ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಡ್ರೀಮ್ ವಾರಿಯರ್ ಪಿಕ್ಚರ್ಸ್ ತಮಿಳಿನ ಖ್ಯಾತ ನಟ ಸೂರ್ಯ 45ನೇ ಚಿತ್ರ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಮುಹೂರ್ತ ಸಮಾರಂಭ ಅನೈಮಲೈನಲ್ಲಿರುವ ಅರುಲ್ಮಿಗು ಮಾಸಾನಿ ಅಮ್ಮನ್ ದೇವಸ್ಥಾನದಲ್ಲಿಂದು ನೇರವೇರಿದೆ. ಕೊಯಮತ್ತೂರಿನಲ್ಲಿ ಮೊದಲ ಹಂತದ ಶೂಟಿಂಗ್ ನಡೆಸಲಾಗುವುದು. ಸೂರ್ಯ ಮತ್ತು ಇತರ ತಾರಾಬಳಗ ಒಳಗೊಂಡ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯಡಿ ಧೀರನ್, ಅರುವಿ, ಎನ್‌ಜಿಕೆ, ರಾಕ್ಷಸಿ, ಖೈದಿ, ಭೋಲಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ನಿರ್ಮಾಣಗೊಂಡಿವೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ತಮಿಳಿನ ಸೂಪರ್ ಸ್ಟಾರ್ ಸೂರ್ಯ ಜೊತೆ ಕೈ ಜೋಡಿಸಿದೆ.
ಮೂಕುತಿ ಅಮ್ಮನ್ ಮತ್ತು ವೀಟ್ಲ ವಿಶೇಷಂನಂತಹ ಸಾಮಾಜಿಕ ಜವಾಬ್ದಾರಿಯುತ ಚಿತ್ರಗಳನ್ನು ನಿರ್ದೇಶಿಸಲು ಹೆಸರುವಾಸಿಯಾಗಿರುವ ಆರ್‌ಜೆ ಬಾಲಾಜಿ ಸೂರ್ಯ ಅವರ 45ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಆರ್‌ಜೆ ಬಾಲಾಜಿ ಅವರ ಚಿತ್ರಕಥೆ ಇಷ್ಟಪಟ್ಟಿರುವ ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ಸಮ್ಮತಿ ಸೂಚಿಸಿದ್ದಾರೆ. ಈ ಹಿಂದೆ ಸೂರ್ಯ ಹಾಗೂ ರೆಹಮಾನ್ ಸಿಲ್ಲುನು ಒರು ಕಾದಲ್, ಆಯುಧ ಎಳುತ್ತು ಮತ್ತು ’24’ ನಂತಹ ಕ್ಲಾಸಿಕ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಆರ್‌ಜೆ ಬಾಲಾಜಿ ಮತ್ತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಪ್ರತಿಷ್ಠಿತ ಪ್ರಾಜೆಕ್ಟ್ ಗೆ ಸೂರ್ಯ ಜೊತೆಗೆ ಹಲವು ದೊಡ್ಡ ತಾರಾಬಳಗ ಸೇರ್ಪಡೆಯಾಗಲಿದೆ. ಚಿತ್ರತಂಡ 2025 ರ ದ್ವಿತೀಯಾರ್ಧದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.
ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ “ಮುಂಗಾರು ಮಳೆ”. ಇಷ್ಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ.ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಹೆಸರು “ಮನದ ಕಡಲು”.
ಸುಮುಖ ಈ ಚಿತ್ರದ ನಾಯಕನಾಗಿ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ಹಾಗೂ ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಿ.ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು. ಬೆಂಗಳೂರಿನ ಅರಮನೆ ಆವರಣದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಮಾಧ್ಯಮದ ಮಿತ್ರರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆತ್ಮೀಯವಾಗಿ ಆಹ್ವಾನಿಸಿತ್ತು. ಚಿತ್ರದ ಶೀರ್ಷಿಕೆ ಸಹ ಇದೇ ಸಂದರ್ಭದಲ್ಲಿ ಅನಾವರಣವಾಯಿತು ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
‘ಮುಂಗಾರು ಮಳೆ’ ನಂತರ ಇ. ಕೃಷ್ಣಪ್ಪ ರವರ ನಿರ್ಮಾಣದಲ್ಲಿ ಇನ್ನೊಂದು ಚಿತ್ರ ನಿರ್ದೇಶನ ಮಾಡುವ ಯೋಚನೆ ಇತ್ತು ಎಂದು ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, ಆದರೆ ಅವರು ರಾಜಕೀಯದಲ್ಲಿ ಮತ್ತು ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದೆ. ಕೊರೋನ ನಂತರ ಮತ್ತೆ ಒಟ್ಟಿಗೆ ಚಿತ್ರ ಮಾಡುವುದು ನಿರ್ಧಾರವಾಯಿತು. ಹೊಸಬರ ಜೊತೆಗೆ ಸಿನಿಮಾ ಮಾಡೋಣ ಎಂದು ಕೃಷ್ಣಪ್ಪ ಹೇಳಿದರು.
ಹೊಸಬರ ಜೊತೆಗೆ ಸಿನಿಮಾ ಮಾಡೋದು ಸುಲಭವಲ್ಲ. ಈ ಚಿತ್ರಕ್ಕೆ ಹೀರೋ ಸಿಕ್ಕಿರಲಿಲ್ಲ. ಆಗಲೇ ಯಾವುದೋ ಕೆಲಸದ ವಿಷಯವಾಗಿ ಸುಮುಖ ಫೋನ್ ಮಾಡಿದ್ದ. ಫೋಟೋ ಕಳುಹಿಸು ಎಂದೆ. ಅವನು ಎಲ್ಲರಿಗೂ ಇಷ್ಟವಾದ. ಜೊತೆಗೆ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ.
ಈ ಚಿತ್ರಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದರಲ್ಲೂ ಕರ್ನಾಟಕದ 12 ಜಿಲ್ಲೆಗಳಲ್ಲಿ ಜಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ 15 ರೀತಿಯ ಪರ್ಮಿಷನ್ ಬೇಕು. ಅದೊಂದು ಯುದ್ಧ ಮಾಡಿದ ಅನುಭವ. ಬಿಸಿಲು, ರಣಮಳೆಯ ನಡುವೆ ಚಿತ್ರೀಕರಣ ಸುಲಭವಲ್ಲ. ಆದರೆ, ಬಹಳ ಚೆನ್ನಾಗಿ ಬಂದಿದೆ. ಇಲ್ಲಿ ರಂಗಾಯಣ ರಘು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ. ರಂಗಾಯಣ ರಘು ಸಹ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಶೇ. 95ರಷ್ಟು ಚಿತ್ರೀಕರಣ ಮುಗಿದಿದೆ ಎಂದರು .
