Categories
ಸಿನಿ ಸುದ್ದಿ

ರವಿ ಬಸ್ರೂರ್ ಪುತ್ರ ಸಿನಿಮಾಗೆ ಎಂಟ್ರಿ: ಕ್ಲಿಕ್ ಮೂಲಕ ಪವನ್ ಬಣ್ಣ

ಉಗ್ರಂ, ಮಫ್ತಿ, ಕೆಜಿಎಫ್ ನಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ಗಾಯಕರಾಗಿಯೂ, ನಿರ್ಮಾಪಕರಾಗಿಯೂ ಸ್ಯಾಂಡಲ್ ವುಡ್ ಗೆ ಚಿರಪರಿತ. ಪರಭಾಷೆಯ ಚಿತ್ರಗಳಿಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ಶರಣ್ಯ ಫಿಲ್ಮಂಸ್ ನಡಿ ಕ್ಲಿಕ್ ಎಂಬ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ರವಿ ಬಸ್ರೂರ್ ಮಗ ಪವನ್ ಬಸ್ರೂರ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಮಾಸ್ಟರ್ ಪವನ್ ಜೊತೆಯಲ್ಲಿ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದು, ಉಳಿದಂತೆ ಚಂದ್ರಕಲಾಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ನಮ್ಮಲ್ಲಿ ಹೆಚ್ಚಿನ ಪಾಲು ಪೋಷಕರು ಮಕ್ಕಳು ಡಾಕ್ಟರ್-ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ನಮ್ಮ ಮುಂದೆ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆ ಸುತ್ತ ಸಾಗುವ ಈ ಚಿತ್ರಕ್ಕೆ ಯುವ ನಿರ್ದೇಶಕ ಶಶಿಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕೋ ಡೈರೆಕ್ಟರ್ ಆಗಿ ವೀರು ಸಾಥ್ ಕೊಟ್ಟಿದ್ದಾರೆ.

ಬೆಂಗಳೂರು, ಬಿಡದಿ ರಾಮನಗರ ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕ್ಲಿಕ್ ಸಿನಿಮಾಗೆ ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ. ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರುಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಅಂಬರೀಶ್ ಹುಟ್ಟು ಹಬ್ಬಕ್ಕೆ ಪುತ್ರ ಅಭಿಷೇಕ್ ವಿಶೇಷ ವೀಡಿಯೋ

ಮೇ 29. ಡಾ. ಅಂಬರೀಶ್ ಅವರ 71ನೇ ಹುಟ್ಟು ಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಕೈ ಜೋಡಿಸಿದೆ. ಈ ಸಂದರ್ಭದಲ್ಲಿ ಅಭಿಷೇಕ್ ಒಂದು ಹೊಸ ವೀಡಿಯೋ ಮಾಡಿದ್ದು, ಇದರಲ್ಲಿ ಅವರ ಪತ್ನಿಯಾಗಲಿರುವ ಅವಿವಾ ಬಿದ್ದಪ್ಪ ಸಹ ಕಾಣಿಸಿಕೊಂಡಿರುವುದು ವಿಶೇಷ.

ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವೀವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

ಸದ್ಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್, ಜೂನ್ ತಿಂಗಳಲ್ಲಿ ಅವೀವಾ ಜೊತೆಗೆ ದಾಂಪತ್ಯ ಚಿತ್ರಕ್ಕೆ ಕಾಲಿಡುತ್ತಿದ್ದಾರೆ.

‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ನಟಿಸಿದ್ದು, ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Categories
ಸಿನಿ ಸುದ್ದಿ

ಆನಂದ್ ಆಡಿಯೋಗೆ ಒಲಿದ ಯುಟ್ಯೂಬ್ ಡೈಮಂಡ್ ಬಟನ್: ಚಿತ್ರೋದ್ಯಮಕ್ಕೆ ಶ್ಯಾಮ್-ಆನಂದ್ ಧನ್ಯವಾದ

ಕಳೆದ 24 ವರ್ಷಗಳಿಂದ ಶ್ರೋತೃಗಳಿಗೆ ಕನ್ನಡ ಚಿತ್ರಗಳ ಸುಮಧುರ ಹಾಡುಗಳನ್ನು ತಲುಪಿಸುತ್ತ ಬಂದಿರುವ
ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ಮುಂದಿನ ವರ್ಷ ರಜತ ವರ್ಷದ ಸಂಭ್ರಮ. ಈಗ ಆನಂದ್ ಆಡಿಯೋ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ.

