್ಲಿ ನಾಗರಾಜ್ ಅವರ ಪ್ರಭಾವ, ಸೃಜನಶೀಲ ಮನಸ್ಸುಗಳನ್ನು ಒಳಗೊಂಡಿರುವ ತಂಡವು ನಿಸ್ಸಂದೇಹವಾಗಿ ‘ಸಕ್ಕತ್’ ಕನ್ನಡ ಚಿತ್ರವನ್ನು ಪ್ರೇಕ್ಷಕನಿಗೆ ನೀಡುತ್ತಾರೆಂಬ ಭರವಸೆ ಮೂಡಿಸಿದೆ.

Categories
ಸಿನಿ ಸುದ್ದಿ

ಇದು ಸಂಬಂಧಗಳ ಭಾವಜೀವ! ಹಳ್ಳಿಗಾಡಿನ ಆನಂದಮಯ ಚಿತ್ರ

ಚಿತ್ರ: ನಾಕೋಳಿಕ್ಕೆ ರಂಗ
ನಿರ್ದೇಶನ: ಗೊರವಾಲೆ ಮಹೇಶ್
ನಿರ್ಮಾಣ: ಎಸ್.ಟಿ.ಸೋಮಶೇಖರ್
ತಾರಾಗಣ: ಮಾಸ್ಟರ್ ಆನಂದ್, ಭವ್ಯಾ, ರಾಜೇಶ್ವರಿ, ಪುಂಗ, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಸುಧಾಕರ್ ಇತರರು.

ರೇಟಿಂಗ್ ; 5/3

ವಿಜಯ್ ಭರಮಸಾಗರ

ನನ್ ಮಗನಿಗೆ ಒಳ್ಳೆಯದಾದರೆ ಸುಕ್ಕುರಾಜನ ಬಲಿ ಕೊಡ್ತೀನಿ…’ ಹೀಗಂತ ಊರ ದೇವತೆ ಮಾರವ್ವನ ಮುಂದೆ ಆ ತಾಯಿ ಹರಕೆ ಹೊರುತಾಳೆ! ಆಕೆಯ ಮಗ ಚೇತರಿಸಿಕೊಳ್ತಾನಾ? ಅವಳ ಹರಕೆ ತೀರುತ್ತಾ? ಆ ಹರಕೆ ಏನು ಅನ್ನೋದೇ ಚಿತ್ರದ ಇಂಟ್ರೆಸ್ಟಿಂಗ್ ಕಥೆ.

ಈ ವಾರ ತೆರೆ ಕಂಡ ‘ನಾಕೋಳಿಕ್ಕೆ ರಂಗ’ ಸಿನಿಮಾ ಕಥೆ ಇದು. ಪಲ್ಕಾ ಹಳ್ಳಿಗಾಡಿನ ಸೊಗಡು ತುಂಬಿರುವ ಕಥಾಹಂದರದಲ್ಲಿ ಹಾಸ್ಯ, ಗೆಳೆತನ, ಚಿಗುರೊಡೆವ ಸಣ್ಣ ಪ್ರೀತಿ, ನಂಬಿಕೆ, ಅಪನಂಬಿಕೆ, ಮೌಢ್ಯ ಕಂದಾಚಾರ, ಅಚಾರ, ವಿಚಾರ ಇತ್ಯಾದಿ ಚಿತ್ರದೊಳಗಿರುವ ಹೂರಣ.

