Categories
ಸಿನಿ ಸುದ್ದಿ

ದಿಗಂತ್ ಜೊತೆ ನಿರೂಪ್ ಭಂಡಾರಿ: ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸ್ಪೆಷಲ್ ಎಂಟ್ರಿ

ದಿಗಂತ್​ ಮಂಚಾಲೆ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ವಿಭಿನ್ನವಾದ ಕಾನ್ಸೆಪ್ಟ್​ ಮೂಲಕ ಈಗಾಗಲೇ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಚಿಗಷ್ಟೆ ಆಗಸ್ಟ್​ 13ರಂದು ‘ವಿಶ್ವ ಎಡಗೈ ದಿನ’ದ ದಿನ ಎಗಡೈ ಬಳಸುವವರಿಗೆ ಅನುಕೂಲ ಆಗುವ ರೀತಿಯಲ್ಲಿ ಹೊಸ ಬಗೆಯ ಹೆಲ್ಮೆಟ್​ ಕೂಡ ಲಾಂಚ್​ ಮಾಡಲಾಗಿದೆ. ವಿನೂತನ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ‘ಎಡಗೈ’ ತಂಡಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ. ಮೊದಲ ಬಾರಿಗೆ ನಿರೂಪ್ ಮತ್ತು ದಿಗಂತ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸ್ಟಾರ್ ಕಲಾವಿದರು ಒಟ್ಟಿಗೆ ಸಿನಿಮಾ ಮಾಡುವುದು ತೀರ ಅಪರೂಪವಾಗಿದೆ. ಮಲ್ಟಿಸ್ಟಾರರ್ ಸಿನಿಮಾಗಳಿಗೆ ಖ್ಯಾತ ಕಲಾವಿದರನ್ನು ಸೇರಿಸಿ ಸಿನಿಮಾ ಮಾಡುವುದು ನಿರ್ಮಾಪಕರಿಗೂ ಸಹ ದೊಡ್ಡ ಸವಾಲಾಗಿದೆ. ಹೀಗಿರುವಾಗ ದಿಗಂತ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿರುವುದು ವಿಶೇಷ. ಈ ಸಿನಿಮಾದಲ್ಲಿ ನಿರೂಪ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಅಷ್ಟಕ್ಕೂ ಹೀರೋ ಆಗಿ ಅಬ್ಬರಿಸುತ್ತಿದ್ದ ನಿರೂಪ್ ಭಂಡಾರಿ, ದಿಗಂತ್ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಲು ಕಾರಣ ಸಿನಿಮಾ ಕಥೆ ಮತ್ತು ಕಾನ್ಸೆಪ್ಟ್.

ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಇಂತದೊಂದು ವಿಭಿನ್ನ ರೀತಿಯ ಕಾನ್ಸೆಪ್ಟ್ ಇರುವ ಚಿತ್ರದ ಕಥೆ ಕೇಳಿ ನಿರೂಪ್ ಇಂಪ್ರೆಸ್ ಆಗಿದ್ದಾರೆ. ಇನ್ನು ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ತಂಡ ನೋಡಿ ಈ ಸಿನಿಮಾದಲ್ಲಿ ತಾವು ಕೂಡ ಭಾಗಿ ಆದರೆ ಚೆನ್ನಾಗಿರುತ್ತೆ ಎಂದು
‘ಎಡಗೈ ಅಪಘಾತಕ್ಕೆ ಕಾರಣ’ಸಿನಿಮಾತಂಡದ ಜೊತೆ ಕೈಜೋಡಿಸಿದ್ದಾರೆ ನಿರೂಪ್.

‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ಅಂದಹಾಗೆ ಶೀರ್ಷಿಕೆಯೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಸುತ್ತುವ ಸಿನಿಮಾವಾಗಿದೆ.‘ಹೈಫನ್ ಪಿಕ್ಚರ್ಸ್ ಬ್ಯಾನರ್’ಅಡಿಯಲ್ಲಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ ಅವರಿಗೆ ಜೋಡಿಯಾಗಿ ನಟಿ ಧನು ಹರ್ಷ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಖ್ಯಾತ ನಟಿಯರಾದ ರಾಧಿಕಾ ನಾರಾಯಣ್ ಮತ್ತು ನಿಧಿ ಸುಬ್ಬಯ್ಯ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಗರುಡ ಪುರಾಣಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್: ಟೀಸರ್ ರಿಲೀಸ್ ಆಯ್ತು

ಗರುಡ ಪುರಾಣ” ಚಿತ್ರದ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. 27 ಫ್ರೇಮ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ. ಚಿತ್ರಕ್ಕೆ ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿದ್ದಾರೆ. ಟೀಸರ್ ರಿಲೀಸ್ ವೇಳೆ ಮಾಜಿ ಶಾಸಕ ರಾಜು ಗೌಡ, ತಿಪ್ಪರಾಜು, ಡಿ.ಎಸ್.ಮ್ಯಾಕ್ಸ್ ನ ದಯಾನಂದ್, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಕೂಚ್ಚಣ್ಣ, ನಟ ಮಣಿಕಂಠ ಮುಂತಾದವರು ಹಾರೈಸಿದ್ದಾರೆ.

ನಾನು “ಕಾಂತಾರ” ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. “ಕಾಂತಾರ” ನನಗೆ ಹೆಸರು ತಂದುಕೊಟ್ಟ ಸಿನಿಮಾ. ಅವಕಾಶ ನೀಡಿದ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು “ಗರುಡ ಪುರಾಣ” ಚಿತ್ರದ ಕುರಿತು ಹೇಳಬೇಕಾದರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಅಂಶ ನಮ್ಮ ಸಿನಿಮಾದಲ್ಲಿರುವುದರಿಂದ “ಗರುಡ ಪುರಾಣ” ಎಂದು ಹೆಸರಿಟ್ಟಿದ್ದೇವೆ‌.

