Categories
ಸಿನಿ ಸುದ್ದಿ

ಮೈಸೂರಿನಲ್ಲಿ ವೃಷಭನ ಸಾಹಸ ಪೂರ್ಣ!

ಬಹು ನಿರೀಕ್ಷಿತ “ವೃಷಭ” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ತಿಂಗಳ ಕಾಲ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಭಾರತೀಯ ಚಿತ್ರರಂಗದಲ್ಲಿ ಕಂಡುಕೇಳರಿಯದ ಬೃಹತ್ ಆಕ್ಷನ್ ದೃಶ್ಯಗಳನ್ನು ಈ ಹಂತದಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಂದಕಿಶೋರ್ ನಿರ್ದೇಶನದ ವೃಷಭ ಚಿತ್ರದ ಚಿತ್ರೀಕರಣ ಕಳೆದ ತಿಂಗಳು 22 ರಂದು ಮೈಸೂರಿನಲ್ಲಿ ಪ್ರಾರಂಭವಾಗಿತ್ತು. ಈ ಭಾಗದ ಚಿತ್ರೀಕರಣದಲ್ಲಿ ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ಪಾಲ್ಗೊಂಡಿದ್ದರು. ಚಿತ್ರದ ನಿರ್ಮಾಪಕರು ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ಅದ್ಭುತವಾಗಿ ಮೂಡಿಬರುವುದಕ್ಕೆ ಶ್ರಮವಹಿಸಿದ್ದಾರೆ.

ಹಾಲಿವುಡ್‌ ನ ಜನಪ್ರಿಯ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿರುವ ನಿಕ್ ಥರ್ಲೋ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ಒಂದು ವಿಶೇಷತೆಯಾದರೆ, “ಬಾಹುಬಲಿ”, “ಪುಲಿಮುರುಗನ್”, “ಶಿವಾಜಿ – ದಿ ಬಾಸ್”, “ಎಂದಿರನ್”, “ಪುಷ್ಪ – ದಿ ರೈಸ್” ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಭಾರತೀಯ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕರಾದ ಪೀಟರ್ ಹೇನ್ಸ್ ಈ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿರುವುದು ಇನ್ನೊಂದು ಹೆಗ್ಗಳಿಕೆ.


 
ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ನಂದಕಿಶೋರ್, ಮೊದಲ ಹಂತದ ಚಿತ್ರೀಕರಣದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದ ಖುಷಿ ನಮಗಿದೆ. ಜೊತೆಗೆ ಹಗಲು ರಾತ್ರಿ ಕಷ್ಟಪಟ್ಟು ದುಡಿದ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳುವುದಕ್ಕೆ ಬಯಸುತ್ತೇನೆ. ಮೋಹನ್ ಲಾಲ್ ಸರ್, ರೋಶನ್, ಶ್ರೀಕಾಂತ್, ರಾಗಿಣಿ ಮುಂತಾದವರು ನಮ್ಮ ಡೆಡ್ ಲೈನ್ ಗಳನ್ನು ಪೂರೈಸುವಲ್ಲಿ ಪೂರಕವಾಗಿ ಕೆಲಸ ಮಾಡಿದ್ದಾರೆ. “ಪುಲಿಮುರುಗನ್” ಚಿತ್ರದ ನಂತರ ಮೋಹನ್ ಲಾಲ್ ಮತ್ತು ಪೀಟರ್ ಹೇನ್ಸ್ ಈ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ವೃಷಭ ಚಿತ್ರವು ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರವಾಗಿ ಮೂಡಿಬರಲಿದೆ ಎಂದು ಹೇಳಿದ್ದಾರೆ.

 “ವೃಷಭ” ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಅತೀ ದೊಡ್ಡ ಆಕ್ಷನ್ ಚಿತ್ರವಾಗಿದ್ದು, ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಝಹ್ರ ಎಸ್ ಖಾನ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ವಿಎಫ್ಎಕ್ಸ್ ದೊಡ್ಡ ಪ್ರಮಾಣದಲ್ಲಿದ್ದು, ಇದೊಂದು ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಅದ್ಭುತ ಸೆಂಟಿಮೆಂಟ್ ಚಿತ್ರವಾಗಿ ಮೂಡಿಬರುತ್ತಿದ್ದು, 2024ರ ಅತೀ ಜನಿರೀಕ್ಷಿತ ಚಿತ್ರವಾಗಿದೆ.

ವೃಷಭ ಚಿತ್ರವನ್ನು ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲಂಸ್, ಎವಿಎಸ್ ಸ್ಟುಡಿಯೋಸ್ ನ ಜೊತೆಗೆ ಅರ್ಪಿಸುತ್ತಿದೆ‌. ನಂದಕಿಶೋರ್ ನಿರ್ದೇಶನದ ಈ ಚಿತ್ರವನ್ನು, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಅಭಿಷೇಕ್ ವ್ಯಾಸ್ (ಏವಿಎಸ್), ಶ್ಯಾಮ್ ಸುಂದರ್ (ಫರ್ಸ್ಟ್ ಸ್ಟೆಪ್ ಮೂವೀಸ್), ಏಕ್ತಾ ಕಪೂರ್, ಶೋಭಾ ಕಪೂರ್ (ಬಾಲಾಜಿ ಟೆಲಿಫಿಲಂಸ್), ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ (ಕನೆಕ್ಟ್ ಮೀಡಿಯಾ) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ತೆಲುಗು, ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವು ತೆಲುಗು, ಮಲಯಾಳಂ, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಟೋಬಿ ಸ್ವಲ್ಪ ಚಲೋ ಐತ್ರಿ! ನೋಡೋಕೆ ತಾಳ್ಮೆ ಬೇಕ್ರಿ!! ಕ್ರೈಂ ಸುತ್ತ ಅಸಹಾಯಕನ ಪಯಣ…