ಕಥೆ ಚೆನ್ನಾಗಿರಬೇಕು. ಕನ್ನಡಿಗರು ಮೆಚ್ಚುವ ಹಾಗೆ ಮಾಡಬೇಕು. ಇದೊಂದು ಪ್ರಾಮಾಣಿಕ ಪ್ರಯತ್ನ. ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿವೆ. ಅವರನ್ನು ಸರಿಯಾಗಿ ಗುರುತಿಸುವ ಕೆಲಸವಾಗುತ್ತಿಲ್ಲ. ಹೊಸಬರಿಗೆ ಒಳ್ಳೇದಾಗಬೇಕು. ಇದು ಸಹ “ಮುಂಗಾರು ಮಳೆ” ಮಟ್ಟಕ್ಕೆ ಹೋಗಬೇಕು. ಮಧ್ಯೆ ರಾಜಕಾರಣಕ್ಕೆ ಹೋಗಿದ್ದರಿಂದ ಚಿತ್ರ ಮಾಡಲು ಸಾಧ್ಯವಾಗಿರಲಿಲ್ಲ. ಯೋಗರಾಜ್ ಭಟ್ ಸಹ ಬ್ಯುಸಿಯಾಗಿದ್ದರು. ಈಗ ಅದು ಸಾಧ್ಯವಾಗಿದೆ ಎಂದರು ನಿರ್ಮಾಪಕ ಇ.ಕೃಷ್ಣಪ್ಪ.
“ಮುಂಗಾರು ಮಳೆ” ಚಿತ್ರದಿಂದ ಇ.ಕೃಷ್ಣಪ್ಪ ಅವರ ನಿರ್ಮಾಣದ ಎಲ್ಲಾ ಚಿತ್ರಗಳಲ್ಲೂ ಸಹ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಯೋಗರಾಜ್ ಭಟ್ ಅವರ ಜೊತೆಗೆ ಹದಿನೆಂಟು ವರ್ಷಗಳ ನಂತರ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ ಎನ್ನುತ್ತಾರೆ ಸಹ ನಿರ್ಮಾಪಕ ಗಂಗಾಧರ್.
ನಟ ಎಂದರೆ ಜಿಮ್‍ನಿಂದ ಬರಬೇಕು ಎಂಬಂತಾಗಿದೆ. ಅವರಿಗೆ ಭಾಷೆ-ಭಾವ ಗೊತ್ತಿರುವುದಿಲ್ಲ. ಸಿನಿಮಾಗೆ ಬೇಕಾಗಿದ್ದು ಅಭಿನಯ ಅನ್ನೋದನ್ನೇ ಅವರು ಮರೀತಾರೆ. ಆದರೆ, ಸುಮುಖನಿಗೆ ಅಂಥ ಯಾವ ರೋಗ ಇಲ್ಲ. ಇವನು ಓದಿಕೊಂಡಿದ್ದಾನೆ. ಸಿನಿಮಾ ಬಗ್ಗೆ ತಿಳಿದುಕೊಂಡಿದ್ದಾನೆ. ಚೆನ್ನಾಗಿ ನಟಿಸುತ್ತಾನೆ. ಭಟ್ರು ಮತ್ತು ಕೃಷ್ಣಪ್ಪ ಹೊಸಬರ ಜೊತೆಗೆ ಕೆಲಸ ಮಾಡಿದ್ದಾರೆ. ಶೀರ್ಷಿಕೆ ಬಹಳ ಚೆನ್ನಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಕನ್ನಡ ಸಿನಿಮಾ ಮಾಡೋಣ ಎಂದರಂತೆ ಕೃಷ್ಣಪ್ಪ. ಹೌದು, ಎಲ್ಲರೂ ಅಲ್ಲಿಗೆ ಹೋದರೆ ಇಲ್ಲಿ ಮನೆ ನೋಡಿಕೊಳ್ಳೋದು ಯಾರು ಎಂದರು ನಟ ರಂಗಾಯಣ ರಘು.
ಯೋಗರಾಜ್ ಭಟ್ ಬಹಳ ಮುತ್ತುವರ್ಜಿಯಿಂದ ನನ್ನ ಪಾತ್ರ ಸೃಷ್ಟಿಸಿದ್ದಾರೆ. ಈ ಚಿತ್ರದಲ್ಲಿ ನಾನು 100 ವರ್ಷದ ಮುದುಕನ ಪಾತ್ರ ಮಾಡಿದ್ದೇನೆ. ಆದರೆ, ಅವನದ್ದು 70 ವರ್ಷಗಳ ಚೈತನ್ಯ. ವಯಸ್ಸಾಯ್ತು ಅಂತ ತಲೆ ಆಡಿಸುವ ಹಾಗಿಲ್ಲ, ಮೈ ಬಗ್ಗಿಸುವ ಹಾಗಿಲ್ಲ. ಸಾತ್ವಿಕವಾಗಿ ತನ್ನ ವಯಸ್ಸನ್ನು ಅಭಿನಯದ ಮೂಲಕ ಹೇಳುವಂತಹ ಪಾತ್ರ. ಬಹಳ ಚೆನ್ನಾಗಿದೆ ಎಂದು ನಟ ದತ್ತಣ್ಣ ತಿಳಿಸಿದರು.
ಈಗಿನ ಕಾಲದ ನವಯುವಕನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನವರು ಜೀವನದಲ್ಲಿ ಏನು ಮಾಡಬೇಕು? ಎಂಬ ಗೊಂದಲದಲ್ಲಿರುತ್ತಾರೆ. ಅದು ಈ ಚಿತ್ರದಲ್ಲಿದೆ. ಇದೊಂದು ದೊಡ್ಡ ಜವಾಬ್ದಾರಿ. ಯೋಗರಾಜ್ ಭಟ್ ಅವರ ಜೊತೆಗೆ ತುಂಬಾ ಕಲಿಯೋದಿದೆ. ಪ್ರತಿದಿನ ಅವರು ಹೊಸ ಆಲೋಚನೆಯೊಂದಿಗೆ ಬರುತ್ತಾರೆ. ಹೊಸ ಪ್ರಯೋಗ ಮಾಡುತ್ತಾರೆ ಎಂದು ನಾಯಕ ಸುಮುಖ ಹೇಳಿದರು.
ನಾಯಕಿಯರಾದ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ, ಪ್ರತಾಪ್ ರಾವ್ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಆಕ್ಷನ್ ಚಿತ್ರ “ಮ್ಯಾಕ್ಸ್” ಇದೇ ಡಿಸೆಂಬರ್ 25ರಂದು ಬಿಡುಗಡೆ ಆಗುವುದಾಗಿ ಚಿತ್ರ ತಂಡ ಇಂದು ಘೋಷಿಸಿದೆ. ಚಿತ್ರದ ರಿಲೀಸ್ ದಿನಾಂಕವನ್ನು ತಿಳಿಸಿ ಎಂಬ ಅಭಿಮಾನಿಗಳ ಬಹು ಕಾಲದ ಬೇಡಿಕೆಯನ್ನೀ ಚಿತ್ರ ತಂಡ ಇಂದು ಪೂರೈಸಿದೆ.
“ಮ್ಯಾಕ್ಸ್” ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿರುತ್ತಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿರುತ್ತಾರೆ.
ಅಭಿನಯ ಚಕ್ರವರ್ತಿಯ ಬಹು ನಿರೀಕ್ಷಿತ ಚಿತ್ರ “ಮ್ಯಾಕ್ಸ್” ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಇದೇ ನವೆಂಬರ್ 27ಕ್ಕೆ ಒಂದು ಮುಖ್ಯ ಘೋಷಣೆಯನ್ನು ಮಾಡುವುದಾಗಿ ಒಂದು ಪೋಸ್ಟರ್ ಮೂಲಕ ಚಿತ್ರ ತಂಡ ಇಂದು ತಿಳಿಸಿ, ಎಲ್ಲೆಡೆ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿ.27ಕ್ಕೆ ಸಿನಿಮಾ ತೆರೆಗೆ ಬರಲಿದೆ.