ಮೂರು ಆಯಾಮಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಚಿತ್ರೀಕರಣ ಮುಕ್ತಾಯವಾಗಿ, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ನಮಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿರುವ ರಾಜು ಗೌಡ ಹಾಗೂ ತಿಪ್ಪರಾಜು ಅವರಿಗೆ ಧನ್ಯವಾದ ಎಂದರು ಚಿತ್ರದ ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ನಾಗಬಾ.

ಚಿತ್ರದ ನಿರ್ಮಾಪಕರಾದ ಸಿಂಧು ಕೆ.ಎಂ ಹಾಗೂ ಬಿ.ಎಲ್ ಯೋಗೇಶ್ ಕುಮಾರ್ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಾಯಕಿ ದಿಶಾ ಶೆಟ್ಟಿ , “ಭಜರಂಗಿ” ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಹಾಡುಗಳ ಬಗ್ಗೆ, ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣದ ಕುರಿತು ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಅನಿರುದ್ಧ ಅಭಿಮಾನಿಗಳ ಅಭಿಮಾನ: ರಾಷ್ಟ ಪ್ರಶಸ್ತಿ ವಿಜೇತರಿಗೆ ಸನ್ಮಾನ

“ಬಾಳೇ ಬಂಗಾರ” ಸಾಕ್ಷ್ಯ ಚಿತ್ರದ ನಿರ್ದೇಶನಕ್ಕಾಗಿ ಅನಿರುದ್ಧ್ ಅವರಿಗೆ ರಾಷ್ಟಪ್ರಶಸ್ತಿ ಮನ್ನಣೆ ದೊರೆತಿದೆ. ಈ ಸಂಭ್ರಮವನ್ನು ಅನಿರುದ್ಧ್ ಅವರ ಅಭಿಮಾನಿಗಳು ಸಂತೋಷದಿಂದ ಸಂಭ್ರಮಿಸಿದ್ದಾರೆ.

ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಅನಿರುದ್ಧ್ ಜತಕರ ಅಭಿಮಾನಿ ಬಳಗದ ನಿಶಾದ್ (ಹೈದರಾಬಾದ್ ), ಗಾಯತ್ರಿ( ತಮಿಳುನಾಡು)

, ಸೋನಿ(ಸಿಂಗಾಪುರ), ಪುಷ್ಪ(ಬೆಂಗಳೂರು) ಸೇರಿದಂತೆ ಅನೇಕ ಅಭಿಮಾನಿಗಳು ಅನಿರುದ್ದ್ ಅವರಿಗೆ ಆತ್ಮೀಯವಾಗು ಅಭಿನಂದಿಸಿದ್ದಾರೆ.

ಸಮಾರಂಭವನ್ನು ಆಯೋಜಿಸಿ,‌ ನ್ಯಾಚುರಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ಹಿರಿಯ ನಟ ಬಿ.ಎಂ.ವೆಂಕಟೇಶ್ ಹಾಗೂ ನಿರ್ದೇಶಕ ಎಂ.ಆನಂದರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅನಿರುದ್ಧ್ ಜತಕರ್ ಕುಟುಂಬದ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿರುದ್ಧ್, ಅಭಿಮಾನಿಗಳ ಈ ಪ್ರೀತಿಗೆ ಮನತುಂಬಿ ಬಂದಿದೆ. ಅವರಿಗೆ ನನ್ನ ಧನ್ಯವಾದ ಎಂದರು.

Categories
ಸಿನಿ ಸುದ್ದಿ

ಜಲಪಾತ ಎಂಬ ಪರಿಸರ ಜಾಗೃತಿ ಚಿತ್ರ: ಟ್ರೇಲರ್ ಹೊರ ಬಂತು; ಅಕ್ಟೋಬರ್ 6ಕ್ಕೆ ರಿಲೀಸ್

ಮಲೆನಾಡ ಸುಂದರ ಪರಿಸರದ ಹಾಗೂ ಅಲ್ಲಿನ ಸಮಸ್ಯೆಗಳನ್ನು ಪರಿಚಯಿಸುವ “ಜಲಪಾತ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಖ್ಯಾತ ಲೇಖಕ ಹಾಗೂ ಪತ್ರಕರ್ತ ಜೋಗಿ, ನಟ ಪೃಥ್ವಿ ಶಾಮನೂರು “ಜಲಪಾತ” ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಬಹುಕೋಟಿ ಸಿನಿಮಾಗಳ ಕುರಿತು ಮಾತಾಡಲಾರೆ. ನನಗೆ ಸಣ್ಣ ಸಿನಿಮಾ ಮಾಡುವವರೆಂದರೆ ಅಕ್ಕರೆ. ಯಾಕೋ ನಿಜವಾದ ಸಿನಿಮಾ ಪ್ರೀತಿ ಕಂಟೆಂಟ್ ಸಿನಿಮಾ ಮಾಡುವವರಲ್ಲಿ ಹೆಚ್ಚು ಆಪ್ತವಾಗಿರುತ್ತದೆ. ಅಂತಹ ಪರಿಸರದ ಕುರಿತು ಜಾಗೃತಿ ಮೂಡಿಸುವ “ಜಲಪಾತ” ಚಿತ್ರವನ್ನು ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ. ರವೀಂದ್ರ ತುಂಬರಮನೆ ನಿರ್ಮಿಸಿದ್ದಾರೆ. ಇಂತಹ ಒಳ್ಳೆಯ ಕಂಟೆಂಟ್ ಇರುವ ಸಾಕಷ್ಟು ಚಿತ್ರಗಳು ಇವರಿಂದ ಇನ್ನಷ್ಟು ಬರಲಿ ಎಂದು ಪ್ರಖ್ಯಾತ ಸಾಹಿತಿ – ಪತ್ರಕರ್ತ ಜೋಗಿ ತಿಳಿಸಿದರು.