ಇಲ್ಲಿ ಅಮ್ಮ, ಮಗ ಮತ್ತು ಕೋಳಿ ಹೈಲೆಟ್. ಇಡೀ ಸಿನಿಮಾ ಕಥೆ ಕೋಳಿ ಮತ್ತು ನಾಯಕ ರಂಗನ ಸುತ್ತವೇ ತಿರುಗುತ್ತೆ. ಹಾಗಾಗಿ ಅಲ್ಲಿನ ಸಂಸ್ಕೃತಿ, ಆಚರಣೆಗಳು ನೋಡುಗರನ್ನು ಸೆಳೆಯುತ್ತವೆ. ವಿಶೇಷವಾಗಿ ನಿರ್ದೇಶಕರು ಇಲ್ಲಿ ಮೌಢ್ಯ ಕಂದಾಚಾರ, ನಂಬಿಕೆ, ಅಪನಂಬಿಕೆ ಕುರಿತು ಹೇಳಿದ್ದಾರೆ. ಆ ಮೂಲಕ ಸಂಬಂಧಗಳ ಮೌಲ್ಯ, ಮಾನವೀಯ ಗುಣದ ಬಗ್ಗೆಯೂ ಹೇಳುವ ಮೂಲಕ ನೋಡುಗರ ಸೆಳೆಯುವಲ್ಲಿ ಸಫಲರಾಗಿದ್ದಾರೆ.

ಮೊದಲರ್ಧ ಹಾಸ್ಯದ ಮೂಲಕ ಸಾಗುವ ಸಿನಿಮಾ ಕೊಂಚ ನಿಧಾನವೆನಿಸಿದರೂ, ದ್ವಿತಿಯಾರ್ಧ ಎಮೋಷನ್ಸ್ ಕಟ್ಟಿಕೊಟ್ಟು ಕುತೂಹಲ ಕೆರಳಿಸುತ್ತಾರೆ. ಕೆಲವು ಕಡೆ ಭಾವುಕತೆಗೆ ದೂಡುವುದರ ಜೊತೆ ಸ್ವಾರಸ್ಯಕರ ಅಂಶಗಳು ಗಮನಸೆಳೆಯುತ್ತವೆ. ಇನ್ನು ಕಥೆಗೆ ಪೂರಕವಾಗಿ ಸಂಗೀತವೂ ಸಾಥ್ ನೀಡಿದೆ.

ಎಲ್ಲೂ ಗೊಂದಲವಿಲ್ಲದೆ, ಅರಾಮವಾಗಿ ನಗುತ್ತಲೇ, ಆಗಾಗ ಎದೆಭಾರವಾಗಿಸಿಕೊಂಡು ಒಂದೊಳ್ಳೆಯ ದೃಶ್ಯಾವಳಿ ಕಣ್ತುಂಬಿಕೊಳ್ಳಲು ಸಾಧ್ಯವಾಗಿಸಿರುವ ಸಿನಿಮಾ ಹಳ್ಳಿಯ ವಾತಾವರಣಕ್ಕೆ ತಳ್ಳುತ್ತದೆ. ನೋಡುಗರಿಗೆ ಪ್ರಾಣಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಕಥೆ ಏನು?

ಆ ಊರಲ್ಲಿ ರಂಗನಿಗೆ ಅವನವ್ವ ಮತ್ತು ಪ್ರೀತಿಯ ಕೋಳಿ ಅಚ್ಚುಮೆಚ್ಚು. ಕೋಳಿ ಅಂದರೆ ರಂಗನಿಗೆ ಪ್ರಾಣ. ಗೆಳೆಯರ ಜೊತೆ ಸುತ್ತಾಡಿ ಕಿತಾಪತಿ ಮಾಡುವ ರಂಗ, ಕೆಲ ಘಟನೆಗಳಿಗೆ ಕಾರಣವಾಗುತ್ತಾನೆ. ಓದು ಬರಹ ಬಾರದ ರಂಗ ಒಮ್ಮೆ ಪಾಟೀಲರ ಹೊಲದಲ್ಲಿ ರಾತ್ರಿ ಕೆಲಸ ಮಾಡುವಾಗ ದೃಶ್ಯವೊಂದನ್ನು ಕಂಡು ಎಚ್ಚರ ತಪ್ಪಿ ಬೀಳುತ್ತಾನೆ. ಅವನ ತಾಯಿ ಊರ ದೇವತೆ ಮಾರಮ್ಮ ಬಳಿ ಮಗನ ಚೇತರಿಕೆಗೆ ಬೇಡಿಕೊಳ್ಳುತ್ತಾಳೆ.