ಚಿತ್ರ ವಿಮರ್ಶೆ
ರೇಟಿಂಗ್ : 3/5

ವಿಜಯ್ ಭರಮಸಾಗರ

ಚಿತ್ರ : ಟೋಬಿ
ನಿರ್ದೇಶಕ : ಬಾಸಿಲ್ ಅಲ್ಚಾಲ್ಕಲ್
ನಿರ್ಮಾಣ : ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್
ತಾರಾಗಣ : ರಾಜ್ ಬಿ.ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲ್ ದೇಶಪಾಂಡೆ, ದೀಪಕ್ ಶೆಟ್ಟಿ, ಭರತ್, ಸಂದ್ಯಾ ಅರಕೆರೆ ಇತರರು.

‘ ಈ ಟೋಬಿ ಯಾರು, ಎಲ್ಲಿರ್ತಾನೆ, ಇಷ್ಟಕ್ಕೂ ಟೋಬಿ ಅಂದರೇನು? ಹೀಗಂತ ಆ ಪೊಲೀಸ್ ಅಧಿಕಾರಿ ಚರ್ಚ್ ಫಾದರ್ ಬಳಿ ಕೇಳುತ್ತಾನೆ.
ಆ ಅಧಿಕಾರಿ ಪ್ರಶ್ನೆಗೆ ಚರ್ಚ್ ಫಾದರ್ ಹೇಳೋದಿಷ್ಟು. ‘ಟೋಬಿಯಾ ಅಲಿಯಾಸ್ ಟೋಬಿ ಅನ್ನೋದು ಹೆಬ್ರು ಭಾಷೆಯ ಪದ. ಹಾಗಂದರೆ, ‘ಗಾಡ್ ಈಸ್ ಗುಡ್’ ಅಂತ… ಟೋಬಿ ಎಂಬ ಹೆಸರಿಟ್ಟಾಕ್ಷಣ, ಮನುಷ್ಯ ದೇವರಾಗ್ತಾನಾ?

ಈ ಸಂಭಾಷಣೆ ಬರುವ ಹೊತ್ತಿಗೆ, ಬೆರಳೆಣಿಕೆ ಜನ ಇರುವ ಆ ಊರಲ್ಲಿ ಟೋಬಿ ಒಂದಷ್ಟು ಭಯ ಮತ್ತು ಕುತೂಹಲ ಹುಟ್ಟಿಸಿರುತ್ತಾನೆ. ಹಾಗಾದರೆ, ಆ ಟೋಬಿ ಯಾರು, ಹೇಗೆ? ಎಂಬ ಪ್ರಶ್ನೆಗೆ ಸಮಯ ಇದ್ದರೆ ಹಾಗೊಮ್ಮೆ ಟೋಬಿಯ ಆಟಾಟೋಪವನ್ನೊಮ್ಮೆ ನೋಡಿ ಬರಬಹುದು.

ಟೋಬಿ ತುಂಬಾ ಅದ್ಭುತ ಕಥೆಯೇನಲ್ಲ. ಒಂದು ಸಿಂಪಲ್ ಕಥೆಗೆ ರೋಚಕ ಎನಿಸುವ ಚಿತ್ರಕಥೆ ಚಿತ್ರದ ಜೀವಾಳ. ಒಂದೇ ಮಾತಲ್ಲಿ ಹೇಳುವುದಾದರೆ, ಸಿನಿಮಾ ತುಂಬಾ ನಿಧಾನ. ನೋಡುವಾಗ ಅಲ್ಲಲ್ಲಿ ಮಲಯಾಳಿ, ತಮಿಳಿನ ಕೆಲ ಸಿನಿಮಾಗಳು ಕಣ್ಮುಂದೆ ಹಾದು ಹೋಗುತ್ತವೆ. ಅದನ್ನು ಪಕ್ಕಕ್ಕಿಟ್ಟು ನೋಡಿದರೆ, ಒಂದು ಭಾವುಕ ಪಯಣ ಕಾಣಬಹುದು. ಆಗಾಗ ಒಂದಷ್ಟು ಕಚಗುಳಿ ಇಡುವಂತಹ ಸನ್ನಿವೇಶಗಳು, ಒಮ್ಮೊಮ್ಮೆ ರೌದ್ರಾವತಾರದ ದೃಶ್ಯಗಳು, ಮಗದೊಮ್ಮೆ ವಿನಾಕಾರಣ ಎನಿಸುವ ಸೀನ್ ಗಳು ಇಣುಕುವುದುಂಟು.

ನಿರ್ದೇಶಕರು ಒಂದಷ್ಟು ಸಿನಿಮಾ ಅವಧಿ ಕಡೆಗೆ ಗಮನ ಹರಿಸಿದ್ದರೆ ಟೋಬಿ ಮತ್ತಷ್ಟು ಚಂದ ಆಗುತ್ತಿದ್ದನೇನೋ? ಎರಡುವರೆ ತಾಸು ಕುಳಿತು ನೋಡೋದು ತುಸು ತ್ರಾಸು. ಮೊದಲರ್ಧ ಜಾಲಿಯಾಗಿ ಸಾಗುವ ಸಿನಿಮಾ ಮಧ್ಯೆ ಕೆಲ ದೃಶ್ಯಗಳು ಜಾಳು ಜಾಳು ಎನಿಸುತ್ತವೆ. ನೋಡುಗರಿಗೆ ವಿನಾಕಾರಣ ಎಳೆದಾಡಿದ್ದಾರೆ ಎಂಬ ಫೀಲ್ ಬರದೇ ಇರದು. ದ್ವಿಯಾರ್ಧ ಕೂಡ ವೇಗ ಹೆಚ್ಚಿಸಿಕೊಳ್ಳಲು ಅವಕಾಶವಿತ್ತು. ಆದರೆ, ಟೋಬಿ ಆಡಿದ್ದೇ ಆಟವನ್ನು ಅನಿವಾರ್ಯವಾಗಿ ನೋಡಲೇಬೇಕು.