ಆನಂದ್ ಆಡಿಯೋ ಯೂಟ್ಯೂಬ್ ಚಾನಲನ್ನು ಒಂದು ಕೋಟಿ ಜನರು ಸಬ್ ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಯೂಟ್ಯೂಬ್ ಸಂಸ್ಥೆಯಿಂದ ಆನಂದ್ ಆಡಿಯೋ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಬಟನ್ ಸಿಕ್ಕಿದೆ.

“ಮೇ 24, ಆನಂದ್ ಆಡಿಯೋ ಮಾಲೀಕರಾದ ಮೋಹನ್ ಚಾಬ್ರಿಯಾ ಅವರ ಹುಟ್ಟುಹಬ್ಬ. ಅದೇ ದಿನ ಡೈಮಂಡ್ ಬಟನ್ ದೊರಕಿರುವುದು ಖುಷಿಯ ವಿಚಾರ.

ಇದಕ್ಕೆ ಕಾರಣರಾದ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಚಾಬ್ರಿಯಾ ಮತ್ತು ಆನಂದ್ ಚಾಬ್ರಿಯಾ ಧನ್ಯವಾದ ತಿಳಿಸಿದ್ದಾರೆ

Categories
ಸಿನಿ ಸುದ್ದಿ

ಹತ್ಯ ನೋಡೋಕೆ ರೆಡಿ: ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

ದೆಹಲಿ ನಿರ್ಭಯ ಹತ್ಯೆ, ಹೈದರಾಬಾದ್ ಮರ್ಡರ್ ಮತ್ತು ಅತ್ಯಾಚಾರ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ ಘಟನೆಗಳು ಸೇರಿದಂತೆ ಇಂತಹ ನೈಜ ಘಟನೆಗಳನ್ನು ಆಧರಿಸಿರುವ ಚಿತ್ರವೆ “ಹತ್ಯ”.

ಈ ಚಿತ್ರದ ನಾಯಕಿ ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ನೋವನ್ನು ಯಾರ ಬಳಿ ಹೇಳಿಕೊಳ್ಳಲಾಗದೆ ಮನಸ್ಸಿನಲ್ಲೇ ನೋವು ಅನುಭವಿಸುತ್ತಾಳೆ. ಈ ಘಟನೆಯಿಂದ ಆಕೆಯ ಮನಸ್ಥಿತಿ ಬದಲಾಗುತ್ತದೆ. ಆನಂತರ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ ಇದೇ ಚಿತ್ರದ ಕಥಾಹಂದರ. ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನುತ್ತಾರೆ ಕಥೆ ಹಾಗೂ ಚಿತ್ರಕಥೆ ಬರೆದಿರುವ ಗಂಗಾಧರ್(ಗಂಗು).

ವರುಣ್ ‌.ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

ಸಾಗರಂ ವಲ್ಡ್ ಸಿನಿಮಾ ಲಾಂಛನದಲ್ಲಿ ರಾಮಲಿಂಗಂ, ಶ್ಯಾಮ್ ಹಾಗೂ ಗಂಗಾಧರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅಲೆನ್ ಕ್ರಿಸ್ಟ ಸಂಗೀತ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿಕಾಸ್ ಗೌಡ, ಕಾಮಿಕಾ ಆಂಚಲ್, ಹ್ಯಾರಿ ಜೋಶ್, ಸಂತೋಷ್ ಮೇದಪ್ಪ, ಶ್ಯಾಮ್, ನಾಗೇಶ್ ಮಯ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

Categories
ಸಿನಿ ಸುದ್ದಿ

ತಂದೆ ಮಗನ ಬಾಂಧವ್ಯಕ್ಕೆ ಡಾಲಿ ಸಾಥ್: ಪರಂವಃ ಹಾಡು ರಿಲೀಸ್ ಮಾಡಿದ ಧನಂಜಯ

ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ದೊಡ್ಡದು. ಇಂತಹ ತಂದೆ – ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ “ಪರಂವಃ”.

