Categories
ಸಿನಿ ಸುದ್ದಿ

ಇದು ಆನಂದ ಕೋಳಿ! ನಾ ಕೋಳಿಕ್ಕೆ ರಂಗ ನವೆಂಬರ್ 10 ಕ್ಕೆ ರಿಲೀಸ್

ನಾನು‌ ಕೋ ಕೋ ಕೋಳಿಕ್ಕೆ ರಂಗ…’ ಬಹುಶಃ ಈ ಹಾಡನ್ನು ಕೇಳದವರೇ ಇಲ್ಲ. ಈ ಹಾಡು ಇಂದಿಗೂ ಎವರ್ ಗ್ರೀನ್. ಇಷ್ಟಕ್ಕೂ ಈ ಹಾಡಿನ ಬಗ್ಗೆ ಹೇಳೋಕೆ ಕಾರಣ ‘ ನಾ ಕೋಳಿಕ್ಕೆ‌ರಂಗ’ ಸಿನಿಮಾ. ಹೌದು, ಮಾಸ್ಟರ್ ಆನಂದ್ ಈ ಸಿನಿಮಾದ ಹೀರೋ. ಇದೊಂದು ಹಳ್ಳಿ ಕಥೆ. ಸಿನಿಮಾದ ಶೀರ್ಷಿಕೆ ಹೇಳುವಂತೆ, ಕೋಳಿ ಹಾಗು ರಂಗನ ಕಥೆ. ಅದೊಂದು ಅಪರೂಪದ‌ ಭಾವ ಸಂಗಮ. ಈ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 10 ರಂದು ರಿಲೀಸ್ ಆಗುತ್ತಿದೆ.

ತಮ್ಮ ಸಿನಿಮಾ ಬಗ್ಗೆ ಮಾತಿಗಿಳಿದ ನಾಯಕ ಮಾಸ್ಟರ್ ಆನಂದ್, ‘ಕೊರೊನಾ ಮೊದಲು ಚಿತ್ರ ಶುರುವಾಗಿತ್ತು. ಆ ನಂತರ ಸಮಸ್ಯೆ ಎದುರಾಯ್ತು. ಈಗ ಸಿನಿಮಾ ಪ್ರೇಕ್ಷಕರ ಎದುರು ಬರಲು ರೆಡಿಯಾಗಿದೆ. ಚಿತ್ರದಲ್ಲೊಂದು ಹಾಡಿದೆ. ‘ ಮರೆಯೋದುಂಟೆ ಮೈಸೂರ ದೊರೆಯ’ ಈ ಹಾಡು ಹೈಲೆಟ್. ಮೈಸೂರು ದಸರಾ ಮತ್ತು‌ ಮಹಾರಾಜರ ಬಗ್ಗೆ ವಿಷಯವಿದೆ. ಹಾಗಾಗಿ ದಸರಾ ವೇಳೆ ರಿಲೀಸ್ ಮಾಡುವ ಉದ್ದೇಶ ಇತ್ತು. ನವೆಂಬರ್ 10 ರಂದು ಬಿಡುಗಡೆ ಆಗಲಿದೆ ಎಂದರು.

ಇಲ್ಲಿ ಕೋಳಿ ರಂಗ ಮತ್ತು ಅಮ್ಮನ ಕಥೆ ಇದೆ. ಮಂಡ್ಯ ಭಾಗದಲ್ಲೇ ಶೇ. 90 ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅಲ್ಲಿನ ಸಂತೆ ಕಸಲಗೆರೆ ಎಂಬ ಊರಲ್ಲಿ ಶೂಟಿಂಗ್ ಆಗಿದ್ದು ವಿಶೇಷ. ಮಂಡ್ಯ ಮೈಸೂರು ಸೊಗಡಿನ ಭಾಷೆ ಇದೆ.

ಇನ್ನು‌ ಭವ್ಯಾ ಮೇಡಮ್ ಅವರು ತಾಯಿ ಪಾತ್ರ ಮಾಡಿದ್ದಾರೆ. ಅವರು ಹಿರಿಯ ಕಲಾವಿದರು. ನನ್ನ ತಾಯಿ ಪಾತ್ರ ಮಾಡಲು ಒಪ್ಪಿದ್ದೇ ಖುಷಿ. ಇದೊಂದು ರೀತಿ ಟ್ರಯಂಗಲ್ ಸ್ಟೋರಿ. ಹಾಗಂತ ಲವ್ ಸ್ಟೋರಿ ಅಲ್ಲ, ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಇದೆ. ಕೋಳಿ ಮತ್ತು ಅಮ್ಮನ ಮೇಲೆ ರಂಗನಿಗೆ ಪ್ರೀತಿ. ಘಟನೆ ಒಂದರಲ್ಲಿ ರಂಗನಿಗೆ ಈ ಎರಡರಲ್ಲಿ ಯಾವುದು ಮುಖ್ಯ ಆಗುತ್ತೆ ಅನ್ನೋದು ಸಸ್ಪೆನ್ಸ್.

ಇಲ್ಲಿ ಮನರಂಜನೆ ಜಾಸ್ತಿ ಇದೆ. ರಾಜೇಶ್ವರಿ ಅವರು ನಾಯಕಿಯಾಗಿ ಚೆನ್ನಾಗಿ ನಟಿಸಿದ್ದಾರೆ. ಹಳ್ಳಿ ಪ್ರಭಾವಿ ವ್ಯಕ್ತಿ ಮೇಲೆ ದ್ವೇಷ ಬರಲು ನಾಯಕಿ ಕಾರಣ. ಊರು ಬಿಡೋಕು‌ ನಾಯಕಿ ಕಾರಣ ಆಗುತ್ತಾಳೆ. ಕಾಮಿಡಿ ಕಿಲಾಡಿ ತಂಡ ಕೂಡ ನಟಿಸಿದೆ.

ಉಳಿದಂತೆ ಹಾಸ್ಯ ಸನ್ನಿವೇಶದಲ್ಲಿ ಸ್ವತಂತ್ರ ನೀಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಕೂಡ ಸಿನಿಮಾಗೆ ಯಾವ ಕೊರತೆ ಇಲ್ಲದಂತೆ ಮಾಡಿದ್ದಾರೆ. ರಾಜು ಎಮ್ಮಿಗನೂರು ಸಂಗೀತ ಇದೆ. ಇದೇ ಮೊದಲ ಸಲ ಅಪ್ಪು ಅವರು ನನ್ನ ಸಿನಿಮಾದ ಇಂಟ್ರಡಕ್ಷನ್ ಸಾಂಗ್ ಹಾಡಿದ್ದಾರೆ. ಅದು ಮರೆಯದ ಅನುಭವ ಎಂದರು ಮಾಸ್ಟರ್ ಆನಂದ್.

