ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ ಫಾರೆಸ್ಟ್ ಚಿತ್ರೀಕರಣ ಮುಕ್ತಾಯ
ಕನ್ನಡದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳದೇ ಕಾರುಬಾರು. ಉತ್ತಮ ಕಂಟೆಂಟ್ ಇರುವ ಚಿತ್ರಗಳು ಇತ್ತೀಚಿಗೆ ಯಶಸ್ವಿಯಾಗಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿದೆ. ಅಂತಹುದೇ ಉತ್ತಮ ಕಂಟೆಂಟ್ ನೊಂದಿಗೆ ಕನ್ನಡಿಗರ ಮುಂದೆ ಬರಲಿದೆ “ಫಾರೆಸ್ಟ್” ಚಿತ್ರ.
ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್ ಎಂ ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ “ಓಡೋ ಓಡೋ” ಹಾಡು ಎನ್ ಎಂ ಕೆ ಸಿನಿಮಾಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಹಾಡನ್ನು ಈಗಾಗಲೇ ಹನ್ನೊಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಮಲ್ಟಿಸ್ಟಾರರ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಫಾರೆಸ್ಟ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜೊತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದು. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ “ಫಾರೆಸ್ಟ್” ಚಿತ್ರಕ್ಕಿದೆ.
ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ ಹಾಗೂ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಕೆ.ಮಂಜು, ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕ ಅವಿನಾಶ್, ನಾನು ಮೂಲತಃ ಮ್ಯಕಾನಿಕಲ್ ಎಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು “ಹಗ್ಗ” ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ “ಹಗ್ಗ” ನೇ ನಮ್ಮ ಚಿತ್ರದ ನಾಯಕ. ಹಾರಾರ್ ಜಾನರ್ ನ ಚಿತ್ರವಾದರೂ, ಚಿತ್ರದಲ್ಲಿ ಒಂದು ಪ್ರಮುಖ ಸಂದೇಶ ಸಹ ಇದೆ ಎಂದರು.
ಚಿತ್ರಕ್ಕೆ ನಾನೇ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ. ಅವಿನಾಶ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಬಂದಿರುವ ಎಲ್ಲಾ ಗಣ್ಯರಿಗು ಧನ್ಯವಾದ. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ “ಹಗ್ಗ” ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ತಿಳಿಸಿದರು.
ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು “ಸೂಪರ್ ಹೀರೋ” ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಒಳ್ಳೆಯ ಪಾತ್ರಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಟಿ ಅನು ಪ್ರಭಾಕರ್.
ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಕೂಡ ಡ್ರೈವ್ ಮಾಡಿದ್ದೇನೆ ಎಂದು ಹರ್ಷಿಕಾ ಪೂಣಚ್ಛ ತಿಳಿಸಿದರು.
ಇದು ನನ್ನ ಮೊದಲ ಚಿತ್ರ. ನಟನೆಗೆ ತಬಲನಾಣಿ ಅವರು ಬಹಳ ಸಹಾಯ ಮಾಡಿದರು. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ವೇಣು. ನಟ ತಬಲ ನಾಣಿ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ನಿರ್ಮಾಪಕ ರಾಜ್ ಭಾರದ್ವಾಜ್ ಅವರೆ “ಹಗ್ಗ” ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್ ಪಿ ಸಂಭಾಷಣೆ ಬರೆದಿದ್ದಾರೆ.
ಚಿತ್ರ : ಹಿರಣ್ಯ ನಿರ್ದೇಶನ: ಪ್ರವೀಣ್ ಅವ್ಯುಕ್ತ ನಿರ್ಮಾಣ: ವಿಘ್ನೇಶ್ವರ, ವಿಜಯ್ ಕುಮಾರ್ ತಾರಾಗಣ: ರಾಜವರ್ಧನ್, ದಿವ್ಯಾ,ಅರವಿಂದ್, ರಿಹಾನ, ದಿಲೀಪ್, ಹುಲಿ ಕಾರ್ತಿಕ್ ಇತರರು.
ಅವನೊಬ್ಬ ಅನಾಥ. ಡಾನ್ ಜೊತೆ ದುಷ್ಟ ಕೆಲಸ. ಸುಪಾರಿ ಕೊಟ್ಟರೆ ಏನ್ ಬೇಕಾದರೂ ಮಾಡೋ ಕ್ರಿಮಿನಲ್. ದಯೆ, ಕರುಣೆ, ಮಾನವೀಯತೆ ಇರದ ಕಲ್ಲು ಹೃದಯದವನು. ಅಂಥ ಕ್ರಿಮಿನಲ್ ಒಂದು ಡೀಲ್ ಒಪ್ಪುತ್ತಾನೆ. ಮಗುವೊಂದನ್ನು ಕಿಡ್ನಾಪ್ ಮಾಡಿ ಡಾನ್ ಕೈಗೆ ಕೊಡಬೇಕು. ಇದೇ ಸಿನಿಮಾದ ಟ್ವಿಸ್ಟು ಮತ್ತು ಟೆಸ್ಟು.
ರಾಜವರ್ಧನ್ ಮೊದಲ ಸಲ ಇಲ್ಲಿ ವಿಭಿನ್ನ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ. ಒಂದು ಸರಳ ಕಥೆಗೆ ನಿರೂಪಣೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಆರಂಭದಲ್ಲಿ ಅಷ್ಟೇನೂ ಕುತೂಹಲ ಎನಿಸಲ್ಲ.ಮಧ್ಯಂತರ ಬಳಿಕ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಇಡೀ ಸಿನಿಮಾ ಮಗು ಮತ್ತು ಹೀರೋ ಮೇಲೆ ಸಾಗುತ್ತೆ. ಮೊದಲರ್ಧ ಚಿತ್ರಕಥೆಯ ವೇಗ ಕೊಂಚ ಹೆಚ್ಚಬೇಕಿತ್ತು. ದ್ವಿತಿಯಾರ್ಧ ಸಿನಿಮಾ ಬೇರೇನೆ ಆಯಾಮ ಪಡೆದುಕೊಳ್ಳುತ್ತೆ. ಈ ರೀತಿಯ ಕಥೆ ಬಂದಿವೆಯಾದರೂ, ಇಲ್ಲಿ ಮಗು ಮತ್ತೊಂದು ಹೈಲೆಟ್. ಆ ಮಗು ಯಾರದ್ದು, ಯಾಕೆ ಅ ಮಗುನ ಕೊಲೆ ಮಾಡಲು ವಿಲನ್ ಸಂಚು ಹಾಕ್ತಾನೆ, ಆ ಮಗು ಹೀರೋ ಕೈಯಲ್ಲಿ ಸಿಕ್ಕ ಬಳಿಕ ಏನೆಲ್ಲಾ ಆಗುತ್ತೆ, ಅಷ್ಟಕ್ಕೂ ಕಲ್ಲು ಹೃದಯದ ಹೀರೋ ಮನಸ್ಸು ಕರಗುತ್ತಾ? ಇವಿಷ್ಟು ಪ್ರಶ್ನೆಯಲ್ಲೇ ಸಿನಿಮಾ ಅರ್ಧ ಮುಗಿದಿರುತ್ತೆ.
