Categories
ಸಿನಿ ಸುದ್ದಿ

ರಾಗಿಣಿ ಹೊಸ ಸಿನಿಮಾಗೆ ಗಿರಿರಾಜ ನಿರ್ದೇಶನ

“ಚಿತ್ರಸಂತೆ” ಮಾಸಪತ್ರಿಕೆಯ ಸಂಪಾದಕ ಗಿರೀಶ್ ವಿ ಗೌಡ ಸಾರಥ್ಯದಲ್ಲಿ, ರಾಮಕೃಷ್ಣ ನಿಗಾಡಿ ಅವರ ನಿರ್ಮಾಣದಲ್ಲಿ ಹಾಗೂ “ಜಟ್ಟ”, ” ಮೈತ್ರಿ” ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ ನೂತನ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ. ರಾಗಿಣಿ ದ್ವಿವೇದಿ ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಇತ್ತೀಚಿಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಯಿತು. ಇದೇ ಸಂದರ್ಭದಲ್ಲಿ ಮೇ 24 ರಂದು ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬ ಇರುವುದರಿಂದ “ಚಿತ್ರಸಂತೆ” ಮಾಸಪತ್ರಿಕೆ ಹೊರತಂದಿರುವ ವಿಶೇಷ ಕವರ್ ಪೇಜ್ ಸಹ ಬಿಡುಗಡೆಯಾಯಿತು.

ರಾಷ್ಟ್ರಪ್ರಶಸ್ತಿ ವಿಜೇತ “ಹರಿವು” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಯಿತು ಎಂದು ಮಾತನಾಡಿದ ಗಿರೀಶ್ ವಿ ಗೌಡ, ಹತ್ತು ವರ್ಷಗಳಿಂದ ರಾಗಿಣಿ ಅವರ ಜೊತೆಗೆ ಚಿತ್ರ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸುತ್ತಿದೆ. ಈಗ ಕಾಲ ಕೂಡಿ ಬಂದಿದೆ. ನಿರ್ದೇಶಕ ಬಿ.ಎಂ.ಗಿರಿರಾಜ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ. ಹಿಂದೆ “ಹೊಂಬಣ್ಣ” ಚಿತ್ರ ನಿರ್ಮಿಸಿದ್ದ ರಾಮಕೃಷ್ಣ ನಿಗಾಡಿ ಅವರು ಸಂಚಲನ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇಂದು ಫಸ್ಟ್ ಲುಕ್ ಬಿಡುಗಡೆಯಾಗಿದೆ‌. ಇದೇ ಸಂದರ್ಭದಲ್ಲಿ ಜಿ.ಜಿ.ಸ್ಟುಡಿಯೋಸ್ ಎಂಬ ಸಂಸ್ಥೆ ಕೂಡ ಆರಂಭಿಸಿದ್ದೇವೆ‌. ಇತ್ತೀಚೆಗೆ ಅನೇಕ ಚಿತ್ರ ನಿರ್ಮಾಣವಾಗುತ್ತಿದೆ.

ಆದರೆ ಬಿಡುಗಡೆ ಸಮಯದಲ್ಲಿ ಪ್ರಮೋಶನ್ ಹೇಗೆ ಮಾಡಬೇಕೆಂಬುದು ತಿಳಿಯದೆ ಕೆಲವು ಸಿನಿಮಾಗಳು ಸೋತಿದೆ.‌ ನಮ್ಮ‌ ಸಂಸ್ಥೆ ಮುಂಬೈನ ಸಂಸ್ಥೆಯೊಂದರ ಜೊತೆ ಸೇರಿ ಆಸಕ್ತಿಯುಳ್ಳ ಸಿನಿಮಾ ನಿರ್ಮಾಪಕರಿಗೆ ಸಿನಿಮಾ ಪ್ರಮೋಷನ್ ಕುರಿತು ತಿಳಿಸುವ ಕೆಲಸ ಮಾಡಲಾಗುವುದು. ಇನ್ನು, ಮೇ 24 ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬ. ಹಾಗಾಗಿ ನಮ್ಮ “ಚಿತ್ರಸಂತೆ” ಪತ್ರಿಕೆಯಿಂದ ವಿಶೇಷ ಕವರ್ ಪೇಜ್ ಬಿಡುಗಡೆ ಮಾಡಿದ್ದೇವೆ. ಕಿರಣ್, ಪೂಜಾ ಮುಂತಾದ ತಂತ್ರಜ್ಞರು ಇದಕ್ಕಾಗಿ ಶ್ರಮವಹಿಸಿದ್ದಾರೆ‌ ಎಂದರು.

“ಕೌಂಡಿನ್ಯ” ಅವರು ನನ್ನ ನೆಚ್ಚಿನ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ರಾಗಿಣಿ ಅವರ ಜೊತೆ ಇದು ನನ್ನ ಮೊದಲ ಸಿನಿಮಾ ಎಂದರು ನಿರ್ದೇಶಕ ಬಿ.ಎಂ.ಗಿರಿರಾಜ್.

ಫಸ್ಟ್ ಲುಕ್ ಸಖತಾಗಿದೆ‌. ಅದಕ್ಕಿಂತ ಚಿತ್ರದ ಶೀರ್ಷಿಕೆ ಹಾಗೂ ಕಥೆ ಇನ್ನೂ ಚೆನ್ನಾಗಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣವಾಗಲಿದೆ. “ಚಿತ್ರಸಂತೆ” ಪತ್ರಿಕೆ ನನ್ನ ಹುಟ್ಟುಹಬ್ಬಕ್ಕೆ ಹೊರತಂದಿರುವ ಮುಖ ಪುಟ ಸಹ ಮುದ್ದಾಗಿದೆ. ಗಿರೀಶ್ ವಿ ಗೌಡ ಅವರಿಗೆ ಧನ್ಯವಾದಗಳು ಎಂದರು ನಾಯಕಿ ರಾಗಿಣಿ ದ್ವಿವೇದಿ.

ಅರುಣ್ ಗುರೂಜಿ, ಭಾಸ್ಕರ್ ಗುರೂಜಿ , ಮೋಕ್ಷಗುಂಡಂ ಗುರೂಜಿ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರು ನೂತನ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದರು.