ಇಲ್ಲಿ ಕಥೆಗಿಂತ ಚಿತ್ರಕಥೆ ಚುರುಕಾಗಿದೆ. ನಿರೂಪಣೆ ಶೈಲಿ ಹೊಸದಾಗಿದೆ. ಪ್ರತಿ ಪಾತ್ರಗಳನ್ನು ನೈಜವಾಗಿ ಕಟ್ಟಿ ಕೊಡುವಲ್ಲಿ ನಿರ್ದೇಶಕರ ಪ್ರಯತ್ನ ಸಾರ್ಥಕ. ಸಿನಿಮಾದಲ್ಲಿ‌ ವಾವ್ ಎನ್ನುವಂತಹ ದೃಶ್ಯಕಾವ್ಯ ಕಾಣ ಸಿಗಲ್ಲ. ಆದರೆ, ಒಂದೊಳ್ಳೆಯ ಮನರಂಜನೆಗಂತೂ ಮೋಸವಿಲ್ಲ. ಹಾಗಂತ ಇಲ್ಲಿ ಹಾಡು, ಕುಣಿತ ಮೇಳೈಸಿಲ್ಲ. ಆಗಾಗ ಹೊಡೆದಾಟಗಳಿಗೆ ಬರವಿಲ್ಲ. ಇಲ್ಲಿ ಇನ್ನೊಂದು ವಿಷಯ ಹೇಳುವುದಾದರೆ, ಕಥೆಯೇ ಇಲ್ಲಿ ಹೀರೋ. ಹಾಗಾಗಿ ಹೀರೋಯಿಸಂನ ಸುಳಿವಿಲ್ಲ. ಇಲ್ಲಿ ಮಾನವೀಯತೆ ಇದೆ, ಭಾವುಕತೆ ಇದೆ, ನಿಷ್ಕಲ್ಮಷ ಪ್ರೀತಿ ವಾತ್ಸಲ್ಯವಿದೆ, ಪಾಪ ಪ್ರಜ್ಞೆ ಇದೆ, ನೆತ್ತರು ಚಿಮುತ್ತೆ, ಮೋಸ, ದ್ವೇಷ, ಭಯ, ಭಕ್ತಿ ಎಲ್ಲವೂ ಇದೆ. ಇವೆಲ್ಲವೂ ಒಂದೊಳ್ಳೆಯ ಹೂರಣವಾಗಿದೆ. ಆ ಹೂರಣದಲ್ಲಿ ಕೊಂಚ ‘ಬೆಲ್ಲ’ದ ಸಿಹಿ ಕಡಿಮೆ ಎನ್ನಬಹುದಷ್ಟೇ.

ಟೋಬಿ ಕಥೆ ಏನು?

ಟೋಬಿ ಒಬ್ಬ ಅನಾಥ. ಮಾತು ಬಾರದ ಮೂಗ. ಚಿಕ್ಕಂದಿನಲ್ಲೇ ಅವಮಾನ ಕಂಡು ಎಲ್ಲರನ್ನು ದ್ವೇಷಿಸೋ ವ್ಯಕ್ತಿ. ಕೆಣಕಿದವರನ್ನ ಹಿಂದೆ ಮುಂದೆ ನೋಡದೆ ಹೊಡೆದುರುಳಿಸೋ ಛಾಳಿ. ಅಂತಹವನನ್ನು ಆ ಊರ ಮಂದಿ ಹೇಗೆ ಬಳಸಿಕೊಳ್ತಾರೆ. ಸಣ್ಣ ಅಸೆಗೆ ಆ ಜೀವ ಏನೆಲ್ಲಾ ತಪ್ಪು ಮಾಡುತ್ತೆ. ಅದರಿಂದ ಎಷ್ಟೆಲ್ಲಾ ನೋವು ಅನುಭವಿಸುತ್ತೆ ಅನ್ನೋದು ಕಥೆಯ ಸಾರಾಂಶ.

ಹಾಗಾದರೆ ಆ ಟೋಬಿ ಎಂಬ ಮುಗ್ಧ ಜೀವದ ಬದುಕಿನುದ್ದಕ್ಕೂ ಎದುರಾಗುವ ಸಮಸ್ಯೆಗಳೇನು, ಜೊತೆ ನಿಲ್ಲೋರಾರು, ದೂರ ಮಾಡೋರಾರು ಎಂಬ ಕುತೂಹಲ ಇದ್ದರೆ ಟೋಬಿ‌ಯ ‘ಮಾರಾಮಾರಿ’ ನೋಡಬಹುದು.

ಯಾರು ಹೇಗೆ?