“ಮ್ಯಾಕ್ಸ್” ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.
ಇಲ್ಲಿ ಬೋಧನೆ ಇದೆ. ತಪ್ಪು ಸರಿಗಳ ವಿಶ್ಲೇಷಣೆಯೂ ಇದೆ. ಒಂದೇ ಮಾತಲ್ಲಿ ಹೇಳುವುದಾದರೆ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಇದು. ಸಮಾಜದ ಅಂಕುಡೊಂಕು ಅಣಕಿಸುವ ಅರಿವಿನ ಸಿನಿಮಾ ಎನ್ನಲ್ಲಡ್ಡಿಯಿಲ್ಲ.
ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸರಿ ಇದೆಯಾ? ಇರಬಹುದು ಇಲ್ಲದೆಯೂ ಇರಬಹುದು. ಆದರೆ ಕಣ್ತರೆಸುವ ಗುಣಗಳು ಇಲ್ಲಿವೆ.
ಇಲ್ಲಿ ಹೋರಾಟವಿದೆ. ಹೊಡೆದಾಟ ಬಡಿದಾಟವೂ ಇದೆ. ನೋಡುಗರಿಗೆ ಪ್ರಶ್ನೆಗಳೂ ಇವೆ. ಪ್ರಶ್ನೆಯ ಜೊತೆ ಮನರಂಜನೆಯ ಓಟವೂ ಇದೆ.
ಕಥೆ ಸಿಂಪಲ್. ನಿರೂಪಣೆ ವಿಶೇಚ ಎನಿಸುತಗತೆ. ಮೆಕಾನಿಕ್ ಕೆಲಸ ಮಾಡುವ ಮನು ಒಬ್ಬ ಪ್ರಾಮಾಣಿಕ ಹುಡುಗ. ಅಪ್ಪನ ಶಿಕ್ಷಣ ಮಗನನ್ನು ಸಾತ್ವಿಕ ವ್ಯಕ್ತಿಯನ್ನಾಗಿಸಿದೆ. ಆದರ್ಶ ಹುಡುಗನಾಗಲು ತಂದೆಯೂ ಕಾರಣ.
ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅವನ ತಂದೆ ಕೆಟ್ಟ ವ್ಯವಸ್ಥೆಗೆ ಬಲಿ ಆಗುತ್ತಾರೆ. ಮುಂದೆ ಅವರ ಮಗ ಅನ್ಯಾಯವನ್ನು ಮೆಟ್ಟಿ ನಿಲ್ಲುವ ಗುಣದಲ್ಲಿ ಹೇಗೆಲ್ಲಾ ಕಾಣುತ್ತಾನೆ ಅನ್ನೋದೆ ವಿಶೇಷ.
ಮೊದಲರ್ಧ ಸಾಗುವ ಕಥೆಯಲ್ಲಿ ಮನರಂಜನೆ ಜೊತೆ ವ್ಯವಸ್ಥೆಯ ದರ್ಶನ ಮಾಡಿಸುತ್ತಾ ಹೋಗುತ್ತೆ. ದ್ಚಿತಿಯಾರ್ಧ ಬೇರೆಯದ್ದೇ ಲೋಕ ಸೃಷ್ಟಿ ಆಗುತ್ತೆ. ಆ ಹೊಸ ಲೋಕದ ಬಗ್ಗೆ ನೋಡುವ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.
ಇಲ್ಲಿ ಸಮಾಜ ಮತ್ತು ಪ್ರಜಾ ಪ್ರಭುತ್ವಕ್ಕೆ ಪಾಠ ಹೇಳಿದ ಅಂಬೇಡ್ಕರ್ ಅವರು ಸೇರಿದಂತೆ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ , ಭಗತ್ ಸಿಂಗ್ ಇತರರ ಆದರ್ಶ ಇಲ್ಲಿ ಇಣುಕುತ್ತವೆ. ಸಂಭಾಷಣೆ ರೂಪದಲ್ಲಿ ಅವರೆಲ್ಲರೂ ಇಲ್ಲಿ ನೆನಪಾಗುತ್ತಾರೆ. ಅದನ್ನು ಕಟ್ಟಿಕೊಟ್ಟಿರುವ ರೀತಿ ವಿಶೇಷ ಎನಿಸುತ್ತೆ. ಅದನ್ನು ತೆರೆ ಮೇಲೆ ನೋಡಬೇಕಷ್ಟೆ.
ಕಥೆ ಏನು?
ಅತ್ಯಾಚಾರ ವಿರೋಧಿಸುವ ನಾಯಕ ಒಬ್ಬ ಅಧಿಕಾರಿ ಸಾವಿಗೆ ಕಾರಣವಾಗುತ್ತಾನೆ.ಅಷ್ಟೇ ಅಲ್ಲ, ಇಡೀ ಕಥೆಯ ಉದ್ದಕ್ಕೆ ಭ್ರಷ್ಟರನ್ನು ಬಡಿಯುವ ವೇಳೆ ಮತ್ತೊಂದು ದುರಂತ ಆಗುತ್ತೆ. ಅದೇನು ಅನ್ನೋದು ಸಸ್ಪೆನ್ಸ್.
ಕೊಲೆ ಆರೋಪ ಹೊತ್ತ ಅವನು ಚುನಾವಣೆಗೆ ನಿಲ್ಲುತ್ತಾನೆ. ವಾಸ್ತವ ಜಗತ್ತಿನಲ್ಲಿ ನಡೆಯುವ ಅಂಶಗಳು ಇಲ್ಲಿ ಹೈಲೆಟ್.
ಯಾರು ಹೇಗೆ?
ಚೇತನ್ ಇಲ್ಲಿ ಕಥೆಗೆ ಜಸ್ಟೀಸ್ ನೀಡಿದ್ದಾರೆ. ನಟನೆ ಬಗ್ಗೆ ಮಾತಾಡುವಂತಿಲ್ಲ. ಹರಿಬಿಡುವ ಡೈಲಾಗ್ ಇರಬಹುದು. ಬಾಡಿ ಲಾಂಗ್ವೇಜ್ ಆಗಬಹುದು ಸಾಕಷ್ಟು ಹೊಸತನದಿದ ಕೂಡಿದೆ. ಪಾತ್ರಕ್ಕೆ ತೂಕ ಅವರೇ ಅನ್ನೋದು ಸ್ಪಷ್ಟ. ಅವರ ಹೊಡೆದಾಟದ ದೃಶ್ಯ ನೋಡುಗರಿಗೆ ಖುಷಿ ಕೊಡುತ್ತೆ. ಅಷ್ಟರ ಮಟ್ಟಿಗೆ ಅವರಿಗೆ ಎಲ್ಲದರಲ್ಲೂ ಪಕ್ವತೆ ಇದೆ.
ಪಾವನಾ ಕೂಡ ತುಂಬ ಚೆನ್ನಾಗಿ ಕಾಣುತ್ತಾರೆ. ಜೊತೆಗೆ ಪಾತ್ರಕ್ಕೆಜೀವ ತುಂಬಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ನಾಜರ್, ರೂಪಾದೇವಿ, ವೀಣಾ ಸುಂದರ್, ಶಶಿಕುಮಾರ್, ಧರ್ಮ, ಯತಿರಾಜ್, ಮುನಿಯಾ, ಪೂಜಾ ಲೋಕೇಶ್ ಗಮನಸೆಳೆಯುತ್ತಾರೆ. ವಿಶೇಷ ಪಾತ್ರದ ಮೂಲಕ ಅಂಬಿಕಾ ಅವರಿಲ್ಲಿ ಇಷ್ಟ ಆಗುತ್ತಾರೆ. ಎಂದಿನಂತೆ ಶರತ್ ಲೋಹಿತಾಶ್ವ, ಆದಿ ಲೋಕೇಶ್ ಅಬ್ಬರಿಸಿದ್ದಾರೆ. ಡ್ಯಾನಿ, ವಿಜಯ್ ಚೆಂಡೂರ್ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ.