Categories
ಸಿನಿ ಸುದ್ದಿ

ದ ಸೂಟ್ ಟ್ರೇಲರ್ ನೋಡಿ ಶುಭ ಕೋರಿದ ಧ್ರುವ ಸರ್ಜಾ ; ಮೇ 17ಕ್ಕೆ ಚಿತ್ರ ರಿಲೀಸ್

ನಾವು ಧರಿಸುವ ಉಡುಗೆಗಳಲ್ಲಿ “ಸೂಟ್” ಗೆ ಅದರದೆ ಆದ ವಿಶೇಷತೆ ಇದೆ. ಈ “ಸೂಟ್” ನ ಕುರಿತಂತೆ “ದ ಸೂಟ್” ಚಿತ್ರ ಬರುತ್ತಿದ್ದು, ಇತ್ತೇಚೆಗೆ ಟ್ರೇಲರ್ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ “ದ ಸೂಟ್” ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮೇ 17 ಚಿತ್ರ ಬಿಡುಗಡೆಯಾಗುತ್ತಿದೆ.‌ ಮಾಲತಿ ಗೌಡ ಹಾಗೂ ರಾಮಸ್ವಾಮಿ ಅವರು ನಿರ್ಮಿಸಿರುವ, ಎಸ್ ಭಗತ್ ರಾಜ್ ನಿರ್ದೇಶಿಸಿರುವ ಹಾಗೂ ಬಾಲಿವುಡ್ ನಿಂದ ಬಂದಿರುವ ಕಮಲ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದ ಸೂಟ್” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಶಾಸಕ ಗೋಪಾಲಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಪ್ರಶಾಂತ್ ಚಕ್ರವರ್ತಿ ಮುಂತಾದ ಗಣ್ಯರು “ದ ಸೂಟ್” ಆಗಮಿಸಿ ಶುಭ ಕೋರಿದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈ ಚಿತ್ರದ ಟ್ರೇಲರ್ ನೋಡಿ ಖುಷಿಪಟ್ಟಿದ್ದಾರೆ‌. ಚಿತ್ರ ಯಶಸ್ವಿಯಾಗಲಿ ಎಂದು ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ.

ನಿರ್ಮಾಪಕಿ ಮಾಲತಿ ಗೌಡ ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ನಮ್ಮ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ ಎಂದರು. ಮಾಲತಿ ಗೌಡ ಅವರ ಪತಿ ರಾಮಸ್ವಾಮಿ ಈ ಚಿತ್ರದ ನಿರ್ಮಾಪಕರು.

ನಿರ್ದೇಶಕ ಎಸ್. ಭಗತ್ ರಾಜ್ ಮಾತನಾಡಿ, ನಾನು ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಅವರ ಬಳಿ ನಿರ್ದೇಶನ ಕಲಿತಿದ್ದೀನಿ. ಅವರು ನನ್ನ ಗುರುಗಳು .” ದ ಸೂಟ್” ನನ್ನ ಮೊದಲ ನಿರ್ದೇಶನದ ಚಿತ್ರ. “ಸೂಟ್”, ಬದುಕು ಹಾಗೂ ಭಾವನೆಗಳ ಸಂಗಮ. ನಮ್ಮ ಚಿತ್ರಕ್ಕೆ ಸೂಟೇ ಕಥಾನಾಯಕ. ಕಥೆ ಕೇಳಿದ ಕೆಲವರು ಈ ವಿಷಯ ಕೇಳಿ ಆಶ್ಚರ್ಯಪಟ್ಟಿದ್ದು ಉಂಟು. ಆದರೆ ನಮ್ಮ ಚಿತ್ರದಲ್ಲಿ ” ಸೂಟ್” ನ ಪಾತ್ರವೇನು? ಎಂಬುದು ಮೇ 17 ರಂದು ತಿಳಿಯಲಿದೆ. “ಸೂಟ್” ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು “ಸೂಟ್” ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. ಚಿತ್ರಕ್ಕೆ ಅತಿಥಿದೇವೋಭವ ಎಂಬ ಅಡಿಬರಹವಿದೆ.

“ಸೂಟ್” ಚಿತ್ರದ ಪ್ರಚಾರವನ್ನು ವಿನೂತನವಾಗಿ ಮಾಡಿದ್ದೇವೆ‌. “ಸೂಟ್” ನ ಬಗ್ಗೆ ಅನೇಕ ಗಣ್ಯರು ತಮ್ನಗನಿಸಿದನ್ನು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ. ನಮ್ಮ ಚಿತ್ರದಲ್ಲಿ ಮೂರು ಕಿರಣಗಳಿದೆ. ಸಂಗೀತ ನಿರ್ದೇಶಕ ಕಿರಣ್ ಶಂಕರ್, ಛಾಯಾಗ್ರಾಹಕ ಕಿರಣ್ ಹಂಪಾಪುರ ಹಾಗೂ ರೇಖಾಚಿತ್ರಗಳ ಮೂಲಕ ನಮ್ಮ ಚಿತ್ರಕ್ಕೆ ಜೀವ ತುಂಬಿರುವ ಕಿರಣ್ ಅವರು. ಈ ಚಿತ್ರದಲ್ಲಿ ಕಮಲ್, ಉಮೇಶ್ ಬಣಕಾರ್, ವಿ.ನಾಗೇಂದ್ರ ಪ್ರಸಾದ್, ಜೋಸೆಫ್, ಸುಜಯ್, ಭೀಷ್ಮ ರಾಮಯ್ಯ, ಗಡ್ಡ ವಿಜಿ. ಪ್ರಣಯ ಮೂರ್ತಿ ಸೇರಿದಂತೆ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ ಎಂದರು.

ದುಬೈನಿಂದ ಬಂದು ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಮ್ಯಾನೇಜರ್ ಆಗಿದ್ದ ನಟ ಕಮಲ್ ಅವರು “ದ ಸೂಟ್” ಚಿತ್ರದ ತಮ್ಮ ಜರ್ನಿಯ ಬಗ್ಗೆ ವಿವರಣೆ ನೀಡಿದರು. ಪ್ರೊಡಕ್ಷನ್ ಎಕ್ಸಿಕ್ಯುಟಿವ್ ರವಿಶಂಕರ್, ಕಲಾವಿದರಾದ ಮಂಜು ಪಾಟೀಲ್. ಸುಜಯ್, ಭೀಷ್ಮ ರಾಮಯ್ಯ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ರಾಮನ ಅವತಾರ ಸಿನಿಮಾ ರೇಟ್ ಕೇವಲ 99 ರೂ! ಖುಷಿಯಿಂದ ಹೇಳಿದ್ರು ರಿಷಿ

‘ಕವಲುದಾರಿ’ಯಂತಹ ಗಂಭೀರ ಸಿನಿಮಾಗೂ ಸೈ..’ನೋಡಿ ಸ್ವಾಮಿ ಇವನು ಇರೋದು ಹೀಗೆ’, ‘ಆಪರೇಷನ್ ಅಲಮೇಲಮ್ಮ’ ದಂತಹ ಕಾಮಿಡಿ ಚಿತ್ರಗಳಲ್ಲಿಯೂ ನಟಿಸಿ ಗಮನ ಸೆಳೆದಿರುವ ರಿಷಿ ಇದೀಗ ‘ರಾಮನ ಅವತಾರ’ ಮೂಲಕ ಪ್ರೇಕ್ಷಕರ ಎದುರು ಬರ್ತಿದ್ದಾರೆ. ಈಗಾಗ್ಲೇ ಈ ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗ್ತಿದೆ. ವಿಭಿನ್ನ ಪ್ರಮೋಷನ್ ವಿಡಿಯೋ ಮೂಲಕ ರಾಮನ ಅವತಾರ ಬಳಗವೀಗ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗ ಚಿತ್ರತಂಡದ ಕಡೆಯಿಂದ ಮೆಗಾ ಆಫರ್ ವೊಂದು ಸಿಕ್ಕಿದೆ. ರಾಮನ ಅವತಾರ ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ 99 ರೂಪಾಯಿ ರಾಮನ ಅವತಾರ ಸಿನಿಮಾವನ್ನು ನೀವು ಕಣ್ತುಂಬಿಕೊಳ್ಳಬಹುದು.

