Categories
ಸಿನಿ ಸುದ್ದಿ

ರಮೇಶ್, ಗಣೇಶ್ ಹೊಸ ಚಿತ್ರ ಕ್ಕೆ ವಿಖ್ಯಾತ್ ನಿರ್ದೇಶನ

ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಮೂಲಕ ಪುಷ್ಪಕ ವಿಮಾನ, ಇನ್ಸ್ ಪೆಕ್ಟರ್ ವಿಕ್ರಂ, ಮಾನ್ಸೂನ್ ರಾಗದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ನಿರ್ಮಾಪಕ ವಿಖ್ಯಾತ್ ತಮ್ಮ ಸಂಸ್ಥೆಯ ನಿರ್ಮಾಣದ ಆರನೇ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಪ್ರಥಮ ಪ್ರಯತ್ನದಲ್ಲೇ ಮಲ್ಟಿ ಸ್ಟಾರ್ ‌ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.


ಸ್ಟಾರ್ ನಟರಾದ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರನ್ನೂ ನಾಯಕರನ್ನಾಗಿಟ್ಟುಕೊಂಡು ದೇಶ ಕಾಯುವ ವೀರಯೋಧರ ಕುರಿತಾಗಿ ಒಂದಷ್ಟು ಮಹತ್ವದ ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.

ಇದರಲ್ಲಿ ವೀರ ಸೇನಾನಿಗಳ ನಡುವೆ ನಾಯಕರಿಬ್ಬರೂ ವಿದೂಷಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈಗ ಉದ್ಭವಿಸಿರುವ ಎಲ್ಲಾ ಕುತೂಹಲಗಳಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ವಿಖ್ಯಾತ್ ಅವರೇ ಉತ್ತರ ನೀಡಬೇಕಿದೆ.

Categories
ಸಿನಿ ಸುದ್ದಿ

ರಮೇಶ್ ಅರವಿಂದ್ ಹೊಸ ಸಿನಿಮಾ ಅನೌನ್ಸ್: ದೈಜಿ ಎಂಬ ಕಾಳಜಿ ಚಿತ್ರ!

ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈ ಜೋಡಿಸುತ್ತುದ್ದಾರೆ. ಚಿತ್ರದ ಶೀರ್ಷಿಕೆ ‘ದೈಜಿ’

ಈ ಚಿತ್ರವನ್ನು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡ ಕಿರು ಚಿತ್ರ ಸುಳ್ಳೇ ಸತ್ಯ, ಪವನ್ ಕುಮಾರ್ ರವರ ಲೂಸಿಯಾ, ಡಾಲಿ ಧನಂಜಯ್ ಅವರು ನಟಿಸಿದ ‘ಬದ್ಮಾಶ್’ ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು.

ಚಿತ್ರದ ಶೀರ್ಶಿಕೆ ‘ದೈಜಿ’ ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳು.

ಚಿತ್ರಕ್ಕೆ ಒಂದು ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ. ಚಿತ್ರವು ಮಿಸ್ಟರಿ ಅಥವಾ ಹಾರರ್ ಜ಼ಾನರ್ ಗೆ ಬರುತ್ತದೆ. ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ರವರು ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದಾರೆ.

ಚಿತ್ರದ ನಾಯಕಿಯ ಹುಡುಕಾಟ ಪ್ರಾರಂಭವಾಗಿದೆ. ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ 25 ವರ್ಷಗಳ ಸಂಭ್ರಮ ಆಚರಿಸಿದ ಅಮೆರಿಕ ಅಮೆರಿಕ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ.

ಇದು ಬಹುಮುಖ ಪ್ರತಿಭೆಯ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡ ನಟ ಶ್ರೀ ರಮೇಶ್ ಅರವಿಂದ ರವರ 106 ನೇ ಚಿತ್ರ. ತನ್ನ ಸಿನಿ ಜೀವನದಲ್ಲಿ ವಿಭಿನ್ನ ಪಾತ್ರಗಳಲ್ಲಿಲ್ ಮಿಂಚಿದ ರಮೇಶ್ ರವರ ಸ್ಮರಣೀಯ ಚಿತ್ರಗಳೆಂದರೆ ಅಮೃತವರ್ಶಿಣಿ, ಅಮೆರಿಕ ಅಮೆರಿಕ, ರಾಮ ಶಾಮ ಭಾಮ, ಶಿವಾಜಿ ಸುರತ್ಕಲ್… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತಮಿಳಿನಲ್ಲಿ ಡ್ಯೂಯೆಟ್, ಸತಿ ಲೀಲಾವತಿ, ಪಂಚತಂತಿರಂ, ಉತ್ತಮ ವಿಲ್ಲಿನ್, ತೆಲುಗು ಚಿತ್ರರಂಗದಲ್ಲಿ ಲಿಟಲ್ ಸೋಲ್ಜರ್ಸ್, ಮಲಯಾಳಂ ನಲ್ಲಿ ಅವನ್ ಅನಂತ ಪದ್ಮನಾಭನ್.. ಹೀಗೆ ಬಹು ಭಾಷಾ ತಾರೆಯಾದ ರಮೇಶ್ ಅರವಿಂದ್ ರವರು ದೈಜಿ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡವು ಚಿತ್ರೀಕರಣವನ್ನು ಬಹಳ ಹುಮ್ಮಸ್ಸಿನಿಂದ ಎದುರು ನೋಡುತ್ತಿದೆ.