ನಿರ್ದೇಶಕ ಗೊರವಾಲೆ ಮಹೇಶ್ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಮೌಢ್ಯಗಳ ಕುರಿತು ಕಥೆ ಸಾಗಲಿದೆ. ಹರಕೆಗೆ ಬಲಿ ಬಗ್ಗೆಯ ಹಳ್ಳಿ ಕಥೆ ಇದೆ. ಒಂದೊಳ್ಳೆಯ ವಿಷಯ ಈ ಮೂಲಕ ಹೇಳ ಹೊರಟಿದ್ದೇನೆ. ಮಾಸ್ಟರ್ ಆನಂದ್ ಅದ್ಭುತವಾಗಿ ನಟಿಸಿದ್ದಾರೆ. ಭವ್ಯಾ ಮೇಡಮ್ ತಾಯಿ ಪಾತ್ರದ ಮೂಲಕ ಭಾವುಕತೆ ಹೆಚ್ಚಿಸುತ್ತಾರೆ. ಇಡೀ ಚಿತ್ರ ನಗಿಸುತ್ತಲೇ ಭಾವುಕತೆಗೆ ದೂಡುತ್ತದೆ ಎಂದರು ಗೊರವಾಲೆ ಮಹೇಶ್.

ಹಿರಿಯ ಕಲಾವಿದೆ ಭವ್ಯಾ ಮಾತನಾಡಿ, ಒಂದು ಭಾವನಾತ್ಮಕ ವಿಷಯದ ಸುತ್ತ ಕಥೆ ಸಾಗಲಿದೆ. ಹಳ್ಳಿ ಜನರ ಭಾವನೆಗಳು, ತುಡಿತ ಹೇಗೆಲ್ಲಾ ಇರುತ್ತೆ ಎಂಬುದು ಇಲ್ಲಿ ಹೈಲೆಟ್. ಕೋಳಿ ಮತ್ತು ಮಗನ ಸುತ್ತ ನಡೆಯುವ ಕಥೆ ಎಲ್ಲರಿಗೂ ಇಷ್ಟ ಆಗುತ್ತೆ ಎಂದರು ಭವ್ಯಾ.

ನಿರ್ಮಾಪಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಕೋಳಿ ಮತ್ತು ಹೀರೋ ನಡುವಿನ ಭಾವನಾತ್ಮಕ ಕಥೆ ಇಲ್ಲಿದೆ. ಮಗಳು ರಾಜೇಶ್ವರಿ ನಾಯಕಿಯಾಗಿದ್ದಾರೆ. ಹೊಸ ಬಗೆಯ ಕಥೆ ಇಲ್ಲಿದೆ. ಮನರಂಜನಾ ಅಂಶಗಳು ಹೆಚ್ಚಾಗಿವೆ. ನಿಮ್ಮೆಲ್ಲರ ಬೆಂಬಲ ಇರಲಿ ಎಂದರು ಸೋಮಶೇಖರ್.

ನಾಯಕಿ ರಾಜೇಶ್ವರಿ ಅವರಿಗೆ ಇದು ಮೊದಲ ಚಿತ್ರ. ಮೊದಲ ಸಲ ಕ್ಯಾಮೆರಾ ಮುಂದೆ ನಿಂತಾಗ ಭಯ ಆಯ್ತು. ಆನಂದ್ ಸರ್ ಧೈರ್ಯ ತುಂಬಿ ನಟಿಸಲು ಉತ್ಸಾಹ ತುಂಬಿದರು. ಭವ್ಯಾ ಮೇಡಂ ಜೊತೆ ನಟಿಸಿದ್ದು ಮರೆಯದ ಅನುಭವ ಅಂದರು.

ಸಂಕಲನಕಾರ ವಿಶ್ವ ಅವರಿಗೆ ಈ ಚಿತ್ರ ವಿಶೇಷ. ಕಾರಣ, ಇಲ್ಲಿ ಮೈಸೂರು ಮಹಾರಾಜರ ಹಾಡು ಜನರನ್ನು ತಲುಪುತ್ತೆ ಎಂಬುದು. ಆ ಹಾಡಿನ ಮೂಲಕ ರಾಜರ ಬಗ್ಗೆ ಹೇಳಲು ಸಾಧ್ಯವಾಗಿದೆ ಎಂದರು.

ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ,ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಇದು ಗಂಡ ಹೆಂಡತಿಯ ಕಚೋರಿ! ಸಿಹಿ ಖಾರದ ಲವ್ ಸ್ಟೋರಿ

ಇದು ಗಂಡ ಹೆಂಡತಿಯ ಚಿತ್ರ. ನಟಿ ಇಳಾ ವಿಟ್ಲ ಹಾಗು ಆರ್ಯನ್ ಕಾಂಬೆನೇಷನ್ ನಲ್ಲಿ ಕಚೋರಿ ಸಿನಿಮಾ ಮೂಡಿ ಬಂದಿದೆ. ಸದ್ಉ ಬಿಡುಗಡೆ ತಯಾರಿಯಲ್ಲಿದೆ.

ಕಚೋರಿ ಎಲ್ಲರೂ ಇಷ್ಟಪಡುವ ಖಾದ್ಯ. ಈ ಹೆಸರಲ್ಲಿ ಚಿತ್ರವೊಂದು ನಿರ್ಮಾಣವಾಗಿದೆ. ಅದು ರಿಲೀಸ್ ಆಗೋಕು, ಸಿದ್ದವಾಗಿದೆ. ಸಿನಿವೇ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ಆರ್ಯನ್ ಅವರು ನಿರ್ಮಾಣ ಮಾಡುವುದರ ಜೊತೆಗೆ ಆಕ್ಷನ್‌ ಕಟ್ ಕೂಡ ಹೇಳಿದ್ದಾರೆ. ಆರ್ಯನ್ ಈ ಚಿತ್ರದ ನಾಯಕರೂ ಆಗಿದ್ದು, ಇಳಾ ವಿಟ್ಲ ನಾಯಕಿ‌. ಹಿರಿಯ ನಟ ಕೀರ್ತಿರಾಜ್ ಒಬ್ಬ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕ, ನಿರ್ದೇಶಕ ಆರ್ಯನ್, ನಾನು ಸಿನಿವೇ ಸಿನಿ ಆಕ್ಟಿಂಗ್ ಕ್ಲಾಸಸ್ ನಡೆಸುತ್ತಿದ್ದು, ಆರಂಭದಲ್ಲಿ ಒಂದು ಮಕ್ಕಳ ಚಿತ್ರ ಮಾಡಬೇಕೆಂದುಕೊಂಡಿದ್ದೆ. ನಂತರ ಕೋವಿಡ್ ಸಮಯದಲ್ಲಿ ಚಿತ್ರವನ್ನು ಆರಂಭಿಸಿದೆವು. ಸ್ನೇಹಿತರಾದ ರಮೇಶ್, ಮಂಜುನಾಥ್, ಖಾಜಾಹುಲಿ ಇವರೆಲ್ಲ ನನಗೆ ತುಂಬಾ ಸಪೋರ್ಟ್ ಮಾಡಿದರು. ಚಿತ್ರದಲ್ಲಿ ನಾಯಕ ಕಚೋರಿ ಮಾರುವ ಹುಡುಗ, ಆತ ಶ್ರೀಮಂತ ಹುಡುಗಿಯನ್ನು ಲವ್ ಮಾಡುತ್ತಾನೆ. ನಂತರ ಬ್ರೇಕಪ್ ಆಗುತ್ತೆ, ಏಕೆ ಬ್ರೇಕಪ್ ಆಯ್ತು, ಅದಕ್ಕೆ ಕಾರಣ ಏನು ? ಎಂದು ಹುಡುಕುವುದೇ ಚಿತ್ರದ ಎಳೆ. ಗಂಗಾವತಿ ಸುತ್ತಮುತ್ತ ಟಾಕೀ ಪೋರ್ಷನ್ ಮುಗಿಸಿ, ವಿಜಯ ಪ್ರಕಾಶ್ ಹಾಡಿದ ಡ್ಯುಯೆಟ್ ಸಾಂಗನ್ನು ಮನಾಲಿಯಲ್ಲಿ ಶೂಟ್ ಮಾಡಿದ್ದೇವೆ. ಕೆಂಪೇಗೌಡ, ಮೋಹನ್ ಜುನೇಜಾ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಕೂತು ನೋಡುವಂಥ ಚಿತ್ರ ಇದಾಗಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ ಎಂದರು.