ಇಲ್ಲಿ ಕಥೆಯ ಎಳೆ ಚೆನ್ನಾಗಿದೆ. ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ವೇಗ ಹೆಚ್ಚಿಸಬೇಕಿತ್ತು. ಮುಖ್ಯವಾಗಿ ಇಂತಹ ಸಿನಿಮಾಗಳಿಗೆ ಸಂಕಲನ ಮುಖ್ಯ. ಅದಿಲ್ಲಿ ಮತ್ತಷ್ಟು ಚುರುಕಾಗುವ ಅಗತ್ಯವಿತ್ತು. ಆದರೂ ಸಿನಿಮಾ ಥ್ರಿಲ್ ಕೊಡುವ ಅಂಶಗಳೊಂದಿಗೆ ಸಾಗುತ್ತೆ. ಎಲ್ಲೋ ಒಂದು ಕಡೆ ಟ್ರಾಕ್ ಬದಲಾಗ್ತ ಇದೆಯೇ ಎನ್ನುವಷ್ಟರಲ್ಲಿ ಹಾಡು ಬಂದು ಮತ್ತದೇ ಟ್ರಾಕ್ ಗೆ ಕರೆದೊಯ್ಯುತ್ತೆ. ಒಂದರ್ಥದಲ್ಲಿ ಮಗು ಕಿಡ್ನಾಪ್ ದೃಶ್ಯ ಮತ್ತು ಆ ಮಗುವನ್ನು ಕಾಪಾಡುವ ಸೀನ್ ಸಿನಿಮಾದ ಹೈಲೆಟ್. ಇಡೀ ಸಿನಿಮಾದ ಕೇಂದ್ರಬಿಂದು ಆ ಮಗು. ಆ ಬಗ್ಗೆ ಕುತೂಹಲ ಇದ್ದರೆ ಸಿನಿಮಾ ನೋಡಬಹುದು.
ಕಥೆ ಎಳೆ ಇದು..
ಅವನ ಹೆಸರು ರಾಣ. (ರಾಜವರ್ಧನ) ದುಡ್ಡು ಕೊಟ್ಟರೆ ಕೊಲೆ ಮಾಡೋಕೂ ಹಿಂದೆ ಮುಂದೆ ನೋಡಲ್ಲ. ಒಂದು ಸಮಯದಲ್ಲಿ ಮಗುವೊಂದರ ಕಿಡ್ನಾಪ್‌ಡೀಲ್ ಸಿಗುತ್ತೆ. ಆ ಮಗುವನ್ನು ಕಿಡ್ನಾಪ್‌ಮಾಡ್ತಾನೆ. ಇನ್ನೇನು ಆ ಡಾನ್ ಮಗುನ ಕೊಲೆ ಮಾಡಬೇಕು ಅನ್ನುವಷ್ಟರಲ್ಲಿ ಆ ರಾಣನಿಗೆ ಒಂದು ಘಟನೆ ನೆನಪಾಗುತ್ತೆ. ಆಮೇಲೆ ಏನಾಗುತ್ತೆ ಎಂಬುದು ಟ್ವಿಸ್ಟ್.
ಇಲ್ಲಿ ಮಗು ಕೊಲೆ ನಡೆಯುತ್ತಾ? ಅದರ ಸುತ್ತವೇ ಕಥೆ ಸಾಗುತ್ತೆ. ಬಹುಶಃ ಮಗುವೇ ಕಥೆಯ ಮೂಲ. ಇಲ್ಲಿ ಎರಡು ಟ್ವಿಸ್ಟ್ ಗಳಿವೆ. ಊಹೆ ಮಾಡದ ಕಥೆಯ ಎಳೆ ಅದು. ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.
ಯಾರು ಹೇಗೆ?
ರಾಜವರ್ಧನ್ ಇಲ್ಲಿ ಎಂದಿಗಿಂತ ಚೆನ್ನಾಗಿ, ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ಲಾಂಗ್ವೇಜ್, ಡೈಲಾಗ್ ಡಿಲವರಿ ಜೊತೆಗೆ ಸ್ಟಂಟ್ ನಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ. ಆರಡಿ ಹೈಟಿಗೆ ಜಬರ್ದಸ್ತ್ ಫೈಟು ಹೈಲೆಟ್. ಮಾಸ್ ಹೀರೋ ಗೆ ಇರಬೇಕಾದ ಎಲ್ಲಾ ಲಕ್ಷಣ ಅವರಲ್ಲಿದೆ. ಕಥೆಗೆ ಪೂರಕವಾಗಿ ಅವರ ಹಾವಭಾವವೂ ಇದೆ. ಕೋಪಿಷ್ಟನಾಗಿ ಕಷ್ಟ ಎನಿಸಿದರೂ, ಮಗು ಕಾಪಾಡುವ ಕರುಣಾಮಯಿ ಆಗಿ ಇಷ್ಟವಾಗುತ್ತಾರೆ.
ದಿವ್ಯಾ ಅವರ ಪಾತ್ರ ಇಲ್ಲಿ ಸ್ಪೆಷಲ್ ಎನಿಸುತ್ತೆ. ಅವರಿಲ್ಲಿ ಸಖತ್ ಗ್ಲಾಮರ್ ಆಗಿದ್ದರೂ, ನಮ್ಮ ನಡುವೆ ಕಾಣುವ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಹಾಡೊಂದರಲ್ಲಿ ಪಡ್ಡೆಗಳ ನಿದ್ದೆಗೆಡಿಸುವಂತಹ ಸ್ಟೆಪ್ ಹಾಕಿದ್ದಾರೆ. ರಿಹಾನಾ ತಾಯಿಯಾಗಿ ಇಷ್ಟವಾಗುತ್ತಾರೆ. ಪೊಲೀಸ್ ಅಧಿಕಾರಿಯಾಗಿ ದಿಲೀಪ್ ಇಷ್ಟವಾಗುತ್ತಾರೆ. ತೆರೆ ಮೇಲೆ ಇರುವಷ್ಟು ಕಾಲ ಹುಲಿ ಕಾರ್ತಿಕ್ ಗಮನ ಸೆಳೆಯುತ್ತಾರೆ. ಅರವಿಂದ ಸಿಕ್ಕ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿಕೊಂಡಿವೆ.
ಇನ್ನು, ಜೂಡಾ ಸ್ಯಾಂಡಿ ಸಂಗೀತದ ಎರಡು ಹಾಡುಗಳು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಬೇಕಿತ್ತು. ಯೋಗೇಶ್ವರನ್ ಕ್ಯಾಮೆರಾ ಕೈ ಚಳಕ ಸೊಗಸಾಗಿದೆ. ಸ್ಟಂಟ್ಸ್ ಸಿನಿಮಾದ ಹೈಲೆಟ್, ಕಾರು ಚೇಸ್ ಇಲ್ಲಿನ ಆಕರ್ಷಣೆ. ಎನ್ನಬಹುದು.
