Categories
ಸಿನಿ ಸುದ್ದಿ

ಇನಾಮ್ದಾರ್ ಎಂಬ ವರ್ಣ ಸಂಘರ್ಷದ ಕಥೆ! ಹೊರ ಬಂದ ಟೀಸರ್ ಗೆ ಮೆಚ್ಚುಗೆ

ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಕಾಲ ಎನ್ನಬಹುದು. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಚಿತ್ರರಸಿಕರು ಒಪ್ಪಿಕೊಂಡು, ಯಶಸ್ವಿಗೊಳಿಸಿದ್ದಾರೆ‌. ಅಂತಹುದೇ ವಿಭಿನ್ನ ಕಥೆಯ “ಇನಾಮ್ದಾರ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೀಸರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್” ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ‌ ಸಂಘರ್ಷದ ಕಥೆ. “ಇನಾಮ್ದಾರ್” ಚಿತ್ರಕ್ಕೆ “ಕಪ್ಪು ಸುಂದರಿಯ ಸುತ್ತ” ಎಂಬ ಅಡಿಬರಹವಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಬೆಳಗಾವಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.‌

ಡಬ್ಬಿಂಗ್ ಸಹ ಪೂರ್ಣವಾಗಿದೆ. ಚಿತ್ರ ಹೇಗೆ ಬಂದಿದೆ ಎಂದು ಟೀಸರ್ ಮೂಲಕ ತೋರಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ. ನನ್ನ ಕನಸಿಗೆ ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ತಾವು ಕೂಡ ಒಂದು ಪಾತ್ರ ಮಾಡಿರುವುದಾಗಿ ಹೇಳಿದರು.

ನನ್ನದು ಈ ಚಿತ್ರದಲ್ಲಿ ಕಾಡಿನ ನಾಯಕನ ಪಾತ್ರ. ತುಂಡು ಉಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ. ಬಣ್ಣ ಹಾಕಲು ಎರಡು ಗಂಟೆ ಹಿಡಿಸಿದರೆ, ತೆಗೆಯಲು ಐದು ಗಂಟೆ ಹಿಡಿಸುತ್ತಿತ್ತು ಎಂದು ಚಿತ್ರೀಕರಣದ ಅನುಭವವನ್ನು ಪ್ರಮೋದ್ ಶೆಟ್ಟಿ ಹಂಚಿಕೊಂಡರು.

ಅಭಿನಯದ ಅನುಭವವಿಲ್ಲದ ನನಗೆ ಅಭಿನಯ ಹೇಳಿಕೊಟ್ಟವರು ನಿರ್ದೇಶಕರು. ನನ್ನ ಅಭಿನಯ ಚೆನ್ನಾಗಿ ಬಂದಿದ್ದರೆ, ಅದಕ್ಕೆ ನಿರ್ದೇಶಕರೆ ಕಾರಣ‌ ಎಂದರು ನಿರಂಜನ್ ಛತ್ರಪತಿ.

ನಿರ್ದೇಶಕ ಸಂದೇಶ್ ನನ್ನ ಆತ್ಮೀಯ ಸ್ನೇಹಿತ. ಚಿತ್ರದ ಟೀಸರ್ ನೋಡಿ ಖುಷಿಯಾಗಿದೆ. ಚಿತ್ರ ಕೂಡ ಚೆನ್ನಾಗಿ ಬಂದಿರುತ್ತದೆ ಎಂಬ ಭರವಸೆ ಮೂಡಿದೆ ಎಂದರು ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು.

ನಾಯಕಿಯರಾದ ಚಿರಶ್ರೀ ಅಂಚಿನ್, ಎಸ್ತರ್ ನರೋನ್ಹಾ,‌ ಚಿತ್ರದಲ್ಲಿ ನಟಿಸಿರುವ ಎಂ.ಕೆ.ಮಠ,‌ ರಘು ಪಾಂಡೇಶ್ವರ ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ರಾಕಿ ಸೋನು, ಛಾಯಾಗ್ರಾಹಕ ಮುರಳಿ, ಸಂಕಲನಕಾರ ಶಿವರಾಜ್ ‌ಮೇಹು ಹಾಗೂ ನೃತ್ಯ ನಿರ್ದೇಶಕಿ ಗೀತಾ ಸಾಯಿ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಬ್ಯೂಟಿಫುಲ್ ಸಿನಿಮಾಗೆ ಲವ್ಲಿ ಪ್ರಿನ್ಸಸ್ ಆಗಮನ! ಕನ್ನಡಕ್ಕೆ ಅಂದದ ಅಮೃತ: ನೆನಪಿರಲಿ ಪ್ರೇಮ್ ಮಗಳ ಟಗರು ಪಲ್ಯ…

ಕನ್ಮಡ ಚಿತ್ರರಂಗಕ್ಕೆ ಮತ್ತೊಬ್ಬ ಚೆಲುವೆಯ ಆಗಮನವಾಗುತ್ತಿದೆ. ಹೌದು, ಈಗಾಗಲೇ ಹಲವು ಸ್ಟಾರ್ ನಟರ ಮಕ್ಕಳು ಕನ್ನಡ ಸಿನಿ ಜಗತ್ತಿಗೆ ಕಾಲಿಟ್ಟಾಗಿದೆ. ಆ ಸಾಲಿಗೆ ಬ್ಯೂಟಿಫುಲ್ ಹೊಸ ನಾಯಕಿಯ ಆಗಮನಾವಗುತ್ತಿದೆ. ಅದು ಬೇರಾರೂ ಅಲ್ಲ, ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳು ಅಮೃತ ಪ್ರೇಮ್

ಇದು ಎಲ್ಲರಿಗೂ ಅಚ್ಚರಿ ಆಗಬಹುದು. ಆದರೂ ಇದು ನಿಜ. ಪ್ರೇಮ್ ಪುತ್ರಿ ಆಮೃತ ಅವರು ಸಿನಿಮಾಗೆ ಕಾಲಿಡುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಯಾಕೆಂದರೆ, ಲವ್ಲಿ ಪ್ರಿನ್ಸಸ್ ಗೆ ತಾನೊಬ್ಬ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಅದರಂತೆಯೇ ಅಮೃತ ಅವರ ಪ್ರೀತಿಯ ಅಪ್ಪ ಪ್ರೇಮ್ ಕೂಡ ಮಗಳ ಆಸೆಯಂತೆಯೇ ಓದಿಸುವತ್ತ ಚಿತ್ತ ಹರಿಸಿದ್ದರು. ಮೆಡಿಕಲ್ ವಿಷಯಕ್ಕೆ ಸಂಬಂಧಿಸಿದಂತೆಯೇ ಅಮೃತ ಬಯೋಮೆಡಿಕಲ್ ಕೋರ್ಸ್ ಮಾಡುತ್ತಿದ್ದರು.