ಮೇಘಡಹಳ್ಳಿ ಡಾ.ಶಿವಕುಮಾರ್ ಅವರ ಕಥೆಯಲ್ಲಿ ಹಿಡಿತವಿದೆ. ವಿನಯ್ ಮೂರ್ತಿ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಎಮಿಲ್ ಸಂಗೀತ ವೇಗ ಹೆಚ್ಚಿಸಿದೆ.
ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ‘ಭೈರತಿ ರಣಗಲ್’ ಚಿತ್ರ ಕಳೆದ ನವೆಂಬರ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. “ಮಫ್ತಿ” ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವನ್ನು ಕನ್ನಡ ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಬಂದು ಜನರು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಕನ್ನಡ ಚಿತ್ರಗಳಿಗೆ ಜನರು ಬರುತ್ತಿಲ್ಲ ಎಂಬ ಮಾತನ್ನು “ಭೈರತಿ ರಣಗಲ್” ಚಿತ್ರ ದೂರ ಮಾಡಿದೆ. ಶಿವರಾಜಕುಮಾರ್ ಅವರ ಅದ್ಭುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
“ಮಫ್ತಿ” ಚಿತ್ರದಲ್ಲಿ ನನ್ನ “ಭೈರತಿ ರಣಗಲ್” ಪಾತ್ರವನ್ನು ನೀವು ಇಷ್ಟಪಟ್ಟಿದ್ದಿರಿ. ಆದರೆ “ಭೈರತಿ ರಣಗಲ್” ಚಿತ್ರದ ರಣಗಲ್ ಪಾತ್ರವನ್ನು ನೀವು ಹೃದಯಕ್ಕೆ ತೆಗೆದುಕೊಂಡಿದ್ದೀರ. ನಿಮಗೆ ತುಂಬು ಹೃದಯದ ಧನ್ಯವಾದ ಎಂದು ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿ ಮಾತನಾಡಿದ ಶಿವರಾಜಕುಮಾರ್, ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಎರಡನೇ ಚಿತ್ರವಿದು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದಕ್ಕೆ ಈ ಚಿತ್ರ ಉದಾಹರಣೆ. ಈ ಯಶಸ್ಸು ನನ್ನೊಬ್ಬನದಲ್ಲ. ಇಡೀ ತಂಡದು. ಮುಂದೆ “ಮಫ್ತಿ ೨” ಮಾಡಬೇಕೆಂಬುದು ಅಭಿಮಾನಿಗಳ ಆಸೆ. ಖಂಡಿತ ಮಾಡುತ್ತೇನೆ. ಆದರೆ ಶೀರ್ಷಿಕೆ “ಮಫ್ತಿ ೨” ಅಂತ ಇರುವುದಿಲ್ಲ. ಸದ್ಯದಲ್ಲೇ ಆ ಚಿತ್ರದ ಶೀರ್ಷಿಕೆಯನ್ನು ತಿಳಿಸುತ್ತೇನೆ ಎಂದರು.
ಅಪ್ಪಾಜಿ ಅವರು ಹೇಳಿದ ಹಾಗೆ ಈ ಯಶಸ್ಸಿಗೆ ಮುಖ್ಯ ಕಾರಣ ಅಭಿಮಾನಿ ದೇವರುಗಳು. ಅವರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ ಎಂದು ಮಾತು ಆರಂಭಿಸಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್, ನರ್ತನ್ ಅವರು ಬಂದು ಈ ಚಿತ್ರದ ಕಥೆ ಹೇಳಿದಾಗ, ನಾನು ಅವರು “ಮಫ್ತಿ”ಯ ಸೀಕ್ವೆಲ್ ಹೇಳಬಹುದು ಅಂದುಕೊಂಡೆ. ಅವರು ಪ್ರೀಕ್ವೆಲ್ ಹೇಳಿದರು. ಈ ಚಿತ್ರದ ಯಶಸ್ಸಿನ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣರಾದ ಇಡೀ ತಂಡಕ್ಕೆ ಧನ್ಯವಾದ. ನಮ್ಮ ಸಂಸ್ಥೆಯಿಂದ ಮುಂದೆ ಕೂಡ ಉತ್ತಮ ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದರು.
ಈ ಚಿತ್ರ ಆಗಲು ಮುಖ್ಯ ಕಾರಣ ಶಿವಣ್ಣ ಅವರ ಅಭಿಮಾನಿಗಳು. ಅವರು “ಮಫ್ತಿ” ಚಿತ್ರದ ಯಶಸ್ಸಿನ ನಂತರ, “ರಣಗಲ್” ಚಿತ್ರ ಮಾಡಿ ಎಂದು ಹೇಳಿದ್ದರು. ಈ ಚಿತ್ರ ಆಗಲು ಅವರೆ ಮುಖ್ಯ ಕಾರಣ ಎನ್ನಬಹುದು. ಆನಂತರ ನನ್ನನ್ನು ಕರೆದು ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು “ಭೈರತಿ ರಣಗಲ್” ಚಿತ್ರ ಮಾಡಲು ಅಡ್ವಾನ್ಸ್ ನೀಡಿದ್ದು ಗೀತಾ ಶಿವರಾಜಕುಮಾರ್ ಅವರು. ಅವರಿಗೆ ಹಾಗೂ ರಣಗಲ್ ಪಾತ್ರಕ್ಕೆ ಜೀವ ತುಂಬಿದ ಶಿವರಾಜಕುಮಾರ್ ಅವರಿಗೆ ಮತ್ತು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದ ಎಂದರು ನಿರ್ದೇಶಕ ನರ್ತನ್.
ಕನ್ನಡ ಚಿತ್ರಗಳು ಓಡುತ್ತಿಲ್ಲ ಎಂಬುದು ಸುಳ್ಳು. ಉತ್ತಮ ಚಿತ್ರಗಳನ್ನು ಬಂದರೆ ಜನ ಖಂಡಿತವಾಗಿ ಜನ ನೋಡುತ್ತಾರೆ. ಅದಕ್ಕೆ ಈ ಚಿತ್ರವೇ ಉದಾಹರಣೆ. ಬಿಡುಗಡೆಯಾದ ದಿನದಿಂದ ಎಲ್ಲಾ ಚಿತ್ರಮಂದಿರಗಳಲ್ಲೂ “ಭೈರತಿ ರಣಗಲ್” ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗಲಿದೆ. ವಿತರಕರ ಮುಖದಲ್ಲಿ ಸಂತೋಷ ಕಂಡರೆ ಆ ಸಿನಿಮಾ ಗೆದ್ದ ಹಾಗೆ ಎಂದರು ವಿತರಕ ಜಗದೀಶ್.
