Categories
ಸಿನಿ ಸುದ್ದಿ

ಮರೀಚಿ ಟೀಸರ್ ರಿಲೀಸ್: ಇದು ವಿಜಯ ರಾಘವೇಂದ್ರ ಚಿತ್ರ

ನಟ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳ ಝಲಕ್ ಕುತೂಹಲ ಹೆಚ್ಚಿಸಿದೆ. ಪೊಲೀಸ್ ಖದರ್ ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಮರೀಚಿ ಟೈಟಲ್ ಇಡುವ ಮೊದಲು 150 ಟೈಟಲ್ ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ಮರೀಚಿ ಆಯ್ಕೆ ಮಾಡಿದ್ದೇನೆ. ಮರೀಚಿ ಎಂದರೆ ಬ್ರಹ್ಮನ ಮಗ. ದೇವದಾಸ್ ಹಾಗೂ ಅಸುರರ ಗಾಡ್ ಫಾದರ್. ನಮ್ಮ ಚಿತ್ರದಲ್ಲಿ ಒಳ್ಳೆಯದು ಕೆಟ್ಟದಕ್ಕೆ ಮರೀಚಿ ಗಾಡ್ ಫಾದರ್ ಎಂದು ತೆಗೆದುಕೊಂಡಿದ್ದೇವೆ. ತುಂಬಾ ಅದ್ಭುತವಾಗಿ ಕಥೆ ಮೂಡಿ ಬಂದಿದೆ. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ಸ್ಕ್ರೀನ್ ಪ್ಲೇ, ಸ್ಟೋರಿ ಎಲ್ಲವೂ ಚೆನ್ನಾಗಿ ಬಂದಿದೆ ಎಂದರು.

ನಟ ವಿಜಯ್ ರಾಘವೇಂದ್ರ ಮಾತನಾಡಿ, ಮರೀಚಿ ಟೀಸರ್ ಲಾಂಚ್ ಆಗಿದೆ. ಟ್ಯಾಗ್ ಲೈನ್ ಹೇಳುವಂತೆ God father of good and bad ಎನ್ನುವಾಗೇ ಪ್ರತಿಯೊಬ್ಬರ ಮನಸ್ಸಿನಲ್ಲಿ ಕಥೆ ಎಣೆಯುವ ಮನಸ್ಸು ಆಗುತ್ತದೆ. ನಮಗೂ ಅದೇ ಬೇಕಿರುವುದು. ಮರೀಚಿ ಸಿನಿಮಾ ಒಂದು ಕ್ರೈಮ್ ಥ್ರಿಲ್ಲರ್ ಟೀಸರ್ ನೋಡಿದರೆ ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುವ ಅವಕಾಶವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಮರೀಚಿ ಸಿನಿಮಾದಲ್ಲಿ ತಾಂತ್ರಿಕ ವರ್ಗದವರನ್ನು ಎಷ್ಟು ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದರೋ ಅದೇ ರೀತಿ ತೆರೆಮೇಲೆ ಬರುವ ಕಲಾವಿದರನ್ನು ಅಷ್ಟೇ ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದಾರೆ. ಅದರಲ್ಲಿ ನಾನು ಒಬ್ಬ ಇದ್ದೇನೆ ಎಂದು ಹೇಳಲು ಖುಷಿಯಾಗುತ್ತದೆ ಎಂದರು.

ನಟಿ ಸೋನುಗೌಡ ಮಾತನಾಡಿ, ಮರೀಚಿ ಸ್ಟೋರಿ ಲೈನ್ ನನಗೆ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ಫಾರ್ಪಮೆನ್ಸ್ ಗೆ ತುಂಬಾ ಸ್ಕೋಪ್ ಇತ್ತು. ನನ್ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ಹ್ಯಾಪಿ ನ್ಯೂ ಇಯರ್ ನಲ್ಲಿ ಗಂಡ ಹೆಂಡತಿಯಾಗಿ ನಾನು ವಿಜಯ್ ಸರ್ ನಟಿಸಿದ್ದೇವು. ಇಲ್ಲಿಯೂ ಗಂಡ ಹೆಂಡತಿಯಾಗಿ ನಟಿಸಿದ್ದೇವೆ. ಎಮೋಷನಲ್ ಆಗಿ ಮರೀಚಿ ಸಿನಿಮಾ ಮೂಡಿಬಂದಿದೆ. ಸ್ಕ್ರೀನ್ ನಲ್ಲಿ ನಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನೋಡಲು ನಾನು ಕೂಡ ಕಾತುರಳಾಗಿದ್ದೇನೆ ಎಂದರು.

ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ .

ವಿಜಯ ರಾಘವೇಂದ್ರ ಜೋಡಿಯಾಗಿ ನಟಿ ಸೋನು ಗೌಡ ನಟಿಸುತ್ತಿದ್ದು. ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಎಸ್ ಎಸ್ ರೆಕ್ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಶಿವಣ್ಣ ಮಗಳ ನಿರ್ಮಾಣದ ಫೈರ್ ಫ್ಲೈ ಮೊದಲ ಹಂತ ಶೂಟಿಂಗ್ ಮುಕ್ತಾಯ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಅವರು ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ಶ್ರೀ ಮುತ್ತು ಸಿನಿ ಸರ್ವೀಸ್‌ನಡಿ ಹೊಸಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕೊಡುಗೆ ಫೈರ್ ಫ್ಲೈ. ಪೋಸ್ಟರ್ ಮೂಲಕ ಗಮನಸೆಳೆದಿದ್ದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಮೈಸೂರು,ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಅಕ್ಟೋಬರ್ ತಿಂಗಳ ಮೂರನೇ ವಾರದಿಂದ ದ್ವಿತೀಯ ಹಂತದ ಚಿತ್ರೀಕರಣ ಶುರುವಾಗಲಿದೆ.

ಫೈರ್ ಫ್ಲೈ ಸಿನಿಮಾವನ್ನ ಯುವ ನಟ ವಂಶಿ ಡೈರೆಕ್ಟ್ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಡ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಚಿತ್ರದ ನಾಯಕ-ನಿರ್ದೇಶಕ ವಂಶಿ ಈ ಹಿಂದೆ ಪಿ.ಆರ್‌.ಕೆ ಸಂಸ್ಥೆಯ ಮಾಯಾಬಜಾರ್ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿಯೇ ಕೆಲಸ ಮಾಡಿದ್ದರು. ಗುರು ದೇಶಪಾಂಡೆ ಅವರ ಪೆಂಟಗನ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದರು.