ಹಾಗೊಮ್ಮೆ ಸಡನ್ ಆಗಿ ಪ್ರೇಮ್ ಅವರ ಬಳಿ ಮಗಳನ್ನು ಸಿನಿಮಾ‌ ನಾಯಕಿ ಕುರಿತ ವಿಷಯ ಚರ್ಚೆ ಆಗುತ್ತೆ. ಸರಿ, ಪ್ರೇಮ್ ಕೂಡ, ಮಗಳ ಬಳಿ ಬಂದು ಮಗಳೇ ಹೀಗೊಂದು ಒಳ್ಳೆಯ ಬ್ಯಾನರ್ ಮತ್ತು ಕಥೆ ಇರುವ ಸಿನಿಮಾಗೆ ಆಫರ್ ಬಂದಿದೆ ಮಾಡ್ತೀಯ ಅಂದಿದ್ದಾರೆ. ಮಗಳು ಅಮೃತ ಕೂಡ ಹಿಂದೆ ಮುಂದೆ ನೋಡದೆ, ಯೆಸ್ ಪಪ್ಪಾ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಅಂದಹಾಗೆ, ಪ್ರೇಮ್ ಪುತ್ರಿಗೆ ಅಂಥದ್ದೊಂದು ಅವಕಾಶ ಸಿಕ್ಕಿದ್ದು, ಡಾಲಿ ಧನಂಜಯ್ ಅವರ ಡಾಲಿ ಫಿಲಂಸ್ ಬ್ಯಾನರ್ ಚಿತ್ರ. ಹೆಸರು ‘ಟಗರು ಪಲ್ಯ’ ಇದು ಡಾಲಿ ಧನಂಜಯ ನಿರ್ಮಾಣದ ಸಿನಿಮಾ. ಚಿತ್ರವನ್ನು ಉಮೇಶ್ ಕೆ. ಕೃಪ ನಿರ್ದೇಶಿಸುತ್ತಿದ್ದಾರೆ.

ಇದೊಂದು ಹಳ್ಳಿ ವಾತಾವರಣದಲ್ಲಿ ನಡೆಯೋ ಕಥೆ. ಅದರಲ್ಲೂ ಮಹಿಳಾ ಪ್ರಧಾನ ಕಥೆ ಆಗಿರುವುದರಿಂದ ಮಿಸ್ ಆಗಬಾರದು ಅಂತ ಪ್ರೇಮ್ ಕೂಡ ಮಗಳಿಗೆ ಸಾಥ್ ನೀಡಿದ್ದಾರೆ. ಕಥೆಯ ಒನ್ ಲೈನ್ ಕೇಳಿಯೇ ಅಮೃತ ಕೂಡ ನಟಿಸಲು ಒಪ್ಪಿದ್ದಾರೆ.


ಸದ್ಯ ಅಮೃತ ಅವರು ಕಳೆದ ಹತ್ತು ದಿನಗಳಿಂದ ಚಿತ್ರತಂಡದ ವರ್ಕ್ ಶಾಪ್ ನಲ್ಲಿ ತೊಡಗಿಕೊಂಡಿದ್ದಾರೆ. ಯಶಸ್ವಿನಿ ಎನ್ನುವವರು ಅಮೃತಗೆ ತರಬೇತಿ ನೀಡುತ್ತಿದ್ದಾರೆ. ಡಿಸೆಂಬರ್ 1 ರಿಂದ ‘ಟಗರು ಪಲ್ಯ’ ಚಿತ್ರಕ್ಕೆ ಚಾಲನೆ ಸಿಗಲಿದೆ. ಬಹುತೇಕ ಕರ್ನಾಟಕದಲ್ಲೇ ಚಿತ್ರೀಕರಣ ನಡೆಯಲಿದೆ.


ಅದೇನೆ ಇರಲಿ, ಲವ್ಲಿ ಸ್ಟಾರ್ ಕೂಡ ಸಕ್ಸಸ್ ಸಿನಿಮಾ ಕೊಡುವ ಮೂಲಕ ಚಿತ್ರರಂಗದ ಬೇಡಿಕೆ ನಟರಾಗಿದ್ದಾರೆ. ಈಗ ಲವ್ಲಿ ಪ್ರಿನ್ಸಸ್ ಕಲರವ ಶುರುವಾಗುತ್ತಿದೆ. ಅಮೃತ ಪ್ರೇಮ್ ಅವರ ಹೊಸ ಜರ್ನಿ ಚೆನ್ನಾಗಿರಲಿ ಅನ್ನೋದು ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಧೂಮಂ ಸಿನಿಮಾ ಸೆಟ್ ಗೆ ಕೆಜಿಎಫ್ ನಿರ್ಮಾಪಕ ಜೊತೆ ರಿಷಭ್ ಶೆಟ್ಟಿ ಭೇಟಿ


ಹೊಂಬಾಳೆ ಫಿಲಂಸ್​ನಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ‘ಧೂಮಂ’ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ನಿರ್ಮಾಪಕ ವಿಜಯ್ ಕುಮಾರ್​ ಕಿರಗಂದೂರು ಹಾಗು ಕಾಂತಾರ ನಿರ್ದೇಶಕ ರಿಷಭ್​ ಶೆಟ್ಟಿ, ನಾಯಕಿ ಸಪ್ತಮಿ ಗೌಡ ಮುಂತಾದವರು ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಚಿತ್ರೀಕರಣದಲ್ಲಿ ಫಹಾದ್​ ಫಾಸಿಲ್​, ಅಪರ್ಣಾ ಬಾಲಮುರಳಿ ಮತ್ತಿತರರು ಭಾಗವಹಿಸಿದ್ದು ಅವರೊಂದಿಗೆ ಒಂದಷ್ಟು ಮಾತುಕತೆ ನಡೆಸಿದ್ಣದಾರೆ.


‘ಧೂಮಂ’ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಎದೆಯ ಪುಟದಲ್ಲೊಂದು ನಿಷ್ಕಲ್ಮಷ ಪ್ರೀತಿ: ಖಾಸಗಿ ಪ್ರೇಮದ ಭಾವುಕ ಪಯಣ…

ಚಿತ್ರ ವಿಮರ್ಶೆ- ರೇಟಿಂಗ್- 4/5


ಚಿತ್ರ :
ಖಾಸಗಿ ಪುಟಗಳು
ನಿರ್ದೇಶನ : ಸಂತೋಷ್ ಶ್ರೀಕಂಠಪ್ಪ
ನಿರ್ಮಾಣ : ಮಂಜು, ವೀಣಾ , ಮಂಜುನಾಥ್
ಸಂಗೀತ : ವಾಸುಕಿ ವೈಭವ್
ಛಾಯಾಗ್ರಾಹಕ : ವಿಶ್ವಜಿತ್ ರಾವ್
ತಾರಾಗಣ : ವಿಶ್ವ , ಲಿಯೋನಿಲ್ಲಾ ಶ್ವೇತಾ ಡಿಸೋಜಾ, ಚೇತನ್ ದುರ್ಗ ನಂದಕುಮಾರ್, ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್, ಮೋಹನ್ ಜುನೇಜ ಇತರರು.