ಮೇ 9ಕ್ಕೆ ಪ್ರೀಮಿಯರ್..ಮೇ 10ಕ್ಕೆ ಚಿತ್ರ ರಿಲೀಸ್
ರಾಮನ ಅವತಾರ ಸಿನಿಮಾ ಮೇ 10ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೇ 10ಕ್ಕೂ ಮುನ್ನ ಒಂದು ದಿನ ಮೊದಲು ಅಂದ್ರೆ ಮೇ 9ರಂದು ಪೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ ದರ ಕೂಡ 99ರೂಪಾಯಿಗೆ ನಿಗದಿ ಮಾಡಲಾಗಿದೆ. ಕೇವಲ ಈ ಒಂದು ದಿನ ಮಾತ್ರವಲ್ಲ. ಚಿತ್ರ ಬಿಡುಗಡೆ ದಿನ ಅಂದ್ರೆ ಮೇ 10ಕ್ಕೂ ಕೂಡ ಟಿಕೆಟ್ ಬೆಲೆ 99ರೂಪಾಯಿ ಇರಲಿದೆ. ಮೇ 9 ಹಾಗೂ ಮೇ 10ರಂದು ರಾಮನ ಅವತಾರ ಸಿನಿಮಾದ ಟಿಕೆಟ್ ಬೆಲೆ 99ರೂಪಾಯಿಗೆ ದೊರೆಯಲಿದೆ.

ರಾಮನ ಅವತಾರ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ಸಾಥ್ ಕೊಟ್ಟಿದ್ದಾರೆ. ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕಾಸ್ ಪಂಪಾಪತಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದ್ದು, ನಿರ್ದೇಶಕರಾಗಿ ಇವರಿಗೆ ಇದು ಮೊದಲ ಸಾಹಸ. ರಾಮನ ಅವತಾರ ಸಿನಿಮಾದ ಮೂಲಕ ವಿಕಾಸ್, ಮಾರ್ಡನ್ ರಾಮನ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಟ್ರೇಲರ್ ನೋಡ್ತಿದ್ರೆ ರಾಮಾಯಣ ನೆನಪಿಸುವ ಒಂದಷ್ಟು ದೃಶ್ಯಗಳು ಕಾಣುತ್ತವೆ. ರಾಮ ಹೆಗೆ ಜೆಂಟಲ್ ಮ್ಯಾನ್ ಆಗ್ತಾನೆ? ರಾವಣನ ರೀತಿ ಸಮಸ್ಯೆಗಳನ್ನು ಹೇಗೆ ಎದುರಿಸ್ತಾನೆ ಅನ್ನೋದನ್ನು ಕಟ್ಟಿಕೊಡಲಾಗದೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

Categories
ಸಿನಿ ಸುದ್ದಿ

ಕ್ರೌನ್ ಆಫ್ ಬ್ಲಡ್ ಬಾಹುಬಲಿ: ಇದು ಹೊಸ ಅಧ್ಯಾಯ

ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ’ಬಾಹುಬಲಿ’ ಪಾರ್ಟ್-1,2 ಚಿತ್ರವು ಬಿಡುಗಡೆಗೊಂಡು ವಿಶ್ವದಾದ್ಯಂತ ಸದ್ದು ಮಾಡಿ ಗಲ್ಲಾಪೆಟ್ಟಿಗೆಯನ್ನು ದೋಚಿತ್ತು. ಇದರಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಘರುಗಳಿಗೆ ಹೆಚ್ಚಿನ ಅವಕಾಶಗಳು ಲಭಿಸಿದವು.

ಕಥೆಯಲ್ಲಿ ಬಾಹುಬಲಿಯಾಗಿ ಪ್ರಭಾಸ್ ಮತ್ತು ಭಲ್ಲಾಳ ದೇವನಾಗಿ ರಾಣಾದಗ್ಗುಭಾಟಿ ಅಭಿನಯಿಸಿದ್ದರು. ಇಬ್ಬರ ಜೀವನದ ಅನೇಕ ತಿಳಿಯದ ತಿರುವುಗಳು, ಮಾಹಿತಿಗಳನ್ನು ಚಿತ್ರದಲ್ಲಿ ತೋರಿಸಲಿಕ್ಕೆ ಸಾಧ್ಯವಾಗಿರಲಿಲ್ಲ.

ಅದಕ್ಕಾಗಿ ಈಗ ಎಲ್ಲವನ್ನು ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ದಲ್ಲಿ ಹೇಳಲು ಯೋಜನೆ ಸಿದ್ದಗೊಂಡಿದೆ.

ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‌ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿರುತ್ತಾರೆ. ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿರುತ್ತಾರೆ.

ಅನಿಮೇಟೆಡ್‌ದಲ್ಲಿ ಸಾಹಸ, ರಾಜಕೀಯ ಅಚ್ಚರಿಗಳು, ನಾಟಕ, ಮೋಸ, ಯುದ್ದ, ಹೀರೋಗಿರಿ, ವಿಶ್ವಾಸ, ಧೈರ್ಯ ಎಲ್ಲ ಅಂಶಗಳು ಸೇರಿಕೊಂಡಿದೆ. ಕೇವಲ ಮಕ್ಕಳು ಮಾತ್ರವಲ್ಲದೆ ಇನ್ನು ವಿಶಾಲವಾದ ಪ್ರೇಕ್ಷಕ ವರ್ಗಕ್ಕೆ ಭಾರತೀಯ ಅನಿಮೇಶನ್ ಅನ್ನು ಮರು ರೂಪಿಸಿರುವುದು ವಿಶೇಷ.

ಇಂತಹ ಪವರ್ ಪ್ಯಾಕ್ಡ್ ಆಕ್ಷನ್ ಸೀರೀಸ್ ಕನ್ನಡ ಸೇರಿದಂತೆ, ಎಲ್ಲಾ ಭಾಷೆಗಳಲ್ಲಿ ಮೇ 17, 2024ರಿಂದ ಡಿಸ್ನಿ+ಹಾಟ್‌ಸ್ಟಾರ್‌ದಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ.