ನಾಯಕ-ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ ನಿರ್ದೇಶಕರಾಗಿಯೇ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ.

Categories
ಸಿನಿ ಸುದ್ದಿ

ಅಭಿರಾಮಚಂದ್ರ ಟ್ರೇಲರ್ ಬಂತು: ಹೊಸಬರ ಚಿತ್ರ ಅಕ್ಟೋಬರ್ 6ಕ್ಕೆ ರಿಲೀಸ್

ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮಕಥಾಹಂದರ ಒಳಗೊಂಡಿರುವ “ಅಭಿರಾಮಚಂದ್ರ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಟ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ಟ್ರೇಲರ್ ರಿಲೀಸ್ ಮಾಡಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗೇಂದ್ರ ಗಾಣಿಗ ನಿರ್ದೇಶನ ಅಭಿರಾಮಚಂದ್ರ ಸಿನಿಮಾ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗುತ್ತಿದೆ.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಸಿನಿಮಾ ತುಂಬಾ ಅದ್ಭುತವಾಗಿ ಮೂಡಿದೆ. ನನಗೆ ಇಷ್ಟವಾದ ಪಾರ್ಟ್ ಯಾವುದು ಅಂದರೆ ಕುಂದಾಪುರ ಕನ್ನಡವನ್ನು ಸಿನಿಮಾದಲ್ಲಿ ಬಳಸಲು ಮೀಟರ್ ಬೇಕು. ಆ ಮೀಟರ್ ಅಭಿರಾಮಚಂದ್ರ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಯಾಕೆಂದರೆ
ತುಂಬಾ ಜನರಿಗೆ ಆ ಭಾಷೆ ಅರ್ಥವಾಗಲ್ಲ. ತುಂಬಾ ವೇಗವಾಗಿ ಮಾತನಾಡುವುದರಿಂದ ಅದು ಬೇಗ ಅರ್ಥವಾಗುವುದಿಲ್ಲ. ಈ ಟ್ರೇಲರ್ ನಲ್ಲಿ ಆ ಭಾಷೆ ಪ್ರಾಮಿಸಿಂಗ್ ಆಗಿ ಕಾಣುತ್ತಿದೆ. ನಿರ್ದೇಶಕರ ಹಲವಾರು ಗೆಳೆಯರು ಈ ಸಿನಿಮಾವನ್ನು ಪ್ರೀಮಿಯರ್ ಶೋ ಸ್ಪಾನ್ಸರ್ ಮಾಡುತ್ತಿದ್ದು, ನಾನು ಅವರಿಗೆ ಸಾಥ್ ಕೊಡುತ್ತಿದ್ದೇನೆ. ಹೊಸಬರ ಸಿನಿಮಾಗೆ ನೀವು ಬೆಂಬಲ ಕೊಡಿ ಎಂದರು.

ನಿರ್ದೇಶಕ ನಾಗೇಂದ್ರ ಗಾಣಿಗ ಮಾತನಾಡಿ, ನನ್ನ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರವಾಗಲೂ‌ ಮೊದಲ ಕಾರಣ ನನ್ನ ಅಕ್ಕ, ಮನೆಯವರು. ನಂತರ ಕಿರಣ್. ಅವರ ತಂದೆ. ಅವರೇ ಸ್ವತಃ ಪ್ರೊಡಕ್ಷನ್ ಶುರು ಮಾಡಿ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಇಡೀ ತಂಡ ನನಗೆ ತುಂಬಾ ಸಪೋರ್ಟ್ ಮಾಡಿದರು. ಬಾಂಧವ್ಯ ಪ್ರೀತಿಗೋಸ್ಕರ ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಬಂದಿದೆ. ಅದ್ಭುತ ಅಲ್ಲದೇ‌ ಹೋದರು ನೋಡಿದವರು ಚೆನ್ನಾಗಿಲ್ಲ ಅನ್ನೋಲ್ಲ. ಇದು ಒಂದೊಳ್ಳೆ ಪ್ರಯತ್ನ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಇದು ಮೊದಲ ಸಿನಿಮಾ, ಮೊದಲ ಹೆಜ್ಜೆ ನಿಮ್ಮ ಆಶೀರ್ವಾದ ಇರಲಿ ಎಂದರು.

ನಟ ರಥ ಕಿರಣ್ ಮಾತನಾಡಿ, ನನ್ನ ಇಂಡಸ್ಟ್ರೀಗೆ ಲಾಂಚ್ ಮಾಡಿದ್ದು ಅಪ್ಪು ಸರ್. ಆ ನಂತರ ಸುನಿ ಸರ್ ಅವರು ಬೆಂಬಲ ಇರಲಿಲ್ಲ ಎಂದರೆ ಸಿನಿಮಾ ಆಗುತ್ತಿರಲಿಲ್ಲ. ಈ ಚಿತ್ರ ಆರಂಭದಿಂದ ಇಲ್ಲಿವರೆಗೂ ಬೆನ್ನೆಲುಬಾಗಿ‌ ನಿಂತವರು ರವಿ ಬಸ್ರೂರ್. ಅವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಸಂಗೀತ ಒದಗಿಸಿದ್ದಾರೆ. ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ಸರ್ ನಮಗೆ ಸಾಥ್ ಕೊಟ್ಟಿದ್ದಾರೆ. ನಾನು ಅಭಿ ಎಂಬ ಪಾತ್ರ ಮಾಡಿದ್ದೇನೆ. ನನ್ನ ಬಾಲ್ಯದ ಪಾತ್ರವನ್ನು ರವಿ ಬಸ್ರೂರ್ ಮಗ ಮಾಡಿದ್ದಾರೆ. ಅಕ್ಟೋಬರ್ 6ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ ಎಂದರು.

ನಟ ಸಿದ್ದು ಮೂಲಿಮನಿ ಮಾತನಾಡಿ, ಅಭಿರಾಮಚಂದ್ರ ಮನಸ್ಸಿಗೆ ತುಂಬಾ ಹತ್ತಿರವಾದ ಸಿನಿಮಾ. ಸಾಕಷ್ಟು ಸಿನಿಮಾ ಮಾಡುತ್ತಿದ್ದೇನೆ. ಆದರೆ ಈ ಚಿತ್ರ ಏನೋ ಗೊತ್ತಿಲ್ಲ ಅತಿಯಾದ ಪ್ರೀತಿ. ನಾಗೇಂದ್ರ ಅವರು ಕಥೆ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ರಾಮನಾಗಿ ಪಾತ್ರ ನಿರ್ವಹಿಸಿದ್ದೇನೆ. ಮಂಡ್ಯ ಹುಡುಗ ಬೆಂಗಳೂರಿಗೆ ಬಂದು ಕೆಲಸ ಮಾಡ್ತಾನೆ. ನಿಮ್ಮಲ್ಲಿರುವ ಮೂರು ಜನ ನಾವು. ನಿಮಗೆ ಬೇಗ ಕನೆಕ್ಟ್ ಆಗುತ್ತೇವೆ ಎಂದು ತಿಳಿಸಿದರು.