ಸಿನಿಮಾ ಅಂದರೆ, ಕಿವಿಗೆ ಇಂಪೆನಿಸಬೇಕು, ಕಣ್ಣಿಗೂ ತಂಪೆನಿಸಬೇಕು ಇವೆರೆಡರ ಹೊರತಾಗಿ ಹೃದಯಕ್ಕೆ ನಾಟುವಂತಿರಬೇಕು. ಜೊತೆಗೆ ಮತ್ತೆ ಮತ್ತೆ ಕಾಡುವ ಹಾಗು ನೋಡುವಂತಿರಬೇಕು. ಈ ಮೇಲಿನ ಎಲ್ಲಾ ಅರ್ಹತೆಗಳಿರುವ ಅನೇಕ ಸಿನಿಮಾಗಳು ಬಂದಿವೆ. ಅಂತಹ ಗುಣಗಳಿರುವ ಸಿನಿಮಾ ಸಾಲಿಗೆ ‘ಖಾಸಗಿ ಪುಟಗಳು’ ಸಿನಿಮಾವೂ ಸೇರಿದೆ.

ಅವರಿಬ್ಬರದು ಮೊದಲ ನೋಟಕ್ಕೆ ಬಿದ್ದ ಪ್ರೀತಿ. ಆ ಪ್ರೀತಿ ಮೇಲೆ ಯಾರ ಕಣ್ಣೂ ಬೀಳಲ್ಲ. ಗೆಳೆಯರ ಸಾಥ್ ಒಂದಷ್ಟು ಮನ್ ಕೀ ಬಾತ್ ಫಲಿಸುವ ಪ್ರೀತಿಯ ತಾಕತ್ತು.
ಕರಾವಳಿಯ ಹಿನ್ನೆಲೆಯಲ್ಲಿ ಅರಳುವ ಸುಂದರ ಪ್ರೇಮ ಕಾವ್ಯ ಇಡೀ ಸಿನಿಮಾದ ಹೈಲೆಟ್. ಅವಳು ಮತ್ತು ಅವನ ನಡುವೆ ನಿಷ್ಕಲ್ಮಷ ಪ್ರೀತಿ. ಅದಮ್ಯ ನಂಬಿಕೆ, ನಿಟ್ಟಿರಲಾರದ ಗಟ್ಟಿ ಗೆಳೆತನ, ಲವಲವಿಕೆ ತುಂಬಿರುವ ಕಾಲೇಜ್ ಲೈಫು, ಅಲ್ಲಲ್ಲಿ ನೋವು, ನಲಿವು… ಇದು ಸಿನಿಮಾದೊಳಗಿನ ಹೂರಣ.

ಮುಗ್ಧ ಮನಸುಗಳ ಮೇಲಿನ ಪ್ರೀತಿ ಸುತ್ತವೇ ತಿರುಗುವ ಭೂಮಿ, ಸೂರ್ಯನ ಪ್ರೇಮಕ್ಕೆ ಜೈ ಅನ್ನದಿರಲಾರದು. ಅಷ್ಟರಮಟ್ಟಿಗೆ ನಿರ್ದೇಶಕರು ಇಲ್ಲೊಂದು‌ಪ್ರೇಮ ದೃಶ್ಯ ಕಾವ್ಯ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ನೋಡುವ ಪ್ರತಿಯೊಬ್ಬರಲ್ಲೂ ತಮ್ಮ ಕಾಲೇಜು ದಿನಗಳ ಪ್ರೀತಿ ಪ್ರೇಮದ ಛಾಯೆ ಹಾಗೊಮ್ಮೆ ಹಾದು ಹೋಗದೆ ಇರದು. ಇಲ್ಲಿ “ಖಾಸಗಿ ಪ್ರೀತಿಯ ವಿಷಯಗಳದ್ದೇ ದರ್ಬಾರು. ಅಂತಹ ಅದೆಷ್ಟೋ ಸೂಕ್ಷ್ಮ ಸಂವೇದನೆಯ ವಿಷಯಗಳು ಖಾಸಗಿ ಪುಟಗಳಲ್ಲಿ ದಾಖಲಾಗಿ, ಕಣ್ ಒದ್ದೆಯಾಗಿಸುವಂತೆ ಮಾಡುತ್ತವೆ.

ಪ್ರತಿಯೊಬ್ಬರ ಲೈಫಲ್ಲೂ ಒಂದೊಂದು ಖಾಸಗಿ ವಿಷಯ ಕಾಮನ್. ಚಿತ್ರದ ಹೀರೋ ಸೂರ್ಯನ ಫ್ಲ್ಯಾಶ್ ಬ್ಯಾಕ್ ಕಥೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ.
ಕಾಲೇಜು ಓದುವ ಸೂರ್ಯನಿಗೆ ಅದೇ ಕಾಲೇಜಿಗೆ ಓದಲು ಬರುವ ಭೂಮಿ ಇಷ್ಟವಾಗುತ್ತಾಳೆ. ಆ ಇಷ್ಟ ಪ್ರೀತಿಗೆ ತಿರುಗಿ ಇನ್ನೇನು ಗಟ್ಟಿಮೇಳಕ್ಕೆ ಸಜ್ಜಾಗುತ್ತಾರೆ. ನೋಡುಗರಿಗೆ ಅದೆಂಥಾ ಪ್ರೀತಿ ಮಾಯೆ ಅಂತೆನಿಸಿ, ಮಂದಹಾಸ ಬೀರುತ್ತಲೇ ಇಡೀ‌ ಸಿನಿಮಾ ಕಥೆಯೊಳಗೆ ತಲ್ಲೀನರಾಗುವಷ್ಟರ ಮಟ್ಟಿಗೆ ಸೂರ್ಯ, ಭೂಮಿ ಆವರಿಸಿಕೊಳ್ಳುತ್ತಾರೆ. ಅವರೊಂದಿಗೆ ಸೂರ್ಯನ ಗೆಳೆಯರ ತುಂಟಾಟ, ಕಚಗುಳಿ ಮಾತು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ಕಾಲೇಜು ಅಂದಮೇಲೆ ತರಲೆ, ರಗಳೆ ಸಹಜ. ಅದು ಇಲ್ಲೂ ಇದೆ. ಫಸ್ಟ್ ಬೆಂಚ್ ಸ್ಟೂಡೆಂಟ್ ಹಾಗು ಲಾಸ್ಟ್ ಬೆಂಚ್ ಸ್ಟೂಡೆಂಟ್ ಬಗ್ಗೆ ಗುಣಗಾನವೂ ಇದೆ.