ಪ್ರತಿಷ್ಠಿತ ಸೈಮಾ ಪ್ರಶಸ್ತಿ ಮತ್ತೆ ಬಂದಿದೆ. ಈ ಅವಾರ್ಡ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸೈಮಾ ಎಂದರೆ, ‘ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್’ ಎಂದು. ಈ ಪ್ರಶಸ್ತಿಯನ್ನು ಪ್ರಮುಖವಾಗಿ ಸೌತ್ ಸಿನಿಮಾರಂಗದಲ್ಲಿ ತಯಾರಾಗುವ ಸಿನಿಮಾಗಳಿಗೆ ಮಾತ್ರವೇ ಕೊಡಲಾಗುತ್ತದೆ. ಪ್ರತಿ ಬಾರಿ ಈ ಪ್ರಶಸ್ತಿ ಪಡದುಕೊಳ್ಳುವ ಸಿನಿಮಾ ಯಾವುವು, ಕಲಾವಿದರು ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. 2024ರ ಸೈಮಾ ನಾಮೀಷನ್ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನ ಯಾವ ಸಿನಿಮಾಗಳು ರೇಸ್ ನಲ್ಲಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
SIIMA ನ ಅಧ್ಯಕ್ಷರಾದ ಬೃಂದಾ ಪ್ರಸಾದ್ ಅಡುಸುಮಿಲ್ಲಿ ಅವರು 2023ರ SIIMA ನಾಮನಿರ್ದೇಶನ ಸಿನಿಮಾ ಪಟ್ಟಿ ಘೋಷಿಸಿದ್ದಾರೆ. ನಾಮನಿರ್ದೇಶನ ಸಿನಿಮಾ ಬಗ್ಗೆ ಮಾತನಾಡುತ್ತಾ ಬೃಂದಾ ಪ್ರಸಾದ್ “ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾದ ಪ್ರಾದೇಶಿಕ ಸಿನಿಮಾಗಳು ಭಾಷೆಯನ್ನು ಮೀರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ SIIMA 2024 ಪ್ರಬಲ ಸ್ಪರ್ಧಿಗಳ ಪಟ್ಟಿಯನ್ನು ಹೊಂದಿರುತ್ತದೆ” ಎಂದಿದ್ದಾರೆ.
ಸೈಮಾ ರೇಸ್ ನಲ್ಲಿರುವ ಸಿನಿಮಾಗಳು
ಕನ್ನಡ-ಕಾಟೇರ ತೆಲುಗು-ದಸರಾ ತಮಿಳು-ಜೈಲರ್ ಮಲಯಾಳಂ-2018
ಕಾಟೇರ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನಾನ್ನ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ.
ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಮಲಯಾಳಂನಲ್ಲಿ, ಟೋವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ.
ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಮತ್ತು ಚಲನಚಿತ್ರಗಳಿಗೆ www.siima.in ಮತ್ತು SIIMA ನ ಫೇಸ್‌ಬುಕ್ ಪುಟದಲ್ಲಿ ವೋಟ್ ಮಾಡಬಹುದು. ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು 2024ರ ಸೈಮಾ ನಡೆಯಲಿದೆ.
ಮಿತ್ರ ಅಂದ್ರೆ ಕನ್ನಡ ಸಿನಿಮಾರಂಗಕ್ಕೆ ಚಿರಪರಿಚಿತರು ಕಳೆದ ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.. ಆದ್ರೆ ಈಗ ನಟ ಮಿತ್ರ ಅವ್ರ ಖದರ್ ಬದಲಾಗಿದೆ.
ಲುಕ್ ಬೇರೆಯದ್ದೇ ರೀತಿ ಇದೆ…ಯೆಸ್, ಮಿತ್ರ ಪ್ರಜ್ವಲ್ ದೇವರಾಜ್ ಅವ್ರ ಕರಾವಳಿ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ಅಭಿನಯ ಮಾಡ್ತಿದ್ದಾರೆ..ಅದಕ್ಕಾಗಿ ಗೆಟಪ್ ಕೂಡ ಚೇಂಜ್ ಮಾಡಿಕೊಂಡ್ರು..ಒಂದು ಸಿನಿಮಾಗಾಗಿ ಮಾಡಿಕೊಂಡ ಲುಕ್ ಈಗ ಮಿತ್ರ ಅವ್ರ ಕೆರಿಯರ್ನಲ್ಲಿ ಟರ್ನಿಂಗ್ ಪಾಯಿಂಟ್ ಕೊಡ್ತಿದೆ.
ಇಷ್ಟು ದಿನಗಳ ಕಾಲ ಕಾಮಿಡಿ ಸ್ಟಾರ್ ಆಗಿ ಮಿಂಚ್ತಿದ್ದ ಮಿತ್ರ ಇನ್ನು ಮುಂದೆ ಸ್ಯಾಂಡಲ್ ವುಡ್ ನ ಖಡಕ್ ವಿಲನ್ ಆಗಲಿದ್ದಾರೆ. ಗಡ್ಡ ಬಿಟ್ಟು ಲುಕ್ ಬದಲಾಯಿಸಿಕೊಂಡ ಮೇಲೆ ಬೇರೆ ರೀತ ಪಾತ್ರಗಳು ಹುಡುಕಿ ಬರ್ತಿವೆಯಂತೆ. ಸದ್ಯ ಅದಕ್ಕಾಗಿ ಒಂದು ಸ್ಟೈಲಿಷ್ ವಿಲನ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ಮಿತ್ರ.
ಸದ್ಯ ಮಿತ್ರ ಅವ್ರು ಮಾಡಿಸಿರೋ ಫೋಟೋಶೂಟ್ ಫೋಟೋಗಳನ್ನ ನೋಡ್ತಿದ್ರೆ ವಾವ್ಹ್ ಮಿತ್ರ ಅವ್ರು ಹೀಗೂ ಕಾಣ್ತಾರಾ ಅಂತ ಅನ್ನಿಸೋದು ಗ್ಯಾರೆಂಟಿ…ವಿಲನ್ ಲುಕ್ ನಲ್ಲಿ ಸಾಕಷ್ಟು ವಿಭಿನ್ನ ಶೇಡ್ ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ…ಇನ್ನು ಈ ಫೋಟೋ ಶೂಟ್ ಮಾಡಿರೋದು ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್ಮಿ. ಮಿತ್ರ ಅವ್ರ ಲುಕ್ ಅನ್ನ ಸ್ಟೈಲಿಷ್ ಮಾಡಿರೋದು ಕಾಲಿವುಡ್ ನ ಸ್ಟೈಲಿಷ್ ಕಣ್ಮಣಿ .
ಮಿತ್ರ ಅವ್ರ ಈ ಲುಕ್ ಬರೀ ಲುಕ್ ಆಗಿಯೇ ಉಳಿದಿಲ್ಲ…ಕರಾವಳಿ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ…ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ.
ಕಲಾವಿದ ಆದವ್ರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು ವಯಸ್ಸಿಗೆ ತಕ್ಕಂತೆ ತಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು ಅನ್ನೋದನ್ನ ಮಿತ್ರ ಅವ್ರ ಫಾಲೋ ಮಾಡಿದಂತಿದೆ …ಸದ್ಯ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಹಾಗೂ ಮಿಲನ್ ಖದರ್ ನಲ್ಲಿ ಮಿತ್ರ ಸೂಪರ್ ಆಗಿ ಮಿಂಚ್ತಿದ್ದಾರೆ….