ನಾಟ್ಯರಂಗ ಮಾತನಾಡಿ, ನಾನು ಚಂದ್ರ ಎಂಬ ಪಾತ್ರ ಮಾಡಿದ್ದೇನೆ. ನಾಗೇಂದ್ರ ನಮ್ಮದೂ ಕಿನಾರೆ ಸಮಯದಿಂದಲೂ ಗೆಳೆತನ. ತುಂಬಾ ಹತ್ತಿರದಿಂದ ನೋಡಿರುವುದರಿಂದ ನನ್ನ ಗುಣಲಕ್ಷಣಗಳ ಪಾತ್ರವನ್ನು ನೀಡಿದ್ದಾರೆ. ಮಜವಾದ ಕ್ಯಾರೆಕ್ಟರ್ ಎಂದರು.

ನಾಯಕಿ ಶಿವಾನಿ ರೈ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ನಾನು ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸರ್ ಕಥೆ ಹೇಳಿದಾಗ ತುಂಬಾ ಕನೆಕ್ಟ್ ಆಯಿತು. ತ್ರಿಕೋನ ಪ್ರೇಮ ಕಥೆ ಇದು ಎಂದರು.

ಕಿರಿಕ್‌ ಪಾರ್ಟಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ “ಅಭಿರಾಮಚಂದ್ರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಭಿರಾಮಚಂದ್ರ’ ಸಿನಿಮಾದಲ್ಲಿ ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿವಾನಿ ರೈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವೀಣಾ ಸುಂದರ್‌, ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು, ಪವನ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಎ.ಜಿ.ಎಸ್ ಎಂಟಟೈನ್ಮೆಂಟ್‌ ಹಾಗೂ ರವಿ ಬಸ್ರೂರು ಮ್ಯೂಸಿಕ್‌ ಮತ್ತು ಮೂವೀಸ್‌’ ಬ್ಯಾನರ್‌ನಡಿ ಎ. ಜಿ. ಸುರೇಶ್‌ ಹಾಗೂ ಮಲ್ಲೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಮೂಲಕ ಗಮನಸೆಳೆಯುತ್ತಿರುವ ಅಭಿರಾಮಚಂದ್ರ ಸಿನಿಮಾ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಹಿರಿಯ ನಟಿ ಮಹಾಲಕ್ಷ್ಮೀ ಮತ್ತೆ ಬಂದ್ರು: ಟಿಆರ್ ಪಿ ರಾಮ ಸಿನಿಮಾ ಟ್ರೇಲರ್ ರಿಲೀಸ್

ದಶಕಗಳ ಹಿಂದೆ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮೀ TRP ರಾಮ ಸಿನಿಮಾ ಮೂಲಕ ಮತ್ತೆ ಕಮ್‌ಬ್ಯಾಕ್‌ ಆಗುತ್ತಿರುವುದು ಗೊತ್ತೇ ಇದೆ. ರವಿಪ್ರಸಾದ್‌ ನಟಿಸಿ ಮತ್ತು ನಿರ್ದೇಶನದ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಹೆಣ್ಣಿನ ಶೋಷಣೆ, ಮಾಧ್ಯಮಗಳ ಮೌಲ್ಯವೇನು ಅನ್ನೋದನ್ನು ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ. ಸದ್ಯ ಟ್ರೇಲರ್ ರಿಲೀಸ್ ಆಗಿದೆ.

ಹಿರಿಯ ನಟಿ ಮಹಾಲಕ್ಷ್ಮೀ ಮಾತನಾಡಿ, ನಾನು ಎಲ್ಲಾ ಭಾಷೆಯಲ್ಲಿ ಎಲ್ಲಾ ಹೀರೋಗಳ ಜೊತೆ ಸಿನಿಮಾ ಮಾಡಿದ್ದೇನೆ. ಎಲ್ಲವೂ ಟೀಂ ವರ್ಕ್..ನಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇಟ್ಕೊಂಡು ನಗುತ್ತಾ ಇರುವುದು ಸಾಕಾಗಲ್ಲ. ಮೂರು ಕೋತಿ ನೆನಪು ಇದೆಯಲ್ಲಾ? ಕೆಟ್ಟದನ್ನು ಕೇಳಬಾರದು. ಕೆಟ್ಟದನ್ನು ನೋಡಬಾರದು..ಕೆಟ್ಟದನ್ನು ಮಾಡಬಾರದು. ಅದನ್ನು ನಿಮ್ಮ ಮಕ್ಕಳಿಗೆ ನೆನಪಿಸಿ. ಅವರ ಜೀವನ ಚೆನ್ನಾಗಿರುತ್ತದೆ. ಅದನ್ನೂ ಹೇಳಿಕೊಡುವುದೇ TRP ರಾಮ. ಎಂಟರ್ ಟೈನ್ಮೆಂಟ್ ಇದೆ. ಕ್ವಾಲಿಟಿ ಇದೆ. ನೀತಿ ಇದೆ. ಆ ನೀತಿ ನಮ್ಮ ಜನರೇಷನ್ ಗೆ ಸಿಗಬೇಕು. ನಮ್ಮ ಸರ್ಕಾರ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದ್ರೆ ಅದನ್ನು ಫಾಲೋ ಮಾಡಲು ಆಗ್ತಿಲ್ಲ. TRP ರಾಮ ಬರೀ ಸಿನಿಮಾವಲ್ಲ. ಅದೊಂದು ಜೀವನ ಎಂದು ತಿಳಿಸಿದರು.