ಟೋಬಿಯಾಗಿ ರಾಜ್ ಬಿ.ಶೆಟ್ಟಿ ಅಬ್ಬರಿಸಿದ್ದಾರೆ. ಮಾತು ಬಾರದ ಮೂಗನಾಗಿ ಅವರ ನಟನೆಗೆ ಜೈ ಎನ್ನಬಹುದು. ಮೂಗನಾಗಿಯೇ ಅಲ್ಲಲ್ಲಿ‌ ನಗಿಸಿ, ಭಾವುಕತೆಗೆ ದೂಡುವಲ್ಲಿ ಅವರು ಯಶಸ್ವಿ.
ಚೈತ್ರಾ ಆಚಾರ್ ಟೋಬಿ ಮಗಳಾಗಿ‌ ಗಮನ ಸೆಳೆದಿದ್ದಾರೆ. ಬಜಾರಿ ಹುಡುಗಿಯಾಗಿ ಸೈ ಎನಿಸಿಕೊಂಡಿದ್ದಾರೆ. ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ.
ಸಂಯುಕ್ತಾ ಹೊರನಾಡು ‘ಮಾರಿ’ ಗೆ ಸಿಗದೆ ಮೈ ಮಾರಿಕೊಳ್ಳೋ ಹೆಣ್ಣಾಗಿ ಇಷ್ಟವಾಗುತ್ತಾರೆ.

ಗೋಪಾಲ್ ದೇಶಪಾಂಡೆ ಕೂಡ ಗಮನ ಸೆಳೆಯುತ್ತಾರೆ. ದೀಪಕ್ ಶೆಟ್ಟಿ ಖಳನಾಗಿ ಆವರಿಸಿದ್ದಾರೆ. ತೆರೆ ಮೇಲೆ ಬರುವ ಪ್ರತಿ ಪಾತ್ರಗಳು ಅಚ್ಚು ಕಟ್ಟಾಗಿ ಕೆಲಸ‌ ಮಾಡಿವೆ.
ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಇಲ್ಲಿ ಹೈಲೆಟ್ ಆಗಿದೆ. ಬರುವ ಹಾಡೊಂದು ಪರವಾಗಿಲ್ಲ. ಕ್ಯಾಮೆರಾ ಕೂಡ ಟೋಬಿಯನ್ನು ಅಂದಗಾಣಿಸಿದೆ.

Categories
ಸಿನಿ ಸುದ್ದಿ

ಹಿರಿಯ ಸಿನಿಮಾ‌ ಪತ್ರಕರ್ತ ಸುಬ್ರಹ್ಮಣ್ಯ(ಬಾನಾಸು) ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಕೇಂದ್ರ ಸರ್ಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿವೆ. ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ ಪ್ರಶಸ್ತಿಯು ಕನ್ನಡದ ಚಲನಚಿತ್ರ ಪತ್ರಕರ್ತರ ಪಾಲಾಗಿದೆ. ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (Subramanya Badoor) ಅವರಿಗೆ ಈ ಬಾರಿ ದೊರೆತಿದೆ. ಸಿನಿಮಾ ರಂಗದಲ್ಲಿ ಬಾ.ನಾ.ಸು. ಅವರು ಹಲವು ದಶಕಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ ಎರಡು ಬಾರಿ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ಪ್ರಶಸ್ತಿಯು ಕನ್ನಡಿಗರ ಪಾಲಾಗಿತ್ತು, ಬ್ಯಾಂಕ್ ಉದ್ಯೋಗಿಯಾಗಿದ್ದ ಎನ್.ಕೆ ರಾಘವೇಂದ್ರ, ಉಪನ್ಯಾಸಕರಾಗಿದ್ದ ಮನು ಚಕ್ರವರ್ತಿ ಅವರು ಈ ಹಿಂದೆ ಇದೇ ಪ್ರಶಸ್ತಿಯನ್ನು ಪಡೆದಿದ್ದಾರೆ.

Categories
ಸಿನಿ ಸುದ್ದಿ

ರೂಪೇಶ್ ಶೆಟ್ಟಿ – ಜಾಹ್ನವಿ ಹೊರಡಿಸಿದ ಅಧಿಪತ್ರ: ಹೊಸ ಸಿನಿಮಾಗೆ ಪೂಜೆ

ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ಇಂದು ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿದೆ. ಈಗಾಗಲೇ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರೂಪೇಶ್ ಸ್ಯಾಂಡಲ್ವುಡ್ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ನಟ ರೂಪೇಶ್ ಶೆಟ್ಟಿ ಮಾತನಾಡಿ, ಬಿಗ್ ಬಾಸ್ ಆದ್ಮೇಲೆ ಕನ್ನಡ ಸಿನಿಮಾ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಬಿಗ್ ಬಾಸ್ ಗೂ ಮುಂಚೆ ಸರ್ಕಸ್ ಎಂಬ ತುಳು ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದೆ. ಆ ಚಿತ್ರದ ಕೆಲಸ ತುಂಬಾ ಇತ್ತು. ಈ ಚಿತ್ರದ ಕೆಲಸ ಮುಗಿಸಿ ಬೇರೆ ಸಿನಿಮಾದ ಒಪ್ಪಿಕೊಳ್ಳುವುದು ಎಂದು ತೀರ್ಮಾನ ಮಾಡಿದ್ದೆ. ದೇವರ ದಯೆಯಿಂದ ಆ ಚಿತ್ರ ಹಿಟ್ ಆಗಿದೆ. 150 ಥಿಯೇಟರ್ ಗಳಲ್ಲಿ ಓಡಿದೆ. ಅಧಿಪತ್ರ ಸಿನಿಮಾ ನಿರ್ದೇಶಕರು ಕಥೆ ಹೇಳಿದಾಗ ಇಂಟ್ರೆಸ್ಟ್ ಎನಿಸಿತು. ಅವರ ಮೊದಲ ಸಿನಿಮಾವಾದರೂ ಸ್ಕ್ರೀನ್ ಪ್ಲೇ ವಿವರಿಸಿದಾಗ ಎಷ್ಟು ತಯಾರಾಗಿದ್ದರೂ ಎಂದರೆ ಪ್ರತಿ ಸೀನ್ ಡ್ರಾಯಿಂಗ್ ಮಾಡಿಕೊಂಡಿದ್ದರು. ನನಗೆ ಅದನ್ನು ನೋಡಿ ತುಂಬಾ ಧೈರ್ಯ ಬಂತು. ಅವರಿಗೆ ಒಂದು ವಿಷನ್ ಇದೆ. ಈ ಕಾರಣದಿಂದ ಅಧಿಪತ್ರ ಸಿನಿಮಾ ಒಪ್ಪಿಕೊಂಡಿದ್ದೇನೆ. ಸದ್ಯದಲ್ಲಿ ಈ ಚಿತ್ರಕ್ಕಾಗಿ ನನ್ನ ಗೆಟಪ್ ಬದಲಾಗಲಿದೆ ಎಂದರು.