ಇಲ್ಲಿ ಪ್ರೀತಿ ಗೀತಿ ಇತ್ಯಾದಿಯ ಜೊತೆಗೊಂದು ಭಾವನಾತ್ಮಕ ಬೆಸುಗೆ ಇದೆ. ಅದು ಏನು ಅನ್ನೋದಕ್ಕೆ ಸಿನಿಮಾ ನೋಡಲೇಬೇಕು. ಅಲ್ಲಲ್ಲಿ ನಗು ಜೊತೆ ಭಾವುಕತೆಯೂ ತುಂಬಿದೆ. ಕೆಲ ಸನ್ನಿವೇಶಗಳು ಎದೆಭಾರವಾಗಿಸುತ್ತ ಹೋಗುತ್ತೆ. ಅಲ್ಲಲ್ಲಿ ಕೆಲವು ಟ್ವಿಸ್ಟು ಟೆಸ್ಟುಗಳ ನಡುವೆ ಸಿನಿಮಾ ಕಾಡುತ್ತಲೇ ಹೋಗುತ್ತೆ. ಮೊದಲರ್ಧ ಒಂದು ರೀತಿ ಕಾಡಿದರೆ, ದ್ವಿತಿಯಾರ್ಧ ಕಾಡುವ ರೀತಿಯೇ ಬೇರೆ. ಈ ಕಾಡುವಿಕೆಯ ಅನುಭವ ನಿಮಗೂ ಆಗಬೇಕಾದರೆ ಮಿಸ್ ಮಾಡದೆ ಹೊಸಬರ ಖಾಸಗಿ ಪ್ರೀತಿಗೆ ಜೈ ಅಂದು ಬನ್ನಿ.

ಇನ್ನು, ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ಅವರಿಗೆ ಪ್ರೀತಿಯ ಬಡಿತ ಹೇಗಿರುತ್ತೆ ಅನ್ನುವುದರ ಅರಿವಿದೆ. ಅದನ್ನು ಚೆಂದವಾಗಿ ಕಟ್ಟಿ ಕೊಟ್ಟಿದ್ದಾರೆ. ಪ್ರೀತಿ ವಿಷಯದ ಜೊತೆ ಕಥೆಯ ಖಾಸಗಿ ಪುಟದಲ್ಲಿ ಅಪ್ಪ ಮಗಳ ಪ್ರೀತಿ, ಅಪ್ಪ ಮಗನ ಬಾಂಧವ್ಯ, ಗೆಳೆಯರ ಸಹಕಾರ, ಉಪನ್ಯಾಸಕರ ಪ್ರೋತ್ಸಾಹ ಒಂದಷ್ಟು ದುಗುಡ- ದುಮ್ಮಾನಗಳನ್ನು ಬ್ಯಾಲೆನ್ಸ್ ಮಾಡಿ ಚೆಂದದ ಪ್ರೀತಿಯ ‘ಪುಟ’ ವಿನ್ಯಾಸ ಮಾಡಿದ್ದಾರೆ.

ಸಿನಿಮಾದ ಮತ್ತೊಂದು ಹೈಲೆಟ್ ಅಂದರೆ, ಅದು ವಿಶ್ವಜಿತ್ ರಾವ್ ಅವರ ಕ್ಯಾಮೆರಾ ಕೈಚಳಕ. ಇಡೀ ಪ್ರೀತಿಯ ಪುಟವನ್ನು ಕರಾವಳಿಯ ನೇಸರದಲ್ಲಿ ಅದ್ಭುತ ಎನಿಸುವಂತೆ ಹಿಡಿದಿಟ್ಟಿದ್ದಾರೆ. ಪ್ರತಿ ಫ್ರೇಮ್ ಕೂಡ ಕಣ್ಣಿಗೆ ಇಷ್ಟವಾಗುವಂತೆ ತಮ್ಮ ಕ್ಯಾಮೆರಾ ಕೆಲಸ ತೋರಿಸಿದ್ದಾರೆ.

ಈ ಸಿನಿಮಾ ಇಷ್ಟವಾಗೋಕೆ ಮತ್ತೊಂದು ಕಾರಣ, ಹಿನ್ನೆಲೆ ಸಂಗೀತ ಮತ್ತು ಹಾಡು. ವಾಸುಕಿ ವೈಭವ್ ಅವರ ಸಂಗೀತದ ವೈಭವ ಇಲ್ಲೂ ಅರಳಿದೆ. ಕಥೆಗೆ ಪೂರಕವಾಗಿ ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗಿತ ಹರಿದಾಡಿದೆ.

ಇನ್ನು, ಇಡೀ ಸಿನಿಮಾವನ್ನು ನಾಯಕ ವಿಶ್ವ ಹೆಗಲ ಮೇಲೆ ಹೊತ್ತಿದ್ದಾರೆ. ನಟನೆ, ಫೈಟು ಎರಡರಲ್ಲೂ ಇಷ್ಟವಾಗುತ್ತಾರೆ. ಮುಗ್ಧ ಪ್ರೇಮಿಯಾಗಿ ಕೊನೆಯವರೆಗೂ ಕಾಡುತ್ತಾರೆ.

ನಾಯಕಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಕೂಡ ಗಮನ ಸೆಳೆಯುತ್ತಾರೆ. ಸಿನಿಮಾ ವೇಗಕ್ಕೆ ಗೆಳೆಯರಾಗಿ ಕಾಣಿಸಿಕೊಂಡಿರುವ ಚೇತನ್ ದುರ್ಗ, ಶ್ರೀಧರ್ ಗಂಗಾವತಿ, ನಂದ ಗೋಪಾಲ್ ಇಷ್ಟವಾಗುತ್ತಾರೆ.

