Categories
ಸಿನಿ ಸುದ್ದಿ

ಕೋಟಿ ಹಾಡು ಹೊರ ಬಂತು: ಡಾಲಿ – ಪರಮ್ ಕಾಂಬೋದ ಹೊಸ ಚಿತ್ರ

ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಈಗ ಬಿಡುಗಡೆಯಾಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ‌ ವೀಕ್ಷಿಸಬಹುದು.

ಹಾಡಿನ ಸಂಯೋಜಕರಾದ ವಾಸುಕಿ ವೈಭವ್ “ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಷನ್ನಿನ ಮೊದಲ ಹಾಡು. ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ಅವರ ಜತೆ ಕೆಲಸ ಮಾಡುವುದು ಯಾವಾಗಲೂ ಖುಷಿ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತ ಈ ಹಾಡು ಇಷ್ಟವಾಗತ್ತೆ‌ ಅನ್ನೊ ನಂಬಿಕೆ ಇದೆ” ಎಂದು ಹೇಳಿದರು.

“ವಾಸುಕಿ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಈ ಇಬ್ಬರ ಕಾಂಬಿನೇಷನ್ನಿನ ಈ ಹಾಡನ್ನು ಅರ್ಮಾನ್ ಮಲಿಕ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಹಾಡು ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕೋಟಿಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಡಾಲಿಯ ಮಾತು ಸೋತು ಹಾಡು ಸಮಯ: ಇದು ಪರಮ್ ಚಿತ್ರ

ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಮೇ 13, ಸೋಮವಾರ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ಮೇ 13ರಂದು ಬಿಡುಗಡೆಯಾಗಲಿದೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕುಂಟೆಬಿಲ್ಲೆ ಆಡೋಕೆ ಬಂದವರು! ಹೊಸ ಚಿತ್ರಕ್ಕೆ ಚಾಲನೆ

ಈ ಮೊದಲು ದಕ್ಷ ಯಜ್ಞ, ತರ್ಲೆ ವಿಲೇಜ್, ಋತುಮತಿ ಚಿತ್ರ ನಿರ್ದೇಶನ ಮಾಡಿದ್ದ ಸಿದ್ದೇಗೌಡ ಜಿ.ಬಿ‌.ಎಸ್. ಅವರು ಕುಂಟೆಬಿಲ್ಲೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ‌. ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.
ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ‌. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು.

ನಿರ್ಮಾಪಕ ಎಸ್.ಬಿ. ಶಿವು ಮಾತನಾಡಿ, ಜೀವಿತ ಕ್ರಿಯೇಷನ್ ನಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯದು ಹೊಸ ಪ್ರತಿಭೆ ಆಗಿದ್ದು ಅವರನ್ನೇ ನಾಯಕರನ್ನಾಗಿ ಮಾಡಿಕೊಂಡಿದ್ದೇವೆ ಎಂದರು.

ನಿರ್ಮಾಪಕ ಕುಮಾರ್ ಗೌಡ ಮಾತನಾಡಿ,
ನಿರ್ಮಾಣ ಕ್ಷೇತ್ರ ನನಗೆ ಹೊಸದು. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಹೋಗಿದ್ದವನು‌. ಆದರೆ ಅದು ಸಾಧ್ಯವಾಗಿರಲಿಲ್ಲ‌. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಂಗಭೂಮಿ ಕಡೆಗೆ ಆಸಕ್ತಿ ಇತ್ತು .

ಇದೀಗ ವಿದ್ಯಾಭ್ಯಾಸ ಮುಗಿಸಿ ನಟನೆ ಕಡೆಗೆ ಬರುತ್ತಿದ್ದಾನೆ. ಈಗ ನಾನೇ ಮುಂದೆ ನಿಂತು ನಿರ್ದೇಶಕ ಸಿದ್ದೇಗೌಡ ಅವರ ಗರಡಿಗೆ ಬಿಟ್ಟಿದ್ದೇವೆ. ನನ್ನ ಮಗನಿಗೆ ಹೊಂದುವಂತ ಒಳ್ಳೆಯ ಕತೆ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು‌.

ಮೇಘಶ್ರೀ ಮಾತಿಗಿಳಿದು, ಟೈಟಲ್ ನಷ್ಟೇ ಸ್ಕ್ರಿಪ್ಟ್ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಈ ರೀತಿಯ ಸ್ಟೋರಿ ಕೇಳಿರಲಿಲ್ಲ. ಒಳ್ಳೆಯ ತಂಡ ಸಿಕ್ಕಿದ್ದು, ನಾನು ಹಳ್ಳಿಯೊಂದರ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರ ಮಾಡಲಿದ್ದೇನೆ ಎಂದರು.
ನಾಯಕ ಯದು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ‌. ಆ ನಿಟ್ಟಿನಲ್ಲಿ ಪಾತ್ರ ಮಾಡುವೆ ಎಂದರು.


ಹಿರಿಯ ನಟ ಶಂಕರ್ ಅಶ್ವಥ್ ಮಾತನಾಡಿ, ಅಕ್ಷಯ ತೃತೀಯ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ‌. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯದಾಗಲಿ. ನನ್ನದು ನಾಯಕಿಯ ತಂದೆ ಪಾತ್ರ‌. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದಾರೆ‌. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಸಂಭಾಷಣೆ ಬರೆದಿರುವ ಮಧು ಮಾತನಾಡಿ ನಾನು ಪ್ರತಿ ಸಿನಿಮಾಗೆ ಬರೆಯುವಾಗಲೂ ಹೊಸದಾಗಿಯೇ ಬರೆಯುತ್ತೇನೆ. ಈ ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿದ್ದೇನೆ. ಹಳ್ಳಿಯ ನೈಜ ಘಟನೆಗಳು ಇಲ್ಲಿ ಇವೆ ಎಂದು ತಿಳಿಸಿದರು.

Categories
ಸಿನಿ ಸುದ್ದಿ

ಮಿತ್ರ ಈಗ 46ರ ಹರೆಯ! ಸಿನಿ ಗೆಳೆಯನ ಹೊಸ ಭಾವ ಹೊಸ ರಾಗ

ಮತ್ತೆ ಪುಟಿದೇಳಲು ಸಜ್ಜಾದ ಹಾಸ್ಯ ಕಲಾವಿದ ಮಿತ್ರ. ಹಲವು‌ ಏಳುಬೀಳು ಕಂಡ ಮಿತ್ರ ಇದೀಗ ಹೊಸ ರಾಗದ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಅಪರೂಪದ ಪಾತ್ರಗಳ ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಸೋಲು ಗೆಲುವು ಕಂಡ ಮಿತ್ರ ಸದಾ ಸ್ನೇಹಜೀವಿ. ಅವರೀಗ 46ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ವೇಳೆ ಮಿತ್ರ ಅವರ ಸಿನಿ ಜರ್ನಿಯ ಝಲಕ್ ಇಲ್ಲಿದೆ….