Categories
ಸಿನಿ ಸುದ್ದಿ

ಸುಧೀರ್ ಅತ್ತಾವರ್ ಸಿನಿಮಾಗೆ ಕೊರಗಜ್ಜ ದೈವದ ಆಶೀರ್ವಾದ: ಕೊರಗಜ್ಜ ಫಸ್ಟ್ ಲುಕ್ ವೀಕ್ಷಿಸಿದ ದೈವ

ತ್ರಿವಿಕ್ರಮ ಸಪಲ್ಯ ನಿರ್ಮಾಣದ , ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನಡಿ, ಸುಧೀರ್ ಅತ್ತಾವರ್ ನಿರ್ದೇಶನದ ಅತೀ ನಿರೀಕ್ಷಿತ
ಕೊರಗಜ್ಜ ಸಿನಿಮಾದ ‘ಮೋಷನ್ ಪೋಸ್ಟರ್‌’ ಜೊತೆ “ಫಸ್ಟ್ ಲುಕ್” ಸಿದ್ಧ ಗೊಂಡಿದ್ದು, ಕೊರಗಜ್ಜ ದೈವದ ಕಳೆ-ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ ಅದನ್ನು ವಿನ್ಯಾಸ ಗೊಳಿಸಿ ಮೊದಲಿಗೆ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೆ ವಿಷೇಶ ಕೋಲಸೇವೆ ನೀಡಿ, ಅದೇ ಸಮಯದಲ್ಲಿ ಶ್ರೀ ದೈವಗಳ ಸಮಕ್ಷಮದಲ್ಲಿ ದೈವದ ಒಪ್ಪಿಗೆಗಾಗಿ ಪ್ರದರ್ಶಿಸಿದರು.ಶ್ರೀ ದೈವಗಳಿಂದ ಫಸ್ಟ್ ಲುಕ್ ನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಅನುಮತಿಯನ್ನು ಭಯ-ಭಕ್ತಿಯಿಂದ ಬೇಡಿಕೊಂಡು, ಒಪ್ಪಿಗೆ ಪಡೆಯಲಾಗಿದೆ.


ಆದರೆ ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.ಮೋಷನ್ ಪೋಸ್ಟರನ್ನು
ವಿಶೇಷವಾಗಿ ವಿನ್ಯಸಗೊಳಿಸಿದ್ಧರೂ ದೈವಗಳು ಒಪ್ಪಿಗೆ ನೀಡದಿದ್ದರೆ ಅದನ್ನು ಬಿಡುಗಡೆಗೊಳಿಸುವುದು ಅಸಾದ್ಯವಾಗಬಹುದಿತ್ತು.ಈ ರಿಸ್ಕನ್ನು ನಿರ್ದೇಶಕ ಮತ್ತು ನಿರ್ಮಾಪಕರು ತೆಗೆದುಕೊಂಡಿದ್ದರು.
ಚಿತ್ರತಂಡವು ಪ್ರತೀ ಹಂತದಲ್ಲೂ ಕೊರಗಜ್ಜ ಹಾಗೂ ಶ್ರೀ ದೈವಗಳ ಆಶಿರ್ವಾದ ಪಡೆದೇ ಮುಂದಡಿ ಇಡುತ್ತಿರುವುದು ವಿಶೇಷ.


ಈ ಅಪರೂಪದ ಕಾರ್ಯಕ್ರಮದಲ್ಲಿ ಮಾಜಿ ಸಚೀವೆ ಶ್ರೀಮತಿ ಮೋಟಮ್ಮ, ಖ್ಯಾತ ಕಲಾವಿದೆ ಭವ್ಯ ಮತ್ತು ಸುಪುತ್ರಿ ಅದಿತಿ,ಎಡಿಟರ್- ಈಪಿ ವಿದ್ಯಾಧರ್ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ ಕಮಲಿನಿ ಹಾಗೂ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

Categories
ಸಿನಿ ಸುದ್ದಿ

ಗ್ರೇ ಗೇಮ್ಸ್ ಟ್ರೇಲರ್ ಬಂತು: ಇದು ವಿಜಯ ರಾಘವೇಂದ್ರ ಚಿತ್ರ- ಶ್ರೀಮುರಳಿ ಅಕ್ಕನ ಮಗ ಜೈ ಸಿನಿಮಾಗೆ ಎಂಟ್ರೆ

ಆನಂದ್ ಮುಗದ್ ನಿರ್ಮಾಣದ, ಪ್ರಶಸ್ತಿ ವಿಜೇತ “ಆಯನ” ಚಿತ್ರದ ಖ್ಯಾತಿಯ ಗಂಗಾಧರ್ ಸಾಲಿಮಠ ನಿರ್ದೇಶನದ ಹಾಗೂ “ಚಿನ್ನಾರಿ ಮುತ್ತ” ವಿಜಯ ರಾಘವೇಂದ್ರ ಪ್ರಮುಖಪಾತ್ರದಲ್ಲಿ ನಟಿಸಿರುವ “ಗ್ರೇ ಗೇಮ್ಸ್” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ‌. ಎಸ್ ಎ ಚಿನ್ನೇಗೌಡ, ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಮುರಳಿ, ವೀಣಾ ಮುಂತಾದ ಗಣ್ಯರು ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಚಿತ್ರದ ಮೂಲಕ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ಸೋದರ ಅಳಿಯ(ಅಕ್ಕನ ಮಗ) ಜೈ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶೃತಿ ಪ್ರಕಾಶ್, ಭಾವನ ರಾವ್, ಇಶಿತಾ, ರವಿ ಭಟ್, ಅಪರ್ಣ ವಸ್ತಾರೆ, ರವಿ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಮೇ ಹತ್ತರಂದು ಬಿಡುಗಡೆಯಾಗಲಿದೆ.

ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ನನ್ನ ಅಣ್ಣ ರಾಘು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದಾನೆ‌. ನಾವು ಆಡಿ ಬೆಳೆಸಿದ ಅಕ್ಕನ ಮಗ ಜೈ ಕೂಡ ಈ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಶ್ರೀಮುರಳಿ ಹಾರೈಸಿದರು.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಟ್ರೇಲರ್ ನಾನು ಕೂಡ ಇಂದೆ ನೋಡಿದ್ದು. ಚೆನ್ನಾಗಿದೆ. ಈ ಸಮಯದಲ್ಲಿ ನಾನು ಪುನೀತ್ ರಾಜಕುಮಾರ್ ಹಾಗೂ ನನ್ನ ಪತ್ನಿ ಸ್ಪಂದನ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಅಕ್ಕನ ಮಗ ಜೈ ಕಂಡರೆ ಸ್ಪಂದನಗೆ ಬಹಳ ಪ್ರೀತಿ‌.‌ ಇಂದು ಸ್ಪಂದನ ಇದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಮೇ ಹತ್ತರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೀವೆಲ್ಲಾ ನೋಡಿ. ಪ್ರೋತ್ಸಾಹ ನೀಡಿ ಎಂದರು ವಿಜಯ ರಾಘವೇಂದ್ರ.