ಸಂತೋಷ್ ಕೈದಾಳ ನಿರ್ದೇಶಿಸಿರುವ ಈ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ, ಶ್ರೀ ತಲಗೇರಿ ಹಾಗೂ ಶಿವರಾಜ್ ಸೇರಿ ಬರೆದಿರುವ ” ಭೂರಮೆಲಿ ಮತ್ಯಾರು” ಎಂಬ ತಂದೆ – ಮಗನ ಭಾವನಾತ್ಮಕ ಪಯಣಕ್ಕೆ ಮುನ್ನುಡಿಯಾಗಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಅಪರಾಜಿತ್ ಹಾಗೂ ಜೋಸ್ ಜೋಸ್ಸೆ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ ಚಿತ್ರದ ಈ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚಿತ್ರದ ನಾಯಕ ವೀರಗಾಸೆ ಕಲಾವಿದ. ಅವರ ಕುಟಂಬವೇ ವೀರಗಾಸೆ ಕುಟುಂಬ. ನಾಯಕನಿಗೆ ತಂದೆಯಂದರೆ ಪ್ರಾಣ. ತಂದೆಗೆ ಮಗನೇ ಜೀವ. ಇಂತಹ ವಿಭಿನ್ನ ಕಥಾಹಂದರ ಹೊಂದಿರುವ “ಪರಂವಃ” ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದೆ. ಜುಲೈನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಸಂತೋಷ್ ಕೈದಾಳ ತಿಳಿಸಿದ್ದಾರೆ.

ಪೀಪಲ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಎ.ಎಸ್ ಶೆಟ್ಟಿ ಛಾಯಾಗ್ರಹಣ, ಅಪರಾಜಿತ್ – ಜೋಸ್ ಜೋಸ್ಸೆ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಹಾಗೂ ವೆಂಕಿ ಯು ಡಿ ವಿ – ವಿಕಾಸ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.

ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಯಾರದು ಈ ಫಾರೆಸ್ಟ್ ಕಾರು? ಹೀಗೊಂದು ಫ್ಯಾಂಟಸಿ, ಹಾರರ್ ಚಿತ್ರ

ಸದ್ದಿಲ್ಲದೆ “ಫಾರೆಸ್ಟ್‌ ಕಾರ್” ಎಂಬ ವಿಭಿನ್ನ ಬಗೆಯ ಕಥಾ ಹಂದರದ ಸಿನಿಮಾ ಚಿತ್ರೀಕರಣ ಮುಗಿಸಿದೆ. ಮೆಡ್ಲೇ ಸ್ಟುಡಿಯೋ ಬ್ಯಾನರ್‌ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಈ ಚಿತ್ರ ಫ್ಯಾಂಟಸಿ ಮತ್ತು ಹಾರರ್ ಕಥಾಹಾಂದರಹೊಂದಿದೆ. ಅತ್ಯಾಧುನಿಕ ಹಾಗೂ ವಿಭಿನ್ನ‌ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರ ತಂಡ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್ ಕಾರ್ಯದಲ್ಲಿ ನಿರತವಾಗಿದೆ. ಈ ಚಿತ್ರಕ್ಕೆ ಹರ್ಷಿತ್ ನಿರ್ದೇಶಕರು. ವೆಂಕಟೇಶ್ ನಲ್ಲಿಬಿಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕೆ ಪ್ರವೀಣ್‌ ರೆಡ್ಡಿ ನಾಯಕ ನಟರಾಗಿದ್ದು, ಅವರ ಜೊತೆಗೆ ವರ್ಣಿಕ ಶೆಟ್ಟಿ ನಾಯಕಿ.

ಬೆಂಗಳೂರು, ಹೈದ್ರಾಬಾದ್‌ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲಿ ತೆರೆಗೆ ಅಪ್ಪಳಿಸಲು ಸಿದ್ದವಾಗಲಿರುವ. ಚಿತ್ರವು ಎಲ್ಲಾ ವರ್ಗದವರನ್ನು ಆಕರ್ಷಿಸಲು ಸಜ್ಜಾಗುತ್ತಿದೆ.