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಯುವ ಪ್ರತಿಭೆ ರೋಹಿತ್ ಮೊದಲ ಕೂಸು ರಕ್ತಾಕ್ಷ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ರಕ್ತಾಕ್ಷ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ ವಿಜಯ್ ರಾಘವೇಂದ್ರ, ನಟಿ ಸುಮನ್ ನಗರ್ಕರ್ ಟ್ರೇಲರ್ ಬಿಡುಗಡೆ ಮಾಡಿ ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ.
ನಟ ವಿಜಯ್ ರಾಘವೇಂದ್ರ ಮಾತನಾಡಿ, ಕಥೆ ಬಗ್ಗೆ ಕಡಿಮೆ ಗೊತ್ತಿದ್ದರೆ ಒಳ್ಳೆದು. ಕಥೆ ಹೆಚ್ಚು ಬಿಟ್ಟು ಕೊಟ್ಟರೂ ಕಷ್ಟ. ಕಥೆಯ ಸುಳಿವೇ ಇಲ್ಲದೇ ಊಹಾಪೋಹ ಮಾಡಿಕೊಂಡು ಥಿಯೇಟರ್ ಗೆ ಬರುವ ತರ ಮಾಡಿದರು ಕಷ್ಟ. ಯಾಕೆಂದರೆ ಜನ ಈಗ ಎಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ ಎಂದರೆ ಸಣ್ಣ ಟ್ರೇಲರ್ , ಟೀಸರ್ ತಮ್ಮದೇ ಕಲ್ಪನೆ ಮೂಲಕ ಥಿಯೇಟರ್ ಗೆ ಬರ್ತಾರೆ. ಕಥೆ ಅವರದ್ದು ಆದರೆ ಒಪ್ಪಿಕೊಳ್ಳುತ್ತಾರೆ. ಕಥೆ ಬೇರೆಯದದ್ದಾರೆ ನಾವು ಅಂದುಕೊಂಡು ಬಂದ ಕಥೆಯಲ್ಲ ಎಂದು ಬೇಜಾರು ಆಗುತ್ತಾರೆ. ಆದರೆ ಸಣ್ಣ ಎಳೆ, ಜನರ ನಂಬಿಕೆ ವಿಶ್ವಾಸ ಗೆಲ್ಲುವುದು ಸಿನಿಮಾದ ಮುಖಾಂತರ ಗೆಲ್ಲುವುದು ಸಾಹಸ. ಅಂತಹ ಸಾಹಸಕ್ಕೆ ರೋಹಿತ್ ಕೈ ಹಾಕಿದ್ದಾರೆ. ಬಹಳ ಚೆನ್ನಾಗಿ ಟ್ರೇಲರ್ ಮೂಡಿಬಂದಿದೆ. ಕುತೂಹಲ ಕೆರಳಿಸುತ್ತದೆ. ಆಕ್ಷನ್ ಇದೆ. ಥ್ರಿಲ್ಲರ್ ಎಲಿಮೆಂಟ್ ಇದೆ. ನನಗೂ ಆಡಿಯನ್ಸ್ ಆಗಿ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಬಹಳ ಕಷ್ಟಪಟ್ಟಿದ್ದಾರೆ ರೋಹಿತ್. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ಹಿರಿಯ ನಟಿ ಸುಮನ್ ನಗರ್ಕರ್ ಮಾತನಾಡಿ, ಟ್ರೇಲರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸರಣಿ ಕೊಲೆ ಇದೆ ಅನ್ನೋ ಕ್ಲ್ಯೂ ಇದೆ. ಮೂರ್ನಾಲ್ಕು ಜನ ಹೀರೋಯಿನ್ ಇರುವುದು ಗೊತ್ತಾಗುತ್ತದೆ. ಹೀಗಾಗಿ ಸರಣಿ ಕೊಲೆಯಾಗುತ್ತದೆ ಎಂಬ ಕ್ಲ್ಯೂ ಕೂಡ ಸಿಕ್ತು. ನನ್ನ ಪತಿ ಪೊಲೀಸ್ ಪಾತ್ರದಲ್ಲಿ ಮಾಡಿದ್ದಾರೆ. ಕಥೆ ಅವರು ಕೂಡ ಹೇಳಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಪ್ರೋತ್ಸಾಹ ಸಿಗಬೇಕು ಎಲ್ಲರೂ ಪ್ರೋತ್ಸಾಹ ಕೊಡಬೇಕು. ಜನ ಥಿಯೇಟರ್ ಗೆ ಬರಬೇಕು. ಅವರು ನಾವು ಮಾಡುವ ಕೆಲಸ ನೋಡಬೇಕು. ಈ ರೀತಿಯ ಮಿಸ್ಟ್ರೀ ಸ್ಟೋರಿಯನ್ನು ಥಿಯೇಟರ್ ನಲ್ಲಿ ನೋಡಿ ಎಂದು ಹೇಳಿದರು.
ವಕೀಲರಾದ ಹರ್ಷ ಮುತಾಲಿಕ್ ಮಾತಾನಾಡಿ, ರೋಹಿತ್ ನೋಡಿದರೆ ಹೆಮ್ಮೆ ಎನಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಮಾಡಿ ಅಲ್ಲಿ ಒಂದು ರೀತಿ ಸಾಧನೆ ಮಾಡಿ ಅದನ್ನು ಸಿನಿಮಾ ಮೂಲಕ ಬರಬೇಕು ಮಾಡಿದ್ದಾನೆ. ನನ್ನ ಊರಿನ ಹುಡುಗ ಅದು ವಿಶೇಷ. ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ. ಹಿರಿಯ ನಟರ ಹೊಗಳಿಕೆ ಪಾತ್ರರಾಗುತ್ತಾನೆ ಎಂದರೆ ನಮಗೆ, ನಮ್ಮ ಜಿಲ್ಲೆಗೂ ಹೆಮ್ಮೆ ಎಂದರು.
ನಟ ರೋಹಿತ್ ಮಾತನಾಡಿ, ಹಾರ್ಡ್ ವರ್ಕ್ ಮಾಡಿ ಇಲ್ಲಿಗೆ ಬಂದಿದ್ದೇನೆ. ಥಿಯೇಟರ್ಸ್ ಮಾಡಿದೆ ಅಲ್ಲಿ ಒಳ್ಳೆ ಪರ್ಫಾಮರ್ ಅಂತಾ ಹೆಸರು ಬಂತು. ಭಿಕ್ಷುಕ ರೋಲ್ ಮಾಡಿದೆ. ಅದೇ ರೋಲ್ ಹಿಟ್ ಆಯ್ತು. ಕನ್ನಡ ಚಿತ್ರರಂಗ ಒಂದು ಹೆಮ್ಮರ. ಈ ಹೆಮ್ಮರದಲ್ಲಿ ನಾನು ಒಂದು ಚಿಕ್ಕ ಹಸಿರು ಎಲೆಯಾಗಿದ್ದರೆ ನನ್ನ ಲೈಫ್ ಸಾರ್ಥಕ. ಉತ್ತರ ಕರ್ನಾಟಕಕ್ಕೆ ನೂರಾರು ವರ್ಷಗಳ ಕಲೆ ಇತಿಹಾಸವಿದೆ. ಬಹಳಷ್ಟು ಕಲಾವಿದರು ಬಂದಿದ್ದಾರೆ . ನಮ್ಮಲ್ಲಿ ಯಾರು ಹೀರೋ ಇಲ್ಲ ಎಂಬ ಕೊರಗು ಇದೆ. ಬಹಳಷ್ಟು ಕಲೆ ಇದೆ. ದಾರಿ ಗೊತ್ತಿಲ್ಲ. ನನ್ನಿಂದ ಹತ್ತಾರು ಜನರಿಗೆ ಆ ದಾರಿ ಕ್ರಿಯೇಟ್ ಆಯಿತು ಎಂದರೆ ನನ್ನ ಜೀವನದ ಆಯಶ ಎಂದುಅಭಿಪ್ರಾಯಪಟ್ಟರು.
ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೋ ಆಗಿರುವ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ. ವಾಸುದೇವ ಎಸ್.ಎನ್ ‘ರಕ್ತಾಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋಹಿತ್ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿವೆ. ಧೀರೇಂದ್ರ ಡಾಸ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.
ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ, ಸಂಗೀತವನ್ನು ಧೀರೇಂದ್ರ ಡಾಸ್ ನೀಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಭು, ವಿಶ್ವ, ಭದ್ರಿ ನಾರಾಯಣ,, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.
ಜುಲೈ 26ಕ್ಕೆ ಚಿತ್ರ ರಿಲೀಸ್
ರಕ್ತಾಕ್ಷ ಟ್ರೇಲರ್ ಬಹಳ ಇಂಪ್ರೆಸಿಂಗ್ ಆಗಿ ಮೂಡಿದೆ. ಮಾಸ್ ಜೊತೆಗೆ ಥ್ರಿಲ್ಲಿಂಗ್ ಅಂಶಗಳು ಚಿತ್ರದಲ್ಲಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವುದು ಪಕ್ಕ. ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಿರುವ ಚಿತ್ರತಂಡ ಜುಲೈ 26ಕ್ಕೆ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿದೆ. ಇನ್ನು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀಕಾಂತ್ ಕಟಗಿ, ವಕೀಲರಾದ ಹರ್ಷ ಮುತಾಲಿಕ್ ಹಾಗೂ ಮೊಹಮದ್ ಗೌಸ್ ಪೀರ್ ಉಪಸ್ಥಿತರಿದ್ದರು.
ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ “ಕಡಲೂರ ಕಣ್ಮಣಿ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
“ಕಡಲೂರ ಕಣ್ಮಣಿ” ಪ್ರೇಮಕಥಾಹಂದರ ಹೊಂದಿರುವ ಚಿತ್ರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು. ಕಡಲಿನಲ್ಲಿ ಮುತ್ತು ಸಿಗುವುದು ಎಲ್ಲರಿಗೂ ತಿಳಿದ ಸಂಗತಿ ನನಗೂ ಸಹ ಈ ಈ ಚಿತ್ರದಲ್ಲಿ ಮೂರು ಮುತ್ತುಗಳು ಸಿಕ್ಕಿದೆ. ಅದು ನಮ್ಮ ಚಿತ್ರದ ನಾಯಕ, ನಾಯಕಿ ಹಾಗೂ ನಿರ್ಮಾಪಕರು. ಇವರ ಹಾಗೂ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಚಿತ್ರ ಜುಲೈ 19 ರಂದು ತೆರೆಗೆ ಬರಲಿದೆ. ಇದೇ ತಂಡದೊಂದಿಗೆ “ಕಡಲೂರ ಕಣ್ಮಣಿ” ಎರಡನೇ ಭಾಗದಲ್ಲಿ ತರುವ ಸಿದ್ದತೆ ನಡೆಯುತ್ತಿದೆ ಎಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ರಾಮ್ ಪ್ರಸನ್ನ ಹುಣಸೂರು ತಿಳಿಸಿದರು.
“ವರ್ಣಪಟಲ” ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ನನಗೆ ನಾಯಕನಾಗಿ ಇದು ಮೊದಲ ಚಿತ್ರ. ಅವಕಾಶ ನೀಡಿದ ನಿರ್ದೇಶಕ ಹಾಗು ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ಅರ್ಜುನ್ ನಗರಕರ್.
ನಾವು ಬ್ಯಾಂಕ್ ಉದ್ಯೋಗಿಗಳು. ಜೊತೆಗೆ ಆಪ್ತಮಿತ್ರರು. ರಾಮ್ ಪ್ರಸನ್ನ ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು. ಎಲ್ಲರು ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದು ನಿರ್ಮಾಪಕರಾದ ಕೊಳ ಶೈಲೇಶ್ ಆರ್ ಪೂಜಾರಿ, ಬಸವರಾಜ್ ಗಚ್ಚಿ ತಿಳಿಸಿದರು. ಸಹ ನಿರ್ಮಾಪಕ ಮಹೇಶ್ ಕುಮಾರ್ ಎಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದ ಆಕ್ಷನ್ ಸನ್ನಿವೇಶಗಳ ಬಗ್ಗೆ ಚಂದ್ರು ಬಂಡೆ ಮಾಹಿತಿ ನೀಡಿದರು. ಚಿತ್ರವನ್ನು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಡಿಎಸ್‌ಕೆ ಸಿನಿಮಾಸ್ ಸಂಸ್ಥೆಯ Dr ಸುನೀಲ್ ಕುಂಬಾರ್ ತಿಳಿಸಿದರು.
ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಹಿರಣ್ಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ನಟಿ ರಾಗಿಣಿ ದ್ವಿವೇದಿ ವಿಶೇಷ ಅತಿಥಿಯಾಗಿ ಭಾಗಿಯಾಗಿ ನಾಯಕ ರಾಜವರ್ಧನ್ ಹೊಸ ಪ್ರಯತ್ನಕ್ಕೆ ಬೆಂಬಲ ನೀಡಿದರು. ಈ ವೇಳೆ ಇಡೀ ಹಿರಣ್ಯ ತಂಡ ಭಾಗಿಯಾಗಿತ್ತು.