ಇದೊಂದು ಮೈಂಡ್ ಗೇಮ್ ಕುರಿತಾದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಗಂಗಾಧರ್ ಸಾಲಿಮಠ, ಕನ್ನಡದಲ್ಲಿ ಇದು ಅಪರೂಪ ಕಥೆ ಎನ್ನಬಹುದು. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದು ಕೊಂಡಿರುವ ಈ ಚಿತ್ರ ಮುಂದಿನವಾರ ತೆರೆಗೆ ಬರುತ್ತಿದೆ. ಈ ಚಿತ್ರ ಉತ್ತಮವಾಗಿ ಬರಲು ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಶ್ರಮವಿದೆ ಎಂದು ತಿಳಿಸಿದರು ಹಾಗೂ ಚಿತ್ರತಂಡದ ಸದಸ್ಯರನ್ನು ಪರಿಚಯಿಸಿದರು.

ಅವಕಾಶ ಕೊಟ್ಟವರಿಗೆ ಧನ್ಯವಾದ ತಿಳಿಸಿದ ನೂತನ ನಟ ಜೈ, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟಿಯರಾದ ಭಾವನರಾವ್, ಇಶಿತಾ ಕೂಡ “ಗ್ರೇ ಗೇಮ್ಸ್” ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಪ್ರೈಡ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದ ಕಾಂತಾರ ಸಪ್ತಮಿ ಗೌಡ

ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಕೊಡುವ ಸಲುವ ಕಾರ್ಯವನ್ನು ಪ್ರೈಡ್ ಇಂಡಿಯಾ ಅವಾರ್ಡ್’ (India Pride Award) ಮಾಡುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿಂದು‌ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನೆರವೇರಿದೆ. ಕಾಂತಾರದ ಚೆಲುವೆ ಸಪ್ತಮಿ ಗೌಡ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಮೆರಗು ನೀಡಿದರು. ಜೊತೆಗೆ ಉದ್ಯಮ ರಂಗದ ದಿಗ್ಗಜರು, ಸಾಧಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಲವು ಸವಾಲುಗಳನ್ನು ಎದುರಿಸಿ ಉದ್ಯಮ ರಂಗದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನ ಮಾಡುವ ಕಾರ್ಯಕ್ರಮ ಅದಾಗಿತ್ತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ನಟಿ ಸಪ್ತಮಿ ಗೌಡ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಬೆಂಗಳೂರಿನಲ್ಲಿ ಇಂಡಿಯಾ ಪ್ರೈಡ್ ಅವಾರ್ಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೊಂದು ಅದ್ಭುತ ಕಾರ್ಯಕ್ರಮ. ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಕೊಡುವ ಈ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ನಿಮ್ಮ ಪ್ರತಿ ಕೆಲಸದಲ್ಲಿ ಕುಟುಂಬದ ಬೆಂಬಲವಿದ್ದರೆ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದರು.

ವಿನಯ್ ಕುಮಾರ್ ನಾರಾಯಣಸ್ವಾಮಿ ಅವರ ಪರಿಕಲ್ಪನೆ ಈ ಪ್ರೈಡ್ ಇಂಡಿಯಾ ಅವಾರ್ಡ್. ಉದ್ಯಮ ವಲಯದಲ್ಲಿ ತಮ್ಮ ಸಾಹಸಗಳ ಮೂಲಕ ಗೆದ್ದವರು ಹಲವು ವಿಭಾಗದಲ್ಲಿದ್ದಾರೆ. ಅಂಥಹವರನ್ನು ಗುರುತಿಸಿ, ಪ್ರೋತ್ಸಾಹಿಸಿ, ಭಾರತೀಯ ಉದ್ಯಮ ರಂಗ ಹೊಸಾ ಸಾಧ್ಯತೆಗಳಿಗೆ ಒಡ್ಡಿಕೊಳ್ಳಲು ಪ್ರೇರೇಪಣೆ ನೀಡುವುದು ಈ ಪ್ರಶಸ್ತಿಯ ಮೂಲ ಉದ್ದೇಶ. ಇದೀಗ ಬೆಂಗಳೂರಿನಲ್ಲಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಉದ್ಯಮ ರಂಗದ ಮುನ್ನೂರಕ್ಕೂ ಹೆಚ್ಚು ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಭಾರತದ ಆರ್ಥಿಕ ಪಥವನ್ನು ಪ್ರಜ್ವಲಿಸುವಂತೆ ಮಾಡುವಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿರುವ ಅನೇಕರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಆ ಆಯ್ಕೆ ಪ್ರಕ್ರಿಯೆ ಕೂಡಾ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತದೆ. ಯಾವುದೇ ಉದ್ಯಮದಲ್ಲಿನ ಹೊಸತನ, ಪ್ರಯೋಗಶೀಲತೆ, ಸಾಹಸ ಪ್ರವೃತ್ತಿಯನ್ನು ಪರಿಗಣಿಸುತ್ತಲೇ, ಗಹನವಾದ ಚರ್ಚೆ, ಹಲವಾರು ಮಾನದಂಡಗಳ ಆಧಾರದಲ್ಲಿ ಈ ಸಮಿತಿ ಪ್ರೈಡ್ ಇಂಡಿಯಾ ಅವಾರ್ಡ್ ಗೆ ಅರ್ಹರನ್ನು ಆಯ್ಕೆ ಮಾಡಿದೆ.

ಇದೇ‌ಸಂದರ್ಭದಲ್ಲಿ ಈ ಅವಾರ್ಡ್ ಈವೆಂಟಿನ ಸ್ಥಾಪಕರಾದ ವಿನಯ್ ಕುಮಾರ್ ನಾರಾಯಣಸ್ವಾಮಿ ಮನದುಂಬಿ ಮಾತಾಡಿದ್ದಾರೆ.

Categories
ಸಿನಿ ಸುದ್ದಿ

ಕಾಂಗರೂ ಎಂಬ ಆಪ್ತ ಚಿತ್ರ: ತಾಯಿ ಹೃದಯಕ್ಕಿದು ಹತ್ರ!

ಚಿತ್ರ ವಿಮರ್ಶೆ – ರೇಟಿಂಗ್ 3.5 /5

ವಿಜಯ್ ಭರಮಸಾಗರ

ನಿರ್ದೇಶನ: ಕಿಶೋರ್ ಮೇಗಳಮನೆ

ನಿರ್ಮಾಣ: ಆರೋಹಾ ಪ್ರೊಡಕ್ಷನ್ಸ್

ತಾರಾಗಣ: ಆದಿತ್ಯ, ರಂಜನಿ ರಾಘವನ್‍, ಅಶ್ವಿನ್‍ ಹಾಸನ್‍, ಶಿವಮಣಿ, ನಾಗೇಂದ್ರ ಅರಸ್‍, ಕರಿಸುಬ್ಬು ಇತರರು.