ಒಟ್ಟಾರೆ ‘ಖಾಸಗಿ ಪುಟಗಳ’ನ್ನು ನೋಡಿ ಹೊರಬಂದವರಿಗೆ ಎದೆಯ ಪುಟದಲ್ಲಿ ಅಡಗಿ ಕೂತ ಒಂದೊಂದೆ ವಿಷಯಗಳು ಮತ್ತೆ ಮತ್ತೆ ನೆನಪಾಗದೇ ಇರದು…

Categories
ಸಿನಿ ಸುದ್ದಿ

ಎಂಎಂಬಿ ಲಗಸ್ಸಿ- ಇದು ನಿರ್ಮಾಪಕರ ಸ್ನೇಹಿ! ನವರಸನ್ ಸಾರಥ್ಯದ ಸುಂದರ ಸಭಾಂಗಣ ರೆಡಿ…

ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಚಿತ್ರಗಳ ಇವೆಂಟ್ ಮಾಡುತ್ತಿರುವ ನವರಸನ್, ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಮಾಗಡಿ ರಸ್ತೆಯ ಜಿ.ಟಿ‌ ಮಾಲ್ ನ ನಾಲ್ಕನೇ ಮಹಡಿಯಲ್ಲಿ “MMB LAGACY” ಎಂಬ ಸುಂದರ ಸಭಾಂಗಣವನ್ನು ಆರಂಭಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಟ ವಿನೋದ್ ಪ್ರಭಾಕರ್, ನಿಶಾ ವಿನೋದ್ ಪ್ರಭಾಕರ್, ಖ್ಯಾತ ಗಾಯಕ ಅಲೋಕ್, ನಿರ್ಮಾಪಕರಾದ ಸಂಜಯ್ ಗೌಡ, ರವಿ ಗೌಡ, ನಟ ತಬಲ‌ನಾಣಿ, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ನಾಗೇಂದ್ರ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ನವರಸನ್ “MMB LAGACY” ಕುರಿತು ಮಾಹಿತಿ ನೀಡಿದರು.

ನಾನು ಮೈ ಮೂವೀ ಬಜಾರ್ ಮೂಲಕ ಕೆಲವು ವರ್ಷಗಳಿಂದ ಸಾಕಷ್ಟು ಚಿತ್ರಗಳ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಹೆಚ್ಚು ಕಾರ್ಯಕ್ರಮ ನಡೆದಿದೆ. ಅಲ್ಲಿ ಊಟದ ವೆಚ್ಚ ಸಾವಿರ, ಎರಡು ಸಾವಿರ ಹೀಗಿರುತ್ತದೆ. ಅಲ್ಲಿ ಒಂದು ಸಮಾರಂಭ ಮಾಡಲು ನಾಲ್ಕೈದು ಲಕ್ಷ ಖರ್ಚಾಗುತ್ತದೆ. ಎಲ್ಲಾ‌ ನಿರ್ಮಾಪಕರಿಗೂ ಅಷ್ಟು ಖರ್ಚು ಮಾಡವುದಕ್ಕೆ ಆಗುವುದಿಲ್ಲ. ಹಾಗಾಗಿ ನಾನು ಕೆಲವು ಸ್ನೇಹಿತರೊಂದಿಗೆ ಚರ್ಚಿಸಿ, ನಿರ್ಮಾಪಕರಿಗೆ ಅನುಕೂಲವಾಗುವಂತಹ ಒಂದು ವಿಶಾಲವಾದ ಸಭಾಂಗಣ ತೆರೆಯಲು ತೀರ್ಮಾನಿಸಿದೆ.

ಸ್ಥಳ ಹುಡುಕುತ್ತಿದ್ದಾಗ ಜಿ.ಟಿ.ಮಾಲ್ ನ ಮಾಲೀಕರಾದ ಆನಂದ್ ಅವರು ನಿಮಗೆ ಅನುಕೂಲವಾದರೆ, ಈ ಸ್ಥಳದಲ್ಲೇ ಆರಂಭಿಸಿ ಎಂದರು. ಕಳೆದ ಆರು ತಿಂಗಳಿನಿಂದ ಸುಮಾರು ಮೂರುವರೆ ಕೋಟಿಗೂ ಅಧಿಕ ಖರ್ಚಿನಲ್ಲಿ “MMB LAGACY” ಯನ್ನು ನಿರ್ಮಾಣ ಮಾಡಿದ್ದೇನೆ. ಈ ಜಾಗ ಯಾವುದೇ ಫೈವ್ ಸ್ಟಾರ್ ಹೋಟೆಲ್ ಗೆ ಕಡಿಮೆ ಇಲ್ಲದಂತೆ ನಿರ್ಮಾಣವಾಗಿದೆ. ಆಧುನಿಕ ಸೌಂಡ್ ಸಿಸ್ಟಮ್, ಎಲ್ ಇ ಡಿ, ನವೀನವೀನ ಲೈಟಿಂಗ್ ವ್ಯವಸ್ಥೆ ಎಲ್ಲವೂ ಇಲ್ಲಿ ಲಭ್ಯವಿದೆ.

ನಿರ್ಮಾಪಕರಿಗೆ ಹೊರೆಯಾಗದಂತೆ ದರ ನಿಗದಿ ಪಡಿಸಿದ್ದೇವೆ. ಪತ್ರಿಕಾಗೋಷ್ಠಿ, ಆಡಿಯೋ, ಟೀಸರ್, ಟ್ರೇಲರ್ ಬಿಡುಗಡೆ ಸಮಾರಂಭ ಹಾಗೂ ಪ್ರೀ ರಿಲೀಸ್ ಇವೆಂಟ್ ಮುಂತಾದ ಸಮಾರಂಭಗಳನ್ನು ಇಲ್ಲಿ ನಡೆಸಬಹುದು. ಸುಮಾರು 200ಜನ ಆರಾಮವಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುಬಹುದು. ಸುಸಜ್ಜಿತ ಸಭಾಂಗಣ, ಊಟದ ಹಾಲ್ ಇದೆ. ಊಟ, ತಿಂಡಿ ಹಾಗೂ ಸಾಭಾಂಗಣದ ವೆಚ್ಚ ಎಲ್ಲವೂ ಕೈಗೆಟುಕುವ ಬೆಲೆಯಲ್ಲೇ ನಿಗದಿ ಮಾಡಲಾಗಿದೆ.

ಸಿನಿಮಾ ಕಾರ್ಯಕ್ರಮಗಳಲ್ಲದೆ ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಮಾಡಿಕೊಳ್ಳಬಹುದು. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಅನುಕೂಲವಾಗಲೆಂದೆ ತೆರೆದಿರುವ “MMB LAGACY” ಯನ್ನು ತಾವೆಲ್ಲರು ಬಳಸಿಕೊಳ್ಳಬೇಕೆಂದು ನವರಸನ್ ಮನವಿ ಮಾಡಿದರು.