ನಿರ್ದೇಶಕ ಕಂ ನಟ ರವಿ ಪ್ರಸಾದ್ ಮಾತನಾಡಿ, ಒಳ್ಳೆ ಬಜೆಟ್ ಗೆ ಸಿನಿಮಾ ಮಾಡಲು ತಯಾರಿ ನಡೆಸಿದಾಗ ಕಥೆ ಸಿಗುತ್ತಿರಲಿಲ್ಲ. ಅಂದರೆ ಬಜೆಟ್ ಗೆ ಹೊಂದಿಸಲು ಆಗುತ್ತಿರಲ್ಲ. ಆಗ ಹೊಳೆದಿದ್ದೇ TRP ರಾಮ ಕಥೆ. ರಾಮನ ನಾನೇ ಆ ಪಾತ್ರ ಮಾಡಬೇಕು ಎಂದು ಇರಲಿಲ್ಲ. ಈ ರೀತಿ ಕಂಟೆಂಟ್ ಇರುವ ಸಿನಿಮಾವನ್ನು ಯಾರ ಮೂಲಕ ಹೇಳಿಸಬೇಕು ಎಂದು ಹುಡುಕುತ್ತಿದ್ದೇವೆ. ಆಗ ತಲೆಗೆ ಬಂದಿದ್ದು ಮಹಾಲಕ್ಷ್ಮೀ ಮೇಡಂ. ಕಮರ್ಷಿಯಲ್ ಜೊತೆ ಒಂದೊಳ್ಳೆ ಸಂದೇಶ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸೆನ್ಸಾರ್ ಆಗಬೇಕಿದೆ. ಅಕ್ಟೋಬರ್ ಮೊದಲ ವಾರ ತೆರೆಗೆ ತರುವ ಪ್ರಯತ್ನ ನಡೆಯುತ್ತದೆ ಎಂದು ತಿಳಿಸಿದರು.

ಹಿರಿಯ ಕಲಾವಿದರಾದ ಓಂ ಸಾಯಿ ಪ್ರಕಾಶ್ ಮಾತನಾಡಿ, ನೈಜ ಘಟನೆಗಳನ್ನು ನಾವು ತೆಗೆದುಕೊಂಡಾಗ ಅದು ಅದು ಹೃದಯಕ್ಕೆ ಹತ್ತಿರವಾಗುತ್ತದೆ. ಟ್ರೇಲರ್ ನೋಡುವಾಗ ತುಂಬಾ ನೋವು ಅನಿಸಿತು. ಸಮಾಜದಲ್ಲಿ ಹೆಣ್ಣನ್ನು ಬೇರೆ ರೀತಿ ನೋಡುವ ಸನ್ನಿವೇಶವಿದೆ. ಸರ್ಕಾರ ಎಷ್ಟು ಕಾನೂನು ಮಾಡುತ್ತಿದ್ದೆ. ಆದರೂ ರಾಕ್ಷಸ ಮನಸ್ಸು ತಡೆಯುತ್ತಿಲ್ಲ. ದಿನದಿಂದಕ್ಕೆ ಈ ರೀತಿ ಹೆಚ್ಚಾಗುತ್ತಿವೆ. ನಾಯಕನೋ ಖಳನಾಯಕನೋ ಗೊತ್ತಿಲ್ಲ. ಕಲಾವಿದರು ಯಾವ ಪಾತ್ರವಾದರೂ ನ್ಯಾಯ ಒದಗಿಸುತ್ತಾರೆ.

ಮಹಾಲಕ್ಷ್ಮೀ ತಂದೆ-ತಾಯಿ ಇಬ್ಬರು ಮಹಾನ್ ನಟರು. ಅವರ ತಾಯಿ ಜೊತೆ ತೆಲುಗು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೇನೆ. ಮಹಾಲಕ್ಷ್ಮೀ ನೋಡಿದ ತಕ್ಷಣ ನಿಮ್ಮ ತಾಯಿ ನೆನಪಾಗ್ತಿದ್ದಾರೆ ಎಂದೆ. ಎಮೋಷನ್ ಸೀನ್ಸ್ ಅದ್ಭುತವಾಗಿ ಮಾಡುತ್ತಾರೆ. ನಾಯಕನ ಜೀವನದಲ್ಲಿ ಏನಾಯ್ತೋ ಗೊತ್ತಿಲ್ಲ. ನಾಯಕನ ಹೆಸರು ರಾಮ ನೋಡಲು ರಾವಣ ತರ ಕಾಣುತ್ತಾನೆ. ಚಿತ್ರ ನೋಡಿದರೇ ಎಲ್ಲವೂ ಗೊತ್ತಾಗಲಿದೆ. ಇಡೀ TRP ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ನಟಿ ಸ್ಪರ್ಶ ಮಾತನಾಡಿ, ಈ ಸಿನಿಮಾ ಒಪ್ಪಿಕೊಳ್ಳಲು ಮಹಾಲಕ್ಷ್ಮೀ ಮೇಡಂ ಕಾರಣ. ಅವರ ಕಂಬ್ಯಾಕ್ ಚಿತ್ರ. ಅಂತಹ ಲೆಜೆಂಡ್ ಜೊತೆ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗಲ್ಲ. ಪ್ರವೀಣ್ ಸೂಡಾ ಇದಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರು ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಅನಿಸಿತು. ತುಂಬಾ ಫಾಸ್ಟ್ ಯುಗದಲ್ಲಿ ಚಿಕ್ಕಪುಟ್ಟ ತಪ್ಪುಗಳಿಂದ ಎಷ್ಟು ದೊಡ್ಡ ಪ್ರಮಾದವಾಗುತ್ತದೆ ಅನ್ನೋದು ಚಿತ್ರದ ಒಂದು ಎಳೆ. ಅದನ್ನು ತುಂಬಾ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ ಎಂದರು.

ಅಶುತೋಶ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ TRP ರಾಮ ಸಿನಿಮಾದಲ್ಲಿ ರವಿಪ್ರಸಾದ್‌ ನಟಿಸಿ, ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಪ್ರಯತ್ನ. ಮಹಾಲಕ್ಷ್ಮೀ ತಾಯಿ ಪಾತ್ರದಲ್ಲಿ, ಪತ್ರಕರ್ತೆಯಾಗಿ ಸ್ಪರ್ಶಯಾಗಿ ನಟಿಸಿದ್ದಾರೆ. ರಾಜ್ ಗುರು ಹೊಸಕೋಟೆ ಸಂಗೀತ, ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ, ರಾಕೇಶ್ ಆಚಾರ್ಯ ಬಿಜಿಎಂ ಸಿನಿಮಾಕ್ಕಿದೆ. ಸೆನ್ಸಾರ್ ಗಾಗಿ ಕಾಯ್ತಿರುವ TRP ರಾಮ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದಾನೆ.