ಚಿತ್ರದಲ್ಲಿ ನಟಿಸಿರುವ ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಮುಂತಾದ ಕಲಾವಿದರು, ಛಾಯಾಗ್ರಾಹಕ ನವೀನ್ ಕುಮಾರ್, ಸಂಕಲನಕಾರ ಅಕ್ಷಯ್ ಹಿರೇಮಠ್ ಮುಂತಾದ ತಂತ್ರಜ್ಞರು ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.
ವೀರೇಶ ಚಿತ್ರಮಂದಿರದ ಕುಶಾಲ್, ನರ್ತಕಿ ಚಿತ್ರಮಂದಿರದ ವೆಂಕಟೇಶ್ ಹಾಗೂ ಮೈಸೂರಿನ ಗಾಯತ್ರಿ ಚಿತ್ರಮಂದಿರದ ಜಯರಾಂ ಅವರು “ಭೈರತಿ ರಣಗಲ್” ಚಿತ್ರಕ್ಕೆ ಚಿತ್ರಮಂದಿರಕ್ಕೆ ಹರಿದು ಬರುತ್ತಿರುವ ಜನಸಾಗರ ಕಂಡು ಸಂತೋಷವಾಗಿದೆ ಎಂದರು. ನಿರ್ಮಾಪಕರಾದ ರಾಜಕುಮಾರ್, ಕೆ.ಪಿ.ಶ್ರೀಕಾಂತ್, ಸುಧೀಂದ್ರ, ಕೃಷ್ಣ ಸಾರ್ಥಕ್, ನಾಗೇಂದ್ರ, ಪುನೀತ್ ಮುಂತಾದವರು ಸಕ್ಸಸ್ ಮೀಟ್ ನಲ್ಲಿ ಉಪಸ್ಥಿತರಿದ್ದರು.
“ಅಲೆಮಾರಿ” ಚಿತ್ರದೊಂದಿಗೆ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಿಸಿ, ಇಲ್ಲಿಯವರೆಗೂ ಹತ್ತು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಹರಿ ಸಂತೋಷ್, ಸಾರಥ್ಯದ ಎರಡು ಚಿತ್ರಗಳ ಆರಂಭೋತ್ಸವ ಕಾರ್ತಿಕ ಸೋಮವಾರದ ಶುಭದಿನದಂದು ನೆರವೇರಿತು. ಕೆ.ವಿ.ಎನ್ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ವೆಂಕಟ್ ನಾರಾಯಣ್ ಹಾಗೂ ರವಿಕುಮಾರ್ ಪೋಸ್ಟರ್ ಅನಾವರಣ ಮಾಡುವ ಮೂಲಕ ನೂತನ ಚಿತ್ರಗಳಿಗೆ ಚಾಲನೆ ನೀಡಿದರು. ಡಿ.ಎಸ್ ಮ್ಯಾಕ್ಸ್ ನ ದಯಾನಂದ್ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
“ಡಿಸ್ಕೋ” ತಂಡದ ಮಾತುಕತೆ.
“ಡಿಸ್ಕೋ” ಇದು ನಾಯಕನ ಅಡ್ಡ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ಹರಿ ಸಂತೋಷ್, ವಿಕ್ಕಿ ವರುಣ್ ಈ ಚಿತ್ರದ ನಾಯಕ. ನನ್ನ ಹಾಗೂ ವಿಕ್ಕಿ ವರಣ್ ಕಾಂಬಿನೇಶನ್ ನಲ್ಲಿ “ಕಾಲೇಜ್ ಕುಮಾರ” ಚಿತ್ರದ ನಂತರ ಈ ಚಿತ್ರ ಮೂಡಿಬರುತ್ತಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ. ನಮ್ಮ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಕಲ್ಲೂರ್ ಸಿನಿಮಾಸ್ ಬ್ಯನಾರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಪ್ರಶಾಂತ್ ಕಲ್ಲೂರ್ ಹಾಗೂ ಹರೀಶ್ ರೆಡ್ಡಿ(ಸಹ ನಿರ್ಮಾಪಕ)ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಧ್ರುವ್ ಸಂಗೀತ ನೀಡಲಿದ್ದಾರೆ. ಇಂದು ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಹೇಳಿದರು.
ಇದು ನಾನು ನಾಯಕನಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರ. ಹಿಂದಿನ ಮೂರು ಚಿತ್ರಗಳೆ ಬೇರೆ ತರಹ. ಇದೇ ಬೇರೆ ತರಹ. ನಾನು ಹೇಗೆ ಇದ್ದಿನೊ ಅದೇ ತರಹ ಪಾತ್ರ ಎನ್ನಬಹುದು. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಇದು ಹಳ್ಳಿಯಿಂದ ಸಿಟಿಗೆ ಬಂದ ಹುಡುಗನ ಕಥೆ ಅಲ್ಲ. ಹಳ್ಳಿಯನ್ನೇ ಸಿಟಿ ಮಾಡಲು ಹೊರಟ ಹುಡುಗನ ಕಥೆ. ಹರಿ ಸಂತೋಷ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ ಎಂದರು ನಾಯಕ ವಿಕ್ಕಿ ವರುಣ್.
ಸಹ ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್, ಸಹ ನಿರ್ಮಾಪಕ ಹರೀಶ್ ರೆಡ್ಡಿ ಹಾಗೂ ಸಂಗೀತ ನಿರ್ದೇಶಕ ಧ್ರುವ್ “ಡಿಸ್ಕೊ” ಚಿತ್ರದ ಬಗ್ಗೆ ಮಾತನಾಡಿದರು.
“congratulations ಬ್ರದರ್” ಚಿತ್ರತಂಡದ ಮಾತು
ಎರಡು ವರ್ಷಗಳಿಂದ ನಾವು ಹನ್ನೆರಡು ಜನ ಸ್ನೇಹಿತರು ಸೇರಿ “ಪೆನ್ ಎನ್ ಪೇಪರ್” ಸಂಸ್ಥೆ ಆರಂಭಿಸಿದ್ದೆವು. ಈ ಮೂಲಕ ಹಲವು ವೆಬ್ ಸಿರೀಸ್ ಗಳಿಗೆ ಹಾಗೂ ಕೆಲವು ಪ್ರೊಡಕ್ಷನ್ ಹೌಸ್ ಗಳಿಗೆ ಕಥೆ ಒದಗಿಸಿಕೊಟ್ಟಿದ್ದೇವೆ. ಈಗ ಇದೇ ತಂಡದಿಂದ ಮೊದಲ ಸಿನಿಮಾ ಮಾಡುತ್ತಿದ್ದೇವೆ. ಅದೇ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ “congratulations ಬ್ರದರ್”. ಈ ಚಿತ್ರದ ಕಥೆ ಬರೆಯಲು ಒಂದು ವರ್ಷವಾಯಿತು. ಮಾರ್ನಿಂಗ್ ಶೋ ಆಡಿಯನ್ಸ್ ನ ತಲೆಯಲ್ಲಿಟ್ಟಿಕೊಂಡು ಕಥೆ ಮಾಡಿದ್ದೇವೆ. ನನ್ನ ತಂಡದಲ್ಲಿರುವ ಪ್ರತಾಪ್ ಗಂಧರ್ವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಪ್ರಶಾಂತ್ ಕಲ್ಲೂರ್ , ಹರೀಶ್ ರೆಡ್ಡಿ(ಸಹ ನಿರ್ಮಾಪಕ) ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಸಂಜನಾ ಈ ಚಿತ್ರದ ನಾಯಕಿ. ಅನುಷಾ ಎಂಬ ಹೊಸ ಹುಡುಗಿಯನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ರೊಮ್ಯಾಂಟಿಕ್ ಜಾನರ್ ನ ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಪ್ರತಾಪ್, ರಕ್ಷಿತ್ ಮುಂತಾದವರು ಚಿತ್ರಕಥೆ ರಚಿಸಿದ್ದಾರೆ ಎಂದು ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ತಿಳಿಸಿದರು.