Categories
ಸಿನಿ ಸುದ್ದಿ

ರಾಘವ್ ಲಾರೆನ್ಸ್, ಕಂಗನಾ ನಟನೆಯ ಚಂದ್ರಮುಖಿ 2 ಪ್ರೇಕ್ಷಕರ ಮುಂದೆ ಬರಲು ರೆಡಿ: ಸೆಪ್ಟೆಂಬರ್ 28ಕ್ಕೆ ಲೈಕಾ ನಿರ್ಮಾಣದ ಚಿತ್ರ

ನಿರ್ದೇಶಕ ಕಂ ನಟ ರಾಘವ ಲಾರೆನ್ಸ್ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಹಾರರ್ ಕಾಮಿಡಿ ಸಿನಿಮಾ ಸೆಪ್ಟಂಬರ್ 19 ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ‘ಚಂದ್ರಮುಖಿ 2’ ಈ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ. ಅಂದ್ರೆ ಸೆಪ್ಟಂಬರ್ 28ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ-2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.

ಸುಭಾಷ್ ಕರಣ್ ಅವರು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಮೂಲಕ ‘ಚಂದ್ರಮುಖಿ 2’ ಚಿತ್ರ ನಿರ್ಮಿಸಿದ್ದಾರೆ. ಎಂ.ಎಂ. ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಡಿ. ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಈ ಸಿನಿಮಾಗಿದೆ. ಕಂಗನಾ ರಣಾವತ್ ಜೊತೆ ರಾಘವ ಲಾರೆನ್ಸ್, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ವಡಿವೇಲು, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಮುಂತಾದವರು ನಟಿಸಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

Categories
ಸಿನಿ ಸುದ್ದಿ

ಅಮೇರಿಕಾದಲ್ಲಿ ಮೈ ಹೀರೋ! ಮೂರನೇ ಹಂತದ ಚಿತ್ರೀಕರಣ ಮುಕ್ತಾಯ: ಚಿತ್ರದಲ್ಲಿ ಹಾಲಿವುಡ್ ನಟ ಎರಿಕ್ ರಾಬರ್ಟ್ಸ್ ನಟನೆ

ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ” ಮೈ ಹೀರೋ” ಚಿತ್ರದ ಚಿತ್ರೀಕರಣ
ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್ , ಬಿಗ್ ಸರ್ ಇನ್ನು ಮುಂತಾದ ಕಡೆ ಸುಮಾರು ಹದಿನೈದು ದಿನಗಳ ಕಾಲ ನಡೆದಿದೆ‌. ಇದರೊಂದಿಗೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಹಾಲಿವುಡ್ ನ ಖ್ಯಾತ ತಂತ್ರಜ್ಞರು ಕೂಡ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಚಿತ್ರದ ವಿಶೇಷಗಳೊಲದಲ್ಲೊಂದು. ಜೊತೆಗೆ ಹಾಲಿವುಡ್‍ನ ಖ್ಯಾತ ನಟರಾದ “ಎರಿಕ್ ರಾಬರ್ಟ್ಸ್” ಹಾಗೂ ಹಾಲಿವುಡ್‍ನ ಮತ್ತಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಅಷ್ಟೇ ಅಲ್ಲದೆ ಈ ಚಿತ್ರದ ಮತ್ತೊಂದು ವಿಶೇಷತೆಯ ಬಗ್ಗೆ ನಿರ್ದೇಶಕರಾದ ಅವಿನಾಶ್ ವಿಜಯಕುಮಾರ್ ಅವರು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಎರಿಕ್ ರಾಬರ್ಟ್ಸ್, ಮಿಸ್ಸಿಸ್ಸಿಪ್ಪಿಯ ಬಿಲೋಕ್ಸಿಯಲ್ಲಿ ಜನಿಸಿದರು‌. ಅಟ್ಲಾಂಟಾ ಪ್ರದೇಶದ ಸುತ್ತಮುತ್ತ ಬೆಳೆದರು. ಅವರು ನ್ಯೂಯಾರ್ಕ್ ನಗರದಲ್ಲಿ ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಬರ್ನ್ ದಿಸ್‍ನಲ್ಲಿ ಬ್ರಾಡ್‍ವೇಯಲ್ಲಿನ ಪಾತ್ರಕ್ಕಾಗಿ ಥಿಯೇಟರ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದರು.