ಶಿನು ಜಾರ್ಜ್..ಅರೇ ಹಿಂಗಂದ್ರೆ ಯಾರಿಗೂ ಗೊತ್ತಾಗಲ್ಲ ; ಅದೇ ‘ಮಿತ್ರ‘ ಅಂತ ಕರೆದ್ರೆ ಇಡೀ ಚಂದನವನ ಮುಗಳ್ನಗುತ್ತದೆ..ಮಿತ್ರ ಇವ್ರ ಯಾವಾಗಲ್ಲೂ ಸ್ನೇಹ ಪ್ರೀತಿ ವಿಶ್ವಾಸದ ಹತ್ರ.. ಸ್ನೇಹಕ್ಕೋಸ್ಕರ_ ಸ್ನೇಹಿತರಿಗೋಸ್ಕರ ಹಾತೋರೆಯುವ ಮಸ್ತ್ ಮನಸು ಮಿತ್ರ ಅವರದ್ದು.. ಹಿಂಗಾಗಿಯೆ ತನ್ನ ಸ್ನೇಹ ಲೋಕದಿಂದಲೇ ಮಿತ್ರ ಅಂತ ಹೆಸರನ್ನ ಪಡೆದು ಪರಿಚಿತರಾಗಿರೋರು ಬಹುಮುಖ ಪ್ರತಿಭೆ.
ಇವ್ರಿಗೆ ಗೊತ್ತಿರೋದು ಮೂರೇ
ಒಂದು ಸ್ನೇಹಿತರು , ಇನ್ನೊಂದು ಅಡುಗೆ ,ಇನ್ನೊಂದು ಕಲೆ..
ಈ ಮೂರನ್ನು ತನು-ಮನವನ್ನಾಗಿಸಿಕೊಂಡು ಬಾಳುತ್ತಿರೋ ನಿಯತ್ತಿನ ಆಳು.


ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕೂಡ ಸಮಸ್ಯೆ ಇದ್ದ ಫ್ಯಾಮಿಲಿ ಬ್ಯಾಗ್ರೌಂಡ್ ನಿಂದ ಬಂದವ್ರು ಇವ್ರು.. ಆದ್ರೆ ಇವತ್ತು ವೆರೈಟಿ ವೆರೈಟಿ ಅಡುಗೆ ಮಾಡೋ ಬೃಹತ್ ಬಾಣಸಿಗ ಮಿತ್ರ… ಹಾದಿ ಬೀದಿ ತಿಂಡಿಯಿಂದ ಹಿಡಿದು ಸೆವೆನ್ ಸ್ಟಾರ್ ಹೋಟೆಲ್ ಅಡುಗೆಯನ್ನು ಚಿಟ್ಕೆ ಹೊಡೆದಂಗೆ ಮಾಡಿಬಿಡ್ತಾರೆ..
ಸಾವಿರಾರು ಕಚಗುಳಿ ಇಡೋ ಕಾಮಿಡಿ ಶೋಗಳನ್ನ ನಡೆಸಿಕೊಟ್ಟಿದ್ದಾರೆ. ಈಗಲ್ಲೂ ಅವಕಾಶ ಬಂದಾಗೆಲ್ಲ ನಡೆಸಿಕೊಟ್ಟಿದ್ದಾರೆ ಪರಸಂಗದ ಮಾರ್ಡನ್ ಗೆಂಡ್ಡೆತಿಮ್ಮ.


ವೆಡಿಂಗ್ ಪ್ಲಾನ್ಗಳನ್ನೂ ಕೂಡ ಸಖತ್ ಕ್ರಿಯೆಟಿವ್ ಆಗಿ ಪ್ಲಾನ್ ಮಾಡ್ತಾರೆ ಜಾಣೇಶ. ನಟನೆಯ ಜೊತೆಗೆ ಮದುವೆ ಕಾರ್ಯಕ್ರಮಗಳನ್ನ ಸುಸೂತ್ರವಾಗಿ ಟೆಕ್ಷನ್ ಇಲ್ದಂಗೆ ಅದ್ದೂರಿಯಾಗಿ ಮಾಡಿಕೊಡ್ತಾ ಇದ್ದಾರೆ.
ಅದೆಂಥದ್ದೆ ಪಾತ್ರ ಕೊಟ್ಟರು ನುಂಗಿ ನೀರು ಕೊಡಿಯೋ ಮಿತ್ರ ತನ್ನ ಅನೇಕ ಅನೇಕ ಮಿತ್ರ ಬಳಗಕ್ಕೆ ಗೊತ್ತೋ ಗೊತ್ತಿಲ್ಲದೆ ಸಹಾಯ ಮಾಡ್ತಾ ಇದ್ದಾರೆ.


ಇನ್ನು ಕರ್ನಾಟಕದ ಪ್ರಚಂಡ ಕುಳ್ಳ ದಿವಂಗತ ದ್ವಾರಕೀಶ್ ಅವರನ್ನ ಸ್ಫೂರ್ತಿಯನ್ನಾಗಿಸಿಕೊಂಡಿರುವ ‘ರಾಗ‘ ಅನ್ನೋ ಮನಮುಟ್ಟವ ಸಿನಿಮಾ ನಿರ್ಮಾಣ ಕಮ್ ನಟನೆ ಮಾಡಿ ಗೆದ್ದರು.. ಆದ್ರೆ ಅವತ್ತು ಬಾಹುಬಲಿ ಸಿನಿಮಾ ಎಲ್ಲಾ ಥಿಯೇಟರ್ಗಳನ್ನ ಕಬ್ಜ ಮಾಡಿಕೊಂಡಿದ್ದರಿಂದ ಮಿತ್ರ ಕೈ ಸುಟ್ಕೋ ಬೇಕಾಯ್ತು.. ಆದ್ರೂ ಛಲಬಿಡದ ತ್ರಿವಿಕ್ರಮನಂತೆ ಚಿತ್ರರಂಗದಲ್ಲಿ ಎದ್ದು ನಿಲ್ಲಬೇಕು ಕಲಾ ಸರಸ್ವತಿ ಆರಾಧಿಸಲೇಬೇಕು ಅನ್ನೋ ಪಣದಿಂದ ಸಿನಿಮಾ ಲೋಕದ ಕಲಾರಣಕಣದಲ್ಲಿ ಸಕ್ರಿಯರಾಗಿದ್ದಾರೆ.
ಮೊನ್ನೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಂಬಾಳೆ ಫಿಲಂಸ್ ನಿರ್ಮಾಣದ ರಾಘವೇಂದ್ರ ಸ್ಟೋರ್ ಸಿನಿಮಾ ಮೂಗನ ಪಾತ್ರ ವೀಡೀಯೋ ವೈರಲ್ ಆಗ್ತಾ ಇರೋದು ಎಲ್ಲರಿಗೂ ಗೊತ್ತು.

2003ರಲ್ಲಿ ಶಿವಣ್ಣ ನಟನೆಯ 75ನೇ ಸಿನಿಮಾ ‘ಶ್ರೀರಾಮ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ‘ಪಾಪಾ ಪಾಂಡು‘ ಮತ್ತು ‘ಸಿಲ್ಲಿ ಲಲ್ಲಿ‘ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮನಕ್ಕೆ ಹೋದವರು. ಅದ್ರಲ್ಲೂ ಯೋಗರಾಜ್ ಭಟ್ ಸೃಷ್ಟಿಸಿದ ‘ಮನಸಾರೆ‘ ಚಿತ್ರದ ‘‘ಬಟ್ಟೆ ಬ್ಯಾಡ‘‘ ಅನ್ನೊ ಕ್ಯಾರೆಕ್ಟರ್ , ‘ಪಂಚರಂಗಿ‘ ಸಿನಿಮಾದ ಜ್ಯೋತಿಷಿ ಪಾತ್ರ ಹಿಂಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೆ ಹೇಳಬಹುದು.. ಇಲ್ಲಿಯ ತನಕ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮಿತ್ರ.