ಅಲ್ಲಿನ ಪೂಜಾರಿ ಮಗ ಸರಿಹೋಗಬೇಕಾದರೆ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಕೋಳಿನ ಬಲಿ ಕೊಡಬೇಕು ಅಂತಾನೆ. ರಂಗನ ತಾಯಿ ಒಲ್ಲದ ಮನಸ್ಸಲ್ಲೇ ಒಪ್ಪುತ್ತಾಳೆ. ಈ ವಿಷಯ ರಂಗನಿಗೆ ಗೊತ್ತಾಗುತ್ತೆ. ಆಮೇಲೆ ರಂಗನ ಕೋಳಿ ಹರಕೆಗೆ ಬಲಿಯಾಗುತ್ತೋ ಇಲ್ಲವೋ ಅನ್ನೋದು ಕಥೆ. ಕುತೂಹಲ ಇದ್ದರೆ ಒಮ್ಮೆ ನೋಡಲ್ಲಡ್ಡಿಯಿಲ್ಲ.

ಯಾರು ಹೇಗೆ?

ಮಾಸ್ಟರ್ ಆನಂದ್ ಪಕ್ಕಾ ಹಳ್ಳಿಗನಾಗಿ ವಿಜೃಂಭಿಸಿದ್ದಾರೆ. ಟೈಮಿಂಗ್ ಮೂಲಕ ನಗಿಸಿ ಭಾವುಕತೆಗು ತಳ್ಳುತ್ತಾರೆ. ನಮ್ಮ ಪಲ್ಕದ ಮನೆ ಹುಡುಗನಂತೆ ಕಾಣುವ ಆನಂದ್, ಕಚಗುಳಿ ಇಡುವ ಮೂಲಕ ಗಮನಸೆಳೆಯುತ್ತಾರೆ.
ರಾಜೇಶ್ವರಿ ಅವರಿಗೆ ಮೊದಲ ಸಿನಿಮಾ ಅನಿಸಲ್ಲ. ಮುಗ್ಧ ಹುಡುಗಿಯಾಗಿ ಇಷ್ಟವಾಗುತ್ತಾರೆ.

ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಭವ್ಯಾ ಅವರು ತಾಯಿಯಾಗಿ ಆಕರ್ಷಣೆಯಾದರೆ, ಅಲ್ಲಲ್ಲಿ ಬರುವ ಪಾತ್ರಗಳು ಕೂಡ ಗಮನಸೆಳೆಯುತ್ತವೆ. ವಿಶೇಷವಾಗಿ ಶಕೀಲಾ ಇಲ್ಲೊಂದು ಮುಖ್ಯ ಪಾತ್ರ ಮಾಡಿ, ಹೀಗೂ ಮಾಡ್ತೀನಿ ಎಂಬುದನ್ನ ತೋರಿಸಿದ್ದಾರೆ. ಉಳಿದಂತೆ, ರಾಕ್ ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ ಅವರು ಪಾತ್ರಕ್ಕೆ ಮೋಸ ಮಾಡಿಲ್ಲ.

ರಾಜು ಎಮ್ಮಿಗನೂರು ಅವರ ಸಂಗೀತದಲ್ಲಿ ಕೋ ಕೋ ನಾ ಕೋಳಿಕೆ‌ರಂಗ ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತವೂ ಪೂರಕ.
ಧನಪಾಲ್ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ಸೊಗಡು ಅಂದವಾಗಿದೆ.