“ರನ್‍ ಅವೇ ಟ್ರೈನ್” ಚಿತ್ರದಲ್ಲಿನ ಪಾತ್ರಕ್ಕಾಗಿ ಎರಿಕ್ ರಾಬರ್ಟ್ಸ್ ರವರು ಅಕಾಡೆಮಿ ಪ್ರಶಸ್ತಿ ಮತ್ತು “ಸ್ಟಾರ್ 80” ಮತ್ತು “ಕಿಂಗ್ ಆಫ್ ದಿ ಜಿಪ್ಸಿ” ಚಿತ್ರದಲ್ಲಿನ ಪಾತ್ರಕ್ಕಾಗಿ ಮೂರು ಬಾರಿ ಗೋಲ್ಡನ್ ಗ್ಲೋಬ್ ನಾಮಿನಿಯಾಗಿದ್ದಾರೆ.
ಇದರ ಜೊತೆಗೆ, “ಎ ಗೈಡ್ ಟು ರೆಕಗ್ನೈಸಿಂಗ್” “ಯುವರ್ ಸೇಂಟ್ಸ್” ಮತ್ತು “ಇಟ್ಸ್ ಮೈ ಪಾರ್ಟಿ”ಯಲ್ಲಿನ ಪಾತ್ರಕ್ಕಾಗಿ ರಾಬರ್ಟ್ಸ್ ಸನ್‍ಡಾನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಮೆಚ್ಚುಗೆಯನ್ನು ಪಡೆದರು. ಆಸ್ಟಿನ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಮತ್ತು ಅದೇ ವರ್ಷ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ರಾಬರ್ಟ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.


ದಿ ಡಾರ್ಕ್ ನೈಟ್, ಫೈನಲ್ ಅನಾಲಿಸಿಸ್, ಮತ್ತು ಪಾಲ್ ಥೋಮನ್ ಆಂಡರ್ಸನ್ ಅವರ ಇನ್ಹೆರೆಂಟ್ ವೈಸ್ ಫಾರ್ ವಾರ್ನರ್ ಬ್ರದರ್ಸ್, ಮಿಲೇನಿಯಮ್ ಫಿಲ್ಮ್ಸ್ ಲವ್ಲೇಸ್ ಮತ್ತು ದಿ ಎಕ್ಸ್‍ಪೆಂಡಬಲ್ಸ್ ಫಾರ್ ಲಯನ್ಸ್‍ಗೇಟ್‍ನಲ್ಲಿನ ಅವರ ಪಾತ್ರಗಳು ಇತರ ಗಮನಾರ್ಹ ಪ್ರದರ್ಶನಗಳನ್ನು ಒಳಗೊಂಡಿವೆ.
ವಾರ್ನರ್ ಬ್ರದರ್ಸ್ ಜರ್ಮನಿ ನಿರ್ಮಾಣದ “ಹೆಡ್ ಫುಲ್ ಆಫ್ ಹನಿ”ಯಲ್ಲಿ ರಾಬರ್ಟ್ಸ್, “ಮ್ಯಾಟ್ ದಿಲ್ಲನ್” ಅವರ ವೈದ್ಯರ ಪಾತ್ರ ಮಾಡಿದ್ದಾರೆ.

“ಮೈ ಹೀರೋ” ಚಿತ್ರಕ್ಕೆ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್ ಟಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಮುತ್ತುರಾಜ್ ಟಿ ಅವರ ಸಂಕಲನ ‘ಮೈ ಹೀರೋ” ಚಿತ್ರಕ್ಕಿದೆ. ಜಿಲಾಲಿ ರೆಜ್ ಕಲ್ಲಾಹ್, ಮಾಸ್ಟರ್ ವೇದಿಕ್, ಎರಿಕ್ ರಾಬರ್ಟ್ಸ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಭಗೀರಥನಿಗೆ ಚಾಲನೆ

ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ.ರಮೇಶ್ ಹಾಗೂ ಬಿ.ಭೈರಪ್ಪ ಮೈಸೂರು ನಿರ್ಮಿಸುತ್ತಿರುವ ಹಾಗೂ ರಾಮ್ ಜನಾರ್ದನ್ ನಿರ್ದೇಶನದ “ಭಗೀರಥ” ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ‌ಮೊದಲ ಸನ್ನಿವೇಶಕ್ಕೆ ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಸಿರಿ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಕ್ಯಾಮೆರಾ ಚಾಲನೆ ಮಾಡಿದರು.