Categories
ಸಿನಿ ಸುದ್ದಿ

ಕಾವೇರಿ ಹೋರಾಟಕ್ಕೆ ನಮ್ಮ ಬೆಂಬಲ: ಫಿಲ್ಮ್ ಚೇಂಬರ್, ಚಿತ್ರರಂಗ ಸದಾ ರೈತರ ಪರ; ನೂತನ ಅಧ್ಯಕ್ಷ ಎನ್.ಎಂ.ಸುರೇಶ್

ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಗೆದ್ದು ಆಯ್ಕೆಯಾದ ಎನ್.ಎಂ.ಸುರೇಶ್ ಅವರು, ಇದು ಚರಿತ್ರೆಯಲ್ಲಿ ಬರೆಯೋ ಚುನಾವಣೆ ಎಂದಿದ್ದಾರೆ. ನನ್ನ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಗೆಲುವು ಬಳಿಕ ಮಾತನಾಡಿ, ಕಾವೇರಿ ವಿಚಾರದಲ್ಲಿ ಸದಾ ಚಿತ್ರರಂಗ ಹಾಗು ವಾಣಿಜ್ಯ ಮಂಡಳಿ ರೈತರ ಪರ ಇರಲಿದೆ ಎಂದಿದ್ದಾರೆ.

ನಾನು ನಾಲ್ಕು ಅಭ್ಯರ್ಥಿಗಳ ಮಧ್ಯೆ ಹೆಚ್ಚು ಮತ ಪಡೆಯೋಕೆ ಕಾರಣ ನನ್ನ ಗುರುಗಳಾದ ಸಾರಾ ಗೋವಿಂದು ಅವರು. ಅವರ ಮಾರ್ಗದರ್ಶನದಲ್ಲಿ ಗೆದ್ದಿದ್ದೀನಿ ಅವರಿಗೆ ಈ ಗೆಲುವು ಸಂತೋಷ ತಂದಿದೆ.
ಈಗಷ್ಟೇ ಗೆದ್ದು ಆಯ್ಕೆ ಆಗಿದ್ದೇನೆ. ನಿಜಕ್ಕೂ ಇದು ಸಂತೋಷದ ವಿಚಾರ. ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗ ಎಂದಿಗೂ ರೈತರ ಪರ. ಅವರಿಗೆ ಸಪೋರ್ಟ್ ಮಾಡಿಲ್ಲ ಅಂದರೆ ನಮ್ಮ ಜನ್ಮ ಸಾರ್ಥಕವಾಗಲ್ಲ. ಮೊದಲ ಮೀಟಿಂಗ್ ಕಾವೇರಿ ವಿಚಾರವಾಗಿ ಮಾಜಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತಿನಿ ಎಂದಿದ್ದಾರೆ.

ನನ್ನ ಗೆಲುವಿಗೆ ಕಾರಣವಾದ ಎಲ್ಲಾ ನಿರ್ಮಾಪಕರಿಗೆ ವಿತರಿಕರಿಗೆ ಹಾಗೂ ಪ್ರದರ್ಶಕರಿಗೆ ಧನ್ಯವಾದಗಳು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಎನ್ ಎಂ ಸುರೇಶ್ ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾಗಿ ಆಯ್ಕೆ

ಈ ಬಾರಿ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಎನ್.ಎಂ. ಸುರೇಶ್ ಅವರು ಹೆಚ್ಚು ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 1599 ಮತಗಳ ಪೈಕಿ 967 ಮತಗಳು ಚಲಾವಣೆಯಾಗಿದ್ದವು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿಲ್ಪಾ ಶ್ರೀನಿವಾಸ್ 217 ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181, ಎನ್.ಎಮ್ ಸುರೇಶ್ 337 ಹಾಗು
ಎ.ಗಣೇಶ್ 204 ಮತಗಳನ್ನು ಪಡೆದಿದ್ದಾರೆ.

ಎನ್. ಎಮ್ ಸುರೇಶ್ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇನ್ನು ಗೌರವ ಕಾರ್ಯದರ್ಶಿ ನಿರ್ಮಾಪಕರ ವಲಯದಿಂದ ಬಾ ಮ ಗಿರೀಶ್ ಗೆಲುವು ಪಡೆದರೆ
ಗೌರವ ಕಾರ್ಯದರ್ಶಿ ವಿತರಕರ ವಲಯದಿಮದ ಸುಬ್ರಮಣಿ ವಿ (ಕರಿಸುಬ್ಬು) ಗೆಲುವು ಸಾಧಿಸಿದ್ದಾರೆ.
ಗೌರವ ಕಾರ್ಯದರ್ಶಿ ಪ್ರದರ್ಶಕರ ವಲಯದಿಂದ ಸುಂದರ್ ರಾಜು ಆರ್ ಗೆದ್ದರೆ, ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಮೀಳಾ ಜೋಶಾಯ್ ಗೆಲುವು ಕಂಡಿದ್ದಾರೆ.

ವಿತರಕರ ವಲಯದಿಂದ ಉಪಾಧ್ಯಕ್ಷರಾಗಿ
ಜಿ ವೆಂಕಟೇಶ್ ,ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷರಾಗಿ
ನರಸಿಂಹಲು ಗೆಲುವು ಕಂಡಿದ್ದಾರೆ.
ಖಜಾಂಚಿಯಾಗಿಜಯಸಿಂಹ ಮುಸರಿ ಗೆದ್ದಿದ್ದಾರೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಒಲಿವ ಜೊತೆಗಾರ ಸಿಗದ ಮಂದಾರ! ಪ್ರೀತಿಯೇ ಅಲಂಕಾರ…

ಚಿತ್ರ : ಒಲವೇ ಮಂದಾರ 2
ನಿರ್ದೇಶನ : ಎಸ್.ಆರ್.ಪಾಟೀಲ್
ನಿರ್ಮಾಣ : ರಮೇಶ್ ಮರಗೋಳ, ಸತೀಶ್
ತಾರಾಗಣ: ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಭವ್ಯಾ, ಮಂಜುಳಾ ರೆಡ್ಡಿ,
ಡಿಂಗ್ರಿ ನಾಗರಾಜ್, ಮಡೆನೂರ ಮನು ,ಶಿವಾನಂದ ಸಿಂದಗಿ ಇತರರು.