ಟ್ರೇಲರ್ ಬಿಡುಗಡೆ ಬಳಿಕ ನಟ ಡಾಲಿ ಧನಂಜಯ್ ಮಾತನಾಡಿ, ಹಿರಣ್ಯ ಹಾಗೂ ರಾಜು ಇಡೀ ತಂಡಕ್ಕೆ ಆಲ್ ದಿ ಬೆಸ್ಟ್..ರಾಜವರ್ಧನ್ ನನಗೆ 10 ವರ್ಷದಿಂದ ಪರಿಚಯ. 2013 ಅಥವಾ 2012 ರಲ್ಲಿ ಇಬ್ಬರು ಸಿನಿಮಾವೊಂದಕ್ಕೆ ಫೋಟೋಶೂಟ್ ಮಾಡಿಸಿದ್ದೇವು. ಆದರೆ ಅದು ಸಿನಿಮಾವಾಗಲಿಲ್ಲ. ಜೆಪಿ ನಗರ, ಜಯನಗರಕ್ಕೆ ಬಂದಾಗಲೆಲ್ಲಾ ಸಿಗುತ್ತಾರೆ. ಜರ್ನಿ ನೆನಪು ಮಾಡಿಕೊಂಡಾಗ ಅವತ್ತಿನಿಂದ ಇವತ್ತಿನವರೆಗೂ ನಟನಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾನೆ. ಒಳ್ಳೆ ಬರವಣಿಗೆ, ಸ್ಕ್ರೀಪ್ಟ್, ನಿರ್ದೇಶಕರು, ಅದನ್ನು ಅಷ್ಟೇ ಚೆನ್ನಾಗಿ ಪ್ರೀತಿಸುವ ನಿರ್ಮಾಪಕರು ಇದ್ದಾಗ ಮಾತ್ರ ಒಳ್ಳೆ ಸಿನಿಮಾವಾಗುತ್ತದೆ. ರಾಜವರ್ಧನ್ ಹಿರಣ್ಯ ಸಿನಿಮಾ ಮೂಲಕ ಒಳ್ಳೆ ಶುಕ್ರವಾರ ಸಿಗಲಿ. ನಿರ್ಮಾಪಕರು ತುಂಬಾ ಫ್ಯಾಷನೇಟೆಡ್ ಇದ್ದಾರೆ. ಸಿನಿಮಾ ಚೆನ್ನಾಗಿ ಆಗಲಿ ಎಂದರು,
ನಟ ರಾಗಿಣಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಹೊಸ ತಂಡ ಇಂಡಸ್ಟ್ರೀಗೆ ಎಂಟ್ರಿಯಾಗುತ್ತಿರುವುದು. ತುಂಬಾ ಅದ್ಭುತವಾಗಿ ಟೆಕ್ನಿಕಲ್ ಆಗಿ, ಕಲರ್ ಫುಲ್ ಆಗಿರುವ ಟ್ಯಾಲೆಂಟೆಂಡ್ ಟೀಂ ಎಂಟ್ರಿಯಾಗುತ್ತಿರುವುದು ಖುಷಿ. ಹೊಸದಾಗಿ ಸಿನಿಮಾ ಮಾಡುವುದು ತುಂಬಾ ಚಾಲೆಂಜಿಂಗ್ ಕೆಲಸ. ಹೊಸದಾಗಿ ಪ್ರಯತ್ನ ಮಾಡುವುದು ಸುಲಭವಲ್ಲ. ಬೇರೆ ಇಂಡಸ್ಟ್ರೀಗೆ ಹೋಲಿಕೆ ಮಾಡಿದರೆ ನಮ್ಮ ಇಂಡಸ್ಟ್ರೀಯಲ್ಲಿ ಹೊಸಬರಿಗೆ ಸಾಕಷ್ಟು ಅವಕಾಶವಿದೆ. ರಾಜ್ ಹೊಸಬಗೆಯ ಪಾತ್ರ ಮಾಡುತ್ತಾರೆ. ನನಗೆ ಹೆಮ್ಮೆ ಎನಿಸುತ್ತದೆ. ನಿಮಗೆ ಪ್ರೇಕ್ಷಕ ಪ್ರೀತಿ ಕೊಡ್ತಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.
ನಟ ರಾಜವರ್ಧನ್ ಮಾತನಾಡಿ, ಶಿವಣ್ಣ ಟ್ರೇಲರ್ ನೋಡಿ ಇಷ್ಟಪಟ್ಟು ಮನೆಗೆ ಕರೆಸಿ ಇಡೀ ತಂಡಕ್ಕೆ ಒಳ್ಳೆ ಉಪಚಾರ ಮಾಡಿದ್ದು ಖುಷಿಯಾಯ್ತು. ಹಿರಣ್ಯ ಒಳ್ಳೆ ಸ್ಟೋರಿ ಲೈನ್. ನಾನು ಅದನ್ನು ನಂಬಿದೆ. ಒಳ್ಳೆ ಸಿನಿಮಾವಾಗಿದೆ. ಸಿನಿಮಾಗೆ ಒಳ್ಳೆ ಟೈಟಲ್ ಬೇಕಿತ್ತು. ಅದು ಧನು ಬಳಿ ಇತ್ತು. ಅವರು ಅದನ್ನು ಕೇಳಿದ ತಕ್ಷಣ ಕೊಟ್ಟರು. ಎಲ್ಲೂ ಏನು ಮೋಸವಾಗದೆ ಸಿನಿಮಾ ಮಾಡಿದ್ದೇವೆ. ಧನು ಥ್ಯಾಂಕು. ನಮ್ಮ ನಿರ್ಮಾಪಕರು ವಿಜಿ ನಾನು ತುಂಬಾ ಕಿತ್ತಾಡಿದ್ದೇವೆ. ಪ್ರೊಡ್ಯೂಸರ್ ತುಂಬಾ ಕನಸು ಇಟ್ಟುಕೊಂಡು ಬಂದಿದ್ದಾರೆ. ಅವರು ಹಾಕಿದ ದುಡ್ಡು ರಿರ್ಟನ್ ಆಗಬೇಕು ಅನ್ನುವುದು ನಮ್ಮ ಜವಾಬ್ದಾರಿ. ನಿರ್ದೇಶಕರು ಹೊಸ ಕನಸು ಇಟ್ಟುಕೊಂಡು ಬಂದಿದ್ದಾರೆ. ಹೊಸತಂಡ ಸಿನಿಮಾ ಕಲಿತು ಮಾಡಿದ್ದಾರೆ. ಇಡೀ ತಂಡ ಎಫರ್ಟ್ ಹಾಕಿ ಚಿತ್ರ ಮಾಡಿದ್ದಾರೆ ಎಂದರು.
ನಿರ್ದೆಶಕ ಪ್ರವೀಣ್ ಅವ್ಯೂಕ್, ಕ್ರೂರ ಗುಣ ಹೊಂದಿದ ಪಾತ್ರವನ್ನಿಟ್ಟುಕೊಂಡು ‘ಹಿರಣ್ಯ’ ಸಿನೆಮಾದ ಕಥೆ ಹೆಣೆದಿದ್ದಾರೆ. ಈ ಹಿಂದೆ ಬಿಚ್ಚುಗತ್ತಿ ಸಿನೆಮಾ ಮೂಲಕ ಭರವಸೆ ಮೂಡಿಸಿದ್ದ ರಾಜವರ್ಧನ್ ನಾಯಕ. ನಾಯಕನಾಗಿ ಅಭಿನಯಿಸಿರುವ ರಾಜವರ್ಧನ್ ಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್‌ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯೋಗೇಶ್ವರನ್ ಆರ್. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಜುಲೈ 19ಕ್ಕೆ ಹಿರಣ್ಯ ಸಿನಿಮಾ ತೆರೆಗೆ ಬರಲಿದೆ. ಜಾಕ್ ಮಂಜು ಒಡೆತನದ ಶಾಲಿನಿ ಆರ್ಟ್ಸ್ ರಾಜ್ಯಾದ್ಯಂತ ಸಿನಿಮಾ ವಿತರಣೆ ಮಾಡಲಿದ್ದಾರೆ.
ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಶಿವರಾಜಕುಮಾರ್ ಅವರು ಮಾತನಾಡಿ ಪ್ರಮುಖ ವಿಷಯವನ್ನು ಹಂಚಿಕೊಂಡಿದ್ದಾರೆ.1
“ಹುಟ್ಟುಹಬ್ಬ ಎನ್ನುವುದು ತಂದೆ ತಾಯಿ ನಮಗೆ ನೀಡಿರುವ ಗಿಫ್ಟ್. ಅವರಿಗೆ ನಾವು ಯಾವಾಗಲೂ ಚಿರ ಋಣಿಯಾಗಿರಬೇಕು. ಜುಲೈ 12, ನನ್ನ ಅರವತ್ತೆರಡನೇ ಹುಟ್ಟುಹಬ್ಬ. ಇಷ್ಟು ವರ್ಷಗಳಿಂದ ಸಾವಿರಾರು ಅಭಿಮಾನಿಗಳು ನಮ್ಮ ಮನೆಗೆ ಬಂದು ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದ. ಈ ಸಲದ ಹುಟ್ಟುಹಬ್ಬಕ್ಕೆ ನಾನು ನಿಮಗೊಂದು ಸ್ಪೆಷಲ್ ಗಿಫ್ಟ್ ಕೊಡಲಿದ್ದೇನೆ. ಅದೇನೆಂದರೆ, ನನ್ನ ಹುಟ್ಟುಹಬ್ಬದ ದಿನ ಬಹು ನಿರೀಕ್ಷಿತ “45” ಚಿತ್ರದ ನನ್ನ ಫಸ್ಟ್ ಲುಕ್ ರಿಲೀಸ್ ಆಗಿದೆ.
ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ, ಅರ್ಜುನ್ ಜನ್ಯ ಮೊದಲ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದೇವೆ. ಈ ಚಿತ್ರ ಇಂಡಿಯನ್ ಸ್ಕ್ರೀನ್ ನಲ್ಲೇ ಉತ್ತಮ ಚಿತ್ರವಾಗಲಿದೆ ಎಂದು ನನ್ನ ನಂಬಿಕೆ. ಅದಕ್ಕೆ ದೇವರ ಆಶೀರ್ವಾದ ಬೇಕು. ಆ ದೇವರು ಎಂದರೆ ಅಪ್ಪಾಜಿ ಹೇಳಿದ ಹಾಗೆ ಅಭಿಮಾನಿಗಳು. ಅಭಿಮಾನಿ ದೇವರುಗಳು ಈ ಚಿತ್ರವನ್ನು ನೋಡಿ ಹಾರೈಸಿ” ಎಂದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಅಭಿನಯಿಸುತ್ತಿರುವ ಮಲ್ಟಿಸ್ಟಾರರ್ ಸಿನಿಮಾ “45”.
ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿರುವ ಡಾ. ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ “45” ಚಿತ್ರತಂಡ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.
ಕನ್ನಡ ಚಿತ್ರರಂಗದ ಮೂವರು ಹೆಸರಾಂತ ನಾಯಕನಟರ ಸಮಾಗಮದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಬಹು ನಿರೀಕ್ಷಿತ ಈ ಚಿತ್ರಕ್ಕೆ ಸದ್ಯದಲ್ಲೇ ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶ ಮೂವತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.
ಇಷ್ಟು ದಿನಗಳ ಕಾಲ ಅಪಾರವೆಚ್ಚದಲ್ಲಿ, ಅದ್ದೂರಿಯಾಗಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿರುವುದು ಕನ್ನಡದಲ್ಲಿ ಇದೇ ಮೊದಲಿರಬಹುದು. ಸೆಪ್ಟೆಂಬರ್ ನಲ್ಲಿ “45” ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಅವರು ಜನಪ್ರಿಯ ಸಂಗೀತ ನಿರ್ದೇಶಕರೇ ಆಗಿರುವುದರಿಂದ ಚಿತ್ರದ ಹಾಡುಗಳ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ. .
ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರೀಕರಣದ ಡೀಟೆಲ್ ಮಾತುಕತೆ: ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಅಮೃತ ಅಯ್ಯಂಗಾರ್ ಏನಂದ್ರು ಗೊತ್ತಾ?
ಕನ್ನಡದ ಪ್ರತಿಷ್ಠಿತ ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರೀಕರಣ ಅದ್ಧೂರಿಯಾಗಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸಾಗುತ್ತಿದೆ.
ಫಾದರ್ ಸಿನಿಮಾದ ಶೂಟಿಂಗ್ ಸೆಟ್ ಗೆ ಸಿನಿಮಾ ಪತ್ರಕರ್ತರು ಭೇಟಿ ನೀಡಿದ ವೇಳೆ ಚಿತ್ರತಂಡ ಮಾತಿಗಿಳಿಯಿತು. ಪ್ರಕಾಶ್ ರೈ ಮತ್ತು ‘ಡಾರ್ಲಿಂಗ್’ ಕೃಷ್ಣ ತಂದೆ-ಮಗನಾಗಿ ಅಭಿನಯಿಸುತ್ತಿರುವ ‘ಫಾದರ್’ ಚಿತ್ರದ ಚಿತ್ರೀಕರಣ ಮೈಸೂರಿನ ಸುಮಾರು ನೂರು ವರ್ಷಗಳ ಹಳೆಯ ಮನೆಯಲ್ಲಿ ಕಲರ್ ಫುಲ್ ಆಗಿ ನಡೆಯುತ್ತಿದೆ. ಈ ವೇಳೆ ಸಿನಿಮಾ ತಂಡ ಹೇಳಿಕೊಂಡಿದ್ದು ಹೀಗೆ.
ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ನಾನು ನಿಜಕ್ಕೂ ಲಕ್ಕಿ ಮ್ಯಾನ್. ಯಾಕೆಂದರೆ ಒಳ್ಳೆಯ ಕಥೆಗಳೇ ನನ್ನ ಪಾಲಾಗುತ್ತಿವೆ. ನಾನು ಈ ಕಥೆ ಕೇಳಿದಾಗ, ಮೊದಲು ಇಷ್ಟಪಟ್ಟಿದ್ದು ಪತ್ನಿ ಮಿಲನಾ. ಕಥೆ ಚೆನ್ನಾಗಿದೆ. ನೀವು ಮಾಡಲೇಬೇಕೆಂದು ಹೇಳಿದರು. ಇನ್ನು, ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ ಪ್ರಕಾಶ್ ರೈ ಅವರ ಜೊತೆ ನಟಿಸುವ ಆಸೆಯಿತ್ತು. ಅವರ ಜೊತೆ ಅಭಿನಯಿಸುವಾಗ ಭಯ ಆಗುತ್ತಿತ್ತು. ಎಷ್ಟೋ ಬಾರಿ ಅವರು ಅಭಿನಯಿಸುವುದನ್ನು ನೋಡುತ್ತಾ, ಪ್ರತಿಕ್ರಿಯೆ ಕೊಡುವುದನ್ನೇ ಮರೆಯುತ್ತಿದ್ದೆ. ‘ಫಾದರ್’ ಜನರ ಮನಸಿನಲ್ಲಿ ಉಳಿಯುವಂತಹ ಚಿತ್ರವಾಗುತ್ತದೆ’ ಎಂದರು ಡಾರ್ಲಿಂಗ್ ಕೃಷ್ಣ.