ನಾನು 2005 ರಲ್ಲಿ “ಬಾಯ್ ಫ್ರೆಂಡ್” ಮೂಲಕ ನನ್ನ ಚಿತ್ರರಂಗದ ಜರ್ನಿ ಆರಂಭವಾಯಿತು. ನಂತರ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗೂ ನಿರ್ದೇಶಿಸಿದ್ದೇನೆ. ಈಗ “ಭಗೀರಥ” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯಾವುದಾದರೂ ಒಂದು ಕೆಲಸವನ್ನು ಬಿಡದೆ ಸಾಧಿಸುವುದನ್ನು “ಭಗೀರಥ” ಪ್ರಯತ್ನ ಎನ್ನುತ್ತಾರೆ. ಈ ಪದಕ್ಕೂ ನಮ್ಮ ಚಿತ್ರಕ್ಕೂ ಸಂಬಂಧವಿದೆ‌. ಇಂದು ಮುಹೂರ್ತ ಸಮಾರಂಭ ನೆರವೇರಿದೆ. ಹತ್ತನೇ ತಾರೀಖಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಒಂದೇ ಹಂತದಲ್ಲಿ ನಡೆಯಲಿದೆ. ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿ ಕಾಳೆ, ಬಾಲ ರಾಜವಾಡಿ, ಸುರಭಿ ರವಿ, ನಯನ, ನಿಖಿತ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರು ಮಠಾಧಿಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ಕಥೆ ಮೆಚ್ಚಿ, ರಮೇಶ್ ಹಾಗೂ ಭೈರಪ್ಪ ಮೈಸೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದರು‌.

“ಜಮಾನ” ಚಿತ್ರದಲ್ಲಿ ನಟಿಸಿದ್ದೆ ಎಂದು ಮಾತು ಆರಂಭಿಸಿದ ಜಯಪ್ರಕಾಶ್, ಈಗ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿರ್ದೇಶಕರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು.

ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ನಾಯಕಿ ಚಂದನ ರಾಘವೇಂದ್ರ ತಿಳಿಸಿದರು‌.

ನಾನು ನಿರ್ದೇಶನ ಮಾಡಿರುವುದು ಹೆಚ್ಚು. ಅಭಿನಯಿಸಿರುವುದು ಕಡಿಮೆ. ನಿರ್ದೇಶಕರು ಮಠಾಧಿಪತಿ ಪಾತ್ರವನ್ನು ನೀವೇ ಮಾಡಬೇಕೆಂದರು ಮಾಡುತ್ತಿದ್ದೇನೆ ಎಂದು ಸಾಯಿಪ್ರಕಾಶ್ ಹೇಳಿದರು.

ನಿರ್ಮಾಪಕರಾದ ರಮೇಶ್ ಹಾಗೂ ಭೈರಪ್ಪ ಮೈಸೂರು ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು.‌ ಚಿತ್ರದಲ್ಲಿ ನಟಿಸುತ್ತಿರುವ ನಯನ ಹಾಗೂ ಚೇತನ್ ತಮ್ಮ ಪಾತ್ರದ ಕುರಿತು ಮಾತನಾಡಿದರು.

ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಜನಾರ್ದನ್ ಅವರ ಜೊತೆ ಇದು ಮೊದಲ ಚಿತ್ರ. ಮಾಧ್ಯಮ ಹಾಗೂ ಉದ್ಯಮದ ನಡುವೆ “ಭಗೀರಥ” ಚಿತ್ರದ ಕಥೆ ಸಾಗುತ್ತದೆ ಎನ್ನುತ್ತಾರೆ ಸಂಭಾಷಣೆಕಾರ ಜೆ.ಎಂ.ಪ್ರಹ್ಲಾದ್.

ಪ್ರದೀಪ್ ವರ್ಮ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸೂರಿ ಚಿತ್ತೂರು ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ “ಭಗೀರಥ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ವಿಜಯ್ ಸೂರ್ಯ ಈಗ ವೀರಪುತ್ರ! ಅಗ್ನಿಸಾಕ್ಷಿ ಹೀರೋನ ಫಸ್ಟ್ ಲುಕ್

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆ ಮನ ಗೆದ್ದಿದ್ದ ವಿಜಯ್ ಸೂರ್ಯ ವೀರಪುತ್ರನಾಗಿದ್ದಾರೆ. ಅಂದರೆ ವಿಜಯ್ ಹುಟ್ಟುಹಬ್ಬದ ಅಂಗವಾಗಿ ಅವರು ನಟಿಸುತ್ತಿರುವ ಹೊಸ ಸಿನಿಮಾ ವೀರಪುತ್ರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಉದ್ದ ಕೂದಲು ಬಿಟ್ಟು, ರಡಗ್ ಅವತಾರದಲ್ಲಿ ಚಾಕಲೇಟ್ ಹೀರೋ ಕಾಣಿಸಿಕೊಂಡಿದ್ದಾರೆ.