ನಟಿ ಜಾಹ್ನವಿ ಮಾತನಾಡಿ, ಅಧಿಪತ್ರ ಸಿನಿಮಾ ಈಗ ಶುರುವಾಗಿದೆ. ಇವತ್ತು ಮುಹೂರ್ತ ಆಗಿದೆ. ಈ ರೀತಿ ಒಂದು ಸಿನಿಮಾ ಬರ್ತಿದೆ ಅಂದಾಗಲೇ ತುಂಬಾ ಚೆನ್ನಾಗಿ ಪ್ರಮೋಷನ್ ಸಿಕ್ತಿದೆ. ಟೈಟಲ್ ತುಂಬಾ ಕ್ಯಾಚಿಯಾಗಿದೆ. ನನ್ನ ಪಾತ್ರದ ಹೆಸರು ಬೃಹತಿ. ನನ್ನ ಪಾತ್ರದ ರೀತಿ ಲ್ಲಾ ಪಾತ್ರದ ಹೆಸರು ಕೂಡ ವಿಭಿನ್ನವಾಗಿದೆ. ಈ ಸಿನಿಮಾ ತುಂಬಾ ಪಾಸಿಟಿವ್ ಆಗಿದೆ ಎಂದರು.

ನಿರ್ದೇಶಕ ಚಹನ್ ಶೆಟ್ಟಿ ಮಾತನಾಡಿ, ರೂಪೇಶ್ ಶೆಟ್ಟಿ ಹುಟ್ಟಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿದ್ದೆವು. ಆ ದಿನವೇ ನಮಗೆ ಒಳ್ಳೆ ಪ್ರೋತ್ಸಾಹ ಸಿಕ್ಕಿದೆ. ರೂಪೇಶ್ ಶೆಟ್ಟಿ ಅವರ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಲಿದ್ದಾರೆ. ಗಣೇಶ್ ಹಬ್ಬದ ಬಳಿಕ ಶೂಟಿಂಗ್ ಶುರುವಾಗಲಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ.

ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅವರು ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದಾರೆ.

ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಣಕ್ಕಿಳಿದು ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ರೂಪೇಶ್‌ ಶೆಟ್ಟಿ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಇವರು ನಿರ್ದೇಶನ ಮಾಡಿದ ಶಾರ್ಟ್ ಫಿಲಂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ಪಡೆದಿತ್ತು ಹಾಗೂ ಕೆಲವು ಜಾಹಿರಾತು ಗಳಿಗೆ ನಿರ್ದೇಶನ ಮಾಡಿರುವ ಅನುಭವ ಹೊಂದಿರುವ ಚಯನ್ ಶೆಟ್ಟಿ, ಅಧಿಪತ್ರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕೆ
ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ಬಂಡವಾಳ ಹೂಡುತ್ತಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.

Categories
ಸಿನಿ ಸುದ್ದಿ

ನಿಖಿಲ್‌ ಕುಮಾರ್ ಹೊಸ ಸಿನಿಮಾಗೆ ಅದ್ಧೂರಿ ಮುಹೂರ್ತ: ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ

ನಿಖಿಲ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.
ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್ ಡಿ ದೇವೇಗೌಡ ಅವರು ಕಾರ್ಯಕ್ರಮಕ್ಕೆ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿ ನೂತನ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಈಗ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ನಾಯಕನಾಗಿ ನಾನು ನಟಿಸುತ್ತಿದ್ದೇನೆ. ಲಕ್ಷ್ಮಣ್ ಅವರು ಈ ಚಿತ್ರದ ನಿರ್ದೇಶಕರು. ಈ ಹಿಂದೆ “ಸೀತಾರಾಮ ಕಲ್ಯಾಣ” ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಲೈಕಾ ಸಂಸ್ಥೆಯ ಸುಭಾಸ್ಕರನ್ ಅವರು ಆಗಮಿಸಿದ್ದರು.

“ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನೀವು ನಾಯಕರಾಗಿ ನಟಿಸಬೇಕು” ಎಂದು ಸುಭಾಸ್ಕರನ್ ಅವರು ಹೇಳಿದ್ದರು. ಈಗ ಚಿತ್ರ ಆರಂಭವಾಗುತ್ತಿದೆ. ಈ ಚಿತ್ರಕ್ಕಾಗಿ ನಿರ್ದೇಶಕರು ಒಂದು ವರ್ಷದಿಂದ ಬೆಂಗಳೂರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿಖಿಲ್ ಕುಮಾರ್ ತಿಳಿಸಿದರು.