ನಮ್ಮ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್ ಗೆ ಜನಮೆಚ್ಚುಗೆ ಬರುತ್ತಿದೆ. ಚಿತ್ರ ಅಕ್ಟೋಬರ್ 6 ರಂದು ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಜೋಗಿ ಹಾಗೂ ಪೃಥ್ವಿ ಶಾಮನೂರು ಅವರಿಗೆ ಧನ್ಯವಾದ ಎಂದರು ನಿರ್ದೇಶಕ ರಮೇಶ್ ಬೇಗಾರ್.

ನಾನು ಪರಿಸರ ತಜ್ಞ ಎಲ್ಲಪ್ಪ ರೆಡ್ಡಿ ಅವರ ಶಿಷ್ಯ. ಪರಿಸರದ ಬಗ್ಗೆ ಕಾಳಜಿ ಹೆಚ್ಚು. ರಮೇಶ್ ಬೇಗಾರ್ ಅವರ ಕಥೆ ಇಷ್ಟವಾಗಿ ಈ ಸಿನಿಮಾ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕ ಟಿ.ಸಿ.ರವೀಂದ್ರ ತುಂಬರಮನೆ ತಿಳಿಸಿದರು.

“ಪದವಿ ಪೂರ್ವ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ ಎಂದು ಮಾತನಾಡಿದ ನಾಯಕ ರಜನೀಶ್, ತಮ್ಮ ಪಾತ್ರದ ಬಗ್ಗೆ ಹಾಗೂ ಚಿತ್ರದ ಕುರಿತು ಮಾತನಾಡಿದರು.

ಮಲೆನಾಡನ್ನು ಕೇವಲ ಪ್ರವಾಸಿತಾಣನಾಗಷ್ಟೇ ನೋಡುತ್ತಿದ್ದೇವೆ. ಆದರೆ ಅಲ್ಲಿನ ಸಂಸ್ಕೃತಿಯ ಪರಿಚಯದ ಜೊತೆಗೆ ಸಮಸ್ಯೆಗಳನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎನ್ನುತ್ತಾರೆ ನಾಗಶ್ರೀ ಬೇಗಾರ್‌.

ನಿರ್ದೇಶಕ ರಮೇಶ್ ಬೇಗಾರ್ ಅವರ ಕಾರ್ಯವೈಖರಿ ನನಗೆ ಇಷ್ಟ. ಹಾಗಾಗಿ ಅವರ ಎರಡನೇ ಚಿತ್ರದಲ್ಲೂ ನಟಿಸಿದ್ದೇನೆ ಎಂದರು ನಟ ಪ್ರಮೋದ್ ಶೆಟ್ಟಿ.

ಚಿತ್ರದಲ್ಲ ನಟಿಸಿರುವ ಎಂ.ಆರ್ ಸುರೇಶ್, ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ, ಗಾಯಕಿ ಪದ್ಮಿನಿ ಓಕ್ ಹಾಗೂ ಛಾಯಾಗ್ರಾಹಕ ಶಶೀರ್ “ಜಲಪಾತ” ಚಿತ್ರದ ಬಗ್ಗೆ ಮಾತನಾಡಿದರು. ಸಿನಿಮಾ ತಂಡದ ಅಭಿಷೇಕ್ ಹೆಬ್ಬಾರ್ , ಕಾರ್ತಿಕ್ , ಚಿದಾನಂದ ಹೆಗ್ಗಾರ್ , ರಶ್ಮಿ ಮೊದಲಾದವರು ಉಪಸ್ಥಿತರಿದ್ದರು

Categories
ಸಿನಿ ಸುದ್ದಿ

ಜಾಲಿವುಡ್ ಎಂಬ ಬ್ಯೂಟಿಫುಲ್ ಶೂಟಿಂಗ್ ಸ್ಪಾಟ್: ಭಾರತೀಯ ಚಿತ್ರಗಳಿಗೆ ಸೂಕ್ತ ಜಾಗ

ಸ್ಯಾಂಡಲ್ವುಡ್, ಬಾಲಿವುಡ್ , ಮಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ರಾಜ್ಯಗಳ ಚಿತ್ರರಂಗವರು ಚಿತ್ರಿಕರಣ ನಡೆಸಲು ಅದ್ಭುತವಾದ ಲೊಕೇಶನ್ ಬಿಡದಿ ಬಳಿ ನಿರ್ಮಾಣವಾಗಿದೆ. ಅದೇ “ಜಾಲಿವುಡ್”.
ಈ ಹಿಂದೆ ಇನ್ನೋವೇಟೀವ್ ಫಿಲ್ಮ್ ಸಿಟಿ ಎಂದು ಗುರುತಿಸಿಕೊಂಡಿದ್ದ ಜಾಗವನ್ನು ಉದ್ಯಮಿ ಐಸಿರಿ ಗಣೇಶ್ ವಹಿಸಿಕೊಂಡು “ಜಾಲಿವುಡ್” ಹೆಸರಲ್ಲಿ ಮರು ನಾಮಕರಣ ಮಾಡಿದ್ದಾರೆ. ಹಲವು ವಿಶೇಷಗಳಿಂದ ಕೂಡಿರುವ “ಜಾಲಿವುಡ್” ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ.