Categories
ಸಿನಿ ಸುದ್ದಿ

ಜೂನ್ 2ಕ್ಕೆ ಪಿಂಕಿ ಸಿಕ್ತಾಳೆ! ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಿಂಕಿ ಎಲ್ಲಿ ರಿಲೀಸ್

ಪ್ರಪಂಚದಾದ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಪ್ರಶಂಸೆ ಎರಡನ್ನು ಪಡೆದಿರುವ “ಪಿಂಕಿ ಎಲ್ಲಿ?” ಚಿತ್ರ ಜೂನ್ 2 ರಂದು ಬಿಡುಗಡೆಯಾಗುತ್ತಿದೆ‌. ಈ ವಿಷಯವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.

ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಕಥೆಯಿದು. ಬೆಂಗಳೂರಿನಲ್ಲಿ ನಡೆದ ನೈಜಘಟನೆಯೂ ಹೌದು. ಮಗುವೊಂದು ಕಾಣೆಯಾಗಿರುತ್ತದೆ. ಆದರೆ ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಕಥೆಯ ಒಂದೆಳೆ ಕೇಳಿ ಮೆಚ್ಚಿಕೊಂಡ ನಿರ್ಮಾಪಕ ಕೃಷ್ಣೇಗೌಡ ಅವರು ನಿರ್ಮಾಣಕ್ಕೆ ಮುಂದಾದರು. ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ‌.

ಅದರಲ್ಲೂ ಗುಂಜಲಮ್ಮ ಹಾಗೂ ಸಂಗಮ್ಮ ಇಬ್ಬರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ಲಂ ನಿವಾಸಿಗಳು. ನಟನೆ ಗೊತ್ತಿಲ್ಲದ ಇವರು ಸಹಜವಾಗಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ ‌. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ. ಜೂನ್ ಎರಡರಂದು ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಪೃಥ್ವಿ ಕೋಣನೂರು ತಿಳಿಸಿದರು.

ನಿರ್ದೇಶಕರು ಕಥೆ ಹೇಳುವ ರೀತಿಯೆ ವಿಭಿನ್ನ. ನನಗೂ ಅವರು ಕಥೆ ಹೇಳುವ ರೀತಿ ಆಶ್ಚರ್ಯವಾಯಿತು. ಈ ಚಿತ್ರದಲ್ಲಿ ಮಗುವನ್ನು ಕಳೆದುಕೊಂಡಿರುವ ತಾಯಿಯ ಪಾತ್ರ ನನ್ನದು ಎಂದರು ನಟಿ ಅಕ್ಷತಾ ಪಾಂಡವಪುರ.

ನಾನು ಕಥೆ ಕೇಳಲಿಲ್ಲ. ನಿರ್ದೇಶಕರು ಮಗು ಕಳೆದು ಹೋಗಿರುವ ಸುತ್ತಲ್ಲಿನ ಕಥೆ ಎಂದು ಕಥೆಯ ಒಂದೆಳೆ ಹೇಳಿದರು. ನಾನು ಆಗಲೇ ಚೆನ್ನಾಗಿದೆ . ನೀವು ಕೆಲಸ ಶುರು ಮಾಡಿಕೊಳ್ಳಿ ಎಂದು ಹೇಳಿದೆ. ಬೆಂಗಳೂರಿನಲ್ಲಿ ಮಗುವಿನ ಭವಿಷ್ಯಕ್ಕಾಗಿ ತಂದೆ – ತಾಯಿ ಕೆಲಸಕ್ಕಾಗಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೆ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ. ಇಂತಹ ಅಪರೂಪದ ಕಥೆ ಈ ಚಿತ್ರದಲ್ಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಕೃಷ್ಣೇಗೌಡ.

ಚಿತ್ರದಲ್ಲಿ ನಟಿಸಿರುವ ದೀಪಕ್ ಸುಬ್ರಹ್ಮಣ್ಯ, ಗುಂಜಲಮ್ಮ, ಸಂಗಮ್ಮ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ರಾಗಿಣಿ ಐಎಎಸ್ ವರ್ಸಸ್ ಐಪಿಎಸ್! ಸೆಪ್ಟೆಂಬರ್ ನಲ್ಲಿ ರಾಗಿಣಿ ಹೊಸ ಸಿನಿಮಾ: ಇದು ಕೆ.ಮಂಜು ಕಾಣಿಕೆ!!