ಡಾ.ದೇವರಾಜ್.ಎಸ್ ವೀರಪುತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಹೆಜ್ಜೆ. ಈ ಹಿಂದೆ ದೇವರಾಜ್ ಸಪ್ಲಿಮೆಂಟರಿ ಎಂಬ ಚಿತ್ರ ನಿರ್ದೇಶಿಸಿದ್ದರು. ಮೆಡಿಕಲ್ ಮಾಫಿಯಾ ಹಾಗೂ ಫ್ಯಾಮಿಲಿ ರಿವೇಂಜ್ ಕಥಾಹಂದರ ಹೊಂದಿರುವ ವೀರಪುತ್ರ ಸಿನಿಮಾಗೆ ದೇವರಾಜ್ ನಿರ್ದೇಶನದ ಜೊತೆಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಸಂಪ್ಲಿಮೆಂಟರಿ, ಧೀರಸಾಮ್ರಾಟ್ ಸಿನಿಮಾಗಳನ್ನು ನಿರ್ಮಿಸಿದ್ದ ಗುರು ಬಂಡಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ.

ಸ್ಟೈಲೀಶ್ ಸ್ಟಾರ್ ವಿಜಯ್ ಸೂರ್ಯ ಜೋಡಿಯಾಗಿ ಲೇಖಚಂದ್ರ ನಟಿಸುತ್ತಿದ್ದು, ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ. ರವಿಚಂದ್ರನ್ ಸಂಕಲನ, ಉದಯ್ ಆದಿತ್ಯ ಛಾಯಾಗ್ರಹಣ, ಪ್ರಮೋದ್ ಮರವಂತೆ ಸಾಹಿತ್ಯ ವೀರಪುತ್ರ ಚಿತ್ರಕ್ಕಿದೆ. ಬೆಂಗಳೂರು, ಹೈದ್ರಾಬಾದ್ ನಲ್ಲಿ 60ರಷ್ಟು ಶೂಟಿಂಗ್ ನಡೆಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣಕ್ಕೆ ಮುಂದಿನ ತಿಂಗಳಿನಿಂದ ಕಿಕ್ ಸ್ಟಾರ್ಟ್ ಸಿಗಲಿದೆ. ಇನ್ನುಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲಿಯೇ ಚಿತ್ರತಂಡ ಮತ್ತಷ್ಟು ಅಪ್ ಡೇಟ್ ಕೊಡಲಿದೆ.

ಇಷ್ಟಕಾಮ್ಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದ ವಿಜಯ್ ಸೂರ್ಯ ಸದ್ಯ ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ವೀರಪುತ್ರನಾಗಿ ಮತ್ತೆ ಬೆಳ್ಳಿಪರದೆಯಲ್ಲಿ ಮಿನುಗಲು ಸಜ್ಜಾಗ್ತಿದ್ದಾರೆ.

Categories
ಸಿನಿ ಸುದ್ದಿ

ಧನ್ವೀರ್ ಹುಟ್ದಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್: ಸಮೃದ್ಧಿ ಫಿಲಂಸ್ ಬ್ಯಾನರ್ ಚಿತ್ರಕ್ಕೆ ರಘುಕುಮಾರ್ ನಿರ್ದೇಶಕ

ಯುವ ನಟ ಧನ್ವೀರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಣೆಯಾಗಿದೆ‌‌‌. ಇದು ಧನ್ವೀರ್ ನಾಯಕರಾಗಿ ನಟಿಸುತ್ತಿರುವ ಐದನೇ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಯುವ ನಿರ್ದೇಶಕ ರಘುಕುಮಾರ್ ಓ ಆರ್ ನಿರ್ದೇಶಿಸುತ್ತಿದ್ದಾರೆ. ಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಇದು ರಘುಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ.
ಈ ಚಿತ್ರ ‘ಸಮೃದ್ಧಿ ಫಿಲಂಸ್’ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.

ರಘುಕುಮಾರ್ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ರಂಗಾಯಣ ರಘು , ರವಿಶಂಕರ್, ತಬಲನಾಣಿ, ಸಾಧುಕೋಕಿಲ ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡುತ್ತೇವೆ ಎಂದು ಸಮೃದ್ಧಿ ಫಿಲಂಸ್ ನಿರ್ಮಾಣ ಸಂಸ್ಥೆ ತಿಳಿಸಿದೆ.

ನಿರ್ದೇಶಕ ರಘುಕುಮಾರ್ ಓ ಆರ್ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು “ಕೋಟಿಗೊಬ್ಬ 3” ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮತ್ತು ‘ದಿ ಬೆಲ್’ ಎಂಬ ಕಿರುಚಿತ್ರ ನಿರ್ಮಿಸಿ ನಿರ್ದೇಶಿಸಿದ್ದಾರೆ.