Categories
ಸಿನಿ ಸುದ್ದಿ

ಯಶ್ ಅಭಿಮಾನಿಯ ಗೋಲ್ಡ್ ಚಿತ್ರ: ಭೈರ್ಯ ಕೆಎ-07 ಇದು ಕೆಜಿಎಫ್ ಕಥಾನಕ

ಅನಾಥನಾಗಿ ಬೇರೆಯವರ ಆಶ್ರಯದಲ್ಲಿ ಬೆಳೆದ ಗೌರಿಬಿದನೂರಿನ ರೋಷನ್.ಎಂ.ರಾವ್ ಭರತನಾಟ್ಯ ಪ್ರವೀಣ, ಮುಂಬೈನಲ್ಲಿ ನಟನೆ ತರಭೇತಿ ಪಡೆದುಕೊಂಡು ಬಂದಿದ್ದಾರೆ. ಮುಂದೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯಾಗಿ, ಸ್ಕ್ರಿಪ್ಟ್ ಬರೆದುಕೊಂಡು ಹಲವು ಚಿತ್ರಗಳಿಗೆ ಸೆಟ್ ಕೆಲಸ ನಿರ್ವಹಿಸಿ, ಮಧ್ಯೆ ’ತಲ್ವಾರ್’ ಕಿರುಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೆಲ್ಲಾ ಅನುಭವದಿಂದ ’ಭೈರ್ಯ ಕೆಎ-೦7’ ಚಿತ್ರಕ್ಕೆ ಕಥೆ ಬರೆದು ನಾಯಕನಾಗಿ ನಟಿಸುತ್ತಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿರುವ ಕನ್ನಡ ಪ್ರೇಮಿ ಬಾಗಲಕೋಟೆಯ ಷರೀಫ ಬೇಗಂ ನಡಾಫ್, ಎನ್‌ಜಿಓ ಸಂಘ ನಡೆಸುತ್ತಿದ್ದು, ಸಾಧನೆ ಮಾಡುವ ಸಲುವಾಗಿ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಹಿತೈಷಿ ಉದ್ಯಮಿ ಜಿ.ಬಾಲಾಜಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಭೂಗತ ಲೋಕದ ಕಥೆಯಲ್ಲಿ ನಾಯಕನ ಹೆಸರು ಶೀರ್ಷಿಕೆಯಾಗಿರುತ್ತದೆ. ಬೆಂಗಳೂರಿನ ಡಾನ್‌ಗಳ ಕುರಿತಂತೆ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಚಿಂತಾಮಣಿ, ಶಿಡ್ಲಘಟ್ಟವನ್ನು ಜನರು ಮರೆತು ಹೋಗಿದ್ದಾರೆ. ಕೆಜಿಎಫ್‌ದಲ್ಲಿರುವ ಚಿನ್ನದ ಗಣಿಯನ್ನು ರಕ್ಷಣೆ ಮಾಡಿದವರು ಯಾರು? ಅಂದು ಅಧ್ಯಕ್ಷರಾಗಿದ್ದವರು ಯಾರು?

ಇವತ್ತಿನವರೆಗೂ ಅದು ಯಾಕೆ ಸರ್ಕಾರದ ಅಧೀನದಲ್ಲಿಲ್ಲ? ಇಂತಹ ಎಲ್ಲಾ ರೀತಿಯ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇಷ್ಟೆಲ್ಲಾ ವಿಷಯಗಳನ್ನು ಸಂಶೋಧನೆ ನಡೆಸಿ, ಅಧ್ಯಯನ ಮಾಡಿ ಚಿತ್ರಕಥೆಯನ್ನು ತಂಡದೊಂದಿಗೆ ಸೇರಿಕೊಂಡು ಸಿದ್ದಪಡಿಸಲಾಗಿದೆ. 1970 ರಿಂದ 1985ರ ತನಕ ಸಿನಿಮಾವು ಸಾಗುತ್ತದೆ.