ಅದು ಚಿಕ್ಕಮಗಳೂರಿನ ರೆಸಾರ್ಟ್. ಹೆಸರು ಆ್ಯಂಟೋನಿ ಕಾಟೇಜ್‍. ಅಲ್ಲಿ ಬಂದವರಿಗೆ ಭಯಾನಕ ಅನುಭವಗಳಾಗುತ್ತವೆ. ಕೆಲ ಕಪಲ್ಸ್ ನಾಪತ್ತೆಯಾದರೆ, ಇನ್ನೂ ಕೆಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಇಷ್ಟಕ್ಕೂ ಅಲ್ಲಿ ದೆವ್ವ- ಭೂತದ ಕಾಟವಿದೆಯಾ? ಯಾರಾದರೂ ಭಯ ಬೀಳಿಸುತ್ತಿದ್ದಾರಾ? ಇದು ನೋಡುಗರಿಗೆ ಕಾಡುವ ಪ್ರಶ್ನೆ. ಈ ಕುತೂಹಲದಲ್ಲೇ ಸಾಗುವ ಕಥೆಯಲ್ಲಿ ಪೊಲೀಸ್ ಅಧಿಕಾರಿ, ಡಾಕ್ಟರ್, ಆಸ್ಪತ್ರೆ ಇತ್ಯಾದಿ ಪ್ರಮುಖ ಅಂಶಗಳು ಕಾಣುತ್ತವೆ. ಅಷ್ಟಕ್ಕೂ ಆ ಕಾಟೇಜ್ ಒಳಗೆ ನಡೆಯೋ ಘಟನೆ ಎಂಥದ್ದು? ಈ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಒಂದು ಆತ್ಮಹತ್ಯೆ, ಇನ್ನೊಂದು ನಿಗೂಢ ನಾಪತ್ತೆ ಅಂಶ ಇಟ್ಟುಕೊಂಡು ನಿರ್ದೇಶಕ ಕಿಶೋರ್ ಮೇಗಳಮನೆ ಕುತೂಹಲಭರಿತ ಕಥೆ ಕಟ್ಟಿಕೊಟ್ಟಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ‌ ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧ ಏನೋ ಇದೆ ಎಂಬ ಸಸ್ಪೆನ್ಸ್ ಕ್ರಿಯೇಟ್ ಮಾಡುವ ಚಿತ್ರ ದ್ವಿತಿಯಾರ್ಧ ಮತ್ತೊಂದು ಟ್ವಿಸ್ಟ್ ಜೊತೆ ಥ್ರಿಲ್ಲಿಂಗ್ ಅನುಭವ ಕೊಡುತ್ತೆ. ಸಸ್ಪೆನ್ಸ್ ಸಿನಿಮಾಗಳಲ್ಲಿರಬೇಕಾದ ಕುತೂಹಲ ಹಾಗು ನೋಡುವ ಇಂಟ್ರೆಸ್ಟ್ ಇಲ್ಲೂ ಇದೆ. ಎಲ್ಲೂ ಅತ್ತಿತ್ತ ಅಲುಗಾಡದಂತೆ ನೋಡುಗರಲ್ಲಿ ಹೊಸ ಅನುಭವ ಕೊಡುವುದರಲ್ಲಿ ನಿರ್ದೇಶಕರು ಜಾಣತನ ಮೆರೆದಿದ್ದಾರೆ.

ಇಂತಹ ಸಿನಿಮಾಗಳಿಗೆ ಅವಧಿ ಮುಖ್ಯ. ಇಲ್ಲಿ ಅನಗತ್ಯ ಎನಿಸುವ ಕೆಲ ದೃಶ್ಯಗಳನ್ನು ಕತ್ತರಿಸಲು ಅವಕಾಶ ಇತ್ತು. ಅದನ್ನು ತೆಗೆದಿದ್ದರೆ ಇನ್ನಷ್ಟು ಆಪ್ತವೆನಿಸುತ್ತಿತ್ತು. ಕೆಲವು ಕಡೆ ಟ್ರಾಕ್ ತಪ್ಪಿತ್ತಲ್ಲ ಅಂದುಕೊಳ್ಳುವಷ್ಟರಲ್ಲಿ ಸಣ್ಣ ಪುಟ್ಟ ಟ್ವಿಸ್ಟ್ ಗಳು ಬ್ಯಾಲೆನ್ಸ್ ಮಾಡುತ್ತವೆ.

ಕಥೆ ಇಷ್ಟು…

ಆ ಕಾಟೇಜ್ ವೊಂದರಲ್ಲಿ ಹೋದವರೆಲ್ಲ ನಿಗೂಢವಾಗಿ ನಾಪತ್ತೆಯಾದರೆ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ವೇಳೆಗೆ ಬೆಂಗಳೂರಿನಲ್ಲಿರುವ ಪೊಲೀಸ್ ಅಧಿಕಾರಿ ಪೃಥ್ವಿ (ಆದಿತ್ಯ)ಗೆ ಚಿಕ್ಕಮಗಳೂರು ಪೊಲೀಸ್‍ ಠಾಣೆಗೆ ವರ್ಗಾವಣೆ ಆಗುತ್ತೆ. ಕಾರಣ ಆ ಊರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ್ದು ಅದನ್ನು ತಡೆಯಲು ಆ ಠಾಣೆಗೆ ವರ್ಗವಾಗುತ್ತೆ. ಅಲ್ಲಿಗೆ ಹೋದ ಮೇಲೆ ಪೃಥ್ವಿಗೆ ಕಾಟೇಜ್ ಪ್ರಕರಣ ಗೊತ್ತಾಗುತ್ತೆ. ಅದು ದೆವ್ವದ ಸಮಸ್ಯೆಯೇ ಅಥವಾ ಯಾರ ಕೈವಾಡವಿದೆಯೇ ಎಂಬ ಪ್ರಶ್ನೆಯಲ್ಲಿ ತನಿಖೆಗೆ ಮುಂದಾಗುತ್ತಾನೆ. ಅಲ್ಲಿಂದು ಶುರುವಾಗೋದೇ ರೋಚಕತೆ.

ನಿಜಕ್ಕೂ ಈ ಕಥೆ ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ. ಎಲ್ಲೂ ಬೋರ್ ಆಗಲ್ಲ. ಅನಗತ್ಯ ವಿಷಯವಿಲ್ಲ. ಹೊಡಿ‌ಬಡಿ ಸಿನಿಮಾಗಳೇ ಬರುವ ಮಧ್ಯೆ ಭಾವುಕತೆ ತುಂಬುವ ಈ ಚಿತ್ರ ಮನಸ್ಸಿಗೆ ಆಪ್ತವೆನಿಸುತ್ತೆ.