ಚಿತ್ರೀಕರಣಕಷ್ಟೇ ಅಲ್ಲ. “ಜಾಲಿವುಡ್”, ಬಿಡುವಿನ ಸಮಯ ಕಳೆಯಲು ಬಯಸುವ ಮಂದಿಗೆ ಸೂಕ್ತ ಸ್ಥಳ, ಆಟ, ಊಟ ಮನರಂಜನೆ ಸೇರಿದಂತೆ ಹತ್ತು ಹಲವು ಕ್ರೀಡೆಗಳು ಜನರನ್ನು ಕೈ ಬೀಸಿ ಕರೆಯುತ್ತಿದೆ. ಜೊತೆಗೆ ಮಿನಿ ಗೋವಾ ನಿರ್ಮಾಣ ಮಾಡಿದ್ದು ಗೋವಾಕ್ಕೆ ಹೋದರೆ ಜನರಿಗೆ ಯಾವ ಅನುಭವ ಸಿಗುತ್ತದೆಯೋ ಅದನ್ನು ಜಾಲಿವುಡ್ ನಲ್ಲಿ ಕಟ್ಟಿಕೊಡುವ ಕೆಲಸ ಮಾಡಲಾಗಿದೆ ಎಂದು ಜಾಲಿವುಡ್ ಕಮರ್ಷಿಯಲ್ ಪಾರ್ಟನರ್ ನವರಸನ್ ಮಾಹಿತಿ ಹಂಚಿಕೊಂಡರು.

” ಜಾಲಿವುಡ್” ಕಳೆದ ತಿಂಗಳು ಅದ್ದೂರಿಯಾಗಿ ಉದ್ಘಾಟನೆಯಾಗಿತ್ತು. ಈಗ ಪ್ರತಿನಿತ್ಯ 700 ರಿಂದ 800 ಮಂದಿ ಭೇಟಿ ನೀಡುತ್ತಿದ್ದಾರೆ‌. ವಾರಾಂತ್ಯದಲ್ಲಿ ಈ ಸಂಖ್ಯೆ ಸಾವಿರ ಗಡಿ ದಾಟಲಿದೆ. ವಯಸ್ಕರಿಗೆ 999ರೂ, ಮಕ್ಕಳಿಗೆ 699 ಹಾಗು ಹಿರಿಯ ನಾಗರಿಕರಿಗೆ 599 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿದೆ. ಅಕ್ಟೋಬರ್ 15 ರ ತನಕ ಊಟವನ್ನು ಉಚಿತವಾಗಿ ನೀಡಲಾಗುವುದು. ಈಗಾಗಲೇ ಹಲವು ಕ್ರೀಡಾ ಚಟುವಟಿಕೆಗಳು ಅರಂಭವಾಗಿವೆ ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಕ್ರೀಡೆಗಳು ಪ್ರಾರಂಭವಾಗಲಿದೆ.

“ಜಾಲಿವುಡ್” ನಲ್ಲಿ ಚಿತ್ರೀಕರಣ, ಪೋಟೋ ಶೂಟ್, ಕಾರ್ಪರೇಟ್ ಕಂಪನಿಯ ಪ್ರೋಗ್ರಾಮ್ ಗಳು, ಟಿವಿ ವಾಹಿನಿಯ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಬೃಹತ್ ಹಾಲ್ ಗಳಿವೆ. ಸರಿ ಸುಮಾರು 2 ,500 ಜನರ ಸಾಮರ್ಥ್ಯದ ವೇದಿಕೆ ಸೇರಿದಂತೆ ಹಲವು ಸೌಲಭ್ಯಗಳಿವೆ.

“ಜಾಲಿವುಡ್” ಗೆ ಬಂದವರು ದಿನ ಪೂರ ಮಕ್ಕಳು, ಕುಟುಂಬದೊಂದಿಗೆ ಕಾಲಕಳೆದು ಎಂಜಾಯ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಮನರಂಜನಾ ಪಾರ್ಕ್ ಎಲ್ಲರಿಗೂ ಇಷ್ಟವಾಗಲಿದೆ .ಅದಕ್ಕಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು “ಜಾಲಿವುಡ್” ಜನರಲ್ ಮ್ಯಾನೇಜರ್ ಬಷೀರ್ ತಿಳಿಸಿದರು.

Categories
ಸಿನಿ ಸುದ್ದಿ

ಟಾಲಿವುಡ್ ನಲ್ಲಿ ಕನ್ನಡ ಪ್ರತಿಭೆ: ಡ್ಯಾನಿ ಕುಟ್ಟಪ್ಪ ಎಂಬ ಸ್ಟೈಲಿಶ್ ವಿಲನ್ ಅಬ್ಬರ ಜೋರು

ಕನ್ನಡದ ಅನೇಕ ಸ್ಟಾರ್ ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿರುವ ನಟ ಡ್ಯಾನಿ ಕುಟ್ಟಪ್ಪ ಈಗ ತೆಲುಗು ಚಿತ್ರ ರಂಗದಲ್ಲೂ ಮಿಂಚಿದ್ದಾರೆ. ಬೋಯಾಪಾಟಿ ಶ್ರೀನಿ, ರಾಮ್‍ ಪೋತಿನೇನಿ ಜೋಡಿಯ ‘ಸ್ಕಂದ’ ಚಿತ್ರದಲ್ಲಿ ಕನ್ನಡದ ‘ಬೆಂಕಿ ಕಂಗಳ ನಟ ಅಬ್ಬರಿಸಿದ್ದಾರೆ ಅನ್ನೋದು ವಿಶೇಷ.