ಹಿರಿಯ ನಟ ಕೀರ್ತಿರಾಜ್ ಮಾತನಾಡಿ ಚಿತ್ರದಲ್ಲಿ ನಾನೊಬ್ಬ ಡಾನ್ ಆಗಿ ನಟಿಸಿದ್ದು, ಜೀವನದಲ್ಲಿ ನೊಂದ ನಾಯಕ, ನನ್ನ ಆಶ್ರಯಕ್ಕೆ ಬಂದು ಅಲ್ಲಿ ಹೇಗೆ ಬೆಳೆಯುತ್ತಾನೆಂಬುದೇ ಕಥೆ, ಆರ್ಯನ್, ಇಳಾ ವಿಟ್ಲ ಇಬ್ಬರೂ ನನ್ನನ್ನು ತಂದೆ ಥರ ನೋಡಿಕೊಂಡರು. ಆರ್ಯನ್ ಮೊದಲ ಚಿತ್ರವಾದರೂ ಹತ್ತಾರು ಸಿನಿಮಾ ಮಾಡಿದವರಂತೆ ಕೆಲಸ ತೋರಿಸಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಕೃಪಾಕರ್ ಮಾತನಾಡಿ ಈ ಸಿನಿಮಾ ಕಚೋರಿಯಷ್ಟೇ ಚೆನ್ನಾಗಿದೆ. ಮೊದಲು ಹೊಸಬರನ್ನು ನಾಯಕರನ್ನಾಗಿ ಮಾಡಬೇಕೆಂದುಕೊಂಡಿದ್ದರು, ಕಾರಣಾಂತರಗಳಿಂದ ಅವರೇ ನಟಿಸಬೇಕಾಯ್ತು. ಚಿತ್ರದಲ್ಲಿ ೨ ಡ್ಯುಯೆಡ್, ಐಟಂ, ಟೀಸಿಂಗ್, ಫೀಲಿಂಗ್ ಸೇರಿ ೫ ವೆರೈಟಿ ಹಾಡುಗಳಿವೆ. ಹೊಸ ಪ್ರತಿಭೆ ಪ್ರತಾಪ್‌ರೆಡ್ಡಿ ಅವರಿಂದ ಹಾಡೊಂದನ್ನು ಬರೆಸಿದ್ದೇನೆ ಎಂದರು. ನಾಯಕಿ ಇಳಾವಿಟ್ಲಾ ಮಾತನಾಡಿ ನಾಯಕಿಯಾಗಿ ಇದು ನನ್ನ ೩ನೇ ಚಿತ್ರ. ಕಾಲೇಜ್ ಯುವತಿ ನಂತರ ರಾಜಕಾರಣಿಯಾಗಿ ಎರಡು ಶೇಡ್ ಇರುವ ಪಾತ್ರ ಮಾಡಿದ್ದೇನೆ. ಯಾಕೆ ಅವಳು ಈಥರ ಮಾಡ್ತಾಳೆ ಅನ್ನೋದನ್ನು ಕಂಡುಹಿಡಿಯುವುದೇ ಚಿತ್ರದ ಎಳೆ ಎಂದರು.

ಕೆಂಪೇಗೌಡ ಮಾತನಾಡಿ ಚಿತ್ರದುದ್ದಕ್ಕೂ ಆರ್ಯನ್ ಜೊತೆ ಇರುವ, ಆತನ ಲವ್‌ಗೆ ಸಪೋರ್ಟ್ ಮಾಡುವ ಗೆಳೆಯನ ಪಾತ್ರ ಮಾಡಿದ್ದೇನೆ ಎಂದರು. ಸಾಹಿತಿ ಪ್ರತಾಪ್‌ರೆಡ್ಡಿ ಮಾತನಾಡಿ ನಾನು ಆಕ್ಟಿಂಗ್ ಕಲಿಯಲು ಇವರಬಳಿ ಹೋಗಿದ್ದೆ. ಬರವಣಿಗೆ ನನ್ನ ಹವ್ಯಾಸ. ಮೊದಲು ಒಂದು ಹಾಡು ಬರೆಸಿದರು. ಅದು ಅವರಿಗೆ ಇಷ್ಟವಾಗಿ ಎಲ್ಲಾ ಹಾಡುಗಳನ್ನು ನನ್ನಕೈಲೇ ಬರೆಸಿದರು ಎಂದರು. ಆರ್ಯನ್ ಸ್ನೇಹಿತ ಗಂಗಾವತಿಯ ಖಾಜಾಹುಲಿ ಮಾತನಾಡಿ ನಾನೊಬ್ಬ ಸ್ಟೇಜ್ ಆರ್ಟಿಸ್ಟ್, ಒಂದು ಪಾತ್ರ ಮಾಡುವ ಜೊತೆಗೆ ಹಾಡನ್ನೂ ಹಾಡಿದ್ದೇನೆ ಎಂದರೆ, ವಿಲನ್ ಪಾತ್ರ ಮಾಡಿರುವ ಮಂಜುನಾಥ್, ಕಾಮಿಡಿ ಪಾತ್ರಧಾರಿ ದೊಡ್ಡ ಬಸವರಾಜ್ ಇವರೆಲ್ಲ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡರು. ವಿಶೇಷವಾಗಿ ನಟ ಧರ್ಮ ಕೀರ್ತಿರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,