ಕೆ.ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ಕೆ.ಮಂಜು ನಿರ್ಮಿಸುತ್ತಿರುವ, ಸಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಲಿರುವ “ರಾಗಿಣಿ ಐ ಪಿ ಎಸ್ ವರ್ಸಸ್ ಐ ಎ ಎಸ್” ಚಿತ್ರ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.

ಇದೊಂದು ನೈಜಘಟನೆ ಆಧಾರಿತ ಚಿತ್ರವಾಗಿದ್ದು, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಮಾನ”,” ಧ್ವನಿ ” ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಸಬಾಸ್ಟಿನ್ ಡೇವಿಡ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.

ಜನಪ್ರಿಯ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿರುತ್ತಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ನಗುವಿಗೆ ಯು ಪ್ರಮಾಣ ಪತ್ರ: ಕಿರುತೆರೆ ಹುಡುಗನ ಸ್ಪೆಷಲ್ ಹೂವು

ರೋಮ್ಯಾಂಟಿಕ್ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ನಗುವಿನ ಹೂಗಳ ಮೇಲೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದುಕೊಂಡಿದೆ. ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು ಪ್ರಮಾಣ ಪತ್ರ ತನ್ನದಾಗಿಸಿಕೊಂಡಿದೆ.

ಶ್ರೀ ರಂಗ , ಕೆಂಪಿರ್ವೆ ಮತ್ತು ಆಮ್ಲೆಟ್, ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿರುವ ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಇರಲಿ ಬಿಡು ಈ ಜೀವ ನಿನಗಾಗಿ ಎಂಬ ರೋಮ್ಯಾಂಟಿಕ್ ಹಾಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ವೆಂಕಟ್‌ ಭಾರದ್ವಾಜ್‌ ಕಥೆ, ಚಿತ್ರಕಥೆ ಬರೆದು‌ ನಿರ್ದೇಶಿಸಿರುವ ನಗುವಿನ ಹೂಗಳ ಮೇಲೆ ಸಿನಿಮಾವನ್ನು ಟಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳಾದ

ಬೆಂಗಾಲ್ ಟೈಗರ್, ಪಂಥಂ, ಒರೆ ಬುಜ್ಜುಗ , ಒಡೇಲ ರೈಲ್ವೆ ಸ್ಟೇಷನ್ ಮತ್ತು ಪ್ಯಾರ್ ಮೇ ಪಡೀಪೊಯಾನು ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ.

ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸವಿರುವ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ನವೀನ್ ಶಂಕರ್ ಹುಟ್ದಬ್ಬಕ್ಕೆ ಕ್ಷೇತ್ರಪತಿ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್

“ಗುಲ್ಟು”, ” ಹೊಯ್ಸಳ “, ” ಹೊಂದಿಸಿ ಬರೆಯಿರಿ” ಚಿತ್ರಗಳ ಮೂಲಕ ಜನಪ್ರಿಯರಾಗಿರುವ ನವೀನ್ ಶಂಕರ್ ಪ್ರಸ್ತುತ “ಕ್ಷೇತ್ರಪತಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ‌.

ನವೀನ್ ಶಂಕರ್ ಅವರಿಗೆ ಈಗ ಹುಟ್ಟುಹಬ್ಬದ ಸಂಭ್ರಮ. ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನವೀನ್ ಶಂಕರ್ ಅವರಿಗೆ “ಕ್ಷೇತ್ರಪತಿ” ತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆ. KRG ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ.

ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. “ಕ್ಷೇತ್ರಪತಿ” ಸೋಶಿಯಲ್ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕರು. ಶ್ರೀಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ‌.

ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾದ “ಹೊಂದಿಸಿ ಬರೆಯಿರಿ” ಚಿತ್ರದಲ್ಲಿ ನಾಯಕ – ನಾಯಕಿಯಾಗಿ ನಟಿಸಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ “ಕ್ಷೇತ್ರಪತಿ” ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!