ಕನ್ನಡ ಚಿತ್ರರಂಗದಲ್ಲಿ ‘ಬೆಂಕಿ ಕಂಗಳ ನಟ’ ಎಂದೇ ಜನಪ್ರಿಯರಾಗಿರುವ ಡ್ಯಾನಿ ಕುಟ್ಟಪ್ಪ ಈಗ ತೆಲುಗಿನಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗಿನ ಮಾಸ್‍ ನಿರ್ದೇಶಕ ಬೋಯಾಪಾಟಿ ಶ್ರೀನು ನಿರ್ದೇಶನದ, ರಾಮ್‍ ಪೋತಿನೇನಿ ಅಭಿನಯದ ‘ಸ್ಕಂದ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಡ್ಯಾನಿಗೆ ಟಾಲಿವುಡ್‍ ಹೊಸದೇನಲ್ಲ. ‘ಬಾಹುಬಲಿ’ ಚಿತ್ರದ ಮೂಲಕ ತೆಲುಗಿಗೆ ಹೊರಟ ಅವರು, ನಂತರ ‘ಗದ್ದಲಕೊಂಡ ಗಣೇಶ್‍’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈಗ ‘ಸ್ಕಂದ’ ಚಿತ್ರದಲ್ಲಿ ಅತೀ ಮುಖ್ಯವಾದ ನೆಗೆಟಿವ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಡ್ಯಾನಿ ಕುಟ್ಟಪ್ಪ ಅವರ ಪಾತ್ರದ ಪರಿಚಯವೂ ಇದೆ.
ಅದರ ಜೊತೆಗೆ, ಇತ್ತೀಚೆಗೆ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಬೋಯಾಪಾಟಿ ಶ್ರೀನು, ಡ್ಯಾನಿ ಕುಟ್ಟಪ್ಪ ಅವರನ್ನು ಆಂಧ್ರದ ಜನತೆಗೆ ಪರಿಚಯಿಸಿಕೊಡುವ ಜೊತೆಗೆ, ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಡ್ಯಾನಿ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಸಾವಿರಾರು ಜನರ ಮುಂದೆ ಹೊಗಳಿದ್ದಾರೆ. ತೆಲುಗಿನಲ್ಲಿ ‘ಅಖಂಡ’, ‘ಲೆಜೆಂಡ್‍’, ‘ಸಿಂಹ’ ಮುಂತಾದ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಬೋಯಾಪಾಟಿ ಶ್ರೀನು ಅವರಿಂದ ಮೆಚ್ಚುಗೆಯ ಮಾತುಗಳು ಕೇಳುವುದು ಅಷ್ಟು ಸುಲಭದ ಮಾತಲ್ಲ. ಅಂತಹ ಮಾತುಗಳನ್ನು ಕೇಳಿ ಡ್ಯಾನಿ ಖುಷಿಯಾಗಿದ್ದಾರೆ.


‘ಬೋಯಾಪಾಟಿ ಶ್ರೀನು ಅವರು ಪ್ರತಿ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದರಿಂದ ಹಿಡಿದು, ಆ ಪಾತ್ರ ಹೇಗಿರಬೇಕು, ಏನು ಮಾಡಬೇಕು ಎಂಬ ಸಣ್ಣಸಣ್ಣ ವಿವರಗಳಿಗೂ ಮಹತ್ವ ಕೊಡುತ್ತಾರೆ. ಯಾರಾದರೂ ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಜವಾಬ್ದಾರಿಯೂ ಇನ್ನಷ್ಟು ಹೆಚ್ಚುತ್ತದೆ. ಪಾತ್ರಕ್ಕೆ ಇನ್ನಷ್ಟು ಸಮರ್ಪಿಸಿಕೊಳ್ಳಬೇಕು ಎಂದು ಸ್ಫೂರ್ತಿ ಬರುತ್ತದೆ’ ಎನ್ನುತ್ತಾರೆ ಡ್ಯಾನಿ.


‘ಸ್ಕಂದ’ ಚಿತ್ರಕ್ಕಾಗಿ 20 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ ಡ್ಯಾನಿ ಕುಟ್ಟಪ್ಪ. ರಾಮೋಜಿ ಫಿಲಂ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್‍ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಹಲವು ಸಾಹಸಮಯ ಸನ್ನಿವೇಶಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಪಾತ್ರವನ್ನು Rude and Rough ಎಂದು ಬಣ್ಣಿಸುವ ಅವರು, ಈ ಚಿತ್ರವು ತಮ್ಮ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.


ಇನ್ನು, ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ಹೊಸಬರು, ಹಳಬರು ಎನ್ನದೇ ಎಲ್ಲರೊಂದಿಗೂ ಕೆಲಸ ಮಾಡಲು ಎದುರು ನೋಡುತ್ತಿರುವ ಡ್ಯಾನಿ ಕುಟ್ಟಪ್ಪ, ‘ಇಂಥವರು ಇಂಥ ಪಾತ್ರ ಮಾಡಬೇಕು ಎನ್ನುವುದಕ್ಕಿಂತ ಆ ಪಾತ್ರದ ಕುರಿತು ಆರೋಗ್ಯಕರ ಚರ್ಚೆಗಳಾಗಬೇಕು. ಒಬ್ಬ ನಿರ್ದೇಶಕ ಮತ್ತು ನಟನ ನಡುವೆ ಚರ್ಚೆಗಳಾದಾಗ, ಒಂದೊಳ್ಳೆಯ ಪಾತ್ರ ಮತ್ತು ಚಿತ್ರವನ್ನು ಮಾಡಬಹುದು’ ಎನ್ನುತ್ತಾರೆ.