ತಮ್ಮ‌ ತಂಡವನ್ನು ಪರಿಚಯಿಸುತ್ತಾ ಮಾತು ಪ್ರಾರಂಭಿಸಿದ ನಿರ್ದೇಶಕ ಲಕ್ಷ್ಮಣ್, ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ನಾನು ಬರೆದ ಕಥೆಯನ್ನು ಒಪ್ಪಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕರಿಗೆ ಹಾಗೂ ನಾಯಕ ನಿಖಿಲ್ ಕುಮಾರ್ ಅವರಿಗೆ ಧನ್ಯವಾದ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ನೀಡುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ವಿವರಣೆ ನೀಡುತ್ತೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.

ಈ ಚಿತ್ರದಲ್ಲಿ ನಟಿಸುವಂತೆ ನಿಖಿಲ್ ಅವರು ಹೇಳಿದರು. ನಾನು ಕಥೆ ಕೇಳಿ ಒಪ್ಪಿಕೊಂಡೆ. ಕಥೆ ಚೆನ್ನಾಗಿದೆ ಎಂದರು ನಟ ಕೋಮಲ್.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರವಿದು. ಚಿತ್ರ ಯಶಸ್ವಿಯಾಗಲಿ ಎಂದು ಲೈಕಾ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ಸುಭಾಸ್ಕರನ್ ಅವರು ಹಾರೈಸಿದರು.

ನಾಯಕಿ ಯುಕ್ತಿ ತರೇಜ ಸಹ ನೂತನ ಚಿತ್ರದ ಕುರಿತು ಮಾತನಾಡಿದರು. ಹಲವಾರು ತಂತ್ರಜ್ಞರು ಹಾಗೂ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಅವ್ರು ಕರಟಕ ಇವ್ರು ದಮನಕ! ಮುಕ್ತಾಯ ಹಂತದಲ್ಲಿ ಶಿವಣ್ಣ-ಪ್ರಭುದೇವ ಸಿನಿಮಾ

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ , ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅಭಿನಯದ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ “ಕರಟಕ ದಮನಕ” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ.

ಚಿತ್ರ ಪ್ರಾರಂಭವಾಗಿ ಒಂದು ವರ್ಷಗಳಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, “ಕರಟಕ ದಮನಕ” ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಇಬ್ಬರನ್ನು ಹೆಚ್ಚು ಸಲ ಒಟ್ಟಾಗಿ ನೋಡಿದಾಗ “ಕರಟಕ ದಮನಕ” ಎನ್ನುವುದು ಉಂಟು. ನಮ್ಮ ಚಿತ್ರದಲ್ಲಿ ಈ ಪಾತ್ರಗಳನ್ನು ಶಿವಣ್ಣ ಹಾಗೂ ಪ್ರಭುದೇವ ಮಾಡಿದ್ದಾರೆ.

ಅವರಿಬ್ಬರ ಎನರ್ಜಿ ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯ ಏಳು ಹಾಡುಗಳು ಚಿತ್ರದಲ್ಲಿವೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಇದ್ದಾರೆ.
ನಾನು ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಸಹ ನಟಿಸಿದ್ದೇವೆ. ತೊಂಭತ್ತು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡಿನ ಚಿತ್ರೀಕರಣ ಬಾಕಿ ಇದೆ ಎಂದರು.

ನಮ್ಮ ಸಂಸ್ಥೆಯಿಂದ ಶಿವರಾಜಕುಮಾರ್ ಅವರ ಚಿತ್ರ ಬಂದು ಬಹಳ ವರ್ಷಗಳಾಗಿತ್ತು. ಪ್ರಭುದೇವ ಅವರ ಚಿತ್ರ ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಈ ಇಬ್ಬರು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಯೋಗರಾಜ್ ಭಟ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಹರಿಕೃಷ್ಣ ಸುಮಧುರ ಹಾಡುಗಳನ್ನು ನೀಡುತ್ತಿದ್ದಾರೆ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

ರಾಕ್ ಲೈನ್ ಪ್ರೊಡಕ್ಷನ್ಸ್ ನನ್ನ ಕುಟುಂಬವಿದಂತೆ. ಇನ್ನು ಯೋಗರಾಜ್ ಭಟ್ ಅವರ ಚಿತ್ರಗಳು ನನಗೆ ಇಷ್ಟ. ಅವರ ಎಷ್ಟೋ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೇನೆ. ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಸಂತೋಷ. ಗೆಳೆಯ ಪ್ರಭುದೇವ ಹಾಗೂ ನಾನು ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದೇವೆ. ಈ ಚಿತ್ರದಲ್ಲೂ ನಾವಿಬ್ಬರು ಸ್ನೇಹಿತರಾಗಿಯೇ ನಟಿಸುತ್ತಿದ್ದೇವೆ ಎಂದು ಶಿವರಾಜಕುಮಾರ್ ತಿಳಿಸಿದರು.

ಶಿವರಾಜಕುಮಾರ್ ಅವರ ಎನರ್ಜಿ ನೋಡಿದರೆ ಖುಷಿಯಾಗುತ್ತದೆ. ಅವರ ಜೊತೆ ನಟಿಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ. ಯೋಗರಾಜ್ ಭಟ್ ಅವರ ನಿರ್ದೇಶನ ಹಾಗೂ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಪ್ರಭುದೇವ.

ನಾಯಕಿಯರಾದ ನಿಶ್ವಿಕಾ ನಾಯ್ಡು, ಪ್ರಿಯ ಆನಂದ್, ಹಿರಿಯ ಕಲಾವಿದರಾದ ಮುಖ್ಯ ಮಂತ್ರಿ ಚಂದ್ರು, ತನಿಕೆಲ್ಲ ಭರಣಿ
ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ‌ಛಾಯಾಗ್ರಹಣದ ಬಗ್ಗೆ ಸಂತೋಷ್ ರೈ ಪಾತಾಜೆ ಮಾತನಾಡಿದರು.