ಮಿತ್ರ ಎಷ್ಟು ಶ್ರಮಜೀವಿ, ಕ್ರಮ ಜೀವಿ ಅನ್ನೋದನ್ನ ಹೇಳ್ತಿವಿ ಕೇಳಿ.. ಅದೇ ಯಾವುದೇ ರೀತಿ ಪಾತ್ರ ಸಿಗ್ಲಿ ಲೀಲಾಜಾಲವಾಗಿ ಅಭಿನಯ ಮಾಡೋ ಈ ಕಲಾವಿದ ಈಗ ಅನೇಕ ಸಿನಿಮಾಗಳಲ್ಲಿ ಬಗೆ ಬಗೆಯ ಬ್ಯೂಟಿಫುಲ್ ಪಾತ್ರಗಳನ್ನ ಮಾಡ್ತಾ ಇದ್ದಾರೆ.. ಅದ್ರಲ್ಲಿ ಪ್ರಮುಖವಾದವುಗಳೆಂದ್ರೆ ‘ಯಲ್ಲಾಕುನ್ನಿ‘ ಮತ್ತು ‘ಕರಾವಳಿ‘ ಸಿನಿಮಾ.. ಪ್ರದೀಪ್ ನಿರ್ದೇಶನದ ಕೋಮಲ್ ಕುಮಾರ್ ಮತ್ತು ಸಹನಾಮೂರ್ತಿ ನಿರ್ಮಾಣದ ‘ಯಲ್ಲಾಕುನ್ನಿ‘ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಮಿತ್ರ ಅಭಿನಯ ಮಾಡಿದ್ದಾರೆ.. ‘‘ಸುಗಂಧ ರಾಜ‘‘ ಅನ್ನೋ ಕಾಮಿಡಿ ಕಮ್ ವಿಲನ್ ಕ್ಯಾರೆಕ್ಟರ್ ಅನ್ನ ಫಸ್ಟ್ ಟೈಮ್ ಪ್ಲೇ ಮಾಡಿದ್ದಾರೆ.

ಇನ್ನು ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ‘ ಸಿನಿಮಾದ ಬಗ್ಗೆ ಜನ ಮುಂದೊಂದು ದಿನ ಮಾತನಾಡೇ ಮಾತನಾಡುತ್ತಾರೆ.. ಯಾಕೆಂದ್ರೆ ಹಂಗಿದೆ ಮಿತ್ರ ಅವರ ಪಾತ್ರ.. ‘ಕರಾವಳಿ‘ ಸಿನಿಮಾದಲ್ಲಿ ಒಂದು ವಿಶೇಷ ಗೆಟಪ್ನಲ್ಲಿ ಮಿತ್ರ ಕಾಣಿಸಿಕೊಂಡಿದ್ದಾರೆ.. ಎಂದೂ ಕೂಡ ಗಡ್ಡ ಮೀಸೆ ಬಿಡದ ಮಿತ್ರ ಫಸ್ಟ್ ಟೈಮ್ ವೈಟ್ ಗಡ್ಡ- ಮಿಸೆ ಬಿಟ್ಟು ಪಾತ್ರಕ್ಕೆ ಎರಡು ತಿಂಗಳು ಜಿಮ್ ನಲ್ಲಿ ಕಸರತ್ತು ಮಾಡಿ 95ಕೆ.ಜಿ ಇದ್ದವರು 70 ಕೆ.ಜಿ ತೂಕ ಇಳಿಸಿಕೊಂಡು 60ವರ್ಷ ವಯಸಾದ ವ್ಯಕ್ತಿಯ ಪಾತ್ರವನ್ನ ಮಾಡುತ್ತಿದ್ದಾರೆ.. ಇದೇ ಸಿನಿಮಾದಲ್ಲಿ ಮತ್ತೊಂದು ಶೇಡ್ ಗಾಗಿ ಇನ್ನೊಂದು ಹದಿನೈದು ಕೆ.ಜಿ ಡೌನ್ ಆಗಿ ಕ್ಯಾಮೆರಾಕ್ಕೆ ಕೈ ಮುಗಿಯಲಿದ್ದಾರೆ.


ಇದೇ ಬಹುಮುಖ ಪ್ರತಿಭೆ ನಿರ್ಮಾಪಕ ಕಮ್ ನಟ ಮಿತ್ರ ಅವರಿಗೆ ಇಂದು 46ನೇ ಹ್ಯಾಪಿ ಹುಟ್ಟು ಹಬ್ಬ. ಇಂತಹ ಡೆಡಿಕೆಟೆಡ್ ಕಲಾವಿದನಿಗೆ ಇನ್ನಷ್ಟು ಮಗದಷ್ಟು ಮಸ್ತ್ ಮಹೊಬತ್ತ್ ಪಾತ್ರಗಳು ಸಿಗಲಿ ಅನ್ನೋದು ಆಶಯ.

Categories
ಸಿನಿ ಸುದ್ದಿ

ಸಸ್ಪೆನ್ಸ್ ಕೊಲೆಗಳಿಗೆ ಕಾಣದ ಸೈಲೆನ್ಸ್ ಕಿಲ್ಲರ್ ನ ರೋಚಕತೆ!

ಚಿತ್ರವಿಮರ್ಶೆ: ರೇಟಿಂಗ್ 2.5 /5

ವಿಜಯ್ ಭರಮಸಾಗರ

ಚಿತ್ರ: 4ಎನ್ 6
ನಿರ್ದೇಶಕ: ದರ್ಶನ್ ಶ್ರೀನಿವಾಸ್
ನಿರ್ಮಾಣ: ಸಾಯಿ ಪ್ರೀತಿ
ತಾರಾಗಣ: ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್, ಆದ್ಯ ಶೇಖರ್, ಅರ್ಜುನ್, ಆಶಿತಾ, ಸೌರವ್ ಇತರರು.

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ , ಮರ್ಡರ್‌ಮಿಸ್ಟ್ರಿ ಕಥೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ 4ಎನ್6 ಕೂಡ ಹೊರತಲ್ಲ. ಇಲ್ಲೂ ಕೊಲೆಗಳ ಸುತ್ತ ಕಥೆ ಸಾಗುತ್ತೆ. ಆದರೆ, ಮಂದಗತಿಯ ವೇಗವೇ ಸಿನಿಮಾದ ಮೈನಸ್. ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ನಿರೂಪಣೆ ಶೈಲಿ, ಚಿತ್ರಕಥೆಯಲ್ಲಿನ ಬಿಗಿ ಹಿಡಿತ ಇನ್ನಷ್ಟು ಗಟ್ಟಿಯಾಗಿ ಇದ್ದಿದ್ದರೆ ಒಂದೊಳ್ಳೆಯ ಸಿನಿಮಾ ಆಗುವ ಸಾಧ್ಯತೆ ಇತ್ತು. ಕಥೆ ಕಟ್ಟುವಲ್ಲಿ ಇರುವ ನಿರ್ದೇಶಕರ ಜಾಣತನ, ತೋರಿಸುವಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಆದರೂ ಒಂದಷ್ಟು ಕೊಲೆಗಳು ನಡೆಯೋದು ಯಾಕೆ, ಯಾರು ಆ ಕೊಲೆಗಳನ್ನು ಮಾಡಿದ್ದಾರೆ ಅಂತ ಬೆನ್ನತ್ತಿ ಹೋಗುವ ಸನ್ನಿವೇಶಗಳು ತಕ್ಕಮಟ್ಟಿಗೆ ಗಮನಸೆಳೆಯುತ್ತವೆ ಹೊರತು ಕುತೂಹಲ ಮೂಡಿಸಲ್ಲ.