Categories
ಸಿನಿ ಸುದ್ದಿ

ಅಯ್ಯಯ್ಯೋ ರಾಮ… ಇದು ಅರಸಯ್ಯನ ಪ್ರೇಮ ಪ್ರಸಂಗ! ಹಾಡು ಬಂತು

“ಫ್ರೆಂಚ್ ಬಿರಿಯಾನಿ” , “ಗುರು ಶಿಷ್ಯರು” ಚಿತ್ರದ ಮೂಲಕ ಜನಪ್ರಿಯರಾಗಿರುವ ಮಹಾಂತೇಶ್ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಅರಸಯ್ಯನ ಪ್ರೇಮಪ್ರಸಂಗ” ಚಿತ್ರಕ್ಕಾಗಿ ಕೃಷ್ಣ ರಿತ್ತಿ ಬರೆದಿರುವ “ಅಯ್ಯಯ್ಯೋ ರಾಮ” ಚಿತ್ರದ ಹಾಡು ಬಿಡುಗಡೆಯಾಗಿದೆ. ಪ್ರವೀಣ್ – ಪ್ರದೀಪ್ ಸಂಗೀತ ನೀಡಿದ್ದಾರೆ‌. ಶಂಕರ್ ಭಾರತಿಪುರ ಹಾಡಿದ್ದಾರೆ. ಗ್ರಾಮೀಣ ಸೊಗಡಿನ ಈ ಹಾಡು ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಇತ್ತೀಚೆಗೆ ಈ ಹಾಡನ್ನು ನಟ ನವೀನ್ ಶಂಕರ್ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ನಾನು ಅಭಿನಯ ತರಂಗದಲ್ಲಿ ನಟನೆ ಹಾಗೂ ನಿರ್ದೇಶನದ ತರಬೇತಿ ಪಡೆದಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಜೆ.ವಿ.ಆರ್ ದೀಪು, ನಿರ್ಮಾಪಕ ರಾಜೇಶ್ ಸಹ ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದರು. ಈ ಚಿತ್ರದ ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಈ ಚಿತ್ರ ಕಾಮಿಡಿ ಡ್ರಾಮ ಎನ್ನಬಹುದು. ಹಾಡಿನ ಬಗ್ಗೆ ಹೇಳಬೇಕಾದರೆ, ಹಳ್ಳಿಗಳಲ್ಲಿ ಯಾರಾದರೂ ಸತ್ತಾಗ ರಾತ್ರಿ ಸಮಯದಲ್ಲಿ ಭಜನೆ ಮಾಡುತ್ತಾರೆ. ಆ ರೀತಿ ನಮ್ಮ ಚಿತ್ರದಲ್ಲೂ ಬರುವ ಒಂದು ಪ್ರಸಂಗದಲ್ಲಿ ಈ ಹಾಡು ಬರುತ್ತದೆ. ಪ್ರವೀಣ್ – ಪ್ರದೀಪ್ ಸಂಗೀತದಲ್ಲಿ, ಶಂಕರ್ ಭಾರತಿಪುರ ಅವರ ಕಂಠಸಿರಿಯಲ್ಲಿ ಈ ಹಾಡು ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.



ನಾನು ಕೂಡ ಅಭಿನಯ ತರಂಗದ ವಿದ್ಯಾರ್ಥಿ. ನಿರ್ದೇಶಕ ದೀಪು ಈ ಕಥೆ ಹೇಳಿದಾಗ, ಗ್ರಾಮೀಣ ಸೊಗಡಿನ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನನ್ನ ಪತ್ನಿ ಮೇಘಶ್ರೀ ರಾಜೇಶ್ ಈ ಚಿತ್ರದ ನಿರ್ಮಾಪಕಿ. ಇಂದು ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ರಾಜೇಶ್.

ನಾನು ನಾಯಕ ಎಂದು ಯಾವತ್ತೂ ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಪೋಷಕ ನಟನಾಗಿರುವುದಕ್ಕೆ ಇಷ್ಟ ಪಡುತ್ತೇನೆ. ನಿರ್ಮಾಪಕರು, ನಿರ್ದೇಶಕರು ನೀನೇ ಈ ಚಿತ್ರದ ನಾಯಕ ಎಂದಾಗ ಆಶ್ಚರ್ಯವಾಯಿತು. ದೀಪು ಹಳ್ಳಿಸೊಗಡಿನ ಅದ್ಭುತ ಕಥೆ ಆಯ್ಕೆ ಮಾಡಿಕೊಂಡು, ಅಷ್ಟೇ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಜನಪ್ರಿಯವಾಗಲಿದೆ‌‌‌. ಚಿತ್ರ ಕೂಡ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ನಟ ಮಹಾಂನತೇಶ್ ಹಿರೇಮಠ್ ತಿಳಿಸಿದರು.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರವೀಣ್ – ಪ್ರದೀಪ್ ಮಾಹಿತಿ ನೀಡಿದರು. ಗಾಯಕ ಶಂಕರ್ ಭಾರತಿಪುರ ಗಾಯನದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ನಾಯಕಿ ರಶ್ಮಿತಾ ಗೌಡ, ವಿಜಯ್ ಚೆಂಡೂರ್, ರಘು ರಾಮನಕೊಪ್ಪ, ಪಿ.ಡಿ.ಸತೀಶ್ ಸೇರಿದಂತೆ ಅನೇಕ ಕಲಾವಿದರು, ಛಾಯಾಗ್ರಾಹಕ ಗುರುಪ್ರಸಾದ್ ನರ್ನಾಡ್ , ಸಂಕಲನಕಾರ ಸುನೀಲ್ ಕಶ್ಯಪ್ ಮುಂತಾದ ತಂತ್ರಜ್ಞರು “ಅರಸಯ್ಯನ ಪ್ರೇಮಪ್ರಸಂಗ” ದ ಬಗ್ಗೆ ಮಾತನಾಡಿದರು. .

Categories
ಸಿನಿ ಸುದ್ದಿ

ಬೆಂಗಳೂರು ನಗರದಲ್ಲಿ ಗನ್ಸ್ ಅಂಡ್ ರೋಸಸ್!