Categories
ಸಿನಿ ಸುದ್ದಿ

ಅನಿರುದ್ಧ್ ಅಡುಗೆ ಹೇಗೆ ಮಾಡ್ತಾರೆ ಗೊತ್ತಾ? ಶೆಫ್ ಚಿದಂಬರನಿಗೆ ಬಾಣಸಿಗರ ತರಬೇತಿ!

ನಟ ಅನಿರುದ್ದ್ ನಾಯಕರಾಗಿ ನಟಿಸುತ್ತಿರುವ ಶೆಫ್ ಚಿದಂಬರ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿತ್ತು. ಈಗ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಅನಿರುದ್ದ್ ಈ ಚಿತ್ರದಲ್ಲಿ ಶೆಫ್” ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅನಿರುದ್ದ್ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅನಿರುದ್ದ್ ಅವರಿಗೆ ಹೆಸರಾಂತ ಬಾಣಸಿಗರು ತರಬೇತಿ ನೀಡುತ್ತಿದ್ದಾರೆ. ಈ ಟ್ರೈನಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಂ.ಆನಂದರಾಜ್ ನಿರ್ದೇಶಿಸುತ್ತಿದ್ದಾರೆ. ರೆಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ ಈ ಚಿತ್ರದ ನಾಯಕಿಯರು.

Categories
ಸಿನಿ ಸುದ್ದಿ

ಹೊಸ ಬಾಳಿಗೆ ಜೊತೆಯಾದ ನಟಿ ಹರ್ಷಿಕಾ, ಭುವನ್: ಕೊಡವ ಸಂಪ್ರದಾಯದ ಮದುವೆ

ಕೊಡಗಿನ ವಿರಾಜಪೇಟೆಯ ಅಮ್ಮಾತಿ ಕೊಡವ ಸಮಾಜದಲ್ಲಿ ಆಗಸ್ಟ್ 24ರಂದು ನಟಿ ಹರ್ಷಿಕಾ ಹಾಗು ನಟ‌ ಭುವನ್ ಅವರ ನಡೆದ ವಿವಾಹ ವಿಜೃಂಭಣೆಯಿಂದ ನೆರವೇರಿತು. ಎರಡು ದಿನಗಳ ಕಾಲ ನಡೆದ ಕೊಡವ ಶೈಲಿಯ ಅದ್ದೂರಿ ವಿವಾಹಕ್ಕೆ ಅನೇಕ ಸಿನಿಮಾ ತಾರೆಯರು‌ ಸಾಕ್ಷಿಯಾದರು. ಮೊದಲ ದಿನ ಊರು ಕೂಡುವ ಶಾಸ್ತ್ರ ನಡೆಯಿತು. ಊರು ಕೂಡವ ಶಾಸ್ತ್ರದ ದಿನವೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯಧಾರಣೆ ಆಯಿತು.

ನಂತರ ವಧು ಮತ್ತು ವರ ಇಬ್ಬರೂ ಪರಸ್ಪರ ನೋಡುವ ಆಗಿಲ್ಲ. ಎರಡನೇ ದಿನ ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ ನೆರವೇರಿತು.

ಬೆಳಗ್ಗೆ ಬಳೆ ಶಾಸ್ತ್ರನಂತರ ಪೊಂಬಣ ಪೂಜೆ, ಅಂದರೆ ವರ ಪೂಜೆ ರೀತಿಯ ಪೂಜೆ.ಹುಡುಗ ಮಂಟಪಕ್ಕೆ ಬಂದು ಬಾಳೆ ಕಟ್ ಮಾಡಲು ಹೊರಟು ಬಾಳೆ ಕಡೆದು ಬರುವ ಪದ್ಧತಿ ನಡೆಯಿತು. ಆಗ ಅವನನ್ನ ಹುಡುಗಿ ಮನೆಯವರು ಕರೆದುಕೊಂಡು ಹೋಗುವುದು ವಾಡಿಕೆ. ಅದೂ ಕೂಡ ವಿಶೇಷವಾಗಿ‌ ನೆರವೇರಿತು.

ನಂತರ ಬಂದ ಹುಡುಗನಿಗೆ ಹುಡುಗಿ ಅಮ್ಮ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸುವ ಶಾಸ್ತ್ರ ನಡೆಯಿತು.
ಅದಾದ ಮೇಲೆ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತಕ್ಕೆ ಅಣಿಯಾಗುತ್ತಾರೆ.

ಮದುವೆಗೆ ಬಂದ ಅತಿಥಿಗಳೆಲ್ಲ ಹುಡುಗ ಹುಡುಗಿಗೆ ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡುತ್ತಾರೆ.
ಕೊನೆಯಲ್ಲಿ ಹುಡುಗ ಹುಡುಗಿ ಕೈ ಹಿಡಿದು ಎದ್ದು ನಿಲ್ಲುತ್ತಾರೆ.

ಬಗೆ ಬಗೆಯ ಭೋಜನ

ಕೊಡವ ಜೋಡಿಯ ಮದ್ವೆಯಲ್ಲಿ ಬಗೆ ಬಗೆಯ ಭೋಜನ ಸಿದ್ಧವಾಗಿತ್ತು.
ನಾನ್ ವೆಜ್, ವೆಜ್ ಎರಡು ಶೈಲಿಯ ಊಟದ‌ ವ್ಯವಸ್ಥೆ ಆಯೋಜಿಸಲಾಗಿತ್ತು. ಕೊಡವ ಶೈಲಿಯ , ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರ್ಯಾನಿ, ಮಟನ್ ಪ್ರೈ, ಚಿಕನ್ ಪ್ರೈ ಇತ್ಯಾದಿ ರೆಡಿಯಾಗಿತ್ತು.