ಎಲ್ಲರಿಗೂ ಇಷ್ಟ ಆಗುವ ಸಂದೇಶ ಇಲ್ಲಿದೆ. ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ನೋಡುಗರಿಗೆ ಇದು ಹಾರರ್ ಫೀಲ್ ಚಿತ್ರ ಎನಿಸಿದರೂ ಒಂದೊಳ್ಳೆಯ ಅಂಶ ಇಲ್ಲಿದೆ. ನಿರೂಪಣೆ ಸಿನಿಮಾದ ಮತ್ತೊಂದು ಹೈಲೆಟ್. ಎಷ್ಟು ಬೇಕೋ ಅಷ್ಟು ಮಾತುಕತೆ ಇಲ್ಲಿದೆ. ಚಿತ್ರಕಥೆಯ ವೇಗ ಮೊದಲರ್ಧಕ್ಕಿಂತ ದ್ವಿತಿಯಾರ್ಧ ಹೆಚ್ಚಿದೆ. ಇಲ್ಲಿ ಕುಣಿತ, ಫೈಟ್ ಇಲ್ಲ. ಅಂತ್ಯದಲ್ಲಿ ಬರುವ ಒಂದೇ ಹಾಡು ಕಣ್ಣಾಲಿಗಳನ್ನ ಒದ್ದೆ ಮಾಡುತ್ತೆ.

ಯಾರು ಹೇಗೆ?

ಇಲ್ಲಿ ಆದಿತ್ಯ ಪೊಲೀಸ್ ಅಧಿಕಾರಿ ಪಾತ್ರಕ್ಕಿನ್ನೂ ಧಮ್ ಕಟ್ಟಬಹುದಿತ್ತು. ಆದರೂ ಸಿಕ್ಕ ಅವಕಾಶಕ್ಕೆ ಮೋಸ ಮಾಡಿಲ್ಲ. ರಂಜನಿ ಇಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಕರಿಸುಬ್ಬು, ಶಿವಮಣಿ, ಅಶ್ವಿನ್ ಹಾಸನ್, ನಾಗೇಂದ್ರ ಅರಸ್ ಇತರರು ಇಷ್ಟವಾಗುತ್ತಾರೆ. ಸಾಧುಕೋಕಿಲ ಅವರ ಹಿನ್ನೆಲೆ ಸಂಗೀತ ಪ್ಲಸ್ ಆಗಿದೆ. ಉದಯ್‍ ಲೀಲಾ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿದೆ.

Categories
ಸಿನಿ ಸುದ್ದಿ

ದ ಜಡ್ಜ್ ಮೆಂಟ್ ಗೆ ಸಾಥ್ ಕೊಟ್ಟ ರಿಲಯನ್ಸ್ ಎಂಟರ್ಟೈನ್ಮೆಂಟ್: ರಿಲೀಸ್ ಜವಾಬ್ದಾರಿ ಹೊತ್ತ ಹೆಸರಾಂತ ಸಂಸ್ಥೆ



ಜಿ9 ಕಮ್ಯುನಿಕೇಷನ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ, ಅದ್ದೂರಿ ತಾರಾಬಳಗ ಹೊಂದಿರುವ “ದ ಜಡ್ಜ್ ಮೆಂಟ್” ಚಿತ್ರದ ವಿತರಣೆ ಹಕ್ಕನ್ನು ಭಾರತದ ಹೆಸರಾಂತ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಪಡೆದುಕೊಂಡಿದೆ.

ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ. ಚಿತ್ರವನ್ನು ನೋಡುವ ಕಾತುರವನ್ನು ಹೆಚ್ಚಿಸಿದೆ.

ಇತ್ತೀಚಿಗೆ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯ ಮಾಡಿ ಕುಂಬಳಕಾಯಿ ಒಡೆಯಲಾಯಿತು. ಟೀಸರ್ ಸಹ ಬಿಡುಗಡೆಯಾಗಿದ್ದು, ಪ್ರಶಂಸೆಯ ಮಾತುಗಳು ಕೇಳಿ ಬರುತ್ತದೆ. ಮತ್ತೊಂದು ಖುಷಿಯ ವಿಚಾರವೆಂದರೆ ನಮ್ಮ ಚಿತ್ರದ ವಿತರಣೆ ಹಕ್ಕನ್ನು ಪ್ರತಿಷ್ಠಿತ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಪಡೆದುಕೊಂಡಿದೆ.

ಈ ಹೆಸರಾಂತ ಸಂಸ್ಥೆಯ ಮೂಲಕ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ವಿತರಣೆ ಅಷ್ಟೇ ಅಲ್ಲದೆ, ಮುಂದೆ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುವ ಚಿತ್ರಗಳ ನಿರ್ಮಾಣದಲ್ಲೂ ಸಹಯೋಗ ನೀಡುವುದಾಗಿ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ತಿಳಿಸಿದೆ.

ಈವರೆಗೂ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ವಿತರಣೆ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ವಿತರಣೆ ಮಾಡಿದೆ. ಆ ಪೈಕಿ ಹತ್ತೊಂಬತ್ತು ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರಗಳಾಗಿದೆ. ಇಂತಹ ಸಂಸ್ಥೆ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ. ಕೋರ್ಟ್ ಡ್ರಾಮ ಜಾನರ್ ನ ಈ ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುವುದಾಗಿ ನಿರ್ಮಾಪಕ ಹಾಗೂ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ತಿಳಿಸಿದ್ದಾರೆ.

ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.

ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಜಾಸ್ತಿ ಪ್ರೀತಿ ಇದು ಮುಖಪುಟದ ಸ್ಫೂರ್ತಿ

ಪೂರ್ಣ ಶ್ರೀ ಎಂಟರ್‌ಪ್ರೈಸಸ್ ಮೂಲಕ ಸಿದ್ದಗೊಂಡಿರುವ ’ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ’ಮಿಡಿದ ಹೃದಯಗಳ ಮೌನರಾಗ’ ಎಂಬ ಅಡಿಬರಹ ಚಿತ್ರಕ್ಕಿದೆ. ರಿಯಲ್ ಎಸ್ಟೇಟ್ ಉದ್ಯಮಿ ಶಿವರಾಂ ಕೊಡತಿ ಬಂಡವಾಳ ಹೂಡಿರುವುದು ಹೊಸ ಅನುಭವ. ಎಸ್‌ಆರ್‌ಕೆ ಕೃಷ್ಣಪ್ಪ ಸರ್ಜಾಪುರ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಅರುಣ್ ಮಾನವ್.