Categories
ಸಿನಿ ಸುದ್ದಿ

ಇದು ಆರು ಹುಡುಗಿಯರ ಪ್ರೀತಿ ಗೀತಿ ಇತ್ಯಾದಿ! ಪ್ರೇಮಂ ಟ್ರೇಲರ್ ಬಂತು

ಈ ಹಿಂದೆ ಇಂಜಿನಿಯರ್ಸ್ ಮತ್ತು ಗಂಡುಲಿ ಎಂಬ ಚಿತ್ರ ನಿರ್ದೇಶಿಸಿದ್ದ ವಿನಯ್ ರತ್ನಸಿದ್ದಿ ಈಗ ಮತ್ತೊಂದು ಪ್ರೇಮಕಥೆ ಹಿಡಿದುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿರುವ ಪ್ರೇಮಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿನಯ್ ರತ್ನಸಿದ್ದಿ ಅವರೇ ಚಿತ್ರದ ನಾಯಕನಾಗಿ ನಟಿಸುವುದರ ಜೊತೆಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಶಕುಂತಲಾ, ವೈಷ್ಣವಿ, ಸುಶ್ಮಿತಾ, ಮಂಜುಶ್ರೀ, ಕಾವೇರಿ ಹಾಗೂ ಪ್ರಿಯಾಂಕಾ ಸೇರಿ ಆರು ನಾಯಕಿಯರು ಚಿತ್ರದಲ್ಲಿದ್ದಾರೆ. ರತ್ನಸಿದ್ದಿ ಫಿಲಂಸ್ ಮೂಲಕ ಚಂದನ, ಅಮರೇಂದ್ರ ವರದ ಹಾಗೂ ಪ್ರಸಾದ್ ಬಿಜಿ, ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಾಯಕ ವಿನಯ್ ರತ್ನಸಿದ್ದಿ ಮಾತನಾಡಿ, ಪರಿಶುದ್ದವಾದ ಪ್ರೇಮಕ್ಕೆ ಎಂದೂ ಸಾವಿಲ್ಲ ಎಂದು ಹೇಳುವ ಕಥೆ ನಮ್ಮ ಪ್ರೇಮಂ ಟುಟು ಚಿತ್ರದಲ್ಲಿದೆ. ಫಸ್ಟ್ ಲಾಕ್‌ಡೌನ್‌ನಲ್ಲಿ ಎರಡು ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರವನ್ನು ಪ್ರಾರಂಭಿಸಿದ್ದೆವು. ಅದೀಗ 200 ಪಾತ್ರಗಳಾಗಿದೆ. ಟುಟು ಎಂದರೆ 2 ವಿಕ್ಟರಿ, 2 ಥಿಂಕಿಂಗ್ ಏನಾದರೂ ಆಗಬಹುದು. ಚಿತ್ರದಲ್ಲಿ ಎರಡು ರೀತಿಯ ಆಲೋಚನೆಗಳ ಬಗ್ಗೆ ಹೇಳಿದ್ದೇವೆ, ಬುದ್ದಿನಂತನಲ್ಲದ, ಹೆಡ್ಡನಂತಿರುವ ನಾಯಕನ ಜೀವನದಲ್ಲಿ ಬರುವ ತಿರುವುಗಳು, ಆತನಿಗಾಗುವ ಪ್ರೀತಿ, ಆ ಪ್ರೀತಿಯಿಂದಾಗುವ ತೊಳಲಾಟಗಳು, ಅದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಪ್ರೇಮಂ ಟುಟು ಕಥೆ.

ಚಿತ್ರದಲ್ಲಿ ಬಿಟ್ ಸೇರಿ 4 ಹಾಡುಗಳು, 4 ಫೈಟ್‌ಗಳಿವೆ. ನಾಯಕನ ಜೀವನದಲ್ಲಿ ಆರು ಜನ ನಾಯಕಿಯರು ಒಂದೊದು ಹಂತದಲ್ಲಿ ಬಂದು ಪ್ರೀತಿಯ ಅನುಭವ ತೋರಿಸುತ್ತಾರೆ. ಅವರಲ್ಲಿ ಯಾರದು ಪರಿಶುದ್ದವಾದ ಪ್ರೀತಿ, ಅದು ಆತನಿಗೆ ಸಿಗುತ್ತೋ ಇಲ್ಲವೋ ಎನ್ನುವುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ, ಈ ಹಂತದಲ್ಲಿ ಉಂಟಾಗುವ ಗೊಂದಲಗಳು ಆತನ ಬದುಕುವ ರೀತಿಯನ್ನೇ ಬದಲಾಯಿಸುತ್ತವೆ. ಈ 6 ಜನ ನಾಯಕಿಯರು ಕಥೆಗೆ ಪೂರಕವಾಗಿಯೇ ಬರುತ್ತಾರೆ, ತುಮಕೂರು ಬಳಿಯ ಹೊನ್ನುಡಿಕೆಯಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉಳಿದಂತೆ ಬೆಂಗಳೂರು, ವಿಮಾನ ನಿಲ್ದಾಣ ಸೇರಿ 70 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಒಂದಷ್ಟು ಜನರಿಗೆ ಪ್ರೀಮಿಯರ್ ಹಾಕಿದಾಗ ಒಳ್ಳೇಚಿತ್ರ ಎಂಬ ಅಭಿಪ್ರಾಯ ಬಂತು. ಒಳ್ಳೇ ರೇಟಿಗೆ ಡಬ್ಬಿಂಗ್ ರೈಟ್ಸ್ ಕೇಳ್ತಿದ್ದಾರೆ ಎಂದು ಹೇಳಿದರು.

ನಿರ್ಮಾಪಕ ತಿಪಟೂರು ಪ್ರಸಾದ್ ಮಾತನಾಡಿ, ನಾನು ಪ್ರೈವೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ರೇಲರ್ ನೋಡಿದಾಗ ಇಷ್ಟವಾಯ್ತು, ತುಂಬಾ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದಾರೆ ಎಂದರು. ಮತ್ತೊಬ್ಬ ನಿರ್ಮಾಪಕ ಅಮರೇಂದ್ರ ವರದ ಮಾತನಾಡಿ, ವಿನಯ್ ಜೊತೆ 2017ರಿಂದಲೂ ನಾನಿದ್ದೇನೆ. ಇಬ್ಬರೂ ಸೇರಿ ಇಂಜಿನಿಯರ್, ಗಂಡುಲಿ ನಂತರ ಈ ಚಿತ್ರವನ್ನು ಮಾಡಿದ್ದೇವೆ ಎಂದರು.

ನಾಯಕಿಯರ ಪೈಕಿ ಮಂಜುಶ್ರೀ ಮಾತನಾಡಿ, ನಾನು ಮೂಲತಃ ಮಾಡೆಲ್, ಈಗಾಗಲೇ 2 ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇನ್ನು ಈ ಚಿತ್ರದ ಹಾಡುಗಳಿಗೆ ಅಜಯ್ ಶ್ರೀನಿವಾಸಮೂರ್ತಿ ಅವರ ಸಂಗೀತ ಸಂಯೋಜನೆಯಿದ್ದು, ಆನಂದ್ ಇಳಯರಾಜಾ, ಅರುಣ್ ಮತ್ತು ಮನು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ,

ಅಲ್ಲದೆ ಈ ಚಿತ್ರಕ್ಕೆ ವಿನಯ್ ಅವರ ಸಂಕಲನ, ನಾಗರಾಜ ಹುಲಿವಾನ್ ಅವರ ಡಿಟಿಎಸ್, ಯೇಷನ್ ಅವರ ವಿಎಫ್‌ಎಕ್ಸ್ ಕೆಲಸವಿದೆ,ಚಂದ್ರಪ್ರಭ,
ಲೋಕೆಶ್ ರಾಜಣ್ಣ,ಉಮೇಶ್ ಕಿನ್ನಾಳ,ಶಿವಮೊಗ್ಗ ರಾಮಣ್ಣ ಮುಂತಾದವರ ತಾರಬಳಗವಿದೆ

Categories
ಸಿನಿ ಸುದ್ದಿ

ಟಿ ಆರ್ ಪಿ ರಾಮನಿಗೆ ಸಿಕ್ತು ಯು ಎ ಸರ್ಟಿಫಿಕೇಟ್

ಬಹುಭಾಷಾ ನಟಿ ಮಹಾಲಕ್ಷ್ಮಿ ನಟನೆಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಅವರು ನಟಿಸಿರುವ ‘ಟಿಆರ್​ಪಿ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ TRP ರಾಮ ಟ್ರೇಲರ್ ಅನಾವರಣಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಕಮರ್ಷಿಯಲ್ ಅಂಶಗಳ ಜೊತೆಗೆ ಒಳ್ಳೆಯ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರ ಸೆನ್ಸಾರ್ ಪಾಸಾಗಿದ್ದು, ಯು/ ಎ ಸರ್ಟಿಫಿಕೇಟ್ ಸಿಕ್ಕಿದೆ.