ರೇಟಿಂಗ್ : 3/5

ವಿಜಯ್ ಭರಮಸಾಗರ

ಸಿನಿಮಾ ಅಂದಮೇಲೆ ಪ್ರೀತಿ ಗೀತಿ ಇತ್ಯಾದಿ ಇರಲೇಬೇಕು. ಪ್ರೀತಿ ಇದ್ದಾಗ ದ್ವೇಷ, ಅಸೂಯೆ ಕೂಡ ಇದ್ದೇ ಇರುತ್ತೆ. ಈಗಾಗಲೇ ಇಂತಹ ಅನೇಕ ಕಥೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಒಲವೇ ಮಂದಾರ 2 ಚಿತ್ರವೂ ಸೇರಿದೆ. ಇದು ಪರಿಶುದ್ಧ ಪ್ರೇಮ ಕಥೆ. ಆದರೆ, ಕಥೆಯಲ್ಲಿ ಹೊಸತನವಿಲ್ಲ. ನಿರೂಪಣೆಯಲ್ಲೂ ವಿಶೇಷವೇನಿಲ್ಲ. ಆದರೆ, ತಾಳ್ಮೆಯಿಂದ ನೋಡಿದರೆ, ಅಂತ್ಯದಲ್ಲೊಂದು ಸಂದೇಶವಿದೆ. ಅದೊಂದೇ ಸಿನಿಮಾದ ಜೀವಾಳ. ಆ ಜೀವಾಳ ಏನೆಂಬುದನ್ನು ಕಂಡುಕೊಳ್ಳುವ ಕುತೂಹಲವಿದ್ದರೆ ಅವರಿಬ್ಬರ ಮಂದಾರ ನೋಡಲ್ಲಡ್ಡಿಯಿಲ್ಲ.

ಆರಂಭದಲ್ಲಿ ಸಿನಿಮಾ ಮಂದಗತಿಯಲ್ಲೇ ಸಾಗುತ್ತೆ. ಕೆಲವೆಡೆ ನೀರಸ ಎನಿಸಿದರೂ, ಬರುವ ಹಾಡು, ಕಿರುನಗೆ ಚೆಲ್ಲುವ ಸಣ್ಣ ಹಾಸ್ಯಮಯ ದೃಶ್ಯಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತವೆ. ಇಲ್ಲಿ ಒಂದೊಳ್ಳೆಯ ಪ್ರೀತಿಯ ಕಥೆ ಇದೆ. ಅದರೊಳಗೆ ವ್ಯಥೆಯೂ ಇದೆ. ಕಥೆ ಸರಳವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ಮೊದಲರ್ಧ ನಿಧಾನ. ದ್ವಿತಿಯಾರ್ಧ ಸಿನಿಮಾ ನಿಧಾನವಾಗಿಯೇ ಕುತೂಹಲ ಕೆರಳಿಸುತ್ತ ಹೋಗುತ್ತೆ.

ಕಥೆ ಇಷ್ಟು…

ನಾಯಕ ಆರ್ಯ ಬಿಕಾಂ ಓದಿದ್ದರೂ ಕೆಲಸಕ್ಕೆ ಹೋಗದೆ ತನ್ನ ಹಳ್ಳಿಯಲ್ಲೇ ಇದ್ದು, ಹಳ್ಳಿ ಜನಪರ ಕೆಲಸ ಮಾಡುವ ಆಶಯ ಇಟ್ಟುಕೊಂಡವ. ಅದೇ ಊರಲ್ಲಿ ರಾಜಕಾರಣಿಯೊಬ್ಬರ ಮಗಳ (ಭೂಮಿ) ಮೇಲೆ ಪ್ರೀತಿ ಹುಟ್ಟಿಸಿಕೊಂಡವ. ಅತ್ತ, ರಾಜಕಾರಣಿಗೆ ಆರ್ಯನೆಂದರೆ ದ್ವೇಷ. ಇತ್ತ ಭೂಮಿ ಅಂದರೆ ಆರ್ಯನಿಗೆ ಪ್ರಾಣ. ಮದುವೆಗೆ ಬಲವಾದ ವಿರೋಧ ವ್ಯಕ್ತವಾದಾಗ, ನಡೆಯುವ ಸನ್ನಿವೇಶಗಳು ಸಿನಿಮಾದ ಹೈಲೆಟ್.

ಇಲ್ಲಿ ಪ್ರೀತಿ, ಒಲವು, ನೋವು, ಸ್ನೇಹ, ಮಮತೆ, ತ್ಯಾಗ… ಇತ್ಯಾದಿ ಅಂಶಗಳು ಗಮನ ಸೆಳೆಯುತ್ತಾವಾದರೂ, ಅಲ್ಲಲ್ಲಿ ಸಿನಿಮಾ ನಿಧಾನ ಎನಿಸುವುದು ನಿಜ. ಹಾಗಂತ ದ್ವಿತಿಯಾರ್ಧ ಅಂದುಕೊಂಡಂತೆ ನಡೆಯಲ್ಲ. ಸಿನಿಮಾ ನೋಡಿ ಹೊರಬಂದವರಿಗೆ ತಕ್ಕಮಟ್ಟಿಗೆ ಕೆಲ ದೃಶ್ಯಗಳು ಕಾಡುತ್ತವೆ.

ಯಾರು ಹೇಗೆ?

ನಾಯಕ ಸನತ್ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎರಡು ಶೇಡ್ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ನೋಡುಗರನ್ನು ನಗಿಸುವುದರ ಜೊತೆ ಅಳಿಸುವಲ್ಲೂ ಪ್ರಯತ್ನ ಪಟ್ಟಿದ್ದಾರೆ.
ಪ್ರಜ್ಞಾ ಭಟ್ ಅವರ ನಟನೆಯಲ್ಲಿ ಲವಲವಿಕೆ ಇದೆ. ಅನುಪಾ ಕೂಡ ಇಷ್ಟವಾಗುತ್ತಾರೆ. ಅಪ್ಪನಾಗಿ ರಮೇಶ್ ಮರಗೋಳ ಸೈ ಎನಿಸಿಕೊಂಡರೆ, ಭವ್ಯಾ ಮಮ್ಮಲ ಮರಗುವ ಅಮ್ಮನಾಗಿ ಗಮನ ಸೆಳೆಯತ್ತಾರೆ. ಉಳಿದಂತೆ ತೆರೆ ಮೇಲೆ ನಟಿಸಿರುವ ಮಂಜುಳಾ ರೆಡ್ಡಿ, ಡಿಂಗ್ರಿ ನಾಗರಾಜ್, ಮಡೆನೂರ ಮನು, ಶಿವಾನಂದ ಇತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ.