ಭೂಗತ ಜಗತ್ತಿನ ಕಥೆಯ ಜೊತೆಗೆ ಪ್ರೇಮ ಕಥಾನಕವನ್ನು ಹೊಂದಿರುವ “ಗನ್ಸ್ ಅಂಡ್ ರೋಸಸ್” ಚಿತ್ರಕ್ಕೆ ಉದ್ಯಾನನಗರಿ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರಿನ ಕೆಂಗೇರಿ ಸುತ್ತಮುತ್ತ, ಕಂಠೀರವ ಸ್ಟುಡಿಯೋ, ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಬೆಂಗಳೂರು ನಗರದಲ್ಲೇ ನಡೆಯುವ ಕಥೆಯಾಗಿರುವುದರಿಂದ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಮಾತಿನ ಭಾಗದ ಚಿತ್ರೀಕರಣ, ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಥ್ರಿಲ್ಲರ್ ಮಂಜು ಈ ಚಿತ್ರದ ಸಾಹಸ ನಿರ್ದೇಶಕರು.

ಹೆಚ್ ಆರ್ ನಟರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಹೆಚ್ ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಶರತ್ ಎಸ್ ಅವರದು.

ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಖ್ಯಾತ ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಶೋಭ್ ರಾಜ್, ಅವಿನಾಶ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

Categories
ಸಿನಿ ಸುದ್ದಿ

ಬರ್ಮ ಸಿನಿಮಾಗೆ ಚಾಲನೆ: ಚೇತನ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ರಕ್ಷ್ ರಾಮ್ ಹೀರೋ

ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ಚಿತ್ರಗಳ ನಿರ್ದೇಶಕ ಹಾಗೂ ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ ನಿರ್ದೇಶನದ ಹಾಗೂ “ಗಟ್ಟಿಮೇಳ” ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ “ಬರ್ಮ” ಚಿತ್ರದ ಮುಹೂರ್ತ ಸಮಾರಂಭ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಆರಂಭ ಫಲಕ ತೋರಿದರು. ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಿರ್ದೇಶಕ ಎ.ಪಿ.ಅರ್ಜುನ್, ನಟ ಧೀರನ್ ರಾಮಕುಮಾರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚೇತನ್ ಕುಮಾರ್ ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡಿರುತ್ತಾರೆ. ರಕ್ಷ್ ಈ ಸಿನಿಮಾ ಮೂಲಕ ನಾಯಕನಾಗುತ್ತಿದ್ದಾರೆ. ಇಡೀ “ಬರ್ಮ” ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾರೈಸಿದರು.

“ಬರ್ಮ” ನನ್ನ ನಿರ್ದೇಶನದ ಐದನೇ ಚಿತ್ರ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಚೇತನ್ ಕುಮಾರ್, “ಬರ್ಮ” ಎಂದರೆ ಬ್ರಹ್ಮ ವಾಸಿಸುವ ಜಾಗ ಹಾಗೂ ಒಂದು ಕಂಟ್ರಿಯ ಹೆಸರು ಕೂಡ. ಈ ಹೆಸರು ಚಿತ್ರದ ಕಥೆಗೆ ಪೂರಕವಾಗಿದೆ. ಹಾಗಾಗಿ “ಬರ್ಮ” ಎಂದು ಹೆಸರಿಟ್ಟಿದ್ದೇವೆ. ಚಿತ್ರದ ನಾಯಕ ರಕ್ಷ್ ಈಗಾಗಲೇ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಅವರೆ ಈ ಚಿತ್ರದ ನಿರ್ಮಾಪಕರು ಕೂಡ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಐದು ಭಾಷೆಗಳ ಆಡಿಯೋ ಹಕ್ಕನ್ನು ಡಿ ಬಿಟ್ಸ್ ಸಂಸ್ಥೆ ಪಡೆದುಕೊಂಡಿದೆ.

ವಿ.ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸಂಕೇತ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ, ಹೀಗೆ ಅನೇಕ ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅಕ್ಟೋಬರ್ 3 ರಿಂದ ಮಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆದಿತ್ಯ ಮೆನನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿನ ಹಾಗೂ ಬೇರೆ ಭಾಷೆಗಳ ಹೆಸರಾಂತ ಕಲಾವಿದರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.

“ಪುಟ್ಟಗೌರಿ ಮದುವೆ”ಯಿಂದ ” ಗಟ್ಟಿಮೇಳ ” ಧಾರಾವಾಹಿ ತನಕ ಸುಮಾರು ಮೂರು ಸಾವಿರ ಎಪಿಸೋಡ್ ಗಳಲ್ಲಿ ನಟಿಸಿದ್ದೇನೆ. ಕನ್ನಡಿಗರು ನನ್ನ ಪಾತ್ರವನ್ನು ಮೆಚ್ಚಿ ತೋರಿರುವ ಪ್ರೀತಿಗೆ ನಾನು ಚಿರ ಋಣಿ. ನಾನು ಚೇತನ್ ಅವರನ್ನು ಬಹಳ ವರ್ಷಗಳಿಂದ ನನ್ನ ಜೊತೆ ಸಿನಿಮಾ ಮಾಡಿ ಎಂದು ಕೇಳಿದ್ದೆ. ಅದು ಈಗ ಕೂಡಿ ಬಂದಿದೆ. ಇಡೀ ಕುಟುಂದವರೆಲ್ಲಾ ಒಟ್ಟಾಗಿ ಕುಳಿತು ನೋಡುವಂತಹ ಒಳ್ಳೆಯ ಕಥೆಯನ್ನು ನಿರ್ದೇಶಕರು ಸಿದ್ದ ಮಾಡಿಕೊಂಡಿದ್ದಾರೆ. ನಮ್ಮ ಸಂಸ್ಥೆಯ ಮೂಲಕ ನಾನು ಹಾಗೂ ನನ್ನ ಪತ್ನಿ ಅನುಶಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ನಮಗಿರಲಿ ಎಂದರು ನಾಯಕ ರಕ್ಷ್ ರಾಮ್.