‘TRP ರಾಮ’ ಸಿನಿಮಾಗೆ ರವಿಪ್ರಸಾದ್‌ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದಾರೆ. ‘ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಅಭಿನಯಿಸಿದ್ದಾರೆ.

ರಾಜ್ ಗುರು ಹೊಸಕೋಟೆ ಅವರು ಸಂಗೀತ ನೀಡಿದ್ದಾರೆ. ಸುನಿಲ್ ಕಶ್ಯಪ್ ಅವರು ಸಂಕಲನ ಮತ್ತು ಗುರುಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

TRP ಸತ್ಯ ಘಟನೆಗಳನ್ನ ಆಧರಿಸಿ ಬರ್ತಿರೋ ಸಿನಿಮಾ ಆಗಿದೆ. ಚಿತ್ರದ ನಿರ್ದೇಶಕ ರವಿ ಪ್ರಸಾದ್ ಇಲ್ಲಿ ಆ ವಿಕೃತ ರಾಮನ ಪಾತ್ರ ಮಾಡಿದ್ದಾರೆ. ಆದರೆ ಇಲ್ಲಿ “TRP” ಅಂದ್ರೇನೂ ಅನ್ನೋ ಪ್ರಶ್ನೆ ಕುತೂಹಲಕ್ಕೆ ನವೆಂಬರ್ ತಿಂಗಳಲ್ಲಿ ಉತ್ತರ ಸಿಗಲಿದೆ. ಅಂದರೆ TRP ರಾಮ ಸಿನಿಮಾ ನವೆಂಬರ್ ಮೊದಲ ವಾರ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ.

Categories
ಸಿನಿ ಸುದ್ದಿ

ಕ್ಲಾಂತ ಟೀಸರ್ ರಿಲೀಸ್: ಇದು ಸಂಗೀತ ಭಟ್ ಚಿತ್ರ

ವಿಭಿನ್ನ ಹೆಸರಿನ ಮೂಲಕ ಗಮನ ಸೆಳೆಯುತ್ತಿರುವ ಕ್ಲಾಂತ ಸಿನಿಮಾದ ಟೀಸರ್ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಸಂಗೀತ ಭಟ್ ಕಂಬ್ಯಾಕ್ ಚಿತ್ರ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಟೀಸರ್ ಮೂಡಿ ಬಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಕ್ಲಾಂತ ಟೀಸರ್ ಇದ್ದು , ಸಂಗೀತ ಅವರ ನಟನೆ ಎಲ್ಲರ ಗಮನ ಸೆಳೆದಿದೆ.

ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್ ಚಿತ್ರ ನಿರ್ದೇಶಿರುವ ವೈಭವ್ ಪ್ರಶಾಂತ್ ಕ್ಲಾಂತ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಪಕ್ಷಿಗಳನ್ನು ಗ್ಯಾಂಗ್ ಒಂದು ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್ ನಿಂದ ಆ ಜೋಡಿ ಹೇಗೆ ತಪ್ಪಿಕೊಂಡು ಬರ್ತಾರೆ.

ಅವರ ವಿರುದ್ಧ ಹೇಗೆ ಹೋರಾಡುತ್ತಾರೆ ಅನ್ನೋದನ್ನು ಟೀಸರ್ ನಲ್ಲಿ ಕೊಡಲಾಗಿದೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭರಾಜ್ , ವೀಣಾ ಸುಂದರ್ , ಕಾಮಿಡಿ ಕಿಲಾಡಿ ದೀಪಿಕಾ , ಪ್ರವೀಣ್ ಜೈನ್ , ಯುವ , ತಿಮ್ಮಪ್ಪ ಕುಲಾಲ್ , ಸ್ವಪ್ನ , ರಾಘವೇಂದ್ರ ಕಾರಂತ್ , ಪಂಚಮಿ ವಾಮಂಜೂರ್ , ವಾಮದೇವ ಪುಣಿಂಚತ್ತಾಯ ಮುಂತಾದ ತಾರಾಬಳಗದಲ್ಲಿದ್ದಾರೆ.

ಕ್ಲಾಂತ ಸಿನಿಮಾದ ಚಿತ್ರೀಕರಣ ಕುಕ್ಕೆ ಸುಬ್ರಹ್ಮಣ್ಯ , ಗುಂಡ್ಯ , ಕಳಸ ಸುತ್ತ ಮುತ್ತ ಕಾಡಿನಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗಿದೆ. ಪಕ್ಕಾ ಆಕ್ಷನ್ , ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಎಸ್ ಪಿ ಚಂದ್ರಕಾಂತ್ ಸಂಗೀತ, ಪಿಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ. ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿವೆ.

ವಿನೋದ್ ಸ್ಟಂಟ್ ಮಾಸ್ಟರ್ ಆಗಿ , ಮಹೇಶ್ ದೇವ್ ಡಿ ಎನ್ ಪುರ ಸಂಭಾಷಣೆ ಸಿನಿಮಾಕ್ಕಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ . ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್ ಗೌಡ, ಪ್ರದೀಪ್ ಗೌಡ ಹೇಮಂತ್ ರೈ ಸಹ ನಿರ್ಮಾಪಕರಾಗಿ ಆಗಿ ಸಾಥ್ ಕೊಟ್ಟಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದೆ.

Categories
ಸಿನಿ ಸುದ್ದಿ

ಘೋಸ್ಟ್ ಎಂಟ್ರಿಗೆ ದಿನಗಣನೆ: ಅಕ್ಟೋಬರ್ 19ಕ್ಕೆ ಶಿವರಾಜ್ ಕುಮಾರ್ ಚಿತ್ರ

ಅಕ್ಟೋಬರ್ 18ರ ಮಧ್ಯರಾತ್ರಿ 12 ಗಂಟೆಗೆ ಕೆ‌.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಮೊದಲ ಪ್ರದರ್ಶನ (ಫ್ಯಾನ್ ಶೋ) ಏರ್ಪಡಿಸಲಾಗಿದೆ.

ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.


ಇದೇ ಮೊದಲ ಬಾರಿಗೆ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಅಕ್ಟೋಬರ್18 ರ ಮಧ್ಯರಾತ್ರಿ 12 ಕ್ಕೆ ಭರ್ಜರಿ ಫ್ಯಾನ್ ಶೋ ಆಯೋಜಿಸಲಾಗಿದೆ. ಬಹು ನಿರೀಕ್ಷಿತ ಈ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಣಿಯಾಗುತ್ತಿದ್ದಾರೆ. ಶಿವಣ್ಣ ಅಭಿನಯದ “ಭಜರಂಗಿ” ಚಿತ್ರದ ಪ್ರದರ್ಶನ ಬೆ.6ರಿಂದ ಆರಂಭವಾಗಿತ್ತು. ಆದರೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ “ಘೋಸ್ಟ್”.

ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ” Big daddy” ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.

“ಘೋಸ್ಟ್” ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ವಿದೇಶಿ ಅಭಿಮಾನಿಗಳು ತಾವು ಕೂಡ ಈ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು “ಘೋಸ್ಟ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಆಡು ಮಹಿಮೆ ದೊಡ್ದು ಕನಾ!