ದಿ ಬೆಲ್ ಕಿರುಚಿತ್ರ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಅಲ್ಲಿ ಬಿಡುಗಡೆ ಆಗಿದ್ದು ಒಳ್ಳೆಯ ಪ್ರಶಂಸೆ ಗಳಿಸಿಕೊಂಡು ಶಾರ್ಟ್ ಫಿಲ್ಮ್ ಫೆಸ್ಟಿವಲ್ಸ್ ಅಲ್ಲಿ ತುಂಬಾನೇ ಮೆಚ್ಚುಗೆ ಪಡೆದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಚಿತ್ರದ ತಾಂತ್ರಿಕವರ್ಗ ಅದ್ಭುತವಾಗಿದ್ದು ಛಾಯಾಗ್ರಾಹಕರಾಗಿ ಕಾರ್ತಿಕ್ ಹಿನ್ನೆಲೆ ಸಂಗೀತ ಜುಡಾ ಸ್ಯಾಂಡಿ, ಶಬ್ದ ವಿನ್ಯಾಸ ರಾಜನ್ ಹಾಗೂ ಸಂಕಲನ ಉಮೇಶ್ ಆರ್ ಬಿ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೆ ದೀಪಿಕಾ ಪಡುಕೋಣೆ ಬರ್ತಾರ! ಭೀಮಾ ಕೋರೆಗಾಂವ ಸಿನಿಮಾದಲ್ಲಿ ನಟಿಸ್ತಾರಾ?

ಕನ್ನಡಕ್ಕೆ ಈಗಾಗಲೇ ಬಾಲಿವುಡ್ ನಟಿಮಣಿಗಳ ಆಗಗಮನ ಹೊಸದೇನಲ್ಲ. ಆದರೆ, ಈಗ ಬಾಲಿವುಡ್ ಅಂಗಳದಲ್ಲಿ ಬೇಡಿಕೆ ನಟಿಯಾಗಿರುವ ದೀಪಿಕಾ ಪಡಿಕೋಣೆ ಅವರನ್ನು ಕನ್ನಡ ಚಿತ್ರರಂಗಕ್ಕೆ ಪುನಃ ಕರೆತರುವ ಪ್ರಯತ್ನವೊಂದು ನಡೆಯುತ್ತಿದೆ.

ಹೌದು, ಹೀಗಂತ ಹೇಳಿದ್ದು ಬೇರಾರು ಅಲ್ಲ, ನಿರ್ದೇಶಕ ನಾಗಶೇಖರ್. ಅವರು ತಮ್ಮ ಹೊಸ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅವರನ್ನು ಕರೆತರಬೇಕೆಂಬ ಆಸೆ ನನ್ನದು. ಆದರೆ, ಅದು ಎಷ್ಟರ ಮಟ್ಟಿಗೆ ನೆರವೇರುತ್ತೆ ಅನ್ನೋದು ಗೊತ್ತಿಲ್ಲ. ಒಟ್ಟಾರೆ ಅದೊಂದು ದಾಖಲಾಗುವ ಸಿನಿಮಾ ಎಂಬುದು ನಾಗಶೇಖರ್ ಮಾತು.

ಇಷ್ಟಕ್ಕೂ ನಾಗಶೇಖರ್ ಈ ಬಾರಿ ನಿರ್ದೇಶನಕ್ಕೆ ಕೈ ಹಾಕಿರೋದು ‘ಭೀಮಾ ಕೋರೆಗಾಂವ’ ಎಂಬ ಸಿನಿಮಾಗೆ. ಇದು ಕೋರೆಗಾಂವ ಘಟನೆ ಕುರಿತ ಚಿತ್ರ. ಈ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಇಂಥದ್ದೊಂದು ಸಿನಿಮಾ ಮಾಡುವುದು ಸುಲಭವಲ್ಲ.

ಸಾಕಷ್ಟು ತಯಾರಿ ಬೇಕು. ಈ ಸಿನಿಮಾ ಶುರುವಿಗೆ ಮುನ್ನ ಹೇಗೆ ಮಾಡಬೇಕು, ಯಾರೆಲ್ಲಾ ಇರಬೇಕು, ಎಂಬಿತ್ಯಾದಿ ಚರ್ಚೆಗಳು ನಡೆಯಲಿವೆ. ಅಂದಹಾಗೆ, ಈ ಚಿತ್ರವನ್ನು ಛಲವಾದಿ ಕುಮಾರ್ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ಸ್ಟಾರ್ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಎಂಬುದು ವಿಶೇಷ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಮೇರು ನಟರುಗಳು ಕೂಡ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಶೀರ್ಷಿಕೆ ಅನಾವರಣಗೊಂಡಿದೆ.