ಇಲ್ಲಿ ವೈದ್ಯರ ಕರಾಳ ಮುಖ ಅನಾವರಣಗೊಂಡಿದೆ. ಅದು ಹೇಗೆ ಎಂಬ ಕುತೂಹಲ ಇದ್ದರೆ, ಸಮಯ ಮಾಡಿಕೊಂಡು ಸಿನಿಮಾ ನೋಡಬಹುದು. ಆರಂಭದಲ್ಲಿ ಕುತೂಹಲ ಕೆರಳಿಸುವ ಕಥೆ ದ್ವಿತಿಯಾರ್ಧ ಕೊಂಚ ಮಂದವಾಗುತ್ತೆ. ಪೊಲೀಸ್ ಅಧಿಕಾರಿಯ ಜೊತೆ ಕೊಲೆಗಳ ತನಿಖೆಯಲ್ಲಿ ತೊಡಗುವ ಫೋರೆನ್ಸಿಕ್ ತಂಡದ ಲೀಡರ್ ನೈಶಾ ಹೇಗೆಲ್ಲಾ ಕೊಲೆ ರಹಸ್ಯ ಬಯಲಿಗೆಳೆಯುತ್ತಾಳೆ ಅನ್ನೋದು ಕಥೆ. ಆ ತನಿಖೆಯ ಸನ್ನಿವೇಶಗಳು ಕೊಂಚ ಜಾಳು ಜಾಳು ಎನಿಸುತ್ತವೆ. ಅದನ್ನು ರೋಚಕವಾಗಿಸಿದಿದ್ದರೆ, ನಿಜಕ್ಕೂ ಇದು ನೋಡುಗರಿಗೆ ಸ್ವಲ್ಪವಾದರೂ ರುಚಿಸುತ್ತಿತ್ತು. ಈ ರೀತಿಯ ಕಥೆಗೆ ಹಣ ಹಾಕುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು.

ಇಂತಹ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಪ್ರಧಾನ. ಆದರೆ ಅದೇ ಇಲ್ಲಿ‌ ನಿಧಾನ. ಕತ್ತರಿ ಪ್ರಯೋಗ ಇನ್ನಷ್ಟು ಮೊನಚಾಗಿರಬೇಕಿತ್ತು. ಅಲ್ಲಲ್ಲೇ ಸುತ್ತುವ ಕಥೆಯಲ್ಲಿ ರೋಚಕತೆ ಸಾಲದು. ಆದರೂ ಕೊಲೆ ರಹಸ್ಯ ಭೇದಿಸುವ ದೃಶ್ಯಗಳಿಗೆ ವೇಗ ಜೋರಾಗಿರಬೇಕಿತ್ತು. ಇರುವ ಅಗತ್ಯತೆಗಳಿಗೆ ಸರಿಯಾಗಿ ನಿರ್ದೇಶಕರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಫಸ್ಟ್ ಹಾಫ್ ಇದ್ದಂತೆ ಸೆಕೆಂಡ್ ಹಾಫ್ ಕೂಡ ಕುತೂಹಲ ಇರಿಸಿದ್ದರೆ ತನಿಖಾ ತಂಡದ ಓಡಾಟಕ್ಕೆ ಜೈಹೋ ಎನ್ನಬಹುದಿತ್ತು.

ಏನದು ಕಥೆ?

ಬಡ ಕುಟುಂಬದ ಹುಡುಗಿ ನೈಶಾ ಬಾಲ್ಯದಲ್ಲೇ ಚುರುಕು. ಮನೆಯಲ್ಲಿ ಏನಾದರೂ ಮಿಸ್ ಆಗಿದ್ದರೆ ಅದನ್ನು ಕಲ್ಪನೆಯಲ್ಲೇ ಮನಗಂಡು ಕಂಡು ಹಿಡಿಯುವಷ್ಟು ಬುದ್ಧಿವಂತೆ. ತನ್ನ ತಾಯಿಗೆ ಮಗಳು ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ. ಅದರಂತೆ ನೈಶಾಳ ಆ ಜಾಣತನ ಆಕೆಯನ್ನು ಫೋರೆನ್ಸಿಕ್ ಡಿಟೆಕ್ಟಿವ್ ತಂಡ ಸೇರುವಂತೆ ಮಾಡುತ್ತೆ.


ಅತ್ತ ಒಂದೊಂದೇ ವೈದ್ಯರ ಕೊಲೆಗಳು ನಡೆಯುತ್ತವೆ. ಅವು ಹೇಗಾದವು ಅನ್ನೋ ಕಲ್ಪನೆಯಲ್ಲೇ ನೈಶಾ ರಿಪೋರ್ಟ್ ಕೊಟ್ಟು ತನ್ನ ಬುದ್ಧಿವಂತಿಕೆ ಪ್ರದರ್ಶಿಸುತ್ತಾಳೆ. ಅವಳ ಜೊತೆ ಪೊಲೀಸ್ ಅಧಿಕಾರಿ ಕೂಡ ಸಾಥ್ ಕೊಡುತ್ತಾರೆ. ಕೊಲೆಗಳ ಸುತ್ತ ಸಾಗುವ ಕಥೆಯಲ್ಲಿ ಯಾರು ಕೊಲೆಗಾರ ಅನ್ನೋದೆ ಸಸ್ಪೆನ್ಸ್. ಕೊನೆಗೊಂದು ಟ್ವಿಸ್ಟ್ ಇದೆ. ಅದೇ ಸಿನಿಮಾದ ತಿರುವು. ಅದೇನೆಂಬ ಕುತೂಹಲ ಇದ್ದರೆ ಚಿತ್ರ ನೋಡಬಹುದು.

ರಚನಾ ಇಂದರ್ ಪೋರೆನ್ಸಿಕ್ ಡಿಟೆಕ್ಟಿವ್ ಆಗಿ ಗಮನ ಸೆಳೆದಿದ್ದಾರೆ. ಇನ್ನಷ್ಟು ಖಡಕ್ ಫರ್ಫಾರ್ಮೆನ್ಸ್ ಬೇಕಿತ್ತು. ನಿರ್ದೇಶಕರು ಹೇಳಿದ್ದಷ್ಟೇ ಮಾಡಿದಂತಿದೆ. ಇನ್ನು, ಪೊಲೀಸ್ ಅಧಿಕಾರಿಯಾಗಿ ಭವಾನಿ ಪ್ರಕಾಶ್ ಸಿಗರೇಟ್ ಎಳೆದು ಹೊಗೆ ಬಿಡುವಷ್ಟಕ್ಕೆ ಮಾತ್ರ ಸೀಮೀತ. ಅವರ ನಟನೆಯಲ್ಲೂ ಖದರ್ ಇಲ್ಲ. ಒಂದೊಳ್ಳೆ ಕಥೆಗೆ ನ್ಯಾಯ ಸಲ್ಲಿಸುವ ನಟನೆ ಕಡಿಮೆ ಎನಿಸಿದೆ. ಉಳಿದಂತೆ ರಚನಾ ತಾಯಿಯಾಗಿ ಕಾಣಿಸಿಕೊಂಡಿರುವ ಪಾತ್ರ ಗಮನ ಸೆಳೆಯುತ್ತೆ. ಇತರೆ ಪಾತ್ರಗಳು ನಿರ್ದೇಶಕರ ಪ್ರಕಾರ ಕಾಣಿಸಿಕೊಂಡಿವೆ.
ಚರಣ್ ತೇಜ್ ಕ್ಯಾಮೆರಾ ಕೈಚಳಕ ಪರವಾಗಿಲ್ಲ. ಸಂಗೀತಕ್ಕಿನ್ನೂ ಧಮ್ ಬೇಕಿತ್ತು.