ನಿರ್ದೇಶಕರು ಮಾತನಾಡಿ, ಪ್ರೀತಿಯ ಅವ್ಯಕ್ತಭಾವ ಜಾಸ್ತಿಪ್ರೀತಿಯಾಗಿದೆ. ಸಿನಿಮಾ ಹುಟ್ಟಲು ಫೇಸ್‌ಬುಕ್ ಪೇಜ್ ಕಾರಣವಾಗಿದೆ. ಹೀಗೆ ಒಮ್ಮೆ ಎಫ್‌ಬಿ ನೋಡುವಾಗ ಒಂದು ಹುಡುಗಿಯ ಫೋಟೋ ನೋಡಿ ಕರುಳು ಚುರ್ ಅನಿಸಿತು. ಅದರ ಏಳೆಯನ್ನು ತೆಗೆದುಕೊಂಡು ಕಾಲ್ಪನಿಕ ಚಿತ್ರಕಥೆಯನ್ನು ಬರೆಯಲಾಯಿತು. ಎಲ್ಲಿಯೂ ನೋಡದೆ ಇರತಕ್ಕಂತ ಪ್ರೀತಿಯನ್ನು ಇದರಲ್ಲಿ ನೋಡಬಹುದು. ಒಳ್ಳೆ ಮರವಾಗಬಲ್ಲ ಜಾಸ್ತಿಪ್ರೀತಿ ಆಗಿದೆ. ಯಾವುದೇ ವ್ಯಕ್ತಿಗೆ ಸಂಬಂದಪಟ್ಟಿರುವುದಿಲ್ಲ.

ಬಂದಿರತಕ್ಕಂತ ಕಥೆಗಳು ಇರುವುದಿಲ್ಲ. ಯಾವ ದೃಶ್ಯವು ಹಿಂದಿನ ಚಿತ್ರದಲ್ಲಿ ನೋಡಿದಂತೆ ಭಾಸವಾಗುವುದಿಲ್ಲ. ವಿಭಿನ್ನ ನಿರೂಪಣೆ ಹೊಂದಿದ್ದು, ಪ್ರಾರಂಭದಿಂದ ಕೊನೆತನಕ ಊಹಿಸಲು ಕಷ್ಟವಾಗುತ್ತದೆ. ಪ್ರೀತಿಯನ್ನು ತೋರ್ಪಡಿಸಲಿಕ್ಕೆ ಆಗುವುದಿಲ್ಲವೋ, ಆಗ ಸೋತು ಹೋಗುತ್ತಾನೆ. ಅದನ್ನು ಇಲ್ಲಿ ಕಾಣಬಹುದು. ಬೆಂಗಳೂರು, ಬಂಗಾರಪೇಟೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ಬೇಗನೆ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ. ಮಾಧ್ಯಮದ ಸಹಕಾರ ಬೇಕೆಂದು ಕೋರಿದರು.

ಸಾಹಿತಿ, ಕವಿ, ಚಿಂತಕ, ವಿಮರ್ಶಕ ಹಾಗೂ ಚಿತ್ರ ನಿರ್ದೇಶಕ ಎಲ್.ಎನ್.ಮುಕುಂದರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರು ಹೇಳುವಂತೆ ಕನ್ನಡ ಸಿನಿಮಾ ಬೇರೆ ಬೇರೆ ರೀತಿಯಲ್ಲಿ ಬೆಳೆದಿದೆ. ಅನೇಕ ಚಿತ್ರಗಳು ಜಗತ್ತಿನ ಸಿನಿಮಾಗಳ ಎದುರು ಸವಾಲು ಒಡ್ಡುವಂತ ಕೆಲಸ ಮಾಡುತ್ತಿದೆ. ಅದೇ ಸಾಲಿನಲ್ಲಿ ಜಾಸ್ತಿ ಪ್ರೀತಿ ಸೇರುತ್ತದೆ. ಸಿನಿಮಾ ಎಂಬುದು ಉದ್ಯಮವಾಗಿದೆ. ನೂರಾರು ಜನರ ಪ್ರತಿಭೆ ಮತ್ತು ಪರಿಶ್ರಮ ಒಳಗೊಂಡಿದೆ. ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಅಲ್ಲಿನ ಪ್ರಸಿದ್ದ ಕವಿಗಳು ಸಾಹಿತ್ಯ ರಚಿಸುತ್ತಾರೆ. ನಮ್ಮಲ್ಲಿ ಕಡಿಮೆ ಇದ್ದಾರೆ. ಕುಮಾರವ್ಯಾಸ ಹೆಸರಿನಲ್ಲಿ ಚಿತ್ರಪ್ರಶಸ್ತಿ ನೀಡಬೇಕು. ಅರುಣ್‌ಗೆ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದರು.

ಇಂಟೆನ್ಸ್ ಲವ್‌ಸ್ಟೋರಿ ಏಳೆ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾಗೆ ಏನು ಕಮ್ಮಿ ಮಾಡಿಲ್ಲ. ಎಲ್ಲರೂ ಫ್ಯಾಶನ್‌ನಿಂದ ಮಾಡಿದ್ದಾರೆ. ಇಂದು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಇದೆ. ಯಾರು ಸಿನಿಮಾ ನೋಡಲು ಬರುತ್ತಿಲ್ಲ. ಆದರೂ ನಿರ್ಮಾಪಕರು ಧೈರ್ಯ ಮಾಡಿ, ನಂಬಿಕೆಯಿಂದ ಹಣ ಹೂಡಿದ್ದಾರೆ. ಒಳ್ಳೆ ಅಂಶಗಳು ಇರುವುದರಿಂದ ಚಿತ್ರ ನೋಡಲು ಬರುತ್ತಾರೆಂಬ ವಿಶ್ವಾಸವಿದೆ. ನನ್ನ ಅಭಿನಯದ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ನನಗೂ ಒಂದೆ ಕಡೆ ಬ್ರೇಕ್ ಸಿಗಬೇಕಂಬ ಹಂಬಲವಿದೆ. ಇದರಿಂದ ಸಿಗಬಹುದು. ಅದಕ್ಕಾಗಿ ಕಾಯ್ತಾ ಇದ್ದೇನೆ ಎಂಬುದು ನಾಯಕ ಧರ್ಮಕೀರ್ತಿರಾಜ್ ಮಾತು.

ಕೃಷಿ ತಪಂಡ ನಾಯಕಿ. ಮತ್ತೋಂದು ಜೋಡಿಗಳಾಗಿ ಮುರಳಿರಾಮ್-ಶೋಭರಾಣಿ. ಇವರೊಂದಿಗೆ ಬ್ಯಾಂಕ್‌ಜನಾರ್ಧನ್, ಸುಚೇಂದ್ರಪ್ರಸಾದ್, ಮೈಸೂರು ರಮಾನಂದ್, ಎಂ.ಎನ್.ಲಕ್ಷೀದೇವಿ, ಮಧುಮಂದಗೆರೆ ಮುಂತಾದವರು ನಟಿಸಿದ್ದಾರೆ. ವಿನೀತ್ ರಾಜ್ ಮೆನನ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸತೀಶ್.ಸಿ.ಎಸ್-ಬಿ.ಆರ್.ಮಲ್ಲಿಕಾರ್ಜುನ್, ಸಂಕಲನ ವೆಂಕಟೇಶ್.ಯುಡಿವಿ, ನೃತ್ಯ ಗೋವಿಂದ್.ವಿ.ಮಾಲೂರು, ಸಾಹಸ ಕುಂಗು ಫೂ ಚಂದ್ರು ಅವರದಾಗಿದೆ. ಜೇಂಕಾರ್ ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

error: Content is protected !!