ಈ ಚಿತ್ರಕ್ಕೆ ಈಗಷ್ಟೇ ಚಾಲನೆ ಸಿಕ್ಕಿದೆ. ಎಲ್ಲವೂ ಚರ್ಚೆಯಾದ ಬಳಿಕ ಮುಂದಿನ ವರ್ಷಕ್ಕೆ ಚಿತ್ರ ಶುರುವಾಗಲಿದೆ ಎಂಬುದು ಚಿತ್ರತಂಡದ ಮಾಹಿತಿ. ಯಾರೆಲ್ಲ ಇರುತ್ತಾರೆ, ತಾಂತ್ರಿಕ ವರ್ಗ ಯಾರು ಎಂಬಿತ್ಯಾದಿ ವಿಷಯಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಸಿನಿಮಾಗೆ ಹಲವಾರು ಚಿಂತಕರು ಜೊತೆಯಾಗಿದ್ದಾರೆ. ಸುಮಾರು ಐವತ್ತು ಮಂದಿ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಇನ್ನು, ನಾಗಶೇಖರ್ ಜೊತೆ ಚಕ್ರವರ್ತಿ ಚಂದ್ರಚೂಡ್ ಕೂಡ ಕೈ ಜೋಡಿಸಿದ್ದಾರೆ. ಸ್ಕ್ರಿಪ್ಟ್ ಕೆಲಸದಲ್ಲಿ ಅವರೂ ಇಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೀಗೊಬ್ಬ ಆದರ್ಶ ರೈತ; ರೈತರೊಬ್ಬರ ರೈತನ ಸಿನಿಮಾ

ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿದೆ‌. ಆದರೆ ರೈತ ಏನು ಮಾಡಬೇಕು? ಏನು ಮಾಡಬಾರದು? ಎಂದು ಹೇಳುವ ಕಥಾಹಂದರ ಹೊಂದಿರುವ “ಆದರ್ಶ ರೈತ” ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟಿ ಪ್ರಿಯಾ ಹಾಸನ್, ವೇಗಸ್ ಆಸ್ಪತ್ರೆ ಮುಖ್ಯಸ್ಥರಾದ ನಾರಾಯಣ ಸ್ವಾಮಿ , ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ, ಆರ್ ವಿ ಚೌಡಪ್ಪ(ACP) ಹಾಗೂ ನಿರ್ಮಾಪಕ ಆಂತರ್ಯ ಸತೀಶ್ ಅವರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ನನ್ನ ಕುಟುಂಬವೇ ಕೃಷಿಕರ ಕುಟುಂಬ. ನನ್ನ ತಂದೆ ರೈತ. ನನಗೂ ಚಿಕ್ಕಂದಿನಿಂದಲೂ ವ್ಯವಸಾಯ ಮಾಡಿ ಅಭ್ಯಾಸವಿದೆ. ವ್ಯವಸಾಯ ವೃತ್ತಿಯಿಂದಲೇ ನನ್ನ ತಂದೆ ನಮ್ಮನೆಲ್ಲಾ ವಿದ್ಯಾವಂತರನಾಗಿ ಮಾಡಿದ್ದಾರೆ. ನನಗೆ ಮೊದಲಿನಿಂದಲೂ ರೈತರ ಕುರಿತು ಸಿನಿಮಾ ಮಾಡುವ ಆಸೆ. ನಿರ್ದೇಶಕ ರಾಜೇಂದ್ರ ಕೊಣಿದೆಲ ಅವರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಜೊತೆಗೆ ಪ್ರಮುಖ ಪಾತ್ರವನ್ನು ಕೂಡ ಮಾಡಿದ್ದೇನೆ. ಸದ್ಯದಲ್ಲೇ ನಮ್ಮ ಚಿತ್ರ ಬಿಡುಗಡೆಯಾಗಲಿದೆ‌ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಹಾಗೂ ನಟ ಡಾ.ಅಮರನಾಥ ರೆಡ್ಡಿ ವಿ.

ತೆಲುಗು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ , ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ನನಗೆ ಇದು ಮೊದಲ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ರಾಜೇಂದ್ರ ಕೊಣದೆಲ, ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ನಮ್ಮ ಚಿತ್ರದಲ್ಲಿ ರೈತ ಹೆಚ್ಚಿನ ಬಡ್ಡಿಗೆ ಸಾಲ ಮಾಡಬಾರದು.

ಸರ್ಕಾರ ಬ್ಯಾಂಕ್ ನಿಂದ ನೀಡುವ ಸಾಲವನ್ನೇ ಪಡೆಯಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಹೀಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೇವೆ. ಒಬ್ಬ ರೈತ ಇಂತಹ ಅನೇಕ ವಿಷಯಗಳನ್ನು ತಿಳಿದು ವ್ಯವಸಾಯ ಮಾಡಿದಾಗ “ಆದರ್ಶ ರೈತ” ಆಗುತ್ತಾನೆ ಎಂಬುದೆ ಚಿತ್ರದ ಕಥಾಹಂದರ ಎನ್ನುತ್ತಾರೆ.