ಹಲವು ಧಾರಾವಾಹಿಗಳಿಗೆ ಕೆಲಸ ಮಾಡಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಚಿತ್ರ. ನಮ್ಮ ತಂಡದ ಅನೇಕರಿಗೆ ಇದು ಹೊಸ ಹೆಜ್ಜೆ. ಸಾಮಾನ್ಯವಾಗಿ ಹೊಸ ಹೆಜ್ಜೆ ಅಷ್ಟು ಸುಲಭವಾಗಿರುವುದಿಲ್ಲ. ಅದನ್ನು ನಮಗೆ ಹರಿ ಸಂತೋಷ್ ಸುಲಭ ಮಾಡಿಕೊಟ್ಟಿದ್ದಾರೆ. ಹರಿ ಸಂತೋಷ್ ಅವರು ಹೇಳಿದ ಹಾಗೆ ಈ ಚಿತ್ರದ ಕಥೆ, ಚಿತ್ರಕಥೆ ರಚನೆಗೆ ವರ್ಷದ ಸಮಯ ಹಿಡಿಸಿದೆ. ನಮ್ಮ ಕಥೆ ಪೇಪರ್ ನಲ್ಲಿ ಈಗಾಗಲೇ ಗದ್ದಿದೆ. ಪ್ರೇಕ್ಷಕರು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ನಾಳೆಯಿಂದಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರತಾಪ್ ಗಂಧರ್ವ ತಿಳಿಸಿದರು.
ಕಿರುತೆರೆ ಹಾಗೂ ನಾಟಕಗಳಲ್ಲಿ ನಟಿಸಿರುವ ನನಗೆ ಹಿರಿತೆರೆಯಲ್ಲಿ ನಾಯಕನಾಗಿ ಮೊದಲ ಚಿತ್ರ ಎಂದರು ನಾಯಕ ರಕ್ಷಿತ್ ನಾಗ್. ನಾಯಕಿ ಸಂಜನಾ, ನಟಿ ಅನೂಷ, ಸಂಗೀತ ನಿರ್ದೇಶಕ ಸೂರಜ್ ಜೋಯಿಸ್, ಛಾಯಾಗ್ರಾಹಕ ಗುರು, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು.
ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್ ಹಾಗೂ ಸಹ ನಿರ್ಮಾಪಕ ಹರೀಶ್ ರೆಡ್ಡಿ ಚಿತ್ರಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಕಳೆದ ವಾರ ಬಿಡುಗಡೆಯಾಗಿರುವ ಟ್ರೈಲರಿಂದ ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರದ ಮೂರನೇಯ ಹಾಡು ‘ಫಿರಾಕೋ ಮಾರ್’ ಈಗ ಬಿಡುಗಡೆಯಾಗಿದೆ. ಎಲ್ಲ ಚಿತ್ರ ತಂಡಗಳು ಹಿಟ್ ಸಾಂಗ್ ಕೊಡಲು ಮುಂದಾದರೆ ಮರ್ಯಾದೆ ಪ್ರಶ್ನೆ ತಂಡ ‘ಹಿಟ್ ಬ್ಯಾಕ್’ ಹಾಡನ್ನು ನೀಡಿದೆ. ದಕ್ನಿ ರ್ಯಾಪರ್ ಪಾಶಾಬಾಯ್ ಈ ರ್ಯಾಪ್ ಬರೆದು ಹಾಡಿದ್ದಾರೆ. ಕಳೆದ ಎರಡು ಹಾಡುಗಳನ್ನು ಮೆಲೋಡಿ, ಜಾನಪದ ಶೈಲಿಯಲ್ಲಿ ಸಂಯೋಜಿಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಹಿಪ್‌ಹಾಪ್ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ.
ಈ ಹಾಡಿನ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಅರ್ಜುನ್ ರಾಮು “ಮಿಡಲ್ ಕ್ಲಾಸ್ ಅಗ್ರೆಶನ್ ತೋರಿಸುವ ಹಾಡೊಂದು ಸಿನಿಮಾಕ್ಕೆ ಬೇಕಿತ್ತು. ಪಾಶಾಬಾಯ್ ಜತೆ ಸೇರಿ ಈ ರ್ಯಾಪ್ ಮಾಡಿದ್ದೇವೆ. ಕ್ಲಾಸಿನ ಜತೆ ಸಕ್ಕತ್ ಮಾಸ್ ಬಿಜಿಎಮ್ ಇರುವ ಈ ಹಾಡು ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ” ಎಂದರು.
ಟ್ರೇಲರಿನಲ್ಲಿ ತೋರಿಸಿದ ವಿಷಯಗಳಿಗೆ ಪುಷ್ಟಿ ನೀಡುವಂತಿರುವ ಎರಡೂವರೆ ನಿಮಿಷಗಳ ಈ ಹಾಡಿನ ಪ್ರೋಮೋ ವಿಡಿಯೋದಲ್ಲಿ ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಸುನೀಲ್ ರಾವ್, ರಾಕೇಶ್ ಅಡಿಗ ಮತ್ತು ಪೂರ್ಣಚಂದ್ರ ಮೈಸೂರು ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಹುಡುಗರನ್ನ ಬೆಳೆಯೋಕೆ ಬಿಡದೇ ಇದ್ರೂ ಬೆಳೆದೇ ಬೇಳಿತಾರೆ ಎನ್ನುವುದನ್ನು ಕೂಗಿ ಹೇಳುತ್ತಿರುವ ಈ ಹಾಡನ್ನು ಈಗ ಸಖತ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.
ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ. .
ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು.
ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌ಜೆ ಪ್ರದೀಪಾ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ, ಸಂಭಾಷಣೆ, ನಿರ್ದೇಶನವಿದೆ. ‘ಮರ್ಯಾದೆ ಪ್ರಶ್ನೆʼ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಭರತ್ ಗೌಡ ಹೊಸಕೋಟೆ ನಿರ್ಮಾಣದ, ಶ್ರೀವಿದ ನಿರ್ದೇಶನದ ಹಾಗೂ ಹಾಸ್ಯನಟನಾಗಿ ಜನಮನ ಗೆದ್ದಿರುವ ಕೆಂಪೇಗೌಡ ಪ್ರಮುಖಪಾತ್ರದಲ್ಲಿ ನಟಿಸಿರುವ “ಕಟ್ಲೆ” ಚಿತ್ರದ ಮೊದಲ ಹಾಡನ್ನು ನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ಯಾರೋ ನಾ ಕಾಣೆ. ಚಂದಾಗೌಳೆ ಶಾಣೆ” ಎಂಬ ಈ ಹಾಡನ್ನು ಖ್ಯಾತ ಗಾಯಕ ಟಿಪ್ಪು ಅವರು ಹಾಡಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ.