Categories
ಸಿನಿ ಸುದ್ದಿ

ಹೊಸ ಜೋಡಿಗೆ ಶುಭಕೋರಿದ ರಮೇಶ್ ಅರವಿಂದ್: ಸಿರಿ ಲಂಬೋದರ ವಿವಾಹದ ಟೀಸರ್ ರಿಲೀಸ್…

ಸೌರಭ್ ಕುಲಕರ್ಣಿ ನಿರ್ದೇಶನದ “ಸಿರಿ ಲಂಬೋದರ ವಿವಾಹ” (ಎಸ್ ಎಲ್ ವಿ) ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಖ್ಯಾತ ನಟ ರಮೇಶ್ ಅರವಿಂದ್ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟೀಸರ್ ವಿಭಿನ್ನವಾಗಿದ್ದು, A2 music ಮೂಲಕ ಬಿಡುಗಡೆಯಾಗಿದೆ.

ಚಿತ್ರದ ಚಿತ್ರೀಕರಣ ಪೂರ್ಣವಾಗಿ, ಮೊದಲಪ್ರತಿ ಸಿದ್ದವಾಗಿದೆ. “ಸಿರಿ ಲಂಬೋದರ ವಿವಾಹ” ಕಮರ್ಷಿಯಲ್ ಎಂಟರ್ಟೈನ್ಮೆಂಟ್ ವಿತ್ ಎ ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ಸಿರಿ ಹಾಗೂ ಲಂಬೋದರ ಈ ಚಿತ್ರದ ನಾಯಕ, ನಾಯಕಿ ಅಲ್ಲ. ಮತ್ತೆ “ಸಿರಿ ಹಾಗೂ ಲಂಬೋದರ” ಯಾರು ಎಂದು ತಿಳಿಯಲು ಚಿತ್ರ ನೋಡಬೇಕು. ರಂಗಭೂಮಿ ಕಲಾವಿದರೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ. ಮತ್ತೊಂದು ಖುಷಿಯ ವಿಚಾರವೆಂದರೆ, ಡಿಸೆಂಬರ್ ನಲ್ಲಿ ಓಮನ್ ಹಾಗೂ ದುಬೈ ದೇಶಗಳಲ್ಲಿ ನಮ್ಮ ಚಿತ್ರದ ಪ್ರೀಮಿಯರ್ ನಡೆಯಲಿದೆ.

ನಾನು ಸೇರಿದಂತೆ ಅನೇಕ ಸಿನಿಮಾಸಕ್ತರು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೀವಿ. ಟೀಸರ್ ಬಡುಗಡೆ ಮಾಡಿಕೊಟ್ಟ ರಮೇಶ್ ಅರವಿಂದ್ ಅವರಿಗೆ ಧನ್ಯವಾದ ಎಂದರು ಸೌರಭ್ ಕುಲಕರ್ಣಿ.

“ಸಿರಿ ಲಂಬೋದರ ವಿವಾಹ” ಸರಳ, ಸುಂದರ ಹಾಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರವೆಂದರು ನಟ ಸುಂದರ್ ವೀಣಾ.

ನಾವು ಇಡೀ ತಂಡ ಮೂಲತಃ ರಂಗಭೂಮಿ ಅವರು.‌ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಒಳ್ಳೆಯ ಚಿತ್ರ ಮಾಡಿರುವ ಖಷಿಯಿದೆ. ನಾನು ಈ ಚಿತ್ರದಲ್ಲಿ ವೆಡ್ಡಿಂಗ್ ಪ್ಲಾನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಅಂಜನ್ ಎ ಭಾರದ್ವಾಜ್.

ನಾನು ಈ ಹಿಂದೆ ಬಿ.ಸುರೇಶ್ ಅವರ “ದೇವರ ನಾಡಲ್ಲಿ” ಚಿತ್ರದಲ್ಲಿ ಅಭಿನಿಯಿಸಿದ್ದೆ. ಆನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸೌರಭ್ ಹಾಗೂ ತಂಡದವರು ಮಾಡಿರುವ ಕಥೆ ಚೆನ್ನಾಗಿದೆ. ನನ್ನ ಪಾತ್ರಕೂಡ ಅಷ್ಟೆ ಚೆನ್ನಾಗಿದೆ ಎನ್ನುತ್ತಾರೆ ನಾಯಕಿ ದಿಶಾ ರಮೇಶ್.

ಛಾಯಾಗ್ರಾಹಕ ಕಿಟ್ಟಿ ಕೌಶಿಕ್ , ಸಂಗೀತ ನಿರ್ದೇಶಕ ಸಂಘರ್ಷ್ ಕುಮಾರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ನಮ್ರತಾ ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಟ ಮಂಡ್ಯ ರಮೇಶ್ ಚಿತ್ರತಂಡಕ್ಕೆ ಶುಭ ಕೋರಿದರು.

Versato ventures, pavamana creations, Fouress network selutions & Dhupada drushya ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಅಂಜನ್ ಎ ಭಾರದ್ವಾಜ್, ದಿಶಾ ರಮೇಶ್, ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ.ಸತೀಶ್ ಚಂದ್ರ, ಮಜಾಭಾರತದ ಶಿವು ಹಾಗೂ ಸುಶ್ಮಿತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ ಕಾಳೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

300 ಚಿತ್ರಮಂದಿರ-50 ದಿನಗಳು! ಕಾಂತಾರ ಯಶಸ್ವಿ ಪ್ರದರ್ಶನ…

ಹೊಂಬಾಳೆ ಫಿಲಂಸ್ ಬ್ಯಾನರ್ ಮೂಲಕ ವಿಜಯ್ ಕಿರಗಂದೂರು ನಿರ್ಮಿಸಿ, ರಿಷಭ್ ಶೆಟ್ಟಿ ಅಭಿನಯಿಸಿ-ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಈ ಚಿತ್ರ ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸದ್ಯದಲ್ಲೇ ಅಲ್ಲೂ 50 ದಿನಗಳನ್ನು ಪೂರೈಸಲಿದೆ.


‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಚಿತ್ರಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ಹೊಂಬಾಳೆ ಫಿಲಂಸ್. ಈಗ ಅದೇ ಸಂಸ್ಥೆಯಿಂದ ನಿರ್ಮಾಣವಾಗಿರುವ ‘ಕಾಂತಾರ’ ಚಿತ್ರವನ್ನು ಮನೆ ಮಂದಿಯೆಲ್ಲಾ ನೋಡಿ ಇಷ್ಟಪಟ್ಟಿದ್ದಾರೆ. ಹಿರಿಯರಿಂದ ಕಿರಿಯರವರೆಗೂ ಎಲ್ಲರೂ ಮೆಚ್ಚಿಕೊಂಡಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುವುದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್. ಹೊಂಬಾಳೆ ಫಿಲಂಸ್ ಮೊದಲಿನಿಂದಲೂ ಕಥೆಗೆ ವಿಶೇಷವಾದ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಈಗಾಗಲೇ ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್’ ಮುಂತಾದ ಚಿತ್ರಗಳು ಈ ವಿಷಯವನ್ನು ನಿರೂಪಿಸಿದೆ. ಈಗ ‘ಕಾಂತಾರ’ ಸಹ ಇದೇ ನಿಟ್ಟಿನಲ್ಲಿ ಸಾಗಿರುವುದಷ್ಟೇ ಅಲ್ಲ, ‘ಕೆಜಿಎಫ್’ ಸರಣಿಯ ನಂತರ ಒಂದೇ ಸಂಸ್ಥೆಯ ಇನ್ನೊಂದು ಚಿತ್ರ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ವಿಶೇಷ.