Categories
ಸಿನಿ ಸುದ್ದಿ

ಆಧುನಿಕ ರಾಮನ ಬಿಡುವಿಲ್ಲದ ಓಡಾಟ- ನೋಡುಗನ ಆಯಾಸ !

ಚಿತ್ರ ವಿಮರ್ಶೆ: ರೇಟಿಂಗ್ 2.5/5

ವಿಜಯ್ ಭರಮಸಾಗರ

ಚಿತ್ರ: ರಾಮನ ಅವತಾರ
ನಿರ್ದೇಶಕ: ವಿಕಾಸ್ ಪಂಪಾಪತಿ
ನಿರ್ಮಾಣ: ಅಮರೇಜ್ ಸೂರ್ಯವಂಶಿ
ತಾರಾಗಣ: ರಿಷಿ, ಪ್ರಣೀತಾ, ಶುಭ್ರ ಅಯ್ಯಪ್ಪ, ಅರುಣ್ ಸಾಗರ್ ಇತರರು

ಜೀವನದಲ್ಲಿ ಎಲ್ಲ ಕಷ್ಟ ಗಳು ನಮ್ಮನ್ನೇ ಯಾಕೆ ಹುಡಿಕೊಂಡ್ ಬರ್ತವೆ. ಹಾಗೆ ಬಂದಾಗಲೇ ನಮ್ಮವರು ಯಾರು ಅಂತ ಗೊತ್ತಾಗೋದು..’
ಈ ಡೈಲಾಗ್ ಬರುವ ಹೊತ್ತಿಗೆ ಅಲ್ಲೊಂದು ಮೆಲೋ ಡ್ರಾಮ ನಡೆದಿರುತ್ತೆ. ಏನದು ಎಂಬ ಕುತೂಹಲಕ್ಕೆ ಸಿನಿಮಾ ನೋಡಿ.

ಮನೆಗೆ ಮಾರಿ, ಊರಿಗೆ ಉಪಕಾರಿ ಇದು ಗಾದೆ ಮಾತು. ಮನೆಗೊಬ್ಬ ಇಂತಹ ವ್ಯಕ್ತಿ ಇದ್ದೇ ಇರ್ತಾರೆ. ಆದರೆ ಅಲ್ಲೊಬ್ಬ ಆಧುನಿಕ ರಾಮ, ಊರ ಉದ್ಧಾರ ಮಾಡಬೇಕು. ಜನಸೇವೆ ಮೂಲಕ ಹೆಸರಾಗಬೇಕು ಅಂದುಕೊಳ್ತಾನೆ. ಅವನ ಕನಸು ತುಂಬಾ ದೊಡ್ಡದು. ಆದರೆ ಆ ಕನಸು ನನಸಾಗುತ್ತಾ ಅನ್ನುವುದನ್ನು ಹಾಸ್ಯ ಪ್ರಧಾನವಾಗಿ ಕಟ್ಟಿಕೊಡುವ ಪ್ರಯತ್ನದಲ್ಲಿ ನಿರ್ದೇಶಕರು ತಕ್ಕಮಟ್ಟಿಗೆ ಕೆಲಸ‌ ಮಾಡಿದ್ದಾರೆ. ಹಾಗಂತ ಇದು ಪೂರ್ಣ ಪ್ರಮಾಣದ‌ ಕಾಮಿಡಿ ಸಿನಿಮಾವಂತೂ ಅಲ್ಲ. ನೀತಿ ಬೋಧನೆಯೂ ಇಲ್ಲ. ಮೊದಲರ್ಧ ಹೇಗೋ ನಗಾಡಿಸಿಕೊಂಡು ಸಾಗುವ ಸಿನಿಮಾ, ದ್ವಿತಿಯಾರ್ಧದಲ್ಲಿ ಏರುಪೇರಾಗುತ್ತೆ. ಎಲ್ಲೋ ಒಂದು ಕಡೆ ಕಥೆ ಮಂದಗತಿ ಎನಿಸುತ್ತೆ. ಇದು ತೀರಾ ಹೊಸ ಕಥೆಯೇನಲ್ಲ. ಇನ್ನಷ್ಟು ಬಿಗಿ ಹಿಡಿತ ಇದ್ದಿದ್ದರೆ ಸಿನಿಮಾದ ಅಂದ, ಗುಣಮಟ್ಟ, ವೇಗ ಹೆಚ್ಚುತ್ತಿತ್ತು. ಮೊದಲರ್ಧಕ್ಕೆ‌ ಕೊಟ್ಟ ಗಮನ ದ್ವಿತಿಯಾರ್ಧಕ್ಕೆ ನೀಡಿದ್ದರೆ ಹೊಸ ಅವತಾರವಾದರೂ ಕಾಣಬಹುದಿತ್ತು.

ನಿರ್ದೇಶಕರ ಕಥೆಯ ಎಳೆ ಹೊಸದಲ್ಲ. ಹೋಗಲಿ ನಿರೂಪಣೆಯನ್ನಾದರೂ ಇನ್ನಷ್ಟು ಚುರುಕಾಗಿಸಬಹುದಿತ್ತು. ಆದರೆ ಪ್ರಯತ್ನದಲ್ಲಿ ನಿರ್ದೇಶಕರು ಹಿಂದುಳಿದಿದ್ದಾರೆ. ಕಚಗುಳಿ ಮಾತು ಕೊಂಚ ನೋಡಿಸಿಕೊಂಡು ಹೋಗುತ್ತೆ ಅನ್ನೋದೇ ಸಮಾಧಾನ.

ಆರಂಭದಲ್ಲಿ ಮಜವೆನಿಸುವ ಕಥೆಯ ಜರ್ನಿ ಹೋಗ್ತಾ ಹೋಗ್ತಾ ತೀರಾ ಸರಳವೆನಿಸುತ್ತೆ. ಹಾಗಾಗಿ ನೋಡುಗರಿಗೆ ಹೇಳಿಕೊಳ್ಳುವಷ್ಟು ಮಜ ತರಿಸಲ್ಲ. ಆದರೆ, ತರಹೇವಾರಿ ಪಾತ್ರಗಳ ಮೋಡಿ ನೋಡಿಸಿಕೊಂಡು ಹೋಗುತ್ತೆ.