ರೇಟಿಂಗ್: 3/5

ವಿಜಯ್ ಭರಮಸಾಗರ

ಚಿತ್ರ : ಆಡೇ ನಮ್ God
ನಿರ್ದೇಶನ: ಪಿ.ಎಚ್‍. ವಿಶ್ವನಾಥ್‍
ನಿರ್ಮಾಣ: ಪ್ರೊ.ಬಿ. ಬಸವರಾಜ್, ರೇಣುಕಾ ಬಸವರಾಜ್
ತಾರಾಗಣ: ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ. ಸುರೇಶ ಇತರರು.

‘ಆಡು ಕಟ್ಟಿಸಿಕೊಂಡಿದ್ದೀರಿ ಅಂದ್ರೆ ಖಂಡಿತವಾಗಿಯೂ ನಿಮಗೆ ಗಂಡು ಮಗುನೇ ಹುಟ್ಟುತ್ತೆ… ಆಡಾಣೆ… ಗಾಡಾಣೆ!

ಈ ಡೈಲಾಗ್ ಬರುವ ಹೊತ್ತಿಗೆ, ಒಂದೇ ಮನೆಯಲ್ಲಿ ವಾಸ ಮಾಡೋ ನಾಲ್ವರ ಪೈಕಿ ಮೂವರು ಬೇಜಾವಬ್ದಾರಿ ಗೆಳೆಯರಿಗೆ ಆಡು ಒಂದು ಆಕಸ್ಮಿಕವಾಗಿ ಸಿಕ್ಕಿ, ಅದು ‘ಆಡುಸ್ವಾಮಿ’ ರೂಪ ಪಡೆದು ಆ ಗೆಳೆಯರ ಬದುಕೇ ಬಂಗಾರವಾಗಿರುತ್ತೆ. ಹಲವು ತಿರುವುಗಳ ಬಳಿಕ ಆ ಗಾಡು ತೋರುವ ಮಹಿಮೆಯೇ ಚಿತ್ರದ ಟ್ವಿಸ್ಟು ಮತ್ತು ಟೆಸ್ಟು.

ಇದು ಒಂದು ಆಡು ಮತ್ತು ನಾಲ್ವರು ಗೆಳೆಯರ ಸುತ್ತ ಸಾಗುವ ಥ್ರಿಲ್ಲಿಂಗ್ ಸ್ಟೋರಿ. ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ಮಾತು ಈ ಚಿತ್ರ ನೋಡುತ್ತ ನೆನಪಾಗುತ್ತೆ. ಕಥೆ ಚೆನ್ನಾಗಿದೆ. ಅದನ್ನು ಕಟ್ಟಿಕೊಟ್ಟಿರುವ ಪ್ರಯತ್ನವೂ ಸಾರ್ಥಕ. ನಿರ್ದೇಶಕ ಪಿ.ಎಚ್. ವಿಶ್ವನಾಥ್ ಅವರು ಈಗಿನ ಮೌಢ್ಯತೆ ಬಗ್ಗೆ ಸೂಕ್ಷ್ಮವಾಗಿ ತೋರಿಸುವುದರ ಜೊತೆಗೆ ಮನರಂಜನಾತ್ಮಕವಾಗಿ ಬಿಂಬಿಸಿದ್ದಾರೆ. ಆರಂಭದಿಂದ ಅಂತ್ಯದವರೆಗೆ ಸಿನಿಮಾ ನಗಿಸುತ್ತಲೇ ಸಾಗುತ್ತದೆ. ಅಲ್ಲಲ್ಲಿ ಬರುವ ಸಣ್ಣ ಪುಟ್ಟ ಏರಿಳಿತಗಳ ಮಧ್ಯೆ ಕೇಳುವ ಆಡು ಬಗೆಗಿನ ಹಾಡು ಆ ಎಲ್ಲಾ ಏರಿಳಿತವನ್ನೂ ಮರೆಸುತ್ತೆ. ಚುರುಕಾದ ಚಿತ್ರಕಥೆಗೆ ನಗೆಗಡಲ ಪ್ರಸಂಗಗಳು, ಕಚಗುಳಿಯ ಮಾತುಗಳು ಜೊತೆಗೆ ಪೂರಕವಾದ ಹಿನ್ನೆಲೆ ಸಂಗೀತ ಚಿತ್ರದ ವೇಗಕ್ಕೆ ಕಾರಣವಾಗಿದೆ.

ಒಂದು ಸರಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳುವ ಮತ್ತು ತೋರಿಸುವ ಮೂಲಕ ಸಣ್ಣದ್ದೊಂದು ಮನರಂಜನೆಗೆ ಕಾರಣವಾಗಿರುವ ನಿರ್ದೇಶಕರು, ಪಾತ್ರಗಳ ಆಯ್ಕೆಯಲ್ಲೂ ಅಷ್ಟೇ ಜಾಣ್ಮೆ ಮೆರೆದಿದ್ದಾರೆ. ಹಾಗಾಗಿಯೇ ಚಿತ್ರ ನೋಡುಗರಿಗೆ ಎಲ್ಲೂ ಬೋರು ತರಿಸಲ್ಲ.

ಕಥೆ ಏನು?

ದಾಮು, ಶಿವಲಿಂಗು, ತುಕಾರಾಮ್, ತಿಪ್ಪೇಶಿ ಎಂಬ ನಾಲ್ವರು ಗೆಳೆಯರು. ಈ ಗೆಳೆಯರಲ್ಲಿ ಒಬ್ಬ ವ್ಯಾನ್ ಡ್ರೈವರ್, ಒಬ್ಬ ಕ್ಷೌರಿಕ, ಒಬ್ಬ ಬ್ರೋಕರ್ ಇನ್ನೊಬ್ಬ ಹೋಟೆಲ್ ಇಟ್ಟುಕೊಂಡು ಬದುಕು ನಡೆಸುವವರು. ಅವರೆಲ್ಲರೂ ಕೊರೊನಾ ಸಮಸ್ಯೆಗೆ ತತ್ತರಿಸಿದವರು. ಬದುಕು ಸರಿ ಹೋಗಲೆಂದು ದೇವರ ಮೊರೆ ಹೋದವರಿಗೆ, ಆಡೊಂದು ಆಕಸ್ಮಿಕವಾಗಿ ಸಿಗುತ್ತದೆ. ಅಲ್ಲಿಂದ ಅಚರ ಅದೃಷ್ಟವೇ ಬದಲಾಗುತ್ತೆ! ಅದೇಗೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ.