ಸಿನಿಮಾದ ಆಕರ್ಷಣೆ ಪ್ರಕಾಶ್ ರೈ ಮಾತನಾಡಿ, ‘ಚಂದ್ರು ಜೊತೆಗೆ ನಾನು ಮೊದಲು ‘ಕಬ್ಜ’ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ “ಫಾದರ್” ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದೊಂದು ಮನಸ್ಸಿಗೆ ಹತ್ತಿರವಾಗುವ ಕಥೆ. ತಂದೆ-ಮಗನ ಪ್ರೀತಿಯ ಜೊತೆಗೆ, ಇವತ್ತಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ. ಕಥೆ ಕೇಳಿದಾಗ ನನಗೆ ಇದು ಇಂದಿಗೆ ಮುಖ್ಯವಾಗಿ ಬೇಕಾಗಿರುವ ಸಿನಿಮಾ ಎಂದೆನಿಸಿತು.
ಇದೊಂದು ಕಾಡುವಂತಹ ಚಿತ್ರ. ಆರ್ ಚಂದ್ರು ಆರ್ ಸಿ ಸ್ಟುಡಿಯೋಸ್ ಮೂಲಕ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದು ಖುಷಿಯ ವಿಚಾರ. ನಾನು ಕೂಡ ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಹಾಗೂ ನಾನು ಬಹಳ ಇಷ್ಟೊಡುವ ಮೈಸೂರಿನಲ್ಲಿ ಚಿತ್ರೀಕರಣವಾಗುತ್ತಿರುವುದು ಖುಷಿಯಾಗಿದೆ. ಇಂತಹ ನಿರ್ಮಾಣ ಸಂಸ್ಥೆಗಳು ಕನ್ನಡಕ್ಕೆ ಬೇಕು. ಕನ್ನಡ ಸಿನಿಮಾ ರಂಗಕ್ಕೆ ಚಂದ್ರು ಅವರ ಕೊಡುಗೆ ಇದೆ. ಇಂತಹವರು ಇಂಡಸ್ಟ್ರಿಗೆ ಬೇಕು ಎಂಬುದನ್ನು ಒತ್ತಿ ಹೇಳಿದರು ಪ್ರಕಾಶ್ ರೈ.
ಸದಾ ಸಿನಿಮಾ ಧ್ಯಾನಿಯಾಗಿರುವ ಆರ್. ಚಂದ್ರ, ತಮ್ಮ ಫಾದರ್ ಬಗ್ಗೆ ಹೇಳಿದ್ದು ಹೀಗೆ. ‘ ನನ್ನ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಐದು ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಇದು ಸುಲಭವಲ್ಲ. ಸಿನಿಮಾ ಪ್ರೀತಿಯೇ ಇದಕ್ಕೆ ಕಾರಣ. ಫಾದರ್ ಒಂದು ಅದ್ಭುತ ಕಥೆ. ಪ್ರತಿತೊಬ್ಬ ತಂದೆ ಮಗನ ಬಾಂಧವ್ಯಬಿಲ್ಲಿ ಹೇಳಲಾಗುತ್ತಿದೆ. ಇಂಥದ್ದೊಂದು ಕಂಟೆಂಟ್ ಸಿನಿಮಾ ಮಾಡೋಕೆ ಹೆಮ್ಮೆ ಎನಿಸುತ್ತಿದೆ. ಆರ್.ಸಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಮೊದಲ ಸಿನಿಮಾ ಅನ್ನೋದು ಹೆಗ್ಗಳಿಕೆ. ಈ ಚಿತ್ರಕ್ಕೆ ಗ್ರಾಂಡ್ ಫಾದರ್ ಅಂದರೆ ಅದು ಪ್ರಕಾಶ್ ರಾಜ್ ಎನ್ನಬಹುದು. ಕೃಷ್ಣ ಅವರ ಜೊತೆಗೆ ಈ ಮೊದಲೇ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಈಗ ಸಾಧ್ಯವಾಗುತ್ತಿದೆ. ಇದು ‘ತಾಜಮಹಲ್’ ತರಹ ಎಮೋಷನ್ ಇರುವಂತ ಚಿತ್ರ. ಇದರಲ್ಲಿ ತಂದೆ-ಮಗನ ಬಾಂಧವ್ಯ ತೋರಿಸಲಾಗುತ್ತಿದೆ. ‘ಫಾದರ್’ ಚ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ತಂದೆಯ ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ, ಈ ಪಾತ್ರವನ್ನು ಪ್ರಕಾಶ್ ರೈ ಮಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅವರು ಈ ಚಿತ್ರದಲ್ಲಿ ಅಭಿನಯಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಚಿತ್ರವನ್ನು ಒಂದೇ ಹಂತದಲ್ಲಿ ಮೈಸೂರು, ವಾರಣಾಸಿ, ಮಂಗಳೂರಿನಲ್ಲಿ ಚಿತ್ರೀಕರಿಸುವ ಯೋಜನೆಇದೆ ಎಂದರು ಆರ್.ಚಂದ್ರು.
ಅಮೃತಾ ಅಯ್ಯಂಗಾರ್ ಅವರಿಗೆ ಒಂದೊಳ್ಳೆಯ ಕಥೆ ಮತ್ತು ಪಾತ್ರ ಇರುವ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆಯಂತೆ. ಅದರಲ್ಲೂ ನಮ್ಮೂರಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಬಹಳ ಖುಷಿಯಾಗಿದೆ. ಪ್ರಕಾಶ್ ರೈ ಅವರ ಜೊತೆಗೆ ನಟಿಸುವ ಆಸೆ ಈಡೇರಿದೆ ಎಂದರು ಅಮೃತಾ.
ದಯಾಳ್ ಪದ್ಮನಾಭ್ ಫಾದರ್ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರು. ಅವರು ಫಾದರ್ ಕುರಿತು ಹೇಳಿದ್ಸಿಷ್ಟು, ‘ಚಂದ್ರು ನನ್ನ ‘ಸಖ ಸಖಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ನಾನು ಕಾರ್ಯಕಾರಿ ನಿರ್ಮಾಪಕ ಎನ್ನುವುದಕ್ಕಿಂತ ಅವರ ಜೊತೆಗಿದ್ದೀನಿ ಎಂದರು.
‘ಫಾದರ್’ ಚಿತ್ರಕ್ಕೆ ರಾಜ್ ಮೋಹನ್ ಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ‘ಹನುಮಾನ್’ ಖ್ಯಾತಿಯ ಗೌರ ಹರಿ ಸಂಗೀತ ನಿರ್ದೇಶನ, ರಘುನಾಥ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನ ವಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.