ಶಿವಮೊಗ್ಗ ಮೂಲದ ಆಶಿಕಾರಾವ್ ನಾಯಕಿಯಾಗಿ ಎರಡನೇ ಅವಕಾಶ. ಇನ್ನುಳಿದಂತೆ ನಿರ್ದೇಶಕ, ಹಿರಿಯ ಪೋಷಕ ಕಲಾವಿದರು, ಹೆಸರಾಂತ ತಂತ್ರಜ್ಘರು ಚಿತ್ರದಲ್ಲಿ ಇದ್ದಾರೆ. ಇವೆಲ್ಲಾ ಮಾಹಿತಿಗಳನ್ನು ಮುಂದಿನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನೀಡುವುದಾಗಿ ರೋಷನ್ ಮಾಧ್ಯಮದವರನ್ನು ಕೋರಿಕೊಂಡಿದ್ದಾರೆ. ಬೆಂಗಳೂರು, ಕೋಲಾರ, ಕೆಜಿಎಫ್ ಕಡೆಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿ, ಕ್ಲೈಮಾಕ್ಸ್ ಬಾಕಿ ಇದ್ದು, ಅದನ್ನು ಹೆಚ್‌ಎಂಟಿ ಕಾರ್ಖಾನೆಯಲ್ಲಿ ಸೆಟ್ ಹಾಕಿ ಸೆರೆಹಿಡಿಯಲು ಯೋಜನೆ ಹಾಕಲಾಗಿದೆ.

Categories
ಸಿನಿ ಸುದ್ದಿ

ಸತ್ಯಂ ಎಂಬ ಥ್ರಿಲ್ಲರ್ ಚಿತ್ರ: ಇದು ತಾತ ಮೊಮ್ಮಗನ ಬಾಂಧವ್ಯ ಕಥೆ

ತಾತ ಮೊಮ್ಮಗನ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ಅಶೋಕ್ ಕಡಬ ಅವರು ನಿರ್ದೇಶಿಸಿರುವ ಚಿತ್ರ “ಸತ್ಯಂ” ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಶ್ರೀ ಮಾತಾ ಕ್ರಿಯೇಶನ್ಸ್ ಮೂಲಕ ಮಾಂತೇಶ್ ವಿಕೆ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಧ್ಯಾತ್ಮಕ ಚಿಂತಕರಾದ ಜಂಬುನಾಥ್ ಸ್ವಾಮಿ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ಮಾಪಕ ಮಾಂತೇಶ್. ವಿ.ಕೆ. ಮಾತನಾಡಿ, ನಮ್ಮ ಸಂಸ್ಥೆಯ ಎರಡನೇ ಚಿತ್ರವಿದು. ಈ ಹಿಂದೆ ಮಹಾಮಹಿಮ ಲಡ್ಡು ಮುತ್ಯ ಎಂಬ ಚಿತ್ರ ನಿರ್ಮಿಸಿದ್ದೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬಂದಿದೆ. ನಾನೊಬ್ಬ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದರೂ ಸಿನಿಮಾ ಮೇಲೆ ತುಂಬಾ ಆಸಕ್ತಿ, ಪ್ರೀತಿಯಿದೆ. ನಮ್ಮ ಬ್ಯಾನರ್ ಮೂಲಕ ಸದಭಿರುಚಿಯ ಚಿತ್ರವನ್ನು ನೀಡುವುದು ನಮ್ಮ ಉದ್ದೇಶ. ಅಶೋಕ್ ಕಡಬ ಅವರು ಈ ಕಥೆ ತಂದಾಗ ವಿಶೇಷ ಅನಿಸಿತು. ಎರಡು ಕಾಲಘಟ್ಟಗಳಲ್ಲಿ ನಡೆಯೋ ಕಥೆಯಿದು. ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯೂ ಬೆಸೆದುಕೊಂಡಿದೆ.