“ಗಟ್ಟಿಮೇಳ” ಧಾರಾವಾಹಿ ನಿರ್ಮಾಣ ಮಾಡಿರುವ ನಮ್ಮ ಶ್ರೀ ಸಾಯಿ ಆಂಜನೇಯ ಕಂಪನಿ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನನ್ನ ಪತಿ ರಕ್ಷ್ ಅವರೆ ಈ ಚಿತ್ರದ ನಾಯಕನಾಗಿರುವುದು ಖುಷಿಯ ವಿಷಯ ಎನ್ನುತ್ತಾರೆ ನಿರ್ಮಾಪಕಿ ಅನುಶಾ.

ಹಾಡುಗಳ ಬಗ್ಗೆ ಹರಿಕೃಷ್ಣ ಮಾಹಿತಿ ನೀಡಿದರು. ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್ ಈ ಚಿತ್ರದ ಐದು ಭಾಷೆಗಳ ಆಡಿಯೋ ಹಕ್ಕನ್ನು ಪಡೆದಿರುವುದಾಗಿ ಹೇಳಿದರು.

Categories
ಸಿನಿ ಸುದ್ದಿ

ಎಸ್ತರ್ ನರೋನ್ಹಾ ಈಗ ನಿರ್ದೇಶಕಿ: ದಿ ವೆಂಕಟ್ ಹೌಸ್ ಸಿನಿಮಾ ಸಾಂಗ್ ರಿಲೀಸ್

ಬಹುಭಾಷಾ ನಟಿ ಎಸ್ತರ್ ನರೋನ್ಹಾ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈಗಾಗಲೇ ‘ದಿ ವೆಕೆಂಟ್ ಹೌಸ್’ ಸಿನಿಮಾದ ಫಸ್ಟ್ ಲುಕ್ ಭಾರಿ ಸದ್ದು ಮಾಡಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಮೊದಲ ಹಾಡು ಕೇಳುಗರನ್ನು ಇಂಪ್ರೆಸ್ ಮಾಡುತ್ತಿದೆ.

ಎಸ್ತರ್ ನರೋನ್ಹಾ ಮಾತನಾಡಿ, ಲಾಕ್ ಡೌನ್ ನಲ್ಲಿ ಶುರುವಾದ ಪ್ರಯತ್ನ ಇದು. ಈ ಸಿನಿಮಾದಲ್ಲಿ ಕಾಣಿಸುವುದು ನಮ್ಮ ತೋಟದ ಮನೆ. ಲಾಕ್ ಡೌನ್ ಟೈಮ್ ನಲ್ಲಿ ನಾವು ಅಲ್ಲಿಗೆ ಶಿಫ್ಟ್ ಆಗಿದ್ದೆವು. ಆ ಟೈಮ್ ನಲ್ಲಿ ಒನ್ ಲೈನ್ ಹೊಳೆಯಿತು. ಅದನ್ನು ನಮ್ಮ ತಾಯಿ ಬಳಿ ಚರ್ಚೆ ಮಾಡಿ ಕಥೆ ಬರೆಯಲು ಶುರು ಮಾಡಿದೆ. ಕಥೆ ರೆಡಿಯಾಯ್ತು. ನಾನೇ ಸಿನಿಮಾ ಡೈರೆಕ್ಟರ್ ಮಾಡ್ತೀನಿ ಅಂದುಕೊಂಡಿರಲಿಲ್ಲ. ಕಥೆ ಬರೆದ ಮೇಲೆ ಬೇರೆ ಅವರ ಹತ್ತಿರ ರಿಕ್ವೆಸ್ಟ್ ಮಾಡುವುದು ಹೇಗೆ? ಲಾಕ್ ಡೌನ್ ಇರೋದ್ರಿಂದ ಅವರು ಬರುವುದು ಹೇಗೆ ಎಲ್ಲಾ ಸಮಸ್ಯೆ. ಹೀಗಾಗಿ ನಾನೇ ನಿರ್ದೇಶಿಸಿದೆ. ಇದೊಂದು ಫ್ಯಾಮಿಲಿ ವೆಂಚರ್ಸ್ ಸಿನಿಮಾ. ಕೊಂಕಣಿ ಹಾಗೂ ಕನ್ನಡ ಎರಡು ಭಾಷೆಯಲ್ಲಿ ಸಿನಿಮಾ ಮಾಡಿದ್ದೇವೆ. ಒಂದೊಳ್ಳೆ ಟೈಮ್ ನೋಡಿ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದರು.

ಎಸ್ತರ್‌ ನರೋನಾ ಮೂಲತಃ ಮಂಗಳೂರಿನವರಾದರು. ಬೆಳೆದದ್ದು ಮುಂಬೈನಲ್ಲಿ. ಉಸಿರಿಗಿಂತ ನೀನೇ ಹತ್ತಿರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತು ಹಿಂದಿ ಚಿತ್ರರಂಗ ಪ್ರವೇಶಿಸಿದ ಎಸ್ತರ್, ಮುಂದೆ ತೆಲುಗು, ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿದರು. .

ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಗ್ಲಾಮರ್ ಬ್ಯೂಟಿ ಎಸ್ತರ್ ನರೋನ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಜೆನೆಟ್ ನರೋನಾ ಪ್ರೊಡಕ್ಷನ್ ನಡಿ ನಿರ್ಮಾಣ ಮಾಡಲಾಗಿದ್ದು, ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಸಿನಿಮಾಕ್ಕಿದೆ. ಫಸ್ಟ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ದಿ ವೆಕೆಂಟ್ ಹೌಸ್’ ಸಿನಿಮಾ ಶೀಘ್ರದಲ್ಲಿ ತೆರೆಗೆ ಬರಲಿದೆ.

error: Content is protected !!