ಬಹುತೇಕ ಅಲ್ಲಲ್ಲೇ ಕಥೆ ಟ್ರಾವೆಲ್ ಆಗಿದ್ದರೂ, ಕೊಂಚ ಕಚಗುಳಿ ಇಡುವ ಅಂಶಗಳು ಗಮನ ಸೆಳೆಯುತ್ತವೆ. ಕೆಲವು ಕಡೆ ತೀರಾ ಸಿಲ್ಲಿ ಎನಿಸುವ ದೃಶ್ಯಗಳು ಎದುರಾಗಿ ನೋಡುಗನ ತಾಳ್ಮೆಗೆಡಿಸುತ್ತವೆ. ಅವುಗಳಿಗೆ ಕತ್ತರಿ ಬಿದ್ದಿದ್ದರೆ ಹೊಸ ಅವತಾರ ಕಾಣಬಹುದಿತ್ತು.
ರೊಮ್ಯಾಂಟಿಕ್ ಕಾಮಿಡಿ ಇಷ್ಟ ಪಡೋರಿಗೆ ಇದು ರುಚಿಸುತ್ತೆ. ರಿಷಿ ಕಾಮಿಡಿ ಸಬ್ಜೆಕ್ಟ್ ಗೆ ಫಿಟ್ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದಾರೆ. ಆದರೆ ಈ ಕಥೆಯ ಆಯ್ಕೆಯಲ್ಲಿ ಗೊಂದಲಗೊಂಡಿದ್ದಾರೆ. ಹಿಂದೆ ಆಪರೇಷನ್ ಅಲಮೇಲಮ್ಮ ಕೊಟ್ಟ ಮಜ ಜನ ಮರೆತಿಲ್ಲ. ಅದೇ ಗುಂಗಲ್ಲಿ ಈ ಹೊಸ ಅವತಾರ ನೋಡಿದರೆ ಗಾಬರಿ ಆಗುವಂತಿಲ್ಲ.!!

ಕಥೆ ಏನು?

ರಾಮ (ರಿಷಿ) ಊರ ಜನರ‌ ಸೇವೆ ಮಾಡಬೇಕು. ಎಲ್ಲರೂ ದುಡಿದು ಬದುಕಬೇಕು ಅಂತ ಕನಸು ಕಂಡವನು. ಆದರೆ ಅವನ ಬದುಕಲ್ಲಿ ಒಂದು ಘಟನೆ ನಡೆದು ಹೋಗುತ್ತೆ. ಯಾರೋ ಮಾಡಿದ ತಪ್ಪು ಅವನ ಮೇಲೆ ಬರುತ್ತೆ. ಊರ ಜನ ತಿರುಗಿ ಬೀಳುವ ಮೊದಲು ಊರು ಬಿಡಬೇಕು ಅಂತ ನಿರ್ಧರಿಸಿ ರಾತ್ರೋ ರಾತ್ರಿ ಊರು ಬಿಡ್ತಾನೆ. ಮಂಗಳೂರು ಅಂಗಳಕ್ಕೆ ಬಂದು ಬೀಳೋ ರಾಮನ ಕಣ್ಣಿಗೆ ಸೀತೆಯಂತಹ ಹುಡುಗಿ ಕಾಣ್ತಾಳೆ.

ಪ್ರಾಜೆಕ್ಟ್ ಒಂದರ ರೀ ಸರ್ಚ್ ಗೆ ಬರುವ ಅವಳ ಜೊತೆ ಒಂದು ವಾರ ಸುತ್ತಾಡುತ್ತಾನೆ. ಮೆಲ್ಲನೆ‌ ಪ್ರೀತಿಯೂ ಶುರುವಾಗುತ್ತೆ. ಇನ್ನೇನು ಹೇಳಿಕೊಳ್ಳಬೇಕೆಂಬ ಹೊತ್ತಲ್ಲಿ ಅ ಹುಡುಗಿಯ ಕಿಡ್ನಾಪ್ ಆಗುತ್ತೆ. ಅಲ್ಲಿಂದ ಕಥೆ ಇನ್ನೊಂದು ಮಜಲಿಗೆ ಹೊರಳುತ್ತೆ. ಹಾಗಾದರೆ ಆಕೆಯನ್ನು ಕಿಡ್ನಾಪ್ ಮಾಡಿದ್ಯಾರು? ರಾಮ ತನ್ನ ಸೀತೆಯನ್ನು ಕಾಪಾಡ್ತಾನಾ? ತನ್ನೂರಿಗೆ ಹಿಂದಿರುಗುತ್ತಾನಾ? ಇದನ್ನು ತಿಳಿಯೋ ಕುತೂಹಲ ಇದ್ದರೆ ರಿಷಿ ಅವತಾರ ನೋಡಬಹುದು.

ಯಾರು ಹೇಗೆ?

ರಿಷಿ ನಟನೆಯಲ್ಲಿ ಲವಲವಿಕೆ ಇದೆ. ಮಾತಿನ‌ಲಹರಿ ಚಂದ. ರೊಮ್ಯಾಂಟಿಕ್ ಹುಡುಗನಾಗಿ ಇಷ್ಟವಾಗುತ್ತಾರೆ. ಅವರ ಬಾಡಿ ಲಾಂಗ್ವೇಜ್ ಎಂದಿಗಿಂತಲೂ ಗಮನ ಸೆಳೆಯುತ್ತೆ. ಕಾಮಿಡಿ ಫೈಟಲ್ಲೂ ಸೈ ಎನಿಸಿಕೊಳ್ಳುತ್ತಾರೆ.
ಪ್ರಣೀತಾ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅರುಣ್ ಸಾಗರ್ ಕಿಡ್ನಾರ್ ಲೀಡರ್ ಆಗಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಪಾತ್ರಗಳು ನಾಯಕ, ನಾಯಕಿಗೆ ಹೆಗಲಾಗಿವೆ.
ವಿಷ್ಣು ಪ್ರಸಾದ್ ಛಾಯಾಗ್ರಹಣ ಪರವಾಗಿಲ್ಲ. ಜೂಡಾ ಸ್ಯಾಂಡಿ ಸಂಗೀತಕ್ಕಿನ್ನು ಧಮ್ ಬೇಕಿತ್ತು.

Categories
ಸಿನಿ ಸುದ್ದಿ

ಗಾಡ್ ಪ್ರಾಮೀಸ್ ಅಂದ್ರು ಸೂಚನ್ ಶೆಟ್ಟಿ: ಸಿನಿಮಾ ಮುಹೂರ್ತಕ್ಕೆ ಆನೆಗುಡ್ಡೆ ಗಣಪತಿ ಸಾಕ್ಷಿ

ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಪ್ರಯತ್ನ ಗಾಡ್ ಪ್ರಾಮಿಸ್ ಸಿನಿಮಾಗೆ ಮುನ್ನುಡಿ ಸಿಕ್ಕಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡದ ಗಣಪತಿ ದೇಗಲುದಲ್ಲಿಂದು ಮುಹೂರ್ತ ನೆರವೇರಿದಿದ್ದು, ನಟ ಪ್ರಮೋದ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಸೂಚನ್ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಗಾಡ್ ಪ್ರಾಮಿಸ್ ಸಿನಿಮಾಗೆ ರವಿ ಬಸ್ರೂರ್ ಕ್ಲ್ಯಾಪ್ ಮಾಡಿದ್ದು, ಪ್ರಮೋದ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದರು. ಕಾಂತಾರ ಸರಣಿ ಸಿನಿಮಾಗಳ ಮುಹೂರ್ತ ಕೂಡ ಇದೇ ದೇಗುಲದಲ್ಲಿ ನಡೆದಿರುವುದು ವಿಶೇಷ.