ಹಾಸ್ಯನಟನಾಗಿದ್ದ ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕ ಭರತ್ ಗೌಡ ಅವರಿಗೆ ನಾನು ಆಭಾರಿ ಎಂದು ಮಾತು ಆರಂಭಿಸಿದ ನಾಯಕ ಕೆಂಪೇಗೌಡ, ಶ್ರೀವಿದ ಅವರು “ಕಟ್ಲೆ” ಚಿತ್ರಕ್ಕೆ ಅದ್ಭುತವಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕುಮಾರ್ ಬರೆದು ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಈ ಹಾಡು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದರು.
ಈ ಚಿತ್ರ ಉತ್ತಮವಾಗಿ ಮೂಡಿಬರಲು ಮುಖ್ಯ ಕಾರಣ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವ ಭರತ್ ಗೌಡ ಅವರು. ಅವರು ನಮ್ಮ ಮೇಲೆ ನಂಬಿಕೆಯಿಟ್ಟು ಬಂಡವಾಳ ಹಾಕಿರುವುದೇ ನಮ್ಮ ಕನಸು ನನಸಾಗಲು ಕಾರಣ. ಅವರಿಗೆ ಹಾಗೂ ನನ್ನ ತಂಡಕ್ಕೆ ನನ್ನ ಧನ್ಯವಾದ. ನಮ್ಮ ಚಿತ್ರದ ಪ್ರಥಮ ಹಾಡು ಇಂದು ಬಿಡುಗಡೆಯಾಗಿದೆ. ಸದ್ಯದಲ್ಲೇ “ಕಟ್ಲೆ” ಸೆನ್ಸಾರ್ ವೀಕ್ಷಿಸಲಿದ್ದು, ಡಿಸೆಂಬರ್ ವೇಳೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು ನಿರ್ದೇಶಕ ಶ್ರೀವಿದ.
ಶ್ರೀವಿದ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಭರತ್ ಗೌಡ ಹೇಳಿದರು.
ಹಾಡು ಹುಟ್ಟಿದ ಬಗ್ಗೆ ಹಾಡು ಬರೆದಿರುವ ಚೇತನ್ ಕುಮಾರ್ ಹಾಗೂ ಸಂಗೀತ ಸಂಯೋಜಕನೆ ಕುರಿತು ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಮಾಹಿತಿ ನೀಡಿದರು. ನಾಯಕಿಯರಾದ ಅಮೃತ ರಾಜ್, ಸಂಹಿತ, ನಟರಾದ ಉಮೇಶ್, ತಬಲ ನಾಣಿ, ಹರೀಶ್ ರಾಜ್, ಕರಿಸುಬ್ಬು ನಟಿಯರಾದ ಶೃತಿ, ನಿಸರ್ಗ ಅಪ್ಪಣ್ಣ ಮುಂತಾದವರು “ಕಟ್ಲೆ” ಬಗ್ಗೆ ಮಾತನಾಡಿದರು.
ನಾನ್ ತಾಳ್ಮೆ ಕಳಕೊಂಡಾಗೆಲ್ಲ ತುಂಬ ಜನ ತಲೆಗಳನ್ನು ಕಳ್ಕೊಂಡಿದ್ದಾರೆ… ಜನರಿಗೋಸ್ಕರ ನಾನ್ ಯಾರನ್ನ ಬೇಕಾದ್ರೂ ಕಳ್ಕೊತ್ತೀನಿ. ಆ ದರೆ ಜನರನ್ನೇ ಕಳಕ್ಕೊಳೋದಿಲ್ಲ… ನಾಯಕ ಭೈರತಿ ರಣಗಲ್ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲಿ ರಾಶಿ ರಾಶಿ ಹೆಣಗಳು ಉರುಳಿರುತ್ತವೆ. ಅನ್ಯಾಯದ ವಿರುದ್ಧ ಹೋರಾಟಕ್ಕೆ ನಿಂತ ಭೈರತಿ, ಕ್ರಿಮಿನಲ್ ಗಳನ್ನು ಸದೆಬಡಿಯೋಕೆ ಕ್ರಿಮಿನಲ್ ಆಗಿಯೇ ಫೀಲ್ಡ್ ಗಿಳಿದಿರುತ್ತಾನೆ. ಅಲ್ಲಿಗೆ ಇದೊಂದು ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಒಂದೇ ಮಾತಲ್ಲಿ ಹೇಳುವುದಾದರೆ ಇದೊಂದು ಆಕ್ಷನ್ ಪ್ಯಾಕ್ಡ್ ಸಿನಿಮಾ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಕಂಟೆಂಟ್ ಇಲ್ಲಿದೆ. ಆ ಕಾರಣಕ್ಕೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧದ ಆರಂಭದಲ್ಲಿ ನಿಧಾನಗತಿ ಎನಿಸುವ ಸಿನಿಮಾ, ಘಟನೆಯೊಂದರ ಬಳಿಕ ಹೊಸ ತಿರುವು ಪಡೆದುಕೊಂಡು ವೇಗ ಕಂಡುಕೊಳ್ಳುತ್ತದೆ. ದ್ವಿತಿಯಾರ್ಧ ಅಚ್ಚರಿಯ ಬೆಳವಣಿಗೆ ನಡುವೆ ಕುತೂಹಲದೊಂದಿಗೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಸಿನಿಮಾದಲ್ಲಿ ಹೈಲೆಟ್ ಅಂದರೆ ಚಿತ್ರಕಥೆ. ಕಥೆಗೆ ಪೂರಕವಾಗಿ ಸ್ಕ್ರೀನ್ ಪ್ಲೇ ಮೂಡಿಬಂದಿದೆ.
ಹೀರೋ ಹರಿಬಿಡುವ ಡೈಲಾಗ್ ಕೂಡ ಸಿನಿಮಾದೊಳಗಿನ ಕಿಚ್ಚನ್ನು ಎಬ್ಬಿಸುತ್ತದೆ. ಇಲ್ಲಿ ಅಸಹಾಯಕತೆ ಇದೆ. ತಣ್ಣನೆಯ ಪ್ರೀತಿ ಇದೆ. ಕ್ರೌರ್ಯವಿದೆ. ನಂಬಿಕೆ ಇದೆ, ಮೋಸವಿದೆ, ಅನ್ಯಾಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಂಬನಿ ನೂರೆಂಟು ಕಥೆಗಳನ್ನು ಹೇಳುತ್ತಾ ಹೋಗುತ್ತೆ. ಹೀರೋ ಅನ್ಯಾಯದ ವಿರುದ್ಧ ನ್ಯಾಯದ ಧ್ವನಿ ಎತ್ತುತ್ತಾನೆ. ಅದ್ಯಾವುದೂ ವರ್ಕೌಟ್ ಆಗೋದಿಲ್ಲ. ಕೊನೆಗೆ ದಂಡಂ ದಶಗುಣಂ ಅನ್ನೋ ಮಂತ್ರಕ್ಕೆ ರೆಡಿಯಾಗುತ್ತಾನೆ. ಆಮೇಲೆ ನಡೆಯೋದೆಲ್ಲವೂ ಅದ್ಭುತ.