ತಾತ ಮೊಮ್ಮಗನ ಕಥೆ ತುಂಬಾ ವಿಶೇಷವಾಗಿದೆ. ತಾತನಾಗಿ ಹಿರಿಯ ನಟ ಸುಮನ್ ಹಾಗೂ ಮೊಮ್ಮಗನಾಗಿ ಸಂತೋಷ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರಂಜಿನಿ ರಾಘವನ್ ಉತ್ತಮ ಅಭಿನಯ ನೀಡಿದ್ದಾರೆ. ಇದೊಂದು ಫ್ಯಾಮಿಲಿ ಕಂಟೆಂಟ್ , ಥ್ರಿಲ್ಲರ್ ಚಿತ್ರ. ವಿಶೇಷವಾಗಿ ಆನೇಕಲ್ ಬಾಲರಾಜ್ ಅವರನ್ನು ನೆನಪಿಸಿಕೊಳ್ಳಬೇಕು, ಈ ಕಥೆಯನ್ನು ಕೇಳಿದ ಅವರು ಇದೊಂದು ಒಳ್ಳೆಯ ಕಥೆ. ನನ್ನ ಬೆಂಬಲ ಸದಾ ಇದೆ ಎಂದಿದ್ದರು. ಅವರ ಆಶೀರ್ವಾದ ಇದ್ದೇ ಇರುತ್ತೆ. ಅವರ ಮಗ ಸಂತೋಷ ನಾಯಕನಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರದ ವಿತರಣೆ ಹಕ್ಕನ್ನು ನಿರ್ಮಾಪಕ ಕೆ.ಎ. ಸುರೇಶ್ ವಹಿಸಿಕೊಂಡಿದ್ದಾರೆ. ಸದ್ಯದಲ್ಲೆ ಟ್ರೈಲರ್ , ಹಾಡುಗಳು ಬಿಡುಗಡೆ ಮಾಡಿ, ಡಿಸೆಂಬರ್ ವೇಳೆಗೆ ತೆರೆಗೆ ತರುವ ಪ್ಲಾನ್ ಇದೆ ಎಂದು ಹೇಳಿದರು.

ನಿರ್ದೇಶಕ ಅಶೋಕ್ ಕಡಬ ಮಾತನಾಡಿ, ಇದೊಂದು ಫ್ಯಾಮಿಲಿ ಎಂಟೈನರ್. ಪಂಜುರ್ಲಿ ದೈವ ಆರಾಧಿಸುವ ರಾಜಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ ಅದರಿಂದ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲದ ಪೂಜೆಗೆಂದು ಆ ಊರಿಗೆ ಬಂದಾಗ ನಡೆಯುವ ಕಥೆಯಿದು. ಮೂರು ಶೇಡ್ ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್ ಗಳನ್ನು ಹಾಕಿದ್ದೆವು. 2019ರಲ್ಲೇ ನಾವೀ ಕಥೆ ಮಾಡಿದ್ದೆವು, ಕಾಂತಾರ ಬರುವ ಮುಂಚೆಯೇ ಈ ಸಬ್ಜೆಕ್ಟ್ ರೆಡಿ ಇತ್ತು. ಈ ಚಿತ್ರದ ಟೀಸರ್ ನಲ್ಲಿ ಕಾಣುವ ಹುಲಿ ಉಗುರು ಒರಿಜಿನಲ್ ಅಲ್ಲ. ಕಾಸ್ಟ್ಯೂಮರ್ ಕೊಟ್ಟಿರುವ ಡುಪ್ಲಿಕೇಟ್ ಉಗುರು ಎಂದರು. ಹಾರರ್, ಸಸ್ಪೆನ್ಸ್ , ಲವ್ ಕಂಟೆಂಟ್ ಒಳಗೊಂಡ ಚಿತ್ರವನ್ನು ಕನ್ನಡ, ತೆಲುಗು ಭಾಷೆಯಲ್ಲಿ ಮಾಡಿದ್ದೇವೆ. ರವಿ ಬಸ್ರೂರು ಸಂಗೀತ ಅದ್ಭುತವಾಗಿ ಮ್ಯೂಸಿಕ್ ಮಾಡಿದ್ದಾರೆ. ಸಿನಿಟೆಕ್ ಸೂರಿ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಕೆ. ವಿ. ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅದನ್ನು ಕಿನ್ನಲ್ ರಾಜ್ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ. ಆಡಿಯೋ ಹಕ್ಕನ್ನ A2 ಮ್ಯೂಸಿಕ್ ಉತ್ತಮ ಮೊತ್ತ ನೀಡಿ ಪಡದಿದೆ ಎಂದು ಮಾಹಿತಿ ನೀಡಿದರು.