ನಿರ್ದೇಶಕ ಸೂಚನ್ ಶೆಟ್ಟಿ ಮಾತನಾಡಿ, ಗಾಡ್ ಪ್ರಾಮಿಸ್ ಸಿನಿಮಾದ ಮುಹೂರ್ತ ಇಂದು ನೆರವೇರಿದೆ. ಕಳೆದ ಆರೇಳು ತಿಂಗಳಿನಿಂದ ಈ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸ ಶುರು ಮಾಡಿದ್ದೇವೆ. 2015ರಿಂದ ರವಿ ಬಸ್ರೂರು ಜೊತೆ ಕೆಲಸ ಮಾಡುತ್ತಿದ್ದೇನೆ. ಈಗ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಸಿನಿಮಾ ಕುಂದಾಪುರ ಸುತ್ತಮುತ್ತ ನಡೆಯುತ್ತಿದೆ. ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಆಡಿಷನ್ ನಡೆಸಿದ್ದೇವೆ. ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ರವಿ ಸರ್ ಗೆ ನನಗೆ ಗುರುಗಳು. ಡೈರೆಕ್ಟನ್ ತಂಡದ ಜೊತೆಗೆ ಕಟಕ, ಗಿರ್ಮಿಟ್ ಸಿನಿಮಾಗಳ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದೆ. ಹೀಗಾಗಿ ಆ ಅನುಭವದ ಇಟ್ಟುಕೊಂಡು ನಿರ್ದೇಶನಕ್ಕೆ ಇಳಿದಿದ್ದೇನೆ ಎಂದರು.

ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ಒಂದು ಸಿನಿಮಾ ಮಾಡುವುದರಿಂದ ಎಷ್ಟೋ ಜನ ಕಲಾವಿದರ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಕರಾವಳಿಯವರಿಗೆ ಒಳ್ಳೆ ಫ್ಲಾಟ್ ಫಾರಂ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಜೊತೆ ಬಂದವರಿಗೆ ಎಲ್ಲಾ ಕೆಲಸ ಕಲಿಯಿರಿ ಎಂದು ಹೇಳುತ್ತೇನೆ. ಇದೇ ರೀತಿ ಎಲ್ಲರೂ ಎಲ್ಲಾ ವಿಭಾಗ ಕಲಿರಿ. ಒಂದು ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇವರ ರೀತಿ ನಮ್ಮ ಭಾಗದಲ್ಲಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಸೂಚನ್ ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾನೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುತ್ತಿರುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರೆಯಲಿ. ಒಂದೊಳ್ಳೆ ತಂಡವಾಗಿ ಹೊರಹೊಮ್ಮಲಿ. ನನ್ನ ಪ್ರಕಾರ ಈ ಸಿನಿಮಾ ತುಂಬಾ ಚೆನ್ನಾಗಿ ಬರಲಿದೆ ಎಂಬ ಭರವಸೆ ಇದೆ. ಒಳ್ಳೆ ಬಜೆಟ್ ಕೂಡ ಇದೆ. ಸೂಚನ್ ನಮ್ಮ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾನೆ. ಇಡೀ ತಂಡದ ಮೇಲೆ ನಿಮ್ಮ ಬೆಂಬಲ ಇರಲಿದೆ ಎಂದು ಹೇಳಿದರು.

ನಿರ್ಮಾಪಕ ಮೈತ್ರಿ ಮಂಜುನಾಥ್ ಮಾತನಾಡಿ, ನಾವು ಈ ಹಿಂದೆ ಹಫ್ತಾ ಸಿನಿಮಾ ಮಾಡಿದ್ದೇವೆ. ಇದು ನನ್ನ ಎರಡನೇ ಸಿನಿಮಾ. ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಅನುಭವ ತಂಡದೊಂದಿಗೆ ಕೈ ಜೋಡಿಸಿದೆ ಎಂದರು.

ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಸೂಚನ್ ಶೆಟ್ಟಿ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಅವರ ಹೊಸ ಪಯಣಕ್ಕೆ ಮೈತ್ರಿ ಮಂಜುನಾಥ್ ಬಲ ತುಂಬಿದ್ದಾರೆ. ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು.

ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Categories
ಸಿನಿ ಸುದ್ದಿ

ಮಕ್ಕಳಿಗೆ ಸಿನಿಮಾ ಗಿಫ್ಟ್ ಕೊಟ್ಟ ಅಪ್ಪ: ರಣಹದ್ದು ಟೀಸರ್ ರಿಲೀಸ್

ಕಳೆದ ನಲವತ್ತು ವರ್ಷಗಳಿಂದ ಪೋಷಕ ಕಲಾವಿದರಾಗಿ ಪ್ರಸನ್ನಕುಮಾರ್(ಜಂಗ್ಲಿ ಪ್ರಸನ್ನ) ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. ನೂರಾರು ಚಿತ್ರಗಳಲ್ಲಿ ನಟಿಸಿ ನಟನಾಗಿ ಜನಪ್ರಿಯರಾಗಿರುವ ಪ್ರಸನ್ನ ಕುಮಾರ್ “ರಣಹದ್ದು” ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.ಇವರೆ ಚಿತ್ರದ ನಿರ್ಮಾಪಕರು ಕೂಡ. ಪ್ರಸನ್ನಕುಮಾರ್ ಅವರ ಮಕ್ಕಳಾದ ಶಶಾಂಕ್ ಹಾಗೂ ಸೂರಜ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ‌. ಒಬ್ಬ ಮಗ ನಾಯಕನಾಗಿ, ಮತ್ತೊಬ್ಬ ಮಗ ಖಳನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ.

ಇತ್ತೀಚಿಗೆ ಈ ಚಿತ್ರದ ಹಾಡುಗಳು ಹಾಗು ಟೀಸರ್ ಸಿರಿಮ್ಯೂಸಿಕ್ ಮೂಲಕ ಬಿಡುಗಡೆಯಾಯಿತು. ಡಾ||ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಎಸ್ ಎ ಗೋವಿಂದರಾಜು, ಎಸ್ ಎ ಶ್ರೀನಿವಾಸ್ ಅವರು ಟೀಸರ್ ಅನಾವರಣಗೊಳಿಸಿದರು. ಖ್ಯಾತ ನಟ ಶರಣ್ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಪ್ರಸನ್ನ ಕುಮಾರ್(ಜಂಗ್ಲಿ ಪ್ರಸನ್ನ) ಅವರ ಒಡನಾಟವನ್ನು ನೆನಪಿಸಿಕೊಂಡು ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಮಾತನಾಡಿದ ನಿರ್ಮಾಪಕ, ನಿರ್ದೇಶಕ ಪ್ರಸನ್ನಕುಮಾರ್, ಕಳೆದ ನಲವತ್ತು ವರ್ಷಗಳಿಂದ ಕನ್ನಡ ಚಿತ್ರರಂಗ ನನಗೆ ಅನ್ನ ಹಾಕುತ್ತಿದೆ. ಅದಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರ ಋಣಿ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ನನ್ನ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಆ ಸಮಯದಲ್ಲಿ ತುಂಬಾ ಯೋಚನೆ ಮಾಡುತ್ತಿದೆ‌. ಸ್ವಲ್ಪ ದಿನಗಳ ನಂತರ ಚಿತ್ರವೊಂದನ್ನು ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಬೇಕೆಂದು ಆಸೆಯಾಯಿತು. ಆ ಆಸೆಯನ್ನು ಮಕ್ಕಳ ಬಳಿ ಹೇಳಿಕೊಂಡೆ. ನನ್ನ ಆಸೆಗೆ ಮಕ್ಕಳು ಆಸರೆಯಾದರು.