ಬರೀ ಕನ್ನಡವಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಹೊಂಬಾಳೆ ಫಿಲಂಸ್ ಸಂಸ್ಥೆಯು ಹಲವು ಚಿತ್ರಗಳನ್ನು ನಿರ್ಮಿಸುತ್ತಿದೆ. ಒಂದೇ ಸಂಸ್ಥೆಯಿಂದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ.
ಈಗಾಗಲೇ ಕನ್ನಡದಲ್ಲಿ ಜಗ್ಗೇಶ್ ಅಭಿನಯದಲ್ಲಿ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರುವ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಮತ್ತು ಯುವರಾಜ್ ಕುಮಾರ್ ಅವರಿಗೆ ಸಂತೋಷ್ ಆನಂದರಾಮ್ ನಿರ್ದೇಶಿಸಲಿರುವ ಹೊಸ ಚಿತ್ರ ಕೂಡ ಸದ್ಯದಲ್ಲೇ ಶುರುವಾಗಲಿದೆ.


ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 2023ರ ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದರ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲೂ ಹೊಂಬಾಳೆ ಫಿಲಂಸ್ ವತಿಯಿಂದ ಎರಡು ಚಿತ್ರ ನಿರ್ಮಾಣವಾಗುತ್ತಿವೆ. ಫಹಾದ್ ಫಾಸಿಲ್ ಅಭಿನಯದ ‘ಧೂಮಂ’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದರೆ, ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.

Categories
ಸಿನಿ ಸುದ್ದಿ

ಡೈಲಾಗ್ ರೈಟರ್ ಈಗ ಡೈರೆಕ್ಟರ್: ರಿಷಿ ಸಿನಿಮಾಗೆ ಪ್ರಶಾಂತ್ ರಾಜಪ್ಪ ನಿರ್ದೇಶನ…

ಚಂದನವನದಲ್ಲಿ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿರುವ ಪ್ರಶಾಂತ್ ರಾಜಪ್ಪ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ ಪ್ರಶಾಂತ್ ರಾಜಪ್ಪ. ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಇದೀಗ ಅವೆಲ್ಲ ಅನುಭವವನ್ನು ಇಟ್ಟುಕೊಂಡು ನಿರ್ದೇಶಕನಾಗಿ ಚಂದನವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.

ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸು. ಆ ಕನಸೀಗ ನನಸಾಗುವ ಹಂತಕ್ಕೆ ಬಂದಿದೆ. ಸಿನಿಮಾ ಬರಹಗಾರನಾಗಿ, ನಿರ್ದೇಶಕರಾದ ಗುರು ಪ್ರಸಾದ್, ಪಿ.ಸಿ. ಶೇಖರ್, ಹೆಚ್. ಪಿ. ದಾಸ್ ಜೊತೆ ಸಹ ನಿರ್ದೇಶಕನಾಗಿ ಚಿತ್ರರಂಗದಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರಕ್ಕೆ ಧಾರೆ ಎರೆಯುತ್ತಿದ್ದಾರೆ. ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುವುದರ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.

‘ಆಪರೇಷನ್ ಅಲಮೇಲಮ್ಮ’, ‘ಕವಲು ದಾರಿ’ ಸಿನಿಮಾ ಖ್ಯಾತಿಯ ನಟ ರಿಷಿ ಪ್ರಶಾಂತ್ ರಾಜಪ್ಪ ಮೊದಲ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲವನ್ನೂ ರಿವೀಲ್ ಮಾಡೋದಾಗಿ ಪ್ರಶಾಂತ್ ರಾಜಪ್ಪ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ! ನೋಡ ನೋಡ ಎಷ್ಟು ಚೆಂದ ಉಂಟು ಸಿನಿಮಾ ಟೈಟಲ್ಲು!!

ಕೆಲ ಸಿನಿಮಾಗಳು ತಮ್ಮ ಶೀರ್ಷಿಕೆಯ ಮೂಲಕವೇ ಒಂದಷ್ಟು ಸುದ್ದಿಯಾಗುತ್ತವೆ. ಅಷ್ಟೇ ಯಾಕೆ ಕುತೂಹಲವನ್ನೂ ಹೆಚ್ಚಿಸುತ್ತವೆ. ಬಹುತೇಕ ಹೊಸಬರ ಸಿನಿಮಾಗಳೇ ಸದ್ದು ಮಾಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ‘ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಕೂಡ ಸೇರಿದೆ. ಹೌದು, ಇದು ಹೊಸಬರ ಸಿನಿಮಾ. ಸದ್ಯ ಟೈಟಲ್ಲು ಕ್ರೇಜ್ ಹೆಚ್ಚಿಸಿದೆ. ಆ ಸಿನಿಮಾ ಕುರಿತು ಒಂದಷ್ಟು ಮಾತುಕತೆ…

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಮಂಡ್ಯ, ಮಂಗಳೂರು, ಕುಂದಾಪುರ ಹೀಗೆ ಅದರ ಪಟ್ಟಿಗೆ ಈಗ ಹೊಸ ಜಾಗ ಸೇರ್ಪಡೆ ಆಗಿದೆ ಅದೇ ಉತ್ತರ ಕನ್ನಡ ಜಿಲ್ಲೆ, ಅದು “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರದ ಮೂಲಕ.

ಹೌದು, ಈ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರ ದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿಯ ಸ್ಥಳೀಯ ಪ್ರತಿಭೆಗಳನ್ನೇ ಬಳಸಿಕೊಂಡಿರೋದು ವಿಶೇಷ.

ಈ ಚಿತ್ರದ ವಿಶೇಷತೆ ಚಿತ್ರಕ್ಕೆ ಬಳಸಿರುವ ಉತ್ತರಕನ್ನಡ ಭಾಷೆ ಹಾಗೂ ರಮಣೀಯ ಸ್ಥಳಗಳು ನೋಡುಗನ ಕಣ್ಮನ ಸೆಳೆದರೆ, ಚಿತ್ರಕಥೆಯ ಹೊಸತನ ಸ್ಪೆಷಲ್ ಆಗಿದೆ. ಇನ್ನು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಕೇಳದ ಮತ್ತು ನೋಡದ ಹೊಸ ಕಥೆ ಇಲ್ಲಿದೆ ಎಂಬುದು ತಂಡದ ಮಾತು.