ಬದುಕು ನಡೆಸಲು ಹೆಣಗಾಡುವ ಅವರಿಗೆ ಆಡು ದೇವರಾ್ಇ ಬಿಡುತ್ತೆ. ಅದು ಎಷ್ಟರ ಮಟ್ಟಿಗೆಂದರೆ, ಇಡೀ ಊರಿಗೆ ಊರೇ ಆ ಆಡು ಸ್ವಾಮಿಯನ್ನು ಪೂಜಿಸಿ, ಆರಾಧಿಸುತ್ತಾರೆ. ಆಡು ಮೂಲಕ ಪವಾಡಗಳೇ ನಡೆದು ಹೋಗುತ್ತವೆ. ಅದನ್ನೇ ಗಟ್ಟಿ ಮಾಡಿಕೊಂಡ ಗೆಳೆಯರು ಆಡುಸ್ವಾಮಿ ಅಂತ ಪಟ್ಟ ಕಟ್ಟಿ ಬದುಕು ಹಸನು ಮಾಡಿಕೊಂಡು ಖುಷಿಯಲ್ಲಿರುತ್ತಾರೆ. ಜನರ ನಂಬಿಕೆಯನ್ನು ಎನ್ ಕ್ಯಾಶ್ ಮಾಡಿಕೊಂಡು ದೇವಸ್ಥಾನ ಕಟ್ಟಿಸಿ ಬಿಡುತ್ತಾರೆ. ಅದರಿಂದ ಹಣ ಹರಿದು ಬರುತ್ತೆ. ಹೀಗಿರುವಾಗ ಒಂದು ಘಟನೆ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಯಾರು ಹೇಗೆ?

ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬರೂ ಗಮನ ಸೆಳೆದಿದ್ದಾರೆ. ಮುಖ್ಯವಾಗಿ ಇಲ್ಲಿ ಬಿ.ಸುರೇಶ ಹೈಲೆಟ್. ಅವರಿಲ್ಲಿ ವಾಸ್ತುಬಗುರುವಾಗಿ, ಆಡುಸ್ವಾಮಿ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿ ಇಷ್ಟವಾಗುತ್ತಾರೆ. ಅವರ ಅಭಿನಯ ಆವರಿಸಿಕೊಂಡಿದೆ.
ನಟರಾಜ್, ಅಜಿತ್ ಬೊಪ್ಪನಹಳ್ಳಿ, ಮಂಜುನಾಥ್ ಜಂಬೆ, ಅನೂಪ್ ಶೂನ್ಯ ಈ ನಾಲ್ವರು ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇಲ್ಲಿ ಪಿ.ಕೆ.ಎಚ್.ದಾಸ್ ಅವರ ಕ್ಯಾಮೆರಾ ಕೈಚಳಕ ಇಷ್ಟವಾಗುತ್ತೆ.

Categories
ಸಿನಿ ಸುದ್ದಿ

ಇನಾಮ್ದಾರ್ ಟ್ರೇಲರ್ ರಿಲೀಸ್ ಆಯ್ತು: ಕಪ್ಪು ಸುಂದರಿ ಸುತ್ತ…

ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ, ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ “ಇನಾಮ್ದಾರ್ ” ಚಿತ್ರದ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ನಿರಂಜನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉದ್ಯಮಿ ಕರುಣಾಕರ್ ರೆಡ್ಡಿ, ಎಂ.ಕೆ.ಮಠ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್” ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ‌ಸಂಘರ್ಷದ ಕಥೆ. “ಇನಾಮ್ದಾರ್” ಚಿತ್ರಕ್ಕೆ “ಕಪ್ಪು ಸುಂದರಿಯ ಸುತ್ತ” ಎಂಬ ಅಡಿಬರಹವಿದೆ. ಬೆಳಗಾವಿ, ಕುಂದಾಪುರ, ಚಾಮರಾಜನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.‌ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಹಾಡುಗಳು ಜನರ ಮನ ಗೆದ್ದಿದೆ. ಅಕ್ಟೋಬರ್ 27 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದರು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ.

ಟ್ರೇಲರ್ ನೋಡಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ ಎಂದು ಮಾತು ಆರಂಭಿಸಿದ ನಟ ಪ್ರಮೋದ್ ಶೆಟ್ಟಿ, ಈ ಚಿತ್ರದಲ್ಲಿ ನನ್ನದು ಕಾಳಿಂಗ ಎಂಬ ಕಾಡಿನ ನಾಯಕನ ಪಾತ್ರ. ತುಂಡು ಉಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ. ಸದ್ಯದಲ್ಲೇ “ಇನಾಮ್ದಾರ್” ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಹಾರೈಸಿ ಎಂದರು.

ನಮ್ಮ ಚಿತ್ರ ಆರಂಭವಾದಾಗ ಬೇರೆ ನಿರ್ಮಾಪಕರಿದ್ದರು. ಕಾರಣಾಂತರದಿಂದ ಅವರು ಈ ಚಿತ್ರದಿಂದ ದೂರ ಸರಿದರು. ಆಗ ನಿರಂಜನ್ ಶೆಟ್ಟಿ ತಲ್ಲೂರು ಅವರು ಮುಂದೆ ಬಂದು ಈ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಧನ್ಯವಾದ. ನಾನು ಈ ಚಿತ್ರದಲ್ಲಿ “ಇನಾಮ್ದಾರ್” ಕುಟುಂಬದ ಮಗನಾಗಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕ ರಂಜನ್ ಛತ್ರಪತಿ ತಿಳಿಸಿದರು.

ನಾನು ಉದ್ಯಮಿ. ಸಿನಿಮಾ ರಂಗ ಹೊಸತು. ಇಡೀ ಚಿತ್ರತಂಡದ ಸಹಕಾರದಿಂದ “ಇನಾಮ್ದಾರ್” ಚಿತ್ರ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು.

ಚಿತ್ರದಲ್ಲಿ ಬರುವ ಕಪ್ಪು ಸುಂದರಿ ನಾನೇ ಎಂದರು ನಾಯಕಿ ಚಿರಶ್ರೀ ಅಂಚಿನ್.
ಎಂ.ಕೆ.ಮಠ, ರಘು ಪಾಂಡೇಶ್ವರ, ಚಿತ್ರಕಲಾ ಮುಂತಾದ ಕಲಾವಿದರು ತಮ್ಮ ಪಾತ್ರದ ಬಗ್ಗೆ ಹೇಳಿದರು. ಛಾಯಾಗ್ರಾಹಕ ಮುರಳಿ, ಸಂಕಲನಕಾರ ಶಿವರಾಜ್ ಮೇಹು ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು. ರಾಕಿ ಸೋನು ಹಾಗೂ ನಕುಲ್ ಅಭಯಂಕರ್ ಈ ಚಿತ್ರದ ಸಂಗೀತ ನಿರ್ದೇಶಕರು.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಾಯಕನಾಗಿ ರಂಜನ್ ಛತ್ರಪತಿ, ನಾಯಕಿಯರಾಗಿ ಚಿರಶ್ರೀ ಅಂಚನ್, ಎಸ್ತರ್ ನೊರೋನ್ಹಾ, ಸಂದೇಶ್ ಶೆಟ್ಟಿ ಆಜ್ರಿ, ರಂಗಭೂಮಿ ಕಲಾವಿದ ಹಿನ್ನಲೆಯ ಪ್ರಮೋದ್ ಶೆಟ್ಟಿ, ಎಂ.ಕೆ.ಮಠ, ಥ್ರಿಲ್ಲರ್‌ಮಂಜು, ಶರತ್ ಲೋಹಿತಾಶ್ವ, ಅವಿನಾಶ್, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ನಾಗರಾಜ ಬೈಂದೂರು, ಪ್ರಶಾಂತ್ ಸಿದ್ಧಿ, ಸಂಜು ಬಸಯ್ಯ, ಮಾಹಬಲೇಶ್ವರ ಕ್ಯಾದಿಕೆ, ಲಕ್ಷ್ಮೀ ಪ್ರಿಯ, ಚಿತ್ರಕಲಾ ರಾಜೇಶ್, ರಕ್ಷಿತ್ ರಾಮಚಂದ್ರ ಶೆಟ್ಟಿ ಮತ್ತಿತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಓಂ ನಮಃ ಶಿವಾಯ ಹಾಡು ಬಿಡುಗಡೆ ಮಾಡಿದ ಸಿದ್ಧಗಂಗಾ ಶ್ರೀ: ಇದು ಲವ್ ಯೂ ಶಂಕರ್ ಸಿನಿಮಾ ಗೀತೆ

ಭಾರತದ ಅತೀ ದೊಡ್ಡ ಕಾಂಪೋಸಿಟ್‍ ಅನಿಮೇಷನ್‍ ಡ್ರಾಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಲವ್‍ ಯೂ ಶಂಕರ್’ ಚಿತ್ರದ ‘ಓಂ ನಮಃ ಶಿವಾಯ’ ಹಾಡನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ. ವರ್ಧನ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ.


ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸ್ಟುಡಿಯೋ ಮತ್ತು ಎಸ್.ಡಿ. ವರ್ಲ್ಡ್ ಫಿಲಂ ಪ್ರೈವೇಟ್‍ ಲಿಮಿಟೆಡ್‍ ಜೊತೆಯಾಗಿ ಅರ್ಪಿಸುತ್ತಿರುವ ‘ಲವ್‍ ಯೂ ಶಂಕರ್’ ಚಿತ್ರವನ್ನು ಜನಪ್ರಿಯ ನಿರ್ದೇಶಕ ‘ಮೈ ಫ್ರೆಂಡ್‍ ಗಣೇಶ’ ಖ್ಯಾತಿಯ ರಾಜೀವ್ ಎಸ್‍.ರುಯಾ ನಿರ್ದೇಶನ ಮಾಡಿದ್ದಾರೆ.


‘ಲವ್‍ ಯೂ ಶಂಕರ್’ ಚಿತ್ರದಲ್ಲಿ ಶ್ರೇಯಸ್‍ ತಲಪಾಡೆ, ತನಿಷಾ ಮುಖರ್ಜಿ, ಸಂಜಯ್‍ ಮಿಶ್ರಾ, ಮನ್‍ ಗಾಂಧಿ, ಅಭಿಮನ್ಯು ಸಿಂಗ್‍, ಪ್ರತೀಕ್‍ ಜೈನ್‍, ಹೇಮಂತ್‍ ಪಾಂಡೆ ಮುಂತಾದವರು ನಟಿಸಿದ್ದು, ಈ ಚಿತ್ರವು ತನ್ನ ವಿಭಿನ್ನ ಕಥಾಹಂದರ ಮತ್ತು ಅದ್ಭುತ ಅಭಿನಯಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿದೆ. ತೇಜಸ್‍ ದೇಸಾಯಿ ಮತ್ತು ಸುನೀತಾ ದೇಸಾಯಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವರ್ಧನ್‍ ಸಿಂಗ್‍ ಮತ್ತು ರಾಮಿರಾ ತನೇಜ ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಕನ್ನಡ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರವು ನವಿರಾದ ಭಾವನೆಗಳು, ಪಾತ್ರಗಳು, ಹಾಡುಗಳು ಮತ್ತು ಕಲಾವಿದರ ಅದ್ಭುತ ಪಾತ್ರಪೋಷಣೆಯಿಂದ ಎಲ್ಲಾ ಭಾಷೆಗಳ ಮತ್ತು ಪ್ರದೇಶಗಳ ಪ್ರೇಕ್ಷಕರಿಗೆ ಆಪ್ತವಾಗಲಿದೆ ಎಂದು ಚಿತ್ರತಂಡ ನಂಬಿದೆ. ‘ಲವ್‍ ಯೂ ಶಂಕರ್’ ಚಿತ್ರವು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. Visica films ವಿತರಣಾ ಸಂಸ್ಥೆ ಕರ್ನಾಟಕದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ಅಕ್ಟೋಬರ್ 13ಕ್ಕೆ ಜಲಪಾತ ದರ್ಶನ: ಚಿತ್ರಕ್ಕೆ ಸಿಕ್ತು ಯು ಸರ್ಟಿಫಿಕೇಟ್

ಇಂಡಸ್ ಹರ್ಬ್ಸ್ ನ ಟಿ ಸಿ ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದ್ದು ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೇ ಚಿತ್ರ ತೇರ್ಗಡೆ ಹೊಂದಿದೆ. ಅಕ್ಟೋಬರ್ 13 ರ ಶುಕ್ರವಾರ ಜಲಪಾತ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ನಟ ಪ್ರಮೋದ್ ಶೆಟ್ಟಿ ಅವರು ಇಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿಪೂರ್ವ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು , ವೈಶಂಪಾಯನ ತೀರ ದಿಂದ ಗಮನ ಸೆಳೆದ ಮಲೆನಾಡು ಚಲುವೆ ನಾಗಶ್ರೀ ಈ ಚಿತ್ರದ ನಾಯಕಿ.

ಸಾದ್ವಿನಿ ಕೊಪ್ಪ ಸಂಗೀತವಿರುವ 3 ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು ಹೆಸರಾಂತ ಗಾಯಕ ವಿಜಯಪ್ರಕಾಶ್ ಚಿತ್ರದ ಥೀಮ್ ಸಾಂಗ್ ಗೆ ಧ್ವನಿಯಾಗಿದ್ದಾರೆ. ವಿನುಮನಸು ಹಿನ್ನೆಲೆಸಂಗೀತ , ಶಶೀರ ಛಾಯಾಗ್ರಹಣ ಮತ್ತು ಅವಿನಾಶ್ ಸಂಕಲನವನ್ನು ಜಲಪಾತ ಹೊಂದಿದೆ.

ಮಲೆನಾಡು ಭಾಷೆ , ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ವಿಶಿಷ್ಟ ಸಿನಿಮಾ ಜಲಪಾತದಲ್ಲಿ ರವಿಕುಮಾರ್ , ನಟರಾಜ್ , ವಿಶ್ವನಾಥ್ , ರೇಖಾ ಪ್ರೇಮ್ ಕುಮಾರ್ ದತ್ತಾತ್ರಿ , ಚಂದ್ರಶೇಖರ್ , ಎಂ ಆರ್. ಸುರೇಶ್ ಮೊದಲಾದ ಮಲೆನಾಡ ಅಪ್ಪಟ ರಂಗ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ಫ್ಯಾಮಿಲಿ ಡ್ರಾಮ ದ ಶೈಲಿ ಹೊಂದಿರುವ ಜಲಪಾತ ಮಲೆನಾಡ ಸಿಗ್ನೀಚರ್ ನ್ನು ಹಿರಿತೆರೆಗೆ ತರುವ ಸಾಂಸ್ಕೃತಿಕ ಪ್ರಯತ್ನವಾಗಿದೆ ಎಂದು ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದ್ದಾರೆ.

ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಈ ಉದ್ದೇಶಿತ ಸಿನಿಮಾವನ್ನು ವೀಕ್ಷಿಸಿ ಬೆಂಬಲಿಸಿ ಎಂದು ನಿರ್ಮಾಪಕ ರವೀಂದ್ರ ತುಂಬರಮನೆ ವಿನಂತಿಸಿದ್ದಾರೆ.

error: Content is protected !!