ಈ ಚಿತ್ರದಲ್ಲಿ ನಟಿಸುವ ಮೂಲಕ ನನ್ನ ಇಬ್ಬರು ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ‌‌. ಅನೇಕ ಜನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ‌. ಹಣವಿಲ್ಲದ ಮನುಷ್ಯನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದೆ ಚಿತ್ರದ ಕಥಾ ಸಾರಾಂಶ‌. ಅಷ್ಟೇ ಅಲ್ಲದೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ‌‌‌. ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತದಲ್ಲಿದೆ‌. ಇಂದಿನ ಸಮಾರಂಭಕ್ಕೆ ನಮ್ಮ ಆಹ್ವಾನವನ್ನು ಮನಿಸಿ ಬಂದಿರುವ ಎಲ್ಲಾ ಗಣ್ಯರಿಗೂ ತುಂಬು ಹೃದಯದ ಧನ್ಯವಾದ ಎಂದರು.

ತಮ್ಮ ಪಾತ್ರದ ಬಗ್ಗೆ ಶಶಾಂಕ್, ಸೂರಜ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಸಿಂಗರ್ ಶ್ರೀನಿವಾಸ್ ತಿಳಿಸಿದರು.

Categories
ಸಿನಿ ಸುದ್ದಿ

4 ಎನ್ 6 ಎಂಬ ಸೈಕಲಾಜಿಕಲ್ ಥ್ರಿಲ್ಲರ್: ಈ ವಾರ ರಿಲೀಸ್


  
ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ   ನಿರ್ಮಿಸಿರುವ, ಮರ್ಡರ್‌ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಾನ್ಸೆಪ್ಟ್  ಹೊಂದಿರುವ ಚಿತ್ರ ‘4 ಎನ್ 6’ ಮೇ 10 ರಂದು ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥಾಹಂದರ  ಚಿತ್ರದಲ್ಲಿದ್ದು, ಇಂಥ ಪ್ರಕರಣ ಪತ್ತೆಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ತುಂಬಾ ಪ್ರಮುಖವಾಗಿರುತ್ತದೆ. ಇದು ಬರೀ ಮರ್ಡರ್ ಇನ್ವೆಸ್ಟಿಗೇಶನ್ ಸುತ್ತ ನಡೆವ ಕಥೆಯಲ್ಲ, ಸೈಕಲಾಜಿಕಲ್ ಚಿತ್ರವೂ ಹೌದು,

ಲವ್ ಮಾಕ್ಟೇಲ್ ಹಾಗೂ ಲವ್ 360  ಖ್ಯಾತಿಯ ರಚನಾ ಇಂದರ್ ಅವರು  ಇದೇ ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಶ್ರೀನಿವಾಸ್ ಈ ಚಿತ್ರಕ್ಕೆ  ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ರಚನಾ ಇಂದರ್,  ಭವಾನಿ ಪ್ರಕಾಶ್, ನವೀನ್ ಕುಮಾರ್ ಹಾಗೂ  ಆದ್ಯಶೇಖರ್ ಈ  ೪ ಪ್ರಮುಖ ಪಾತ್ರಗಳ ಸುತ್ತ ಚಿತ್ರಕಥೆ ನಡೆಯುತ್ತದೆ.

ಬೆಂಗಳೂರು ಸುತ್ತಮುತ್ತ 30 ದಿನಗಳ‌ ಕಾಲ ಈ ಚಿತ್ರದ  ಚಿತ್ರೀಕರಣ ನಡೆಸಲಾಗಿದ್ದು, ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
ಇನ್ನು‌ ಈ ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ. ಚರಣ್ ತೇಜ್ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ.

ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ, ಆರ್ ನಿಕ್ಸಾನ್, ಪ್ರಶಾಂತ್, ಸಂಜಯ್ ನಾಯಕ್, ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ, ಬೇಬಿ ರೇಯನ್ಸ್  ಇತರೆ ಪಾತ್ರಗಳಲ್ಲಿ‌ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಸತ್ಯಂ ರಿಲೀಸ್ ಗೆ ರೆಡಿ

ಅಶೋಕ್ ಕಡಬ ಅವರ ನಿರ್ದೇಶನದ, ಮಹಾಂತೇಶ್ ವಿ.ಕೆ. ಅವರ ನಿರ್ಮಾಣದ ಸತ್ಯಂ’ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗಷ್ಟೇ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರದ ಕಾನ್ಸೆಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.


ಕೆಂಪ, ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸತ್ಯಂ ಮಾಸ್ ಚಿತ್ರವಾದರೂ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ಎಳೆ ಈ ಚಿತ್ರದಲ್ಲಿರುವುದು ಕುತೂಹಲ ಮೂಡಿಸಿದೆ. ಕಾಂತಾರ ಚಿತ್ರಕ್ಕೂ ಮುನ್ನವೇ ಸತ್ಯಂ ಕಥೆಯನ್ನು ರೆಡಿ ಮಾಡಿಕೊಂಡಿದ್ದಾಗಿ ನಿರ್ದೇಶಕರೇ ಹೇಳಿದ್ದಾರೆ.

ಸೆನ್ಸಾರ್ ಅಧಿಕಾರಿಗಳು ಹಲವಾರು ಚಿತ್ರಗಳನ್ನು ವೀಕ್ಷಿಸುತ್ತಾರೆ. ಅದರ ನಡುವೆ ಹೊಸತನದಿಂದ ಕೂಡಿದ ಚಿತ್ರ ನೋಡಿದಾಗ ಅವರ ಪ್ರತಿಕ್ರಿಯೆ ಬೇರೆಥರ ಇರುತ್ತದೆ. ಅಂದಹಾಗೆ, ಯಾವುದೇ ಕಟ್, ಮ್ಯೂಟ್ ಇಲ್ಲದೆ ಈ ಚಿತ್ರ ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ.

ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಮಹಾಂತೇಶ್ ವಿ.ಕೆ. ಅವರ ನಿರ್ಮಾಣದ ಸತ್ಯಂ ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂಥ ಕಥೆ ಸತ್ಯಂ ಚಿತ್ರಕ್ಕಿದೆ. ಕೆಜಿಎಫ್. ಖ್ಯಾತಿಯ ರವಿ ಬಸ್ರೂರು ಈ ಚಿತ್ರದ ಸಂಗೀತ ನಿರ್ದೇಶನ ಮಾಡಿದರೆ. ಸಿನೆಟೆಕ್ ಸೂರಿ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ತೆಲುಗು ನಟ ಸುಮನ್, ಸೈಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಎಂ.ಎನ್. ಲಕ್ಷ್ಮಿದೇವಿ, ಶೃಂಗೇರಿ ರಾಮಣ್ಣ, ತನುಶ್ರೀ, ಎಂ.ಎಸ್. ಉಮೇಶ್, ಬಸವರಾಜ್ ಕಟ್ಟಿ, ಮೀನಾಕ್ಷಿ ಮುಂತಾದವರ ತಾರಾಗಣ ಸತ್ಯಂ ಚಿತ್ರಕ್ಕಿದೆ. ಐಪಿಎಲ್ ನಂತರ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಿದ್ದತೆ ನಡೆಸಿದೆ. ಶೀಘ್ರದಲ್ಲೇ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ,

error: Content is protected !!