ವೆಜ್ ಪ್ರಿಯರಿಗೆ ವೆಜಿಟೇಬಲ್ ಪಲಾವ್ , ಅಲಸಂದೆ ಪಲ್ಯ,ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು ,ವೆಜ್ ಕುರ್ಮಾ ಇತ್ಯಾದಿ ಖಾದ್ಯ ತಯಾರಾಗಿತ್ತು.

Categories
ಸಿನಿ ಸುದ್ದಿ

ಡಾಲಿ ಈಗ ಜೀಬ್ರಾ! ಹುಟ್ದಬ್ಬಕ್ಕೆ ಜೀಬ್ರಾ ಪೋಸ್ಟರ್ ರಿಲೀಸ್

ಡಾಲಿ ಧನಂಜಯ್ ಹುಟ್ಟು ಹಬ್ಬಕ್ಕೆ ಒಂದಷ್ಟು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಆ ಸಾಲಿಗೆ ಈಗ ‘ಜೀಬ್ರಾ’ ಸಿನಿಮಾ ಕೂಡ ಸೇರಿದೆ. ವಿಶೇಷ ಅಂದರೆ ಈ ಸಿನಿಮಾ ಸದ್ದಿಲ್ಲದೆ ಚಿತ್ರೀಕರಣ ವಕೂಡ ನಡೆದಿದೆ.

ಮಲ್ಟಿ ಸ್ಟಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಡಾಲಿ ಎಂಟ್ರಿ ಕೊಡುತ್ತಿದ್ದಾರೆ.
ಜೀಬ್ರಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದ್ದಾರೆ ಡಾಲಿ ಧನಂಜಯ.

ಅಂದಹಾಗೆ ಈ ಸಿನಿಮಾಗೆ ಈ ಶ್ವರ್ ಕಾರ್ತಿಕ್ ನಿರ್ದೇಶಕರು.
ತಮಿಳು ನಿರ್ಮಾಣ ಸಂಸ್ಥೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಜೀಬ್ರಾ ಸಿನಿಮಾಗೆ ಎಸ್ ಎನ್ ರೆಡ್ಡಿ,ಬಾಲ ಸುಂದರಂ, ದಿನೇಶ್ ಸುಂದರಂ ನಿರ್ಮಾಪಕರು.
ಚಿತ್ರಕ್ಕೆ ರವಿ ಬಸರೂರು ಸಂಗೀತವಿದೆ.


ಡಾಲಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಜೀಬ್ರಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಜೀಬ್ರಾ ತಯಾರಾಗುತ್ತಿದೆ.
ಈಗಾಗಲೇ ಶೇ. 90ರಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡ, ರಿಲೀಸ್ ಗೆ ಸಿದ್ದವಾಗಿರುವ ಈ ಸಿನಿಮಾವನ್ನು ಸದ್ಯದಲ್ಲೆ ಅಭಿಮಾನಿಗಳ ಮುಂದೆ ತರಲು ತಯಾರಿ ನಡೆಸುತ್ತಿದೆ.

Categories
ಸಿನಿ ಸುದ್ದಿ

ಗಬ್ರು ಸತ್ಯನ ಪರಿಚಯವಿದು! ಉತ್ತರಕಾಂಡದಲ್ಲಿ ಡಾಲಿ ಹೇಗಿದ್ದಾರೆ ಗೊತ್ತಾ? ಟೀಸರ್ ರಿಲೀಸ್ ಆಯ್ತು

ನಟ-ನಿರ್ಮಾಪಕ ಡಾಲಿ ಧನಂಜಯ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ “ಉತ್ತರಕಾಂಡ” ಚಿತ್ರತಂಡದವರು ಚಿತ್ರದಲ್ಲಿನ ಧನಂಜಯ್ ಅವರ ಪಾತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ಹುಟ್ಟುಹಬ್ಬದ ಪೂರ್ವಭಾವಿಯಾಗಿ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು.

ಧನಂಜಯ್ ಅವರ ಪಾತ್ರವಾದ “ಗಬ್ರು ಸತ್ಯ”ನ ಪರಿಚಯಿಸುವ ಟೀಸರ್ ಬಿಡುಗಡೆ ಮಾಡಲಾಯಿತು. ಈ ಟೀಸರ್ ಈಗಾಗಲೇ ಹಿಟ್ ಆಗಿದ್ದು, ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ.

“ಉತ್ತರಕಾಂಡ” ಚಿತ್ರವು ಉತ್ತರ ಕರ್ನಾಟಕದ ಪ್ರದೇಶದಲ್ಲಿ ನಡೆಯುವ ಕಥೆಯಾಗಿದ್ದು, ಗಬ್ರು ಸತ್ಯ ಎಂಬ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತು ದಿಗಂತ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕೆ ಆರ್ ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ರೋಹಿತ್ ಪದಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಮತ್ತು ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕಿದೆ.

“ಉತ್ತರಕಾಂಡ” , ಕೆ ಅರ್ ಜಿ ಸ್ಟುಡಿಯೋಸ್ ಮತ್ತು ಧನಂಜಯ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದ ಅತೀ ನಿರೀಕ್ಷಿತ ಚಿತ್ರವಾಗಿದೆ.

error: Content is protected !!