ಕಥೆ ಇದು…

ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನೆಯ ಹೋರಾಟ ಈ ಚಿತ್ರದ ಹೈಲೈಟ್,
ಜೊತೆಗೆ, ಮುದ್ದಾದ ಪ್ರೇಮಿಗಳ ಕಥೆ, ಒಬ್ಬ ಇನ್ಶೂರೆನ್ಸ್ ಮಾಡಿಸುವವ ಹಾಗೂ ಅವನ ವೈಯಕ್ತಿಕ ಜೀವನದ ಬಗ್ಗೆ, ಒಬ್ಬ ಜಮೀನ್ದಾರ ಅವನ ಮತ್ತು ಫೋಟೋಗ್ರಾಫರ್ ನಡುವಿನ ನಡೆಯೋ ಸಂಘರ್ಷ ನೋಡುಗರಿಗೆ ಹೊಸ ಅನುಭವ ನೀಡಲಿದೆ ಎಂಬುದು ತಂಡದ ಹೇಳಿಕೆ.

ನಿರ್ಮಾಪರಾಗಿ ವೆಂಕಟೇಶ್ವರ ರಾವ್, ಬಳ್ಳಾರಿ ರವರು ಮೊದಲಬಾರಿಗೆ ಸೃಜನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನೆಮಾವಿದು.

ಕಿರುತೆರೆಯಲ್ಲಿ 6 ವರ್ಷಗಳ ಕಾಲ “ಅಗ್ನಿಸಾಕ್ಷಿ”ದಾರಾವಾಹಿಯಲ್ಲಿದ್ದ ನಟ ರಾಜೇಶ್ ಧ್ರುವ ನಿರ್ದೇಶಕರು. ಉಳಿದಂತೆ ರವಿ ಸಾಲಿಯಾನ್, ರಾಧಿಕಾ, ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಹಾಗೂ ಹಲವು ಹೊಸ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ಕಥೆ – ಚಿತ್ರಕಥೆಯನ್ನು ಅಭಿಷೇಕ್ ಶಿರಸಿ, ಹಾಗೂ ಪೃಥ್ವಿಕಾಂತ ಬರೆದರೆ, ಸಂಭಾಷಣೆಯನ್ನು ಅಜಿತ್ ಬೊಪ್ಪನಳ್ಳಿ ಬರೆದಿದ್ದಾರೆ.

ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣ, ಗಣಪತಿ ಭಟ್ ಸಂಕಲನವಿದೆ. ,ಚಿತ್ರದ ಹಾಡುಗಳಿಗೆ
ಶ್ರೀರಾಮ್ ಗಂಧರ್ವ ರವರ ಸಂಗೀತ ಮತ್ತು ಪ್ರಮೋದ್ ಮರವಂತೆ ಅವರ ಸಾಹಿತ್ಯ ಇದೆ. ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತವಿದೆ.

Categories
ಸಿನಿ ಸುದ್ದಿ

ಸೆಕೆಂಡ್ ಲೈಫ್ ಮತ್ತು ಕರುಳ ಬಳ್ಳಿ! ಹೊಸ ಕಥೆ

ಮಗು ಜನಿಸಿದ ಕೆಲವೇ ದಿನಗಳಲ್ಲಿ ಕರುಳಬಳ್ಳಿ(ಹೊಕ್ಕಳು ಬಳ್ಳಿ) ಬೀಳುತ್ತದೆ. ಅದನ್ನು ಕ್ಯಾನ್ಸರ್‌ ರೋಗಿಗಳ ಔಷದಿಗೆ ಬಳಸಿಕೊಳ್ಳಲಾಗುತ್ತದೆ. ಕರ್ನಾಟಕ ಒಂದರಲ್ಲೆ 70-80 ಸಾವಿರ ಜನರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಕೂಡ ಎಲ್ಲೆಡೆ ನಡೆಯುತ್ತಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟು ಕೊಂಡು “2 nd ಲೈಫ್” ಚಿತ್ರ ತಯಾರಾಗಿದೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ.

ಜೀವನದಲ್ಲಿ ಯಾವುದೋ ದೊಡ್ಡ ಅನಾಹುತ ನಡೆದು ಅದರಿಂದ ಪಾರಾದಾಗ ಎಲ್ಲರೂ ಹೇಳುವುದು. ನಿನ್ನ ಹೊಸಜೀವನ ಆರಂಭವಾಗಿದೆ ಅಂತ. ಈ ರೀತಿಯ ಘಟನೆ ಚಿತ್ರದಲ್ಲಿ ನಡೆಯುವುದರಿಂದ ಚಿತ್ರಕ್ಕೆ “2nd ಲೈಫ್” ಅಂತ ಹೆಸರಿಡಲಾಗಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ರಾಜು ದೇವಸಂದ್ರ ಚಿತ್ರದ ಕುರಿತು ವಿವರಣೆ ನೀಡಿದರು.

ನಾನು ಈ ಹಿಂದೆ “ಸ್ವಾರ್ಥ ರತ್ನ” ಎಂಬ ಚಿತ್ರದಲ್ಲಿ ‌ಅಭನಯಸಿದ್ದೆ. ಈಗ “2 nd ಲೈಫ್” ಚಿತ್ರದಲ್ಲಿ ನಟಿಸಿದ್ದೇನೆ. ನಾನು ಮೂಲತಃ ಆಡಿಟರ್. ಮಂಜುಳಾ ರಮೇಶ್ ಅವರು ಬರೆದಿರುವ ಈ ಚಿತ್ರದ ಕಥೆ ಹಿಡಿಸಿತು. ಪಿ.ಆರ್.ಕೆ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಪ್ರೋತ್ಸಾಹಿಸಿ ಎಂದರು ನಾಯಕ ಆದರ್ಶ ಗುಂಡುರಾಜ್.

ಈ‌ ಚಿತ್ರದಲ್ಲಿ ನನ್ನದು ಕುರುಡಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಸಿಂಧೂ ರಾವ್ ತಿಳಿಸಿದರು.

ಸಂಗೀತ ನಿರ್ದೇಶಕ ಆರವ್ ರಿಶಿಕ್, ಛಾಯಾಗ್ರಹಕ ರಮೇಶ್ ಕೊಯಿರ, ನಟ ಶಿವಪ್ರದೀಪ್ ಹಾಗೂ ಸಹ ನಿರ್ಮಾಪಕ – ನಟ ರುದ್ರಮುನಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

error: Content is protected !!