ಎಲ್ಲಾ ಸಿನಿಮಾಗಳಂತೆ ಇಲ್ಲೂ ಹೀರೋ ಜನಪರ ಹೋರಾಡುತ್ತಾನೆ. ಆದರೆ, ಹೀರೋ ಹೋರಾಡುವ ವಿಷಯ ಮಾತ್ರ ಅಲ್ಟಿಮೇಟ್. ಚಿತ್ರದಲ್ಲಿ ಮೇಕಿಂಗ್ ವಿಶೇಷ. ಸಿನಿಮಾ ಕಥೆಗೆ ತಕ್ಕಂತೆಯೇ ಚಿತ್ರಕಥೆ ವೇಗ ಕಂಡುಕೊಂಡಿದೆ. ಪ್ರತಿ ದೃಶ್ಯ ಕೂಡ ವಿಜೃಂಭಿಸಿದೆ. ಮುಖ್ಯವಾಗಿ ಇಲ್ಲಿ ಹೈಲೆಟ್ ಅಂದರೆ, ಆಕ್ಷನ್, ಹೀರೋ ಗನ್ ಮತ್ತು ಲಾಂಗ್ ಹಿಡಿದು ಹೊಡೆದಾಡುವ ದೃಶ್ಯಗಳು ನೋಡುವ ಒಂದು ವರ್ಗಕ್ಕೆ ಇಷ್ಟವಾಗದೇ ಇರದು. ಇಲ್ಲಿ ಡೈಲಾಗ್ ಮಜಾ ಕೊಡುತ್ತವೆ. ಕತ್ತರಿ ಪ್ರಯೋಗ ಕೂಡ ಸಿನಿಮಾವನ್ನು ಒಂದೇ ಗುಕ್ಕಿನಲ್ಲಿ ನೋಡಿಸಿಕೊಂಡು ಹೋಗುತ್ತೆ. ಕೆಲವು ಕಡೆ ಮೈನಸ್ ಎನಿಸುವ ಅಂಶಗಳಿವೆಯಾದರೂ, ಒಂದಷ್ಟು ಎಮೋಷನಲ್ ದೃಶ್ಯಗಳು ಅವೆಲ್ಲವನ್ನೂ ಮರೆಸುತ್ತೆ. ಎಲ್ಲೋ ಒಂದು ಕಡೆ ರಮೇಶ್ ಅರವಿಂದ್ ಅವರ ಹಿನ್ನೆಲೆ ಧ್ವನಿ ಸರಿ ಹೊಂದಿಲ್ಲ. ರಣಗಲ್ ಚರಿತ್ರೆಯ ಹಿನ್ನೆಲೆ ಹೇಳುವ ಧ್ವನಿಯಲ್ಲಿ ಖಡಕ್ ಇರಬೇಕಿತ್ತು. ಬೇರೆ ಗಟ್ಟಿ ಧ್ವನಿ ಇದ್ದಿದ್ದರೆ, ಸಿನಿಮಾ ಇನ್ನೂ ಮಜ ಎನಿಸುತ್ತಿತ್ತು. ಆದರೂ, ಆ ವಾಯ್ಸ್ ಪಕ್ಕಕ್ಕಿಟ್ಟು ನೋಡುವುದಾದರೆ, ಭೈರತಿಯ ಆಟ ಆದ್ಭುತ.
ಕಥೆ ಏನು?
ರೋಣಾಪುರ ಎಂಬ ಊರಲ್ಲಿ ಕುಡಿಯುವ ನೀರೀಗೂ ಪರದಾಡುವ ಜನ. ಕಿತ್ತು ತಿನ್ನುವ ಬಡತನ. ಬಾಲ್ಯದಲ್ಲೇ ಭೈರತಿ ರಣಗಲ್ ಅನ್ಯಾಯದ ವಿರುದ್ಧ ಸಿಡಿದೇಳುತ್ತಾನೆ. ಸರ್ಕಾರಿ ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳಿಗೆ ಬಾಂಬ್ ಇಟ್ಟು ಹತ್ಯೆ ಮಾಡುತ್ತಾನೆ. ನಂತರ ಜೈಲುಪಾಲಾಗಿ, ಜೈಲಲ್ಲೇ ಕಾನೂನು ಓದುತ್ತಾನೆ. ಲಾಯರ್ ಆಗಿ ಹೊರಬರುವ ರಣಗಲ್, ಊರಿನ ಜನರ ಪರ ನಿಲ್ಲುತ್ತಾನೆ. ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇದ್ದಾಗ, ಕೈಯಲ್ಲಿ ಲಾಂಗ್ ಹಿಡಿಯುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದು ಸಸ್ಪೆನ್ಸ್.
ಯಾರು ಹೇಗೆ?
ಶಿವರಾಜಕುಮಾರ್ ಅವರ ವಯಸ್ಸಿಗೆ ತಕ್ಕಂತಹ ಪಾತ್ರ ಸಿಕ್ಕಿದೆ. ಅವರ ಪಂಚೆ,ಶರ್ಟ್ ಹೈಲೆಟ್. ಎಂದಿಗಿಂತಲೂ ಅವರ ಲುಕ್ ಮತ್ತು ಗತ್ತು ಇಲ್ಲಿ ಹೊಸದಾಗಿದೆ. ನಡೆಯೋ ಸ್ಟೈಲ್ ಹರಿಬಿಡುವ ಮಾತು, ನೋಡುವ ನೋಟ, ಖುಷಿ ಎನಿಸುವ ಬಾಡಿಲಾಂಗ್ವೇಜ್, ಹಿಡಿಯುವ ಲಾಂಗ್ ಮತ್ತು ಗನ್ ಎಲ್ಲವೂ ಹೊಸತೆನಿಸಿದೆ. ಸ್ಕ್ರೀನ್ ಮೇಲೆ ಅವರ ಅಬ್ಬರ ರಾರಾಜಿಸಿದೆ. ರುಕ್ಮಿಣಿ ವಸಂತ್ ಡಾಕ್ಟರ್ ಆಗಿ ಇಷ್ಟ ಆಗುತ್ತಾರೆ. ಛಾಯಾಸಿಂಗ್ ತಂಗಿಯಾಗಿ ಇರುವಷ್ಟು ಸಮಯ ಕಾಡುತ್ತಾರೆ. ರಾಹುಲ್ ಬೋಸೆ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಅವಿನಾಶ್ ಹೊಸ ಗೆಟಪ್ ಮೂಲಕ ಗಮನ ಸೆಳೆದರೆ, ಗೋಪಾಲಕೃಷ್ಣ ದೇಶಪಾಂಡೆ ಇಷ್ಟ ಆಗುತ್ತಾರೆ. ಉಳಿದಂತೆ ತೆರೆ ಮೇಲೆ ಬರುವ ಪ್ರತಿ ಪಾತ್ರಗಳೂ ನ್ಯಾಯ ಸಲ್ಲಿಸಿವೆ. ರವಿಬಸ್ರೂರ್ ಅವರಿಗೆ ಹಿನ್ನೆಲೆ ಸಂಗೀತಕ್ಕೆ ಒಳ್ಳೆಯ ಸ್ಕೋಪ್ ಸಿಕ್ಕಿದೆ. ಅಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ. ಉಳಿದಂತೆ ಎರಡು ಬಿಟ್ ಹಾಡು ಇದೆಯಾದರೂ, ಗುನುಗುವಂತಿಲ್ಲ. ನವೀನ್ ಕುಮಾರ್ ಅವರ ಕ್ಯಾಮೆರಾ ಕೈಚಳಕ ರಣಗಲ್ ರೋಚಕತೆಗೆ ಸಾಕ್ಷಿಯಾಗಿದೆ. ಆಕಾಶ್ ಹಿರೇಮಠ್ ಅವರ ಕತ್ತರಿ ಪ್ರಯೋಗ ಚಿತ್ರದ ವೇಗ ಹೆಚ್ಚಿಸಿದೆ.