ಡಾ. ಕಿರಣ್ ತೋಟಂಬೈಲ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಕ್ಯಾಮೆರಾ ಕೈಚಳಕದಲ್ಲಿ ಕೊಂಚ ಚುರುಕಿದೆ.

ಕೆಲ ಸಿನಿಮಾಗಳ ಕಥೆ ಹೊರ ಬಂದ ಮೇಲೂ ಕಾಡುತ್ತವೆ.

Categories
ಸಿನಿ ಸುದ್ದಿ

ಫೈಟರ್ ರಿಲೀಸ್ ಡೇಟ್ ಅನೌನ್ಸ್: ವಿನೋದ್ ಪ್ರಭಾಕರ್ ಚಿತ್ರ ಅಕ್ಟೋಬರ್ 6ಕ್ಕೆ ಬಿಡುಗಡೆ

ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು,ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ .

ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ನೂತನ್ ಉಮೇಶ್ ನಿರ್ದೇಶನದ ಹಾಗೂ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ನೂತನವಾಗಿ ಅನಾವರಣವಾಯಿತು. ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು, ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಅಕ್ಟೋಬರ್ 6 ರಂದು ತೆರೆಗೆ ಬರಲಿದೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮೇ ಗೌಡ, ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್ ಕುಮಾರ್, ರಮೇಶ್ ಗೌಡ (ಕಸ್ತೂರಿ ಕರ್ನಾಟಕ ಜನಪ್ರಿಯ ವೇದಿಕೆ), ಕೆ.ಸಿ.ಮೂರ್ತಿ(ಕರ್ನಾಟಕ, ಕನ್ನಡ ರಕ್ಷಣಾ ವೇದಿಕೆ), ವೆಂಕಟ್ ಸ್ವಾಮಿ (ಸಮತಾ ಸೈನಿಕ ದಳ), ಶಿವಾನಂದ ಶೆಟ್ಟಿ(ಕ ರಾ ವೇ ಬೆಂಗಳೂರು), ಭಾರತಿ ನಾಯಕ್(ಹ್ಯೂಮನ್ ರೈಟ್ಸ್ ಮಹಿಳಾ ಅಧ್ಯಕ್ಷರು), ಕೆ.ಕೆ.ಮೋಹನ್ (ನಾಡ ಸೇನಾನಿ ಕೆಂಪೇಗೌಡ ಟ್ರಸ್ಟ್), ಮಲ್ಲಿಕಾರ್ಜುನ, ವಿಜಯಕುಮಾರ್, ಸೋಮಶೇಖರ್, ರವಿಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಜೆ ಆಗಮಿಸಿ, “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

“ಫೈಟರ್” ಚಿತ್ರದಲ್ಲಿ ನಾನು ರೈತರ ಪರ ಹೋರಾಟಗಾರ ಎಂದು ತಿಳಿಸಿದ ನಾಯಕ ವಿನೋದ್ ಪ್ರಭಾಕರ್ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೂ ನಮಸ್ಕಾರ ತಿಳಿಸಿದರು.

ನಿಜವಾದ ಫೈಟರ್ ಗಳೆಂದರೆ ನಮ್ಮ ನಾಡು,ನುಡಿ,ಜಲ, ಸಂಸ್ಕೃತಿ, ದೇಶಕ್ಕಾಗಿ ಹೋರಾಡಿದ ಹೋರಾಟಗಾರರು ಹಾಗಾಗಿ ನಾವು ಈ ನಮ್ಮ ಹೋರಾಟಗಾರರಿಂದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ತೀರ್ಮಾನಿಸಿದೆವು ಎಂದು ನಿರ್ದೇಶಕ ನೂತನ ಉಮೇಶ್ ಹೇಳಿದರು

ನಮ್ಮ ಚಿತ್ರ ಅಕ್ಟೋಬರ್ 6 ರಂದು ಬಿಡುಗಡೆಯಾಗುತ್ತಿದೆ. ಇಷ್ಟು ಜನ ಹೋರಾಟಗಾರರು ಬಂದು ನಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು ಸಂತೋಷವಾಗಿದೆ. ಅಕ್ಟೋಬರ್ 6 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ. ನಾಯಕಿ ಲೇಖಾಚಂದ್ರ ಇದ್ದರು.

Categories
ಸಿನಿ ಸುದ್ದಿ

ಅಲೆಕ್ಸಾ ಟೀಸರ್ ಬಂತು: ನವೆಂಬರ್ ನಲ್ಲಿ ಪವನ್ ತೇಜ ಅದಿತಿ ಚಿತ್ರ

ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಅಲೆಕ್ಸಾ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ವಿ.ಚಂದ್ರು ನಿರ್ಮಾಣದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ.

ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಕಥೆ ಕೇಳಿದ ತಕ್ಷಣ ನಿರ್ಮಾಪಕರು ಇಷ್ಟಪಟ್ಟರು. ಇನ್ವೆಸ್ಟಿಗೇಶನ್ ಆಫೀಸರ್ ಆಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಪವನ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಾರ್ಮಾಸೆಟಿಕಲ್ ಮಾಫಿಯಾ ಬಗ್ಗೆ ಕೂಡ ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿದ್ದೇವೆ‌. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ.‌ ಅಕ್ಟೋಬರ್ ಕೊನೆ ಅಥವಾ ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ಬರಲಿದೆ ಎಂದು ನಿರ್ದೇಶಕ ಜೀವ ತಿಳಿಸಿದರು.

ನನಗೆ ನಿಜ ಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸ್ಸಿತ್ತು. ಅದು ಆಗಲಿಲ್ಲ.‌ ನಿರ್ದೇಶಕರು ನೀವು ಈ ಚಿತ್ರದಲ್ಲಿ ಇನ್ವೆಸ್ಟಿಗೇಶನ್ ಆಫೀಸರ್ ಅಂದ ತಕ್ಷಣ ಒಪ್ಪಿಕೊಂಡೆ. ಸಾಹಸ ದೃಶ್ಯಗಳಲ್ಲೂ ಕಾಣಿಸಿಕೊಳ್ಳುವ ಕನಸ್ಸಿತ್ತು. ಅದು ಈ ಚಿತ್ರದಲ್ಲಿ ನನಸ್ಸಾಗಿದೆ. ಸಾಹಸ ನಿರ್ದೇಶಕ ರವಿವರ್ಮ ಹಾಗೂ ಮಾಸ್ ಮಾದ ಅವರು ಸಾಹಸ ಸಂಯೋಜನೆಯಲ್ಲಿ ನಾನು ಅಭಿನಯಿಸಿರುವ ಸಾಹಸ ಸನ್ನಿವೇಶಗಳು ಚೆನ್ನಾಗಿ ಬಂದಿದೆ ಎಂದರು ನಟಿ ಅದಿತಿ ಪ್ರಭುದೇವ.