ನಾಯಕ ಸಂತೋಷ್ ಬಾಲರಾಜ್ ಮಾತನಾಡಿ, ನಾನು ಈ ಹಿಂದೆ ಮಾಡಿದ ಕೆಂಪ, ಕರಿಯ-2, ಗಣಪ ಸಿನಿಮಾಗಳೇ ಒಂದಾದರೆ, ಇದು ಆ ಮೂರಕ್ಕಿಂತ ಡಿಫ್ರೆಂಟ್ ಆಗಿ ಮೂಡಿ ಬಂದಿರುವ ಚಿತ್ರ. ನನ್ನ ಪಾತ್ರದ ಹೆಸರು ಸತ್ಯ, ನನ್ನ ತಂದೆ ಬದುಕಿದ್ದರೆ ತುಂಬಾ ಇಷ್ಟಪಡುತ್ತಿದ್ದರು. ಆರಂಭದಲ್ಲಿ ಈ ಕಥೆಯನ್ನು ಒಪ್ಪಿ ಇದೊಂದು ಉತ್ತಮ ಚಿತ್ರವಾಗಿ ಮೂಡಿಬರುತ್ತೆ ಅಂದಿದ್ದರು. ನನಗೆ ದರ್ಶನ್ ಅವರ ಸಪೋರ್ಟ್ ಕೂಡ ತುಂಬಾ ಇದೆ. ಬಹಳ ಗ್ಯಾಪ್ ಆಗಿತ್ತು, ಇನ್ನಷ್ಟು ವಿಭಿನ್ನ ಚಿತ್ರಗಳ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದರು.

ನಾಯಕಿ ರಂಜಿನಿ ರಾಘವನ್ ಮಾತನಾಡಿ, ಸತ್ಯಂ ಟೀಸರ್ ಗಾಗಿ ನಾನು ತುಂಬಾ ಕಾದಿದ್ದೆ. ಅಚಾನಕ್ಕಾಗಿ ನಾನು ಈ ಚಿತ್ರತಂಡಕ್ಕೆ ಸೇರ್ಪಡೆಯಾದೆ. ನನ್ನ ಪಾತ್ರ ಚಿತ್ರದ ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿದ್ದು , ಕಥೆಯ ಜೊತೆಗೇ ಸಾಗುತ್ತೆ. ಸಂತೋಷ್ ಅವರ ಸಪೋರ್ಟ್ ಚೆನ್ನಾಗಿತ್ತು, ಚಿತ್ರದ ಹಾಡುಗಳು ಚೆನ್ನಾಗಿ ಬಂದಿದೆ ಎಂದರು. ನಂತರ ಸಾಹಿತಿ ಹಾಗೂ ಸಂಭಾಷಣೆಕಾರ ಕಿನ್ನಲ್ ರಾಜ್ , ಛಾಯಾಗ್ರಹಕ ಸಿನಿಟೆಕ್ ಸೂರಿ, ಮೊದಲ ಬಾರಿಗೆ ಬೇರೆ ಬ್ಯಾನರ್ ಚಿತ್ರವನ್ನು ವಿತರಣೆ ಮಾಡುತ್ತಿರುವ ಕೆ.ಎ. ಸುರೇಶ್ ಚಿತ್ರದ ಕುರಿತಂತೆ ಮಾತನಾಡಿದರು.

error: Content is protected !!