ಕಲಾವಿದರಾದ ರೇಖಾ ದಾಸ್, ಸಿದ್ಧಾರ್ಥ್, ಮೈಸೂರು ಸುಜಾತ, ಸೂಫಿಯಾ, ಖುಷಿ ಮೆಹ್ತಾ, ಸಂಗೀತ, ಎಂ.ವಿ.ಸುರೇಶ್ ಹಾಗೂ ಚಿತ್ರಕ್ಕೆ ಸಂಗೀತ ನೀಡಿರುವ ಮುರಳಿಧರ್ ನಾವಡ, ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಮುಂತಾದವರು “ಆದರ್ಶ ರೈತ” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಕಾಲಾಪತ್ಥರ್ ಹಾಡು ಬಂತು: ವಿಕ್ಕಿ ವರುಣ್ ಜೊತೆ ಧನ್ಯಾ

ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ “ಸೌಂಡ್ಸ್ ಆಫ್ ಕಾಲಾಪತ್ಥರ್” ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಮುಂದಾಯಿತು. ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು ಮಾಹಿತಿ ನೀಡಿದರು.

ನಿರ್ದೇಶನ ನನ್ನ ಕನಸು. ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ. ಸೂರಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿರುವ ಅನುಭವದಿಂದ ನಿರ್ದೇಶನ ನನಗೆ ಅಷ್ಟು ಕಷ್ಟವಾಗಲಿಲ್ಲ. ನಿರ್ದೇಶನ ಹಾಗೂ ನಟನೆ ಎರಡು ಒಟ್ಟಿಗೆ ಮಾಡುವುದು ಸ್ವಲ್ಪ ಕಷ್ಟ. ಆದರೆ ನಮ್ಮ ಚಿತ್ರತಂಡದ ಸಹಕಾರದಿಂದ “ಕಾಲಾಪತ್ಥರ್” ನಾವು ಅಂದುಕೊಂಡ ಹಾಗೆ ಅದ್ಭುತವಾಗಿ ಮೂಡಿಬಂದಿದೆ.

ಏನಾದರೂ ಹೊಸತು ಮಾಡಬೇಕು ಎಂದೆನಿಸಿ “ಸೌಂಡ್ಸ್ ಆಫ್ ಕಾಲಾಪತ್ಥರ್” ವಿಡಿಯೋವನ್ನು ಇಂದು ಬಿಡುಗಡೆ ಮಾಡಿದ್ದೇವೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. “ಕಾಲಾಪತ್ಥರ್” ಶೀರ್ಷಿಕೆ ಬಗ್ಗೆ ಹೇಳಿದರೆ, ಕಥೆ ಹೇಳಿದಂತೆ. ಹಾಗಾಗಿ ಅದರ ಬಗ್ಗೆ ಸಿನಿಮಾ ನೋಡಿದ ಮೇಲೆ ತಿಳಿಯುವುದು ಎಂದು ನಾಯಕ ಹಾಗೂ ನಿರ್ದೇಶಕ ವಿಕ್ಕಿವರುಣ್ ತಿಳಿಸಿದರು.

ಚಿತ್ರದಲ್ಲಿ ಐದು ಹಾಡುಗಳಿದೆ. ಡಾ|| ವಿ.ನಾಗೇಂದ್ರ ಪ್ರಸಾದ್ ಹಾಗೂ ಪ್ರಮೋದ್ ಮರವಂತೆ ಗೀತರಚನೆ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಾಯಿ ವಿಘ್ನೇಶ್, ಅಭಿಷೇಕ್, ಐಶ್ವರ್ಯ ರಂಗರಾಜನ್, ಶಿವಾನಿ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಹಾಡುಗಳನ್ನು ಹಾಡಿದ್ದಾರೆ. ಇಂದು ಬಿಡುಗಡೆಯಾದ “ಸೌಂಡ್ಸ್ ಆಫ್ ಕಾಲಾಪತ್ಥರ್” ವಿಕ್ಕಿವರುಣ್ ಅವರ ಕಾನ್ಸೆಪ್ಟ್ ಎಂದು ಸಂಗೀತ ನಿರ್ದೇಶಕ. ಅನೂಪ್ ಸೀಳಿನ್ ತಿಳಿಸಿದರು.

ನಾನು ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮಾತನಾಡಿದ ನಾಯಕಿ ಧನ್ಯ ರಾಮಕುಮಾರ್, ಗಂಗಾ ಎಂಬ ಹೆಸರಿನ ಶಿಕ್ಷಕಿ ಪಾತ್ರ ನನ್ನದು ಎಂದು ಹೇಳಿದರು.

“ಕಾಲಾಪತ್ಥರ್” ಚಿತ್ರ ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ತಿಳಿಸುತ್ತೇವೆ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕರಾದ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ.

error: Content is protected !!