ಚಿತ್ರದಲ್ಲಿ ಗಂಡ – ಹೆಂಡತಿ ಕೊಲೆ ಆಗಿರುತ್ತದೆ. ಆ‌ ಕೊಲೆಯ ತನಿಖೆಯ ಸುತ್ತ ಕಥೆ ಸಾಗುತ್ತದೆ ಎಂದು ಮಾತನಾಡಿದ ನಾಯಕ ಪವನ್ ತೇಜ್ ಅದಿತಿ ಪ್ರಭುದೇವ ಅವರ ಜೊತೆ ನಟಿಸುವ ಹಂಬಲವಿತ್ತು. ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ಮಾಪಕ ವಿ.ಚಂದ್ರು. ಚಿತ್ರದ ಬಹುತೇಕ ಕಲಾವಿದರು , ತಂತ್ರಜ್ಞರು ಹಾಗೂ ಚಿತ್ರದ ವಿತರಕರಾದ ರಿಲಯನ್ಸ್ ಎಂಟರ್ಟೈನ್ಮೆಂಟ್ ಅವರು “ಅಲೆಕ್ಸಾ” ಬಗ್ಗೆ ಮಾತನಾಡಿದರು.

ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

A p o ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಸುಂದರವಾಗಿದೆ. ಸತೀಶ್ ಬಿ ಅವರ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಸಂಕಲನ “ಅಲೆಕ್ಸಾ” ಚಿತ್ರದಲ್ಲಿ ಸುಂದರವಾಗಿ ಮೂಡಿಬಂದಿದೆ.

Categories
ಸಿನಿ ಸುದ್ದಿ

ಜಲಂಧರನಿಗೆ ಡಬ್ಬಿಂಗ್ ಮುಗೀತು: ಇದು ಪ್ರಮೋದ್ ಶೆಟ್ಟಿ ಚಿತ್ರ

“ಜಲಂಧರ” ಚಿತ್ರತಂಡ ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿತ್ತು. ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ  ಜನಪ್ರಿಯತೆ ಗಳಿಸಿದ ಬೆನ್ನಲ್ಲೆ  “ಜಲಂಧರ” ಚಿತ್ರತಂಡ, ಮಾತಿನ ಮರು ಜೋಡಣೆ ( ಡಬ್ಬಿಂಗ್ ) ಅನ್ನು  ಯಶಸ್ವಿಯಾಗಿ  ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ.

ಸ್ಟೆಪ್ ಅಪ್ ಲೋಕೇಶ್ ನಟಿಸಿ, ಕತೆ ಬರೆದು ಸ್ಟೇಪ್ ಅಪ್ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ “ಜಲಂಧರ” ಚಿತ್ರಕ್ಕೆ ಮದನ್ ಎಸ್, ಚಂದ್ರ ಮೋಹನ್ ಸಿ ಎಲ್, ರಮೇಶ್ ರಾಮಚಂದರ್ ಹಾಗೂ ಪದ್ಮನಾಭನ್ ಹಣ ಹಾಕಿ ಕೈ ಜೋಡಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಮೊದಲ ಬಾರಿಗೆ ವಿಷ್ಣು ವಿ ಪ್ರಸನ್ನ ನಿರ್ದೇಶನ ಮಾಡಿದ್ದಾರೆ.

ರಶ್ಮಿತ್ ಕುಮಾರ್  ನಿರ್ಮಾಣ ನಿರ್ವಹಣೆಯ ಕಾರ್ಯವನ್ನು  ವಹಿಸಿಕೊಂಡಿದ್ದು ಇನ್ನು ಚಿತ್ರಕ್ಕೆ ನುರಿತ ಸಂಕಲನಕಾರ ವೆಂಕಿ UDV ಕತ್ತರಿ ಹಾಕಿದ್ದಾರೆ. ಕೇರಳ ಮೂಲದ ಛಾಯಾಗ್ರಹಕರಾದ ವಿದ್ಯಾಶಂಕರ್ ಮತ್ತು ಸರಿನ್ ರವೀಂದ್ರನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಯುವ ಸಂಗೀತ ನಿರ್ದೇಶಕ ಜತಿನ್ ದರ್ಶನ್ ಸಂಗೀತ ನೀಡಿರುವ “ಜಲಂಧರ” ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಅಕ್ಷಯ್ ಕುಮಾರ್ ಎಮ್, ಕಲಾ ನಿರ್ದೇಶನ ರಾಜು ವೈವಿಧ್ಯ, ಸಾಹಸ  ನಿರ್ದೇಶಕರಾದ ಕೌರವ ವೆಂಕಟೇಶ್, ಪತ್ರಿಕಾ ಸಂಪರ್ಕ ಸುದೀಂದ್ರ ವೆಂಕಟೇಶ್ ರವರು ಕೈ ಜೋಡಿಸಿದ್ದಾರೆ.

ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಟಗರು ಖ್ಯಾತಿಯ ರುಷಿಕಾ ರಾಜ್, ರಾಘು ರಾಮನಕೊಪ್ಪ, ಅರೋಹಿತಾ ಗೌಡ, ಬಲ ರಾಜ್ವಡಿ, ಆದಿ ಕೇಶವರೆಡ್ಡಿ, ಭೀಷ್ಮ ರಾಮಯ್ಯ, ಪ್ರತಾಪ ನೆನಪು, ನವೀನ್ ಸಾಗರ್, ವಿಶಾಲ್ ಪಾಟೀಲ್, ಪ್ರಸಾದ್ ಸೂರನಹಳ್ಳಿ, ಅಂಬು, ವಿಜಯ್ ರಾಜ್ ಮತ್ತು ನಂದಿನಿ ರಾಜ್ ಅಭಿನಯಿಸಿದ್ದಾರೆ.

“ಜಲಂಧರ” ಚಿತ್ರ ತಂಡವೂ ತಮ್ಮ ಚಿತ್ರದ ಪ್ರತಿ ಸಣ್ಣ ತುಣುಕುಗಳನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿಸುತ್ತಾ ಚಿತ್ರದ ಅಂತಿಮ ಘಟ್ಟದತ್ತ ಸಾಗಿದೆ.

error: Content is protected !!